samachara
www.samachara.com
‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!
ಸುದ್ದಿ ಸಾಗರ

‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

'#MeToo ಅಥವಾ #ನಾನೂಕೂಡ'... ಹೀಗೊಂದು ಹ್ಯಾಶ್‌ಟ್ಯಾಗ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹಾಲಿವುಡ್‍ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಕೆಲವು ನಟಿಯರು ಕೇಸು ದಾಖಲಿಸಿದ್ದರು. ದೂರು ದಾಖಲಿಸಿದವರಿಗೆ ಬೆಂಬಲ ನೀಡುವ ಸಲುವಾಗಿ ಹಲವು ಖ್ಯಾತ ನಟಿಯರು '#MeToo' ಬಳಸಿ, ತಮ್ಮ ಅನುಭವಗಳನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡತೊಡಗಿದರು.

ಅದಕ್ಕೀಗ ಪ್ರಪಂಚದಾದ್ಯಂತ ಮಹಿಳಾ ಸಮುದಾಯವು ಸ್ಪಂದಿಸಲು ಆರಂಭಿಸಿದೆ. ಕರ್ನಾಟಕ ಕೂಡ ಹೊರತಾಗಿಲ್ಲ.ಈ 'ನಾನೂಕೂಡ' ಎಂಬ ಹ್ಯಾಶ್‌ಟ್ಯಾಗ್‌ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಕೆಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತವೆ. ಹಾಗೆ ನೋಡಿದರೆ, 'ಮೀ ಟೂ' ಅಥವಾ 'ನಾನೂ ಕೂಡ' ಎಂಬ ಅಭಿಯಾನ ಆರಂಭವಾಗಿದ್ದು, ಹ್ಯಾಶ್‌ಟ್ಯಾಗ್‌ಗಳೇ ಇಲ್ಲದ ದಿನಗಳಲ್ಲಿ; ಸುಮಾರು 10 ವರ್ಷಗಳ ಹಿಂದೆ.

ಕಪ್ಪು ಜನಾಂಗದ ಮಹಿಳೆ ತರನಾ ಬುರ್ಕೆ ಎಂಬಾಕೆ ತಾನು ಕಟ್ಟಿದ ಯುವ ಸಂಘಟನೆ 'ಜಸ್ಟ್‌ ಬಿ ಇಂಕ್‌'ನ ಬ್ಯಾನರ್‌ ಕೆಳಗೆ 'ನಾನೂ ಕೂಡ' ಎಂಬ ಅಭಿಯಾನವನ್ನು 2007ರಲ್ಲಿ ಹುಟ್ಟುಹಾಕಿದರು. ಇತ್ತೀಚೆಗೆ ಮತ್ತೆ 'ಮೀ ಟೂ' ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ನಂತರ 'ಎಬೋನಿ ಮ್ಯಾಗ್ಸೀನ್‌'ಗೆ ನೀಡಿದ ಸಂದರ್ಶನದಲ್ಲಿ 44 ವರ್ಷದ ಬುರ್ಕೆ ತಮ್ಮ ಹಳೆಯ ಅಭಿಯಾನದ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.

"ಇದನ್ನು (ನಾನೂ ಕೂಡ ಅಭಿಯಾನ) ವೈರಲ್‌ ಮಾಡಲು ನಾನು ಸೃಷ್ಟಿಸಿರಲಿಲ್ಲ. ಇವತ್ತು ಸೃಷ್ಟಿಯಾಗಿರುವ ಹ್ಯಾಶ್‌ಟ್ಯಾಗ್‌ ನಾಳೆಗೆ ಮರೆತು ಹೋಗುತ್ತದೆ,'' ಎಂದು ಸಂದರ್ಶನದಲ್ಲಿ ಬುರ್ಕೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಲೈಂಗಿಕ ಕಿರುಕುಳಕ್ಕೆ ಗುರಿಯಾದ ಮಹಿಳೆಯೊಬ್ಬಳು ಅದೇ ಸ್ಥಿತಿಯಲ್ಲಿರುವ ಇನ್ನೊಬ್ಬ ಮಹಿಳೆಗೆ ಮಾನಸಿಕ ಸ್ಥೈರ್ಯ ನೀಡುವ ಹಿನ್ನೆಲೆಯಲ್ಲಿ 'ನಾನೂ ಕೂಡ' ಎಂಬ ಅಭಿಯಾನವನ್ನು ತಳಮಟ್ಟದಲ್ಲಿ ಆರಂಭಿಸಲಾಗಿತ್ತು.

ಈ ಮೂಲಕ ಸಂತ್ರಸ್ಥ ಮಹಿಳೆಗೆ ಆದ ಮಾನಸಿಕ ಗಾಯವನ್ನು ವಾಸಿ ಮಾಡುವ ಪ್ರಯತ್ನ ಮಾಡಲಾಗಿತ್ತು,'' ಎಂದವರು ಹೇಳಿದ್ದಾರೆ. ಹಾಲಿವುಡ್‌ ಪ್ರಪಂಚದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ನಿರ್ಮಾಪಕರೊಬ್ಬರ ಲೈಂಗಿಕ ಕಿರುಕುಳ ಪ್ರಕರಣ ಮಹಿಳೆಯರ ಅಭಿಪ್ರಾಯವನ್ನು ಹಂಚಿಕೊಳ್ಳಲು ಪ್ರಚೋದನೆ ನೀಡಿದ್ದು ಬೆಳವಣಿಗೆ. ಇದರ ಕುರಿತು ಮಾತನಾಡಿದ ಬುರ್ಕೆ, "ಸದ್ಯ ಏನು ನಡೆಯುತ್ತಿದೆಯೋ, ಅದು ಹೆಚ್ಚು ಪರಿಣಾಮಕಾರಿಯಾಗಿದೆ,'' ಎಂದಿರುವ ಅವರು, "ನಾನೂ ಕೂಡ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳದ ಕುರಿತು ಮುಕ್ತವಾಗಿ ಮಾತನಾಡುತ್ತಿರುವ ಮಹಿಳೆಯರನ್ನು ನಾನು ಗೌರವಿಸುತ್ತೇನೆ.

ಆದರೆ ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ. ಅದೇನೆಂದರೆ, ನಾನೂ ಕೂಡ ಎಂಬುದು ನಮ್ಮ ಜತೆ ನಾವು ಮಾತನಾಡುವ ಪ್ರಕ್ರಿಯೆ. ಈ ಮೂಲಕ ನಮ್ಮಂತೆಯೇ ಕಿರುಕುಳಕ್ಕೆ ಒಳಗಾದವರ ಸಮೂಹದಲ್ಲಿ ಗುತಿಸಿಕೊಳ್ಳುವ ಪ್ರಕ್ರಿಯೆ,'' ಎಂದಿದ್ದಾರೆ ಬುರ್ಕೆ. 'ಡೆಮಾಕ್ರಸಿ ನೌ'ಗೆ ನೀಡಿದ ಸಂರ್ಶನದಲ್ಲಿ ಬುರ್ಕೆ 'ನಾನೂ ಕೂಡ ಅಭಿಯಾನ'ದ ಕುರಿತು ಆಲೋಚನೆಗೆ ದೂಡುವಂತಹ ಮಾತೊಂದನ್ನು ಹೇಳಿದ್ದಾರೆ. "ಸಹಾನುಭೂತಿಯ ಮೂಲಕ ಸಬಲೀಕರಣ ನೀಡುವುದು 'ಮೀ ಟೂ ಅಭಿಯಾನದ' ಮೂಲ ಆಶಯವಾಗಿತ್ತು,'' ಎಂದಿದ್ದಾರೆ.

ಸಾಮಾಜಿಕ ಅಭಿಯಾನ:

ಲೈಂಗಿಕ ಕಿರುಕುಳ ಎಂಬುದು ಒಳಗಾದವರಿಗೆ ಒಡಲಾಳದ ಸಂಕಟವಾದರೆ, ಸಮಾಜದ ಪಾಲಿಗೆ ಚರ್ಚೆ ನಡೆಸಲು ಮುಕ್ತವಾಗಿಲ್ಲದ ವಿಚಾರ. ಅದರಲ್ಲೂ ತೃತೀಯ ಜಗತ್ತಿನ ದೇಶಗಳಲ್ಲಿ ನಡೆಯುವ ಮಹಿಳೆಯರ, ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಕಾನೂನಿನ ಚೌಕಟ್ಟಿನಲ್ಲಿಯೂ ಅಂಕೆಗೆ ಸಿಗದ ಪರಿಸ್ಥಿತಿ ಇದೆ.

ಒಂದು ಕಡೆ ಸಮಾಜವೇ ಈ ಕುರಿತು ಮುಗುಮ್ಮಾಗಿ ಉಳಿದಿದ್ದರೆ, ಮತ್ತೊಂದು ಕಡೆ ಲೈಂಗಿಕ ಕಿರುಕುಳಕ್ಕೆ ಒಳಗಾದವರಿಗೆ ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣವೂ ಇಲ್ಲದಂತಹ ಸ್ಥಿತಿ ಇದೆ.ಒಂದು ವೇಳೆ, ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳಗಳನ್ನು ಹೇಳಿಕೊಂಡರೂ, ಅದಕ್ಕೆ ಸಮಾಜದ ನೀಡುವ ಪ್ರತಿಕ್ರಿಯೆ ಹೇಗಿರಲಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಕರ್ನಾಟಕದಲ್ಲಿಯೇ ಸಿಗುತ್ತವೆ.

ಹರತಾಳು ಹಾಲಪ್ಪ ಪ್ರಕರಣದಲ್ಲಿ ದೂರು ದಾಖಲಿಸಲು ಬಂದ ಶಿವಮೊಗ್ಗ ಮೂಲದ ಮಹಿಳೆ, ರೇಣುಕಾಚಾರ್ಯ ಪ್ರಕರಣದಲ್ಲಿ ದೂರು ನೀಡಿದ ಜಯಲಕ್ಷ್ಮಿ, ಮೈಸೂರಿನ ರಾಮ್‌ದಾಸ್‌ ಪ್ರಕರಣದಲ್ಲಿ ದೂರು ನೀಡಿದ ಮಹಿಳೆ, ರಾಮಚಂದ್ರಾಪುರ ರಾಘವೇಶ್ವರ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ಮಹಿಳೆಯರು ಹೀಗೆ ಹಲವು ಪ್ರಕರಣಗಳಲ್ಲಿ ಸಾರ್ವಜನಿಕವಾಗಿ ತಮ್ಮ ಮೇಲಾಗಿರುವ ಕಿರುಕುಳವನ್ನು ಮುಂದಿಟ್ಟಿರುವುದು ಮಾತ್ರವಲ್ಲ, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯದ ಬೇಡಿಕೆ ಮುಂದಿಟ್ಟ ಮಹಿಳೆಯರು ಇವತ್ತೇನಾಗಿದ್ದಾರೆ? ಮತ್ತು ಅವರನ್ನು ಸಮಾಜ ಹೇಗೆ ಸ್ವೀಕರಿಸಿದೆ ಎಂಬುದು ಮುಖ್ಯ.

"ಜನರ ನೆನಪಿನ ಶಕ್ತಿ ತುಂಬಾ ಕಡಿಮೆ. ಇವತ್ತು ನಾನೂ ಕೂಡ ಎಂಬ ಅಭಿಯಾನ ಹುಟ್ಟಿದೆ. ಅದೂ ಕೂಡ ಅಷ್ಟೇ ವೇಗವಾಗಿ ತೆರೆಮರೆಗೆ ಸರಿಯಲಿದೆ. ನನಗಂತೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿರುವ ಈ ಬೆಳವಣಿಗೆ ಖುಷಿಗಿಂತ ಹೆಚ್ಚಾಗಿ ಆತಂಕ ಮೂಡಿಸುತ್ತದೆ,'' ಎನ್ನುತ್ತಾರೆ ಕನ್ನಡದ ಹಿರಿಯ ಪತ್ರಕರ್ತೆಯೊಬ್ಬರು.

"ಕೆಲವೊಮ್ಮೆ ಸತ್ಯ ಹೇಳುವುದು ಕೂಡ ವಿವಾದದ ರೂಪ ಪಡೆಯುತ್ತದೆ,'' ಎನ್ನುವ ಅವರು ಹೆಸರನ್ನು ಗೌಪ್ಯವಾಗಿಡಲು ತಿಳಿಸಿದರು. "ನಾನೂ ಕೂಡ ಎಂದು ಸಾರ್ವಜನಿಕವಾಗಿ ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯಗಳನ್ನು ದಾಖಲು ಮಾಡುವುದರಿಂದ ಏನು ಬದಲಾವಣೆ ಬರಲು ಸಾಧ್ಯ. ಈಗಾಗಲೇ ನೇಮ್ ಅಂಡ್ ಶೇಮ್ ಜಾರಿಯಲ್ಲಿದೆ. ಸಾಮಾಜಿಕ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು, ಅದಕ್ಕಿಂತ ಹೆಚ್ಚಾಗಿ ಮಹಿಳೆಯರ ಸಬಲೀಕರಣವಾಗಬೇಕಿದೆ. ಅದಕ್ಕೆ ಬುರ್ಕೆ ಹೇಳುವಂತೆ ಸಹಾನೂಭೂತಿಯ ಅಗತ್ಯ ಹೆಚ್ಚಿದೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತದೆ ಎಂದು ನನಗೆ ಅನ್ನಿಸುವುದಿಲ್ಲ,'' ಎನ್ನುತ್ತಾರೆ ಅವರು.

ಒಟ್ಟಾರೆ, ಹತ್ಯು ವರ್ಷಗಳ ಹಿಂದೆ ತಳಮಟ್ಟದಲ್ಲಿ ಆರಂಭವಾದ ಅಭಿಯಾನ ಇವತ್ತಿನ ಸನ್ನಿವೇಶದಲ್ಲಿ ಹೇಗೆಲ್ಲಾ ರೂಪಗಳನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಮೀ ಟೂ ತಾಜಾ ಉದಾಹರಣೆ. ಆದರೆ, ಅದೇ ವೇಳೆ ಈ ಸಾಮಾಜಿಕ ಜಾಲತಾಣಗಳ ಅಭಿಯಾನಗಳ ಮಿತಿಗಳನ್ನೂ ಗಮನಿಸುವ ಅಗತ್ಯವೂ ಇದೆ.