ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು?
ಸುದ್ದಿ ಸಾಗರ

ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು?

ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವಾಸ್ತವಕ್ಕೆ ಕುರುಡರಾಗಿ, ಎಸ್‌ಕೆಡಿಆರ್‌ಡಿಪಿ ಕಾರ್ಯಕ್ರಮದಲ್ಲಿ ‘ಲಾಭಾಂಶ’ ವಿತರಿಸಿ ಬಂದಿದ್ದಾರೆ. ಇವರಿಂದ ರಾಜ್ಯದ ಜನ ಇನ್ನೇನು ನಿರೀಕ್ಷೆ ಮಾಡಬಹುದು?

ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಯ ಕೊನೆಯ ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಕ್ಷದ ಒಳಜಗಳದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಸುದ್ದಿಯಾಗದೇ ಹೋಗಿದ್ದು; ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತು ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ 'ಬಡ್ಡಿ ವ್ಯವಹಾರ'ದ ಲಾಭಾಂಶವನ್ನು ವಿತರಿಸಿ ಬಂದಿದ್ದು!

ಸಮಾಜವಾದಿ ಹಿನ್ನೆಯ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಅವರು 'ಸ್ವ ಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ಹಂಚಿಕೆ' ಮಾಡಿದ್ದಾರೆ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಅವರ ಆಗಮನಕ್ಕೆ ಮುಂಚೆಯೇ, ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ 'ಕಣ್ಕಟ್ಟಿನ' ಕೆಲಸ ಎಂಬ ಆರೋಪಗಳು ಕೇಳಿ ಬಂದಿದ್ದವು.

ವೀರೇಂದ್ರ ಹೆಗಡೆ ನೇತೃತ್ವದಲ್ಲಿ, ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ 'ಬಡ್ಡಿ ವ್ಯವಹಾರ' ವಿರುದ್ಧ ಹೋರಾಡುತ್ತಿರುವ ಗುರುವಾಯನಕೆರೆಯ 'ನಾಗರಿಕ ಸೇವಾ ಟ್ರಸ್ಟ್‌' ಒಂದಷ್ಟು ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿತ್ತು. ಅದು ಸ್ಥಳೀಯ ಪತ್ರಿಕೆ 'ಕರಾವಳಿ ಅಲೆ'ಯಲ್ಲಿ ಪ್ರಕಟವಾಗಿತ್ತು.

ಕಾನೂನು ರೂಪಿಸಬೇಕಾದರೇ...:

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 'ಸಮಾಚಾರ' ಎಸ್‌ಕೆಡಿಆರ್‌ಡಿಪಿಯ 'ಬಡ್ಡಿ ವ್ಯವಹಾರ'ದ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು

Also read: ‘ಧರ್ಮಸ್ಥಳ’ದ ಮೀಟರ್ ಬಡ್ಡಿ ಸಾಮ್ರಾಜ್ಯದ ಕಡಿವಾಣಕ್ಕೆ ಕಾನೂನು ರಚಿಸುವವರು ಬೇಕಾಗಿದ್ದಾರೆ!

'ಇಂದು ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಮೈಕ್ರೋಫೈನಾನ್ಸ್ ರಕ್ತ ಹೀರುವ ಉದ್ಯಮಗಳು ಎಂಬುದು ರುಜುವಾತಾಗಿದೆ. ಬಾಂಗ್ಲಾದೇಶದಲ್ಲಿ ಸಾಲ ಕಟ್ಟಲಾಗದೇ ಬಡವರು ಕಿಡ್ನಿ ಮಾರಿದ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದವು. ಈ ಹಿಂದೆ ಸಾಲಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಆಂಧ್ರ ಪ್ರದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

ಆಂಧ್ರದಲ್ಲಿ ಮೈಕ್ರೋ ಫೈನಾನ್ಸ್ ತೀವ್ರ ಸಮಸ್ಯೆಯಾಗಿ ಕಂಡು ಬಂದಿತ್ತು. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದವು. ಇದಾದ ಬಳಿಕ ಆಂಧ್ರ ಪ್ರದೇಶ ಸರಕಾರ ಇಂಥಹ ವ್ಯವಹಾರಗಳಿಗೆ ವಿಶೇಷ ಕಾನೂನನ್ನು ಜಾರಿಗೆ ತಂದಿತು (Andhra Pradesh Microfinance Institutions (Regulation of Money Lending) Act -2011).

ಆದರೆ ವಿಚಿತ್ರವೆಂದರೆ ಕರ್ನಾಟಕದಲ್ಲಿ ಇಂತಹ ಯಾವುದೇ ಕಾಯ್ದೆಗಳು ಇವತ್ತಿಗೂ ಇಲ್ಲ. ಸರಕಾರ ಈ ಕುರಿತು ಗಮನವನ್ನೂ ಹರಿಸಿಲ್ಲ. ಇದನ್ನು ಸರಕಾರ ಈ ಹೊತ್ತಲ್ಲಿ ಗಮನಿಸಬೇಕಿದೆ' ಎಂದು ದಾಖಲೆಗಳ ಸಮೇತ ವಿವರಿಸಲಾಗಿತ್ತು.

ಆದರೆ, ಇದೀಗ ಇಂತಹ ಸಣ್ಣ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ನಡೆಯುವ 'ಬಡ್ಡಿ ವ್ಯವಹಾರ'ಗಳಿಗೆ ಕಾನೂನು ರೂಪಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

'ಲಾಭ ರಹಿತ' ವ್ಯವಹಾರದ ಹಿನ್ನೆಲೆ:

ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅಧ್ಯಕ್ಷತೆಯಲ್ಲಿ ಲಾಭ ರಹಿತ ಸಂಸ್ಥೆ- ಎಸ್‌ಕೆಡಿಆರ್‌ಡಿಪಿಯನ್ನು ಹುಟ್ಟುಹಾಕಲಾಗಿದೆ. ವೀರೇಂದ್ರ ಹೆಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ ಮತ್ತು ತಮ್ಮ ಸುರೇಂದ್ರ ಕುಮಾರ್ ಸಂಸ್ಥೆಯ ಟ್ರಸ್ಟಿಗಳಾಗಿದ್ದಾರೆ.

ಎಸ್‌ಕೆಡಿಆರ್‌ಡಿಪಿ ಮೂಲಕ ಪಡೆದುಕೊಂಡ ಸಾಲವನ್ನು ಕಟ್ಟಲಾಗದೆ ತಾಳಿ ಸರ ಮಾರಿದವರು, ಅವಮಾನದಿಂದ ನೇಣಿಗೆ ಕೊರಳೊಡಿದ್ದವರು, ಸಾಲ ಕಟ್ಟದ್ದಕ್ಕೆ ಹಾಕಿದ ಧಮಕಿಗಳು, ಮನೆಯ ಸೂರಿನ ಹಂಚು ಎಳೆದ ನೂರಾರು ವಾಸ್ತವ ಕತೆಗಳು ಧರ್ಮಸ್ಥಳ ಸುತ್ತಮುತ್ತಲಿನ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಾಣಸಿಗುತ್ತವೆ. ಈ ಕುರಿತು ದಾಖಲೆಗಳಿವೆ.

ದೇಶದ ಮೈಕ್ರೋ ಫೈನಾನ್ಸ್ ಗಳಲ್ಲಿ ಎಸ್‌ಕೆಡಿಆರ್‌ಡಿಪಿ ಮೂರನೇ ಸ್ಥಾನದಲ್ಲಿದೆ ಎಂದು ‘ಸಾ-ಧನ್’ ವರದಿ ಹೇಳುತ್ತದೆ. ವೈಚಿತ್ರ್ಯದ ಸಂಗತಿ ಎಂದರೆ ದೇಶದ ಟಾಪ್ 10 ಸಂಸ್ಥೆಗಳಲ್ಲಿ 9 ಪ್ರೈವೇಟ್ ಲಿಮಿಟೆಡ್ ಗಳಾದರೆ ಇದು ಮಾತ್ರ ‘ಟ್ರಸ್ಟ್’ ಹೆಸರಿನಲ್ಲಿ, ಲಾಭ ರಹಿತ ಸರಕಾರೇತರ ಸಂಸ್ಥೆಯ ರೂಪದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಾಪನೆಗೊಂಡಿದ್ದು 1982ರಲ್ಲಿ; ಮುಂದೆ ಎಸ್‌ಕೆಡಿಆರ್‌ಡಿಪಿ ‘ಟ್ರಸ್ಟ್’ ಹೆಸರಿನಲ್ಲಿ 18 ಮಾರ್ಚ್ 1991ರಲ್ಲಿ ಬೆಳ್ತಂಗಡಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಘೋಷಣೆಯಾಗುತ್ತದೆ.

ಇದರ ಟ್ರಸ್ಟ್ ಡೀಡ್ ‘ಸಮಾಚಾರ’ದ ಬಳಿಯಲ್ಲಿದೆ. ಮುಂದೆ ಇದೇ ಟ್ರಸ್ಟ್ 15-20 ಜನರ ಸ್ವಸಹಾಯ ಸಂಘಗಳನ್ನು 1991ರಲ್ಲಿ ಆರಂಭಿಸಿತು. ಈ ಸ್ವಸಹಾಯ ಸಂಘಗಳಿಗೆ 1996ರಲ್ಲಿ ಮೊದಲ ಬಾರಿಗೆ ಸಾಲ ದೊರಕಿಸಲಾಯಿತು ಎಂದು ‘ಸಮಾಚಾರ’ ಕಳುಹಿಸಿದ್ದ ‘ಇ- ಮೇಲ್’ಗೆ ಸಂಸ್ಥೆಯ ನಿರ್ದೇಶಕರಾದ ಎಲ್.ಎಚ್.ಮಂಜುನಾಥ್ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದರು.

ಇವತ್ತು ಕರ್ನಾಟಕದ ಮೂಲೆ ಮೂಲೆ ಹಾಗೂ ಕೇರಳದ ಕೆಲವು ಭಾಗಗಳಿಗೆ ಈ ಸ್ವಸಹಾಯ ಸಂಘಗಳ ಜಾಲ ಹಬ್ಬಿಕೊಂಡಿದೆ. 2013ರ ಸೆಪ್ಟೆಂಬರ್ 30ರ ಅಂತ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಈ ಮೈಕ್ರೋ ಫೈನಾನ್ಸ್ 125 ಶಾಖೆಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿರುತ್ತದೆ.

ಅವತ್ತಿಗೆ ತಳಮಟ್ಟದ ಪ್ರತಿನಿಧಿಗಳು ಹೊರತಾಗಿಯೂ ಇದರಲ್ಲಿ ಒಟ್ಟು 5,572 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲೀವರೆಗೆ 3.6 ಲಕ್ಷ ಸಂಘಗಳಲ್ಲಿ 37 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಸದಸ್ಯರು ಸಾಲ ಪಡೆದುಕೊಂಡಿದ್ದಾರೆ ಎಂದಿದ್ದರು ಮಂಜುನಾಥ್.

ಇದರಲ್ಲಿ ಮಹಿಳಾ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದು ಶೇಕಡಾ 76.13ರಷ್ಟಿದ್ದಾರೆ. 2015-16ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 30,000 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದು ಸದ್ಯ 5,400 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿತ್ತು.

ಬಡ್ಡಿಯದ್ದೇ ಸಮಸ್ಯೆ:

ಇದರಲ್ಲಿ ಭತ್ತಕ್ಕೆ ಬೆಳೆಸಾಲ ಮತ್ತು ಮನೆಗೆ ಸಂಬಂಧಿಸಿದ ಸಾಲಗಳನ್ನು ಕ್ರಮವಾಗಿ 9 ಮತ್ತು 12.5ರ ಬಡ್ಡಿದರದಲ್ಲಿ ನೀಡಲಾಗಿದೆ ಎನ್ನುತ್ತವೆ ಎಸ್‌ಕೆಡಿಆರ್‌ಡಿಪಿ ಮಾಹಿತಿ. ಇನ್ನುಳಿದ ಸಾಲಗಳಿಗೆ ಈ ‘ಸೇವಾ ಸಂಸ್ಥೆ’ ವಿಧಿಸುತ್ತಿರುವ ಬಡ್ಡಿದರ ಶೇಕಡಾ 18; ಇದನ್ನು ಸ್ವತಃ ಸಂಸ್ಥೆಯ ನಿರ್ದೇಶಕ ಎಲ್.ಎಚ್ ಮಂಜುನಾಥ್ ಹಾಗೂ ಅಧ್ಯಕ್ಷರಾದ ವೀರೇಂದ್ರ ಹೆಗ್ಗಡೆಯವರು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಆದರೆ ನಾವು ಬ್ಯಾಂಕುಗಳಿಂದ ಶೇಕಡಾ 7-11 ಬಡ್ಡಿ ದರದಲ್ಲಿ ಸಾಲ ಪಡೆಯುತ್ತೇವೆ ಎಂದು ನಿರ್ದೇಶಕರೇ ಹೇಳುತ್ತಾರೆ. ಹೀಗಿದ್ದೂ ಕನಿಷ್ಠ ಆರರಿಂದ ಶೇಕಡಾ 9ರವರೆಗೆ ಹೆಚ್ಚಿನ ಬಡ್ಡಿದರವನ್ನು ‘ಸೇವಾ ಸಂಸ್ಥೆ’ ವಸೂಲಿ ಮಾಡುತ್ತಿದೆ. 'ಈಗ ಸ್ವಸಹಾಯ ಸಂಘಗಳು ಸದಸ್ಯರಿಗೆ ಶೇಕಡಾ 16 ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ' ಎಂದು ನಿರ್ದೇಶಕ ಮಂಜುನಾಥ್ ಹೇಳಿದ್ದರು.

ಇದಲ್ಲದೇ ಪ್ರತೀ ವಾರ 10-20 ರೂಪಾಯಿಗಳನ್ನು ಸದಸ್ಯರಿಂದ ಠೇವಣಿ ರೂಪದಲ್ಲಿ ಎಸ್‌ಕೆಡಿಆರ್‌ಡಿಪಿ ಸಂಗ್ರಹಿಸುತ್ತದೆ. 2013ರ ಸೆಪ್ಟೆಂಬರ್ ವೇಳೆಗೆ 271.59 ಕೋಟಿ ರೂಪಾಯಿಗಳ್ನು ಸಂಸ್ಥೆ ಹೀಗೆಯೇ ಸಂಗ್ರಹಿಸಿ ಬ್ಯಾಂಕಿನಲ್ಲಿ ಜಮೆ ಮಾಡಿತ್ತು. ಈ ಹಣಕ್ಕೆ ಸದಸ್ಯರಿಗೆ ಸಂಸ್ಥೆಯು ವಾರ್ಷಿಕವಾಗಿ ನೀಡುವ ಬಡ್ಡಿ ದರ ಶೇಕಡಾ 7. ಈ ಮಾಹಿತಿಗಳು ಜಾಗತಿಕ ಕಂಪೆನಿಗಳಿಗೆ ರೇಟಿಂಗ್ ನೀಡುವ ‘ಕ್ರಿಸಿಲ್ (CRISIL) ರೇಟಿಂಗ್ಸ್’ನ 2014ರ ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆ 2014-15ನೇ ಆರ್ಥಿಕ ವರ್ಷದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ 586.59 ಕೋಟಿಗಳ ಆದಾಯವನ್ನು ಪಡೆದಿದ್ದರೆ, ಇದರಲ್ಲಿ 95.5 ಕೋಟಿ ಆದಾಯ ‘ಪ್ರಗತಿ ಬಂಧು’ (ಮೈಕ್ರೋ ಫೈನಾನ್ಸ್)ವಿನಿಂದಲೇ ಬಂದಿದೆ. ಅದೇ ಆರ್ಥಿಕ ವರ್ಷದಲ್ಲಿ ಸಂಸ್ಥೆ ಗಳಿಸಿದ ನಿವ್ವಳ ಆದಾಯ ಬರೋಬ್ಬರಿ 52.91 ಕೋಟಿ ರೂಪಾಯಿ; ಇದನ್ನು ಸಂಸ್ಥೆಯ ಬ್ಯಾಲೆನ್ಸ್ ಶೀಟಿನಲ್ಲಿ ನೋಡಬಹುದು.

ಅಷ್ಟಕ್ಕೂ ಇದೊಂದು ಟ್ರಸ್ಟ್ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಮೇಲ್ನೋಟಕ್ಕೆ ಸೇವೆ ಮಾಡುತ್ತಾ, ವಾಸ್ತವದಲ್ಲಿ ವರ್ಷಕ್ಕೆ 52 ಕೋಟಿ ರೂಪಾಯಿಗೂ ಜಾಸ್ತಿ ಹಣವನ್ನು ಈ ಸಂಸ್ಥೆ ತನ್ನ ಜೇಬಿಗಿಳಿಸಿಕೊಳ್ಳುತ್ತದೆ. ಇದರಲ್ಲಿಯೇ ಈಗ, ಸದಸ್ಯರಿಗೆ 'ಲಾಭಾಂಶ ವಿತರಣೆ'ಯ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸದ್ಯ, ಆಬೇಕಿರುವುದು ಲಾಭದ ವಿತರಣೆ ಅಲ್ಲ; ಬದಲಿಗೆ ಹೆಚ್ಚಿನ ಬಡ್ಡಿ ವಿಧಿಸುತ್ತಿರುವುದಕ್ಕೆ ಕಡಿವಾಣ. ರಾಜ್ಯ ಸರಕಾರ ಸಣ್ಣ ಹಣಕಾಸು ಸಂಸ್ಥೆಗಳ ಈ ಮೀಟರ್ ಬಡ್ಡಿ ಜಾಲಕ್ಕೆ ಸಾರ್ವತ್ರಿಕ ಮಟ್ಟದಲ್ಲಿ ಕಾನೂನು ರೂಪಿಸುವುದು ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ತುರ್ತಾಗಿ ಮಾಡಬೇಕಿರುವ ಕೆಲಸವಾಗಿತ್ತು.

ಇದನ್ನೇ 'ಸಮಾಚಾರ'ದ ಸರಣಿ ತನಿಖಾ ವರದಿ ಕೂಡ ಪ್ರತಿಪಾದಿಸಿತ್ತು. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವಾಸ್ತವಕ್ಕೆ ಕುರುಡರಾಗಿ, ಎಸ್‌ಕೆಡಿಆರ್‌ಡಿಪಿ ಕಾರ್ಯಕ್ರಮದಲ್ಲಿ 'ಲಾಭಾಂಶ' ವಿತರಿಸಿ ಬಂದಿದ್ದಾರೆ. ಇವರಿಂದ ರಾಜ್ಯದ ಜನ ಇನ್ನೇನು ನಿರೀಕ್ಷೆ ಮಾಡಬಹುದು?

Also read: ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ!