samachara
www.samachara.com
'ಮೋದಿ ಅಲೆ'ಗೆ ಸಿಗದ ಸ್ಥಾನಮಾನ: ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯ 'ಸಪ್ತ ಸೂತ್ರಗಳು'!
ಸುದ್ದಿ ಸಾಗರ

'ಮೋದಿ ಅಲೆ'ಗೆ ಸಿಗದ ಸ್ಥಾನಮಾನ: ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯ 'ಸಪ್ತ ಸೂತ್ರಗಳು'!

ಈಗಾಗಲೇ

ಅಧಿಕಾರದಲ್ಲಿ ಮೂರೂವರೆ ವರ್ಷಗಳನ್ನು ಕಳೆದಿರುವ ಭಾರತೀಯ ಜನತಾ ಪಕ್ಷ, ಮತ್ತೆ ಅಧಿಕಾರಕ್ಕೆ ಏರುವ ಕನಸು ಕಟ್ಟಿಕೊಂಡಿದೆ.

ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು 'ಸಪ್ತ ಸೂತ್ರ'ಗಳನ್ನು ಪಕ್ಷ ಮುಂದಿಟ್ಟಿದೆ. ವಿಶೇಷ ಅಂದರೆ, ಎಲ್ಲಿಯೂ ಮೋದಿ ಅಲೆಯಾಗಲೀ, ವ್ಯಕ್ತಿ ಕೇಂದ್ರಿತ ಚುನಾವಣಾ ಪ್ರಚಾರದ ಮಾದರಿಯಾಗಲೀ ಸ್ಥಾನ ಪಡೆದುಕೊಂಡಿಲ್ಲ ಎಂಬುದು ವಿಶೇಷ.

2014ರಲ್ಲಿ ಬಿಜೆಪಿ 'ಮೋದಿ ಅಲೆ'ಯನ್ನು ನೆಚ್ಚಿಕೊಂಡು ಚುನಾವಣೆಗೆ ಇಳಿದಿತ್ತು ಮತ್ತು ಅದರಲ್ಲಿ ಬಿಜೆಪಿ ಸಫಲವೂ ಆಗಿತ್ತು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ಮೋದಿ ಗುಜರಾತ್‌ ಅಭಿವೃದ್ಧಿ ಮಾದರಿಯನ್ನು ದೇಶದ ಮಟ್ಟದಲ್ಲಿ ಜಾರಿಗೆ ತರುವ ಕನಸುಗಳನ್ನು ಭಿತ್ತಲಾಗಿತ್ತು. ಜತೆಗೆ, ಪ್ರತಿ ಮತದಾರರ ಅಕೌಂಟಿಗೆ 15 ಲಕ್ಷ ರೂಪಾಯಿ ಬಂದು ಬೀಳಲಿದೆ ಎಂಬ ಭರವಸೆ ನೀಡಲಾಗಿತ್ತು. ಚುನಾವಣೆ ಕಳೆದು, ಪೂರ್ಣ ಪ್ರಮಾಣದ ಅಧಿಕಾರ ಹಿಡಿದ ನಂತರ ಬಿಜೆಪಿ ನಾಯಕ ಅಮಿತ್‌ ಶಾ '15 ಲಕ್ಷದ ಹೇಳಿಕೆ ಚುನಾವಣೆ ಸಮಯದಲ್ಲಿ ನೀಡುವ ಆಶ್ವಾಸನೆ ಮಾದರಿಯದ್ದು' ಎಂದು ಸ್ಪಷ್ಟಪಡಿಸಿದ್ದರು.

ಇದೀಗ, ತಮ್ಮ ಅಧಿಕಾರವಧಿಯ ಶೇ. 70ರಷ್ಟನ್ನು ಪೂರ್ಣಗೊಳಿಸಿರುವ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತಂತ್ರಗಾರಿಕೆ ಹೆಣೆಯುತ್ತಿದೆ. ಆದರೆ, ಕಳೆದ 1000 ದಿನಗಳ ಅಧಿಕಾರವಧಿಯಲ್ಲಿ ಒಂದಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದೆ. ನೋಟುಗಳ ಅಮಾನ್ಯೀಕರಣದ ನಂತರ ದೇಶದ ಆರ್ಥಿಕತೆ ಕುಸಿತ ಕಂಡಿದೆ. ಸಿದ್ಧತೆ ಇಲ್ಲದೆ ತಂದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಬೆಲೆ ಏರಿಕೆಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಇಳಿಮುಖವಾಗಿದ್ದರೂ, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ದಾಖಲೆಯ ಹೆಚ್ಚಳವಾಗುತ್ತಿದೆ. ಉದ್ಯೋಗದ ವಿಚಾರದಲ್ಲಿ ಆತಂಕ ಮೂಡಿಸುವ ಬೆಳವಣಿಗೆಗಳು ನಡೆಯುತ್ತಿವೆ. ಡಿಮಾನಟೈಸೇಶನ್ ನೆಪವನ್ನು ಮುಂದಿಟ್ಟುಕೊಂಡು ಕಾರ್ಪೊರೇಟ್‌ ಕಂಪನಿಗಳು, ಸಂಘಟಿತ ವಲಯದಲ್ಲಿರುವ ಇತರೆ ಉದ್ಯಮಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಜನವರಿಯಿಂದ ಮಾರ್ಚ್‌ ತಿಂಗಳ ಅಂತ್ಯದ ಹೊತ್ತಿಗೆ ದೇಶದಲ್ಲಿ ಸುಮಾರು 15 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ಎಂದು ಅಧ್ಯಯನಗಳು ಹೇಳುತ್ತಿವೆ.

ಹೀಗಿರುವಾಗಲೇ, ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ 'ಇಂಡಿಯನ್‌ ಎಕ್ಸ್‌ಪ್ರೆಸ್‌' ಪತ್ರಿಕೆಗೆ ಬರೆದ ಅಂಕಣದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಹೇಗೆ ದೇಶದಲ್ಲಿ ಕೃಷಿ, ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬುದನ್ನು ಆರ್ಥಿಕ ಸಚಿವರೂ ಆಗಿದ್ದ ಸಿನ್ಹಾ ವಿವರಿಸಿದ್ದಾರೆ.

ಹೀಗೆ, ಪಕ್ಷದ ಒಳಗೆ ಹಾಗೂ ಹೊರಗೆ ಸಾಕಷ್ಟು ವಿರೋಧಗಳನ್ನು ಎದುರಿಸುತ್ತಿರುವ ಕೇಂದ್ರ ಸರಕಾರ, ಮುಂದಿನ ಚುನಾವಣೆಯನ್ನು ಗೆಲ್ಲಲು ಸಪ್ತ ಸೂತ್ರಗಳ ಮೊರೆ ಹೋಗಿದೆ.

ಸಪ್ತ ಸೂತ್ರಗಳು:

2014ರಲ್ಲಿದ್ದ ಯುಪಿಎ ವಿರೋಧಿ ನೆಲೆ, ಮೋದಿ ಪರವಾಗಿರುವ ಅಲೆಗಳ ಅಂಕಗಣಿತದಲ್ಲಿ ಏರಿಳಿತಗಳಾಗಿರುವ ದಿನಗಳವು. ಮೊದಲಿದ್ದ ಪ್ರಧಾನಿ ಮೋದಿ ಜನಪ್ರಿಯತೆ ನಿಧಾನವಾಗಿ ವಿಡಂಬನೆಗೆ, ವಿನೋದಕ್ಕೆ ತಿರುಗಲು ಶುರುವಾಗಿದೆ. ಪಕ್ಷದ ನಿಷ್ಟರು, ವ್ಯಕ್ತಿ ನಿಷ್ಟರನ್ನು ಹೊರತುಪಡಿಸಿದರೆ, ಸಾಮಾನ್ಯ ಜನರಲ್ಲಿ ಮೋದಿ ನಾಯಕತ್ವದ ಕಡೆಗಿದ್ದ ಭರವಸೆಗಳು ಕ್ಷೀಣಿಸಲು ಆರಂಭವಾಗಿದೆ. ಹೀಗಿರುವಾಗಲೇ, 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಏಳು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

  1. ಹಳೆಯ ಸೀಟುಗಳನ್ನು ಉಳಿಸಿಕೊಳ್ಳುವುದು: 

ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗಳನ್ನು ಮೀರಿ ಬಿಜೆಪಿ 282 ಸೀಟಗಳನ್ನು ಪಡೆದುಕೊಂಡಿತ್ತು. ಇದು 1984ರ ನಂತರ ದೇಶದ ಯಾವುದೇ ರಾಜಕೀಯ ಪಕ್ಷ ಪಡೆದುಕೊಳ್ಳದ ಅತಿ ದೊಡ್ಡ ಸೀಟುಗಳ ಸಂಖ್ಯೆಯಾಗಿತ್ತು. ನಾನಾ ರಾಜಕೀಯ ಪಕ್ಷಗಳ ಸಂಯುಕ್ತ ವೇದಿಕೆ ನಿರ್ಮಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು ಎಂಬಂತಿದ್ದ ರಾಜಕೀಯ ವಾತಾವರಣವನ್ನು ಬದಲಿಸಿ, ಮತದಾರರು ಒಂದೇ ರಾಜಕೀಯ ಪಕ್ಷ(ಬಿಜೆಪಿ)ಕ್ಕೆ ಪೂರ್ಣ ಪ್ರಮಾಣದ ಅಧಿಕಾರವನ್ನು ನೀಡಿದ್ದರು. ಮುಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೀರಿ, ಈಗ ಗಳಿಸಿರುವ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿ ಮುಂದಿರುವ ಹಾದಿ. ಅದು ಸೂತ್ರ ನಂಬರ್‌ 1 ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

  1. ಪ್ರತಿಪಕ್ಷಗಳಿಂದ ಸ್ಥಾನಗಳನ್ನು ಕಿತ್ತುಕೊಳ್ಳುವುದು:

ಇದರ ಜತೆಗೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಅಂತರದಿಂದ ಸೋತ ಸುಮಾರು 123 ಸ್ಥಾನಗಳನ್ನು ಗುರುತಿಸಿದೆ. ಇವುಗಳಿಗೆ ಸಮೀಪದ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಆಯ್ಕೆಯಾದ ಸಂಸದರು ಹಾಗೂ ಸಚಿವರುಗಳನ್ನು ಕಳಿಸಲು ಪಕ್ಷ ತೀರ್ಮಾನಿಸಿದೆ. ಆ ಮೂಲಕ ಕ್ಷೇತ್ರದ ಮತದಾರರಿಗೆ ಕೇಂದ್ರ ಸರಕಾರದ 'ಸಾಧನೆ'ಗಳನ್ನು ಮನದಟ್ಟು ಮಾಡಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಸ್ಥಾನ ಗಳಿಸುವುದು ಯೋಜನೆಯ ಭಾಗವಾಗಿದೆ.

  1. ಹೊಸ ರಾಜ್ಯಗಳ ಮೇಲೆ ಕಣ್ಣು:

ಒಂದು ಕಡೆ ಹಳೆಯ ಸ್ಥಾನಗಳನ್ನು, ಒನ್ನೊಂದಿಷ್ಟು ಹೊಸ ಸ್ಥಾನಗಳನ್ನು ಗಳಿಸಲು ಯೋಜನೆ ರೂಪಿಸುವ ಜತೆಗೆ, ಹೊಸ ರಾಜ್ಯಗಳಿಗೂ ಬಿಜೆಪಿ ಕಾಲಿಡಲು ತೀರ್ಮಾನ ತೆಗೆದುಕೊಂಡಿದೆ. ಕೇರಳ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಒಂದಷ್ಟು ಲೋಕಸಭಾ ಸ್ಥಾನಗಳನ್ನು ಗಳಿಸಲು ಆಲೋಚನೆ ಮಾಡಿದೆ.

ಕೆಲವು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಜತೆಗೇ, ಈ ರಾಜ್ಯಗಳಿಂದ ಬಿಜೆಪಿ ನೇರವಾಗಿ ಮತಗಳನ್ನು ಪಡೆಯುವ ಪ್ರಯತ್ನ ಮಾಡಲಿದೆ. ಈಗ ಈಶಾನ್ಯ ಭಾರತ, ಉತ್ತರ, ಪೂರ್ವ ಹಾಗೂ ಮಧ್ಯ ಭಾರತಗಳ ರಾಜ್ಯಗಳಲ್ಲಿ ಮಾತ್ರವೇ ಬಿಜೆಪಿ ಭದ್ರ ನೆಲೆ ಹೊಂದಿದೆ.

  1. ಎನ್‌ಡಿಎ ವಿಸ್ತರಣೆ:

ಇತ್ತೀಚೆಗಷ್ಟೆ ಬಿಜೆಪಿ ತನ್ನ ನೇತೃತ್ವದ ಮೈತ್ರಿಕೂಟ 'ನ್ಯಾಷನಲ್‌ ಡೆಮಾಕ್ರಾಟಿಕ್ ಅಲೆಯನ್ಸ್' (ಎನ್‌ಡಿಎ) ಸಭೆಯನ್ನು ನಡೆಸಿತ್ತು. ಇದು ಅಧಿಕಾರಕ್ಕೆ ಬಂದ ಮೇಲೆ ನಡೆದ ಎರಡನೇ ಸಭೆಯಾಗಿತ್ತು. ಎನ್‌ಡಿಎ ಮೈತ್ರಿಕೂಟದಲ್ಲಿರುವ ಶಿವಸೇನೆ ಜತೆ ಬಿಜೆಪಿ ಸಂಬಂಧ ಹಳಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಪ್ರತ್ಯೇಕವಾಗಿಯೇ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಬಿಹಾರದಲ್ಲಿ ನಿತೀಶ್‌ ಕುಮಾರ್ ಅವರ 'ಘರ್ ವಾಪಸಿ' ಕಾರ್ಯಕ್ರಮ ನಡೆದಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಒಂದಷ್ಟು ಸ್ಥಳೀಯ ಪಕ್ಷಗಳು ಎನ್‌ಡಿಎ ತೆಕ್ಕೆಗೆ ಬಂದಿವೆ. ಆದರೆ ಅವುಗಳ ಬಲ ಕಡಿಮೆ ಇದೆ. ಹೀಗಾಗಿ, ಈಗಿರುವ ಎನ್‌ಡಿಎ ಬಲವನ್ನು ಹೆಚ್ಚಿಸಲು ಹಾಗೂ ದೊಡ್ಡ ಪಕ್ಷಗಳನ್ನು ತೆಕ್ಕೆಗೆ ಎಳೆದುಕೊಳ್ಳುವ ಯೋಜನೆಯಲ್ಲಿ ಬಿಜೆಪಿ ಸೂತ್ರ ಹೆಣೆಯಲು ತೀರ್ಮಾನಿಸಿದೆ.

  1. ಹೊಸ ಮತದಾರರ ಕಡೆಗೆ ಚಿತ್ತ:

ಹೊಸ ಪಕ್ಷಗಳು, ಹೊಸ ಮೈತ್ರಿಕೂಟ, ಹೊಸ ಕ್ಷೇತ್ರಗಳು, ಹೊಸ ರಾಜ್ಯಗಳ ಜತೆಗೆ ಹೊಸ ಮತದಾರರನ್ನು ಬಿಜೆಪಿ ಕಡೆಗೆ ಸೆಳೆಯಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ತೀರ್ಮಾನಿಸಿದೆ. 2014ರಲ್ಲಿ ಬಿಜೆಪಿ ಪಡೆದ ಮತ ಪ್ರಮಾಣ ಶೇ. 31. ಆಳಕ್ಕಿಳಿದು ನೋಡಿದರೆ, ಎಲ್ಲಾ ಜಾತಿ, ವರ್ಗ, ಲಿಂಗ, ವಯೋಮಾನದ ಮತಗಳನ್ನು ಬಿಜೆಪಿ ಪಡೆಯಲು ವಿಫಲವಾಗಿತ್ತು. ವಿಶೇಷವಾಗಿ ಮಹಿಳೆಯರು, ದಲಿತ, ಆದಿವಾಸಿ ಹಾಗೂ ಮುಸ್ಲಿಂ ಮತಗಳ ಪ್ರಮಾಣ ಬಿಜೆಪಿಗೆ ಕಡಿಮೆ ಬಿದ್ದಿತ್ತು. ಹೀಗಾಗಿ ಮುಂದಿನ ಚುನಾವಣೆಯಲ್ಲಿ 'ಹಿಂದೂ ಮತಬ್ಯಾಂಕ್‌' ಆಚೆಗೂ ಬಿಜೆಪಿ ತನ್ನ ಪ್ರಭಾವ ಬೀರುವ ಪ್ರಯತ್ನದಲ್ಲಿದೆ. ಅದು ಸಪ್ತ ಸೂತ್ರಗಳಲ್ಲಿ ಪ್ರಮುಖ ಅಂಶವಾಗಿ ರಾಷ್ಟ್ರೀಯ ಕಾರ್ಯಕಾರಣಿ ತೀರ್ಮಾನಿಸಿದೆ.

  1. ಜೈತ್ರಯಾತ್ರೆಯ ಮುಂದುವರಿಕೆ:

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸಿದೆ. ದಿಲ್ಲಿ ಹಾಗೂ ಬಿಹಾರ ವಿಧಾನಸಭೆಗಳನ್ನು ಹೊರತುಪಡಿಸಿದರೆ, ಉಳಿದ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ಯಾತ್ರೆ ಮುಂದುವರಿದಿದೆ. 2017- 18ರಲ್ಲಿ ದೇಶದಲ್ಲಿ ಒಟ್ಟು 5 ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ಕರ್ನಾಟಕ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆಗೆ ಎದುರು ನೋಡಲಾಗುತ್ತಿದೆ. ಇವುಗಳಲ್ಲಿ ಕನಿಷ್ಟ 5 ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಪಕ್ಷದ ನಾಯಕರಿಗಿದೆ.

ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಜನರಲ್ಲಿ ಆಶಾಭಾವನೆಯನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಕಾರ್ಯಕಾರಿಣಿ ತೀರ್ಮಾನಿಸಿದೆ.

  1. ಜನರಿಗೆ ಕಾರ್ಯಕ್ರಮಗಳನ್ನು ತಿಳಿಸುವುದು:

ಈ ಎಲ್ಲಾ ಚುನಾವಣೆಗಳ ತಂತ್ರಗಾರಿಕೆಗಳು ಸಫಲವಾಗಬೇಕಾದರೆ ಕೇಂದ್ರ ಸರಕಾರದ ಈವರೆಗಿನ ಸಾಧನೆಗಳನ್ನು ಜನರಿಗೆ ತಿಳಿಸುವುದು ಪ್ರಮುಖ ಆದ್ಯತೆ ಎಂದು ಬಿಜೆಪಿಯ ಹಿರಿಯ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹವನ್ನು ತಲುಪುವುದು, ಟಿವಿ, ಪತ್ರಿಕೆ ಮಾಧ್ಯಮಗಳ ಮೂಲಕ ಗ್ರಾಮೀಣ ಭಾಗದ ಮತದಾರರನ್ನು ತಲುಪುವುದು ಬಿಜೆಪಿಯ ಸಪ್ತ ಸೂತ್ರಗಳ ಭಾಗವಾಗಿದೆ.

ಲೋಕಸಭಾ ಚುನಾವಣೆಗೆ ಒಂದೂವರೆ ವರ್ಷ ಇರುವಾಗಲೇ ನಡೆದಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸದ್ಯದ ಪರಿಸ್ಥಿತಿಗಳಿಗಿಂತ ಹೆಚ್ಚಾಗಿ, ಭವಿಷ್ಯದ ಅಧಿಕಾರ ಹಿಡಿಯುವ ಕುರಿತು ಹೆಚ್ಚು ಆಲೋಚನೆ ಮಾಡಿರುವುದು ಸ್ಪಷ್ಟವಾಗಿದೆ. ವಿಶೇಷ ಅಂದರೆ, ಈ ಬಾರಿ 'ಮೋದಿ ಅಲೆ'ಯನ್ನು ನೆಚ್ಚಿಕೊಳ್ಳುವುದಕ್ಕಿಂತ ವಾಸ್ತವದ ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆ ರೂಪಿಸಲು ಮೊರೆ ಹೋಗಿದೆ.

ಆದರೆ, ಸದ್ಯದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಹೇಗೆ ಎದುರಿಸುತ್ತದೆ ಮತ್ತು ಅದನ್ನು ವಿರೋಧ ಪಕ್ಷಗಳು ಹೇಗೆ ರಾಜಕೀಯ ಲಾಭವನ್ನಾಗಿ ಬದಲಾಯಿಸಿಕೊಳ್ಳುತ್ತವೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.