ಪ್ರಕಾಶ್ ರಾಜ್ ಭಾ‍ಷಣ ಎಬ್ಬಿಸಿತು ತರಂಗ: ಶುರುವಾಯಿತು ನೋಡಿ, ತೇಜೋವಧೆಯ ಮೃದಂಗ
ಸುದ್ದಿ ಸಾಗರ

ಪ್ರಕಾಶ್ ರಾಜ್ ಭಾ‍ಷಣ ಎಬ್ಬಿಸಿತು ತರಂಗ: ಶುರುವಾಯಿತು ನೋಡಿ, ತೇಜೋವಧೆಯ ಮೃದಂಗ

ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್...

ಈ ದೇಶ ಕಂಡ ಅದ್ಭುತ ನಟ, ಸಾಮಾಜಿಕ ಪ್ರಜ್ಞೆ ಇರುವ ನಾಗರಿಕ.

ಹಾಗಂತ ಕೆಲವು ದಿನಗಳ ಹಿಂದೆ ಹೇಳಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ, ಭಾನುವಾರ ಬೆಂಗಳೂರಿನಲ್ಲಿ ನಡೆದ 11ನೇ ಡಿವೈಎಫ್‌ಐ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನಟ ಪ್ರಕಾಶ್ ರಾಜ್, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಜ್ವಲಂತ ವಿಚಾರಗಳ ಕುರಿತು ಪ್ರಧಾನಿ ಮೋದಿ ವಹಿಸುವ ಮೌನದ ಕುರಿತು ಬಿಜೆಪಿಯ ಒಂದು ಕಾಲದ ಮಿತ್ರ ಪಕ್ಷ ಶಿವಸೇನೆ ಸೇರಿದಂತೆ ಹಲವರು ಮಾತನಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಈಗ ಪ್ರಕಾಶ್ ರಾಜ್ ಕೂಡ ಈಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸೆ. 5ರಂದು ನಡೆದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಕಾಶ್ ರಾಜ್, "ಗೌರಿಯನ್ನು ಕೊಂದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಆಕೆಯ ಸಾವನ್ನು ಯಾರು ಸಂಭ್ರಮಿಸುತ್ತಿದ್ದಾರೆ ಎಂಬುದು ಎಲ್ಲಿರಿಗೂ ಗೊತ್ತಿದೆ. ಅವರನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ. ಮೋದಿ ಮೌನ ವಹಿಸುವ ಮೂಲಕ ನನಗಿಂತ ಒಳ್ಳೆಯ ನಟ,'' ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಭಾನುವಾರ ಪ್ರಕಾಶ್ ರಾಜ್ ಭಾ‍ಷಣ ಮಾಡುವ ಸಮಯದಲ್ಲಿಯೇ ರಾಷ್ಟ್ರೀಯ ವಾಹಿನಿಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅರ್ಚಕನ ವೇಷ ತೊಟ್ಟ ದೃಶ್ಯಾವಳಿಗಳು ಭಿತ್ತರವಾಗುತ್ತಿದ್ದವು. ಮುಖ್ಯಮಂತ್ರಿ ಸ್ಥಾನಕ್ಕೆ 5 ದಿನಗಳ ರಜೆ ತೆಗೆದುಕೊಂಡ ಯೋಗಿ ಆದಿತ್ಯನಾಥ್, ಪೂಜೆಯಲ್ಲಿ ಮುಖ್ಯ ಅರ್ಚಕರಾಗಿ ಪಾಲ್ಗೊಂಡಿದ್ದ ಚಿತ್ರಣಗಳವು. ಈ ಕುರಿತು ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಚರ್ಚೆಗಳ ಬಗ್ಗೆ ಗಮನ ಸೆಳೆದ ಪ್ರಕಾಶ್ ರಾಜ್, "ಯೋಗಿ ಆದಿತ್ಯನಾಥ್ ವೇಷಗಳನ್ನು ನೋಡಿದರೆ ಒಳ್ಳೆಯ ನಟ ಅನ್ನಿಸುತ್ತದೆ. ನನಗೆ ಬಂದ ಐದು ರಾಷ್ಟ್ರೀಯ ಪುರಸ್ಕಾರಗಳನ್ನು ಅವರಿಗೆ ನೀಡಬೇಕು,'' ಎಂಬರ್ಥದಲ್ಲಿ ಮಾತನಾಡಿದ್ದರು.

ಸದ್ಯ ದೇಶದಲ್ಲಿ ಸೈದ್ಧಾಂತಿಕ ಸಂಘರ್ಷಗಳು ಸ್ಪಷ್ಟವಾಗಿ ಇದ್ಭಾಗವಾಗಿರುವ ಈ ಸಮಯದಲ್ಲಿ ಪ್ರಕಾಶ್ ರಾಜ್ ಅವರ ಮಾತುಗಳು ಯಾರನ್ನು ಗುರುಯಾಗಿಸಿಕೊಂಡಿದ್ದವು ಮತ್ತು ಅವರ ಮಾತುಗಳಿಗೆ ಯಾವ ವಲಯ ಆಕ್ರೋಶಭರಿತ ಪ್ರತಿಕ್ರಿಯೆ ನೀಡಬಹುದು ಎಂಬುದನ್ನು ನಿರೀಕ್ಷಿಸಬಹುದಾಗಿತ್ತು. ಊಹೆ ಸುಳ್ಳಾಗಲಿಲ್ಲ; ಬಲಪಂಥೀಯರಿಂದ ಪ್ರಕಾಶ್ ರಾಜ್ ಈಗ ಟ್ರಾಲಿಂಗ್‌ಗೆ ಒಳಗಾಗಿದ್ದಾರೆ.

"ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದಲ್ಲಿ ಹೊಲೆ ಅಲೆಯೊಂದು ಸೃಷ್ಟಿಯಾಗಿದೆ. ಹಿಂದೆ, ಅಧಿಕಾರದಲ್ಲಿ ಇದ್ದವರನ್ನು ಪ್ರಶ್ನಿಸುವುದು 'ಎದೆಗಾರಿಕೆ' ಎಂದು ಕರೆಸಿಕೊಳ್ಳುತ್ತಿತ್ತು. ಪತ್ರಕರ್ತರಿಂದ ಹಿಡಿದು ಸಿನೆಮಾ ನಟರವರೆಗೆ, ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸುವುದು 'ನೈತಿಕತೆ' ಮತ್ತು ಸಾಮಾಜಿಕ ಹೊಣೆಗಾರಿಕೆ ಎನ್ನಿಸಿಕೊಳ್ಳುತ್ತಿತ್ತು. ಆದರೆ ಇವತ್ತು, ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸುವುದು, ಅವರ ಹೊಣೆಗಾರಿಕೆಗಳನ್ನು ಪ್ರಶ್ನಿಸುವುದೇ 'ದೇಶ ದ್ರೋಹ' ಎನ್ನಲಾಗುತ್ತಿದೆ,'' ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಈ ಹಿನ್ನೆಲೆಯಲ್ಲಿ, ಪ್ರಕಾಶ್ ರಾಜ್, ದೇಶದ ಪ್ರಧಾನಿಯ ಮೌನವನ್ನು ಪ್ರಶ್ನಿಸಿರುವುದು 'ಮೋದಿ ಅಭಿಮಾನಿ ಸಮೂಹ'ದ ಆಕ್ರೋಶಕ್ಕೆ ಕಾರಣವಾಗಿದೆ. ಆ ವರ್ಗದ ಆಕ್ರೋಶದ ಅಭಿವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಎಲ್ಲಾ ಕಾಲಕ್ಕೂ ಇದೆ. ಪ್ರಶ್ನೆ ಮಾಡಿದವರ ವೈಯಕ್ತಿಕ ಬದುಕನ್ನು ತೇಜೋವಧೆ ಮಾಡುವುದು ಅದರ ಒಂದು ವರಸೆ. ನಿರೀಕ್ಷೆಯಂತೆಯೇ ಪ್ರಕಾಶ್ ರಾಜ್ ವಿಚಾರದಲ್ಲಿಯೂ ಅದೇ ನಡೆದಿದೆ.

ಪ್ರಕಾಶ್ ರಾಜ್ ಭಾ‍ಷಣ ಬಹಿರಂಗವಾಗುತ್ತಿದ್ದಂತೆ, 'ಪೋಸ್ಟ್ ಕಾರ್ಡ್‌ ಕನ್ನಡ' ಎಂಬ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ಅಪಖ್ಯಾತಿಗೆ ಒಳಗಾಗಿರುವ, ಬಲಪಂಥೀಯ ವಿಚಾರಗಳನ್ನು ಹರಡಲು ಯತ್ನಿಸುತ್ತಿರುವ ಪೋರ್ಟಲ್‌ ಪ್ರಕಾಶ್ ರಾಜ್ ವಿರುದ್ಧ ಅಂಕಣವೊಂದನ್ನು ಪ್ರಕಟಿಸಿತು. ಅದರ ಇಂಗ್ಲಿಷ್‌ ಅಂಕಣದಲ್ಲಿ 'ದೇಶದ ಕೋಟ್ಯಾಂತರ ಜನ ಪ್ರಕಾಶ್ ರಾಜ್ ವಿರುದ್ಧ ಇದ್ದಾರೆ' ಎಂದು ಬಿಂಬಿಸುವ ಪ್ರಯತ್ನ ಮಾಡಿತು. ಕನ್ನಡದಲ್ಲಿ ಪ್ರಕಟವಾದ ಅಂಕಣವಂತೂ ತೀರಾ ಕನಿಷ್ಟ ಮಟ್ಟಕ್ಕೆ ಇಳಿದಿತ್ತು.

ಇದನ್ನು ಬಿಜೆಪಿ ಸಂಸದ, ಹಿಂದೊಮ್ಮೆ ಪತ್ರಕರ್ತರಾಗಿದ್ದ ಪ್ರತಾಪ್‌ ಸಿಂಹ ಹಂಚುವ ಕೆಲಸ ಮಾಡಿದರು. ಇದಕ್ಕೆ, "ಪತ್ನಿಯನ್ನೇ ತಂಗಿ ಎಂದು ದಾಖಲೆ ತಯಾರಿಸಿ ನಿವೇಶನದ ಪಡೆದವರು, ಕನಿಷ್ಟ ಗುಣಮಟ್ಟದ ಟೀಕೆಯನ್ನು ಹಂಚಬಹುದಿತ್ತು,'' ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಪ್ರಧಾನಿ ಮೌನದ ಕುರಿತು ತಮ್ಮ ಪ್ರಶ್ನೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ.

"ಪ್ರಕಾಶ್ ರಾಜ್ ಮೊದಲಿನಿಂದಲೂ ರಾಜಕೀಯ ವಿಚಾರಗಳಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತ ಬಂದವನು. ಇಂದಿರಾ ಹತ್ಯೆ ನಂತರ ದಿಲ್ಲಿಯಲ್ಲಿ ನಡೆದ ಸಿಖ್‌ ಜನರ ಹತ್ಯಾಕಾಂಡವನ್ನು ವಿರೋಧಿಸಿ 1984ರಲ್ಲಿ ನಾವು ಪ್ರತಿಭಟನೆ ನಡೆಸಿದಾಗ ಪ್ರಕಾಶ್ ರೈ ಪಾಲ್ಗೊಂಡಿದ್ದ. ಕೈಗಾ ಅಣುವಿದ್ಯುತ್ ಸ್ಥಾವರ ವಿರೋಧಿಸಿ ನಡೆದ ಚಳವಳಿಯಲ್ಲಿ ಬೀದಿ ನಾಟಕದಲ್ಲಿ ಪ್ರಧಾನ ಪಾತ್ರ ಮಾಡಿದ್ದ. ಅವೆಲ್ಲವೂ ಆತ ಪ್ರಖ್ಯಾತಿಗೆ ಬರುವ ಮುಂಚಿನ ಘಟನೆಗಳು. ಆತ ಖ್ಯಾತ ನಟನಾದ ನಂತರವೂ ಅನೇಕ ಬಾರಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಾಗೂ ನಿಷ್ಠೂರವಾಗಿ ಹಂಚಿಕೊಂಡಿದ್ದಕ್ಕೆ ಹಲವು ಉದಾಹರಣೆಗಳಿವೆ,'' ಎನ್ನುತ್ತಾರೆ ನಿರ್ದೇಶಕ, ನಟ ಬಿ. ಸುರೇಶ್. ಸುರೇಶ್, ಪ್ರಕಾಶ್ ರಾಜ್‌ ಅವರ ಆಪ್ತರು, ಹತ್ತಿರದಿಂದ ನೋಡುತ್ತಿರುವವರು.

ಇವರ ಮಾತುಗಳಿಗೆ ಪೂರಕ ಎಂಬಂತೆ, ಪ್ರಕಾಶ್ ರಾಜ್‌ ಅವರ ಟ್ವಿಟರ್‌ ಟೈಮ್‌ಲೈನ್‌ನಲ್ಲಿ ಒಂದಿಷ್ಟು ಸಾಕ್ಷಿಗಳು ಸಿಗುತ್ತವೆ. ಬೆಂಗಳೂರಿನಲ್ಲಿ ಪ್ರಕಾಶ್ ರಾಜ್ ಭಾಷಣಕ್ಕೆ ಒಂದು ದಿನ ಮೊದಲು ತಮಿಳುನಾಡು ಸರಕಾರದ ಮನೋರಂಜನಾ ತೆರಿಗೆ ನೀತಿ ವಿರುದ್ಧ ಎರಡು ಪ್ರತ್ಯೇಕ ಟ್ವೀಟ್‌ಗಳನ್ನು ಅವರು ಮಾಡಿದ್ದಾರೆ.

"ಈ ಹಿಂದೆ, ಜಯಲಲಿತಾ ವಿರುದ್ಧ ಆತ ನೇರವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಅವರ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದ. ಕರುಣಾನಿಧಿ ಮಕ್ಕಳ ಒಳಜಗಳದ ಸಮಯದಲ್ಲಿಯೂ ಆತ ತನ್ನ ಅಭಿಪ್ರಾಯವನ್ನು ಮಂಡಿಸಿದ್ದ. ಆಗಲೂ ಇಂತಹದ್ದೇ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆತ ಯಾವತ್ತಿಗೂ ನೇರವಾಗಿ ಇರುವ ವ್ಯಕ್ತಿ. ರಾಜಕೀಯ ಪ್ರಜ್ಞೆ ಆತನಲ್ಲಿ ಯಾವಾಗಲೂ ಜಾಗೃತವಾಗಿರುತ್ತದೆ.  ಆತನಿಂದ ಬಂದ ಇಂತಹ ಹೇಳಿಕೆ ಇದು ಮೊದಲೂ ಅಲ್ಲ, ಬಹುಶಃ ಕೊನೆಯೂ ಆಗುವುದಿಲ್ಲ'' ಎನ್ನುತ್ತಾರೆ ಬಿ. ಸುರೇಶ್.

ಅಧಿಕಾರದ ಕೇಂದ್ರದಲ್ಲಿ ಇರುವವರು ಹೊಗಳಿಕೆಗಳಿಗಿಂತ, ಟೀಕೆಗಳಿಗೆ ಹೆಚ್ಚು ಕಿವಿಗೊಡಬೇಕು. ಆಗ ಮಾತ್ರವೇ ಜನಪರವಾದ ಆಡಳಿತ ನಡೆಸಲು ಸಾಧ್ಯ ಎಂಬುದು ಸಾಮಾನ್ಯ ಜ್ಞಾನ. ಸಮಸ್ಯೆ ಏನೆಂದರೆ, ಟೀಕೆಗಳು ಬಂದಾಗ ಅವುಗಳನ್ನು ಎದುರಿಸಲು ವೈಯಕ್ತಿಕ ಮಟ್ಟಕ್ಕೆ ಇಳಿಯುವ ಕೆಟ್ಟ ಹವ್ಯಾಸವನ್ನು ಮೋದಿ ಅಭಿಮಾನಿಗಳು ಬೆಳೆಸಿಕೊಂಡಿದ್ದಾರೆ. ಇದರ ನೇರ ಪರಿಣಾಮ, ತೇಜೋವಧೆಗೆ ಒಳಗಾದವರಿಗಿಂತ ಹೆಚ್ಚಾಗಿ ಪ್ರಧಾನಿ ಮೋದಿ 'ಇಮೇಜ್‌' ಮೇಲಾಗುತ್ತಿದೆ. ಇದಕ್ಕೆ ಮೌನ ಸಮ್ಮತಿಯಾಗುವ ಅಪಾಯವೂ ಇದೆ. ಈ ಕಾರಣಕ್ಕಾದರೂ ಪ್ರಧಾನಿ ಮೋದಿ ಮಾತನಾಡಬೇಕಿದೆ.