samachara
www.samachara.com
ಬಾಪೂ ನಾಡಿನ 'ಹನಿಟ್ರ್ಯಾಪ್‌ ಸರಣಿ': ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು 'ಡರ್ಟಿ ಪಾಲಿಟಿಕ್ಸ್'
ಸುದ್ದಿ ಸಾಗರ

ಬಾಪೂ ನಾಡಿನ 'ಹನಿಟ್ರ್ಯಾಪ್‌ ಸರಣಿ': ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು 'ಡರ್ಟಿ ಪಾಲಿಟಿಕ್ಸ್'

ನಿರೀಕ್ಷೆಯಂತೆಯೇ ಗುಜರಾತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ 'ಸೀಡಿಯ' ಮೊರೆ ಹೋಗಿದೆ; ಹಾರ್ದಿಕ್ ಪಟೇಲ್ ಹೋಲುವ ಖಾಸಗಿ ದೃಶ್ಯಗಳು ಹರಿದಾಡುತ್ತಿವೆ.

ಇಲ್ಲಿ ಪಾಟೀದಾರ್ ಸಮುದಾಯದ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ನಾಯಕ, 24 ವರ್ಷದ ಹಾರ್ದಿಕ್ ಪಟೇಲ್ ಹೋಲುವ 'ಸೆಕ್ಸ್‌ ಸಿಡಿ'ಯೊಂದು ಹೊರಬಿದ್ದಿದೆ. ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ, ನಂತರ ಗುಜರಾತ್‌ನ ಸುದ್ದಿ ವಾಹಿನಿಗಳಲ್ಲಿ ಕಳೆದ 24 ಗಂಟೆಯಿಂದ ಈ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದರ ಹಿಂದೆ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಇದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತಿವೆ.

ಸೀಡಿಯಲ್ಲೇನಿದೆ?: 

ಮೇ, 16, 2017ರ ಸಂಜೆ 9. 23ರ ಸುಮಾರಿಗೆ ಚಿತ್ರೀಕರಣಗೊಂಡಿರುವ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತಿದೆ. ಇದರಲ್ಲಿ ಹಾರ್ದಿಕ್ ಪಟೇಲ್‌ ಹೋಲುವ ಯುವಕನೊಬ್ಬ ಹೋಟೆಲ್‌ ಕೋಣೆಯ ದೀಪಗಳನ್ನು ಆರಿಸುತ್ತಾನೆ. ನಂತರ ಯುವತಿಯೊಬ್ಬಳ ಜತೆ ಆಪ್ತ ಭಂಗಿಯಲ್ಲಿರುವ ಕತ್ತಲೆಯ ದೃಶ್ಯಗಳ 20 ನಿಮಿಷಗಳ ಫೂಟೇಜ್ ಅದು.

ಗುಜರಾತ್‌ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮತದಾನಕ್ಕೆ ದಿನಗಳು ಹತ್ತಿರ ಹತ್ತಿರಾಗುತ್ತಿವೆ. ಆಡಳಿತರೂಢ ಬಿಜೆಪಿಗೆ ಬಾಪೂ ನಾಡಿನ ಮೇಲಿರುವ ಜನಾಧಿಕಾರವನ್ನು ಉಳಿಸಿಕೊಳ್ಳಲೇಬೇಕಿದೆ. 22 ವರ್ಷಗಳ ರಾಜ್ಯಾಡಳಿತದ ಜೈತ್ರೆಯಾತ್ರೆ ಮುಂದುವರಿಸಲು ಹಾಗೂ ಗುಜರಾತ್ ಮೂಲದ ನಾಯಕ, ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಷ್ಟ್ರಮಟ್ಟದಲ್ಲಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಚುನಾವಣಾ ಫಲಿತಾಂಶ ಸಹಾಯ ಮಾಡುತ್ತದೆ. ಈ ಎರಡು ಪ್ರಮುಖ ಕಾರಣಗಳಿಗಾಗಿ ಬಿಜೆಪಿ ಚುನಾವಣಾ ರಣತಂತ್ರಗಳನ್ನು ರಚಿಸಿಕೊಂಡು ಕುಳಿತಿದೆ. ಆದರೆ, ಈ ಬಾರಿ ಅದೇ ಹಳೆಯ ತಂತ್ರಗಳು ಕೇಸರಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.

ಪಾಟೀದಾರ್‌ ಆಂದೋಲನವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆಗೂ ಮಾತುಕತೆ ನಡೆಸಿದ್ದರು. ಇದೀಗ ಹಾರ್ದಿಕ್ ಪಟೇಲ್ ಹೋಲುವ ವ್ಯಕ್ತಿಯೊಬ್ಬರ ವಿಡಿಯೋ ಹಂಚುವ ಮೂಲಕ ಡರ್ಟಿ ಪಾಲಿಟಿಕ್ಸ್ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು, ಸಾಮಾಜಿಕ ಜಾಲತಾಣ ಬಳಸುವವರು, ಬಹುತೇಕ ಮಾಧ್ಯಮಗಳು ಬಿಜೆಪಿಯನ್ನು ಟೀಕಿಸಿವೆ. ಇದು ಗುಜರಾತ್‌ನಲ್ಲಿ ನಡೆಯುವ ಹನಿಟ್ರ್ಯಾಪ್‌ ರಾಜಕೀಯದ ಮುಂದುವರಿದ ಭಾಗ ಎಂದು ಹಿರಿಯ ರಾಜಕೀಯ ವರದಿಗಾರರು ನೆನಪು ಮಾಡಿಕೊಳ್ಳುತ್ತಾರೆ.

"ಇದು (ಹನಿ ಟ್ರ್ಯಾಪ್) ಗುಜರಾತ್‌ನ 'ಡರ್ಟಿ ಪಾಲಿಟಿಕ್ಸ್‌'ನ ಮುಂದುವರಿದ ಭಾಗ. ನಮಗೆ ಇದು ಹೊಸತೇನೂ ಅಲ್ಲ. ಹಿಂದೆ ಬೆಂಗಳೂರಿನ ಯುವತಿಯೊಬ್ಬಳ ಸುತ್ತ ಗೂಢಾಚರ್ಯೆ ನಡೆಸಲಾಗಿತ್ತು. ಬಿಜೆಪಿ ನಾಯಕರನ್ನು ತುಳಿಯಲು ಬಿಜೆಪಿ ಕಡೆಯಿಂದಲೇ ಸೆಕ್ಸ್‌ ಸಿಡಿಗಳು ಹೊರಬಿದ್ದಿದ್ದವು. ಇದೀಗ ಹಾರ್ದಿಕ್ ಪಟೇಲ್‌ ದೃಶ್ಯಾವಳಿಗಳು. 24 ವರ್ಷದ, ಇನ್ನೂ ಮದುವೆಯಾಗದ ಯುವಕ ಲೈಂಗಿಕ ಸಂಪರ್ಕ ಹೊಂದಿದ್ದರೆ ತಪ್ಪೇನಿದೆ? ಅದು ಆತನ ತಲೆಮಾರಿನ ಯುವಕರು ಸಾಮಾನ್ಯ ಎಂದು ನಂಬಿರುವ ವಿಚಾರ,'' ಎನ್ನುತ್ತಾರೆ ಹಿರಿಯ ಪತ್ರಕರ್ತ ಆಶಿಶ್ ಅಮೀನ್.

ಸಿಡಿಗೆ ಪ್ರತಿಕ್ರಿಯೆ:

ಗುಜರಾತ್‌ ಮಾಧ್ಯಮಗಳಿಗೆ ಹಾರ್ದಿಕ್ ಪಟೇಲ್‌ ನೀಡಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ, 'ಹನಿಟ್ರ್ಯಾಪ್' ವಿಚಾರ ಮೊದಲೇ ಗೊತ್ತಿರುವ ಹಾಗಿದೆ. ಈ ಬಾರಿ ಹನಿಟ್ರ್ಯಾಪ್‌ ಆದ ವ್ಯಕ್ತಿಯ ಬಗೆಗಿಂತ ಲೈಂಗಿಕ ಸ್ವಾತಂತ್ರ್ಯದ ಮಾತುಗಳು ಕೇಳಿಬರುತ್ತಿವೆ. ಗುಜರಾತ್‌ ದಲಿತ ಹೋರಾಟದ ಹೊಸ ತಲೆಮಾರಿನ ನಾಯಕ ಜಿಗ್ನೇಶ್ ಮೇವಾನಿ, "ಹಾರ್ದಿಕ್ ಪಟೇಲ್ ತಪ್ಪೇನೂ ಮಾಡಿಲ್ಲ. ಸೆಕ್ಸ್‌ ಎಂಬುದು ಮೂಲಭೂತ ಹಕ್ಕು,'' ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಟೇಲ್ ನೈತಿಕತೆಯನ್ನು ಪ್ರಶ್ನಿಸುವ, ಸಾರ್ವಜನಿಕವಾಗಿ ಒಪ್ಪಿಕೊಳ್ಳುವಂತೆ ಸವಾಲು ಎಸೆಯುವ ಹಾಗೂ ಬೆಂಬಲಿಸುವ ವಾದಗಳು ಹುಟ್ಟಿಕೊಂಡಿವೆ. ಅಂತಿಮವಾಗಿ ಗುಜರಾತ್ ಚುನಾವಣೆಗೆ ಮತದಾನ ನಡೆಯುವ ದಿನದವರೆಗೂ ಬಾಪೂ ನಾಡಿನ ರಾಜಕಾರಣ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಹೋಗುತ್ತದೆ.

ಕಳೆದ ದಸರಾ ಸಮಯದಲ್ಲಿ ಅಲ್ಲಿನ ಪರಿಸ್ಥಿತಿ ಹೀಗಿರಲಿಲ್ಲ. ಬಿಜೆಪಿ ಗುಜರಾತ್‌ ವಿಧಾನಸಭೆಯಲ್ಲಿ ಅನಾಯಾಸವಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿತ್ತು. ಆ ಕಾರಣಕ್ಕಾಗಿಯೇ ಕಳೆದ ವರ್ಷ ಚುನಾವಣಾ ಪ್ರಚಾರವನ್ನು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕವೇ ಆರಂಭಿಸಿತ್ತು. ಆದರೆ, 22 ವರ್ಷಗಳ ರಾಜಕಾರಣ ಈ ಬಾರಿ ಚುನಾವಣೆಗೆ ಇನ್ನೇನು 6 ತಿಂಗಳಿಗೆ ಎನ್ನುವಾಗ ಮಗ್ಗಲು ಬದಲಿಸಿ ಬಿಟ್ಟಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಲ್ಕು ದಿಕ್ಕಿನ ಹೈವೇಗಳಲ್ಲಿ ನಡೆಸಿದ ಯಾತ್ರೆ ನಿರೀಕ್ಷೆಗೂ ಮೀರಿ ಸ್ಪಂದನೆ ಪಡೆದುಕೊಂಡಿದೆ. ಶೇ. 12ರಷ್ಟಿರುವ ಪಾಟೀದಾರರು, ಶೇ. 50ಕ್ಕಿಂತಲೂ ಹೆಚ್ಚಿರುವ ಹಿಂದುಳಿದ ವರ್ಗಗಳ ಮತಗಳಲ್ಲಿ ಒಂದಷ್ಟು ಪಾಲು ಕಾಂಗ್ರೆಸ್ ಪಾಲಾಗುವ ಸಾಧ್ಯತೆಗಳಿವೆ. ಈವರೆಗೂ ಧಾರ್ಮಿಕ ನೆಲೆಯ ಹಾಗೂ ಅಭಿವೃದ್ಧಿ ಭಾಷಣಗಳ ಮೇಲೆ ನಡೆಸಿಕೊಂಡ ಚುನಾವಣೆಗಳಲ್ಲಿ ಈ ಬಾರಿ ಜಾತಿ ಸದ್ದು ಮಾಡುತ್ತಿರುವುದನ್ನು ಬಿಜೆಪಿ ಕೊಂಚ ನಿಧಾನವಾಗಿ ಅರ್ಥ ಮಾಡಿಕೊಂಡಿದೆ. ಕೊನೆಯ ಕ್ಷಣಗಳಲ್ಲಿ ಪಾಟೀದಾರ್ ಹೋರಾಟದ ಮುಂದಾಳುಗಳನ್ನು ಖರೀದಿಸುವ ಕೆಲಸ ಮಾಡಿತಾದರೂ, ಅದು ತಿರುಗುಬಾಣವಾಯಿತು. ಅಮಿತ್ ಶಾ ನಡೆಸಿದ ಯಾತ್ರೆಗಳಿಗೆ ಅಂದುಕೊಂಡಷ್ಟು ಜನ ಸೇರಲಿಲ್ಲ. ಈಗ ಹಾರ್ದಿಕ್ ಪಟೇಲ್ (ಇನ್ನೂ ಖಚಿತವಾಗಿಲ್ಲ) 'ಖಾಸಗಿ ಬದುಕಿನ' ದೃಶ್ಯಾವಳಿಗಳೂ ಕೂಡ ಬಿಜೆಪಿಗೆ ವರವಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಬದಲಿಗೆ, ಚುನಾವಣೆಯ ಅಖಾಡದಲ್ಲಿ ಪಾಟೀದಾರ ಆಂದೋಲನಕ್ಕೆ ಇನ್ನಷ್ಟು ಬಲ ಸಿಗಲಿದೆ.

ಕೋಟೆ ಉಳಿಸಿಕೊಳ್ಳಲು: 

ಇಷ್ಟರ ನಡುವೆಯೂ ಬಿಜೆಪಿ ಕಳೆದ 22 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ತನ್ನ ಪ್ರಜಾಪ್ರಭುತ್ವದ ಕೋಟೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪೂರಕ ಅಂಶಗಳಿವೆ. "ಬಿಜೆಪಿ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿಕೊಂಡಿದೆ. ಬೂತ್‌ ಮಟ್ಟದಲ್ಲಿ ಶಕ್ತಿ ಕೇಂದ್ರಗಳನ್ನು ನಿರ್ಮಿಸಿಕೊಂಡಿದೆ. ಸದ್ಯದ ವಾತಾವರಣ ಬಿಜೆಪಿಗೆ ವಿರುದ್ಧವಾಗಿದ್ದರೂ, ಅದನ್ನು ತಮ್ಮ ಪರವಾಗಿ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ಬಳಿ ಸಂಘಟನೆ ಇಲ್ಲ,'' ಎನ್ನುತ್ತಾರೆ ಆಶಿಶ್ ಅಮಿನ್.

ಅಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾತ್ರೆ, ಬಿಜೆಪಿ ಇತರೆ ಹಿರಿಯ ನಾಯಕರ ಪ್ರಚಾರಕ್ಕೆ ಕಳೆ ಇಲ್ಲದಿದ್ದರೂ, ಮೇ ತಿಂಗಳ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಮ್ಯಾಚ್‌ ಕೊನೆಯ ಓವರ್‌ನಲ್ಲಿ ನಡೆಯುವ ಮ್ಯಾಜಿಕ್‌ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಪ್ರತಿಪಕ್ಷ ಕಾಂಗ್ರೆಸ್ ಅದನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಉಳಿದಂತೆ ಜಾತಿ ಸಮುದಾಯಗಳ ಮೂವರು ಯುವ ನಾಯಕರು, ರಾಹುಲ್‌ ಗಾಂಧಿ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಕಾಂಗ್ರೆಸ್ ಜನಪ್ರಿಯತೆ, ಬಿಜೆಪಿ ನೀಡುತ್ತಿರುವ ತಿರುಗೇಟುಗಳು, ರಾ‍ಷ್ಟ್ರ ರಾಜಕಾರಣದ ಪರಿಣಾಮಗಳು, ಬಾಪೂನಾಡಿನ ಚುನಾವಣೆಯ ರಂಗು ಏರುತ್ತಿದೆ.

ಈ ಬಾರಿ ಚುನಾವಣೆಯಲ್ಲಿ ಯಾರೇ ಗೆದ್ದರೂ ಗುಜರಾತ್‌ ಮೊದಲಿನ ಗುಜರಾತ್‌ ಆಗಿ ಉಳಿಯುವುದು ಕಷ್ಟವಿದೆ. 22 ವರ್ಷಗಳಲ್ಲಿ ಕಟ್ಟಿಕೊಂಡ ಅಭಿವೃದ್ಧಿ ಮಾನದಂಡ, ಧಾರ್ಮಿಕ ಭಾವ ಹೊಸ ಆಯಾಮಗಳನ್ನು ಪಡೆದುಕೊಳ್ಳಲಿವೆ. ನಿರುದ್ಯೋಗ, ಬಡತನ, ಸಾಮಾಜಿಕ ಸಮಸ್ಯೆ, ಜಾತಿ ತಾರತಮ್ಯ ಮತ್ತಿತರ ವಿಚಾರಗಳೂ ಮುನ್ನಲೆಗೆ ಬರಲಿವೆ. ಅವುಗಳನ್ನು ಅಧಿಕಾರಕ್ಕೇರುವ ಒಂದು ಪಕ್ಷ ಈಡೇರುಸುವ ಹೊಣೆಗಾರಿಕೆಯನ್ನು ತುಸು ಹೆಚ್ಚೇ ಹೊರಬೇಕಿದೆ.