'ಹಾದಿಯಾ ಪ್ರಕರಣ': ಸೋತಿದ್ದು ಲವ್‌ ಜಿಹಾದ್‌; ಗೆದ್ದಿದ್ದು ಧರ್ಮ ಮೀರದ ಪ್ರೀತಿ!
ಸುದ್ದಿ ಸಾಗರ

'ಹಾದಿಯಾ ಪ್ರಕರಣ': ಸೋತಿದ್ದು ಲವ್‌ ಜಿಹಾದ್‌; ಗೆದ್ದಿದ್ದು ಧರ್ಮ ಮೀರದ ಪ್ರೀತಿ!

ಆಕೆಯ ಹೆಸರು ಅಖಿಲಾ.

25 ವರ್ಷದ ಮೆಡಿಕಲ್ ವಿದ್ಯಾರ್ಥಿನಿ.

2016ರ ಆರಂಭದಲ್ಲಿ ಆಕೆಯ ತಂದೆ 'ಮಗಳು ಕಾಣೆಯಾಗಿದ್ದಾಳೆ' ಎಂದು ದೂರು ನೀಡಿದರು. ಜನವರಿ 2ರಂದು ಮನೆಯಲ್ಲಿ ಮಗಳು ನಮಾಝ್‌ ಮಾಡುತ್ತಿದ್ದದ್ದು ಅಶೋಕನ್ ಗಮನಕ್ಕೆ ಬಂದಿತ್ತು. ಸಹಧರ್ಮವೊಂದರ ಆಚರಣೆಗೆ ಮಗಳು ಇಳಿದಿರುವುದನ್ನು ನೋಡಿದ ತಂದೆ ಮನಸ್ಸು ಕುಪಿತಗೊಂಡಿತ್ತು. ಅಶೋಕನ್ ಕಮ್ಯುನಿಸ್ಟ್ ಪಕ್ಷದ ಡಿವೈಎಫ್‌ಐ ಸಂಘಟನೆಯ ಮಾಜಿ ಸದಸ್ಯ ಎಂದು ವರದಿಗಳು ಹೇಳುತ್ತವೆ.

ಅದಾದ ನಂತರ ತಂದೆ- ಮಗಳ ನಡುವೆ ವಾಗ್ವಾದಗಳೂ ನಡೆದಿದ್ದವು. ಕೊಟ್ಟಾಯಂ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್‌ ಹೋಮೊಯೋಪಥಿಕ್ ಮೆಡಿಸಿನ್ ಅಂಡ್ ಸರ್ಜರಿ ಓದುತ್ತಿದ್ದ ಮಗಳು ಕಾಣೆಯಾಗಿದ್ದಾಳೆ ಎಂದು ಆತ ನಾಲ್ಕು ದಿನಗಳ ನಂತರ ದೂರು ನೀಡಿದ್ದ. ಜತೆಗೆ, ನ್ಯಾಯಲಯದಲ್ಲಿ ಹೆಬಿಯಸ್ ಕಾಪರ್ಸ್‌ ಅರ್ಜಿ ಸಲ್ಲಿಸಿದ್ದ. ಮಗಳ ಜತೆಗೆ ಹಾಸ್ಟಲ್‌ನಲ್ಲಿ ರೂಮ್‌ಮೇಟ್‌ಗಳಾಗಿದ್ದ ಫಸೀನಾ ಹಾಗೂ ಜಸೀನಾ ತಂದೆ ಅಬೂಬಕರ್‌ ಕೈವಾಡದಿಂದ ಮಗಳು ಕಾಣೆಯಾಗಿದ್ದಾಳೆ. ಅವಳನ್ನು ಹುಡುಕಿಕೊಡಿ ಎಂದು ಅರ್ಜಿಯಲ್ಲಿ ಅಶೋಕನ್ ದಂಪತಿ ಮೊರೆ ಇಟ್ಟಿದ್ದರು.

ಇದಾಗಿ 13 ದಿನಗಳ ನಂತರ ಕೇರಳ ಹೈಕೋರ್ಟ್‌ ಮುಂದೆ ಹಾಜರಾದ ಅಖಿಲಾ, 'ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಧಾರ್ಮಿಕ ಆಚರಣೆಗನ್ನು ಪಾಲಿಸುತ್ತಿದ್ದೇನೆ' ಎಂದು ತಿಳಿಸಿದಳು.

ನ್ಯಾಯಾಲಯದಲ್ಲಿ ಹೆಬಿಯಸ್ ಕಾರ್ಪಸ್‌ ಅರ್ಜಿ ವಿಚಾರಣೆಗೂ ಮುನ್ನವೇ, ಮಲ್ಲಪುರಂನ ಶಿಕ್ಷಣ ಸಂಸ್ಥೆಯೊಂದರ ಸಹಾಯದಿಂದ ಸಾಮಾಜಿಕ ಕಾರ್ಯಕರ್ತೆ, ಪಿಎಫ್‌ಐ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಸೈನಬಾ ಎಂಬವರ ಸಂಪರ್ಕಕ್ಕೆ ಅಖಿಲಾ ಬಂದಿದ್ದಳು. ನ್ಯಾಯಾಲಯದ ಕಲಾಪದ ನಂತರವೂ ಅಖಿಲಾ ಅಲ್ಲಿಯೇ ಮುಂದುವರಿದಳು. ಈ ಸಮಯದಲ್ಲಿ ಆಕೆ ಧಾರ್ಮಿಕ ತರಗತಿಯೊಂದಕ್ಕೂ ಸೇರಿಕೊಂಡಳು.

ಜನವರಿ 25ಕ್ಕೆ ಅಖಿಲಾ ತಂದೆ ಹೈಕೋರ್ಟ್‌ನಲ್ಲಿ ಮತ್ತೊಂದು ಪಿಟಿಷನ್ ಸಲ್ಲಿಸಿದರು. ಇದನ್ನು ನ್ಯಾಯಾಲಯ ತಿರಸ್ಕರಿತು. ಆದರೆ, ಆಗಸ್ಟ್‌ 17ರಂದು ಇನ್ನೊಂದಿಷ್ಟು ಪ್ರಬಲ ವಾದಗಳನ್ನು ಮುಂದಿಟ್ಟುಕೊಂಡು ಅಖಿಲಾ ತಂದೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದರು. ಈ ಸಮಯದಲ್ಲಿ ಮಗಳನ್ನು ಸಿರಿಯಾಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ ಎಂದು ಪಿಎಫ್‌ಐ ಸಂಘಟನೆ ಮೇಲೆ ಆರೋಪ ಮಾಡಿದರು. 'ಅವರು (ಪಿಎಫ್‌ಐ) ಅಖಿಲಾಳನ್ನು ಹೊರದೇಶಕ್ಕೆ ಮದುವೆ ಮಾಡಿಕೊಡಲು ತಯಾರಿ ನಡೆಸುತ್ತಿದ್ದಾರೆ. ಬಲವಂತದಿಂದ ಮತಾಂತರ ಮಾಡಿದ್ದಾರೆ' ಎಂದು ಅಶೋಕನ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

ಈ ಬಾರಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಮಧ್ಯಂತರ ಆದೇಶವೊಂದನ್ನು ನೀಡಿತು. ಅಖಿಲಾಳನ್ನು ಹೊರದೇಶಕ್ಕೆ ಕಳುಹಿಸುವುದರ ಮೇಲೆ ನಿಗಾ ಇಡುವಂತೆ ಪೊಲೀಸ್‌ ಇಲಾಖೆಗೆ ಆದೇಶವನ್ನು ನೀಡಿತು. ಜತೆಗೆ, ಎರ್ನಾಕುಲಂನಲ್ಲಿರುವ ಹಾಸ್ಟೆಲ್‌ಗೆ ಆಕೆಯನ್ನು ಸ್ಥಳಾಂತರಿಸುವಂತೆ ಅದೇ ತಿಂಗಳು ನಡೆದ ಮತ್ತೊಂದು ವಿಚಾರಣೆಯೊಂದರಲ್ಲಿ ನ್ಯಾಯಾಲಯ ಹೇಳಿತು.

ಸೆಪ್ಟೆಂಬರ್ ಹಾಗೂ ನವೆಂಬರ್‌ ತಿಂಗಳುಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಮುಂದುರಿಯಿತು. ಈ ಸಮಯದಲ್ಲಿ ಅಖಿಲಾ ಪರ ವಕೀಲರು 25 ವರ್ಷದ ವಯಸ್ಕ ಯುವತಿಯ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಮಯದಲ್ಲಿ ಅಖಿಲಾಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿದ ನ್ಯಾಯಾಲಯ ಆಕೆಯ ವಿದ್ಯಾಭ್ಯಾಸ ಮುಂದುವರಿಸಲು ಕಾಲೇಜಿನ ಹಾಸ್ಟೆಲ್‌ಗೆ ಸ್ಥಳಾಂತರವಾಗುವಂತೆ ಸೂಚಿಸಿತು.

ಅತ್ತ ನ್ಯಾಯಾಲಯದ ಕಲಾಪ ಮುಗಿಯುತ್ತಿದ್ದಂತೆ, ಅದೇ ದಿನ ಅಖಿಲಾ ಶಾಫಿನ್‌ ಎಂಬ ಯುವಕನ ಜತೆ ಮದುವೆಯಾದಳು. ಇದು ಮುಂದಿನ ಕಲಾಪದಲ್ಲಿ ನ್ಯಾಯಾಲಯದ ಗಮನಕ್ಕೆ ಬಂದಾಗ, ಮದುವೆಯನ್ನು ರದ್ಧುಗೊಳಿಸುವ ಮೂಲಕ 'ಲವ್ ಜಿಹಾದ್‌' ಚರ್ಚೆಯು ದೇಶಾದ್ಯಂತ ಮತ್ತೊಮ್ಮೆ ಹುಟ್ಟಿಕೊಳ್ಳುವಂತೆ ಮಾಡಿತಯ ನ್ಯಾಯಾಲಯದ ತೀರ್ಪು.

ಅಚ್ಚರಿಯ ನಡೆಗಳಲ್ಲಿ, ಅಖಿಲಾ ಮತಾಂತರಗೊಂಡು ಹಾದಿಯಾ ಆಗಿ ಬದಲಾಗಿದ್ದು ಮತ್ತು ಆಕೆ ಮದುವೆಯಾಗಿದ್ದನ್ನು ಕೇರಳದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಮತಾಂತರದ ಸಾಲಿನಲ್ಲಿಯೇ ನ್ಯಾಯಲಯ ಕೂಡ ಕಂಡಿತು. ಹಾದಿಯಾಳನ್ನು ಪೋಷಿಸುವ ಹೊಣೆಗಾರಿಕೆಯನ್ನು ತಂದೆ ಅಶೋಕನ್‌ಗೆ ಕಳೆದ ವರ್ಷದ ಡಿಸೆಂಬರ್‌ ವೇಳೆಗೆ ನೀಡಿತು. ಅಲ್ಲಿಂದ ಮುಂದೆ ಹಾದಿಯಾ ಗೃಹ ಬಂಧನಕ್ಕೆ ಈಡಾದಳು. ಆಕೆ ತಂದೆಯಿಂದ ಹಲ್ಲೆ ನಡೆಯುತ್ತಿದೆ ಎಂದು ಆರೋಪಿಸಿದ ದೃಶ್ಯಾವಳಿಗಳು ಹೊರಬಿದ್ದವು. ಹಾದಿಯಾ ಸುತ್ತ ರಾಷ್ಟ್ರಮಟ್ಟದ ಸುದ್ದಿಸಂಕೀರ್ಣವೊಂದು ನಿರ್ಮಾಣವಾಯಿತು.

ಹೀಗಿರುವಾಗಲೇ, ಹಾದಿಯಾಳನ್ನು ಮದುವೆಯಾದ ಶಾಫಿನ್‌ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದರು. ಹಾದಿಯಾಳ ಹೇಳಿಕೆಯನ್ನು ಪ್ರತ್ಯಕ್ಷವಾಗಿ ದಾಖಲಿಸಲು ಸೋಮವಾರ ನ್ಯಾಯಾಲಯ ದಿನಾಂಕ ನಿಗದಿ ಮಾಡಿತ್ತು. ದಿಲ್ಲಿಗೆ ತೆರಳಲು ಕೊಚ್ಚಿನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾದಿಯಾ ಬಂದಾಗ ಮಾಧ್ಯಮಗಳ ಮುಂದೆ, "ನನಗೆ ನ್ಯಾಯ ಬೇಕು. ನನ್ನನ್ನು ಯಾರೂ ಬಲವಂತವಾಗಿ ಮತಾಂತರ ಮಾಡಿಲ್ಲ. ಮದುವೆಗೆ ಒತ್ತಾಯ ಮಾಡಿಲ್ಲ. ನಾನು ನನ್ನ ಗಂಡನ ಜತೆಗೆ ಹೋಗುತ್ತೇನೆ. ನನಗೆ ನ್ಯಾಯ ಬೇಕು,'' ಎಂದಳು. ಹೆಚ್ಚು ಕಡಿಮೆ ಇದೇ ಮಾತುಗಳನ್ನು ನ್ಯಾಯಾಲಯದ ಮುಂದೆಯೂ ಹೇಳಿದ್ದಾಳೆ. ಹೀಗಾಗಿ ಸುಪ್ರಿಂ ಕೋರ್ಟ್‌ ಆಕೆಯನ್ನು ತಂದೆಯ ಗೃಹಬಂಧನದಿಂದ ಬಿಡಿಸಿ, ಮತ್ತೆ ಕಾಲೇಜಿಗೆ ಮರಳಲು ತಿಳಿಸಿದೆ. ಕಾಲೇಜಿನ ಡೀನ್‌ಗೆ ಪೋಷಣೆಯ ಹೊಣೆಯನ್ನು ನೀಡಿದೆ.

ಹೀಗೆ, ಸುಮಾರು ಎರಡು ವರ್ಷಗಳ ಕಾಲ 'ಲವ್‌ ಜಿಹಾದ್‌' ಹೆಸರಿನಲ್ಲಿ ದೇಶದಲ್ಲಿ ಸೆನ್ಸೇಷನ್ ಮೂಡಿಸಿದ್ದ ಕೇರಳದ ಹಾದಿಯಾ ಪ್ರಕರಣ ಧಾರ್ಮಿಕ ಲೇಪನದ ಆಚೆಗಿನ ಪ್ರೀತಿಯನ್ನು ಎತ್ತಿಹಿಡಿದಿದೆ.

ಕಮ್ಯುನಿಸ್ಟ್ ಕೇರಳ- ಕೇಸರಿ ಹುನ್ನಾರ- ಕೋಮುವಾದಿ ಪಿಎಫ್‌ಐ: 

ಹಾದಿಯಾ ಪ್ರಕರಣದಲ್ಲಿ ಕಳೆದ ಒಂದು ವರ್ಷ 11 ತಿಂಗಳುಗಳ ಕಾಲ ನಡೆದಿರುವ ರಾಜಕೀಯ ಚರ್ಚೆಗಳನ್ನು ಗಮನಿಸಿದರೆ, ಹಾದಿಯಾ ಪ್ರೀತಿಯ ಆಚೆಗೆ ಚರ್ಚೆ ನಡೆದಿದೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾದ ಮತಾಂತರಗಳು, ಅವುಗಳನ್ನು ತಡೆಯಲು ಹುಟ್ಟಿಕೊಂಡು ಯೋಗ ಕೇಂದ್ರಗಳು, ಕಮ್ಯುನಿಸ್ಟ್‌ ಸರಕಾರಕ್ಕೆ ಅಲ್ಲಿರುವ ಮುಸ್ಲಿಂ ಸಂಘಟನೆಗಳ ಮೇಲಿನ ಕೋಪ, ಧಾರ್ಮಿಕ ರಾಜಕೀಯಕ್ಕೆ ಎಡತಾಕುತ್ತಿರುವ ಕೇಸರಿ ಪಾಳೆಯ ಹುನ್ನಾರಗಳು ಎಲ್ಲವೂ ಈ ಪ್ರಕರಣದಲ್ಲಿ ಸಾಲು ಸಾಲಾಗಿ ಕಂಡು ಬರುತ್ತದೆ.

"ಕೇರಳದಲ್ಲಿ ಆಡಳಿತದಲ್ಲಿರುವುದು ಕಮ್ಯುನಿಸ್ಟ್ ಸರಕಾರ. ಅವರೂ ಕೂಡ ಒಂದು ರೀತಿಯ ಸಂಘಪರಿವಾರಿಗಳೇ. ಮುಸ್ಲಿಂ ಸಂಘಟನೆಯನ್ನು ಅವರು ಕೋಮುವಾದಿ ಸಂಘಟನೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹಾದಿಯಾ ಪ್ರಕರಣವನ್ನು ಬಳಸಿಕೊಂಡು ತಾವು ಹೇಳಿಕೊಂಡು ಬಂದ ವಿಚಾರಕ್ಕೆ ಸತ್ಯದ ಲೇಪ ಹಚ್ಚುವ ಪ್ರಯತ್ನವನ್ನು ಅವರು ಮಾಡಿದರು. ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ಲವ್ ಜಿಹಾದ್ ರೂಪ ನೀಡಿ, ಧಾರ್ಮಿಕ ಕಂದಕ ಸೃಷ್ಟಿಗೆ ಯತ್ನಿಸಿದರು. ಕೇರಳದಲ್ಲಿ ಇವತ್ತು ನಡೆಯುತ್ತಿರುವ ಇಂತಹ ಹಲವು ಪ್ರಕರಣಗಳಲ್ಲಿ ಇದೊಂದು ಸಣ್ಣ ಪ್ರಕರಣ ಅಷ್ಟೆ. ಇದು ಮೊದಲೂ ಅಲ್ಲ, ಕೊನೆಯೂ ಆಗುವುದಿಲ್ಲ,'' ಎನ್ನುತ್ತಾರೆ ಪಿಎಫ್‌ಐ ಸಂಘಟನೆಯ ಆಪ್ತ ವಲಯದಲ್ಲಿ ಇರುವ ಸಾಮಾಜಿಕ ಚಿಂತಕರೊಬ್ಬರು.

ಹಾದಿಯಾ ಪ್ರಕರಣದಲ್ಲಿ ಆಕೆ ಗಂಡನ ಜತೆ ಹೋಗಲು ಇಚ್ಚೆ ವ್ಯಕ್ತಪಡಿಸಿದ್ದರೆ ಸಂತೋಷ ಎನ್ನುತ್ತಾರೆ ಕರ್ನಾಟಕದ ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಪ್ರಕಾಶ್. "ಪಿಎಫ್‌ಐ ಕೋಮುವಾದಿ ಸಂಘಟನೆ ಎಂಬುದಲ್ಲಿ ಯಾವುದೇ ಅನುಮಾನ ಬೇಡ. ಅವರಿಗೂ ಆರ್‌ಎಸ್‌ಎಸ್‌ನವರಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ,'' ಎನ್ನುತ್ತಾರೆ ಅವರು.

ಇಂತಹ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೇ ಅಖಿಲಾ ಹಾದಿಯಾ ಆಗಿ ಬದಲಾಗಿದ್ದಾಳೆ. ತನ್ನ ಮನೆಯ ಧಾರ್ಮಿಕ ಆಚರಣೆಗಿಂತ ಗಂಡನ ಧರ್ಮ ಮತ್ತು ಪ್ರೀತಿ ಮುಖ್ಯ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾಳೆ. 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿ, ಮದುವೆಯಾಗಿಯೂ ಅದಕ್ಕೊಂದು ಸಾಂವಿಧಾನಿಕ ಒಪ್ಪಿಗೆ ಪಡೆಯುವ ಪ್ರಯತ್ನದಲ್ಲಿದ್ದಾಳೆ. ಈ ಪ್ರಕರಣದಲ್ಲಿ ಲವ್‌ ಜಿಹಾದ್ ಸೋತಿದೆ ಮತ್ತು ಪ್ರೀತಿ- ಮದುವೆ- ಸಂಬಂಧ ಗೆದ್ದಿವೆ.