samachara
www.samachara.com
ಗೋರಖಪುರದಲ್ಲಿ ಮಕ್ಕಳ ಸರಣಿ ಸಾವು; ಜೀವಕ್ಕಿಂತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಎಂದ ಆದಿತ್ಯನಾಥ್ ಸರಕಾರ!
ಸುದ್ದಿ ಸಾಗರ

ಗೋರಖಪುರದಲ್ಲಿ ಮಕ್ಕಳ ಸರಣಿ ಸಾವು; ಜೀವಕ್ಕಿಂತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಎಂದ ಆದಿತ್ಯನಾಥ್ ಸರಕಾರ!

ಕಳೆದ 48

ಗಂಟೆಗಳಲ್ಲಿ 30 ಮಕ್ಕಳ ಸಾವು. ಕಳೆದ 9 ದಿನಗಳ ಅಂತರದಲ್ಲಿ ಕೊನೆಯುಸಿರೆಳೆದ ಒಟ್ಟು ಮಕ್ಕಳ ಸಂಖ್ಯೆ 60...

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖಪುರದ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಈ ಸಾವುಗಳು ಸಂಭವಿಸಿವೆ ಎಂದು ವರದಿಗಳು ಹೇಳುತ್ತಿವೆ. ಆಸ್ಪತ್ರೆಗೆ ಆಮ್ಲಜನಕ ಪೂರೈಸಲು ಖಾಸಗಿ ಕಂಪನಿ 'ಪುಷ್ಪಾ ಸೇಲ್ಸ್ ಪ್ರೈವೆಟ್ ಲಿಮಿಟೆಡ್'ಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ ಕಂಪನಿಗೆ ಹಣ ಸಂದಾಯ ಮಾಡದ ಹಿನ್ನೆಲೆಯಲ್ಲಿ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಲಾಗಿದೆ. ಇವು ಮಕ್ಕಳ ಸರಣಿ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಆದರೆ ಜಿಲ್ಲಾಡಳಿತ ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ ಎಂದು ಹೇಳಿದೆ. ಘಟನೆ ಕುರಿತು ಜಿಲ್ಲಾ ನ್ಯಾಯಾಧೀಶರಿಂದ ತನಿಖೆಗೆ ಸರಕಾರ ಆದೇಶ ನೀಡಿದೆ. ಮಕ್ಕಳ ಸರಣಿ ಸಾವುಗಳ ವರದಿ ಹೊರಬಿದ್ದ 7 ದಿನಗಳ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರ ರಾಜ್ಯದ ಮದರಸಾ (ಮುಸ್ಲಿಂರ ಧಾರ್ಮಿಕ ಶಿಕ್ಷಣ ಕೇಂದ್ರ)ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ ಸಮಾರಂಭದ ವಿಡಿಯೋ ಚಿತ್ರೀಕರಣವನ್ನೂ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಇದು ಶುಕ್ರವಾರ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿಯೇ ಮುಖ್ಯಮಂತ್ರಿ ಯೋಗಿ ತವರು ಕ್ಷೇತ್ರದ ಆಸ್ಪತ್ರೆಯಲ್ಲಿ ಮಕ್ಕಳ ಸಾವುಗಳು ಬೆಳಕಿಗೆ ಬಂದಿತ್ತು.

ಘಟನೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಘಟನೆಗೆ ರಾಜ್ಯ ಸರಕಾರ ಹೊಣೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಈವರೆಗೂ ಪ್ರಧಾನಿ ಮೋದಿ ಘಟನೆ ಕುರಿತು ಪ್ರತಿಕ್ರಿಯೆ ನೀಡದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. "ಪೋರ್ಚುಗಲ್ನಲ್ಲಿ ನಡೆದ ಕಾಡ್ಗಿಚ್ಚಿನ ಬಗ್ಗೆ ಪ್ರತಿಕ್ರಿಯೆ ನೀಡುವ ನೀವು, ಉತ್ತರ ಪ್ರದೇಶದಲ್ಲಿ ಮಕ್ಕಳ ಸಾವುಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ,'' ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಲಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಗೋರಖಪುರದ ದೇವಸ್ಥಾನದಲ್ಲಿ ಅರ್ಚಕರಾಗಿದ್ದ, ಯೋಗಿ ಆದಿತ್ಯನಾಥರಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿತ್ತು. ಆರಂಭದಲ್ಲಿ ಯೋಗಿ ಆಡಳಿತಕ್ಕೆ ಭರ್ಜರಿ ಪ್ರಚಾರವೂ ಸಿಕ್ಕಿತ್ತು. ಆದರೆ ಅಧಿಕಾರಕ್ಕೇರಿದ ಮೊದಲ ತಿಂಗಳಿನಲ್ಲಿಯೇ ರಾಜ್ಯಾದ್ಯಂತ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ವತಃ ಯೋಗಿ ಆದಿತ್ಯನಾಥ್ ಸರಕಾರ ವಿಧಾನಸಭೆಯಲ್ಲಿ ಅಂಕಿ ಅಂಶಗಳ ಸಮೇತ ಬಹಿರಂಗಪಡಿಸಿತ್ತು.

ಇದೀಗ ಸರಣಿ ಸಾವುಗಳು ವರದಿಯಾಗುತ್ತಿವೆ. ವಿಚಿತ್ರವೆಂದರೆ 30 ಜನ ಸಾವಿಗೀಡಾದಾಗಲೂ ಮರುಗುವ ಬದಲು "ಈ ಆಸ್ಪತ್ರೆಯಲ್ಲಿ ದಿನಕ್ಕೆ 7 ಸಾವುಗಳ ಸಾಮಾನ್ಯ," ಎನ್ನುತ್ತಾರೆ ಅಲ್ಲಿನ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್. ಇದು ಪ್ರಮುಖ ಆಸ್ಪತ್ರೆ; ಇಲ್ಲಿಗೆ ಬೇರೆ ಬೇರೆ ಸಣ್ಣ ಸಣ್ಣ ಆಸ್ಪತ್ರೆಗಳಿಂದ ರೋಗಿಗಳು ಬರುತ್ತಾರೆ ಎಂದು ತಮ್ಮ ಅಂಕಿ ಅಂಶಗಳಿಗೆ ಸಮರ್ಥನೆ ದಾಖಲಿಸಿದ್ದಾರೆ. ಹೀಗಿದ್ದು 23 ಸಾವುಗಳು ಒಂದೇ ದಿನ ದಾಖಲಾಗಿದೆಯಲ್ಲ ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ. ಜತೆಗೆ ಆಕ್ಸಿಜನ್ ಕೊರತೆಯಿಂದ ಮಕ್ಕಳು ಸತ್ತಿದ್ದಲ್ಲ ಎನ್ನುವ ಹೇಳಿಕೆ ನೀಡಿ ಸರಕಾರ ಜವಾಬ್ದಾರಿ ಮರೆತಿಲ್ಲ ಎಂಬುದನ್ನು ಜನರ ಮುಂದೆ ಬಿಂಬಿಸಲು ಹೊರಟಿದ್ದಾರೆ.

ಇತ್ತ ಆರೋಗ್ಯ ಸಚಿವರು ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವೇ ಆಗಿಲ್ಲ ಎನ್ನುತ್ತಿದ್ದರೆ ವೈದ್ಯಕೀಯ ಶಿಕ್ಷಣ ಮಂತ್ರಿಗಳ ಹೇಳಿಕೆ ಮತ್ತು ಜಿಲ್ಲಾಧಿಕಾರಿ ಪತ್ರಗಳು ಆಕ್ಸಿಜನ್ ಕೊರತೆಯನ್ನು ಎತ್ತಿ ತೋರಿಸುತ್ತವೆ. ಆಗಸ್ಟ್ 10ರಿಂದಲೇ ಆಮ್ಲಜನಕದ ಸಿಲಿಂಡರ್ ಗಳು ಖಾಲಿಯಾಗಿ ಇತರ ಖಾಸಗಿ ಪೂರೈಕೆದಾರರ ಬಳಿ ಹೇಗೆ ಹೊಂದಸಿಕೊಂಡು ಒಂದಷ್ಟು ದಿನ ಆಸ್ಪತ್ರೆಗೆ ಬೇಕಾದ ಆಮ್ಲಜನಕವನ್ನು ಏರ್ಪಾಟು ಮಾಡಿಕೊಂಡರು ಎಂಬುದನ್ನು ತಮ್ಮಪತ್ರದಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಕೆಕೆ ಗುಪ್ತ, ಆಮ್ಲಜನಕ ಪೂರೈಕೆ ಕಂಪನಿ ಬಗ್ಗೆ ಕ್ರಮ ಕೈಗೊಳ್ಳುವ ಮಾತನ್ನಾಡಿದ್ದಾರೆ. 'ಜೀವ ರಕ್ಷಕ ಆಮ್ಲಜನಕದಂಥ ವಸ್ತುಗಳ ಪೂರೈಕೆ ನಿಲ್ಲಿಸುವಾಗ ಕಂಪನಿಗೆ ಸ್ವಲ್ಪ ಪ್ರಜ್ಞೆ ಇರಬೇಕಾಗಿತ್ತು' ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಆದರೆ ಅದೇ ಜೀವ ರಕ್ಷಕ ಆಮ್ಲಜನಕರ ಪೂರೈಕೆ ಮಾಡುವ ಕಂಪನಿಯ ಶುಲ್ಕ ಪಾವತಿ ಮಾಡಬೇಕು. ಇದೊಂದು ಸೂಕ್ಷ್ಮ ವಿಚಾರ, ತಮ್ಮ ಜವಾಬ್ದಾರಿ ಎಂದು ಅವರಿಗೆ ಅನಿಸಲೇ ಇಲ್ಲ. ಆದಿತ್ಯನಾಥ್ ಇದೇ ಆಗಸ್ಟ್ 9ರಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವತ್ತೇ 9 ಮಕ್ಕಳು ಸಾವನ್ನಪ್ಪಿದ್ದರು. ವಿಶೇಷ ಅಂದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿಯಿಂದ ಹಿಡಿದು ಸಚಿವರವರೆಗೆ ಈ ಸರಣಿ ಸಾವುಗಳು ದೊಡ್ಡ ವಿಚಾರ ಅಂತ ಅನ್ನಿಸುತ್ತಲೇ ಇಲ್ಲ. ಅಲ್ಲಿನ ಆಡಳಿತ ವ್ಯವಸ್ಥೆ, ಆರೋಗ್ಯ ಕ್ಷೇತ್ರ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿರಬಹುದು ಎಂಬುದಕ್ಕೆ ಇದು ಸಾಕ್ಷಿ.

(ಚಿತ್ರ ಕೃಪೆ: ರೆಡಿಫ್ ಡಾಟ್ ಕಾಂ)