samachara
www.samachara.com
ಚಿನ್ನ ಲೇಪಿತ ಬೆಳ್ಳಿಯ ಶವಪೆಟ್ಟಿಗೆಯಲ್ಲಿ ವರ್ಷಪೂರ್ತಿ ಕೊಳೆತ ಥಾಯ್‌ ದೊರೆಯ ದೇಹಕ್ಕೆ ಇಂದು ಅಂತ್ಯಕ್ರಿಯೆ!
ಸುದ್ದಿ ಸಾಗರ

ಚಿನ್ನ ಲೇಪಿತ ಬೆಳ್ಳಿಯ ಶವಪೆಟ್ಟಿಗೆಯಲ್ಲಿ ವರ್ಷಪೂರ್ತಿ ಕೊಳೆತ ಥಾಯ್‌ ದೊರೆಯ ದೇಹಕ್ಕೆ ಇಂದು ಅಂತ್ಯಕ್ರಿಯೆ!

ವರ್ಷದ

ಹಿಂದೆ ನಿಧನರಾಗಿದ್ದ ಥಾಯ್ಲೆಂಡ್‌ನ ದೊರೆ ಭೂಮಿಬೋಲ್‌ ಅದುಲ್ಯದೇಜ್‌ ಕಳೇಬರದ ಅಂತ್ಯಕ್ರಿಯೆಗೆ ಪ್ರಕ್ರಿಯೆಗಳು ಆರಂಭಗೊಂಡಿವೆ.

ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜ ಎಂಬ ಖ್ಯಾತಿಗೆ ಒಳಗಾಗಿದ್ದ ಅದುಲ್ಯದೇಜ್‌ ತಮ್ಮ 88ನೇ ಇಳೀವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದರು. ಅಲ್ಲಿನ ಜನರ ಪಾಲಿಗೆ 'ದೇವಮಾನವ'ರಾಗಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿ ಸುದೀರ್ಘ ಆಡಳಿತ ನಡೆಸಿದ್ದರು. 1946ರಲ್ಲಿ ಪಟ್ಟಕ್ಕೇರಿದ್ದ ಅವರ ಕಳೇಬರವನ್ನು ವರ್ಷದಿಂದ ಕಾಪಿಟ್ಟುಕೊಂಡ ದೇಶ ಒಂದು ವರ್ಷದ ಶೋಕಾಚರಣೆ ನಡೆಸಿತ್ತು.

ಈಗಾಗಲೇ ಥಾಯ್ಲೆಂಡ್‌ನಲ್ಲಿ ಅಂತ್ಯಕ್ರಿಯೆ ಸಂಪ್ರದಾಯಗಳು ಆರಂಭಗೊಂಡಿವೆ. ಇಲ್ಲಿನ ಅರಮನೆಯಲ್ಲಿ ಬೌದ್ಧ ಧರ್ಮದ ಅನುಸಾರ ಅಂತಿಮ ವಿಧಿಗಳಿಗೆ ಚಾಲನೆ ನೀಡಲಾಗಿದೆ. ಗುರುವಾರ ಭಾರಿ ಮೆರವಣಿಗೆ ಮೂಲಕ ತಂದೆಯ ಕಳೇಬರಕ್ಕೆ ಭೂಮಿಭೋಲ್‌ ಮಗ, ಸದ್ಯ ರಾಜನ ಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಮಹಾ ವಜೀರಲಾಂಗ್‌ಕಾರ್ನ್‌ ಅಗ್ನಿ ಸ್ಪರ್ಶ ಮಾಡಲಿದ್ದಾರೆ.

ಮೃತ ರಾಜನ ಶರೀರದ ಮೆರವಣಿಗೆ ಸಾಗುವ ಹಾದಿಯ ಎರಡೂ ಬದಿಯ ಕಟ್ಟಡಗಳಿಗೆ ಹಳದಿ ಬಣ್ಣದ ಹೊದಿಕೆ ಹೊದಿಸಲಾಗಿದೆ. ಬಂಗಾರದ ಹೊಳಪನ್ನು ನೀಡಲಾಗಿದೆ. ಲಕ್ಷಾಂತರ ಜನ ಕೊನೆಯ ಬಾರಿಗೆ ತಮ್ಮ 'ದೇವಮಾನವ'ನ ದೇಹವನ್ನು ಕಣ್ತುಂಬಿಕೊಳ್ಳಲು ನೆರೆಯಲು ಶುರುಮಾಡಿದ್ದಾರೆ.

ಭೂಮಿಬೋಲ್‌ ಶವವನ್ನು ಹೊರಲಿರುವ ರಥ 18ನೇ ಶತಮಾನದಲ್ಲಿ ಬಳಕೆ ಮಾಡಲಾಗಿತ್ತು. ಸುಮಾರು 14 ಟನ್‌ ತೂಕದ ಈ ರಥವನ್ನು ಸುಮಾರು 200 ಸೈನಿಕರು ಎಳೆಯಲಿದ್ದಾರೆ ಎಂದು ಅರಮನೆಯ ಪ್ರಕಟಣೆಗಳು ಹೇಳುತ್ತಿವೆ. ಮೃತ ರಾಜನ ಅಂತಿಮ ಯಾತ್ರೆಯನ್ನು ವೀಕ್ಷಿಸಲು 25 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.  ಈಗಾಗಲೇ ರಾಜನ ಭಾವಚಿತ್ರ ಹಾಗೂ ಭಿತ್ತಿಚಿತ್ರಗಳೊಂದಿಗೆ ಜನ ರಾಜಧಾನಿಯ ಬೀದಿಗಳಲ್ಲಿ ಅಳುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ.

ಈ ಹಿನ್ನೆಲೆಯಲ್ಲಿ ಥಾಯ್ಲೆಂಡ್‌ನಾದ್ಯಂತ ಗುರುವಾರ ಸರಕಾರಿ ರಜೆಯನ್ನು ಘೋಷಿಸಲಾಗಿದೆ. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ಸುಮಾರು 40 ದೇಶಗಳ ಗಣ್ಯರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ನಂತರ ಅವಶೇಷ ಬೂದಿಯನ್ನು ಶುಕ್ರವಾರ ಮತ್ತೆ ಅರಮನೆಗೆ ತರಲಾಗುತ್ತದೆ. ವಾರಾಂತ್ಯದವರೆಗೂ ಅಂತಿಮ ವಿಧಿಗಳು ಜರುಗಲಿವೆ.

ಯಾರು ಈ ಭೂಮಿಭೋಲ್‌?: 

ಥಾಯ್‌ಲ್ಯಾಂಡ್‌ ಜನರ ಪಾಲಿಗೆ 'ದೇವಮಾನವ' ಎಂದು ಕರೆಸಿಕೊಂಡಿದ್ದ ಭೂಮಿಬೋಲ್‌ 1946ರಲ್ಲಿ ತಮ್ಮ ಅಣ್ಣನಿಂದ ಅಧಿಕಾರವನ್ನು ಸ್ವೀಕರಿಸಿದ್ದರು. ಜಗತ್ತಿನಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ ರಾಜ ಎಂಬ ಖ್ಯಾತಿ ಇವರದ್ದು. ತಮ್ಮ ಸುದೀರ್ಘ ಆಡಳಿತದ ಸಮಯದಲ್ಲಿ ಹಲವು ಬಂಡಾಯಗಳನ್ನು, ಪ್ರತಿರೋಧಗಳನ್ನು ನಿಭಾಯಿಸಿದವರು. ಇವರ ಅಧಿಕಾರವಧಿಯಲ್ಲಿ ನಡೆದ ಮಿಲಿಟರಿ ಬಂಡಾಯ ಹಲವರ ಪ್ರಾಣಾಹುತಿಗೆ ಕಾರಣವಾಗಿತ್ತು. ಒಟ್ಟು 19 ಸಂವಿಧಾನಗಳು ರಚನೆಗೊಂಡಿದ್ದವು. ಅದಕ್ಕಿಂತ ಹೆಚ್ಚಿನ ಪ್ರಧಾನ ಮಂತ್ರಿಗಳು ಬದಲಾಗಿ ಹೋಗಿದ್ದರು.

ಇಲ್ಲೀಗ ರಾಜಮನೆತನಕ್ಕೆ ಮೊದಲಿನ ಪ್ರಾಮುಖ್ಯತೆ ಇಲ್ಲದೇ ಹೋದರೂ, ಜನರಲ್ಲಿ ರಾಜನ ಬಗ್ಗೆ ಹಾಗೂ ರಾಜಮನೆತನದ ಬಗ್ಗೆ ಇರುವ ಧಾರ್ಮಿಕ ನಂಬಿಕೆಗಳು ಇನ್ನೂ ಗಟ್ಟಿಯಾಗಿವೆ. ಇಲ್ಲಿನ ರಾಜಕೀಯದಲ್ಲಿ ರಾಜಮನೆತನಕ್ಕೆ ನೇರ ಪ್ರವೇಶಗಳಿಲ್ಲವಾದರೂ, ಭೂಮಿಬೋಲ್‌ ನಿರ್ಣಾಯಕ ಸಂಘರ್ಷಗಳ ಸಮಯದಲ್ಲಿ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ ಉದಾಹರಣೆಗಳಿವೆ.

ಇದರ ಜತೆಗೆ, ದೇಶವನ್ನು ಮಿಲಿಟರಿ ಆಳ್ವಿಕೆಗೆ ಒಳಪಡಿಸಿದ ಸಮಯದಲ್ಲಿ ಭೂಮಿಭೋಲ್‌ ಪಾತ್ರದ ಕುರಿತು ಆರೋಪಗಳು ಕೇಳಿಬಂದಿದ್ದವು. ಮಿಲಿಟರಿ ಆಳ್ವಿಕೆ ಸಮಯದಲ್ಲಿ ನಡೆದ ಧಾರುಣ ಮಾನವ ಹಕ್ಕುಗಳ ಹರಣದ ಕುರಿತು 'ದೇವ ಮಾನವ' ಮೌನ ತಾಳಿದ್ದು ಟೀಕೆಗೆ ಗುರಿಯಾಗಿತ್ತು.

ತಮ್ಮ ಯವ್ವನದ ದಿನಗಳಲ್ಲಿ ಭೂಮಿಭೋಲ್‌ ಹಲವು ಆಸಕ್ತಿಗಳನ್ನು ಹೊಂದಿದ್ದರು. ಫೊಟೋಗ್ರಫಿ, ಸಂಗೀತ, ಚಿತ್ರಕಲೆ ಹಾಗೂ ಬರವಣಿಗೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೃತಕ ಮಳೆ ಸೃಷ್ಟಿಸುವ ಪ್ರಕ್ರಿಯೆಗೆ ಸ್ವಂತ ಪೇಟೆಂಟ್‌ ಕೂಡ ಮೃತ ದೊರೆ ಹೊಂದಿದ್ದರು. 2009ರ ಈಚೆಗೆ ಆರೋಗ್ಯದ ಸಮಸ್ಯೆಗೆ ಒಳಗಾದ 88 ವರ್ಷದ ಭೂಮಿಭೋಲ್‌ ಆಸ್ಪತ್ರೆಯಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

ಕಳೇಬರದ ರಕ್ಷಣೆ ಹೇಗೆ?: 

ಥಾಯ್ಲೆಂಡ್‌ನಲ್ಲಿ ಸತ್ತವರ ಕಳೇಬರವನ್ನು ರಕ್ಷಿಸಿ ಇಡುವ ಸಂಪ್ರದಾಯವನ್ನು ಜನ ಸಾಮಾನ್ಯರಿಂದ ಹಿಡಿದು ರಾಜಮನೆತನಗಳವರೆಗೆ ಪಾಲಿಸಲಾಗುತ್ತದೆ. ಸಾಮಾನ್ಯರಾದರೆ ಅವರ ಆರ್ಥಿಕ ಅನುಕೂಲಗಳ ಅನುಗುಣವಾಗಿ ಕಳೇಬರವನ್ನು ರಕ್ಷಿಸುತ್ತಾರೆ. ಹಣವಂತರು ಹೆಚ್ಚು ದಿನಗಳ ಕಾಲ ತಮ್ಮವರ ದೇಹಗಳನ್ನು ರಕ್ಷಿಸಿಟ್ಟುಕೊಂಡು ಶೋಕಾಚರಣೆ ನಡೆಸುತ್ತಾರೆ.

ಇವತ್ತಿಗೆ ದೇಹಗಳು ಕೊಳೆಯದಂತೆ ರಕ್ಷಿಸಲು 'ಪಾರ್ಮಲಿನ್‌' ಎಂಬ ಇಂಜೆಕ್ಷನ್‌ ಇದೆ. ಇದು ಕಳೇಬರವನ್ನು ಕೊಳೆಯದಂತೆ ರಕ್ಷಿಸುತ್ತದೆ. ಆದರೆ, ದೇಹದಲ್ಲಿರುವ ನೀರಿನ ಪಸೆ ಮಾತ್ರ ಆವಿಯಾಗಿ, ಕೊನೆಗೆ ಕಟ್ಟಿಗೆಯಂತಾಗಿ ಹೋಗುತ್ತದೆ.

ಆದರೆ, ಥಾಯ್ಲೆಂಡ್‌ನ ರಾಜಮನೆತದಲ್ಲಿ ಮೃತರ ದೇಹಗಳನ್ನು ರಕ್ಷಿಸುವ ಪ್ರಕ್ರಿಯೆಯ ಮಾಹಿತಿ ಅಚ್ಚರಿ ಮೂಡಿಸುವಂತಿದೆ. ಇಲ್ಲಿ ಮಮ್ಮಿ ರೀತಿಯಲ್ಲಿ ದೇಹವನ್ನೇ ರಕ್ಷಿಸುವ ಪರಿಪಾಠ ಇಲ್ಲ. ಸಾವಿಗೆ ಒಳಗಾದ ರಾಜ ಅಥವಾ ರಾಣಿಯ ದೇಹವನ್ನು ಭದ್ರವಾಗಿ ಮುಚ್ಚಲ್ಪಟ್ಟ ಬೆಳ್ಳಿಯ ಪೆಟ್ಟಿಗೆಯಲ್ಲಿಯೇ ಕೊಳೆಯಲು ಬಿಡಲಾಗುತ್ತದೆ. ಅಂತಹ ಶವಪೆಟ್ಟಿಗೆಗೆ ಚಿನ್ನದ ಲೇಪವೂ ಇರುತ್ತದೆ. ವಾಸನೆ ಬರದಂತೆ ವ್ಯಾಕ್ಸ್‌ ಬಳಸಲಾಗುತ್ತದೆ. ನೈಸರ್ಗಿಕವಾಗಿ ಕೊಳೆತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ದೇಹದ ಅಂತ್ಯಕ್ರಿಯೆ ಮುಗಿದ ನಂತರ ಶವ ಪೆಟ್ಟಿಗೆಗೆ ಬಳಸಿದ ಲೋಹಗಳನ್ನು ಕರಗಿಸಿ ಬುದ್ಧನ ವಿಗ್ರಹವನ್ನು ತಯಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.

ಈ ಶತಮಾನದಲ್ಲಿ ನಡೆಯುತ್ತಿರುವ ಅಪರೂಪದ ಅಂತ್ಯಕ್ರಿಯೆಗೆ ಥಾಯ್ಲೆಂಡ್‌ನಲ್ಲಿ ಚಾಲನೆ ದೊರೆತಿದೆ.

ಚಿತ್ರಗಳು:

ದಿ ಗಾರ್ಡಿಯನ್‌.