samachara
www.samachara.com
ಮೀನುಗಾರರ ಅಭಿವೃದ್ಧಿಗೆ 'ಸೀ ವೀಡ್‌ ಕೃಷಿ': ಉಜಿರೆಯಲ್ಲಿ ಮೋದಿ ಮುಂದಿಟ್ಟ ಯೋಜನೆಯ ಹಿನ್ನೆಲೆ ಏನು?
ಸುದ್ದಿ ಸಾಗರ

ಮೀನುಗಾರರ ಅಭಿವೃದ್ಧಿಗೆ 'ಸೀ ವೀಡ್‌ ಕೃಷಿ': ಉಜಿರೆಯಲ್ಲಿ ಮೋದಿ ಮುಂದಿಟ್ಟ ಯೋಜನೆಯ ಹಿನ್ನೆಲೆ ಏನು?

ದಕ್ಷಿಣ

ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮತ್ತೆ ಸುದ್ದಿಕೇಂದ್ರದಲ್ಲಿದೆ.

ಒಂದು ವಾರದ ಅಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ರಮದ ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಈ ಇಬ್ಬರು ರಾಜಕಾರಣಿಗಳು ಅಲ್ಲಿನ ವೇದಿಕೆಯಲ್ಲಿ ಮಾತನಾಡಿದ ಅಂಶಗಳಿಗಿಂತ, ಅವರು ದೇವಸ್ಥಾನಕ್ಕೆ ಭೇಟಿ ವಿಚಾರವೇ ಹೆಚ್ಚು ಚರ್ಚೆಗೆ ಒಳಗಾಯಿತು.

ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿಗೂ ಮುನ್ನ ಮೀನೂಟ ಸೇವಿದ್ದು ಹಾಗೂ ಪ್ರಧಾನಿ ಮೋದಿ ಚಪ್ಪಲಿ ಧರಿಸಿ ದೇವಸ್ಥಾನದ ಆವರಣ ಪ್ರವೇಶಿಸಿದರು ಎಂಬ ವಿಚಾರಗಳು ಅನಗತ್ಯ ಸುದ್ದಿಗಳು. ಅದೇ ರೀತಿ ಗ್ರಾಮೀಣಾಭಿವೃದ್ಧಿ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾಗಲೀ, ಕ್ಯಾಶ್‌ಲೆಸ್‌ ಎಕಾನಮಿ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದಾಗಲೀ ಹೊಸ ಭರವಸಗಳನ್ನು ಮೂಡಿವಂತಿರಲಿಲ್ಲ ಕೂಡ.

ಇವುಗಳ ನಡುವೆಯೇ, ಗಮನ ಸೆಳೆದಿದ್ದು ಭಾನುವಾರ ಉಜಿರೆಯ ತಮ್ಮ ಭಾಷಣ ಕೊನೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ 'ಸೀ ವೀಡ್' ಅಥವಾ 'ಸಮುದ್ರ ಕಳೆ'ಯ ವಿಚಾರ. ಈ ಸಮಯದಲ್ಲಿ ಮಾತನಾಡುತ್ತ ಮೋದಿ, "ಮಂಗಳೂರಿನ ಕರಾವಳಿ ಭಾಗದ ಮೀನುಗಾರರು ವರ್ಷದ ಒಂದಷ್ಟು ಕಾಲ, ಮಳೆಗಾಲದ ಸಮಯದಲ್ಲಿ ಕೆಲಸ ಇಲ್ಲದೆ ಕಳೆಯುತ್ತಾರೆ. ಅವರಿಗೆ ಆರ್ಥಿಕ ಮೂಲವಾಗಿ 'ಸೀ ವೀಡ್‌ ಕೃಷಿ'ಯನ್ನು ಬಳಸಿಕೊಳ್ಳಬಹುದು. ಇದನ್ನು ನಾನು ಸರಕಾರಕ್ಕೆ ಹೇಳುವ ಮುನ್ನ, ಧರ್ಮಸ್ಥಳದ ಆಡಳಿತಾಧಿಕಾರಿಗಳಿಗೆ ಹೇಳುತ್ತೇನೆ. ಅವರ ಸ್ವಸಹಾಯ ಗುಂಪುಗಳ ನೆರವಿನಿಂದ ಸಮುದ್ರದ ಕಳೆಯ ಕೃಷಿಯನ್ನು ಶುರುಮಾಡಬಹುದು. ಈ ಸಮುದ್ರ ಕಳೆಗೆ ಭಾರಿ ಬೇಡಿಕೆ ಇದೆ ಮತ್ತು ಸುಲಭವಾಗಿ ಕೃಷಿ ಮಾಡಬಹುದು,'' ಎಂದರು.

ಸಮುದ್ರದ ಕಳೆ: 

'ಸೀ ವೀಡ್‌' ಅಥವಾ 'ಸಮುದ್ರ ಕಳೆ' ಕರ್ನಾಟಕದ ಪಾಲಿಗೆ ಹೊಸ ಪದವಾಗಿ ಕೇಳಿಸಬಹುದು. ಆದರೆ ಈಗಾಗಲೇ ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಮೀನುಗಾರರು ಸಮುದ್ರದ ಉಪ್ಪು ನೀರಿನಲ್ಲಿ ಬೆಳೆಯುವ ಆಲ್ಗೆಗಳ ಕೃಷಿಯನ್ನು ಮಾಡುತ್ತಿದ್ದಾರೆ. ಅಲ್ಲಿನ ಸರಕಾರಗಳೇ ಮುಂದೆ ನಿಂತು ಯೋಜನೆಯನ್ನು ರೂಪಿಸುತ್ತಿವೆ. ಈ ಕುರಿತು ಇನ್ನಷ್ಟು ಆಳಕ್ಕಿಳಿದರೆ ಕೆಲವು ಕುತೂಹಲಕಾರಿ ಮಾಹಿತಿಗಳೂ ತೆರೆದುಕೊಳ್ಳುತ್ತವೆ.

'ಸೀ ವೀಡ್‌' ಎಂದರೆ ಬೇರು, ಖಾಂಡ ಮತ್ತು ಎಲೆಗಳಿಲ್ಲದ ಸಸ್ಯಗಳು. ಇವುಗಳಲ್ಲಿ ಹಲವು ಪ್ರಬೇಧಗಳಿವೆ. ಇವುಗಳಲ್ಲಿ ವಿಟಮಿನ್ ಅಂಶಗಳು ಹೆಚ್ಚಿರುವ ಕಾರಣ ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಜತೆಗೆ, ಔಷಧಿಗಳ ಉತ್ಪಾದನೆಗೆ ಇವುಗಳನ್ನು ಬಳಸುವುದರಿಂದ ಬೇಡಿಕೆಯೂ ಇದೆ. ತಮಿಳುನಾಡಿನ ರಾಮನಾಥನ್ ಜಿಲ್ಲೆಯ ಸಮಯದ್ರ ತಟದಲ್ಲಿ ಅಲ್ಲಿನ ಮೀನುಗಾರರು ಸಮುದ್ರದ ಈ ಸಸ್ಯಗಳನ್ನು ಬೆಳೆಯುವ, ಸಂಗ್ರಹಿಸುವ, ಪರಿಷ್ಕರಿಸುವ ಕೆಲಸವನ್ನು ಸಾಂಪ್ರದಾಯಿಕವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಹೀಗಾಗಿಯೇ, 1971ರಲ್ಲಿ 'ಸೀ ವೀಡ್‌ ರಿಸರ್ಚ್‌ ಅಂಡ್ ಯುಟಿಲೈಸೇಷನ್ ಅಸೋಸಿಯೇಷನ್‌'ನ್ನು ಇಲ್ಲಿ ಹುಟ್ಟು ಹಾಕಲಾಗಿದೆ. ಈ ಸಂಘದ ಅಡಿಯಲ್ಲಿ ಸೀ ವೀಡ್‌ಗಳ ಕುರಿತು ಪತ್ರಿಕೆಯೊಂದನ್ನು ಹೊರತರಲಾಗುತ್ತಿದೆ. ಇದರ ಸಂಪಾದಕ ಕಾಲಿಯ ಪೆರುಮಾಳ್. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಸೀ ವೀಡ್‌ಗಳ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ.

"ಕರ್ನಾಟಕದಲ್ಲಿ ಸಮುದ್ರ ಕಳೆಯನ್ನು ಬೆಳೆಯುವ ಸಂಪ್ರದಾಯ ಇದ್ದ ಹಾಗಿಲ್ಲ. ಯಾಕೆ ಎಂಬುದು ಗೊತ್ತಿಲ್ಲ. ಆದರೆ ತಮಿಳುನಾಡಿನ ರಾಮನಾಥನ್ ಜಿಲ್ಲೆಯಲ್ಲಿ ಹಿಂದಿನಿಂದಲೂ ಅಲ್ಲಿನ ಮೀನುಗಾರರು ಈ ವಿಚಾರದಲ್ಲಿ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ,'' ಎನ್ನುತ್ತಾರೆ ಪೆರುಮಾಳ್‌ ಜತೆಯಲ್ಲಿ ಸಂಶೊಧಕರಾಗಿರುವ ಎಡ್ವಿನ್‌.

ಭಾರತ ಸರಕಾರದ ಪಿಐಬಿ ವೆಬ್‌ಸೈಟ್‌ನಲ್ಲಿ ಎನ್‌. ರಂಗನಾಥನ್‌ ಎಂಬುವವರು ಸೀ ವೀಡ್‌ಗಳ ಕುರಿತು ಬರೆದ ಪ್ರಬಂಧವೊಂದು ಇನ್ನಷ್ಟು ಮಾಹಿತಿ ನೀಡುತ್ತದೆ. ಇದರಲ್ಲಿ, 'ಭಾರತದಲ್ಲಿ ಮದ್ರದ ಕಳೆ ಎಂಬುದು ಇನ್ನೂ ಶೋಧಿಸದ ಗಣಿ' ಎಂದವರು ಹೇಳುತ್ತಾರೆ. ವಿಶೇಷವಾಗಿ ದಕ್ಷಿಣ ಭಾರತದ ಸಮುದ್ರ ತಟದಲ್ಲಿ ಆಲ್ಗೆಗಳು ಬೆಳೆಯಲು ಪ್ರಶಸ್ತ ಜಾಗ ಇದೆ. ಇದನ್ನು ಬಳಸಿಕೊಂಡರೆ, ಮೀನುಗಾರರ ಅಭಿವೃದ್ಧಿ ಸಾಧ್ಯವಾಗುತ್ತದೆ' ಎಂದು ರಂಗನಾಥನ್ ಅಭಿಪ್ರಾಯ ಪಡುತ್ತಾರೆ.

ಇಷ್ಟಿದ್ದರೂ ಯಾಕೆ ಕರ್ನಾಟಕದಲ್ಲಿ 'ಸೀ ವೀಡ್‌ ಕೃಷಿ' ಇನ್ನೂ ಜನಪ್ರಿಯವಾಗಿಲ್ಲ?

ಈ ಕುರಿತು ಕರ್ನಾಟಕ ಕೃಷಿ ಇಲಾಖೆಯಲ್ಲಿಯೂ ಸರಿಯಾದ ಮಾಹಿತಿ ಇಲ್ಲ. ಮಂಗಳೂರಿನ ಕೃಷಿ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು, "ನಮ್ಮಲ್ಲಿ ಸೀ ವೀಡ್‌ ಕೃಷಿ ಸಂಬಂಧಪಟ್ಟ ಹಾಗೆ ಯಾವ ಯೋಜನೆಗಳೂ ಜಾರಿಯಲ್ಲಿಲ್ಲ. ಯಾಕೆ ಎಂಬುದು ಗೊತ್ತಿಲ್ಲ. ಈ ಕುರಿತು ಅಧ್ಯಯನ ನಡೆಸಬೇಕಿದೆ,'' ಎಂದರು.

ಫೋಕಸ್‌ ಏನಿರಬೇಕು?:

ಧರ್ಮಸ್ಥಳದ ಆಡಳಿತ ಮಂಡಳಿ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಬಡ್ಡಿ ವಿಧಿಸುವ ಕೆಲಸವನ್ನು ಮಾಡುತ್ತಿದೆ. ಇದನ್ನು ತಡೆಯಲು ಸಣ್ಣ ಹಣಕಾಸು ಸಂಸ್ಥೆಗಳ ಬಗೆಗೆ ಕಾನೂನೊಂದರ ಅಗತ್ಯ ರಾಜ್ಯದಲ್ಲಿದೆ. ಆದರೆ, ಕಾನೂನು ತರಬೇಕಾದ ಮುಖ್ಯಮಂತ್ರಿ ಧರ್ಮಸ್ಥಳದ ಕಾರ್ಯಕ್ರಮದಲ್ಲಿ 'ಲಾಭಾಂಶ' ವಿತರಿಸಿ ಬಂದಿದ್ದಾರೆ. ಇನ್ನೊಂದು ಕಡೆ, ಅದೇ ಜನರಿಗೆ 'ರೂಪೇ ಕಾರ್ಡ್‌' ವಿತರಿಸಿ ಪ್ರಧಾನಿ ಮೋದಿ, ಇದರಿಂದ ಕೌಶಲ್ಯ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ. ಇವುಗಳ ಕುರಿತು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಅಗತ್ಯವೇನಿಲ್ಲ.

ಪ್ರಧಾನಿ ತಮ್ಮ ಭಾ‍ಣದ ಕೊನೆಯಲ್ಲಿ ಪ್ರಸ್ತಾಪಿಸಿದ 'ಸೀ ವೀಡ್‌ ಕೃಷಿ' ಹಾಗೂ ಅದರ ಕುರಿತು ವರದಿ ಸಲ್ಲಿಸುವಂತೆ ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದನ್ನು ಗಮನಿಸಬೇಕಿದೆ. ಮೀನುಗಾರರ ನಿತ್ಯ ಸಂಕಷ್ಟಗಳನ್ನು ಬಲ್ಲವರು ಅವರಿಗೆ ಆದಾಯ ಬರುವ ಯೋಜನೆಯ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಅದರಲ್ಲೂ ಮಂಗಳೂರಿನ ಕಡಲ ಕಿನಾರೆಗಳಲ್ಲಿ ಆಲ್ಗೆಗಳನ್ನು ಬೆಳೆಸಲು ಸಾಧ್ಯವಾದರೆ, ಒಂದಷ್ಟು ಕುಟುಂಬಗಳು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಸದೃಢವಾಗುತ್ತವೆ.

ಆದರೆ ಆ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಾ? ಇಲ್ಲಾ ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಗೆ ವಹಿಸಬೇಕಾ? ನೆರೆಯ ರಾಜ್ಯಗಳ ಸರಕಾರಗಳು 'ಸೀ ವೀಡ್‌' ಕುರಿತು ಕೈಗೆತ್ತಿಕೊಂಡ ಕ್ರಮಗಳನ್ನು ಅರಿಯುವ, ಅನುಷ್ಠಾನಕ್ಕೆ ತರುವ ಕೆಲಸವನ್ನು ರಾಜ್ಯ ಸರಕಾರ ಆರಂಭಿಸಬೇಕಿದೆ. ಇಲ್ಲಿಯೂ ಫೋಕಸ್‌ ಮಿಸ್ಸಾದರೆ ನಷ್ಟವಾಗುವುದು ಮೀನುಗಾರ ಸಮುದಾಯಕ್ಕೆ.