ಪತ್ರಕರ್ತೆಯ ಮಾನವೀಯ ಮುಖ: 'ನಾನೂ ಗೌರಿ' ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!
ಸುದ್ದಿ ಸಾಗರ

ಪತ್ರಕರ್ತೆಯ ಮಾನವೀಯ ಮುಖ: 'ನಾನೂ ಗೌರಿ' ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!

ಪತ್ರಕರ್ತೆ,

ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ವಾರದ ನಂತರ ಬೆಂಗಳೂರಿನಲ್ಲಿ ನಡೆದ 'ಪ್ರತಿರೋಧ ಸಮಾವೇಶ'ದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಾಗೀದಾರಿಕೆ ಎದ್ದು ಕಾಣುವಂತಿತ್ತು.

ಅಷ್ಟೆ ಅಲ್ಲ; ಸಮಾವೇಶಕ್ಕಾಗಿ ಇದೇ ಸಮುದಾಯ ಭಿಕ್ಷೆ ಬೇಡಿ 2,351 ರೂಪಾಯಿಗಳ ದೇಣಿಗೆಯನ್ನೂ ನೀಡಿತು. ಸಮಾಜದಲ್ಲಿ ಬೇರೂರಿರುವ ಲೈಂಗಿಕತೆ ಬಗೆಗಿನ 'ನಿಷಿದ್ಧ'ಗಳ ನಡುವೆಯೂ, ಲೈಂಗಿಕ ಅಲ್ಪಸಂಖ್ಯಾತರು ಗೌರಿ ಸಾವಿಗೆ ಕಂಬನಿಯನ್ನೇಕೆ ಮಿಡಿದರು? ಈ ಕುರಿತು ಇನ್ನಷ್ಟು ಆಳಕ್ಕಿಳಿದ 'ಸಮಾಚಾರ'ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಯಿತು.

ಕೆಲವೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜ್ರಾಗಳು ಎಂದರೆ ದರೋಡೆಕೋರರು, ಸುಲಿಗೆ ಮಾಡುವವರು, ವೇಶ್ಯಾವಾಟಿಕೆ ಮಾಡುವವರು ಎಂಬ ಭಾವನೆ ಇತ್ತು. ಇದಕ್ಕೆ ಮಾಧ್ಯಮಗಳ ಕೊಡುಗೆಯೂ ಅಪಾರವಾಗಿತ್ತು. ಅಂತಹ ಸಮಯದಲ್ಲಿಯೇ ಗೌರಿ ಲಂಕೇಶ್ ನಡೆಸುತ್ತಿದ್ದ ಪತ್ರಿಕೆಯಲ್ಲಿಯೂ ಕೂಡ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಅವಹೇಳನಕಾರಿ ವರದಿಯೊಂದು ಪ್ರಕಟವಾಗಿತ್ತು ಕೂಡ!

ಈ ಸನ್ನಿವೇಶವನ್ನು ನೆನಪಿಸಿಕೊಳ್ಳುವ ವಕೀಲ ಬಿ. ಟಿ. ವೆಂಕಟೇಶ್, "ಅದು 2000ನೇ ಇಸವಿಯ ಆಚೀಚೆಯ ಸಮಯ. ಆ ಸಮಯದಲ್ಲಿ ನಾನು ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹಲವು ಕೇಸುಗಳನ್ನು ನಡೆಸುತ್ತಿದ್ದೆ. ಹೀಗಿರುವಾಗಲೇ ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಅವರ ಬಗ್ಗೆ ಅವಹೇಳನಕಾರಿ ವರದಿಯೊಂದನ್ನು ಪ್ರಕಟಿಸಿದ್ದಳು. ವರದಿಗಾರರು ಬರೆದ ವರದಿಯನ್ನು ಆಕೆ ಮುದ್ರಿಸಿದ್ದಳು. ಅವಳ ಕೇಸುಗಳೂ ನನ್ನ ಬಳಿ ಇತ್ತು. ಹೀಗಾಗಿ, ಆಕೆಯನ್ನು ಕರೆಸಿ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರನ್ನು ಪರಿಚಯ ಮಾಡಿಸಿದೆ. ಆ ನಂತರ ಆಕೆ ಅವರಿಗೆ ಎಷ್ಟು ಹತ್ತಿರವಾದಳು ಎಂದರೆ, ಅಕ್ಕ ಅಂತಲೇ ಎಲ್ಲರೂ ಕರೆಯಲು ಶುರುಮಾಡಿದರು,'' ಎನ್ನುತ್ತಾರೆ.

ಹಾಗೆ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜತೆಗೆ ಗೌರಿ ಲಂಕೇಶ್ ಮೊದಲ ಮುಖಾಮುಖಿ ಆಯಿತು. ನಂತರದ ದಿನಗಳಲ್ಲಿ ಗೌರಿ ಭಾಗವಹಿಸಿದ ಎಲ್ಲಾ ಕಾರ್ಯಕ್ರಮಗಳಿಗೂ ಒಬ್ಬರಲ್ಲ ಒಬ್ಬರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಗಳು ಭಾಗವಹಿಸತೊಡಗಿದರು.

ಗೌರಿ ಹತ್ಯೆಗೀಡಾದ ದಿನ ಚಿತ್ರದುರ್ಗದಲ್ಲಿ ಇದ್ದರು ಸಂಗಮ ಸಂಸ್ಥೆಯ ಅಕೈ ಪದ್ಮಸಾಲಿ. "ನನಗೆ ಸುದ್ದಿ ಬಂದ ತಕ್ಷಣ ಏನು ಹೇಳುವುದು ಗೊತ್ತಾಗಲಿಲ್ಲ. ಕಣ್ಣೀರಿನ ಆಚೆಗೆ ನನಗೆ ಏನೂ ಉಳಿದಿರಲಿಲ್ಲ. ನಾನು ನನ್ನ ಅಕ್ಕನನ್ನು ಕಳೆದುಕೊಂಡಿದ್ದೆ,'' ಎಂದರು ಅಕೈ. ಸಂಗಮ ಸಂಸ್ಥೆ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ.

"ಗೌರಿ ಮತ್ತು ನನ್ನ ಗೆಳೆತನ ಆರಂಭವಾಗಿ ಸುಮಾರು 10 ವರ್ಷ ಕಳೆದಿರಬಹುದು. ಅವರು ಬಂದು ನಮ್ಮ ಮನೆಗಳಲ್ಲಿ ಊಟ ಮಾಡಿದ್ದಾರೆ. ನಮ್ಮ ಕಷ್ಟಗಳನ್ನು ಕೇಳಿದ್ದಾರೆ. ಪತ್ರಕರ್ತೆಯಾಗಿ ನಮ್ಮ ಪರವಾಗಿ ಬರೆದಿದ್ದಾರೆ. ಅಷ್ಟೆ ಅಲ್ಲ ನಮ್ಮ ಪರವಾಗಿ ಕಾನೂನು ರೂಪಿಸಲು ನಡೆಸಿದ ಹೋರಾಟಗಳಿಗೆ ಬೆಂಬಲಿಸಿದ್ದಾರೆ. ಹೀಗಾಗಿ ಆಕೆ ಬರೀ ಪತ್ರಕರ್ತೆ ಮಾತ್ರವೇ ಆಗಿರಲಿಲ್ಲ ನಮ್ಮ ಪಾಲಿಗೆ. ನಮ್ಮ ಅಕ್ಕ, ಅಮ್ಮ ಎಲ್ಲರೂ ಆಗಿದ್ದರು,'' ಎಂದು ನೆನಪಿಸಿಕೊಳ್ಳುತ್ತಾರೆ ಅಕೈ ಪದ್ಮಸಾಲಿ.

ಹೆಚ್ಚು ಕಡಿಮೆ ಇದೇ ಮಾದರಿಯ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಸಂಗಮ ಸಂಸ್ಥೆಯಲ್ಲಿ ಸದ್ಯ ಕೆಲಸ ಮಾಡುತ್ತಿರುವ ನಿಶಾ. ನಿಶಾ ಕೂಡ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅವರ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. "ಕೆಲವು ವರ್ಷಗಳ ಹಿಂದೆ ನಮ್ಮ ಬಗ್ಗೆ ಸಮಾಜದಲ್ಲಿ ಎಂತಹ ಭಾವನೆ ಇತ್ತು ಎಂಬುದು ನಿಮಗೆ ಗೊತ್ತು. ಆದರೆ ಇವತ್ತು ಪರಿಸ್ಥಿತಿ ಅಷ್ಟು ಕೆಟ್ಟದಾಗಿಲ್ಲ. ನಮ್ಮವರೂ ಉದ್ಯೋಗ ಮಾಡುತ್ತಿದ್ದಾರೆ. ಲೈಂಗಿಕ ವೃತ್ತಿ, ಭಿಕ್ಷಾಟನೆ ಆಚೆಗೂ ಬದುಕು ಇದೆ ಎಂದು ಕಂಡಿಕೊಂಡಿದ್ದಾರೆ. ಈ ಕಷ್ಟದ ಪಯಣದಲ್ಲಿ ಜತೆಯಲ್ಲಿ ಇದ್ದವರು ಗೌರಿ ಲಂಕೇಶ್. ಮನೆಗಳನ್ನು, ಸಂಬಂಧಗಳನ್ನು ಬಿಟ್ಟು ಬಂದ ನಮಗೆ ಅವರು ಭಾವನಾತ್ಮಕವಾಗಿಯೂ ಬೆಂಬಲವಾಗಿದ್ದರು,'' ಎನ್ನುತ್ತಾರೆ ನಿಶಾ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ 'ಪ್ರತಿರೋಧದ ಸಮಾವೇಶ'ದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಸಾಕಷ್ಟು ಜನ ಪಾಲ್ಗೊಂಡಿದ್ದರು. ವೇದಿಕೆಯಲ್ಲಿಯೂ ಅವರ ಪ್ರತಿನಿಧಿಯಾಗಿ 'ಬದುಕು ಬಯಲು- ಹಿಜ್ರಾ ಒಬ್ಬರ ಆತ್ಮಕತೆ' ಕೃತಿಯ ಲೇಖಕಿ ರೇವತಿ ಆಸೀನರಾಗಿದ್ದರು. ರೇವತಿ ಬರೆದ ಆತ್ಮಕತೆಯ ಕನ್ನಡ ಅನುವಾದವನ್ನು ಗೌರಿ ಪ್ರಕಟಿಸಿದ್ದರು.

ಸದ್ಯ ತಮಿಳುನಾಡಿನಲ್ಲಿರುವ ರೇವತಿ 'ಸಮಾಚಾರ'ದ ಜತೆ ಮಾತನಾಡಿ ಗೌರಿ ಜತೆಗಿನ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರಾದರು. "2009ರ ಸುಮಾರಿಗೆ ನಾನು ಬೆಂಗಳೂರಿನ ಸಂಗಮದಲ್ಲಿ ಕೆಲಸ ಮಾಡುತ್ತಿದ್ದೆ. ಈ ಸಮಯದಲ್ಲಿ ನಾನೊಂದು ಪುಸ್ತಕ ಹೊರತಂದೆ. ಎರಡನೇ ಪುಸ್ತಕ ನನ್ನ ಆತ್ಮಕತೆಯನ್ನು ಪೆಂಗ್ವಿನ್ ಪ್ರಕಾಶನ ಹೊರತಂತು. ಇದನ್ನು ಕನ್ನಡದಲ್ಲಿ ದು. ಸರಸ್ವತಿ ಅನುವಾದ ಮಾಡಿದರು. ಇದರ ಪ್ರಕಾಶನಕ್ಕೆ ಕೇಳಲು ನಾವು ಗೌರಿ ಅವರ ಕಚೇರಿಗೆ 2011ರಲ್ಲಿ ಹೋಗಿದ್ದೆವು. ಅದು ಅವರ ಮೊದಲ ಭೇಟಿ ಎಂದರು,'' ಎಂದರು ರೇವತಿ.

ಇದಾದ ನಂತರ ಗೌರಿ ಲಂಕೇಶ್ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಿದರು. "ಅದಕ್ಕೂ ಮುಂಚೆಯೇ ನನಗೆ 28 ಸಾವಿರದ ಚೆಕ್‌ ನೀಡಿದರು. ಅವತ್ತಿನ ನನ್ನ ಪರಿಸ್ಥಿತಿಯಲ್ಲಿ ದೊಡ್ಡ ಸಹಾಯ ಮಾಡಿದರು,'' ಎನ್ನುತ್ತಾರೆ ರೇವತಿ. "ಆ ನಂತರ ನನ್ನ ಪುಸ್ತಕವನ್ನು ಇಟ್ಟುಕೊಂಡು ಸಾಗರದ ಜನಮನದಾಟ ತಂಡ ರಾಜ್ಯಾದ್ಯಂತ ನಾಟಕ ಮಾಡಿದರು. ಅದರ 50ನೇ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಿದ್ದರು. ಆಗ ಗೌರಿ ಮತ್ತು ನಾನು ಒಟ್ಟಿಗೆ ವೇದಿಕೆ ಹಂಚಿಕೊಂಡೆವು. ಅದಾದ ಮೇಲೆ ಆಗಾಗ ಕರೆ ಮಾಡುತ್ತಿದ್ದೆ. ಕೊನೆಯ ಬಾರಿ ತಿಂಗಳ ಹಿಂದೆ ಕರೆ ಮಾಡಿದಾಗ ಅಕ್ಕ ಒತ್ತಡದಲ್ಲಿದ್ದರು. ನನ್ನ ಮೂರನೇ ಪುಸ್ತಕದ ಕನ್ನಡ ಪ್ರಕಾಶನದ ಬಗ್ಗೆ ಮಾತನಾಡಿದೆ. ಖಂಡಿತಾ ಪಬ್ಲಿಷ್ ಮಾಡೋಣ, ಸ್ವಲ್ಪ ಸಮಯ ಕೊಡು ಎಂದರು. ಅದು ಅವರ ಜತೆ ನಾನು ಆಡಿದ ಕೊನೆಯ ಮಾತು,'' ಎಂದು ಗದ್ಗದಿತರಾದರು ರೇವತಿ.

ಮೊನ್ನೆ ನಡೆದ ಸಮಾವೇಶದ ವೇದಿಕೆಯಲ್ಲಿಯೇ ಗೌರಿ ತಾಯಿ ಇಂದಿರಾ ಲಂಕೇಶ್ ಅಕೈ ಅವರನ್ನು ತಬ್ಬಿಕೊಂಡು ಕಂಬನಿ ಮಿಡಿದರು. ವೇದಿಕೆ ಕೆಳಗೆ ಕವಿತಾ ಲಂಕೇಶ್ ಕೂಡ ಅಕೈ ಅವರ ಜತೆ ಸಂಪಾತ ಹಂಚಿಕೊಂಡರು. ಗೌರಿ ಲಂಕೇಶ್ ಪತ್ರಕರ್ತೆಯಾಗಿ, ಹೋರಾಟಗಾರ್ತಿಯಾಗಿ ಮಾತ್ರವೇ ಲೈಂಗಿಕ ಅಲ್ಪಸಂಖ್ಯಾತರ ಜತೆ ಒಡನಾಟ ಇಟ್ಟುಕೊಂಡಿರಲಿಲ್ಲ; ಅದರ ಆಚೆಗೆ ಕುಟುಂಬದ ನೆಲೆಯಲ್ಲಿ ಭಾವನಾತ್ಮಕ ಸಂಬಂಧವೊಂದನ್ನೂ ಬೆಳೆಸಿಕೊಂಡಿದ್ದರು ಎಂಬುದಕ್ಕೆ ಇವು ಸಾಕ್ಷಿ. ಈ ಕಾರಣಕ್ಕಾಗಿಯೇ ಸಮಾಜದ ಶೋಷಿತ ಸಮುದಾಯವೊಂದು 'ನಾನೂ ಗೌರಿ' ಎಂಬ ಘೋಷಣೆಯಲ್ಲಿ ಜೊತೆಯಾಯಿತು.