samachara
www.samachara.com
ಮೊದಲ ಸಾಹಿತ್ಯ ಸಮ್ಮೇಳನದ ಇಂಗ್ಲಿಷ್ ಭಾಷಣ; 103 ವರ್ಷಗಳ ಐತಿಹಾಸಿಕ ಪಯಣ
ಸುದ್ದಿ ಸಾಗರ

ಮೊದಲ ಸಾಹಿತ್ಯ ಸಮ್ಮೇಳನದ ಇಂಗ್ಲಿಷ್ ಭಾಷಣ; 103 ವರ್ಷಗಳ ಐತಿಹಾಸಿಕ ಪಯಣ

83ನೇ‌ ಕನ್ನಡ‌ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಸಂಭ್ರಮದಿಂದ‌ ಸಜ್ಜಾಗಿದೆ. ತನ್ನೂರಿನ ಹಿರಿಯ ಪತ್ರಕರ್ತ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರ ಅಕಾಲಿಕ ಸಾವಿನ ಸೂತಕವನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಬಾರಿಯ ಸಾಹಿತ್ಯ ಪರಿಚಾರಿಕೆಗೆ ಅರಮನೆ ನಗರಿ ಸಾಕ್ಷಿಯಾಗಲಿದೆ.

ನ. 24ರಂದು ಚಾಲನೆ ಪಡೆದುಕೊಳ್ಳಲಿರುವ ಸಾಹಿತ್ಯದ ಹಬ್ಬ ಮೂರು ದಿನಗಳ ಕಾಲ ನಾಡು, ನುಡಿ, ಸಂಸ್ಕೃತಿ, ಅಸ್ಮಿತೆಗಳ ಚರ್ಚೆ ನಡೆಸಲಿದೆ. ಸಮ್ಮೇಳನವನ್ನು ಆಯೋಜನೆ ಮಾಡುತ್ತಿರುವುದು 'ಕರ್ನಾಟಕ‌ ಸಾಹಿತ್ಯ ಪರಿಷತ್ತು'. ಕನ್ನಡದ ಸಾಹಿತ್ಯ ಕೃಷಿಯನ್ನು ಬೆಳೆಸುವ, ನಾಡಿನ ಆರೋಗ್ಯಕರ ಬೆಳವಣಿಗೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಈ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದೆ. ಅದರ ಹುಟ್ಟು, ಬೆಳವಣಿಗೆಯೇ ಒಂದು ಕುತೂಹಲಕಾರಿ‌ ಅಧ್ಯಾಯ.

1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ಆಡಳಿತಕ್ಕೆ ಮುಕ್ತಿ ನೀಡಲು ಸಂಘಟಿತ ಪ್ರೇರಣೆ ನೀಡಿತು. ಈ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಡೆತನದಲ್ಲಿದ್ದ ಭಾರತದ ಆಡಳಿತ, ಇಂಗ್ಲೆಂಡ್‌ ರಾಣಿಯ ಕೈ ಸೇರಿತು. ಭಾರತವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ ಆಡಳಿತ ನಡೆಸಿದರೆ ಅನುಕೂಲವೆಂದು ಜಾನ್ ಬ್ರೈಟ್ ಎನ್ನುವ ರಾಜಕಾರಣಿ ಬ್ರಿಟೀಷ್ ಪಾರ್ಲಿಮೆಂಟಲ್ಲಿ 1858ರಲ್ಲಿಯೇ ಚರ್ಚಿಸಿದ್ದ. ಇದರ ಭಾಗವಾಗಿಯೇ ಭಾಷಾವಾರು ಪ್ರಾಂತ್ಯಗಳಾಗುವ ಸಾಧ್ಯತೆಯ ಚರ್ಚೆಗಳು ಭಾರತದ‌ಲ್ಲಿ ನಿಧಾನಕ್ಕೆ ಪ್ರಾರಂಭವಾಗತೊಡಗಿತು. ಜೊತೆಗೆ ಬ್ರಿಟಿಷ್ ಶಿಕ್ಷಣದ ಮೂಲಕ ಕಾಣಿಸಿಕೊಂಡ ಹೊಸ ಎಚ್ಚರಗಳ ಕಾರಣವಾಗಿ ಭಾಷಿಕ ಉಪರಾಷ್ಟ್ರೀಯತೆಯ ಅರಿವುಗಳು ಕೂಡ ಭಾರತದಲ್ಲಿ ಬೇರೆ ಬೇರೆ ಭಾಗಗಳಲ್ಲಿ ರೂಪುಗೊಂಡವು.

ಬೇರೆ ಬೇರೆ ಭಾಷೆಗಳನ್ನಾಡುವ ಜನ ತಮ್ಮ ಭಾಷಿಕ ಪ್ರಾಂತ್ಯಗಳ ಒಗ್ಗೂಡುವಿಕೆಯ ಪ್ರಯತ್ನಗಳನ್ನು ಆರಂಭಿಸಿದ್ದರು. ಅಂತೆಯೇ ಕನ್ನಡ ಭಾಷಿಕರ ಬಹುತೇಕ ಪ್ರದೇಶಗಳಲ್ಲೂ ಕೂಡ ಭಾಷಾವಾರು ಒಗ್ಗೂಡುವಿಕೆ ಪ್ರಕ್ರಿಯೆ ಆರಂಭವಾಯಿತು. ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಒಂದಷ್ಟು, ಹೈದರಾಬಾದ್ ಸಂಸ್ಥಾನ, ಬಳ್ಳಾರಿ, ಕೊಡಗು, ಮಂಗಳೂರುಗಳು ಮದ್ರಾಸು ಕರ್ನಾಟಕವಾಗಿ ಬ್ರಿಟೀಷರ ಅಧೀನದಲ್ಲಿದ್ದವು. ಉಳಿದ‌ ಪ್ರದೇಶ ಮೈಸೂರು ಸಂಸ್ಥಾನವಾಗಿತ್ತು. ಮೈಸೂರು ಸಂಸ್ಥಾನ ಒಂದನ್ನು ಹೊರತುಪಡಿಸಿದರೆ ಕನ್ನಡ ಭಾಷೆಯನ್ನು ನೇರವಾಗಿ ಪ್ರಭುತ್ವವೇ ಪ್ರೋತ್ಸಾಹ ಮಾಡಿ ಬೆಳೆಸುವ ಯಾವ ಸಾಧ್ಯತೆಗಳು ಬೇರೆ ಕನ್ನಡ ಮಾತಾಡುವ ಪ್ರದೇಶಗಳಲ್ಲಿ ಇರಲಿಲ್ಲ. ಭಾಷೆ ಮತ್ತು ತಮ್ಮನ್ನಾಳುವ ಪ್ರಭುತ್ವ ಸಂಸ್ಕೃತಿ ತಮ್ಮದಲ್ಲದ ಕಾರಣಕ್ಕೆ ಸಹಜವಾಗಿ ಈ ಪ್ರದೇಶಗಳ ಜನ ಪರಕೀಯತನವನ್ನು ಅನುಭವಿಸುತ್ತಿದ್ದ ಕಾಲ. ಮೈಸೂರು ಪ್ರಾಂತ್ಯದಲ್ಲೂ ಕನ್ನಡಕ್ಕೆ‌ ಪ್ರಭುತ್ವದ ಕಡೆಯಿಂದ‌ ಸಾಹಿತ್ಯಿಕ ಪ್ರೋತ್ಸಾಹ ಇದ್ದಾಗಲೂ, ಶಿಕ್ಷಣದಲ್ಲಿ, ವ್ಯಾಪಾರ ಮತ್ತು ಉದ್ಯೋಗವಕಾಶಗಳ ಕಾರಣಕ್ಕೆ ಇಂಗ್ಲೀಷ್ ಭಾಷೆ ಇಂದಿನಂತೆ ಅಂದು ಸಹಾ ಮೈಲುಗೈ ಸಾಧಿಸಿಕೊಂಡಿತ್ತು.

ಒಟ್ಟಾರೆ ಆ ಕಾಲಕ್ಕೆ ನಾವು ಇಂದು‌ ನೋಡುತ್ತಿರುವ ಕರ್ನಾಟಕವೂ ಇರಲಿಲ್ಲ. ಬೇರೆ ಬೇರೆ ಆಡಳಿತಗಳಲ್ಲಿ‌ ಕನ್ನಡಿಗರೆಲ್ಲ ಹಂಚಿಹೋಗಿ ಅಕ್ಷರಶಃ ಸಾಂಸ್ಕೃತಿಕವಾಗಿ ಮತ್ತು ಭಾಷಿಕವಾಗಿ ಪರಕೀಯತೆ ಅನುಭವಿಸುತ್ತಿದ್ದ ಕಾಲ. ಈ ಪರಕೀಯತೆಯ ಅನುಭವದಿಂದ‌ ಬೇಗ ಎಚ್ಚತುಕೊಂಡವರು ಉತ್ತರ ಕರ್ನಾಟಕದ‌ ಮಂದಿ. ಅದರಲ್ಲೂ ಬಾಂಬೆ ಪ್ರೆಸಿಡೆನ್ಸಿಯ ಭಾಗಕ್ಕೆ ಒಳಪಟ್ಡಿದ್ದ ಕನ್ನಡಿಗರು. ಮರಾಠಿ ಭಾಷೆಯಲ್ಲಿಯೇ ಆಡಳಿತ, ಶಿಕ್ಷಣ, ದಿನನಿತ್ಯದ ವ್ಯವಹಾರ ನಡೆಸುವುದು ಅನಿವಾರ್ಯವಾಗಿದ್ದ ಕಾಲದಲ್ಲಿ‌ ಕನ್ನಡ ಶಾಲೆಗಳನ್ನು ತೆರೆಯುವ ಪ್ರಯತ್ನಗಳು 1861ರಷ್ಟು ಹಿಂದೆಯೇ ನಡೆಯಿತು. 1890ರ ವೇಳೆಗೆ ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಉತ್ತರ ಕರ್ನಾಟಕದ ಜನ ಬಹಳಷ್ಟು ಕನ್ನಡದ‌‌ ಕೆಲಸಗಳನ್ನು ಆರಂಭಿಸಿದ್ದರು. ಇದರ ಭಾಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು. 1892ರಲ್ಲಿ ಕರ್ನಾಟಕ ಭಾಷೋಜ್ಜೀವಿನಿ ಸಭಾ ಎನ್ನುವ ಸಂಸ್ಥೆ ಸ್ಥಾಪನೆಯಾಯಿತು. ಕನ್ನಡಿಗರನ್ನೆ ಕೇಂದ್ರವಾಗಿಟ್ಟುಕೊಂಡು 1896ರಷ್ಟೊತ್ತಿಗೆ 'ವಾಗ್ಬೂಷಣ' ಎನ್ನುವ ಪತ್ರಿಕೆಯನ್ನು ಆರಂಭಿಸಿದ್ದರು. 1907 ಮತ್ತು 1908ರಲ್ಲಿ ಕರ್ನಾಟಕ ಗ್ರಂಥಕರ್ತರ ಸಮ್ಮೇಳನಗಳನ್ನು ನಡೆಸಿದ್ದರು. ಕರ್ನಾಟಕದ ಏಕೀಕರಣದ ಕನಸು ಕಾಣಲು ಪ್ರಾರಂಭಿಸಿ ಪ್ರಯತ್ನಗಳು ಶುರುವಾಗಿದ್ದವು. ಇದಕ್ಕೆ ಕನ್ನಡವೇ ಮಾತೃಭಾಷೆಯ ಪ್ರಭುತ್ವವಾದ ಮೈಸೂರು‌ ಪ್ರಾಂತ್ಯದಿಂದ ತಮಗೆ ಬೆಂಬಲ‌ ದೊರೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಪ್ರಾರಂಭದ ದಿನಗಳಲ್ಲಿ ಅದು ದೊರೆಯಲಿಲ್ಲ ಎಂಬುದು ಮತ್ತೊಂದು ಚರ್ಚೆ.

ಈ ಎಲ್ಲ ಬೆಳವಣಿಗೆಗಳಿಂದಲೂ ಮೈಸೂರು ಪ್ರಾಂತ್ಯದ ಲೇಖಕರು ದೂರವೇ ಇದ್ದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗುವ ಕಾಲಕ್ಕೂ ಮುನ್ನವೇ ಧಾರವಾಡ ಕೇಂದ್ರಿತವಾಗಿ ಉತ್ತರ ಕರ್ನಾಟಕದಲ್ಲಿ ಕನ್ನಡ ಕಾರ್ಯಗಳು ನಡೆಯುತ್ತಿದ್ದವು. ಕೊನೆಗೆ ಆಲೂರು ವೆಂಕಟರಾಯ, ಕಡಪ ರಾಘವೇಂದ್ರರಾಯರಂತವರ ಪ್ರಯತ್ನದಿಂದ ಮೂರನೇ ಗ್ರಂಥಕರ್ತರ ಸಮ್ಮೇಳನ ಮೈಸೂರಿನಲ್ಲಿ ನಡೆಯುವ ಮೂಲಕ ಕನ್ನಡ ಕೇಂದ್ರಿತ ಕೆಲಸಗಳು ಈ ಪ್ರಾಂತ್ಯದಲ್ಲಿ‌ಯೂ ಆರಂಭವಾದವು.

ಅಖಿಲ ಕರ್ನಾಟಕವನ್ನು ಪ್ರತಿನಿಧಿಸುವ ಸಂಸ್ಥೆಯೊಂದು ಸ್ಥಾಪನೆಯಾಗಬೇಕು, ಮತ್ತು ಮೈಸೂರು ಪ್ರಾಂತ್ಯದಲ್ಲೇ ಅದು ಆಗಬೇಕು ಎಂಬುದು ಉತ್ತರ ಕರ್ನಾಟಕದ ಕನ್ನಡ ಚಿಂತಕರ ಬಯಕೆಯಾಗಿತ್ತು. ಜೊತೆಗೆ ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಮೈಸೂರು ಪ್ರಾಂತ್ಯ ಕೈಗಾರಿಕೆ, ಕಲೆ, ಸಾಹಿತ್ಯ, ಶಿಕ್ಷಣ ಸಂಸ್ಥೆಗಳು, ಬ್ಯಾಂಕು‌ ಹೀಗೆ ನೂರೊಂದು ಆಧುನಿಕ ಎನ್ನುವ ವಿದ್ಯಾಮಾನಗಳನ್ನು ಬರಮಾಡಿಕೊಂಡಿದ್ದ ಸಂದರ್ಭ. 1914ರ‌ ಈ ಸಂದರ್ಭದಲ್ಲಿಯೇ ಮೈಸೂರು ಎಕನಾಮಿಕ್ಸ್ ಕಾನ್ಪರೆನ್ಸ್ ಅಂದರೆ ಮೈಸೂರು ಸಂಸ್ಥಾನವನ್ನು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವ ಪ್ಲಾನಿಂಗ್ ಕಮಿಟಿಗಳು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಆರಂಭವಾದವು. ಇದರಲ್ಲಿ 'ವಿದ್ಯಾಸಮಿತಿ'ಯೂ ಒಂದಿತ್ತು. ಈ ಸಮಿತಿಯ ಮೂಲಕ ಮೈಸೂರು ಸಂಸ್ಥಾನ ಕೇಂದ್ರಿತವಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದು ಮತ್ತು ಕರ್ನಾಟಕದ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವಂತಹ ಪರಿಷತ್ತೊಂದನ್ನು ಸ್ಥಾಪಿಸುವ ಯೋಜನೆಯೂ ಇತ್ತು.

ಈ ವಿದ್ಯಾ ಸಮಿತಿಗೆ ಹೆಚ್.ವಿ ನಂಜುಂಡಯ್ಯನವರೆಂಬ ಮೈಸೂರು ಸುಪ್ರಿಂ ಕೋರ್ಟಿನ ಮುಖ್ಯನ್ಯಾಯಧೀಶರು ಅಧ್ಯಕ್ಷರಾಗಿದ್ದರು. ಇವರ ನೇತೃತ್ವದಲ್ಲಿಯೆ 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಆರಂಭವಾಗಿ, ಅವರೇ ಮೊದಲ ಉಪ ಕುಲಪತಿಗಳೂ ಆದರು. ಹಾಗೆ ಈ ವಿದ್ಯಾ ಸಮಿತಿಯ ಕನ್ನಡಕ್ಕಾಗಿ ಪರಿಷತ್ತು ಒಂದನ್ನು ಸ್ಥಾಪಿಸುವ ಪ್ರಯತ್ನವಾಗಿ ಅಂದಿನ ವಿಭಜಿತ ಕರ್ನಾಟಕದ ಎಲ್ಲ ಭಾಗಗಳ ವಿದ್ವಾಂಸರನ್ನು ಗಮನಕ್ಕೆ‌ ತೆಗೆದುಕೊಂಡು ಮೇ 3ನೇ ತಾರೀಖು1915ರಂದು ಕರ್ಣಾಟಕ‌ ಸಾಹಿತ್ಯ ಪರಿಷತ್ತು‌ ಸ್ಥಾಪನೆಯಾಯಿತು.

'ಕರ್ಣಾಟಕ ಸಾಹಿತ್ಯ ಪರಿಷತ್ತು' ಆರಂಭವಾಗಿದ್ದೇ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಮೂಲಕ. ಅಂದಿನ ಬೆಂಗಳೂರು ಗೌರ್ನಮೆಂಟ್ ಹೈಸ್ಕೂಲ್ ಅಂದರೆ ಬೆಂಗಳೂರು ವಿವಿಯ ಸೆಂಟ್ರಲ್ ಕಾಲೇಜಿನ ಮುಂಭಾಗದಲ್ಲಿರುವ ಇಂದಿನ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಪ್ರಥಮ ಅಖಿಲ ಭಾರತ ಕನ್ನಡ‌ ಸಾಹಿತ್ಯ ಸಮ್ಮೇಳನ 103ವರ್ಷಗಳ ಹಿಂದೆ ಜರುಗಿತು.

ಈ ಸಮ್ಮೇಳನಕ್ಕೆ ಧಾರವಾಡ, ಬಿಜಾಪುರ, ಬೆಳಗಾವಿ, ಗ್ವಾಲಿಯರ್, ಬಾಂಬೆ ಸಂಸ್ಥಾನಗಳಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು. ಮೈಸೂರು‌ ಸಂಸ್ಥಾನದ ಕಾಲೇಜು, ಹೈಸ್ಕೂಲುಗಳಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು.

ಹೀಗೆ ಆರಂಭವಾದ ಕನ್ನಡ‌ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯೇ ಇಂಗ್ಲೀಷಿನಲ್ಲಿತ್ತು. ಇದರ ಬಗ್ಗೆ 'ಮೈಸೂರು ಸ್ಟಾರ್' ಎನ್ನುವ ದಿನಪತ್ರಿಕೆಯ ವಾಚಕರ ಪತ್ರ ವಿಭಾಗದಲ್ಲಿ ಓದುಗರೊಬ್ಬರು ಟೀಕಿಸಿ ಬರೆದ ಪತ್ರದದ ಸಾಲುಗಳು ಹೀಗಿದ್ದವು- "ಬೆಂಗಳೂರಿನಲ್ಲಿ ಸೇರಿರುವ ಕನ್ನಡಿಗರ ಸಮ್ಮೇಳನಕ್ಕೆ ಸಂಬಂಧಪಟ್ಟ ಆಹ್ವಾನ ಪತ್ರಿಕೆ ಮೊದಲಾದವುಗಳು ಇಂಗ್ಲಿಷಿನಲ್ಲಿ ಅಚ್ಚು ಮಾಡಿಸಿ ಕಳುಹಿಸಲ್ಟಿವೆ. ಸಮ್ಮೇಳನ ಕೂಡಿಸುವವರು ಕನ್ನಡಿಗರು, ಅಲ್ಲಿ ಸೇರುವವರು ಕನ್ನಡಿಗರು, ಅಲ್ಲಿ ಪಡೆದ ಲಾಭವು ಕನ್ನಡದ ಏಳ್ಗೆಯಾಗಿರುವಾಗ ಇಂಗ್ಲಿಷಿನ ಮಧ್ಯಸ್ಥಿಕೆ ಯಾತಕ್ಕೆ? ಇದು ಕಬಳದಲ್ಲೇ ಮಕ್ಷಿಕಾಪಾತವಾದಂತಲ್ಲವೇ? ಇದು ಸ್ವಭಾಷಾಭಿಮಾನದ ಲಕ್ಷಣವೇ?" ಹೀಗೆ ಪತ್ರ ದೀರ್ಘವಾಗಿದೆ. ಇದರ ಜೊತೆಗೆ ಮತ್ತೊಂದು ವಿಚಿತ್ರವೂ ಸಮ್ಮೇಳನದಲ್ಲಿ ನಡೆಯಿತು.

ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಹೆಚ್. ವಿ. ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಇಂಗ್ಲಿಷ್‌ನಲ್ಲಿ ಮಂಡಿಸಿದರು. ಇದಕ್ಕೆ‌ ಅಲ್ಲೇ ಮುಂದೆ ಕೂತಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು "Nonsense ಶುದ್ಧ Nonsense " ಎಂದು ಟೀಕಿಸಿದ್ದು, ಇದನ್ನು ಕೇಳಿಸಿಕೊಂಡ ನಂಜುಂಡಯ್ಯ Nonsenseಗೆ ಕನ್ನಡದಲ್ಲಿ ಮಾತಿಲ್ಲವೋ ಎಂದದ್ದು, ಅದಕ್ಕೆ ಬೆಳ್ಳಾವೆ ವೆಂಕಟನಾರಣಪ್ಪನವರು ನಕ್ಕಿದ್ದು, ನಂತರ ನಂಜುಂಡಯ್ಯ ಡಿವಿಜಿಯವರ ಕಡೆ ತಿರುಗಿ ತಮ್ಮ ಅಧ್ಯಕ್ಷ ಭಾಷಣದ ಇಂಗ್ಲಿಷ್‌ ಕಾರಣವನ್ನು "ನಾವು ಈಗ ಮಾಡುತ್ತಿರುವ ಪ್ರಯತ್ನ ಕನ್ನಡ ತಿಳಿಯದ ಜನರಿಗೂ ತಿಳಿಯಬೇಕಾದದ್ದು. ನಮ್ಮ‌ ಪರಿಷತ್ತಿಗೆ ಹಣ ಕೊಡಬೇಕಾದ ಸರಕಾರಕ್ಕೂ ತಿಳಿಯಬೇಕು; ಸರಕಾರದ ಮೇಲೆ ಉಸ್ತುವಾರಿ ನಡೆಸುವ ಬ್ರಿಟಿಷ್ ರೆಸಿಡೆಂಟರಿಗೂ ತಿಳಿಯಬೇಕು. ಅವರಿಗೆಲ್ಲ ತಿಳಿದರೆ ನಮಗೇನೂ ನಷ್ಟವಾಗದು; ಕೊಂಚ ಪ್ರಯೋಜನವೂ ಇರಬಹುದು ಅಲ್ಲವೇ?" ಎಂದು ಸಮರ್ಥಿಸಿಕೊಂಡರಂತೆ. ಈ‌ ಸನ್ನಿವೇಶವನ್ನು ಡಿವಿಜಿಯವರು ತಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ಸ್ವಾರಸ್ಯಕರವಾಗಿ ದಾಖಲಿಸುತ್ತಾರೆ ಕೂಡ.

ಇಂತಹ ಇಂಗ್ಲೀಷ್ ಮೋಹದ- ಪಾಶದ ಚರ್ಚೆಗಳ ನಡುವೆಯೂ ಬೆಂಗಳೂರಿನಲ್ಲಿ‌ ಅಂದು ಪ್ರಥಮ ಸಾಹಿತ್ಯ ಸಮ್ಮೇಳನದ ಮೂಲಕವೇ ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭದ ಉದ್ಘಾಟನೆಯೂ ಆಯಿತು. 1915ರಲ್ಲಿ ಆರಂಭವಾಗಿ ಮೊದಲಿಗೆ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂದು ಕರೆಸಿಕೊಂಡು ಅನೇಕ ಚರ್ಚಾಸ್ಪದ ಕಾರಣಗಳಿಗೆ ಮುಂದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿತು. (ಆಲೂರು ವೆಂಕಟರಾಯರಂತಹವರು ಇಂತಹ ಈ ಕಾರಣಗಳಿಗೆ ಪರಿಷತ್ ಚಟುವಟಿಕೆಗಳಿಂದ ಸಂಪೂರ್ಣ ದೂರವೆ ಉಳಿದರು)‌ ಕನ್ನಡ‌ ಸಾಹಿತ್ಯ ಪರಿಷತ್ತು, ಪ್ರಭುತ್ವಗಳ ಆರ್ಥಿಕ ಸಹಾಯದ ಮೇಲೆಯೇ ನಿಂತು ಸಾಂಸ್ಥಿಕಗೊಂಡ ಕಾರಣಕ್ಕೆ ಅನೇಕ ಮಿತಿಗಳ ನಡುವೆಯೂ ಕನ್ನಡ ಸಾಹಿತ್ಯ- ಸಂಸ್ಕೃತಿಗಳನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ.

ಆದ್ದರಿಂದ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ಸವಾಲುಗಳ ನಡುವೆಯೂ103 ವರ್ಷಗಳಿಂದಲೂ ದೀರ್ಘವಾಗಿ ಕನ್ನಡ‌ ಸಂಸ್ಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತಲೇ ಬಂದಿರುವ ಪರಿಷತ್ತಿನ ಆರಂಭವನ್ನು ನೆನಪಿಸಿಕೊಳ್ಳುವುದು‌ ಇವತ್ತಿನ ಅಗತ್ಯವೆನಿಸಿದೆ.