samachara
www.samachara.com
ಆತ್ಮಹತ್ಯೆಯ ಹಾದಿಯಲ್ಲಿ ದೇಶ ಕಾಯುವ ಸೈನಿಕ: ಅಂಕಿ ಅಂಶಗಳು ಮೂಡಿಸುತ್ತಿವೆ ಆತಂಕ
ಸುದ್ದಿ ಸಾಗರ

ಆತ್ಮಹತ್ಯೆಯ ಹಾದಿಯಲ್ಲಿ ದೇಶ ಕಾಯುವ ಸೈನಿಕ: ಅಂಕಿ ಅಂಶಗಳು ಮೂಡಿಸುತ್ತಿವೆ ಆತಂಕ

ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಸಾವನ್ನಪ್ಪುತ್ತಿರುವ ಸೈನಿಕರ ಸಂಖ್ಯೆಗಿಂತ; ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಯೋಧರ ಸಂಖ್ಯೆ ಹೆಚ್ಚು. ಇದು ಭಾರತದ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಸೇನಾ ವಿಭಾಗಗಳ ಅಂತರಂಗದ ಆತಂಕಕಾರಿ ಮಾಹಿತಿ.

ಇದನ್ನು

ಬಿಚ್ಚಿಟ್ಟಿದ್ದು ಬೇರೇ ಯಾರೂ ಅಲ್ಲ; ಸ್ವತಃ ರಕ್ಷಣಾ ಇಲಾಖೆ ನೀಡಿರುವ ಅಂಕಿ ಅಂಶಗಳು ದೇಶವನ್ನು ಕಾಯುವ ಸೈನಿಕರ ನಡುವೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಗಂಭೀರ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆ. ಇಲಾಖೆಯು ನೀಡಿರುವ ಅಂಕಿ ಅಂಶಗಳ ಪ್ರಕಾರ, ಜ. 2014ರಿಂದ ಮಾರ್ಚ್‌ 2017ರವರೆಗೆ ಒಟ್ಟು 348 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ, 1,185 ದಿನಗಳಲ್ಲಿ 348 ಸೈನಿಕರು ತಮ್ಮ ಮಿಲಿಟರಿ ಸೇವೆಯಿಂದ ಮಾತ್ರವಲ್ಲ; ಶಾಶ್ವತವಾಗಿ ಬದುಕಿಗೇ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಪ್ರತಿ ಮೂರು ದಿನಗಳಿಗೆ ಒಬ್ಬ ಸೈನಿಕ ಆತ್ಮಹತ್ಯೆ ಮಾಡಿಕೊಂಡಿರುವ ಈ ಬೆಳವಣಿಗೆ ಸೇನಾಪಡೆಗಳಲ್ಲಿನ ಜೀವನ ಕ್ರಮದ ಬಗ್ಗೆ ಹೊಸ ಆಯಾಮವನ್ನು ನೀಡುತ್ತಿದೆ.

ಹಾಗಂತ ಇದು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರದ ಬಂದ ನಂತರ ಆರಂಭಗೊಂಡಿರುವ ವಿದ್ಯಮಾನವೇನಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹೊಸತರಲ್ಲಿ, ಲೋಕಸಭೆಯಲ್ಲಿ ಮಾತನಾಡಿದ್ದ ಅಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಸೇನಾಪಡೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಅಂಕಿ ಅಂಶಗಳನ್ನು ನೀಡಿದ್ದರು. '2009ರಿಂದ 2013ರ ನಡುವೆ, ಒಟ್ಟು 597 ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ' ಎಂದು ಜೇಟ್ಲಿ ತಿಳಿಸಿದ್ದರು.

ಈ ಸಮಯದಲ್ಲಿ ಮಾತನಾಡಿದ್ದ ಅವರು, "ಸರಕಾರ ಸೇನಾ ಪಡೆಗಳಲ್ಲಿ ಕೆಲಸ ಮಾಡುವವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಆರೋಗ್ಯಕರವಾದ ಕೆಲಸದ ವಾತಾವರಣ ನಿರ್ಮಾಣ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ,'' ಎಂಬ ಭರವಸೆಯನ್ನು ನೀಡಿದ್ದರು. ಈ ಸಮಯದಲ್ಲಿ ಸರಕಾರ ತೆಗೆದುಕೊಳ್ಳುವ ಕ್ರಮಗಳ ಕುರಿತು ಇನ್ನಷ್ಟು ವಿವರಗಳನ್ನು ನೀಡಿದ್ದ ಜೇಟ್ಲಿ, "ಸೇನಾಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಜೀವನಮಟ್ಟವನ್ನು ಸುಧಾರಿಸಲು ಅಗತ್ಯ ನೆರವು ನೀಡಲಾಗುವುದು. ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು. ಸೈನಿಕರ ಕುಟುಂಬ ವರ್ಗಕ್ಕೆ ಸರಕಾರ ಸಹಾಯ ಮಾಡಲಾಗುವುದು. ರಜೆ ನೀಡುವ ವ್ಯವಸ್ಥೆಯನ್ನು ಸುಧಾರಿಸಲಾಗುವುದು. ಮನಶಾಸ್ತ್ರಜ್ಞರ ಜತೆ ಸಮಾಲೋಚನೆಗೆ ಅನುವು ಮಾಡಿಕೊಡಲಾಗುವುದು. ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಲಾಗುವುದು,'' ಎಂದು ಜೇಟ್ಲಿ ಹೇಳಿದ್ದರು.

ಆದರೆ, ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳು ಕಳೆಯುತ್ತಿವೆ. ಸೇನಾಪಡೆಗಳಲ್ಲಿ ಕೆಳಹಂತದ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. ಜತೆಗೆ, ಸಹೋದ್ಯೋಗಿಗಳ ನಡುವೆ ಕಾಳಗಗಳು, ಮೇಲಾಧಿಕಾರಿಗಳನ್ನು ಕೊಲ್ಲುವ ಘಟನೆಗಳೂ ವರದಿಯಾಗುತ್ತಿವೆ.

ದೇಶಪ್ರೇಮದ ಸರಕು:

ಸದ್ಯ, ದೇಶಪ್ರೇಮ ಎಂಬುದು ರಾಜಕೀಯ ಸರಕು. ದೇಶಪ್ರೇಮಕ್ಕೂ, ದೇಶದ ಸೇನಾಪಡೆಗಳಿಗೂ ತಳಕು ಹಾಕುವ ಕೆಲಸವನ್ನು ಇತರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ತುಸು ಹೆಚ್ಚೇ ಮಾಡಿಕೊಂಡು ಬಂದಿದೆ. ವೀರಾವೇಶದ ಭಾಷಣಗಳಿಗೆ ಸೈನಿಕರನ್ನು ಬಳಸಿಕೊಳ್ಳುವುದು ಬಲಪಂಥೀಯ ಮನಸ್ಥಿತಿಯ ಭಾಗವಾಗಿ ಹೋಗಿದೆ. ಬಲಪಂಥೀಯ ವಿಚಾರಗಳನ್ನು ಪ್ರತಿನಿಧಿಸುವ ಬಿಜೆಪಿ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ ನಂತರವೂ, ಸೇನಾಪಡೆಗಳ ಆಂತರಿಕ ಪರಿಸ್ಥಿತಿ ಬದಲಾಗಿಲ್ಲ; ಬದಲಿಗೆ, ಇನ್ನಷ್ಟು ಬಿಗಡಾಯಿಸಿದೆ ಎಂಬುದು ಗಮನಾರ್ಹ.

ಕೆಲವು ತಿಂಗಳುಗಳ ಹಿಂದೆ, ಅರೆಸೇನಾಪಡೆಯ ಸೈನಿಕರೊಬ್ಬರು ತಮಗೆ ನೀಡುವ ಕಳಪೆ ಗುಣಮಟ್ಟದ ಆಹಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅದು ರಾಷ್ಟ್ರದ ಗಮನ ಸೆಳೆದಿತ್ತು. ಈ ಸಮಯದಲ್ಲಿ, ರಕ್ಷಣಾ ಇಲಾಖೆಯು ಆ ಸೈನಿಕ ಮಾಡಿದ ಆರೋಪಗಳನ್ನು ಗಣನೆಗೆ ತೆಗೆದುಕೊಳ್ಳುವ ಬದಲಿಗೆ, ಆತನನ್ನೇ ಶಿಕ್ಷೆಗೆ ಗುರಿಪಡಿಸಿ ವರ್ಗಾವಣೆ ಮಾಡಿತ್ತು. ಬಿಜೆಪಿ ನಾಯಕ, ಕೇಂದ್ರ ಸಚಿವ ರಾಮದಾಸ್ ಅತಾವಲೆ, 'ಗುಣಮಟ್ಟದ ರಮ್ ಕುಡಿಯಲು ಸೇನೆಯನ್ನು ಸೇರಿ' ಎಂದು ದಲಿತ ಯುವಕರಿಗೆ ಉಪದೇಶ ನೀಡಿದ್ದರು. ಇಂತಹ ಅಪಸವ್ಯಗಳ ಆಚೆಗೂ ಸೇನಾಪಡೆಗಳಲ್ಲಿ ಯೋಧರ ಮಾನಸಿಕ ಒತ್ತಡಗಳ ಕುರಿತು ಸಾಕಷ್ಟು ಗಂಭೀರ ಅಧ್ಯಯನಗಳು ನಡೆದಿವೆ.

ಇದೇ ವರ್ಷ, ತಾಂಜಾವೂರಿನ ಪೆರಿಯಾರ್‌ ಮನಿಯಾಮೈ ವಿಶ್ವವಿದ್ಯಾನಿಲಯದ ವಿ. ಸುಭ್ರಮಣಿಯನ್ ಹಾಗೂ ಕೆವಿಆರ್‌ ರಾಜೇಂದ್ರನ್‌ ಎಂಬುವವರು ಸೇನಾಪಡೆಗಳಲ್ಲಿ, ಅದರಲ್ಲೂ ವಿಶೇಷವಾಗಿ ವಾಯುಸೇನೆಯಲ್ಲಿ ಕೆಲಸ ಮಾಡುವವರ ಒತ್ತಡಗಳ ಕುರಿತು

ವೊಂದನ್ನು ಮಾಡಿದ್ದರು. '2007ರಿಂದ 2010ರ ನಡುವೆ 368 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಸಾವನ್ನಪ್ಪಿರುವ ಸೈನಿಕರ ಸಂಖ್ಯೆ 208. ಪ್ರತಿ ವರ್ಷ 15ರಿಂದ 30 ಸೈನಿಕರು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆಗಳೂ ವರದಿಯಾಗುತ್ತಿವೆ. ಆತಂಕದ ವಿಚಾರ ಏನೆಂದರೆ, ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದವರು ಮತ್ತೆ ಯತ್ನ ನಡೆಸುವ ಸಾಧ್ಯತೆಯೂ ಇದೆ. ಇತ್ತೀಚಿನ ದಿನಗಳಲ್ಲಿ ಸೇನಾಪಡೆಗಳಲ್ಲಿ ವ್ಯಾಪಕವಾಗುತ್ತಿರುವ ಈ ಟ್ರೆಂಡ್‌ಗೆ ಮೂಲ ಕಾರಣ ಕೆಲಸದ ಒತ್ತಡ' ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕೆಲವು ದಿನಗಳ ಹಿಂದೆ, ಜಮ್ಮು ಕಾಶ್ಮೀರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೇನಾ ಪಡೆಗಳಿಗೆ ಪ್ರಯಾಣಿಕರು ಸ್ವಾಗತ ಕೋರಿದ ದೃಶ್ಯಾವಳಿಗಳು ಭಿತ್ತರಗೊಂಡಿದ್ದವು. ಅದರಲ್ಲಿ ನಗುಮುಖದಿಂದ ಸ್ವಾಗತವನ್ನು ಒಪ್ಪಿಕೊಂಡ ಸೈನಿಕರ ದೃಶ್ಯಗಳಿದ್ದವು. ಆದರೆ, ಇದು ಸೈನಿಕರ ನಗುಮುಖದ ಹಿಂದಿರುವ 'ಅರ್ಧ ಸತ್ಯ'ವನ್ನು ಮಾತ್ರವೇ ಬಿಂಬಿಸುವ ದೃಶ್ಯಾವಳಿಗಳು ಎಂಬುದನ್ನು  ರಕ್ಷಣಾ ಇಲಾಖೆಯ ಹೊಸ ಅಂಕಿಅಂಶಗಳು ಸಾರಿ ಹೇಳುತ್ತಿವೆ.

ಸೈನಿಕರನ್ನು ಬಳಸಿಕೊಂಡು, ದೇಶಪ್ರೇಮಕ್ಕೆ ವ್ಯಾಖ್ಯಾನವನ್ನು ನೀಡುವ ಕಸರತ್ತು ನಡೆಸುತ್ತಿರುವವರು ಮತ್ತು ಸೈನಿಕರನ್ನು ಮುಂದಿಟ್ಟುಕೊಂಡು ಮಮಕಾರದ ರಾಜಕೀಯವನ್ನು ಮಾಡುತ್ತಿರುವ  ಬಿಜೆಪಿ ಸರಕಾರ, ಮಾತಿನಲ್ಲಿ ಮಾತ್ರವಲ್ಲ; ಕೃತಿಯಲ್ಲಿಯೂ ಸೈನಿಕ ಕಲ್ಯಾಣವನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ.