samachara
www.samachara.com
ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ 'ಸತ್ಯ'ಗಳು!
ಸುದ್ದಿ ಸಾಗರ

ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ 'ಸತ್ಯ'ಗಳು!

ಸ್ಥಳ:

ಸಿರ್ಸಿಯ ಪ್ರವಾಸಿ ಮಂದಿರ.

ಪಾಲ್ಗೊಂಡವರು:

ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿ.

ವಿಷಯ:

ಅಭಿವೃದ್ಧಿ ಸಭೆ.

ಪತ್ರಕರ್ತ:

ಇಡೀ ಭಟ್ಕಳವೇ ಭಾರತದಲ್ಲಿ ಭಯೋತ್ಪಾದನೆಯ ಮೂಲಕೇಂದ್ರ ಅಂತ ಹೇಳ್ತಿದೀರ. ಅದರ ಬಗ್ಗೆ ಆಕ್ಷನ್ ಆಗಬೇಕಲ್ಲ...

ಹೆಗಡೆ: ವಿರೂಪಾಕ್ಷ ಅವರು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಾನು ಹೇಳಿರುವ ಶಬ್ಧಗಳಲ್ಲಿಯೇ ನೀವು ಟೆಲಿಕಾಸ್ಟ್ ಮಾಡಬೇಕು. ಅದು ನನ್ ಕಂಡೀಷನ್. ಮುಂಚೆನೇ ಅಧಿಕೃತವಾಗಿ ಹೇಳ್ತಿನಿ, ನಾನು ಹೇಳಿರುವ ಶಬ್ಧಗಳು ನನ್ನವೇ ಅಂತ...

ಎಲ್ಲಿ ತನಕ ಜಗತ್ತಿನಲ್ಲಿ ಇಸ್ಲಾಂ ಇರುತ್ತೊ, ಅಲ್ಲೀವರೆಗೆ ಭಯೋತ್ಪಾದನೆ ಇರುತ್ತೆ. ಎಲ್ಲಿ ತನಕ ನಾವು ಈ ಜಗತ್ತಿನಿಂದ ಇಸ್ಲಾಂ ಅನ್ನು ಮೇಲೋತ್ಪಾಟನೆ ಮಾಡುವುದಿಲ್ಲವೋ, ಅಲ್ಲೀ ತನಕ ಭಯೋತ್ಪಾದನೆಯನ್ನು ಕಿತ್ತು ಹಾಕಲು ಸಾಧ್ಯವಿಲ್ಲ...ಪತ್ರಿಕೆಗಳಲ್ಲಿ ಬರೆಯುವ ಅವಕಾಶ ಇದ್ದರೆ ಇದೇ ಶಬ್ಧಗಳಲ್ಲಿ ಪ್ರಕಟ ಮಾಡಿ. ಇಸ್ಲಾಂ ಒಂದು ಈ ಜಗತ್ತಿನ ಶಾಂತಿಗೆ ಇಟ್ಟಿರುವ ಬಾಂಬ್...ಇಸ್ಲಾಂ ಇರೋ ತನಕ ಜಗತ್ತಿನಲ್ಲಿ ಶಾಂತಿ ಇಲ್ಲ...

ಆಫ್ ಮಾಡ್ಕೊಂಡ್ರಾ...(ನಗು)

ಇದು

ಕಳೆದ ಫೆಬ್ರವರಿ ತಿಂಗಳಿನಲ್ಲಿ ಉತ್ತರ ಕರ್ನಾಟಕ ಕ್ಷೇತ್ರದ ಬಿಜೆಪಿ ಸಂಸದ, ಹಾಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸುದ್ದಿ ಕೇಂದ್ರ ಬರಲು ಕಾರಣವಾದ ಹೇಳಿಕೆಯ ಸನ್ನಿವೇಷ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇಂದ್ರದಲ್ಲಿ ಸಂಪುಟ ಪುನಾರಚನೆಗೆ ಭಾನುವಾರ ಪ್ರಧಾನಿ ಮೋದಿ ಮುಂದಾದಾಗ ರಾಜ್ಯದಿಂದ ಆಯ್ಕೆಯ ಬಗ್ಗೆ ಕುತೂಹಲ ಮನೆ ಮಾಡಿತ್ತು. ಬಿಜೆಪಿಯ ಹಲವು ಸಂಸದರು ಜಾತಿ ಮತ್ತಿತರ ಕಾರಣಗಳಿಗಾಗಿ ತಮಗೆ ಸಚಿವ ಸ್ಥಾನ ಸಿಗಬಹುದು ಎಂದು ದಿಲ್ಲಿಯಲ್ಲಿಯೇ ಠಿಕಾಣಿ ಹೂಡಿದ್ದರು. ಆದರೆ, ಅಚ್ಚರಿಯ ಆಯ್ಕೆಯಲ್ಲಿ ಸಚಿವರಾಗುವ ಭಾಗ್ಯ ಅನಂತ ಕುಮಾರ್ ಹೆಗಡೆ ಅವರಿಗೆ ಒಲಿದು ಬಂತು.

ಯಾರು ಈ ಹೆಗಡೆ? 

ಹೆಗಡೆ ಕುರಿತು ಒಂದಷ್ಟು ಆಳಕ್ಕೆ ಇಳಿದರೆ, ವ್ಯಕ್ತಿತ್ವದ ಅಸಲಿ ಮುಖಗಳ ಅನಾವರಣ ಆಗುತ್ತದೆ. ಹುಟ್ಟಿದ್ದು ಸಿರ್ಸಿಯ  ದತ್ತಾತ್ರೇಯ ಹೆಗಡೆ ಹಾಗೂ ಲಲಿತಾ ಹೆಗಡೆ ಅವರ ಪುತ್ರನಾಗಿ; 1968ರಲ್ಲಿ. ಹೈಸ್ಕೂಲು ಪ್ರವೇಶಿಸುತ್ತಿದ್ದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡನಾಟಕ್ಕೆ ಬಂದವರು. ಹಿಂದೂ ಜಾಗರಣ ವೇದಿಕೆಯಲ್ಲಿ ಹೊಣೆಗಾರಿಕೆ ನಿಭಾಯಿಸಿದವರು. 1996ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಕನ್ನಡ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ, ಗೆದ್ದರು. ಅಲ್ಲಿಂದ ಮುಂದೆ, ಒಮ್ಮೆ ಹೊರತು ಪಡಿಸಿ, ಸತತ ಐದು ಬಾರಿ ಲೋಕಸಭಾ ಚುನಾವಣೆಗಳಲ್ಲಿ ಜನರಿಂದ ಆಯ್ಕೆಯಾಗುತ್ತಲೇ ಬಂದವರು.

"ಅನಂತ ಕುಮಾರ್ ಹೆಗಡೆ ಎಂತಹ ರಾಜಕಾರಣಿ ಅಂದರೆ; ಡೋಂಟ್ ಕೇರ್ ವ್ಯಕ್ತಿತ್ವ. ಮುಸ್ಲಿಂರ ಮತಗಳು ನನಗೆ ಬೇಡ ಎಂದು ನೇರವಾಗಿ ಹೇಳಿದ ರಾಜಕಾರಣಿ. ಕಟ್ಟರ್ ಹಿಂದುತ್ವವಾದಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವವರಲ್ಲ. ಒಮ್ಮೆ ಏನಾಯ್ತು ಎಂದರೆ, ಜಿಲ್ಲಾ ಮಟ್ಟದ ಪತ್ರಿಕೆಯೊಂದು ಅವರ ಬಗ್ಗೆ ನೆಗೆಟಿವ್ ಸ್ಟೋರಿ ಬರೆದಿತ್ತು. ಮಾರನೇ ದಿನ ನಾವು ಪತ್ರಕರ್ತರು ಕೇಳಿದಾಗ, ಅದು ನಾವು ಟಾಯ್ಲೆಟ್‌ನಲ್ಲಿ ಬಳಸುವ ಲೆವೆಲ್‌ ಪತ್ರಿಕೆ. ಅದರಲ್ಲಿ ಬಂದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದರು. ಇದು ಅವರ ರಿಯಲ್ ಫೇಸ್,'' ಎನ್ನುತ್ತಾರೆ ಪತ್ರಕರ್ತೆ ಪೂರ್ಣಿಮಾ ಹೆಗಡೆ. ಹಿಂದೆ, ಕಾರವಾರದಲ್ಲಿ ಟಿವಿ ವಾಹಿನಿಗೆ ಜಿಲ್ಲಾ ವರದಿಗಾರ್ತಿಯಾಗಿ ಇರುವ ಕೆಲಸ ಮಾಡಿದ್ದವರು.

ಮುಸ್ಲಿಂ ದ್ವೇಷಿ:

ಮೇಲೆ ನಿರೂಪಿಸಿರುವ ಪತ್ರಿಕಾಗೋಷ್ಠಿಯ ಪ್ರಜ್ಞಾಪೂರ್ವಕ ಹೇಳಿಕೆ ಅನಂತ ಕುಮಾರ್ ಹೆಗಡೆ ನೀಡಿದ ಹಲವು ಮುಸ್ಲಿಂ ದ್ವೇಷಿ ಹೇಳಿಕೆಗಳ ಒಂದು ಸ್ಯಾಂಪಲ್ ಅಷ್ಟೆ. ಅವರ ಇಡೀ ರಾಜಕೀಯ ನೆಲೆ ನಿಂತಿರುವುದೇ ಕಟ್ಟರ್ ಹಿಂದುತ್ವದ ನೆಲೆಯ ಮೇಲೆ. "1996ರ ಚುನಾವಣೆ ಸಮಯ. ನಾನಾ ರಾಷ್ಟ್ರೀಯ ವಾಹಿನಿಗಾಗಿ ವರದಿ ಮಾಡಲು ಸಿರ್ಸಿಗೆ ಹೋಗಿದ್ದೆ. ಹೆಗಡೆ ಸಂದರ್ಶನಕ್ಕೆ ಕಾಯುತ್ತಿದ್ದೆವು. ರಾತ್ರಿ ಆದ್ರೂ ಅವರ ಪತ್ತೆ ಇಲ್ಲ. ನನ್ನ ಕ್ಯಾಮೆರಾಮೆನ್ ಮಲಗಿಕೊಂಡ್ರು. ನೋಡಿದ್ರೆ ಬೆಳಗ್ಗೆ ಐದು ಗಂಟೆಗೆ ಬಂದು ಮಾತನಾಡಿಕೊಂಡು ಹೋದರು ಹೆಗಡೆ. ಅವತ್ತಿಗಾಗಲೇ ಆ ಭಾಗದಲ್ಲಿ ಒಡೆದು ಆಳುವ ರಾಜಕಾರಣವನ್ನು ದೊಡ್ಡ ಮಟ್ಟದಲ್ಲಿ ಹೆಗಡೆ ಮಾಡಲಾರಂಭಿಸಿದ್ದರು. ಜನ ಅದನ್ನು ಗುರುತಿಸಲು ಶುರು ಮಾಡಿದ್ದರು,'' ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಕಳೆದ ಚುನಾವಣೆ ಸಮಯದಲ್ಲಿ ಅವರಿಗೆ ಎದುರಿಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿದವರು ಸಚಿವ ದೇಶಪಾಂಡೆ ಪುತ್ರ. ಆ ಸಮಯದಲ್ಲಿ ತಮ್ಮ ಎದುರಾಳಿಗಳನ್ನು ಮಣಿಸಲು ಹೆಗಡೆ ಅನುಸರಿಸಿದ್ದು ಮತ್ತದೇ ಭಯೋತ್ಪಾದನಾ ಅಸ್ತ್ರ. "ದೇಶಪಾಂಡೆ ಮೂಗಿನ ನೇರದಲ್ಲಿಯೇ ಭಟ್ಕಳದ ಭಯೋತ್ಪಾದಕರು ಬೆಳೆದು ಬಂದಿದ್ದಾರೆ. ಇದರಿಂದ ಭಟ್ಕಳಕ್ಕೆ ರಾಷ್ಟ್ರಮಟ್ಟದಲ್ಲಿ ಕಪ್ಪು ಚುಕ್ಕೆ ಅಂಟಿಕೊಂಡಿದೆ,'' ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

"ಹಾಗಂತ ಹೆಗಡೆ ಮುಸ್ಲಿಂರನ್ನು ಬಿಟ್ಟು ಇಲ್ಲ. ಹೇಳಿಕೆ ನೀಡುವುದು, ಸುದ್ದಿಯಾಗುವುದು ಅವರ ಹೊರಗಿನ ಮುಖ ಅಷ್ಟೆ. ಅವರ ಒಡನಾಟ ಇರುವುದೆಲ್ಲವೂ ಮುಸ್ಲಿಂರ ಜತೆಯಲ್ಲಿ. ಅವರ ಪತ್ನಿ ನಡೆಸುವ ಉದ್ಯಮದಲ್ಲಿ ಮುಸ್ಲಿಂರ ಪಾತ್ರ ದೊಡ್ಡದಿದೆ. ಬಿಜೆಪಿ ಇನ್ನೊಬ್ಬ ಸ್ಥಳೀಯ ನಾಯಕ ಕಾಗೇರಿ ಅವರಿಗೆ ಹೋಲಿಸಿದರೆ ಹೆಗಡೆ ಜಾತಿವಾದಿ ಅಲ್ಲ. ಯಾವಾಗಲೂ ಸುತ್ತಮುತ್ತ ಹಿಂದುಳಿದ ವರ್ಗದವರನ್ನು ಇಟ್ಟುಕೊಂಡೇ ತಿರುಗುತ್ತಾರೆ,'' ಎನ್ನುತ್ತಾರೆ ಸದ್ಯ ಕಾರವಾರದ ಟಿವಿ ವರದಿಗಾರರೊಬ್ಬರು.

ಕೇಸುಗಳ ಇತಿಹಾಸ: 

ಹೆಗಡೆ ತಮ್ಮ ತಾಯಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ವೈದ್ಯರಿಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ಸಮಯದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಿರ್ಸಿಯ ಪ್ರವಾಸಿ ಮಂದಿರದಲ್ಲಿ ನೀಡಿದ ಮುಸ್ಲಿಂ ದ್ವೇಷಿ ಹೇಳಿಕೆ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸರು ಪತ್ರಕರ್ತರನ್ನೇ ಸಾಕ್ಷಿಗಳನ್ನಾಗಿ ಮಾಡಿಕೊಂಡಿದ್ದಾರೆ. ಇವುಗಳ ಜತೆಗೆ, ಅವರ ಮೇಲಿರುವ ಇನ್ನೊಂದಿಷ್ಟು ಪ್ರಕರಣಗಳ ಮಾಹಿತಿ ಲಭ್ಯವಾಗಬೇಕಿದೆ. ಅವರೇ ಚುನಾವಣಾ ಆಯೋಗಕ್ಕೆ ಘೋಷಣೆ ಮಾಡಿಕೊಂಡ ಅಪರಾಧಗಳ ಇತಿಹಾಸ ಹೀಗಿದೆ:

ದ್ವೇಷ ಬಿತ್ತಿ ಅಧಿಕಾರದ ಬೆಳೆ ಬೆಳೆದ ಬಿಜೆಪಿ ಸಂಸದ; ಅನಂತ ಕುಮಾರ್ ಹೆಗಡೆ ಕುರಿತು ನಿಮಗೆ ಗೊತ್ತಿಲ್ಲದ 'ಸತ್ಯ'ಗಳು!

ಹೆಗಡೆ ಐದು ಬಾರಿ ಸಂದಸರಾಗಿ ಆಯ್ಕೆ ಆಗಿದ್ದರೂ, ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಹಿಂದೆಯೇ ಉಳಿದಿದ್ದಾರೆ. "ಹೆಗಡೆ ವಿಚಿತ್ರ ರಾಜಕಾರಣಿ. ಗೆದ್ದ ಮೇಲೆ ಕ್ಷೇತ್ರಕ್ಕೆ ಬರೋದು ಮುಂದಿನ ಚುನಾವಣೆಗೆ. ಅವರು ಜನರಿಗೆ ಸಿಗೋದು, ಮಾತನಾಡೋದು ಕಡಿಮೆ. ಪ್ರಧಾನ ಮಂತ್ರಿ ಗ್ರಾಮ ದತ್ತು ಯೋಜನೆಯಲ್ಲಿ ಗ್ರಾಮವೊಂದನ್ನು ದತ್ತು ತೆಗೆದುಕೊಂಡರು. ಆದರೆ ಅದಕ್ಕೆ ಎರಡು ಬಾರಿ ಅಷ್ಟೆ ಭೇಟಿ ನೀಡಿದ್ದಾರೆ. ಅಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಸಿರ್ಸಿಯಲ್ಲಿ ಗುಡ್ಡ ಕುಸಿದ ಸಮಯದಲ್ಲಿ ಭಾರಿ ಆಶ್ವಾಶನೆಗಳನ್ನು ನೀಡಿ ಹೋದವರು ಮತ್ತೆ ಆ ಕಡೆ ತಲೆ ಹಾಕಲಿಲ್ಲ,'' ಎನ್ನುತ್ತಾರೆ ಕಾರವಾರದ ಇನ್ನೊಬ್ಬ ಟಿವಿ ಪತ್ರಕರ್ತರು.

ಅಡಿಕೆಗೆ ಬೆಲೆ ಕಡಿಮೆಯಾದಾಗ ತಮ್ಮದೇ 'ಕದಂಬ' ಸಂಸ್ಥೆಯ ಮೂಲಕ ಅರೆಕಾ ವುಡ್ ಪರಿಚಯಿಸಿದ್ದು, ವೆನಿಲ್ಲಾ ಬೆಳೆಯನ್ನು ಪ್ರೋತ್ಸಾಹಿಸಿದ್ದು ಹೀಗೆ ಅವರ ಸುದೀರ್ಘ ರಾಜಕೀಯ ದಿನಗಳಲ್ಲಿ ಮಾಡಿದ ಗುರುತಿಸುವಂತಹ ಕೆಲಸಗಳು. ಅದರಾಚೆಗೆ ಭಟ್ಕಳ, ಭಯೋತ್ಪಾದನೆ ಮತ್ತು ಮುಸ್ಲಿಂ ವಿರೋಧಿ ಹೇಳಿಕೆಗಳ ಮಾತ್ರಕ್ಕೆ ಅವರು ಸತತ ಗೆಲುವು, ಈಗ ಕೇಂದ್ರ ಅಧಿಕಾರದ ಅವಕಾಶ ಪಡೆದುಕೊಂಡಿರುವುದು ಅವರ ಸದ್ಯದ ಸಾಧನೆ.

ಅನಂತ ಕುಮಾರ್ ಹೆಗಡೆ ಆಯ್ಕೆ ಮೂಲಕ ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಅಜೆಂಡಾ ಏನಾಗಿರಲಿದೆ ಎಂಬ ದಿಕ್ಸೂಚಿಯಂತೂ ಸಿಕ್ಕಿದೆ.