ಗಣಪತಿ ಆತ್ಮಹತ್ಯೆ ಪ್ರಕರಣ: ಬೂದಿ ಮುಚ್ಚಿದ ಕೆಂಡ ಕೆದಕುತ್ತಾ ಸಿಬಿಐ ತನಿಖೆ?
ಸುದ್ದಿ ಸಾಗರ

ಗಣಪತಿ ಆತ್ಮಹತ್ಯೆ ಪ್ರಕರಣ: ಬೂದಿ ಮುಚ್ಚಿದ ಕೆಂಡ ಕೆದಕುತ್ತಾ ಸಿಬಿಐ ತನಿಖೆ?

ಪೊಲೀಸ್ ಅಧಿಕಾರಿ,

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಬೂದಿ ಮುಚ್ಚಿದ ಕೆಂಡದಂತೆ ನಿಧಾನವಾಗಿ ಹೊಗೆಯಾಡಲು ಆರಂಭಿಸಿದೆ.

ಮಂಗಳವಾರ ಗಣಪತಿ ಅಸಹಜವಾಗಿ ಸಾವು ಕಂಡ ಮಡಿಕೇರಿಯ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ರಲ್ಲಿ ಗುಂಡಿನ ಚೂರೊಂದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರಕರಣ ನಡೆದು ಒಂದೂವರೆ ವರ್ಷಗಳ ನಂತರ ಲಾಡ್ಜ್‌ ಕೋಣೆಯಲ್ಲಿ ಗುಂಡಿನ ಚೂರು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ, ರಾಜ್ಯ ಸರಕಾರದ ನೇತೃತ್ವದಲ್ಲಿ ನಡೆದ ಸಿಐಡಿ ತನಿಖೆಯ ವಸ್ತುನಿಷ್ಟತೆಯನ್ನು ಇದು ಪ್ರಶ್ನಿಸುವಂತೆ ಮಾಡಿದೆ.

ಇದೇ ಜುಲೈ ತಿಂಗಳ ಮೊದಲ ವಾರದಲ್ಲಿ ಎಂ. ಕೆ. ಗಣಪತಿ ಅವರ ಅಸಹಜ ಸಾವಿನ ಪ್ರಕರಣವನ್ನು ಸುಪ್ರಿಂ ಕೋರ್ಟ್‌ ಸಿಬಿಐಗೆ ಒಪ್ಪಿಸಿತ್ತು. ತನಿಖೆ ಆರಂಭಿಸಿದ ಸಿಬಿಐ ತಂಡ ಮಡಿಕೇರಿಗೆ ಭೇಟಿ ನೀಡುತ್ತಿದೆ. ಪ್ರಕರಣದ ಜತೆ ನಾನಾ ಕಾರಣಗಳಿಗಾಗಿ ತಳಕು ಹಾಕಿಕೊಂಡವರನ್ನು ವಿಚಾರಣೆ ನಡೆಸುತ್ತಿದೆ. ಸ್ಥಳೀಯ ಪೊಲೀಸರು, ಗಣಪತಿ ಕುಟುಂಬ ಸದಸ್ಯರ ಜತೆ ಮಂಗವಾರ ಲಾಡ್ಜ್‌ ಕೋಣೆಯ ಪರಿಶೀಲನೆ ವೇಳೆ ಸಿಬಿಐನ ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳಿಗೆ ಗುಂಡಿನ ಚೂರೊಂದು ಪತ್ತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

ಪ್ರಕರಣದ ಹಾದಿ:

ಡಿವೈಎಸ್ಪಿ ಎಂ. ಕೆ. ಗಣಪತಿ ಹುಟ್ಟೂರು ಮಡಿಕೇರಿ ಬಳಿಯ ಸಿದ್ಧಾಪುರದ ಮಂಜರಾಯನಪಟ್ಟಣ. ಸಿದ್ದಾಪುರದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ, 1991ರಲ್ಲಿ ಕರ್ನಾಟಕ ಪೊಲೀಸ್ ಸೇವೆಯನ್ನು ಸೇರಿದ್ದರು. ರಾಜ್ಯದ ನಾನಾ ಕಡೆಗಳಲ್ಲಿ ಕೆಲಸ ಮಾಡಿದ ಅವರ ಕೊನೆಯ ಪೋಸ್ಟಿಂಗ್‌ ಇದ್ದದ್ದು ಮಂಗಳೂರಿನ ಐಜಿಪಿ ಕಚೇರಿಯಲ್ಲಿ. ಪತ್ನಿ ಹಾಗೂ ಪುತ್ರ ಸೋಮವಾರಪೇಟೆಯ ರಂಗಸಮುದ್ರದಲ್ಲಿ ವಾಸವಾಗಿದ್ದರು.

ಕಳೆದ ವರ್ಷ ಜು. 7 ರಂದು ಬೆಳಗ್ಗೆಯೇ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಗಣಪತಿ ರೂಮು ಪಡೆದುಕೊಂಡಿದ್ದರು. ನಂತರ ಸುಮಾರು 10. 30ರ ಸುಮಾರಿಗೆ ಲಾಡ್ಜ್ ನಿಂದ ಹೊರಬಂದ ಅವರು ಆಟೋ ಚಾಲಕನಿಗೆ 'ಯಾವುದಾದರೂ ಒಳ್ಳೆಯ ಟಿವಿ ಚಾನಲ್ ಕಚೇರಿಗೆ ಕರೆದುಕೊಂಡು ಹೋಗು' ಎಂದು ತಿಳಿಸಿದ್ದರು. “ಆಗ ಆಟೋ ಚಾಲಕನಿಗೆ ನಮ್ಮ ಚಾನಲ್ ನೆನಪಾಗುತ್ತದೆ. ಯಾಕೆ ಎಂದರೆ ಕೊಡಗಿನಲ್ಲಿ ನಾವು ಫೇಮಸ್ ಇದೀವಿ. ಹೆಚ್ಚು ಜನ ನಮ್ಮ ವಾಹಿನಿ ನೋಡುತ್ತಾರೆ,” ಎಂದು ಗಣಪತಿಯವರ ಸಂದರ್ಶನವನ್ನು ಕೊನೆಯ ಬಾರಿಗೆ ರೆಕಾರ್ಡ್ ಮಾಡಿರುವ ‘ಟಿವಿ ವನ್’ ವಾಹಿನಿಯ ಸಿಇಓ ಪ್ರಸಾದ್ 'ಸಮಾಚಾರ'ಕ್ಕೆ ಆ ಸಮಯದಲ್ಲಿ ತಿಳಿಸಿದ್ದರು.

ಸಾವಿಗೂ ಮುನ್ನ 'ಟಿವಿ ವನ್' ಸ್ಟುಡಿಯೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಗಣಪತಿ ಸಚಿವ ಕೆ. ಜೆ. ಜಾರ್ಜ್‌, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ನಂತರ ಲಾಡ್ಜ್‌ನಲ್ಲಿ ಪೊಲೀಸ್ ಯೂನಿಫಾಂನಲ್ಲಿಯೇ ನೇತಾಡುತ್ತಿದ್ದ ಅವರ ದೇಹ ಪತ್ತೆಯಾಗಿತ್ತು.

ಗಣಪತಿ ಸಾವಿ ಸುದ್ದಿ ಹೊರಬೀಳುತ್ತಿದ್ದಂತೆ ಮಡಿಕೇರಿಯಲ್ಲಿ ಜನರ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷ ಬಿಜೆಪಿ ಮಡಿಕೇರಿ ಬಂದ್‌ಗೆ ಕರೆ ನೀಡಿತು. ಗಣಪತಿ ಕುಟುಂಬದವರು ಕೂಡ ಗಣಪತಿ ಆತ್ಮಹತ್ಯೆಯ ಸುತ್ತ ಸಂಶಯಗಳಿವೆ ಎಂದು ತಿಳಿಸಿದ್ದರು. ರಾಜ್ಯ ಸರಕಾರ ಕೆ. ಜೆ. ಜಾರ್ಜ್‌ ಹಾಗೂ ಆರೋಪಿ ಅಧಿಕಾರಿಗಳ ತಲೆದಂಡವನ್ನು ಪಡೆದುಕೊಂಡಿತ್ತು. ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆಸಿದ ಸಿಐಡಿ, ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎಂದು ವರದಿ ನೀಡಿತ್ತು. ಜತೆಗೆ, ಆರೋಪಿ ಸ್ಥಾನದಲ್ಲಿ ನಿಂತ ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಜಾರ್ಜ್‌ ಮತ್ತೆ ಸಂಪುಟಕ್ಕೆ ಮರಳಿದ್ದರು.

ಸಿಬಿಐ ತನಿಖೆಗೆ ಆಗ್ರಹ:

ಗಣಪತಿ ಆತ್ಮಹತ್ಯೆ ಪ್ರಕರಣಕ್ಕೂ ಮುನ್ನ ಐಎಎಸ್ ಅಧಿಕಾರಿ ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯದ ಜನ ಸಾಕ್ಷಿಯಾಗಿದ್ದರು. ನಂತರದ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ಡಿವೈಎಸ್‌ಪಿ ಆಗಿದ್ದ ಕಲ್ಲಪ್ಪ ಹಂಡಿಭಾಗ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬಿಸಿ ಇರುವಾಗಲೇ ಗಣಪತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದು ಸಹಜವಾಗಿಯೇ ಆಕ್ರೋಶಗಳಿಗೆ, ಅನುಮಾನಗಳಿಗೆ ಕಾರಣವಾಗಿತ್ತು.

ಆರಂಭದ ದಿನಗಳಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಗಳು ಕೇಳಿ ಬರಲು ಶುರುವಾಗಿತ್ತು. ಕೊನೆಗೆ ಸಿಐಟಿಯ ತನಿಖೆಯ ವಸ್ತುನಿಷ್ಟತೆಯನ್ನು ಪ್ರಶ್ನಿಸಿ ಗಣಪತಿ ಕುಟುಂಬ ಸುಪ್ರಿಂ ಕೋರ್ಟ್‌ ಮೊರೆ ಹೋಯಿತು. ಸರ್ವೋಚ್ಛ ನ್ಯಾಯಾಲಯ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಿತ್ತು. ಈ ಸಮಯದಲ್ಲಿ ಮತ್ತೆ ಕೆ. ಜೆ. ಜಾರ್ಜ್‌ ರಾಜೀನಾಮೆಗೆ ಆಗ್ರಹಗಳು ಕೇಳಿಬಂದರೂ, ಕಾಂಗ್ರೆಸ್ ಹಾಗೂ ಸರಕಾರ ಅವರ ಬೆನ್ನಿಗೆ ನಿಂತಿತು. ಆರೋಪಿ ಸ್ಥಾನದಲ್ಲಿರುವ ಬಿಜೆಪಿ ನಾಯಕರಿಗೆ ಹೋಲಿಕೆ ಮಾಡಿ, ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂಬ ಲಾಜಿಕ್ ಮುಂದಿಟ್ಟಿತು.

ಇವುಗಳ ನಡುವೆಯೇ ಸಿಬಿಐ ತನಿಖೆ ಮುಂದುರಿದಿದೆ. ಮಡಿಕೇರಿಯಲ್ಲಿ ಗಣಪತಿ ಉಳಿದುಕೊಂಡ ಲಾಡ್ಜ್‌, ಅವರನ್ನು ಟಿವಿ ವನ್ ಕಚೇರಿಗೆ ಕರೆದುಕೊಂಡು ಹೋದ ಆಟೋ ಚಾಲಕ, ಸ್ಥಳೀಯ ಕೇಬಲ್ ಚಾನಲ್‌ ಮುಖ್ಯಸ್ಥರು ಹೀಗೆ ಪ್ರಕರಣಕ್ಕೆ ಸಂಬಂಧ ಪಟ್ಟವರನ್ನು ವಿಚಾರಣೆ ನಡೆಸುತ್ತಿದೆ. ಜತೆಗೆ, ಲಾಡ್ಜ್‌ ರೂಮಿನಲ್ಲಿ ಬುಲೆಟ್‌ ಚೂರೊಂದು ಸಿಕ್ಕಿರುವುದು ಪ್ರಕರಣ ಮುಂದಿನ ದಿನಗಳಲ್ಲಿ ಸದ್ದು ಮಾಡುವ ಮುನ್ಸೂಚನೆ ನೀಡಿದೆ.

ರಾಜಕೀಯದ ಮೇಲಾಟ: 

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರ. ಸಿಬಿಐ ಕೇಂದ್ರ ಸರಕಾರದ ಅಧೀನಕ್ಕೆ ಬರುತ್ತದೆ. ಸಾಮಾನ್ಯವಾಗಿ ಯಾರು ಕೇಂದ್ರದಲ್ಲಿ ಅಧಿಕಾರದಲ್ಲಿರುತ್ತಾರೋ, ಅವರ ಕೈಗೊಂಬೆಯಾಗಿ ತನಿಖಾ ಸಂಸ್ಥೆ ನಡೆದುಕೊಳ್ಳುತ್ತದೆ ಎಂಬ ಆರೋಪಗಳಿವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಕ್ಷಕ್ಕೆ ಹತ್ತಿರದಲ್ಲಿರುವವರಿಗೆ ಸಿಬಿಐ ಕ್ಲೀನ್ ಚಿಟ್ ನೀಡುವ ಮೂಲಕ ಇನ್ನಷ್ಟು ಕಳಂಕವನ್ನು ಹೊತ್ತುಕೊಂಡಿದೆ.

ಇದೇ ಸಮಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ನಡೆದ ಪೊಲೀಸ್ ಅಧಿಕಾರಿಯೊಬ್ಬರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಇಲ್ಲಿಯೂ ಕೂಡ, ಸಾವು, ತನಿಖೆ, ನ್ಯಾಯ ಎಂಬ ಅಂಶಗಳಿಗಿಂತ ರಾಜಕೀಯದ ಮೇಲಾಟವೇ ಹೆಚ್ಚಾಗುವ ಸಾಧ್ಯತೆಯೂ ಇದೆ. ಅದರಲ್ಲೂ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ ರಾಜ್ಯದಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡರೆ ಅಚ್ಚರಿ ಏನಿಲ್ಲ.

ಇವುಗಳ ಆಚೆಗೆ, ಮೃತ ಗಣಪತಿ ಪತ್ನಿ ಪಾವನ ತಮ್ಮ ಗಂಡನ ಸಾವಿಗೆ ನ್ಯಾಯದ ಮೊರೆ ಇಡುತ್ತಿದ್ದಾರೆ. ಅದು ರಾಜಕೀಯದ ಕೂಗಾಟದಲ್ಲಿ ಕೇಳಿಸದೇ ಹೋಗಬಾರದು, ಅಷ್ಟೆ.