ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆಕ್ರೋಶ, ವಶೀಲಿಬಾಜಿ, ಮೆಮೋರಿಯಲ್ ಟ್ರಸ್ಟ್‌ ಹಾಗೂ ಮುಖಾಮುಖಿ
ಸುದ್ದಿ ಸಾಗರ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆಕ್ರೋಶ, ವಶೀಲಿಬಾಜಿ, ಮೆಮೋರಿಯಲ್ ಟ್ರಸ್ಟ್‌ ಹಾಗೂ ಮುಖಾಮುಖಿ

ಸಾವಿಗೀಡಾಗುವ ಮುನ್ನ ಮನೆಗೆ ಬಂದ ಗೌರಿಗೆ ಬುದ್ಧನ ವಿಗ್ರಹ ಕೊಟ್ಟು ಕಳುಹಿಸಿದ್ದ ಮುಖ್ಯಮಂತ್ರಿ, ರಾಜ್ಯವನ್ನು ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ, ಬೀದಿಗೆ ಬಿದ್ದ ಒಡನಾಡಿಗಳ ಆಕ್ರೋಶ, ಮೊಳಗಿದ 'ನಾನೂ ಗೌರಿ' ಘೋಷಣೆ, ಎಸ್‌ಐಟಿ ತನಿಖೆಗೆ ಮುಂದಾದ ಸರಕಾರ, ಸಿಬಿಐ ತನಿಖೆ ಬೇಡ ಎಂದ ಕುಟುಂಬ, ಅಖಾಡಕ್ಕಿಳಿದ ನೂರು ಜನರ ರಾಜ್ಯ ಪೊಲೀಸ್ ತನಿಖಾ ತಂಡ, 40ನೇ ದಿನಕ್ಕೆ ಇಬ್ಬರು ಶಂಕಿತರ ಮೂರು ಭಾವಚಿತ್ರ ಬಿಡುಗಡೆ ನಾಟಕ, ಸುಳಿವು ಸಿಕ್ಕಿದೆ; ಸಾಕ್ಷಿ ಬೇಕಿದೆ ಎಂದು ಹೇಳಿಕೊಂಡು ಬರುತ್ತಿರುವ ಗೃಹ ಸಚಿವ... 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಬೆಂಗಳೂರು ಮೂಲದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈವರೆಗೆ ನಡೆದ ಪ್ರಮುಖ ಬೆಳವಣಿಗೆಗಳು ಇವು.

ಗೌರಿ ಹತ್ಯೆ ನಡೆದು ನಾಳೆಗೆ ಮೂರು ತಿಂಗಳು. ಸೆ. 5ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಜರಾಜೇಶ್ವರನಗರದಲ್ಲಿರುವ ತಮ್ಮ ಮನೆಯ ಮುಂದೆಯೇ ಗೌರಿ ಗುಂಡೇಟಿಗೆ ಬಲಿಯಾಗಿದ್ದರು.

2 ವರ್ಷಗಳ ಹಿಂದೆ, ಧಾರವಾಡದ ತಮ್ಮ ಮನೆಯಲ್ಲಿಯೇ ಸಂಶೋಧಕ ಎಂ. ಎಂ. ಕಲ್ಬುರ್ಗಿ ಇದೇ ಮಾದರಿಯಲ್ಲಿ ಹತ್ಯೆಗೆ ಈಡಾಗಿದ್ದರು. ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು ಇದೇ ಸರಕಾರ. ಇದೀಗ ಎರಡು ವರ್ಷ ಎರಡು ತಿಂಗಳು ಕಳೆದರೂ ಕಲ್ಬುರ್ಗಿ ಹಂತಕರ ಸುಳಿವು ಇಲ್ಲ. ಈ ನಡುವೆ, ಕಲ್ಬುರ್ಗಿ ಹತ್ಯೆ ತನಿಖೆಯ ಹೊಣೆಯನ್ನು ಹೊತ್ತುಕೊಂಡ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಕರಣದ ತನಿಖೆ ಹೆಚ್ಚು ಕಡಿಮೆ ನನೆಗುದಿಗೆ ಬಿದ್ದಂತಾಗಿದೆ.

ಗೌರಿ ಹತ್ಯೆ ತನಿಖೆಯಲ್ಲಿ ಎಸ್‌ಐಟಿ ಎಂಬದೊಂದು ಅಂಶ ಬಿಟ್ಟರೆ, ಹೆಚ್ಚಿನ ವ್ಯತ್ಯಾಸ ಕಾಣಿಸುತ್ತಿಲ್ಲ. ಹಿರಿಯ ಅಧಿಕಾರಿ ಬಿ. ಕೆ. ಸಿಂಗ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು ಅಥವಾ ರಚಿಸಲಾಗಿದೆ. ನೂರು ಜನರ ತಂಡವನ್ನು ಕಟ್ಟಲಾಗಿತ್ತು. ಇದು ಈವರೆಗೂ ಗೌರಿ ಒಡನಾಡಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಜತೆಗೆ, ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದೆ. 40ನೇ ದಿನಕ್ಕೆ ಶಂಕಿತರ ರೇಖಾಚಿತ್ರ ಬಿಡುಗಡೆ ಪ್ರಹಸನವನ್ನೂ ನಡೆಸಿದೆ. ಈ ನಡುವೆ, ತನಿಖಾ ತಂಡ ಕಾರ್ಯಕ್ಷಮತೆಯನ್ನು ಕಳೆದುಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ತನಿಖಾ ತಂಡದಲ್ಲಿ ಬಹುತೇಕರು ಮತ್ತೆ ತಮ್ಮ ಪೂರ್ವಹೊಣೆಗೆ ಹಿಂತಿರುಗುತ್ತಿದ್ದಾರೆ. ಗೌರಿ ಹಂತಕರು ಸಿಗುವ ಯಾವ ಭರವಸೆಯೂ ಇಲಾಖೆ ಒಳಗೇ ಉಳಿದುಕೊಂಡಿಲ್ಲ.

ಗೌರಿ ಟ್ರಸ್ಟ್‌- ಹೋರಾಟ: 

ಒಂದು ಕಡೆ ಗೌರಿ ಹತ್ಯೆ ತನಿಖೆ ಸಂಪೂರ್ಣವಾಗಿ ಹಳ್ಳ ಹಿಡಿದಿರುವ ಸಮಯದಲ್ಲಿ ಅವರ ಒಡನಾಡಿಗಳು 'ಗೌರಿ ಮೆಮೋರಿಯಲ್ ಟ್ರಸ್ಟ್‌' ಹೆಸರಿನಲ್ಲಿ ಲಾಭರಹಿತ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ಅಧ್ಯಕ್ಷತೆಯಲ್ಲಿ ಸುಮಾರು 18 ಜನ ಟ್ರಸ್ಟಿಗಳು ಗೌರಿ ಅವರ ಆಶಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬೆಂಗಳೂರಿನ ಶೇಷಾದ್ರಿಪುರಂ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕ್ರಿಯೆಗಳಿಗೆ ಸೋಮವಾರ ಚಾಲನೆ ನೀಡಿದ್ದಾರೆ.

ಸ್ವರಾಜ್ ಅಭಿಯಾನದ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಗೌರಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದಾರೆ. ಪ್ರೊ. ವಿ. ಎಸ್‌. ಶ್ರೀಧರ್‌ ಖಜಾಂಚಿ ಎಂದು ಮೂಲಗಳು ಹೇಳಿವೆ. ಉಳಿದಂತೆ, ತೀಸ್ತಾ ಸೆಟಲ್‌ವಾಡ್‌, ರಾಜ್‌ದೀಪ್ ಸರ್‌ ದೇಸಾಯಿ, ನೂರ್ ಶ್ರೀಧರ್, ಶಿವಸುಂದರ್, ಕೆ. ಎಲ್. ಅಶೋಕ್, ಕೆ. ನೀಲಾ, ಪೆಡೆಸ್ಟ್ರಿಯಲ್ ಪಿಕ್ಚರ್ಸ್‌ ದೀಪು, ಜಿ. ಎನ್. ದೇವಿ, ರಹಮತ್‌ ತರೀಕೆರೆ, ಚುಕ್ಕಿ ನಂಜುಂಡಸ್ವಾಮಿ, ಎನ್. ಮುನಿಸ್ವಾಮಿ, ದಿನೇಶ್ ಅಮೀನ್ ಮಟ್ಟು, ಅಬು ಸಲಾಂ ಪುತ್ತಿಗೆ, ಸಿದ್ದನಗೌಡ ಪಾಟೀಲ್ ಟ್ರಸ್ಟಿಗಳಾಗಿದ್ದಾರೆ.

"ಗೌರಿ ಆಶಯಗಳನ್ನು ಉಳಿಸುವುದು ಟ್ರಸ್ಟ್‌ ಉದ್ದೇಶ. ಗೌರಿ ನೆನಪಿಗೆ ಪತ್ರಿಕೆಯೊಂದನ್ನು ಹೊರತರಲು ಟ್ರಸ್ಟ್‌ ಸಹಾಯ ಮಾಡುತ್ತದೆ. ಜತೆಗೆ, ಗೌರಿ ಸಂಬಂಧಿತ ಕಾರ್ಯಕ್ರಮಗಳಿಗೆ ಬೆನ್ನುಲುಬಾಗಿ ನಿಲ್ಲಲಿದೆ,'' ಎಂದು ಟ್ರಸ್ಟ್‌ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು ದೊಡ್ಡಿಪಾಳ್ಯ ನರಸಿಂಹ ಮೂರ್ತಿ.

ಟ್ರಸ್ಟ್‌ ಜತೆಗೆ, ಬೀದಿ ಹೋರಾಟಕ್ಕೂ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಮುಂದಾಗಿದೆ. ಡಿ. 5ರಂದು ಮುಖ್ಯಮಂತ್ರಿ ಮನೆಯವರೆಗೂ ಮೆರವಣಿಗೆ ನಡೆಸಲು ವೇದಿಕೆ ತೀರ್ಮಾನಿಸಿದೆ. "ಕಾಂಗ್ರೆಸ್ ಪಕ್ಷದೊಳಗೆ ಬಲಪಂಥೀಯರ ಕುರಿತು ಮೃದು ಧೋರಣೆ ಹೊಂದಿರುವವರಿದ್ದಾರೆ. ಅಧಿಕಾರಿ ವರ್ಗದಲ್ಲಿಯೂ ಆರ್‌ಎಸ್‌ಎಸ್‌- ಸಂಘಪರಿವಾರದ ಬಗ್ಗೆ ಒಲವು ಉಳ್ಳವರು ಇದ್ದಾರೆ. ಗೌರಿ ಲಂಕೇಶ್ ಹತ್ಯೆ ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಸಾರ್ವತ್ರಿಕವಾಗಿ ಬಲಪಂಥೀಯರೇ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಿದ್ದೂ, ಕನಿಷ್ಟ ವಿಚಾರಣೆ ನಡೆಸಲೂ ಸಾಧ್ಯವಾಗಿಲ್ಲ. ನಾವು ಈ ಬಾರಿ ನೇರವಾಗಿ ಕಾಂಗ್ರೆಸ್‌ ಪಕ್ಷವನ್ನು ಗೌರಿ ಹತ್ಯೆ ತನಿಖೆ ವಿಳಂಬಕ್ಕೆ ಹೊಣೆ ಮಾಡುತ್ತಿದ್ದೇವೆ.'' ಎಂದು ಮಾಹಿತಿ ನೀಡಿದರು ಕೆ. ಎಲ್. ಅಶೋಕ್.

ಗೌರಿ ನೆನಪು: 


       ಸಾಹಿತ್ಯ ಸಮ್ಮೇಳನದಲ್ಲಿ ಚೇ ಬಾಲು.
ಸಾಹಿತ್ಯ ಸಮ್ಮೇಳನದಲ್ಲಿ ಚೇ ಬಾಲು.

ಗೌರಿ ಲಂಕೇಶ್ ಹತ್ಯೆ ನಾನಾ ಕಾರಣಗಳಿಗಾಗಿ ಸದ್ದು ಮಾಡಿತ್ತು. ಬಲಪಂಥೀಯರ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ಗೌರಿ ಗುಂಡೇಟಿಗೆ ಬಲಿಯಾಗಿರಬಹುದು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ತನಿಖೆ ನಡೆಯಬೇಕು ಎಂಬುದು ಎಲ್ಲರ ಆಶಯವೂ ಆಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸನಾತನ ಸಂಸ್ಥೆಗಳು ಕೂಡ ಈ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿದ್ದವು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಹೋಗದಂತೆ ತಡೆಯುವ ಪ್ರಯತ್ನವನ್ನು ಮಾಡಿತ್ತು. ಇದಕ್ಕೆ ಗೌರಿ ಒಡನಾಡಿಗಳೂ ಆರಂಭದಿಂದಲೇ ಬೆಂಬಲ ಸೂಚಿಸಿದರು. ಇವರೇ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಸರಕಾರದ ಮೇಲೆ ನಂಬಿಕೆ ಇದೆ, ಅವರೇ ತನಿಖೆ ನಡೆಸಬೇಕು ಎಂದರು. ಸಿದ್ದರಾಮಯ್ಯ ರಚಿಸಿದ 'ವಿಶೇಷ ತನಿಖಾ ತಂಡ'ದ ತನಿಖೆ ಮೇಲೆ ಭರವಸೆ ಇದೆ ಎಂದು ಹೇಳಿಕೊಂಡರು. ಆದರೆ, ಇವತ್ತು- 90 ದಿನಗಳ ನಂತರ- ಗೌರಿ ಪ್ರಕರಣದ ತನಿಖೆ ಯಾವ ಪ್ರಗತಿಯನ್ನೂ ತೋರಿಸದೆ ಕುಳಿತಿದೆ. ತಾಳ ಮತ್ತು ಮೇಳ ಎರಡೂ ಕೂಡ ಇದಕ್ಕೆ ಹೊಣೆ.

ವಶೀಲಿಬಾಜಿಗಳ ಆಚೆಗೆ, ಗೌರಿ ಲಂಕೇಶ್ ನೆನಪಿಸಿಕೊಳ್ಳುವ ಕೆಲಸಗಳು ಅಲ್ಲಲ್ಲಿ ನಡೆದುಕೊಂಡು ಬಂದಿವೆ. ಮೈಸೂರು ಸಾಹಿತ್ಯ ಸಮ್ಮೇಳನದ ಸಮಯದಲ್ಲಿ, ಗೌರಿಯನ್ನು ಅಕ್ಕ ಅಂತಲೇ ಕರೆಯುವ ಚೇ ಬಾಲು 'ನಾನೂ ಗೌರಿ' ಘೋಷಣೆಗಳನ್ನು ಒಬ್ಬಂಟಿಯಾಗಿ ಮೊಳಗಿಸಿದರು. ರಾಜ್ಯದ ನಾನಾ ಕಡೆಗಳಲ್ಲಿ, ದೇಶದ ಹಲವು ಕಡೆಗಳಲ್ಲಿ ಗೌರಿ ಸ್ಮರಣಾರ್ತ ಕಾರ್ಯಕ್ರಮಗಳು ನಡೆದವು.

ಇವುಗಳ ಆಚೆಗೆ ನಡೆಯಬೇಕಾಗಿದ್ದು ಹತ್ಯೆ ಪ್ರಕರಣದ ತನಿಖೆ ಮತ್ತು ಅದರ ಹೊಣೆ ಇದ್ದಿದ್ದು ಸಿದ್ದರಾಮಯ್ಯ ಸರಕಾರದ ಮೇಲೆ. ಅತ್ತ ಸರಕಾರವೂ ಗಂಭೀರ ತನಿಖೆಗೆ ಮುಂದಾಗಲಿಲ್ಲ. ಎಡ- ಬಲದ ರಾಜಕೀಯ ಸಂಘರ್ಷದ ಲಾಭ ಪಡೆಯುವುದರಲ್ಲಿ ಇರುವ ಆಸಕ್ತಿ, ಹಂತಕರ ಬಂಧನದ ಬಗ್ಗೆ ಇದ್ದಂತೆ ಕಾಣಿಸುತ್ತಿಲ್ಲ. ಇತ್ತ ಗೌರಿ ಒಡನಾಡಿಗಳೂ ಕೂಡ ಪಟ್ಟು ಹಿಡಿದು ಕೂರಲಿಲ್ಲ. ಈವರೆಗೂ ಸರಕಾರದ ಹಾದಿಯಲ್ಲಿಯೇ ಸಾಗಿ ಬಂದಿದ್ದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ.  ಇದೀಗ 90 ದಿನಗಳ ನಂತರ ಮೊದಲ ಬಾರಿಗೆ ಸರಕಾರದ ಎದುರಿಗೆ ವೇದಿಕೆ ಮುಖಾಮುಖಿಯಾಗುತ್ತಿದೆ. ಬೀದಿ ಹೋರಾಟಕ್ಕೆ ಇಳಿದಿದೆ. ಸಿಎಂ ಮನೆಗೆ ಕಾಲ್ನಡಿಗೆ ಜಾಥ ಹೊರಟಿದೆ. ಆದರೆ, ಈ ಮುಖಾಮುಖಿ ನಿರ್ಣಾಯಕನಾ? ಅಥವಾ ಹೋರಾಟದ ಹಾದಿಯಲ್ಲಿ ನಡೆಯುವ ಮತ್ತೊಂದು ವಶೀಲಿಬಾಜಿನಾ?

ನಾಳೆ ನಿರ್ಧಾರವಾಗಲಿದೆ...