samachara
www.samachara.com
ಮುರಿದ ಮನಸ್ಸುಗಳ 'ಪರಿವರ್ತನಾ ರ‍್ಯಾಲಿ': ಬಿಎಸ್‌ವೈ ನಾಯಕತ್ವ ಬದಲಾವಣೆಗೆ ಮುನ್ನುಡಿ?
ಸುದ್ದಿ ಸಾಗರ

ಮುರಿದ ಮನಸ್ಸುಗಳ 'ಪರಿವರ್ತನಾ ರ‍್ಯಾಲಿ': ಬಿಎಸ್‌ವೈ ನಾಯಕತ್ವ ಬದಲಾವಣೆಗೆ ಮುನ್ನುಡಿ?

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ಅನುಭವಿಸಿದ್ದ ರಾಜ್ಯ ಬಿಜೆಪಿ ಇವತ್ತಿಗೆ ಒಡೆದ ಮನೆ. ಇಲ್ಲೀಗ ನಾಯಕರ ಮನಸ್ಸುಗಳು ಮುರಿದು ಬಿದ್ದಿವೆ; ಪಕ್ಷದೊಳಗೆ 'ಅಖಂಡತೆ' ಮಕಾಡೆ ಮಲಗಿದೆ. ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಯಡಿಯೂರಪ್ಪ ಬಗ್ಗೆ ಅಸಮಾಧಾನದ ದಟ್ಟ ಹೊಗೆ ವ್ಯಾಪಿಸಿದೆ. ಪಕ್ಷದ ಕಾರ್ಯತಂತ್ರಗಳು ಕೈ ಕೊಡುತ್ತಿವೆ. ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಪದೇ ಪದೇ ಮುಗ್ಗರಿಸುತ್ತಿದೆ...

ಇಂತಹದೊಂದು ಪರಿಸ್ಥಿತಿಯಲ್ಲಿರುವ ಪಕ್ಷ ರ‍್ಯಾಲಿಯೊಂದನ್ನು ಆಯೋಜಿಸಿದರೆ ಹೇಗಿರಬಹುದು? ಇದಕ್ಕೆ ಸಾಕ್ಷಿಯಾಗಿದೆ ಗುರುವಾರ ಬೆಂಗಳೂರು- ತುಮಕೂರು ರಸ್ತೆಯ ಹೊರವಲಯದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿರುವ ನವಕರ್ನಾಟಕ ನಿರ್ಮಾಣಕ್ಕಾಗಿ 'ಪರಿವರ್ತನಾ ರ‍್ಯಾಲಿ'.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ 75 ದಿನಗಳ ಕಾಲ ಪರಿವರ್ತನಾ ರ‍್ಯಾಲಿ ಹಮ್ಮಿಕೊಳ್ಳಲು ಬಿಜೆಪಿ ಉದ್ದೇಶಿಸಿತ್ತು. ಅದಕ್ಕೆ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಚಾಲನೆಯನ್ನು ನೀಡಬೇಕಿತ್ತು. ಆದರೆ ರ‍್ಯಾಲಿ ಆರಂಭದಲ್ಲಿಯೇ ಕಳಪೆ ನಿರ್ವಹಣೆಯ ಕಾರಣಕ್ಕೆ ಗಮನ ಸೆಳೆದಿದೆ; ಟೀಕೆಗೆ ಒಳಗಾಗಿದೆ.

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ರ‍್ಯಾಲಿ ನಡೆಯುವ ಜಾಗದಲ್ಲಿ ಸೇರಿದ್ದ ಜನರಿಗಿಂತಲೂ ಹೆಚ್ಚಿನ ಜನ ಬೆಂಗಳೂರು- ತುಮಕೂರು ರಸ್ತೆಯಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಕೊಂಡು ಹೈರಾಣಾದರು. ಜಂಗುಳಿಯಲ್ಲಿ ಸಿಲುಕಿಕೊಂಡ ಆಂಬುಲೆನ್ಸ್‌ಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡವು. ರಸ್ತೆಯಲ್ಲಿ ಉಂಟಾದ ಅಡಚಣೆಯ ಕಾರಣಕ್ಕೆ ಜನ ಹಿಡಿ ಶಾಪ ಹಾಕಿದರು.

ಮಧ್ಯಾಹ್ನ 2 ಗಂಟೆ ವೇಳೆಗೆ ಅಮಿತ್ ಶಾ ರ‍್ಯಾಲಿ ಆಯೋಜನೆಗೊಂಡ ಸ್ಥಳಕ್ಕೆ ಬಂದರಾದರೂ, ಅಷ್ಟರೊಳಗಾಗಿ ಸಮಾರಂಭ ಅನಧಿಕೃತವಾಗಿ ಉದ್ಘಾಟನೆಗೊಂಡಿತ್ತು. ನಾಯಕರ ಭಾಷಣಗಳು ಆರಂಭವಾಗಿದ್ದವು. ಎರಡು ಲಕ್ಷ ಜನರ ನಿರೀಕ್ಷೆಯಿಂದ ಹಾಕಿದ್ದ ಕುರ್ಚಿಗಳು ಖಾಲಿ ಹೊಡೆಯುವುದು ಎದ್ದು ಕಾಣಿಸುತ್ತಿತ್ತು. ಸ್ಥಳಕ್ಕೆ ಅಮಿತ್‌ ಶಾ ಆಗಮನಿಸುತ್ತಿದ್ದಂತೆ ಖಾಲಿ ಕುರ್ಚಿಗಳನ್ನು ಕಂಡ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಕೇಂದ್ರ ಸಚಿವ ಸದಾನಂದ ಗೌಡ ಹೊರಗೆ ನಿಂತ ಜನರನ್ನು ಒಳಗೆ ಕರೆಯುವಂತೆ ಶಾಸಕರಿಗೆ ಸೂಚಿಸಿದರು. ಜನಪ್ರತಿನಿಧಿಗಳು ಜನರನ್ನು ಒಳಗೆ ತರೆತಂದು ಕುರ್ಚಿಗಳ ಮೇಲೆ ಕೂರಿಸಲು ಮುಂದಾದರು. ವೇದಿಕೆ ಹಿಂಭಾಗ ನಾಯಕರ 'ಗುಪ್ತ ಸಮಾಲೋಚನೆ' ನಡೆಯಿತು. ಜನ ಭಾ‍ಷಣಕ್ಕಿಂತ ಊಟದ ಮೇಲೆ ಆಸಕ್ತಿ ತೋರಿಸಿದರು.

ಇಷ್ಟೆಲ್ಲಾ ಅಪಸವ್ಯಗಳ ನಡುವೆಯೇ ಭಾಷಣ ಆರಂಭಿಸಿದ ರಾಜ್ಯಾಧ್ಯಕ್ಷ ಯಡಿಯೂರಪ್ಪ, "ಇನ್ನೊಂದು ಅರ್ಧ ಗಂಟೆ ಅಷ್ಟೆ ಬಂಧುಗಳೇ. ದಯಮಾಡಿ ದೂರದಿಂದ ಬಂದಿರುವ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಭಾ‍ಷಣವನ್ನು ಕೇಳಿ,'' ಎಂದು ಬೇಡಿಕೊಂಡರು. ನರೇಂದ್ರ ಮೋದಿ ಅವರ 'ಕಾಂಗ್ರೆಸ್ ಮುಕ್ತ ಭಾರತ'ದ ಕಲ್ಪನೆಯನ್ನು ಉಲ್ಲೇಖಿಸಿದ ಅವರು, "ರಾಜ್ಯ ಸರಕಾರವನ್ನು ಕಿತ್ತೊಗೆಯಲು ಪರಿವರ್ತನಾ ರ‍್ಯಾಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಹೋಗಲಿದೆ,'' ಎಂದು ಘೋಷಿಸಿದರು.

ಯಡಿಯೂರಪ್ಪ ಭಾ‍ಷಣ ಮುಗಿಯುತ್ತಿದ್ದಂತೆ ಸಂಸದೆ ಶೋಭ ಕರಾಂದ್ಲಾಜೆ, 'ಯಡಿಯೂರಪ್ಪ ಆಪ್ ಬಿಡಗಡೆಯನ್ನು ಅಮಿತ್‌ ಶಾ ಜೀ ಮಾಡಲಿದ್ದಾರೆ' ಎಂದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಶಾ, ನೇರವಾಗಿ ಭಾಷಣಕ್ಕೆ ಮುಂದಾದರು. "ರಾಜ್ಯ ಸರಕಾರ ದೇಶದಲ್ಲಿಯೇ ನಂಬರ್‌ 1 ಭ್ರಷ್ಟ ಸರಕಾರ,'' ಎಂದು ಸಿದ್ದರಾಮಯ್ಯ ಸರಕಾರವನ್ನು ಟೀಕಿಸಿದರು. "ಈ ಪರಿವರ್ತನಾ ರ‍್ಯಾಲಿ ಒಬ್ಬ ಮುಖ್ಯಮಂತ್ರಿಯನ್ನು, ಒಂದು ಸರಕಾರವನ್ನು, ಸಚಿವರುಗಳನ್ನು ಬದಲಿಸಲು ನಡೆಸುತ್ತಿರುವ ಯಾತ್ರೆ ಅಲ್ಲ. ಬದಲಿಗೆ, ಇದು ರಾಜ್ಯದ ಸ್ಥಿತಿಯನ್ನೇ ಬದಲಿಸಲು ನಡೆಸುತ್ತಿರುವ ಯಾತ್ರೆ,'' ಎಂದರು. ಜತೆಗೆ, ಯಡಿಯೂರಪ್ಪ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ಭಾಷಣದ ಆರಂಭದಲ್ಲಿ ಉಳಿದ ಸಂಸದರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು ಶೋಭ ಕರಾಂದ್ಲಾಜೆ ಅವರನ್ನು ಮಾತ್ರ ನೆನಪಿಸಿಕೊಳ್ಳಲಿಲ್ಲ.

ಪ್ರತಿಪಕ್ಷದೊಳಗೆ ನಾಯಕರ ಹಿಂದೇಟು:

ರಾಜ್ಯ ಚುನಾವಣೆಗೆ ಅಣಿಯಾಗುತ್ತಿದೆ. ಗುಜರಾತ್‌ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯ ಅಖಾಡ ರಂಗೇರಲಿದೆ. ಮೇ ತಿಂಗಳ ಹೊತ್ತಿಗೆ ಚುನಾವಣಾ ದಿನಾಂಕಗಳು ಘೋಷಣೆಯಾಗುವ ನಿರೀಕ್ಷೆ ಇದೆ. ಹೀಗಾಗಿಯೇ ಪ್ರಮುಖ ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ಚುನಾವಣಾ ತಯಾರಿಯ ಭಾಗವಾಗಿ ಪರಿವರ್ತನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಜನವರಿವರೆಗೂ ನಡೆಯಲಿರುವ ಈ ಯಾತ್ರೆಯು ಬಿಜೆಪಿ ಪಾಲಿಗೆ ಮರಳಿ ಅಧಿಕಾರಕ್ಕೆ ಬರಲು ಚಿಮ್ಮು ಹಲಗೆಯಾಗಬೇಕಿತ್ತು. ಆದರೆ ಆರಂಭದಲ್ಲಿಯೇ ನಡೆದಿರುವ ಅಪಸವ್ಯಗಳು ಪಕ್ಷದೊಳಗೆ ಇನ್ನೂ ಸಿಕ್ಕುಗಳು ಉಳಿದುಕೊಂಡಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.

"ಬಿಜೆಪಿ ಹಿಂದೆ ಅಧಿಕಾರಕ್ಕೆ ಬಂದಾಗ ಅದರ ನಾಯಕರ ನಡುವೆ ಸಂಬಂಧಗಳು ಗಟ್ಟಿಯಾಗಿದ್ದವು. ಕನಿಷ್ಟ ಸಾರ್ವಜನಿಕವಾಗಿ ನಾವು ಪಾಂಡವರು, ಲವ- ಕುಶ ಅಂತ ಹೇಳಿಕೊಳ್ಳುತ್ತಿದ್ದರು. ಆದರೆ ಇವತ್ತಿಗೆ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಅವರ ನೇತೃತ್ವವನ್ನು ಉಳಿದವರು ಸಹಿಸಿಕೊಳ್ಳುತ್ತಿಲ್ಲ. ಅತ್ತ ಕೇಂದ್ರ ನಾಯಕರು ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ ಎಂದು ಹೇಳುತ್ತಿದ್ದರಾದರೂ, ಕೇಂದ್ರ ಸಂಪುಟದಲ್ಲಿ ರಾಜ್ಯದ ಪ್ರಾತಿನಿದ್ಯದ ವಿಚಾರ ಬಂದಾಗ ಅನಂತ ಕುಮಾರ್ ಹೆಗಡೆ ತರಹದ ವ್ಯಕ್ತಿತ್ವಕ್ಕೆ ಮಣೆ ಹಾಕಿದ್ದಾರೆ. ಚುನಾವಣೆಯನ್ನು ಎದುರಿಸಲು ಒಂದು ಕಡೆ ಜಾತಿ ಲೆಕ್ಕಚಾರ ಮತ್ತೊಂದು ಕಡೆ ಹಿಂದುತ್ವದ ಬ್ರಾಂಡ್‌ ಮರ್ಜಿ. ತಂತ್ರಗಾರಿಕೆಯಲ್ಲಿರುವ ಇಂತಹ ದ್ವಂದ್ವಗಳೇ ಅವರಿಗೆ ಮುಳುವಾಗಿದೆ,'' ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಯಡಿಯೂರಪ್ಪ ಆರ್‌ಎಸ್‌ಎಸ್‌ನಿಂದ ಬಂದಿರುವ ಬಿ. ಎಲ್‌. ಸಂತೋಷ್‌ ಅವರ ಕೈಹಿಡಿದು ಮುಂದು ಕರೆಯುತ್ತಾರೆ. ಅವರು ಜತೆಯಲ್ಲಿ ಬಂದು ನಿಲ್ಲಲು ಹಿಂದೇಟು ಹಾಕುವ ದೃಶ್ಯಗಳು ಕಾಣಸಿಗುತ್ತವೆ. ಹೀಗೆ ಯಡಿಯೂರಪ್ಪ ಜತೆ ನಿಲ್ಲಲು ಹಿಂದೇಟು ಹಾಕುತ್ತಿರುವುದು ಪಕ್ಷದೊಳಗೆ ನಾನಾ ರೂಪಗಳಲ್ಲಿ ಕಾಣಸಿಗುತ್ತವೆ. "ಹೇಗಿದ್ದರೂ ನೀವು ಮುಖ್ಯಮಂತ್ರಿ ಅಭ್ಯರ್ಥಿ. ನೀವೇ ಚುನಾವಣೆಗೆ ಖರ್ಚು ಮಾಡಿ ಎಂದು ಇತರೆ ನಾಯಕರು ಯಡಿಯೂರಪ್ಪ ಅವರ ಮೇಲೆ ಆರ್ಥಿಕ ಹೊರೆಯನ್ನು ಹಾಕಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಪಕ್ಷಕ್ಕಾಗಿ ಇತರರು ಖರ್ಚು ಮಾಡುವುದು ಸಂದೇಹ,'' ಎನ್ನುತ್ತಾರೆ ಪಕ್ಷದ ನಾಯಕರೊಬ್ಬರು.

ಬದಲಾವಣೆ ಸಾಧ್ಯತೆ?: 

ಒಂದು ಕಡೆ ಬಿಜೆಪಿ ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ ಚುನಾವಣೆಯ ನಂತರ ಜೈತ್ರಯಾತ್ರೆಯ ಹುಮ್ಮಸ್ಸಿನಲ್ಲಿದೆ. ಮುಂಬರುವ ಗುಜರಾತ್‌ ಹಾಗೂ ಹಿಮಾಚಲ ಚುನಾವಣೆಗಳಲ್ಲಿಯೂ ಪಕ್ಷದ ಗೆಲುವಿಗೆ ತಯಾರಿಗಳು ನಡೆದಿವೆ. ಇಂತಹ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ದುರ್ಬಲಗೊಂಡಿರುವ ಕಾಂಗ್ರೆಸ್‌ ಕೈಯಿಂದ ಕರ್ನಾಟಕವನ್ನು ಕಿತ್ತುಕೊಳ್ಳುವುದು ಪ್ರಮುಖ ಆದ್ಯತೆಯೂ ಆಗಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಒಂದಾದ ಮೇಲೊಂದು ಗೊಂದಲಗಳು ಪಕ್ಷವನ್ನು ದಿನದಿಂದ ದಿನಕ್ಕೆ ದುರ್ಬಲ ಮಾಡುತ್ತಿವೆ. ಕಾರ್ಯಕರ್ತರ ಆತ್ಮವಿಶ್ವಾಸವನ್ನು ಅಣಕಿಸುತ್ತಿವೆ.

ಇವುಗಳ ನಡುವೆಯೇ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ರ‍್ಯಾಲಿ ಪಕ್ಷದ ಮರುಹುಟ್ಟಿಗೆ, ಹೊಸ ಉತ್ಸಾಹಕ್ಕೆ ಸಹಾಯ ಮಾಡುತ್ತದೆ ಎಂಬ ಭಾವನೆ ಇತ್ತು. ಅದೂ ಕೂಡ ಮಿಸ್‌ ಆಗಿರುವುದು ಈಗ ಎದ್ದು ಕಾಣಿಸುತ್ತಿದೆ. ಮುಂದಿನ 74 ದಿನಗಳಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಲಾ 15- 20 ಸಾವಿರ ಜನ ಸೇರಿಸಬೇಕು ಎಂದು ಯಡಿಯೂರಪ್ಪ ಹೇಳುತ್ತಿದ್ದರಾದರೂ, ಪಕ್ಷದ ನಾಯಕರ ನಡುವಿನ ಕಲಹದ ಹಿನ್ನೆಲೆಯಲ್ಲಿ ಅನುಮಾನಗಳು ಮೂಡಿವೆ. ಜನವರಿ ವೇಳೆಗೆ ಮುಗಿಯಲಿರುವ ಪರಿವರ್ತನಾ ಯಾತ್ರೆ ಯಶಸ್ಸು ಆಗದೇ ಹೋದರೆ, ಮುಖ್ಯಮಂತ್ರಿ ಅಭ್ಯರ್ಥಿಯ ಪರಿವರ್ತನೆಗೆ ಬಿಜೆಪಿ ರಾಷ್ಟ್ರ ನಾಯಕರು ಮುಂದಾದರೂ ಅಚ್ಚರಿ ಏನಿಲ್ಲ.

"ಯಡಿಯೂರಪ್ಪ ಅವರ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎಂದು ಅಮಿತ್‌ ಶಾ ಘೋಷಣೆ ಮಾಡಿದ್ದಾರೆ. ಅಷ್ಟೆ ಅಲ್ಲ, ಜತೆಗೆ 150 ಸ್ಥಾನಗಳನ್ನೂ ಗೆಲ್ಲಬೇಕು ಎಂಬ ಷರತ್ತು ವಿಧಿಸಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಅಂದುಕೊಂಡಷ್ಟು ಸ್ಥಾನಗಳನ್ನು ಗೆಲ್ಲಲು ಆಗುವುದಿಲ್ಲ ಅನ್ನಿಸಿದರೆ ಅವರ (ಅಮಿತ್ ಶಾ) ತೀರ್ಮಾನ ಬದಲಾಗಬಹುದು,'' ಎನ್ನುತ್ತಾರೆ ಆರ್‌ಎಸ್‌ಎಸ್‌ನ ನಾಯಕರೊಬ್ಬರು. ಈ ಮೂಲಕ ಬಿಜೆಪಿ ಒಳಗೆ ಮಹತ್ವದ ಪರಿವರ್ತನೆಯ ಸಾಧ್ಯತೆಯ ಸುಳಿವನ್ನು ಅವರು ಬಿಟ್ಟುಕೊಡುತ್ತಾರೆ. ಮತ್ತು, ಅದಕ್ಕೆ ಈ ಪರಿವರ್ತನಾ ಯಾತ್ರೆಯೇ ಮುನ್ನಡಿಯನ್ನೂ ಬರೆಯಬಹುದು. ಅದೇನೇ ಇದ್ದರೂ, ಇಂತಹ ಬೆಳವಣಿಗೆಯ ಸಾಧ್ಯಾಸಾಧ್ಯತೆಗಾಗಿ ಇನ್ನೆರಡು ತಿಂಗಳು ಕಾಯಬೇಕಷ್ಟೆ.