ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!
ಸುದ್ದಿ ಸಾಗರ

ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!

ಭಾರತ- ಚೈನಾ

ನಡುವಿನ ಗಡಿ ವಿವಾದದ 'ಶಾಂತಿಯುತ ಉಪಸಂಹಾರ'ಕ್ಕೆ ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನದ ಹಿಂದಿರುವುದು ವಾಣಿಜ್ಯ ಉದ್ದೇಶಗಳು. ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, "ಡೋಕ್ ಲಾ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು,'' ಎಂದು ತಿಳಿಸಿದ್ದಾರೆ. ಇದಾದ ಮರುದಿನವೇ ಚೈನಾ ಗಡಿಯಿಂದ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿತ್ತು.

ಕಳೆದ ಕೆಲವು ತಿಂಗಳಿನಿಂದ ಉಬಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗಡಿ ಭಾಗದಲ್ಲಿ ಎರಡೂ ದೇಶಗಳ ಸೇನೆಗಳು ಜಮಾವಣೆಗೊಂಡಿವೆ. ಯುದ್ಧದ ವಾತಾವಣ ನಿರ್ಮಾಣ ಮಾಡಲಾಗಿದೆ. ಹಾಗಿದ್ದೂ, ಯುದ್ಧ ಶುರುವಾಗುವ ಸಾಧ್ಯತೆಗಳಿಲ್ಲ. ಇದಕ್ಕೆ ಪ್ರಮುಖ ಕಾರಣ, ಎರಡೂ ದೇಶಗಳು ಈ ಮುಕ್ತ ಆರ್ಥಿಕ ನೀತಿಗಳ ಯುಗದಲ್ಲಿ ವಾಣಿಜ್ಯ ಸಂಬಂಧಗಳನ್ನು ಬೆಸೆದುಗೊಂಡಿರುವುದು. ಯುದ್ಧಭೂಮಿಯಲ್ಲಿ ಟ್ಯಾಂಕರ್, ಮಿಸೈಲ್ ಹಿಡಿದು ಎರಡೂ ದೇಶಗಳು ಯುದ್ಧ ಆರಂಭ ಮಾಡದಿದ್ದರೂ, ವಾಣಿಜ್ಯ ಮಾರುಕಟ್ಟೆಯಲ್ಲಿ ಅಘೋಷಿತ ಆರ್ಥಿಕ ಯುದ್ಧವೊಂದು ಎರಡೂ ದೇಶಗಳ ನಡುವೆ ಜಾರಿಯಲ್ಲಿದೆ.

70ರ ದಶಕದಲ್ಲಿ ಕಮ್ಯುನಿಸ್ಟ್ ಆರ್ಥಿಕತೆಯನ್ನು ಬದಿಗೆ ಸರಿಸಿ, ಕ್ಯಾಪಿಟಲಿಸ್ಟ್ ಆರ್ಥಿಕತೆಗೆ ಮೊರೆ ಹೋಗಿದ್ದು ಚೈನಾ. ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ತಂತ್ರಜ್ಞಾನ ಆಧಾರತ ಉದ್ಯೋಗ ಸೃಷ್ಟಿಗೆ ಮುಂದಾಯಿತು. ಮುಂದಿನ ಮೂರು- ನಾಲ್ಕು ದಶಕಗಳ ಅಂತರದಲ್ಲಿ ಚೈನಾ ಈ ಅಭಿವೃದ್ಧಿಯ ಹಾದಿಯಲ್ಲಿ ಸಾಕಷ್ಟು ಪ್ರಗತಿಯನ್ನೂ ಹೊಂದಿತು. 90ರ ದಶಕದಲ್ಲಿ ಭಾರತ ಕೂಡ ಮುಕ್ತ ಆರ್ಥಿಕ ವ್ಯವಸ್ಥೆಗೆ ಒಪ್ಪಿಗೆ ನೀಡಿತು. ತನ್ನ ದೇಶದ ಉತ್ಪಾದನೆಯನ್ನು  ಹೊರದೇಶಗಳಿಗೂ, ಹೊರದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಪರಿಪಾಠ ದೊಡ್ಡ ಪ್ರಮಾಣದಲ್ಲಿ ಆರಂಭವಾಯಿತು. ಇದು ಇತರೆ ಎಲ್ಲಾ ದೇಶಗಳ ಜತೆಗೆ ಹೋಲಿಸಿದರೆ, ನೆರೆಯ ದೇಶಗಳಾದ ಭಾರತ- ಚೈನಾ ನಡುವೆ 'ಆಮದು-ರಫ್ತು' ಆಧಾರಿತ ಆರ್ಥಿಕ ಸಂಬಂಧವೊಂದು ಬೆಳೆಯಲು ಕಾರಣವಾಯಿತು.

ಸದ್ಯ, ಲಭ್ಯವಾಗುತ್ತಿರುವ ಕೆಲವು ಅಂಕಿ ಅಂಶಗಳ ಈ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಅಪಾರ ಪ್ರಮಾಣದ ಕೊಡುಕೊಳ್ಳುವಿಕೆಯನ್ನು ಎತ್ತಿ ತೋರಿಸುತ್ತಿವೆ. ಕೇಂದ್ರ ವಾಣಿಜ್ಯ ಸಚಿವಾಲಯದ ಕಳೆದ 10 ವರ್ಷಗಳ ಅಂಕಿ ಅಂಶಗಳು ದೊಡ್ಡ ಪ್ರಮಾಣದಲ್ಲಿರುವ ರಫ್ತು ವಹಿವಾಟಿನ ಕುರಿತು ಮಾಹಿತಿ ನೀಡುತ್ತಿವೆ. 2011-12ರಲ್ಲಿ ಭಾರತ ಚೈನಾಗೆ ರಫ್ತು ಮಾಡಿದ ಮಾರುಕಟ್ಟೆಯ ಮೌಲ್ಯವೇ 18 ಬಿಲಿಯನ್ ಡಾಲರ್ (1146,69,00,00,000 ರೂ)ನಷ್ಟಿತ್ತು. ಇದು 2007- 08 ರಿಂದ 2016-17ರ ನಡುವೆ ನಡೆದ ಅತಿ ಹೆಚ್ಚಿನ ರಫ್ತು ವಹಿವಾಟು. 2015- 16ರಲ್ಲಿ ಭಾರತ ಚೈನಾಗೆ ರಫ್ತು ಮಾಡಿದ ಪ್ರಮಾಣ ದಶಕದ ಕಡಿಮೆ ಪ್ರಮಾಣವನ್ನು ತಲುಪಿತ್ತು. ಈ ಸಾಲಿನಲ್ಲಿ ಭಾರತದ ರಫ್ತು ವಹಿವಾಟು 10 ಬಲಿಯನ್ ಡಾಲರ್ಗಳಿಗೆ ಇಳಿದಿತ್ತು. ಇದಾದ ಮೇಲೆ ಲೋಕಸಭೆಯಲ್ಲಿ ಪಶ್ನೆಯೊಂದಕ್ಕೆ ಉತ್ತರಿಸಿದ ವಾಣ್ಯಿಜ್ಯ ಮತ್ತ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್, ಮುಂದಿನ ದಿನಗಳಲ್ಲಿ ಭಾರತ ತನ್ನ ನೆರೆಯ ದೇಶ ಚೈನಾಗೆ ರಫ್ತು ಪ್ರಮಾಣವನ್ನ ಹೆಚ್ಚಿಸುವ ಪ್ರಯತ್ನ ಮಾಡಲಿದೆ ಎಂದು ತಿಳಿಸಿದ್ದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತದಿಂದ ಚೈನಾಗೆ ಆಗಿರುವ ರಫ್ತು ವಹಿವಾಟಿನ ಮಾಹಿತಿ ಹೀಗಿದೆ:

ಆಮದು ಲೆಕ್ಕಾಚಾರ:

ಭಾರತ ತನ್ನ ನೆರೆಯ ದೇಶದ ಜತೆಗೆ ಹೊಂದಿರುವ ರಫ್ತು ಲೆಕ್ಕಾಚಾರಗಳಿಗೆ ಹೋಲಿಸಿದರೆ, ಅದಕ್ಕಿಂತಲೂ ದೊಡ್ಡ ಪ್ರಮಾಣದ ಆಮದು ವ್ಯವಹಾರ ಸಂಬಂಧವನ್ನು ಹೊಂದಿರುವುದನ್ನು ಅಂಕಿ ಅಂಶಗಳು ತೋರಿಸುತ್ತಿವೆ.

ಕಳೆದ ಹತ್ತು ವರ್ಷಗಳಲ್ಲಿ ಶೇ. 251ರಷ್ಟು ಆಮದು ಲೆಕ್ಕಾಚಾರದಲ್ಲಿ ಹೆಚ್ಚಳವಾಗಿದೆ. 2006-07ರ ಆರ್ಥಿಕ ವರ್ಷದಲ್ಲಿ ಭಾರತ ಚೈನಾದಿಂದ ಆಮದು ಮಾಡಿಕೊಂಡ ಸರಕು ಹಾಗೂ ಸೇವೆಗಳ ಒಟ್ಟು ಮೊತ್ತ 17.48 ಬಿಲಿಯನ್ ಡಾಲರ್ (ಸುಮಾರು 1 ಸಾವಿರ ಕೋಟಿ ರೂ.). ಅದು ಹತ್ತು ವರ್ಷಗಳ ಅಂತರದಲ್ಲಿ 17.49 ಬಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂಪಾಯಿ)ಗಳಿಗೆ ಮುಟ್ಟಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತ ಚೈನಾದಿಂದ ಆಮದು ಮಾಡಿಕೊಂಡ ಲೆಕ್ಕಚಾರಗಳು ಹೀಗಿವೆ:


       ಚೈನಾದಿಂದ ಆಮದು ಲೆಕ್ಕಾಚಾರ.
ಚೈನಾದಿಂದ ಆಮದು ಲೆಕ್ಕಾಚಾರ.

ಇದು ಇವತ್ತು ಯುದ್ಧದ ಸನ್ನಿವೇಶವನ್ನು ಸೃಷ್ಟಿಕೊಂಡು, ಅತ್ತ ಯುದ್ಧಭೂಮಿಗೂ ಇಳಿಯದೆ, ಇತ್ತ ಶಾಂತಿ ಮಾತುಕತೆಗೂ ಬಿಗುಮಾನ ತೋರಿಸುತ್ತಿರುವ ಎರಡು ದೇಶಗಳ ನಡುವಿನ ಆಮದು, ರಫ್ತಿನ ಲೆಕ್ಕಾಚಾರಗಳು.

ಆರ್ಥಿಕ ಪ್ರಗತಿ ಹೊಂದಿರುವ ಚೈನಾದ ಇವತ್ತಿನ ಪರಿಸ್ಥಿತಿ ಹೊರನೋಟಕ್ಕೆ ಸಂದರವಾಗಿ ಕಾಣಿಸುತ್ತಿದೆ. ಆದರೆ ತಳಮಟ್ಟದಲ್ಲಿ ಆರ್ಥಿಕತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ಅಲ್ಲಿನ ಪ್ರಜೆಗಳ ಮೇಲಿನ ತಲಾವಾರ ಸಾಲದ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಮಾರುಕಟ್ಟೆಯ ವಿಸ್ತರಣೆ ಮಾತ್ರವೇ ಪರಿಹಾರ ರೂಪದಲ್ಲಿ ಚೈನಾ ಮುಂದಿದೆ.

ಇತ್ತ ಭಾರತ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 500 ಹಾಗೂ 1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ನಂತರ ಸಣ್ಣ ಉದ್ಯಮಗಳು ನೆಲಕ್ಕಚ್ಚುವ ಸ್ಥಿತಿಗೆ ಬಂದ ನಿಂತಿವೆ. ಅಸಂಘಟಿತ ವಲಯ ತತ್ತರಿಸಿ ಹೋಗಿದೆ. ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಹೊಸ ಉದ್ಯೋಗಗಳ ಸೃಷ್ಟಿ ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗಲೇ, ಏಕರೂಪತೆ ಹೆಸರಿನಲ್ಲಿ ತಂದ ಸರಕು ಹಾಗೂ ಸೇವಾ ತೆರಿಗೆ ಇನ್ನಷ್ಟು ಹೈರಾಣಾಗಿಸಿದೆ. ಇಂತಹ ಸಮಯದಲ್ಲಿ ಎರಡೂ ದೇಶಗಳಿಗೆ ಯುದ್ಧ ದುಬಾರಿಯಾಗಲಿದೆ.

ಈ ಕಾರಣಕ್ಕೆ 'ಶಾಂತಿ ಮಾತುಕತೆ' ಮಾತುಗಳು ಕೇಳಿಬರುತ್ತಿವೆ. ಆದರೆ ಸಮೂಹ ಸನ್ನಿಗೆ ಒಳಗಾಗಿರುವವರ ನಡುವೆ ಯುದ್ಧೋನಾದ ಮಾತ್ರ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ.