ಸುದ್ದಿ ಸಾಗರ

‘ಶೇಮ್ ಶೇಮ್’: ವಿಶ್ವದಲ್ಲಿಯೇ ಭಾರತ ನಂ. 1; ಆದರೆ ಹೆಮ್ಮೆ ಪಡೋಕೆ ಇಲ್ಲಿ ಕಾರಣಗಳಿಲ್ಲ!

ಭಾರತ ನಂ. 1; ಆದರೆ ಹೆಮ್ಮೆ ಪಡೋಕ್ಕೆ ಇಲ್ಲಿ ಕಾರಣಗಳಿಲ್ಲ!

Summarytoggle summary

ವಿಶ್ವದ ಎಲ್ಲಾ ದೇಶಗಳ ಪೈಕಿ ಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯಕ್ಕೆ ಸಾಕ್ಷಿಯಾಗಿರುವ ರಾಷ್ಟ್ರ ಇಂಡಿಯಾ. ನಮ್ಮದೇ ಕೇಂದ್ರ ಸರಕಾರದ ಅಂಕಿ ಅಂಶಗಳು ಭಾರತದಲ್ಲಿ ಪ್ರತಿ ಹದಿನೈದು ನಿಮಿಷಕ್ಕೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ನೀಡುತ್ತಿವೆ.ಇತ್ತೀಚೆಗೆ ಬಿಡುಗಡೆಯಾದ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ’ (The National Crime Records Bureau) ವರದಿಗಳ ಪ್ರಕಾರ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಗಾಯಗೊಂಡ ಮಗುವನ್ನೂ ಆಸ್ಪತ್ರೆಗೆ ಕರೆದೊಯ್ದಾಗಲೂ ಕೂಡ ಲೈಂಗಿಕ ದೌರ್ಜನ್ಯ ನಡೆದಂತಹ ಅಸಹ್ಯಕರ ಪ್ರಕರಣಗಳೂ ಪಟ್ಟಿಯಲ್ಲಿವೆ.

ದೈನಂದಿನ ಜೀವನದಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿರುವ ಮಕ್ಕಳ ಘಟನೆಗಳು ಸಾಮಾನ್ಯ ಎಂಬಂತಾಗುತ್ತಿವೆ. ದೇಶದ ಸುಮಾರು ಶೇ. 53ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಅವುಗಳ ಪ್ರಕಾರ ಉತ್ತರ ಪ್ರದೇಶ, ಅಸ್ಸಾಂ, ದೆಹಲಿ, ಆಂಧ್ರಪ್ರದೇಶ ಮತ್ತು ಬಿಹಾರಗಳಲ್ಲಿ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆಯುವ ಪ್ರಕರಣಗಳು ವರದಿಯಾಗಿವೆ.

ಸೋಮವಾರಷ್ಟೆ ಮಧ್ಯಪ್ರದೇಶ ಸರಕಾರ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕಾನೂನು ಅಂಗೀಕರಿಸಿದೆ.ಚಂಡಿಘಡದಲ್ಲಿ ಹತ್ತು ವರ್ಷ ವಯಸ್ಸಿನ ಬಾಲಕಿಯೊಬ್ಬಳು ತನ್ನ ಚಿಕ್ಕಪ್ಪಂದಿರಿಂದಲೇ ಅತ್ಯಾಚಾರಕ್ಕೆ ಬಲಿಯಾಗಿ ಗರ್ಬಿಣಿಯಾಗಿದ್ದಳು. ನಂತರ ಅವಳು ಗರ್ಭಪಾತಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತದ ಮಾದ್ಯಮಗಳ ಸುದ್ದಿಯ ಕೇಂದ್ರಬಿಂದುವಾಗಿದ್ದಳು. ಅವಳ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಚಿಕ್ಕಪ್ಪಂದಿರಿಗೆ ಜೈಲಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಭಾರತದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಪ್ರಮಾಣ ಈ ಕೆಳಗಿನಂತಿದೆ:

  • 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಪ್ರತಿ 155 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತದೆ ಹಾಗೂ ಪ್ರತಿ 13 ಗಂಟೆಗಳಿಗೆ 10 ವರ್ಷದೊಳಗಿನ ಮಗುವನ್ನು ಅತ್ಯಾಚಾರ ಮಾಡಲಾಗುತ್ತದೆ.
  • 2015 ರಲ್ಲಿ 10,000 ಕ್ಕೂ ಹೆಚ್ಚಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎನ್ನುತ್ತವೆ ಅಂಕಿ ಅಂಶಗಳು.
  • ಭಾರತದಲ್ಲಿ ವಾಸಿಸುತ್ತಿರುವ 240 ದಶಲಕ್ಷ ಮಹಿಳೆಯರು 18 ವರ್ಷಕ್ಕಿಂತ ವಯಸ್ಸಿನ ಮೊದಲು ಮದುವೆಯಾಗಿದ್ದಾರೆ.
  • ಸರ್ಕಾರದ ಅಧ್ಯಯನದ ವರದಿಯ ಪ್ರಕಾರ, ಭಾರತದಲ್ಲಿ ಶೇ. 53. 22 ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿದ್ದಾರೆ.
  • ದೌರ್ಜನ್ಯ ಎಸಗಿದವರಲ್ಲಿ ಶೇ. 50% ನಷ್ಟು ಆರೋಪಿಗಳು ಮಗುವಿಗೆ ತಿಳಿದಿವರಾಗಿರುತ್ತಾರೆ ಅಥವಾ ಸಂಬಂಧಿಗಳೇ ಆಗಿರುತ್ತಾರೆ. (Sources: Indian government, Unicef)

ಗೃಹ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ 2016ರ ಭಾರತದಲ್ಲಿ ನಡೆದ ಅಪರಾಧಗಳ ವರದಿಯ ಪ್ರಕಾರ, 2016 ರಲ್ಲಿ ಮಕ್ಕಳ ವಿರುದ್ಧ 1,06,958 ಅಪರಾಧ ಪ್ರಕರಣಗಳು ದಾಖಲಾಗಿವೆ . ಇವುಗಳಲ್ಲಿ, ಪೊಕ್ಸೊ (Protection of Children from Sexual Offences) ಕಾಯಿದೆಯಡಿ 36,022 ಪ್ರಕರಣಗಳು ದಾಖಲಿಸಲ್ಪಟ್ಟಿವೆ.ಈ ಅಂಕಿಅಂಶಗಳಿಂದಾಗಿ, ಭಾರತವು ಜಗತ್ತಿನಲ್ಲಿಯೇ ಅತಿಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳನ್ನು ಹೊಂದಿದ ದೇಶವಾಗಿದೆ. "ಆದರೆ ಸಾಮಾನ್ಯವಾಗಿ ಇಂತಹ ವಿಷಯದ ಕುರಿತು ಯಾರೂ ಮಾತನಾಡಲು ಇಷ್ಟಪಡುವುದಿಲ್ಲ. ಹಾಗಾಗಿ ನೈಜತೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೇ ಇವೆ," ಎನ್ನುತ್ತಾರೆ ದೆಹಲಿಯ ಮೂಲದ ಬಿಬಿಸಿ ಪತ್ರಕರ್ತೆ ಗೀತಾ ಪಾಂಡೆ. ಇವರು ದೇಶದಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ವಿಸ್ತೃತ ವರದಿಗಳನ್ನು ಬರೆದಿದ್ದಾರೆ.

ಮನಸ್ಸಿನ ಸಮಸ್ಯೆ:

ಮನುಷ್ಯ ಮನುಷ್ಯತ್ವ ಕಳೆದುಕೊಂಡಿದ್ದಾನೆ. ಮೊಬೈಲ್ ಫೋನ್, ಸಿನಿಮಾ ಮತ್ತು ಸೀರಿಯಲ್ ಗಳ ಪ್ರಭಾವದಿಂದ ಮನುಷ್ಯನ ಮನಸ್ಸು ಕಾಮುಕತೆಯತ್ತ ಹೊರಡುತ್ತಿದೆ. ಪದವಿತನಕ ಯಾರಿಗೂ ಮೊಬೈಲ್ ಕೊಡಲೇಬಾರದು. ಅಶ್ಲೀಲತೆಯನ್ನೇ ಪ್ರಮುಖವಾಗಿ ತೋರಿಸುವ ಚಿತ್ರಗಳನ್ನು ಬ್ಯಾನ್ ಮಾಡಬೇಕು. ಚಿತ್ರದಲ್ಲಿ ನಟಿಯರು ಮೈ ತೋರಿಸಿದಷ್ಟು ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತದೆ. ಹೀಗಾಗಿ ಸಮಾಜ ಕಾಮುಕತೆಯತ್ತ ಚಲಿಸುತ್ತಿದೆ. ಅತ್ಯಾಚಾರ ಎಸಗಿದವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಿಕೊಳ್ಳಬೇಕು ಅಂದಾಗ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ,'' ಎನ್ನುತ್ತಾರೆ ಡಾ. ಇಸಾಬೆಲ್ಲ ಕ್ಸೆವಿಯರ್

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಂದರೆ ಮೈ ಮೇಲೆ ಎರಗಿ ರೇಪ್ ಮಾಡುವುದು ಮಾತ್ರ ಅಲ್ಲ. ಏನು ತಿಳಿಯದ ಮಗುವನ್ನು ಕಾಮದೃಷ್ಟಿಯಿಂದ ನೋಡುವವರು, ಅದರ ಗುಪ್ತಾಂಗಗಳನ್ನು ಸ್ಪರ್ಷಿಸುವುದು ಅದಕ್ಕೆ ಇಷ್ಟವಿಲ್ಲದಿದ್ದರೂ ಮುದ್ದು ಮಾಡುವುದು ಅಥವಾ ಮುತ್ತು ಕೊಡು ಎಂದು ಬಲವಂತ ಮಾಡುವುದು ಇದೆಲ್ಲವೂ ದೌರ್ಜನ್ಯದ ವಿವಿಧ ರೂಪಗಳೇ. ಮಕ್ಕಳ ಮೇಲೆ ಅನಾದಿ ಕಾಲದಿಂದಲೂ ದೌರ್ಜನ್ಯ ನಡೆಯುತ್ತದೆ. ಆದರೆ ಈಗ ಮಾದ್ಯಮದ ಮೂಲಕ ಹಾಗೂ  ಸಾಮಾಜಿಕ ಹಿತ ಚಿಂತಕರ ಮೂಲಕ ಅದು ಬೆಳಕಿಗೆ ಬರುತ್ತಿದೆ. ಗಂಟೆಗೆ ಒಂದು ಮಗುವಲ್ಲ, ಗಂಟೆಗೆ ನಾಲ್ಕು ಮಗುವಲ್ಲ, ನನ್ನ ಪ್ರಕಾರ ನಿಮಿಷಕ್ಕೆ ಹತ್ತು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ 
ಡಾ. ಇಸಾಬೆಲ್ಲ ಕ್ಸೆವಿಯರ್, ಧಾರವಾಡದ ಸಾಧನಾ ಹ್ಯೂಮನ್ ರೈಟ್ಸ್‌ ಸೆಂಟರ್‌

ಮಕ್ಕಳ ಸಹಾಯವಾಣಿ 1098:

ಮಕ್ಕಳ ಸಹಾಯವಾಣಿ (national child relief helpline) 1098 ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಸರಕಾರದ ಕೆಲಸ ಮಾಡುತ್ತಿರುವ ಸಹಾಯವಾಣಿಯಾಗಿದೆ. 1996 ರಲ್ಲಿ CHILDLINE ಇಂಡಿಯಾ ಫೌಂಡೇಶನ್ (ಸಿಐಎಫ್) ಇದನ್ನು ಪ್ರಾರಂಭಿಸಿತು. ಇದು ದೇಶದ ಮೊದಲ ಟೋಲ್-ಫ್ರೀ ಸಹಾಯವಾಣಿ. ಮಾರ್ಚ್ 2015 ರ ಹೊತ್ತಿಗೆ ಒಟ್ಟು 36 ಮಿಲಿಯನ್ ಕರೆಗಳನ್ನು CHILDLINE ಸೇವೆಯಲ್ಲಿ ಪಡೆಯಲಾಗಿದೆ. ಇದು 366 ನಗರಗಳಲ್ಲಿ 34 ರಾಜ್ಯಗಳಲ್ಲಿ ಸೇರಿದಂತೆ ಭಾರತದಾದ್ಯಂತ 700 ಕ್ಕೂ ಹೆಚ್ಚಿನ ಪಾಲುದಾರ ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಪೊಲೀಸರೊಂದಿಗೆ ವರದಿಯನ್ನು ಸಲ್ಲಿಸುವುದರ ಜೊತೆಗೆ ಪ್ರತಿ ರಾಜ್ಯ ಮತ್ತು ನಗರಗಳಲ್ಲಿರುವ ಮಕ್ಕಳ ರಕ್ಷಣಾ ಸಂಸ್ಥೆಗಳನ್ನು ಸಂಪರ್ಕಿಸಿದರೆ ನ್ಯಾಯ ದೊರೆಕಿಸಿ ಕೊಡಲು ಅವುಗಳು ಸಹಾಯ ಮಾಡುತ್ತವೆ.

ಉದಾಹರಣೆಗೆ, ಮುಂಬೈ ಮೂಲದ ಅರ್ಪಾನ್ (Arpan) ಎಂಬ ಸಂಸ್ಥೆ ಇಂತಹ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿದೆ. Save The Child ಎಂಬ ಸಂಸ್ಥೆ ದೇಶಾದ್ಯಂತ ಮಕ್ಕಳ ಕೇಂದ್ರಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಬಾಸ್ಕೋ (Bosco), ದೆಹಲಿಯಲ್ಲಿ ರಾಹಿ (Rahi), ಗೋವಾದಲ್ಲಿ ಎಲ್-ಶಡ್ಡಾಯ್ (El-Shaddai), ಚೆನ್ನೈನಲ್ಲಿ ತುಲೀರ್ (Tulir) ಎಂಬ ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿವೆ.ಒಂದು ಕಡೆ ಮಕ್ಕಳ ರಕ್ಷಣೆಗೆ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ, ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆ ಏನೂ ಆಗುತ್ತಿಲ್ಲ. ಬದಲಿಗೆ ಇದೀಗ ವಿಶ್ವದಲ್ಲಿಯೇ ಅತಿ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ನಡೆಯುವ ದೇಶ ಭಾರತ ಅನ್ನಿಸಿಕೊಂಡಿದೆ.