samachara
www.samachara.com
'ಧರ್ಮ, ಉದ್ಯಮ, ಜನಪ್ರಿಯತೆ': ರಾಮ್ ರಹೀಮ್ ಪ್ರಕರಣದಿಂದ ಕಲಿಯಬೇಕಿರುವ ಪ್ರಮುಖ ಪಾಠ ಇಷ್ಟೆ
ಸುದ್ದಿ ಸಾಗರ

'ಧರ್ಮ, ಉದ್ಯಮ, ಜನಪ್ರಿಯತೆ': ರಾಮ್ ರಹೀಮ್ ಪ್ರಕರಣದಿಂದ ಕಲಿಯಬೇಕಿರುವ ಪ್ರಮುಖ ಪಾಠ ಇಷ್ಟೆ

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

"ನಾನು ನಿನ್ನನ್ನು ಇಲ್ಲಿಯೇ ಕೊಂದು ಹೂತು ಹಾಕಬಲ್ಲೆ. ನಿನ್ನ ಕುಟುಂಬದ ಸದಸ್ಯರು ನನ್ನ ಅನುಯಾಯಿಗಳು ಮತ್ತು ನನ್ನ ಬಗ್ಗೆ ಅವರಿಗೆ ಕುರುಡು ನಂಬಿಕೆ ಇದೆ. ನನಗೆ ಸರಕಾರಗಳ ಮಟ್ಟದಲ್ಲಿಯೂ ಸಂಪರ್ಕಗಳಿವೆ. ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರುಗಳು ನನ್ನ ಬಳಿ ಸಹಾಯ ಕೋರಿ ಬರುತ್ತಾರೆ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನಾನು ಮನಸ್ಸು ಮಾಡಿದರೆ ಸರಕಾರಿ ಸೇವೆಯಲ್ಲಿರುವ ನಿನ್ನ ಕುಟುಂಬ ಸದಸ್ಯರನ್ನು ಕೆಲಸದಿಂದ ಕಿತ್ತು ಹಾಕಿಸುತ್ತೇನೆ. ನನ್ನ ಹಿಂಬಾಲಕರಿಂದ ಅವರನ್ನು ಮಗಿಸುತ್ತೇನೆ ಮತ್ತು ಯಾವುದೇ ಸಾಕ್ಷಿಯನ್ನೂ ಉಳಿಸುವುದಿಲ್ಲ. ಇವತ್ತಿಗೆ ಡೇರಾ ಒಂದು ದಿನಕ್ಕೆ ಒಂದು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಇದೇ ಹಣದಲ್ಲಿ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಹಾಗೂ ನ್ಯಾಯಾಧೀಶರನ್ನು ಖರೀದಿಸುತ್ತೇನೆ....ಹೀಗೆ ಬೆದರಿಕೆ ಹಾಕುತ್ತಿದ್ದ ಮಹಾರಾಜ್ ಕಳೆದ ಮೂರು ವರ್ಷಗಳಿಂದ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಲೇ ಬಂದಿದ್ದಾರೆ. ಪ್ರತಿ 25-30 ದಿನಕ್ಕೆ ಒಮ್ಮೆ ನನ್ನ ಸರದಿ ಬರುತ್ತಿತ್ತು. ನನಗೆ ನಂತರ ಗೊತ್ತಾಗಿದ್ದು ಏನು ಎಂದರೆ, ನನ್ನಂತೆಯೇ ಡೇರಾದಲ್ಲಿ ಬದುಕುತ್ತಿದ್ದ ಅನೇಕ ಮಹಿಳೆಯರ ಮೇಲೆ ಮಹಾರಾಜ್ ಅತ್ಯಾಚಾರ ಎಸಗುತ್ತಿದ್ದರು. ಅದನ್ನು ಮಾಫಿ ಎಂದು ಕರೆಯಲಾಗುತ್ತಿತ್ತು..."

ಇದು, ಹದಿನೈದು ವರ್ಷಗಳ ಹಿಂದೆ 2002ರಲ್ಲಿ ಡೇರಾ ಸಚ್ಚಾ ಸೌದಾ ಹೆಸರಿನಲ್ಲಿ ಧಾರ್ಮಿಕ ಪಂಗಡವೊಂದನ್ನು ಮುನ್ನಡೆಸುತ್ತಿದ್ದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಕುರಿತು ಸಾಧ್ವಿಯೊಬ್ಬರು ದೇಶದ ಪ್ರಧಾನಿಗೆ, ಹರಿಯಾಣದ ಮುಖ್ಯಮಂತ್ರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಬರೆದ ಅನಾಮಧೇಯ ಪತ್ರದ ಒಂದು ಪ್ಯಾರಾ ಅಷ್ಟೆ.

ಅವತ್ತಿಗೆ ಇದು ದೊಡ್ಡ ಮಟ್ಟದ ಸುದ್ದಿಯೇನೂ ಆಗಿರಲಿಲ್ಲ. ಆ ಪತ್ರವನ್ನು ಹರಿಯಾಣದ ಸ್ಥಳೀಯ ಪತ್ರಿಕೆ 'ಪೂರ ಸಚ್ಚ್' ಸಂಪಾದಕ ರಾಮ್ ಚಂದರ್ ಛತ್ರಪತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ಅದಾಗಿ ಕೆಲವೇ ದಿನಗಳಲ್ಲಿ ಅವರನ್ನು ಮನೆಯ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಯಿತು. ಇವತ್ತಿಗೂ ರಾಮ್ ಚಂದರ್ ಛತ್ರಪತಿ ಮಗ ತಮ್ಮ ತಂದೆಯ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಸವೆಸುತ್ತಲೇ ಇದ್ದಾರೆ. ಆದರೆ, 15 ವರ್ಷಗಳ ನಂತರ ಸಾಧ್ವಿ ಅನಾಮಧೇಯ ಕರೆಗೆ ನ್ಯಾಯಾಲಯ ಸ್ಪಂದಿಸಿದೆ.

ಧರ್ಮಗುರು, ಬರಹಗಾರ, ನಿರ್ದೇಶಕ, ನಟ, ಪಾಪ್ ಸಿಂಗರ್, ಉದ್ಯಮಿ ಹೀಗೆ ನಾನಾ ವೇಷಗಳಲ್ಲಿ ಮುಳುಗೇಳುತ್ತಿದ್ದ ವಿಚಿತ್ರ ವ್ಯಕ್ತಿತ್ವ ಹೊಂದಿದ್ದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ಚಂಡೀಗಢದ ಹೊರವಲಯ ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಘೋಷಿಸಿದೆ. ಇದಾದ ನಂತರ ಹರಿಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರದ ಭೀಕರತೆಯನ್ನು ದೃಶ್ಯ ಮಾಧ್ಯಮಗಳು ತೋರಿಸುತ್ತಿವೆ. ಶಿಕ್ಷೆಯ ಪ್ರಮಾಣವನ್ನು ಆ. 28ರಂದು ಹರಿಯಾಣದ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.

ಧಾರ್ಮಿಕ ಭಯೋತ್ಪಾದನೆ:

ಕಳೆದ 20- 25 ವರ್ಷಗಳಲ್ಲಿ ಧರ್ಮ ಮತ್ತು ಉದ್ಯಮಗಳ ನಡುವಿನ ಸಂಬಂಧ ಗಾಢವಾಗಿ ಬೆಳೆಯುತ್ತಿದೆ. ಇದಕ್ಕೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದ ಗೊಬ್ಬರವೂ ನೆರವು ನೀಡುತ್ತಿದೆ. ಪರಿಣಾಮ, ಇವತ್ತು ಧಾರ್ಮಿಕ ಗುರುಗಳ ಪ್ರತಿಷ್ಠೆ ಮತ್ತು ಪ್ರಭಾವಗಳನ್ನು ಅವರು ಹೊಂದಿರುವ ಆಸ್ತಿ, ಹಣ ಬಲದ ಮೂಲಕ ಅಳೆಯಲಾಗುತ್ತದೆ. ಇದಕ್ಕೆ ಗುರ್ಮೀತ್ ರಾಮ್ ರಹೀಮ್ ಕೂಡ ಹೊರತಾಗಿರಲಿಲ್ಲ.

ಕೇವಲ 23 ವರ್ಷಕ್ಕೆ ಡೇರಾ ಸಚ್ಚಾ ಸೌದಾ ಎಂಬ ಪ್ರತ್ಯೇಕ ಧಾರ್ಮಿಕ ಪಂಗಡವೊಂದಕ್ಕೆ ಮೂರನೇ ಮುಖ್ಯಸ್ಥನಾಗಿ ಬಂದಾತ ಗುರ್ಮೀತ್ ರಾಮ್ ರಹೀಮ್ ಸಿಂಗ್. ಆತನೊಳಗಿದ್ದ ಖಯಾಲಿಗಳು ಕೇವಲ ಧಾರ್ಮಿಕ ಬೋಧನೆಗೆ ಸೀಮಿತವಾಗಲಿಲ್ಲ. ಕೃಷಿಯಿಂದ ಆರಂಭಗೊಂಡು ಬೆಳ್ಳಿ ಪರದೆವರೆಗೆ ನಾನಾ ಪ್ರಯೋಗಗಳನ್ನು ಆತ ಮಾಡುತ್ತಿದ್ದ. ಕೆಲವು ವರ್ಷಗಳ ಹಿಂದೆ ತನ್ನದೇ ಉತ್ಪನ್ನಗಳನ್ನು ತಯಾರು ಮಾಡಿ ಮಾರುಕಟ್ಟೆಗೂ ಬಿಟ್ಟಿದ್ದ. ಥೇಟ್ ಬಾಬಾ ರಾಮ್ ದೇವ್ ರೀತಿಯಲ್ಲೇ. ಒಂದು ಕಡೆ ಹಣ; ಮತ್ತೊಂದು ಕಡೆ ಜನಪ್ರಿಯತೆ ಎರಡೂ ಆತನ ಪಾಲಿಗೆ ಒದಗಿ ಬಂದಿದ್ದವು.

ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಂತ್ರಣಕ್ಕೆ ಅಗತ್ಯವಾಗಿರುವ ಈ ಎರಡೂ ಅಂಶಗಳು ಒಟ್ಟಾದರೆ ಏನಾಗಬಹುದೋ, ಅದೇ ಗುರ್ಮೀತ್ ವಿಚಾರದಲ್ಲಿಯೂ ನಡೆಯತೊಡಗಿತು. ಆತ ಹರಿಯಾಣ ವಿಧಾನಸಭೆಗೆ ಯಾರು ಆಯ್ಕೆ ಆಗಬೇಕು ಎಂದು ತೀರ್ಮಾನಿಸುವ ಮಟ್ಟಕ್ಕೆ ಬೆಳೆದ. ಪಕ್ಕದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿಯೂ ಆತನ ಪ್ರಭಾವ ಕೆಲಸ ಮಾಡತೊಡಗಿತು. ಹೀಗಿರುವಾಗಲೇ, 15 ವರ್ಷಗಳ ಹಿಂದೆ ಆತ ಸಿರ್ಸಾದಲ್ಲಿ ಸರಕಾರ ನೀಡಿದ ಜಾಗದಲ್ಲಿ ಕಟ್ಟಿಕೊಂಡ ಡೇರಾ (ಆಶ್ರಮ)ದ ಒಳಗೆ ನಡೆಸುತ್ತಿರುವ ಅತ್ಯಾಚಾರಗಳು ಹಾಗೂ ಅವುಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ ಕೊಲೆಗಳ ವಿವರ ಹೊರ ಜಗತ್ತಿಗೆ ಬಹಿರಂಗವಾಯಿತು.

ನ್ಯಾಯ ನಿಧಾನ:

ಇವತ್ತು ಹರಿಯಾಣ ಅಕ್ಷರಶಃ ಉರಿದು ಹೋಗಿದೆ. 30ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅರೆ ಮಿಲಿಟರಿ, ಮಿಲಿಟರಿ, ಪೊಲೀಸರು ಹೀಗೆ ನಾನಾ ಭದ್ರತಾ ಪಡೆಗಳಿದ್ದರೂ ರಾಮ್ ರಹೀಮ್ ಅನುಯಾಯಿಗಳು ಬೀದಿಗಳಿದು ಬೆಂಕಿ ಹಚ್ಚಿದ್ದಾರೆ. ಹಾಗೆ ನೋಡಿದರೆ ಸ್ಥಳೀಯ ಸರಕಾರಕ್ಕೆ ಇಂತಹದೊಂದು ಪರಿಣಾಮಗಳ ನಿರೀಕ್ಷೆ ಇತ್ತು. ಹೀಗಾಗಿಯೇ, ಗುರುವಾರ ಮುಂಜಾನೆಯಿಂದಲೇ ಪಂಜಾಬ್ ಮತ್ತು ಹರ್ಯಾಣದಲ್ಲಿ ನಿಷೇಧಾಜ್ಷೆ ಹೇರಲಾಗಿತ್ತು. ಶುಕ್ರವಾರ ಮುಂಜಾನೆ ಇದೇ ನಿಷೇಧಾಜ್ಞೆಯನ್ನು ರಾಜಸ್ಥಾನದಲ್ಲಿಯೂ ಹೇರಲಾಯಿತು. ರಾಮ್ ರಹೀಮ್ ಡೇರಾ ಇರುವ ಸಿರ್ಸಾ, ಸಿಬಿಐ ವಿಶೇಷ ನ್ಯಾಯಾಲಯ ಇರುವ ಪಂಚ್ಕುಲಾ ಹಾಗೂ ಇವೆರೆಡೂ ನಗರಗಳ ನಡುವಿನ 7 ಗಂಟೆಯ ಹಾದಿಯಲ್ಲಿ ಅಕ್ಷರಶಃ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. 15 ಸಾವಿರ ಪೊಲೀಸರ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಹೀಗಿದ್ದೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಮ್ ರಹೀಮ್ ಬೆಂಬಲಿಗರು ಜಮಾವಣೆಗೊಂಡರು. ಅಥವಾ ಜಮಾವಣೆಗೆ ಅವಕಾಶ ನೀಡಲಾಯಿತು. ಕೊನೆಗೆ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ನಿರೀಕ್ಷೆಯಂತೆಯೇ ಜನ ಬೀದಿಗಳಿದರು. ಸಾವು ನೋವಿಗೆ, ಆಸ್ತಿ ಪಾಸ್ತಿಗಳ ಹಾನಿಗೆ ಕಾರಣರಾದರು. ಇವೆಲ್ಲವುಗಳ ನಷ್ಟವನ್ನು ರಾಮ್ ರಹೀಮ್ ಆಸ್ತಿ ಮುಟ್ಟುಗೋಲು ಹಾಕಿಕೊಂಡು ತುಂಬಿ ಕೊಡುವಂತೆ ಹೈ ಹೋರ್ಟ್ ಆದೇಶ ನೀಡಿದೆ. ಆದರೆ ನಿರೀಕ್ಷೆ ಇದ್ದೂ, ಇಂತಹದೊಂದು ಹಿಂಸಾಚಾರ ನಡೆದಿದ್ದರೆ ಹೊಣೆ ಯಾರು? ಎಲ್ಲಾ ಪ್ರಕರಣಗಳಲ್ಲಿ ನಡೆಯುವಂತೆ ಇಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿವೆ. ಸ್ಥಳೀಯ ಮುಖ್ಯಮಂತ್ರಿ ಖಟ್ಟರ್ ರಾಜೀನಾಮೆಗೆ ಮಾಧ್ಯಮಗಳು ಒತ್ತಾಯಿಸುತ್ತಿವೆ.


       ಹರ್ಯಾಣ ಮತ್ತು ಪಂಜಾಬ್ ನಲ್ಲಿ ನಡೆದ ಹಿಂಸಾಚಾರ (ಕೃಪೆ: ಎನ್'ಡಿಟಿವಿ)
ಹರ್ಯಾಣ ಮತ್ತು ಪಂಜಾಬ್ ನಲ್ಲಿ ನಡೆದ ಹಿಂಸಾಚಾರ (ಕೃಪೆ: ಎನ್'ಡಿಟಿವಿ)

ವಿಶೇಷ ಅಂದರೆ, ರಾಮ್ ರಹೀಮ್ ವಿರುದ್ಧ ಮೊದಲ ಪ್ರಕರಣ ಬೆಳಕಿಗೆ ಬಂದು 15 ವರ್ಷಗಳಲ್ಲಿ ಹರಿಯಾಣದಲ್ಲಿ ಮೂರು ಪ್ರತ್ಯೇಕ ಪಕ್ಷಗಳ ಸರಕಾರ ಅಧಿಕಾರಕ್ಕೆ ಬಂದಿವೆ. ಲೋಕಜನಶಕ್ತಿ, ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ಇಷ್ಟು ಸುದೀರ್ಘ ವರ್ಷಗಳ ಕಾಲ ರಾಮ್ ರಹೀಮ್ ನೆರವಿನೊಂದಿಗೆ ಅಧಿಕಾರ ನಡೆಸಿಕೊಂಡು ಬಂದಿವೆಯೇ ಹೊರತು, ಆತನ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ. ಇತ್ತ ಕೇಂದ್ರದಲ್ಲಿಯೂ ಕೂಡ ಅಟಲ್ ಬಿಹಾರಿ ವಾಜಪೇಯಿ, ಮನ ಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಸರಕಾರಗಳು ರಾಮ್ ರಹೀಮ್ ವಿಚಾರದಲ್ಲಿ ಗುರುತರ ನಿಲುವುಗಳನ್ನು ಪ್ರಕಟಿಸಲಿಲ್ಲ. ಇವೆಲ್ಲವುಗಳ ಪರಿಣಾಮ ರಾಜಕೀಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಒಬ್ಬ ಧಾರ್ಮಿಕ ಗುರು ಬೆಳೆದು ನಿಂತಿದ್ದ ಮತ್ತು ಆತನ ವಿರುದ್ಧ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಜನ ಭಯೋತ್ಪಾದನೆಗೆ ಇಳಿದರು.

ಯಾರು ಈ ಜನ?

ಹರಿಯಾಣದಲ್ಲಿ ನಡೆಯುತ್ತಿರುವ ಘಟನಾವಳಿಗಳ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ, ಯಾರು ಈ ಜನ? ಒಬ್ಬ ಧಾರ್ಮಿಕ ಗುರುವಿಗಾಗಿ ಪ್ರಾಣ ಕೊಡೋಕೆ ಮುಂದಾದವರು ಯಾರು? 21ನೇ ಶತಮಾನದಲ್ಲಿಯೂ ಇದೆಂತಹ ಮೌಢ್ಯ? ಎಂಬುದು.

ಹಾಗೆ ನೋಡಿದರೆ, ಇದಕ್ಕೆ ಉತ್ತರವೂ ಸ್ಪಷ್ಟವಾಗಿದೆ. ರಾಮ್ ರಹೀಮ್ ಕೇವಲ ಧಾರ್ಮಿಕ ಗುರು ಮಾತ್ರವೇ ಆಗಿರಲಿಲ್ಲ. ಆತನ ಜನಪ್ರಿಯತೆಗೆ ನಾನಾ ಆಯಾಮಗಳಿವೆ. ಸಿನೆಮಾ ನಟರಿಗೆ ಇರುವ ಅಭಿಮಾನಿ ವರ್ಗ ಆತನಿಗೂ ಇತ್ತು. ಅದಕ್ಕೆ ಧಾರ್ಮಿಕ ಲೇಪ ಇತ್ತು ಎಂಬುದನ್ನು ಹೊರತುಪಡಿಸಿದರೆ, ಹೆಚ್ಚಿನ ವ್ಯತ್ಯಾಸ ಏನೂ ಕಾಣಿಸುವುದಿಲ್ಲ. ಕರ್ನಾಟದಲ್ಲಿಯೇ ನಟ ದರ್ಶನ್ ಪತ್ನಿ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜೈಲು ಪಾಲಾದಾಗ ಹೊರಗೆ ಸೇರಿದ್ದ ಜನರಿಗೂ, ಇವತ್ತು ಪಂಚಕುಲಾ ಮತ್ತು ಸಿರ್ಸಾದಲ್ಲಿ ಸೇರಿರುವ ಜನರಿಗೂ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ.

ಇನ್ನು, ರಾಮ್ ರಹೀಮ್ ಜನಪರ ಕಾರ್ಯಕ್ರಮಗಳ ಕುರಿತು ವರದಿಗಳು ಬೆಳಕು ಚೆಲ್ಲುತ್ತಿವೆ. ಆತ ಆಸ್ಪತ್ರೆ ಕಟ್ಟಿದ್ದ. ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ್ದ. ವೇಶ್ಯೆಯರಿಗೆ ಪುನರ್ವಸತಿ ಕಲ್ಪಿಸಿದ್ದ. ಹೀಗೆ ನಾನಾ ಸುಧಾರಣಾ ಕ್ರಮಗಳ ಮೂಲಕ ಜನರ ಮನ್ನಣೆ ಗಳಿಸಿದ್ದ ಎಂಬುದು. ಜನರ ನಿತ್ಯ ಬದುಕಿನ ಅಗತ್ಯಗಳನ್ನು ಪೂರೈಕೆ ಮಾಡಿದವರ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಸಹಜ ಕೂಡ. ಆದರೆ ಇಲ್ಲಿ ಗಮನಿಸಬೇಕಿರುವುದು, ಜನರ ಅಗತ್ಯಗಳನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಧಿಕಾರ ಹಿಡಿದ ಸರಕಾರಗಳು ಪೂರೈಕೆ ಮಾಡಬೇಕು. ಅವು ವಿಫಲವಾದಾಗ ರಾಮ್ ರಹೀಮ್ ತರಹದ ಖಾಸಗಿ ವ್ಯಕ್ತಿಗಳು ಅವುಗಳ ಲಾಭಗಳನ್ನು ಪಡೆಯುತ್ತಾರೆ ಎಂಬುದು. ಹಾಗಾದರೆ ಸಮಸ್ಯೆ ಮೂಲ ಯಾವುದು?

ವ್ಯವಸ್ಥಿತ ನಡೆ:

ಹರಿಯಾಣದಲ್ಲಿ ನಡೆದ ಈ ಬೆಳವಣಿಗೆ ಅತ್ಯಂತ ವ್ಯವಸ್ಥಿತವಾದ ನಡೆ ಎಂಬ ವಾದಗಳೂ ಕೇಳಿ ಬರುತ್ತಿವೆ. ಸ್ಥಳೀಯವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ, ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ರಾಮ್ ರಹೀಮ್ ಪ್ರಭಾವವನ್ನು ಮಣಿಸಲು ಇಂತಹದೊಂದು ಹಿಂಸಾಚಾರದ ಅಗತ್ಯವಿದ್ದ ಹಾಗಿತ್ತು. ಮೇಲ್ನೋಟಕ್ಕೆ ಇದು ರಾಮ್ ರಹೀಮ್ ಅಭಿಮಾನಿಗಳ ಹಿಂಸಾಚಾರದಂತೆ ಕಂಡರೂ, ಅದು ನಡೆದ ಬಗೆಯನ್ನು ಗಮನಿಸಿದರೆ ಪೂರ್ವಸಿದ್ಧತೆಯೊಂದು ಇದ್ದಂತೆ ಕಾಣಿಸುತ್ತದೆ. ಸಿರ್ಸಾದಲ್ಲಿ ಮೊದಲು ಕಲ್ಲು ಬಿದ್ದಿದ್ದು ಟಿವಿ ವಾಹಿನಿಗಳ ವಾಹನಗಳ ಮೇಲೆ. ಪಂಚಕುಲಾದಲ್ಲಿಯೂ ಮಾಧ್ಯಮಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಲಾಯಿತು. ಅದಾದ ನಂತರವೇ ಮಾಧ್ಯಮಗಳ ನರೇಶನ್ ಬದಲಾಯಿತ. ಆಮೇಲಷ್ಟೆ, ಸರಕಾರಿ ಕಚೇರಿಗಳು ಹಾಗೂ ವಾಹನಗಳನ್ನು ಬೆಂಕಿಗೆ ಆಹುತಿ ನೀಡಲಾಯಿತು.

ಇದು ನಡೆದ ಪರಿಯನ್ನು ಗಮನಿಸಿ ನೋಡಿ. ಸರಕಾರಿ ಯಂತ್ರಾಂಗದ ಪರೋಕ್ಷ ಬೆಂಬಲ ಇಲ್ಲದೆ, ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಕಡೆ ದೊಂಬಿ ಗಲಾಟೆಗಳು ನಡೆಯಲು ಸಾಧ್ಯವೇ ಇಲ್ಲ. ಇದಕ್ಕೆ ಇಂದಿರಾ ಗಾಂಧಿ ಹತ್ಯೆ ನಂತರ ದಿಲ್ಲಿಯಲ್ಲಿ ನಡೆದ ಸಿಖ್ಖ್ ಮಾರಣಹೋಮ, 2002ರಲ್ಲಿ ನಡೆದ ಗೋದ್ರೋತ್ತರ ಹಿಂಸಾಕಾಂಡಗಳು ಸಾಕ್ಷಿ.


       ರಾಮ್ ರಹೀಮ್ ಸಿಂಗ್ ಶೋಕಿಗೆ ಕನ್ನಡಿ ಹಿಡಿಯುವ ಚಿತ್ರ
ರಾಮ್ ರಹೀಮ್ ಸಿಂಗ್ ಶೋಕಿಗೆ ಕನ್ನಡಿ ಹಿಡಿಯುವ ಚಿತ್ರ

ಕಳೆದ ಎರಡು ದಶಕಗಳಿಂದ ಹರಿಯಾಣದ ಸ್ಥಳೀಯ ರಾಜಕೀಯವನ್ನು ಹತೋಟಿಗೆ ತೆಗೆದುಕೊಂಡಿದ್ದ ಧಾರ್ಮಿಕ ಮುಖಂಡನ್ನು ಹೆಡಮುರಿಗೆ ಕಟ್ಟಲು ಬರೀ ಜೈಲು ಶಿಕ್ಷೆ ಮಾತ್ರವೇ ಸಾಕಾಗುವುದಿಲ್ಲ. ಹೀಗಾಗಿಯೇ, ಒಂದಷ್ಟು ಜನರ ಸಾವಿನ ಹಾಗೂ ದೊಡ್ಡ ಪ್ರಮಾಣದ ಹಿಂಸಾಚಾರದ ದೃಶ್ಯಾವಳಿಗಳ ಅಗತ್ಯ ಬಿದ್ದಿರಬಹುದು. ಸದ್ಯ ನಡೆದಿರುವ ಘಟನಾವಳಿಗಳ ಹಿನ್ನೆಲೆಯಲ್ಲಿ ಸರಕಾರಿ ಯಂತ್ರಾಂಗಕ್ಕೆ ಅಗತ್ಯವಾಗಿದ್ದ ಅಸ್ತ್ರ ಕೈಗೆ ಸಿಕ್ಕಿದೆ. ಇನ್ನು ರಾಮ್ ರಹೀಮ್ ರಕ್ಷಣೆಗೆ ಆತನ ಜನಪ್ರಿಯತೆ, ಹಣ ಬಲ, ಸಂಪರ್ಕಗಳು ಬಿಡಿ, ಖುದ್ದು ದೇವರೇ ಬಂದರೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ.

ಮುಂದಿನ ಒಂದಷ್ಟು ವರ್ಷಗಳ ಕಾಲ ರಾಮ್ ರಹೀಮ್ ಜೈಲು ಬಿಟ್ಟು ಹೊರ ಬರುವುದು ಕಷ್ಟ. ಮುಖ್ಯಸ್ಥನಿಲ್ಲದ ಮೇಲೆ ಡೇರಾ ಸಚ್ಚಾ ಸೌದಾ ಕೂಡ ಬಾಗಿಲು ಮುಚ್ಚಿಕೊಳ್ಳಲಿದೆ. ಅದರ ಪ್ರಭಾವ ಕ್ಷೀಣಿಸಲಿದೆ. ಒಂದಷ್ಟು ಸಾವಿನ ಸಮಾಧಿಗಳ ಮೇಲೆ ಬದುಕು ಯಾಂತ್ರಿಕವಾಗಿ ಮುಂದುವರಿಯುತ್ತದೆ. ಆದರೆ, ಈ ಎಲ್ಲಾ ಘಟನಾವಳಿಗಳಿಂದ ಒಂದಷ್ಟು ಪಾಠಗಳನ್ನು ಕಲಿಯಲೇಬೇಕಿದೆ. ಧಾರ್ಮಿಕ ಕೇಂದ್ರಗಳಿಗೆ ಉದ್ಯಮ ನಡೆಸಲು ಅವಕಾಶ ನೀಡಬಾರದು. ಧಾರ್ಮಿಕ ಮುಖಂಡರು ರಾಜಕೀಯ ಪರಿಸ್ಥಿತಿಗಳನ್ನು ಹತೋಟಿಗೆ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಯಲು ಬಿಡಬಾರದು. ಧರ್ಮ ಗುರುಗಳ ಮೇಲೆ ಅತ್ಯಾಚಾರ ಅಥವಾ ಯಾವುದೇ ಆರೋಪ ಬಂದರು, ಮೊದಲು ಜೈಲಿಗಟ್ಟಬೇಕು. ಕನಿಷ್ಟ ಕರ್ನಾಟಕದಲ್ಲಿ ರಾಮ್ ರಹೀಮ್ ಸಂತತಿ ಬೆಳೆಯದಂತೆ ಎಚ್ಚರ ವಹಿಸಬೇಕು.