ಐಟಿ ತೋಡಿದ ‘ಹಳ್ಳ’ಕ್ಕೆ ಡಿಕೆಎಸ್ ಎಂಬ ‘ತೋಳ’ ಬಿದ್ದಾಗ; ಯಥಾಸ್ಥಿತಿಗೆ ಇಂಬು ನೀಡುತ್ತಿರುವ ಪ್ರತಿಕ್ರಿಯೆಗಳು!
ಸುದ್ದಿ ಸಾಗರ

ಐಟಿ ತೋಡಿದ ‘ಹಳ್ಳ’ಕ್ಕೆ ಡಿಕೆಎಸ್ ಎಂಬ ‘ತೋಳ’ ಬಿದ್ದಾಗ; ಯಥಾಸ್ಥಿತಿಗೆ ಇಂಬು ನೀಡುತ್ತಿರುವ ಪ್ರತಿಕ್ರಿಯೆಗಳು!

“ನಾನು ರಾಜಕಾರಣಿ ಮಾತ್ರವಲ್ಲ; ಉದ್ಯಮಿ ಕೂಡ…” ಹೀಗಂತ ಹಿಂದೊಮ್ಮೆ ಹೇಳಿಕೊಂಡಿದ್ದರು ಇಂಧನ ಸಚಿವ ಡಿ. ಕೆ. ಶಿವಕುಮಾರ್.

ಸಾತನೂರು ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಶಿವಕುಮಾರ್ ಇವತ್ತಿಗೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ. ಗ್ರಾನೈಟ್ ಉದ್ಯಮ, ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹಣ ಗಳಿಸುವ ಮೂಲಗಳನ್ನು ಸೃಷ್ಟಿಕೊಂಡಿದ್ದಾರೆ. ಗುರುತರವಾದ ಆರೋಪಗಳನ್ನು ನಾನಾ ನ್ಯಾಯಾಲಯಗಳಲ್ಲಿ ಎದುರಿಸುತ್ತಿದ್ದಾರೆ.

ಇವರ ಮೇಲೆ ಐಟಿ ದಾಳಿ ನಡೆದಿರುವುದು ರಾಜ್ಯದ ಜನರಿಗಾಗಲೀ, ಸ್ವತಃ ಶಿವಕುಮಾರ್ ಅವರಿಗಾಗಲೀ ಅಚ್ಚರಿ ಮೂಡಿಸುವ ಬೆಳವಣಿಗೆ ಏನಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಈ ನಾಲ್ಕು ವರ್ಷಗಳ ಅಂತರದಲ್ಲಿ ರಾಜ್ಯದ ಹಲವು ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿಗಳು ನಡೆದಿವೆ. ಅದರಲ್ಲಿ ಡಿ. ಕೆ. ಎಸ್ ಆಪ್ತರೂ ಇದ್ದಾರೆ. ಹೀಗಿರುವಾಗ, ಇವತ್ತಲ್ಲ ನಾಳೆ ತಮ್ಮ ಮೇಲೆಯೂ ಇಂತಹದೊಂದು ದಾಳಿ ನಡೆಯಬಹುದು ಎಂಬ ನಿರೀಕ್ಷೆ ದೇಶದ ಶ್ರೀಮಂತ ರಾಜಕಾರಣಿಗೆ ಇದ್ದೇ ಇತ್ತು ಎಂಬುದು ಸಹಜ ತಿಳಿವಳಿಕೆ. ಆತ ರಾಜಕಾರಣಿ ಮಾತ್ರವೇ ಅಲ್ಲ.

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ಕುದುರೆ ವ್ಯಾಪಾರ’ದಿಂದ ತಪ್ಪಿಸಿಕೊಳ್ಳಲು ಗುಜರಾತ್ ಶಾಸಕರನ್ನು ಕರ್ನಾಟಕಕ್ಕೆ ಕರೆ ತರುವ ಆಲೋಚನೆಯನ್ನು ಮಾಡಿದ್ದು ಕಾಂಗ್ರೆಸ್ ಹೈಕಮಾಂಡ್. ಇಲ್ಲಿ ಗುಜರಾತ್ ಶಾಸಕರ ‘ಅತಿಥಿ ಸತ್ಕಾರ’ ನಿಂತವರು ಡಿ. ಕೆ. ಶಿವಕುಮಾರ್. ಆ ಸಮಯದಲ್ಲಿಯೇ ಅವರ ಮೇಲೆ ಐಟಿ ದಾಳಿ ನಡೆದಿದೆ.

ರಾಜ್ಯದ ಎಲ್ಲಾ ವಿಚಾರಗಳನ್ನು ಪಕ್ಕಕ್ಕಿಟ್ಟು ಸುದ್ದಿ ಕೇಂದ್ರವನ್ನು ಆವರಿಸಿಕೊಂಡಿರುವ ಈ ಬೆಳವಣಿಗೆ ಸಹಜವಾಗಿಯೇ ಭಿನ್ನ ನೆಲೆಯ ಅಭಿಪ್ರಾಯಗಳನ್ನು ಹುಟ್ಟುಹಾಕಿರುವುದು ಗಮನಾರ್ಹ. ಪ್ರಮಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಐಟಿ ದಾಳಿ ಮತ್ತು ಅದರ ಹಿಂದಿರುವ ರಾಜಕೀಯದ ಕುರಿತು ಪರಸ್ಪರ ಕೆಸರೆರಿಚಿಕೊಳ್ಳುತ್ತಿವೆ. ಸಾಮಾನ್ಯ ಜನರಲ್ಲಿ ಐಟಿ ದಾಳಿಯ ಪರ ಮತ್ತು ವಿರೋಧದ ನೆಲೆಗಳು ಹುಟ್ಟಿಕೊಂಡಿವೆ. ಇನ್ನೂ ಕೊಂಚ ಆಳಕ್ಕಿಳಿದು ನೋಡಿದರೆ, ಎಲ್ಲಾ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳು ಹುಟ್ಟುವಂತೆ, ಈ ವಿಚಾರದಲ್ಲಿಯೂ ಐಟಿ ದಾಳಿಯ ಪರ- ವಿರೋಧ ಮತ್ತು ಮಧ್ಯಮ ದಾರಿಯನ್ನು  ಅವರವರ ಭಾವಕ್ಕೆ, ಭಕ್ತಿಗೆ ತಕ್ಕ ಹಾಗೆ ಹಿಡಿಯಲಾಗುತ್ತಿದೆ.

ಮಾಧ್ಯಮಗಳ

ಕೊಡುಗೆ:

ಸದ್ಯ ಜನರ ನಡುವೆ ಹುಟ್ಟುಹಾಕಿರುವ ಈ ಭಿನ್ನ ನೆಲೆಯ ಅಭಿಪ್ರಾಯಗಳಿಗೆ ಮಾಧ್ಯಮಗಳ ಕೊಡುಗೆ ಎದ್ದು ಕಾಣಿಸುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಡುವ ಟಿವಿ9ನ ಕಳೆದ 30 ಗಂಟೆಗಳ ಕವರೇಜ್ ಈ ಕುರಿತು ಒಂದಷ್ಟು ಒಳನೋಟಗಳನ್ನು ನೀಡುತ್ತಿದೆ. ಡಿ. ಕೆ. ಶಿವಕುಮಾರ್ ಮತ್ತು ಟಿವಿ9 ನಡುವೆ ಶೀಲತ ಸಮರವೊಂದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಟಿವಿ9 ಸೋದರ ಸಂಸ್ಥೆ ನ್ಯೂಸ್ 9 ಪತ್ರಕರ್ತರ ಮೇಲೆ ಡಿಕೆಎಸ್ ಕೇಸು ದಾಖಲಿಸಿದ ನಂತರ ಇದು ಬಹಿರಂಗ ಕದನವಾಗಿ ಮಾರ್ಪಟ್ಟಿತ್ತು.

ಇದೀಗ ಟಿವಿ9 ಮತ್ತು ನ್ಯೂಸ್ 9 ನೀಡುತ್ತಿರುವ ಐಟಿ ದಾಳಿ ಕವರೇಜ್ ಮೂಲಕ ಅದು ಇನ್ನಷ್ಟು ಸ್ಪಷ್ಟವಾಗುತ್ತಿದೆ. “ಟಿವಿ9 ಸುದ್ದಿ ಭಿತ್ತರಿಸುತ್ತಿರುವ ಆಮಾಯ ಇತರೆ ವಾಹಿನಿಗಳಿಗೆ ಹೋಲಿಸಿದರೆ ಕೊಂಚ ಭಿನ್ನವಾಗಿದೆ. ಎಲ್ಲಿಯೂ ಐಟಿ ದಾಳಿ ಹಿಂದಿರುವ ರಾಜಕೀಯ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಬದಲಿಗೆ, ಇದು ವ್ಯಕ್ತಿಯೊಬ್ಬನ ಮೇಲೆ ನಡೆದಿರುವ ದಾಳಿ, ಆ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು? ಆತನ ಆಸ್ತಿಪಾಸ್ತಿ, ಅಧಿಕಾರದ ಬಳಕೆಯಂತಹ ವಿಚಾರಗಳಿಗೆ ಹೆಚ್ಚು ಫೋಕಸ್ ಮಾಡಲಾಗುತ್ತಿದೆ. ಇದೊಂದು ರೀತಿಯಲ್ಲಿ ತೋಳ ಹಳ್ಳಕ್ಕೆ ಬಿದ್ದಾಗ ತೂರುವ ಕಲ್ಲಿನ ಕತೆಯಂತಿದೆ,’’ ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಟಿವಿ9 ಮತ್ತು ನ್ಯೂಸ್ 9 ಹೊರತು ಪಡಿಸಿದರೆ ಉಳಿದ ಪ್ರಮುಖ ವಾಹಿನಿಗಳಲ್ಲಿ ಡಿಕೆಎಸ್ ಮೇಲಿನ ಐಟಿ ದಾಳಿ ಹಿಂದಿರುವ ರಾಜಕೀಯ ಆಯಾಮ, ಡಿಕೆಎಸ್ ಪರವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಸುದ್ದಿಗಳು ಭಿತ್ತರವಾಗುತ್ತಿವೆ. ಇನ್ನು, ದಿನ ಪತ್ರಿಕೆಗಳಲ್ಲೂ ಇದೇ ಪರ, ವಿರೋಧ ಮತ್ತು ಮಧ್ಯಮ ಹಾದಿಯ ಕವರೇಜ್ ಕಾಣಸಿಗುತ್ತದೆ.

ನಾನಾ

ಅಭಿಪ್ರಾಯಗಳು:

ಸಾಮಾನ್ಯ ಜನರಲ್ಲಿಯೂ ಡಿಕೆಎಸ್ ಮೇಲಿನ ಐಟಿ ದಾಳಿ ನಾನಾ ಅಯಾಮಗಳಲ್ಲಿ ಚರ್ಚೆಗೆ ಒಳಗಾಗಿದೆ. ಅಲ್ಲಿ ಪ್ರಮುಖವಾಗಿ ಮೂರು ಬಗೆಯ ಆಲೋಚನೆಗಳ ಕೆಲಸ ಮಾಡುತ್ತಿರುವುದು ಢಾಳಾಗಿ ಕಾಣಿಸುತ್ತಿದೆ. ಒಂದು, ಹಲವು ಆರೋಪಗಳನ್ನು ಹೊತ್ತುಕೊಂಡಿದ್ದ, ರಾಜಕೀಯ ಅಧಿಕಾರ ಬಳಸಿ ಹಣ ಗಳಿಸಿದ್ದ ಡಿ. ಕೆ. ಶಿವಕುಮಾರ್ ಮೇಲೆ ಐಟಿ ದಾಳಿ ಸರಿಯಾದ ಕ್ರಮ. ಇದರಲ್ಲಿ ರಾಜಕೀಯ ಹುಡುಕುವುದಕ್ಕಿಂತ ಕಾನೂನು ಅದರ ಕ್ರಮ ಕೈಗೊಂಡಿದ್ದನ್ನು ಬೆಂಬಲಿಸಬೇಕು ಎಂಬ ವಾದ. ಎರನೇಯದು, ಡಿಕೆಎಸ್ ಮಾತ್ರವಲ್ಲ, ಬಹುತೇಕ ರಾಜಕಾಣಿಗಳು ಅಕ್ರಮವಾಗಿ ಹಣ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಐಟಿ ಇಲಾಖೆಯನ್ನು ಬಿಜೆಪಿ ಬಳಸಿಕೊಂಡು, ದಾಳಿ ನಡೆಸಿದೆ. ಹೀಗಾಗಿ ಡಿಕೆಎಸ್ ರಾಜಕೀಯ ದ್ವೇಷಕ್ಕೆ ಬಲಿಯಾದರು ಎಂಬುದು. ಮೂರನೇಯದು, ಡಿಕೆಎಸ್ ಮೇಲೆ ನಡೆದಿರುವ ದಾಳಿ ಸರಿಯಾಗಿದೆ, ಆದರೆ ದಾಳಿ ನಡೆಸಿದ ಸಮಯ ಮತ್ತು ಸಂದರ್ಭ, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಸಾರಿ ಹೇಳುತ್ತಿದೆ ಎಂಬುದು.

ಮುಂದೇನು?:

ಈಗಾಗಲೇ ಕೆಲವು ಮಾಧ್ಯಮಗಳು ಡಿ.ಕೆ. ಶಿವಕುಮಾರ್ ಬಂಧನದ ಕುರಿತು ಭವಿಷ್ಯ ಹೇಳಲು ನಿಂತಿವೆ. ಆದರೆ ಐಟಿ ದಾಳಿ ಯಾಕೆ ನಡೆಯಿತು? ಯಾವ ಪ್ರಕರಣದಲ್ಲಿ ಕೇಸು ದಾಖಲಾಗಿದೆ? ಅಕ್ರಮ ಆಸ್ತಿ ಸಂಪಾದನೆ ಕುರಿತು ಐಟಿಗೆ ತಲುಪಿರುವ ಮಾಹಿತಿ ಏನು? ಈ ವಿಚಾರಗಳಿನ್ನೂ ನಿಗೂಢವಾಗಿಯೇ ಇವೆ. ಒಂದು ವೇಳೆ ಸಚಿವ ಡಿ. ಕೆ. ಶಿವಕುಮಾರ್ ಬಂಧನ ಆಗದಿದ್ದರೆ, ಈ ದೇಶದಲ್ಲಿ ನಡೆಯುವ ಐಟಿ ದಾಳಿಗಳಂತೆ ಇದೂ ಕೂಡ ಇನ್ನೊಂದೆರಡು ದಿನಗಳಲ್ಲಿ ತೆರೆಮರೆಗೆ ಸರಿಯುತ್ತದೆ. ದಾಳಿಗೆ ಗುರಿಯಾದ ರಾಜಕಾರಣಿ ಜನರ ಕನಿಕರ ಗಿಟ್ಟಿಸಲು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಾನೆ. ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲೇ ಇರುವಾಗ, ಕಾನೂನಿಗಿಂತ ಹೆಚ್ಚಾಗಿ ರಾಜಕೀಯ ಬೇಳೆ ಬೇಯಿಸಲು ಐಟಿ ದಾಳಿ ಬಳಕೆಯಾಗುತ್ತದೆ. ವ್ಯವಸ್ಥೆ ತನ್ನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳತ್ತದೆ.