samachara
www.samachara.com
ಮನೆ ಬಾಡಿಗೆಗೆ ಇದೆ; ಸಸ್ಯಹಾರಿಗಳಿಗೆ ಮಾತ್ರ: ಸೂರಿನ ವ್ಯಾಪಾರಕ್ಕೆ ಆಹಾರ ಪದ್ಧತಿಯೇ ಮಾನದಂಡ!
ಸುದ್ದಿ ಸಾಗರ

ಮನೆ ಬಾಡಿಗೆಗೆ ಇದೆ; ಸಸ್ಯಹಾರಿಗಳಿಗೆ ಮಾತ್ರ: ಸೂರಿನ ವ್ಯಾಪಾರಕ್ಕೆ ಆಹಾರ ಪದ್ಧತಿಯೇ ಮಾನದಂಡ!

ಮನೆ ಖಾಲಿ ಇದೆ; ಆದರೆ ಸಸ್ಯಹಾರಿಗಳಿಗೆ ಮಾತ್ರ...

ಹೀಗೊಂದು ಫಲಕ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಮನೆಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವಾಗ ಬಾಡಿಗೆದಾರರ ಆಹಾರ ಪದ್ಧತಿಯನ್ನೇ ಮಾನದಂಡವಾಗಿಸಿಕೊಳ್ಳುವ ಪರಿಪಾಠ ಇದು. ಕಾನೂನಿ ಅಡಿಯಲ್ಲಿ ಖಾಸಗಿ ಆಸ್ತಿಯನ್ನು ಯಾರಿಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬೇಕು ಎಂಬುದನ್ನು ಮಾಲೀಕರೇ ನಿರ್ಧರಿಸುವ ಸ್ವಾತಂತ್ರ್ಯವಿದೆ. ಹಾಗಿದ್ದೂ, 'ಸಸ್ಯಹಾರಿಗಳಿಗೆ ಮಾತ್ರ' ಎಂಬ ಮನೆಗಳ ಮಾಲೀಕರ ನಿಯಮ, ಸಾಮಾಜಿಕ ನೆಲೆಯಲ್ಲಿ ಸಮುದಾಯವನ್ನು ಅವುಗಳ ಆಹಾರ ಪದ್ಧತಿಯ ಕಾರಣಕ್ಕೇ ಒಳಗೊಳ್ಳುವ ಅಥವಾ ದೂರ ಇಡುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಇಂತಹ ಮನೆಯ ಮಾಲೀಕರು, ಅವರ 'ವೆಜ್‌ ಓನ್ಲೀ ಮನಸ್ಥಿತಿ'ಯ ಹಿಂದಿರುವ ಲಾಜಿಕ್, ಇದಕ್ಕೆ ಸಾಮಾಜಿಕ ಹೋರಾಟಗಾರರು ನೀಡುವ ವಿವರಣೆ, ಸಸ್ಯಹಾರ ಮತ್ತು ಮಾಂಸಾಹಾರಗಳ ಹಿಂದಿರುವ ವೈಜ್ಞಾನಿಕ ವಿಶ್ಲೇಷಣೆ, ಮನೆ ಮಾಲೀಕರ ಹಕ್ಕಿನ ಪರವಾಗಿ ಮಾತನಾಡುವವರ ವಾದಗಳು, ಬಾಡಿಗೆ ನೀಡುವ ವಿಚಾರದಲ್ಲಿ ಕಾನೂನಿನ ಚೌಕಟ್ಟುಗಳ ಒಳಗಿರುವ ವ್ಯಾಖ್ಯಾನಗಳು ಸೇರಿದಂತೆ ಮತ್ತಿತರ ಅಂಶಗಳನ್ನು 'ಸಮಾಚಾರ'ದ ಈ ವರದಿ ಸಮಗ್ರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಿದೆ. 

'ವೆಜ್‌ನವರೇ ಬೇಕು': 

ಬೆಂಗಳೂರು ಇವತ್ತು ಕೋಟಿ ಜನಸಂಖ್ಯೆಯನ್ನು ದಾಟಿರುವ ಮಹಾನಗರ. ಇಲ್ಲಿಗೆ ಪ್ರತಿನಿತ್ಯ ಬದುಕು ಅರಸಿ ಬರುವ ಜನರ ಹಿನ್ನೆಲೆ ಭಿನ್ನವಾಗಿದೆ. ನಾನಾ ಸಮುದಾಯಗಳ, ಆಹಾರ ಪದ್ಧತಿಗಳ ಜನ ಇಲ್ಲೊಂದು ಸೂರಿಗಾಗಿ ದುಡಿಯುತ್ತಾರೆ. ಅಥವಾ, ದುಡಿಮೆಗೆ ಪೂರಕವಾಗಿ ಸೂರಿನ ಅಗತ್ಯವನ್ನೂ ಪೂರೈಕೆ ಮಾಡಿಕೊಳ್ಳುತ್ತಾರೆ. ಹೀಗಾಗಿಯೇ, ಮನೆಗಳನ್ನು ಬಾಡಿಗೆಗೆ ಅಥವಾ ಲೀಸ್‌ಗೆ ಕೊಡಿಸುವುದು ದೊಡ್ಡ ಸಂಖ್ಯೆಯ ಮಧ್ಯವರ್ತಿಗಳಿಗೆ ಆರ್ಥಿಕ ಮೂಲವಾಗಿ ಕಾಣಿಸುತ್ತಿದೆ.

"ಏನಿಲ್ಲವೆಂದರೂ ಪ್ರತಿ ದಿನ ಒಬ್ಬರು ಅಥವಾ ಇಬ್ಬರು ಮನೆ ಬೇಕು ಎಂದು ಬರುತ್ತಾರೆ. ಅವರನ್ನು ಮೊದಲು ಕೇಳುವುದು ನೀವು ವೆಜ್ಜಾ ಇಲ್ಲಾ ನಾನ್‌ವೆಜ್ಜಾ ಎಂದು,'' ಎನ್ನುತ್ತಾರೆ ಮಧ್ಯವರ್ತಿ ನರಸಿಂಹ. ಬಸವನಗುಡಿ, ತ್ಯಾಗರಾಜನಗರ, ಶ್ರೀನಿವಾಸನಗರ, ಎನ್‌. ಆರ್‌. ಕಾಲೋನಿಗಳಲ್ಲಿ ಯಾವ ಬೀದಿಯಲ್ಲಿ, ಯಾವ ಮನೆ ಖಾಲಿ ಇದೆ ಎಂಬ ಮಾಹಿತಿ ಇವರ ಬೆರಳ ತುದಿಯಲ್ಲಿದೆ. "ಈ ಏರಿಯಾಗಳಲ್ಲಿ ನಾನ್‌ವೆಜ್‌ ಆದರೆ ಮನೆ ಸಿಗುವುದು ಕಷ್ಟ. ಹೆಚ್ಚಿನ ಮನೆ ಮಾಲೀಕರು ಬ್ರಾಹ್ಮಣರೇ ಆಗಿರುವುದರಿಂದ ಸಸ್ಯಹಾರಿಗಳೇ ಬಾಡಿಗೆದಾರರಾಗಿ ಬರಬೇಕು ಎಂಬ ಇಚ್ಚೆ ಹೊಂದಿದ್ದಾರೆ,'' ಎನ್ನುತ್ತಾರೆ ನರಸಿಂಹ.

ಗಿರಿನಗರದ ಮುಖ್ಯರಸ್ತೆಯಲ್ಲಿ ಸ್ವಂತ ಮನೆಯನ್ನು ಹೊಂದಿರುವ ಶ್ರೀಹರಿ ಹಿಂದೆ ವಿದೇಶದಲ್ಲಿ ಇದ್ದವರು. ಸ್ವತಃ ಮಾಂಸಹಾರವನ್ನು ಸೇವಿಸುವವರು. ಅವರು ಮನೆಯನ್ನು ಬದಲಿಸುವ ಸಮಯದಲ್ಲಿ ಈಗಿರುವ ಮನೆಯನ್ನು ಬಾಡಿಗೆ ನೀಡಲು ನಿರ್ಧರಿಸಿದ್ದರು. "ನನಗೆ ಆಹಾರ ಪದ್ಧತಿ ಬಗ್ಗೆ ಗೌರವ ಇದೆ. ಆದರೆ ನಾವು ಇರುವ ಏರಿಯಾದಲ್ಲಿ ಹೆಚ್ಚು ಸಸ್ಯಹಾರಿಗಳೇ ಇದ್ದಾರೆ. ಅವರೇ ಮನೆ ಬಾಡಿಗೆ ನೀಡುವಾಗ ವೆಜ್‌ನವರಿಗೆ ಮಾತ್ರವೇ ನೀಡಿ ಎಂದು ಕೋರಿಕೊಂಡರು. ಹೀಗಾಗಿ, ವೆಜ್‌ಗೆ ಮಾತ್ರ ಬಾಡಿಗೆ ಕೊಡಲು ಮುಂದಾದೆವು,'' ಎನ್ನುತ್ತಾರೆ ಅವರು.

ಇನ್ನು, ತ್ಯಾಗರಾಜನಗರದ ಇಳೀ ವಯಸ್ಸಿನ ಶೇಷಾದ್ರಿ ಕೂಡ ತಮ್ಮ ಮನೆಗೆ ಸಸ್ಯಹಾರಿಗಳೇ ಬಾಡಿಗೆಗೆ ಬರಬೇಕು ಎಂಬ ಕಾರಣಕ್ಕೆ ಹಲವು ತಿಂಗಳುಗಳಿಂದ ಕಾಯುತ್ತಿದ್ದಾರೆ. ಸರಕಾರಿ ಸೇವೆಯಿಂದ ನಿವೃತ್ತರಾಗಿರುವ ಅವರು, "ಮನೆಯಲ್ಲಿ ಮಾಂಸ ಬೇಯಿಸುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತದೆ. ಆ ಕಾರಣಕ್ಕೆ ನಾನು ಸಸ್ಯಹಾರಿಗಳಿಗೆ ಮಾತ್ರವೇ ಮನೆಯನ್ನು ನೀಡುವುದು,'' ಎಂದರು.

ಇವರ ಮನೆಯ ಪಕ್ಕದ ಬೀದಿಯಲ್ಲಿರುವ ರವಿ ಶಂಕರ್ ಮಾತ್ರ ಮನೆ ಬಾಡಿಗೆ ನೀಡುವಾಗ ಆಹಾರ ಪದ್ಧತಿ ಮುಖ್ಯವಲ್ಲ ಎನ್ನುತ್ತಾರೆ. "ಅವರ ಮನೆಯ ಅಡುಗೆ ಮನೆಯಲ್ಲಿ ಏನು ಬೇಕಾದರೂ ಬೇಯಿಸಿಕೊಳ್ಳಲಿ. ಅದರಿಂದ ನಮಗೇನೂ ಸಮಸ್ಯೆ ಇಲ್ಲ,'' ಎಂದರು ರವಿಶಂಕರ್. ಅವರು ರಾಮಕೃಷ್ಣ ಪರಮಹಂಸರ ಅನುಯಾಯಿಗಳು.

"ಆಹಾರ ಪದ್ಧತಿಯ ಕಾರಣಕ್ಕೆ ಬಾಡಿಗೆ ನೀಡದಿರುವುದು ಮನುಷ್ಯತ್ವ ಅಲ್ಲ,'' ಎಂಬುದು ಅವರು ಸ್ಪಷ್ಟ ಮಾತುಗಳು.

ವೆಜ್ ವರ್ಸಸ್ ನಾನ್‌ವೆಜ್‌: 

ಆಹಾರ ಪದ್ಧತಿ ಎಂಬುದು ಕೇವಲ ತಿನ್ನುವ ಆಹಾರಕ್ಕೆ ಮಾತ್ರವೇ ಸೀಮಿತವಾಗಿರುವ ವಿಚಾರ ಅಲ್ಲ. ಸೇವಿಸುವ ಆಹಾರದ ಮೂಲಕವೇ ಮನುಷ್ಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಅಳೆಯಲಾಗುತ್ತಿದೆ. ಅದೊಂದು ಆಹಾರ ರಾಜಕೀಯ. ನಾವೇನು ತಿನ್ನುತ್ತೀವಿ ಎಂಬುದು ನಮ್ಮ ಹಿನ್ನೆಲೆಯನ್ನೂ ಸ್ಪಷ್ಟವಾಗಿ ನಿರೂಪಿಸುತ್ತದೆ. ಆದರೆ ಮನೆಗಳನ್ನು ಬಾಡಿಗೆ ನೀಡುವಾಗ ಆಹಾರ ಪದ್ಧತಿಯನ್ನು ಕೇಳುವುದು ಜಾತಿ ಸೂಚಕ ಅಲ್ಲವೇ ಅಲ್ಲ ಎನ್ನುತ್ತಾರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವಿ. ಮಂಜುನಾಥ್.

"ಹಿಂದೂಗಳ ಪೈಕಿ, ಗೌಡರು ಹರಿಜನರಲ್ಲಿ ಹಲವರು ಸಸ್ಯಹಾರಿಗಳೂ ಆಗಿದ್ದಾರೆ. ಅಂತವರಿಗೆ ಮಾಂಸ ತಿನ್ನುವುದಿಲ್ಲ ಎಂಬ ಕಾರಣಕ್ಕೆ ಮನೆ ನೀಡಿದ ಉದಾಹರಣೆಗಳನ್ನು ನಾನು ನೋಡಿದ್ದೇನೆ. ಮನೆಗಳಲ್ಲಿ ದನದ ಮಾಂಸ, ಹಂದಿ ಮಾಂಸಗಳನ್ನು ಬೇಯಿಸುವುದರಿಂದ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತದೆ. ಈ ಕಾರಣಕ್ಕೆ ಹಲವರು ಸಸ್ಯಹಾರಿಗಳಿಗೆ ಮಾತ್ರವೇ ಮನೆ ಬಾಡಿಗೆ ನೀಡುತ್ತಾರೆ. ಇದರಲ್ಲಿ ಜಾತಿಯತೆಯ ಅಂಶ ಏನಿಲ್ಲ,'' ಎನ್ನುತ್ತಾರೆ ಅವರು.

"ಇವತ್ತು ಬ್ರಾಹ್ಮಣರಲ್ಲೂ ಮಾಂಸ ತಿನ್ನುವವರು, ಕುಡಿಯುವವರು ಇದ್ದಾರೆ. ಆದರೆ ಅವರು ಮನೆಗಳಲ್ಲಿ ಬೇಯಿಸಿ ತಿನ್ನುವುದಿಲ್ಲ ಅಷ್ಟೆ,'' ಎಂದವರು ಮಾಹಿತಿ ನೀಡುತ್ತಾರೆ.

ಯಾರಿಗೆ ಮನೆ ಬಾಡಿಗೆ ನೀಡಬೇಕು ಎಂಬುದು ಆಯಾ ಮಾಲೀಕರ ಹಕ್ಕು ಎನ್ನುತ್ತಾರೆ ಬಿಜೆಪಿ ಸಂಸದ ಪ್ರತಾಪ್ ಸಿಂಹ.

"ತಮ್ಮ ಮನೆಗೆ ಯಾರು ಬಾಡಿಗೆಗೆ ಬರಬೇಕು ಎಂದು ನಿರ್ಧರಿಸುವ ಹಕ್ಕು ಮಾಲೀಕರದ್ದು. ಅದೇ ಮನೆಯ ಮುಂದಿನ ಬೀದಿಯಲ್ಲೂ ಸಸ್ಯಹಾರ ತಿನ್ನಬೇಕು ಎಂದರೆ ತಪ್ಪಾಗುತ್ತದೆ. ಹೇಗೆ ದನ ತಿನ್ನುವುದನ್ನು ಕೆಲವರು ಅವರ ಹಕ್ಕು ಎಂದು ಪ್ರತಿಪಾದಿಸುತ್ತಾರೋ, ಹಾಗೆಯೇ ಯಾರಿಗೆ ಮನೆ ಬಾಡಿಗೆ ನೀಡಬೇಕು ಎಂಬುದು ಮಾಲೀಕರ ಹಕ್ಕಾಗಿ ಇರುತ್ತದೆ,'' ಎನ್ನುತ್ತಾರೆ ಸಿಂಹ.

ಮನಸ್ಥಿತಿಗಳು ಅನಾವರಣ: 

ಆದರೆ, ಈ ವಾದಗಳನ್ನು ತಳ್ಳಿಹಾಕುವ ಬಹುಜನ ಸಮಾಜ ಪಕ್ಷದ ಪ್ರೊ. ಹರಿರಾಮ್‌, "ಮನೆ ಬಾಡಿಗೆ ನೀಡುವಾಗ ಆಹಾರ ಪದ್ಧತಿಯನ್ನು ಮಾನದಂಡವಾಗಿ ಇಟ್ಟುಕೊಳ್ಳುವುದು ನಮ್ಮ ಸಮಾಜದಲ್ಲಿರುವ ಜಾತೀಯತೆಯ ಪರೋಕ್ಷ ಅಭಿವ್ಯಕ್ತಿ,'' ಎನ್ನುತ್ತಾರೆ.

"ಆಹಾರಗಳಲ್ಲಿ ಕೆಲವು ಕೆಟ್ಟ ವಾಸನೆ ಬರುತ್ತವೆ ಎಂಬುದೇ ಅಮಾನವೀಯ ಮನಸ್ಥಿತಿ. ಮೂಲಂಗಿ ಕೂಡ ಕೆಟ್ಟ ವಾಸನೆ ಹೊಂದಿರುವ ತರಕಾರಿ. ಇವತ್ತು ಸಮಾಜದಲ್ಲಿ ಬುದ್ಧಿವಂತರು, ವಿದ್ಯಾವಂತರು ಎನ್ನಿಸಿಕೊಂಡ ಜನರ ಇಂತಹ ಮನಸ್ಥಿತಿಯನ್ನು ಗಮನಿಸಬೇಕು. ಸಂವಿಧಾನದ ಅಡಿಯಲ್ಲಿ ಜಾತಿಯತೆಯ ವಿರುದ್ಧ ಕಾನೂನು ಬಿಗಿಯಾಗಿರುವುದರಿಂದಾಗಿ ಇಂತಹ ಪರೋಕ್ಷ ಕ್ರಮಗಳನ್ನು ಅವರು ತೆಗೆದುಕೊಳ್ಳುತ್ತಿದ್ದಾರೆ ಅಷ್ಟೆ. ಮಾಂಸಾಹಾರವನ್ನು ತಿನ್ನುವವರು ಯಾರು ಎಂಬುದು ಎಲ್ಲಿರಿಗೂ ಗೊತ್ತು. ಅವರನ್ನು ದೂರ ಇಡಲು ಆಹಾರ ಪದ್ಧತಿಯ ಮೂಲಕ ಮನೆ ಬಾಡಿಗೆ ನೀಡುವುದು ಒಂದು ನೆಪ,'' ಎನ್ನುತ್ತಾರೆ ಹರಿರಾಮ್.

ಆಹಾರ ಪದ್ಧತಿಗಳ ಕುರಿತು ವೈಜ್ಞಾನಿಕ ದೃಷ್ಟಿಕೋನ ನೀಡುವ ಆಹಾರ ತಜ್ಞ ಕೆ. ಸಿ. ರಘು, ಮಾಂಸಾಹಾರ ಮತ್ತು ಸಸ್ಯಹಾರ ಎಂಬುದರ ನಡುವೆ ಇರುವ ತೆಳುವಾದ ಗೆರೆಯನ್ನು ಶೋಧಿಸುತ್ತಾರೆ.

"ಸಸ್ಯಾಹಾರದ ಪರವಾಗಿ ಹೋರಾಟ ಮಾಡುವವರು ಹಾಲನ್ನೂ ಕೂಡ ಮಾಂಸದ ದ್ರವ ರೂಪ ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಜೇನುತುಪ್ಪ ಶುದ್ಧ ಮಾಂಸಾಹಾರ. ಮನುಷ್ಯನ ದೇಹದಲ್ಲಿ ಇರುವ ನೂರು ಟ್ರಿಲಿಯನ್ ಜೀವಕೋಶಗಳಲ್ಲಿ ಶೇ. 90ರಷ್ಟು ಇರುವುದು ಬ್ಯಾಕ್ಟೀರಿಯಾಗಳು. ಇಂತಹ ಸಮಯದಲ್ಲಿ ನಾವು ಯಾವುದು ಸಸ್ಯಹಾರ, ಯಾವುದು ಮಾಂಸಹಾರ ಎಂದು ಹೇಳುವುದು ಕಷ್ಟ. ಆಹಾರ ಎಂಬುದು ಕೇವಲ ಆಹಾರ ಮಾತ್ರವಲ್ಲ, ಅದು ರಾಜಕೀಯವೂ ಹೌದು,'' ಎನ್ನುತ್ತಾರೆ ರಘು.

ಮನೆ ಬಾಡಿಗೆಗೆ ನೀಡುವಾಗ ಇರುವ ಕಾನೂನಿನ ಚೌಕಟ್ಟುಗಳ ಕುರಿತು ಮಾತನಾಡುವ ಹಿರಿಯ ವಕೀಲ ಬಿ. ಟಿ. ವೆಂಕಟೇಶ್, "90ರ ದಶಕದಲ್ಲಿ ಬಾಡಿಗೆ ನಿಯಂತ್ರಣ ಕಾಯ್ದೆ ಇತ್ತು. ಈ ಸಮಯದಲ್ಲಿ ಹೆಚ್ಚು ಮನೆಗಳನ್ನು ಹೊಂದಿರುವ ಮಾಲೀಕರು ರೆಂಟ್‌ ಕಂಟ್ರೋಲರ್ ಕೆಳಗೆ ಬರುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ರೆಂಡ್ ಕಂಟ್ರೋಲರ್‌ ಮನೆಗಳನ್ನು ನೀಡುವ ಕೆಲಸ ಮಾಡುತ್ತಿದ್ದರು. ಆ ಕಾಯ್ದೆಗೆ ತಿದ್ದುಪಡಿ ಬಂದ ಮೇಲೆ ಈಗ ಮನೆ ಬಾಡಿಗೆ ನೀಡುವುದು ಮಾಲೀಕರ ಸಂಪೂರ್ಣ ಹಕ್ಕಾಗಿದೆ. ಸ್ವಂತ ಆಸ್ತಿಯನ್ನು ಯಾರಿಗೆ ಬಾಡಿಗೆ ಅಥವಾ ಲೀಸ್‌ಗೆ ನೀಡಬೇಕು ಎಂದು ಅವರೇ ನಿರ್ಧರಿಸಲು ಕಾನೂನಿನಲ್ಲಿ ಅವಕಾಶ ಇದೆ,'' ಎನ್ನುತ್ತಾರೆ ಅವರು.

ಬಾಡಿಗೆ ನೀಡಲು ಮಾನದಂಡಗಳನ್ನು ಕಾನೂನು ನಿರ್ಧಾರ ಮಾಡುವುದಿಲ್ಲವಾದರೂ, ಮಾಲೀಕರೇ ತೀರ್ಮಾನ ಮಾಡಿದ್ದಾರೆ. ಅದರಲ್ಲಿ ಆಹಾರ ಪದ್ಧತಿ ಪ್ರಮುಖವಾದುದ್ದು. ಈ ಮೂಲಕ ಸಸ್ಯಹಾರಿಗಳೆಲ್ಲರೂ ಒಂದು ಕಡೆಗಳಲ್ಲಿ, ಮಾಂಸಹಾರಿಗಳು ಇನ್ನೊಂದು ಕಡೆಗಳಲ್ಲಿ ವಿಭಜನೆಗೊಂಡು ಬದುಕುವ ಸಾಧ್ಯತೆ ಇದೆ. ಇದು 'ನಾವೆಲ್ಲ ಒಂದು' ಎಂಬ ಸಮಾಜದ ಒಳಗೇ ಎರಡು ಪ್ರತ್ಯೇಕ ಸಮಾಜಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ವಿಚಿತ್ರವಾದ ವಿಭಜನೆಯೊಂದನ್ನು ಪರೋಕ್ಷವಾಗಿ ಆರಂಭವಾಗಿದೆ. ಮತ್ತು, ಈ ವಿಭಜನೆ ಪರೋಕ್ಷವಾಗಿ ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಸೃಷ್ಟಿಯಾಗುವ ಅಪಾಯವೂ ಇದೆ.