samachara
www.samachara.com
ತ್ರಿವಳಿ ತಲಾಖ್ ತೀರ್ಪು: 'ಸಿಹಿ'ಯ ನಿಜವಾದ ಪಾಲುದಾರರು ಕರ್ನಾಟಕದ ನಸ್ರೀನ್ 'ಮಿಠಾಯಿ'!
ಸುದ್ದಿ ಸಾಗರ

ತ್ರಿವಳಿ ತಲಾಖ್ ತೀರ್ಪು: 'ಸಿಹಿ'ಯ ನಿಜವಾದ ಪಾಲುದಾರರು ಕರ್ನಾಟಕದ ನಸ್ರೀನ್ 'ಮಿಠಾಯಿ'!

ಸುಮಾರು

1400 ವರ್ಷಗಳ ಇತಿಹಾಸವಿದ್ದ ಸುನ್ನಿ ಮುಸ್ಲಿಂ ಸಮುದಾಯದವರ 'ತ್ರಿವಳಿ ತಲಾಖ್' ಆಚರಣೆ ವಿರುದ್ಧ ಸುಪ್ರಿಂ ಕೋರ್ಟ್ ನೀಡಿದ ಬಹುಮತದ ಐತಿಹಾಸಿಕ ಆದೇಶ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿಸಿದೆ. ಮುಸ್ಲಿಂ ಮಹಿಳೆಯರ 'ಲಿಂಗ ಸಮಾನತೆ'ಯ ಕನಸನ್ನು ಇನ್ನಷ್ಟು ನಿಚ್ಚಳಗೊಳಿಸಿದೆ. ಮುಸ್ಲಿಂ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಂತಹ ದೇಶಗಳಲ್ಲಿ ಈ ಪದ್ಧತಿ, ಆಚರಣೆ ಹಿಂದೆಯೇ ನಿಷೇಧಗೊಂಡಿತ್ತು. ಇದೀಗ, ಅದೇ ಸಾಲಿಗೆ ಜಾತ್ಯಾತೀತ ಮೌಲ್ಯಗಳ ಸಂವಿಧಾನವನ್ನು ಹೊಂದಿರುವ ಭಾರತ ಕೂಡ ಸೇರಿಕೊಳ್ಳಲಿದೆ.

ಮಂಗಳವಾರ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ಮೋದಿ ಮೇಲೆ ಈ ಬೆಳವಣಿಗೆಗಳ ಶ್ರೇಯಸ್ಸನ್ನು ಆರೋಪಿಸುವ ತರಾತುರಿ ಕಂಡು ಬಂತು. ಇನ್ನೊಂದು ವರ್ಗದಲ್ಲಿ 'ತ್ರಿವಳಿ ತಲಾಖ್' ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇಂತಹ ಪರ ಮತ್ತು ವಿರೋಧದ ನಡುವೆಯೇ, ಕಳೆದ ಹಲವು ವರ್ಷಗಳಿಂದ ತ್ರಿವಳಿ ತಲಾಖ್ ಸೇರಿದಂತೆ ಮುಸ್ಲಿಂ ಸಮುದಾಯದ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವುದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ). ಇದು ಸುಪ್ರಿಂ ಕೋರ್ಟ್ನಲ್ಲಿ 'ತ್ರಿವಳಿ ತಲಾಖ್' ವಿರುದ್ಧ ಕಾನೂನು ಸಮರ, ನ್ಯಾಯಾಲಯದ ಆಚೆಗೆ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗಾಗಿ ಪಕ್ಷಾತೀತ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಈ ಸಂಘಟನೆಯನ್ನು ಮುಸ್ಲಿಂ ಮಹಿಳಾ ನಾಯಕಿಯರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಂತವರ ಪೈಕಿ, ಕರ್ನಾಟಕದ ಹೊಸಪೇಟೆಯ ನಸ್ರೀನ್ ಕೂಡ ಒಬ್ಬರು.

ಇವರು ನಮ್ಮವರು:

'ತ್ರಿವಳಿ ತಲಾಖ್' ಕುರಿತು ತೀರ್ಪು ಹೊರಬೀಳುವ ಮುಂಚಿನಿಂದಲೇ ಸುದ್ದಿಯಲ್ಲಿದ್ದ ಸಂಘಟನೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ. ಮುಸ್ಲಿಂ ಪುರುಷ ಧಾರ್ಮಿಕ ಪಂಡಿತ(ಖಾಜಿ)ರಿಗೆ ಖುರಾನ್ ಓದಲು ಷರತ್ತು ವಿಧಿಸುವ ಮೂಲಕ ಅದು ಹಿಂದೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಜತೆಗೆ, ಮಹಿಳೆಯರನ್ನು ಧಾರ್ಮಿಕ ಪಂಡಿತರಾಗಿ ಆಯ್ಕೆ ಮಾಡಿ, ಕುರಾನ್ ಬೋಧಿಸಲು ಇದು ನೇಮಿಸಿದ್ದು ವಿವಾದವನ್ನು ಹುಟ್ಟು ಹಾಕಿತ್ತು. ಸಾಚಾರ್ ವರದಿ ಬಂದ ನಂತರ, ದೇಶಾದ್ಯಂತ ಮುಸ್ಲಿಂ ಮಹಿಳೆಯರ ಸಾಮಾಜಿಕ- ಆರ್ಥಿಕ ಸ್ಥಿತಿಗತಿಗಳ ಕುರಿತು ಇದು ಅಧ್ಯಯನ ನಡೆಸಿತ್ತು. ಹೀಗೆ, ಆಗಾಗೆ ಸದ್ದು ಮಾಡುತ್ತಲೇ ಬಂದ ಈ ಸಂಘಟನೆಯ ಭಾಗವಾಗಿರುವವರು ಹೊಸಪೇಟೆಯ ನಸ್ರೀನ್ ಮಿಠಾಯಿ. ಕರ್ನಾಟಕದ ಪರವಾಗಿ ಬಿಎಂಎಂಎಯನ್ನು ಇವರು ಪ್ರತಿನಿಧಿಸುತ್ತಿದ್ದಾರೆ.

"ನಾನು ಬಿಎಂಎಂಎ ಭಾಗವಾಗುವ ಮುನ್ನ ಮುಸ್ಲಿಂರು, ಹಿಂದುಳಿದ ಹಾಗೂ ದಲಿತ ವರ್ಗಗಳಲ್ಲಿ ಕೆಲಸ ಮಾಡುತ್ತಿದ್ದ ಸರಕಾರೇತರ ಸಂಸ್ಥೆಯೊಂದರಲ್ಲಿ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ 'ಸೆಂಟರ್ ಫಾರ್ ಪೀಸ್ ಸ್ಟಡಿಸ್' ದೇಶಾದ್ಯಂತ ಮುಸ್ಲಿಂ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಲು ಮುಂದಾಯಿತು. ಈ ಸಮಯದಲ್ಲಿ ಕರ್ನಾಟಕದಲ್ಲಿ ಸಮೀಕ್ಷೆಯ ಹೊಣೆಯನ್ನು ನಾನು ಹೊತ್ತುಕೊಂಡೆ. ಇದಕ್ಕಾಗಿ ಅನೇಕ ಮೊಹಲ್ಲಾಗಳನ್ನು ಭೇಟಿ ಮಾಡಿದೆ. ಮುಸ್ಲಿಂ ಮಹಿಳೆಯರ ಜತೆ ಮಾತುಕತೆ ನಡೆಸಿದೆ. ದೇಶದ ಉದ್ದಗಲಗಳಲ್ಲಿ ಸಾಕಷ್ಟ ಜನ ಮುಸ್ಲಿಂ ಮಹಿಳೆಯರು ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದು ಕಂಡುಕೊಂಡೆ. ನಾನೂ ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅನ್ನಿಸಲು ಶುರುವಾಗಿತ್ತು,'' ಎನ್ನುತ್ತಾರೆ ನಸ್ರೀನ್ ಮಿಠಾಯಿ.

ಹೊಸಪೇಟೆಯ ಚಪ್ಪರದಹಳ್ಳಿ ಅವರ ಹುಟ್ಟೂರು. ತಂದೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಹಾಗಾಗಿಯೇ ನಸ್ರೀನ್ ಅವರ ಹೆಸರಿನ ಜತೆ ಮಿಠಾಯಿ ಕೂಡ ಸೇರಿಕೊಂಡಿತು. ಒಟ್ಟು 7 ಮಕ್ಕಳ ಕುಟುಂಬದಲ್ಲಿ ಹುಟ್ಟಿದ ನಸ್ರೀನ್ ತಮ್ಮ ಅಕ್ಕಂದಿರ ಕೌಟುಂಬಿಕ ಬದುಕಿನಲ್ಲಿ ಬಂದ ಸಂಕಷ್ಟಗಳನ್ನು ಕಂಡು ಸಿಡಿದೆದ್ದವರು. "ಹೊರಗಿನ ಮುಸ್ಲಿಂ ಮಹಿಳೆಯರ ಸಂಕಷ್ಟಗಳನ್ನು ಕೇಳಿಸಿಕೊಂಡೆ. ಅದೇ ಹೊತ್ತಿಗೆ ನನ್ನ ಮನೆಯಲ್ಲಿಯೂ ಅದೇ ಸ್ಥಿತಿ ಇತ್ತು. ನನ್ನ ಅಕ್ಕಂದಿರಿಗೆ ಬಂದ ಕಷ್ಟಗಳನ್ನು ನೋಡಿದ ಮೇಲೆ ಸಮುದಾಯಕ್ಕೆ ಏನಾದರೂ ಕೆಲಸ ಮಾಡಲೇಬೇಕು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ,'' ಎಂದರು ನಸ್ರೀನ್. ಹೀಗೆ, 2014ರಲ್ಲಿ ಅವರು ಅಧಿಕೃತವಾಗಿ ಬಿಎಂಎಂಎ ಸೇರಿಕೊಂಡರು.

ದಿಲ್ಲಿಯಿಂದಲೇ 'ಸಮಾಚಾರ' ಜತೆ ಮಾತನಾಡಿದ ಅವರು, "ನಮ್ಮ ಸಂಘಟನೆ (ಬಿಎಂಎಂಎ)ಗೆ ಬಿಜೆಪಿ ಬೆಂಬಲ ಇದೆ ಎಂದು ಆರೋಪ ಮಾಡುತ್ತಾರೆ. ಭಾರತೀಯ ಎಂಬ ಸಂಘಟನೆಯ ಹೆಸರಿನಲ್ಲಿರುವ ಒಂದು ಪದವನ್ನು ಇಟ್ಟುಕೊಂಡು ಟೀಕೆಗಳನ್ನು ಮಾಡುತ್ತಿದ್ದಾರೆ. ನಮ್ಮನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ತಳಕು ಹಾಕುತ್ತಾರೆ. ಆದರೆ ಇದರ ಬಗ್ಗೆ ನಾವು ತಲೆಕಡಿಸಿಕೊಳ್ಳಲು ಸಮಯ ಇಲ್ಲ. ಯಾಕೆಂದರೆ ನಾವು ಇವತ್ತಿನ ಜಯವನ್ನು ಸಾಧಿಸಲು ಅದೆಷ್ಟು ಕಷ್ಟಪಟ್ಟಿದ್ದೇವೆ, ಎಂತೆಂತಹ ಆರ್ಥಿಕ ಮುಗ್ಗಟ್ಟುಗಳಲ್ಲಿ ಅನುಭವಿಸಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು,'' ಎಂದರು.

ತಲಾಖ್ ಆಚೆಗೆ:

ನಸ್ರೀನ್ ಹಾಗೂ ಬಿಎಂಎಂಎ ಕಾರ್ಯಶೈಲಿಗಳನ್ನು ಗಮನಿಸಿದರೆ ತ್ರಿವಳಿ ತಲಾಖ್ ಆಚೆಗೂ ಅವರುಗಳು ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಮಹಿಳೆಯ ಸಬಲೀಕರಣದ ಹಿನ್ನೆಲೆಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ವರದಿಯೊಂದರ ಪ್ರಕಾರ, ನಸ್ರೀನ್ ದ್ವಿಚಕ್ರ ವಾಹನವೊಂದನ್ನು ಕೊಳ್ಳುವ ಆಸೆಯಿಂದ ಒಂದಷ್ಟು ಹಣವನ್ನು ಕೂಡಿಟ್ಟಿದ್ದರು. ಆದರೆ, ಅದೇ ಹಣದಲ್ಲಿ ಹೊಸಪೇಟೆಯಲ್ಲಿ ನಾಲ್ಕು ಕಂಪ್ಯೂಟರ್ ಖರೀದಿಸಿ ತರಬೇತಿ ಸಂಸ್ಥೆಯೊಂದನ್ನು ಹುಟ್ಟುಹಾಕಿದೆ. ಈ ಕುರಿತು ಕೇಳಿದರೆ, "ಅದು ನಿಜ. ಅವತ್ತಿಗೆ ನನಗೆ ಸ್ಕೂಟಿ ಮುಖ್ಯ ಅಂತ ಅನ್ನಿಸಲಿಲ್ಲ. ಅದರ ಬದಲು ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ಕಲಿಕೆ ನೀಡುವುದು ಅಗತ್ಯ ಅನ್ನಿಸಿತು. ತಿಂಗಳಿಗೆ ನೂರು ರೂಪಾಯಿ ದರದಲ್ಲಿ ತರಬೇತಿ ನೀಡುತ್ತಿದ್ದೇನೆ. ಇದರ ಜತೆಗೆ ಮದರಸಾಗಳಲ್ಲಿ ಹೆಣ್ಣು ಮಕ್ಕಳಿಗೆ ಫ್ಯಾಶನ್ ಡಿಸೈನಿಂಗ್ ತರಬೇತಿ ಹೀಗೆ ನಾನಾ ಕೌಶಲ್ಯ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇದಕ್ಕೆಲ್ಲಾ ಯಾವ ಪಕ್ಷದವರೂ ಬೆಂಬಲ ನೀಡಿಲ್ಲ. ಮುಲ್ಲಾಗಳೂ ವಿರೋಧಿಸಿಲ್ಲ,'' ಎಂದರು.

ದೇಶದಲ್ಲಿ 1985ರಲ್ಲಿಯೇ ಮುಸ್ಲಿಂ ಮಹಿಳೆಯೊಬ್ಬರು ಗಂಡನಿಂದ ತಲಾಖ್ ಪಡೆದ ನಂತರ ಬದುಕಲು ಆರ್ಥಿಕ ನೆರವಿನ ಹಕ್ಕನ್ನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಮುಸ್ಲಿಂ ಮೂಲಭೂತವಾದಿಗಳ ಬೇಡಿಕೆಗೆ ಮಣಿದು ಮಹಿಳೆಯನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಿದ್ದರು. ಜ್ಯಾತೀತತ ಮೌಲ್ಯಗಳನ್ನು ಉಳಿಸುವ ಭರಾಟೆಯಲ್ಲಿ ಮುಸ್ಲಿಂ ಮಹಿಳೆಯರು ಕನಿಷ್ಟ ಹಕ್ಕುಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿತ್ತು. ಪುರಾತನ ಪಕ್ಷದ 'ಮತ ಬ್ಯಾಂಕ್' ರಾಜಕೀಯದ ಪರಿಣಾಮ, ತ್ರಿವಳಿ ತಲಾಖ್ ಎಂಬ ಆಚರಣೆ ಕಾನೂನು ಬಾಹಿರ ಎಂದು ಘೋಷಣೆಯಾಗಲು ಇಷ್ಟು ಸಮಯ ಬೇಕಾಯಿತು. ಹಾಗಂತ ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಮುಸ್ಲಿಂ ಮಹಿಳೆಯರ ಸಬಲೀಕರಣದ ಬಗ್ಗೆ ಕಾಳಜಿ ಹೊಂದಿದೆ ಎಂದು ಹೇಳಲು ಪುರಾವೆಗಳೇನೂ ಇಲ್ಲ. ಬಿಜೆಪಿ ಅಧಿಕಾರ ಬಂದ ತಕ್ಷಣ, ಸುಧಾರಣಾ ಯೋಜನೆಗಳಿಗಿಂತ ಅದಕ್ಕೆ ಪ್ರಮಖವಾಗಿದ್ದು 'ಬೀಫ್ ಬ್ಯಾನ್' ವಿಚಾರ. ಇದೂ ಕೂಡ ಇನ್ನೊಂದು ಆಯಾಮದ 'ಮತ ಬ್ಯಾಂಕ್' ರಾಜಕಾರಣವೇ.

ಇವುಗಳ ನಡುವೆ, ನಸ್ರೀನ್ ತರಹದ ಮಹಿಳೆಯರು ಎಲೆ ಮರೆಯ ಕಾಯಿಗಳಂತೆ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. "ಇದು ನೇರವಾಗಿ ನಡೆಸಬೇಕಾದ ಯುದ್ಧವಲ್ಲ. ನಾವು ಅಂದುಕೊಂಡ ಹಾಗೆ ಸುಲಭವೂ ಅಲ್ಲ. ನಿಧಾನವಾಗಿ, ಪರೋಕ್ಷ ಕಾರ್ಯತಂತ್ರಗಳ ಮೂಲಕ ಸಮುದಾಯದ ಒಳಗೇ ನಡೆಯಬೇಕಾದ ಸಂಘರ್ಷ. ಅದು ರಾಜಕೀಯದಿಂದ ದೂರ ಇದ್ದಷ್ಟೂ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗೆ ಒಳ್ಳೆಯದು,'' ಎನ್ನುತ್ತಾರೆ ನಸ್ರೀನ್.