samachara
www.samachara.com
ದಸರಾ ಹಬ್ಬಕ್ಕೆ ಬೆಲೆ ಏರಿಕೆಯ ಬಂಪರ್ ಕೊಡುಗೆ: ಪೆಟ್ರೋಲ್‌ ಯಾಕೆ ಜಿಎಸ್‌ಟಿ ಕೆಳಗೆ ಬರುತ್ತಿಲ್ಲ?
ಸುದ್ದಿ ಸಾಗರ

ದಸರಾ ಹಬ್ಬಕ್ಕೆ ಬೆಲೆ ಏರಿಕೆಯ ಬಂಪರ್ ಕೊಡುಗೆ: ಪೆಟ್ರೋಲ್‌ ಯಾಕೆ ಜಿಎಸ್‌ಟಿ ಕೆಳಗೆ ಬರುತ್ತಿಲ್ಲ?

ದಸರಾ

ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗೆ ಬೆಲೆ ಏರಿಕೆಯ ಬಿಸಿ ತಟ್ಟಲು ಆರಂಭಿಸಿದೆ.

ಕಳೆದ ಕೆಲವು ದಿನಗಳಿಂದ ಏರುತ್ತಿರುವ ಪೆಟ್ರೊಲ್‌ ಬೆಲೆ, ಮೂರು ವರ್ಷಗಳಲ್ಲಿ ದಾಖಲೆಯ ಏರಿಕೆ ಕಂಡಿದೆ. ತರಕಾರಿ, ಸೊಪ್ಪು, ಧಾನ್ಯಗಳು, ಅಡುಗೆ ಅನಿಲಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಮಧ್ಯಮ ವರ್ಗದ ಮಾಸಿಕ ವೆಚ್ಚದಲ್ಲಿ ಒಂದು ಅಂದಾಜಿನ ಪ್ರಕಾರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶೇ. 20ರಷ್ಟು ಹೆಚ್ಚಳವಾಗಿದೆ.

ಬೆಲೆ ಏರಿಕೆಗೆ ವಿರೋಧ: 

ಈಗಾಗಲೇ ಶಿವಸೇನೆ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಕಳೆದ ವಾರದಲ್ಲಿ ಇಂಧನಗಳ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿದ್ದಂತೆ; ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಇಂಧನಗಳನ್ನೂ ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ತರುವಂತೆ ಹಣಕಾಸು ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಅಮೆರಿಕಾದ ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ದೇಶದ ಬಂಕ್‌ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂಪಾಯಿ ತಲುಪಿದೆ.

ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಸಗಟು ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಗೆ ತಲುಪುವ ತರಕಾರಿ, ಸೊಪ್ಪು, ಧಾನ್ಯಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಸಾರ ಇನ್ನೊಂದಿಷ್ಟು ಏರಿಕೆ ಕಂಡುಬಂದಿದೆ. ಇವೆಲ್ಲಕ್ಕೂ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರಕಾರದ ಮೇಲೆ ಒತ್ತಡಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಇಂಧನಗಳನ್ನೂ ಜಿಎಸ್‌ಟಿ ಅಡಿಯಲ್ಲಿ ತರುವ ಮಾತುಗಳು ಚಾಲ್ತಿಗೆ ಬಂದಿವೆ.

ಪೆಟ್ರೋಲ್ ಬೆಲೆ ಹಿನ್ನೆಲೆ:

ಸದ್ಯ ದೇಶಾದ್ಯಂತ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಇದರ ಅಡಿಯಲ್ಲಿ ಮದ್ಯ, ಇಂಧನಗಳನ್ನು ತರಲು ಮೊದಲ ಹಂತದಲ್ಲಿ ಕೇಂದ್ರ ಸರಕಾರ ಹಿಂದೇಟು ಹಾಕಿದೆ. ಅದಕ್ಕೆ ಕಾರಣ, ಸರಕಾರಗಳಿಗೆ ಇಂತಹ 'ಸಿನ್‌ ಗೂಡ್ಸ್‌' ಎಂದು ಕರೆಯುವ ಸರಕುಗಳಿಂದ ಬರುತ್ತಿರುವ ದೊಡ್ಡ ಮಟ್ಟದ ಆದಾಯ. ಉದಾಹರಣೆಗೆ ಪೆಟ್ರೋಲ್‌ ತೆಗೆದುಕೊಂಡರೆ, ಜನ ದುಬಾರಿ ತೆರಿಗೆ ಕಟ್ಟಿ ಬಳಸುತ್ತಿರುವ ಪದಾರ್ಥ ಇದು. ಕೇಂದ್ರ ಸರಕಾರ ವಿಧಿಸುವ ಎಕ್ಸೈಸ್‌ ಡ್ಯೂಟಿ, ಆಯಾ ರಾಜ್ಯ ಸರಕಾರಗಳು ಹೇರುವ ವ್ಯಾಟ್‌ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಸಗಟು ಮಾರಾಟಗಾರರಿಗೆ ನೀಡುವ ಕಮಿಷನ್ ಎಲ್ಲವನ್ನೂ ಸಾಮಾನ್ಯ ಜನ ಭರಿಸುತ್ತಿದ್ದಾರೆ.

ಸರಕಾರಿ ಲೆಕ್ಕದಲ್ಲಿ ಇದನ್ನು ನೋಡುವುದಾದರೆ, ದೇಶದ ಪೆಟ್ರೋಲ್‌ ಪಂಪ್‌ಗಳಿಗೆ ಒಂದು ಲೀಟರ್‌ ಪೆಟ್ರೋಲ್‌ ಸುಮಾರು 30 ರೂಪಾಯಿಗೆ ಲಭ್ಯವಾಗುತ್ತದೆ. ಅದರ ಮೇಲೆ ಕೇಂದ್ರ ಸರಕಾರದ 21 ರೂಪಾಯಿ ಎಕ್ಸೈಸ್‌ ಡ್ಯೂಟಿ, ಸುಮಾರು 15 ರೂಪಾಯಿ ರಾಜ್ಯ ಸರಕಾರಗಳ ಮೌಲ್ಯವರ್ಧಿತ ತೆರಿಗೆ ಹಾಗೂ ಪ್ರತಿ ಲೀಟರ್‌ಗೆ ಸಗಟು ಮಾರಾಟಗಾರರಿಗೆ 3 ರೂಪಾಯಿ ಕಮಿಷನ್‌ ಗ್ರಾಹಕರ ಜೇಬಿನಿಂದ ಸುಲಿಯಲಾಗುತ್ತಿದೆ. ಅಲ್ಲಿಗೆ, ಪೆಟ್ರೋಲ್ ಬೆಲೆ ಹೆಚ್ಚು ಕಡಿಮೆ 70 ರೂಪಾಯಿಗೆ ಬಂದು ನಿಲ್ಲುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲೆಯ ಬೆಲೆ ಏರಿಕೆಗೆ ಪೆಟ್ರೋಲ್‌ ಉತ್ಪನ್ನ ಸಾಕ್ಷಿಯಾಗಿದೆ.

ಆರ್ಥಿಕ ಸಂಕಷ್ಟಗಳು:

ಕಳೆದ ವರ್ಷದ ನವೆಂಬರ್‌ 8ನೇ ತಾರೀಖು ಪ್ರಧಾನಿ ಮೋದಿ ಚಲಾವಣೆಯಲ್ಲಿದ್ದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಅಮ್ಯಾನೀಕರಣ ಘೋಷಣೆ ಮಾಡಿದರು. ಇದಕ್ಕೆ ಕಪ್ಪು ಹಣದ ವಿರುದ್ಧ ಹೋರಾಟದ ಮೆರಗನ್ನೂ ಅವರು ನೀಡಿದರು. ಆದರೆ ಇತ್ತೀಚೆಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆ ಮಾಡಿದ ವಾರ್ಷಿಕ ಪತ್ರದಲ್ಲಿ ನೋಟುಗಳ ಅಮಾನ್ಯೀಕರಣದಿಂದಾಗಿ ಕಪ್ಪು ಹಣದ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಬಹಿರಂಗವಾಗಿತ್ತು.

ವಾಸ್ತವದಲ್ಲಿ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆಯ ಪರಿಣಾಮಗಳು ನಾನಾ ರೀತಿಯಲ್ಲಿ ಕಾಣಸಿಗುತ್ತಿವೆ. ಜನವರಿಯಿಂದ ಮಾರ್ಚ್‌ ಅಂತ್ಯಕ್ಕೆ ದೇಶದೊಳಗೆ ಸುಮಾರು 15 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ. ಮೊದಲೇ ದೊಡ್ಡ ಮಟ್ಟದಲ್ಲಿದ್ದ ನಿರುದ್ಯೋಗ ಸಮಸ್ಯೆ ಇನ್ನಷ್ಟು ಭೀಕರವಾಗಿದೆ. ದೇಶದ ಜಿಡಿಪಿ ಕೂಡ ದಾಖಲೆಯ ಕುಸಿತ ಕಂಡಿದೆ. ಇದರ ಮೇಲೆ, ಬೆಲೆ ಏರಿಕೆಯ ಬಿಸಿಯೂ ತಟ್ಟಲು ಆರಂಭಿಸಿದೆ.

ಈ ಹಿನ್ನೆಲೆಯಲ್ಲಿಯೇ, ಇಂಧನ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಹಣಕಾಸು ಇಲಾಖೆಗೆ, ಜಿಎಸ್‌ಟಿ ಮಂಡಳಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಆದರೆ ಸರಕಾರಗಳಿಗೆ ಬರುತ್ತಿರುವ ಆದಾಯ ಮೂಲವನ್ನು ಇಷ್ಟು ಬೇಗ ಕಡಿತಗೊಳಿಸುವ ಸಾಧ್ಯತೆಗಳಿಲ್ಲ. ಅದರಲ್ಲೂ ಜಿಎಸ್‌ಟಿ ಜಾರಿಗೆ ಮುನ್ನ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಆದಾಯ ಮೂಲಗಳಾದ 'ಸಿನ್‌ ಗೂಡ್ಸ್‌' ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂಬ ಭರವಸೆ ನೀಡಿದೆ. ಹೀಗಾಗಿ, ಮುಂದಿನ ಕೆಲವು ವರ್ಷಗಳಾದರೂ ಈ ದೇಶದ ಮಧ್ಯಮ ವರ್ಗದ ಜನತೆ 'ಸಿನ್‌ ಗೂಡ್ಸ್‌'ಗಳ ಮೇಲಿನ ತೆರಿಗೆ ಭಾರವನ್ನು ಭರಿಸಲೇ ಬೇಕಿದೆ.