samachara
www.samachara.com
'ಸಂಪುಟ ಪುನಾರಚನೆ': ಪ್ರತ್ಯೇಕ ಅಖಾಡಗಳಲ್ಲಿ ನಡೆದ ಪ್ರಧಾನ ಹಾಗೂ ಮುಖ್ಯಮಂತ್ರಿಗಳ ವೀಕೆಂಡ್ ಪಂದ್ಯ!
ಸುದ್ದಿ ಸಾಗರ

'ಸಂಪುಟ ಪುನಾರಚನೆ': ಪ್ರತ್ಯೇಕ ಅಖಾಡಗಳಲ್ಲಿ ನಡೆದ ಪ್ರಧಾನ ಹಾಗೂ ಮುಖ್ಯಮಂತ್ರಿಗಳ ವೀಕೆಂಡ್ ಪಂದ್ಯ!

samachara

samachara

ಕೇಂದ್ರದಲ್ಲಿ

ಸಂಪುಟ ಪುನಾರಚನೆ ಕೆಲಸವನ್ನು ಪ್ರಧಾನಿ ಮೋದಿ ತಮ್ಮ ಚೈನಾ ಟೂರ್‌ಗೂ ಮುನ್ನವೇ ಮುಗಿಸಿಬಿಟ್ಟಿದ್ದಾರೆ.

ಭಾನುವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಂದಷ್ಟು ಹೊಸ ಮುಖಗಳಿಗೆ, ಹಳೆಯ ಮುಖಗಳಿಗೆ ಹೊಸ ಹೊಣೆಗಾರಿಕೆ ಜತೆಗೆ ಪ್ರತಿಜ್ಞಾ ವಿಧಿಗಳನ್ನು ಹಾಗೂ ಗೌಪ್ಯತೆ ವಿಧಿಗಳನ್ನು ಬೋಧಿಸಲಾಯಿತು. ನಿರ್ಮಲಾ ಸೀತಾರಾಮ್ ಹಾಗೂ ಮಾಜಿ ಅಧಿಕಾರಿ ಹರದೀಪ್‌ ಸಿಂಗ್ ಪುರಿ ಇಂಗ್ಲಿಷ್‌ನಲ್ಲಿ ಪ್ರತಿಜ್ಞಾ ವಿಧಿಗಳನ್ನು ಓದಿದರು. ಕರ್ನಾಟಕ ಮೂಲದ ಅನಂತಕುಮಾರ್‌ ಹೆಗಡೆ ಒಳಗೊಂಡಂತೆ ಉಳಿದ 7 ಜನ ಹಿಂದಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ವಾಚಿಸಿದರು. ವಿಶೇಷ ಎಂದರೆ, ಎಲ್ಲಾ 9 ಜನ 'ಈಶ್ವರ'ನ ಹೆಸರಿನಲ್ಲಿ ಶಪಥ ಮಾಡಿದರು.

ಧರ್ಮೇಂದ್ರ ಪ್ರಧಾನ್,  ಪಿಯುಷ್ ಗೋಯಲ್, ನಿರ್ಮಲಾ ಸೀತಾರಾಮನ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸಚಿವರುಗಳಾಗಿ ಶಿವ ಪ್ರತಾಪ್ ಸುಕ್ಲಾ, ಅಶ್ವಿನಿ ಕುಮಾರ್ ಚೋವೆ, ಡಾ. ವೀರೇಂದ್ರ ಕುಮಾರ್, ಅನಂತ್ ಕುಮಾರ್ ಹೆಗ್ಡೆ, ರಾಜ್ ಕುಮಾರ್ ಸಿಂಗ್, ಮಾಜಿ ಪೊಲೀಸ್ ಅಧಿಕಾರಿ ಹರ್ದೀಪ್ ಸಿಂಗ್ ಪುರಿ, ಗಜೇಂದ್ರ ಸಿಂಗ್ ಶೇಖಾವತ್, ಡಾ. ಸತ್ಯಪಾಲ್ ಸಿಂಗ್, ಮಾಜಿ ಐಎಎಸ್ ಅಧಿಕಾರಿ ಅಲ್ಫಾನ್ಸೂ ಕಣ್ಣಮ್‌ತಾನಮ್ ಅಧಿಕಾರ ಸ್ವೀಕರಿಸಿದರು.

ಕಳೆದ ಮೂರು ವರ್ಷಗಳಲ್ಲಿ ವರ್ಷಕ್ಕೆ ಎರಡು ಮೂರು ವಿಶ್ವಕಪ್ ಮಿನಿ ಪಂದ್ಯಾವಳಿಗಳನ್ನು ಆಡುತ್ತಾ ಬಂದವರು ಪ್ರಧಾನಿ ಮೋದಿ. ವೀಕೆಂಡ್‌ ಸಮಯದಲ್ಲಿ ನಡೆದ ಈ ಸಂಪುಟ ಪುನಾರಚನೆಯ ಪ್ರಕ್ರಿಯೆಯೂ ಅವರ ಮತ್ತೊಂದು ಆಟ. ಇದರಲ್ಲೂ ಅವರ ಬ್ಯಾಟಿಂಗ್ ಶೈಲಿಯ ಅಚ್ಚರಿಗಳನ್ನು ನೀಡಲು ಮರೆಯಲಿಲ್ಲ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ರಕ್ಷಣಾ ಖಾತೆಯನ್ನು ಮತ್ತೊಬ್ಬ ಮಹಿಳೆಗೆ ಈ ಬಾರಿ ನೀಡಿದ್ದಾರೆ. ನೇರ ಚುನಾವಣೆಗೆ ಹೋಗದ, ದಿಲ್ಲಿಯ ಜೆಎನ್‌ಯೂನಲ್ಲಿ ಕಲಿತ ನಿರ್ಮಲಾ ಸೀತಾರಾಮ್‌ ಅವರಿಗೆ ರಕ್ಷಣಾ ಖಾತೆ ನೀಡುವ ಮೂಲಕ ಕುತೂಹಲಕಾರಿ ನಡೆ ಇಟ್ಟಿದ್ದಾರೆ. ಇಬ್ಬರು ಮಾಜಿ ಅಧಿಕಾರಿಗಳಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡುವ ಮೂಲಕ ಪ್ರಜಾಪ್ರಭುತ್ವದ ರಾಜಕೀಯ ಅಂಗವನ್ನು ಕಾರ್ಯಾಂಗಕ್ಕೂ ಬಾಗಿಲು ತೆರೆದಿದ್ದಾರೆ.

ಕರ್ನಾಟಕದ ವಿಚಾರಕ್ಕೆ ಬಂದರೆ, ರಾಜ್ಯ ಬಿಜೆಪಿಯ ಎಲ್ಲಾ ಸಂಸದರ ಆಸೆಗೆ ತಣ್ಣೀರು ಎಚಿದ್ದಾರೆ. ಜಾತಿ, ಪ್ರಾದೇಶಿಕ ಅಂಶಗಳನ್ನು ಪಕ್ಕಕ್ಕೆ ತಳ್ಳಿರುವುದು ಹಾಗೂ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ'ದ ಆಯ್ಕೆಗೆ ಮನ್ನಣೆ ನೀಡಿರುವುದು ಸ್ಪಷ್ಟವಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಸಂಸದರಾಗಿ ಸತತವಾಗಿ ಆಯ್ಕೆಗೊಳ್ಳುತ್ತ ಬಂದಿರುವ ಅನಂತಕುಮಾರ್‌ ಹೆಗಡೆ ಅವರಿಗೆ ಅವಕಾಶ ನೀಡಿದ್ದಾರೆ.

ಈ ಕುರಿತು ರಾಜ್ಯ ಬಿಜೆಪಿ ನಾಯಕಿ, ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದ ಶೋಭ ಕರಂದ್ಲಾಜೆ ಹಾಗೂ ಆರ್‌ಎಸ್‌ಎಸ್‌ ಮೂಲಗಳ ಪ್ರತಿಕ್ರಿಯೆಗೆ ಸಂಪರ್ಕಿಸಲಾಯಿತಾದರೂ, ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ.

ಹಾಗೆ ನೋಡಿದರೆ, ಹೆಗಡೆ ಕರ್ನಾಟಕದ ರಾಜಕೀಯದಲ್ಲಿ ಮುಖ್ಯವಾಹಿನಿಯ ಬಿಜೆಪಿ ರಾಜಕೀಯದ ಜತೆ ಗುರುತಿಸಿಕೊಂಡವರೇನಲ್ಲ. ಇಲ್ಲಿರುವ ಬಿಜೆಪಿ ಒಳಗಿನ ಬಣ ರಾಜಕೀಯದಿಂದ ದೂರವೇ ಉಳಿದವರು. ಆದರೆ ಅವರು ಹೆಸರು ವೈದ್ಯರ ಮೇಲೆ ಹಲ್ಲೆ ನಡೆಸಿದಂತಹ ಸಮಯಗಳಲ್ಲಿ, ಇಸ್ಲಾಂಗೆ ಅವಹೇಳನದ ಆರೋಪಗಳು ಬಂದಾಗ, ಭಟ್ಕಳದಲ್ಲಿ ಅಶಾಂತಿ ನೆಲಸಿದ ಸಮಯಗಳಲ್ಲಿ ಮಾತ್ರವೇ ಸುದ್ದಿಕೇಂದ್ರಕ್ಕೆ ಬರುತ್ತಿತ್ತು. ಇವತ್ತಿನ ಬಿಜೆಪಿ ಎಲ್ಲಾ ಸಂಸದರಿಗೆ ಹೋಲಿಸಿದರೆ, ಹೆಗಡೆ ಕರ್ನಾಟಕದ 'ಸಾಕ್ಷಿ ಮಹರಾಜ್', ಯೋಗಿ ಆದಿತ್ಯನಾಥ್ ತರಹದ ಸಂಸದರಾಗುವ ಗುಣಲಕ್ಷಣಗಳಿಗೆ ಹತ್ತಿರದಲ್ಲಿದ್ದವರು. ಅವರನ್ನೀಗ ಕೇಂದ್ರ ಸಚಿವರನ್ನಾಗಿ ಮಾಡುವ ಮೂಲಕ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಕ್ಕೆ ಸಂದೇಶ ತಲುಪಿಸಿದ್ದಾರೆ. ವಿಶೇಷ ಅಂದರೆ, ಈ ಸಂದೇಶ ರಾಜ್ಯದ ಬಿಜೆಪಿ ಬೆಂಬಲಿಗರಿಗೆ ಮಾತ್ರವಲ್ಲ; ಪಕ್ಷ ರಾಜ್ಯ ನಾಯಕರಿಗೂ ಪರೋಕ್ಷ ಎಚ್ಚರಿಕೆ ಇದ್ದ ಹಾಗಿದೆ.

ಕರ್ನಾಟಕದ ಮೇಲಿನ ಪರಿಣಾಮಗಳು: 

ಹೆಚ್ಚು ಕಡಿಮೆ ಇದೇ ಮಾದರಿಯ ಸಂಪುಟ ಪುನಾರಚನೆಯ ಪ್ರಕ್ರಿಯೆಯನ್ನೂ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂದು ದಿನ ಮುಂಚೆ ವೀಕೆಂಡ್ ಆರಂಭಕ್ಕೂ ಮುನ್ನವೇ ಮಾಡಿ ಮುಗಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಗೀತಾ ಮಹದೇವಪ್ರಸಾದ್ ಅಧಿಕಾರಿ ಸ್ವೀಕರಿಸಿದ್ದಾರೆ.


       ಸಿಎಂ ಸಿದ್ದರಾಮಯ್ಯ. (ಡಿಎನ್‌ಎ)
ಸಿಎಂ ಸಿದ್ದರಾಮಯ್ಯ. (ಡಿಎನ್‌ಎ)

ಕೆಲವು ದಿನಗಳ ಹಿಂದೆ ಆರ್‌ಎಸ್‌ಎಸ್‌ ಅಧಿಕೃತ ಸಂದರ್ಶನವೊಂದನ್ನು 'ಸಮಾಚಾರ'ಕ್ಕೆ ನೀಡಿತ್ತು. ಈ ಸಮಯದಲ್ಲಿ ಕರ್ನಾಟಕ ಸಿದ್ದರಾಮಯ್ಯ ಸರಕಾರವನ್ನು ಆರ್‌ಎಸ್‌ಎಸ್‌ ಹೇಗೆ ನೋಡುತ್ತಿದೆ ಎಂಬುದು ಸೂಚ್ಯವಾಗಿ ಗೊತ್ತಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಸಾಮಾಜಿಕ ನ್ಯಾಯದ ನೆಲೆಯಲ್ಲಿಯೇ ಸಿದ್ದರಾಮಯ್ಯ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿದ್ದರಾಮಯ್ಯ ಇನ್ನಷ್ಟು ಅಗ್ರೆಸಿವ್ ಆಗಿದ್ದಾರೆ. "ಲೆಕ್ಕ ಕೋಡ್ಬೇಕಾ?" ಎಂದು ಮೋದಿ, ಶಾ ಜೋಡಿಯನ್ನು ಪ್ರಶ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ 'ಯುದ್ಧ ರಾಮಯ್ಯ' ಎಂದು ನೆರೆಯ ರಾಜ್ಯಗಳಲ್ಲಿ ಹೊಗಳಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಬಗ್ಗೆ ವಿಶೇಷ ಪುಟಗಳು ಹೊರಬರುತ್ತಿವೆ. ಇಂತಹ ಸಮಯದಲ್ಲಿ ಕರ್ನಾಟಕದ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ನ್ಯಾಯದ ನೆಲೆಯ ರಾಜಕೀಯದಲ್ಲಿ ಸೋಲಿಸುವುದು ಕಷ್ಟ. ಬದಲಿಗೆ, ಬಿಜೆಪಿಯ ಸಾಂಪ್ರದಾಯಿಕ 'ರಾಮ್ ಮಂದಿರ'ದ ನೆಲೆಯನ್ನೇ ನೆಚ್ಚಿಕೊಳ್ಳಬೇಕಿದೆ. ಅಂತಹ ಅಸ್ತ್ರಗಳ ಬಳಕೆಗೆ ಅವುಗಳ ಬಗ್ಗೆ ಒಲವು ಮತ್ತು ತಿಳಿವಳಿಕೆ ಇದ್ದವರಿಗೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಹೆಗಡೆ ಆಯ್ಕೆ ಸ್ಪಷ್ಟವಾಗಿ ಬಿಜೆಪಿಯ ಕೋರ್ ಆಲೋಚನೆಯ ಫಲ.

ಎರಡೂ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ತಮ್ಮದೇ ಆದ ಕಾರಣಗಳಿಗೆ ಮುಂದಿನ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಎರಡೂ ಬೇರೆ ಬೇರೆ ಅಖಾಡದಲ್ಲಿ ನಡೆದ ಪ್ರತ್ಯೇಕ ಪಂದ್ಯಾವಳಿಗಳಾದರೂ ಒಂದಕ್ಕೊಂದು ಸಂಬಂಧವಿದೆ. ಚುನಾವಣೆಯೂ ಹೊಸ್ತಿಲಲ್ಲಿ ಇರುವುದರಿಂದ ಇವುಗಳ ಪರಿಣಾಮಗಳ ರಂಗೂ ಢಾಳಾಗಿಯೇ ಕಾಣಿಸಲಿದೆ.