samachara
www.samachara.com
ಹೈದ್ರಾಬಾದ್ ಕರ್ನಾಟಕದ 'ಅವಳಿ ಜವಳಿ'ಗಳಲ್ಲಿ ಒಬ್ಬರಾದ 'ಅಜಾತ ಶತ್ರು ಧರ್ಮಸಿಂಗ್' ಇನ್ನಿಲ್ಲ
ಸುದ್ದಿ ಸಾಗರ

ಹೈದ್ರಾಬಾದ್ ಕರ್ನಾಟಕದ 'ಅವಳಿ ಜವಳಿ'ಗಳಲ್ಲಿ ಒಬ್ಬರಾದ 'ಅಜಾತ ಶತ್ರು ಧರ್ಮಸಿಂಗ್' ಇನ್ನಿಲ್ಲ

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

'ಲಾಯಾ ಥಾ ಕ್ಯಾ ಸಿಕಂದರ್; ಕ್ಯಾ ಲೇ ಚಲಾ ಜಹಾ ಸೇ; ಥೇ ದೋನೋ ಹಾತ್ ಖಾಲಿ ಬಾಹರ್‌ ಕಫನ್‌...' 

2006ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮ ಸಿಂಗ್ ಅಂದಿನ ತಮ್ಮ ನಿವಾಸ 'ಅನುಗ್ರಹ'ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಶಾಯರಿಯ ಸಾಲುಗಳಿವು.

'ಸಿಕಂದರ್ ಎಂಬ ರಾಜ ಬರುವಾಗಲೂ ಏನೂ ತರಲಿಲ್ಲ; ಹೋಗುವಾಗಲೂ ಏನೂ ತೆಗೆದುಕೊಂಡು ಹೋಗಲಿಲ್ಲ. ಆತನ ಕೈ ಖಾಲಿಯಾಗಿತ್ತು ಎಂಬುದನ್ನು ಜನ ನೋಡಲಿ' ಎಂಬರ್ಥವನ್ನು ಸೂಸುವ ಶಾಯರಿ ಇದು. ಶಾಯರಿಯನ್ನು ಮಾತು ಮಾತಿಗೂ ಎಳೆದು ತರುತ್ತಿದ್ದ ಧರ್ಮ ಸಿಂಗ್, ರಾಜಕೀಯದಲ್ಲಿದ್ದರೂ ಅಜಾತ ಶತ್ರು ಎಂದು ಹೆಸರು ಗಳಿಸಿದ್ದವರು. ಎಂತಹ ಸಮಯದಲ್ಲಿಯೂ ಭಾವೋದ್ವೇಗಗಳಿಗೆ ಅವರು ಒಳಗಾಗುತ್ತಿರಲಿಲ್ಲ. 2006ರ ಜನವರಿ ಕೊನೆಯಲ್ಲಿ ಆರಂಭವಾದ ಕರ್ನಾಟಕ ರಾಜಕೀಯ ಬೆಳವಣಿಗೆಗಳು ಅವರನ್ನು ಹೈರಾಣು ಮಾಡಿದ್ದವು. 10 ದಿನಗಳ ಮೇಲಾಟಗಳ ನಂತರ ಅವತ್ತು ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್‌. ವಿ. ರಂಗನಾಥ್‌ ಕೈಲಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದರು ಧರ್ಮ ಸಿಂಗ್. ನಂತರ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಮೇಲಿನ ಶಾಯರಿಯ ಸಾಲುಗಳ ಮೂಲಕ ನಿರ್ಭಾವುಕರಾಗಿ ತಮ್ಮ ನಿಲುವನ್ನು ಪ್ರಕಟಿಸಿದ್ದರು.

ಹೈದ್ರಾಬಾದ್ ಕರ್ನಾಟಕದ ಜೇವರ್ಗಿ ಕ್ಷೇತ್ರದಿಂದ 8 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಆಯ್ಕೆಯಾದ ಧರ್ಮ ಸಿಂಗ್, ಆಧಿಕಾರದ ನೆರಳಿಲ್ಲದೆ ರಾಜಕಾರಣ ಮಾಡಿದ್ದು ಕಡಿಮೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ರಜಪೂತ ಸಮುದಾಯದಿಂದ ಬಂದ ಅವರಿಗೆ ಜಾತಿಯ ಬಲ ಇರಲಿಲ್ಲ. ಹಾಗಿದ್ದೂ ಅವರು ಜಾತಿ ರಾಜಕಾರಣದ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಜನಾಭಿಪ್ರಾಯವನ್ನು ಪಡೆದುಕೊಂಡು ಬಂದವರು ಅವರು.

ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಅವರು ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. "ತುರ್ತು ಚಿಕಿತ್ಸೆಗಾಗಿ ಧರ್ಮ ಸಿಂಗ್‌ ಅವರನ್ನು ಬೆಳಿಗ್ಗೆ 9ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರು," ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಧರ್ಮ ಸಿಂಗ್‌ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಅಜಾತ ಶತ್ರು: 

1936ರ ಡಿಸೆಂಬರ್ 25ರಂದು ಗುಲ್ಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಜನಿಸಿದವರು ಧರ್ಮ ಸಿಂಗ್‌. ಹೈದ್ರಾಬಾದಿನ ಉಸ್ಮಾನಿಯಾ ವಿವಿಯಿಂದ ಎಂ.ಎ, ಎಲ್.ಎಲ್.ಬಿ. ಪದವಿ ಪಡೆದಿದ್ದರು. ಪದವಿ ನಂತರ ಅವರು ಒಂದಷ್ಟು ಕಾಲ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು. 1960ರಲ್ಲಿ ಗುಲ್ಬರ್ಗಾದಲ್ಲಿ ಸಹೋದರನ ವಿರುದ್ಧ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಅದು ಅವರ ರಾಜಕೀಯ ಪ್ರವೇಶ ಮೊದಲ ಹೆಜ್ಜೆಯಾಗಿತ್ತು. ಆ ನಂತರ ಕಾಂಗ್ರೆಸ್ ಸೇರಿಕೊಂಡ ಅವರು ಮತ್ತೆಂದೂ ಸುದೀರ್ಘ ರಾಜಕೀಯ ಪಯಣದಲ್ಲಿ ಪಕ್ಷ ಬದಲಿಸುವ ಮನಸ್ಸೂ ಕೂಡ ಮಾಡಲಿಲ್ಲ.

2004ರಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ಪ್ರಯೋಗ ನಡೆಯಿತು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿಂದಿನ ಸಿಎಂ ಎಸ್‌. ಎಂ. ಕೃಷ್ಣ ಅವರಿಂದ ಹಿಡಿದು ಖರ್ಗೆವರೆಗೆ ಹೆಸರುಗಳಿದ್ದವು. ಆದರೆ ಜೆಡಿಎಸ್‌ ವರಿಷ್ಠ ದೇವೇಗೌಡ ಒಪ್ಪಿಗೆ ಸೂಚಿಸಿದ್ದು ಧರ್ಮ ಸಿಂಗ್ ಅವರಿಗೆ. ಅದಕ್ಕೆ ಕಾರಣ ಅವರಿಗಿದ್ದ 'ಅಜಾತ ಶತ್ರು' ಎಂಬ ಇಮೇಜ್ ಅಷ್ಟೆ. ಹಾಗಂತ ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ಅಧಿಕಾರ ಅವಧಿ ಹೂವಿನ ಹಾಸಿಗೆ ಏನೂ ಆಗಿರಲಿಲ್ಲ.

ಈ ಸಮಯದಲ್ಲಿ ಎನ್‌ಡಿಟಿವಿಯ ಪತ್ರಕರ್ತ ಶೇಖರ್‌ ಗುಪ್ತಾ, ಮುಖ್ಯಮಂತ್ರಿ ಧರ್ಮ ಸಿಂಗ್ ಜತೆ ನಡೆಸಿದ 'ವಾಕ್‌ ದಿ ಟಾಕ್' ಕಾರ್ಯಕ್ರಮದಲ್ಲಿ ದೇವೇಗೌಡರ ಕಡೆಯಿಂದ ಇರುವ ಒತ್ತಡಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ನಗುಮುಖದಿಂದಲೇ ಉತ್ತರಿಸಿದ ಸಿಂಗ್, "ನನಗೇನೂ ಒತ್ತಡ ಇಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ಮುನ್ನಡೆಸುತ್ತಿದ್ದೇನೆ. ಇವೆಲ್ಲವೂ ಸಾಮಾನ್ಯ" ಎಂದು ಪ್ರತಿಕ್ರಿಯೆ ನೀಡಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವರ ನಡುವೆ ಅವರು ಯಾವುದೇ ತಾರತಮ್ಯ ಮಾಡುತ್ತಿರಲಿಲ್ಲ. ಇದು ನನ್ನ ಸರಕಾರ, ಎಲ್ಲರೂ ನಮ್ಮ ಸಚಿವರುಗಳು ಎಂಬ ಭಾವನೆ ಇತ್ತು.

ಅಧಿಕಾರ ಕಳೆದುಕೊಂಡಾಗಲೂ ಅತ್ಯಂತ ಸಂಯಮದಿಂದಲೇ ಇದ್ದ ಅವರು, "ನನಗೇನೂ ಅಧಿಕಾರಕ್ಕೆ ಅಂಟಿಕೊಂಡರಬೇಕು ಎಂಬ ಆಸೆ ಇಲ್ಲ,'' ಎಂದು ನಗುಮುಖದಿಂದಲೇ ಹೇಳಿದ್ದರು. ಶಾಯರಿಗಳ ಮೂಲಕ ಬದುಕಿನ ನಿರರ್ಥಕತೆಯನ್ನು ಮುಂದಿಡುವ ಪ್ರಯತ್ನ ಮಾಡಿದ್ದರು.

ಅವಳಿ ಜವಳಿಗಳು:


       ಖರ್ಗೆ ಮತ್ತು ಧರ್ಮ ಸಿಂಗ್ (ಚಿತ್ರ: ದಿ ಹಿಂದೂ)
ಖರ್ಗೆ ಮತ್ತು ಧರ್ಮ ಸಿಂಗ್ (ಚಿತ್ರ: ದಿ ಹಿಂದೂ)

ದೇವರಾಜ್ ಅರಸ್, ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಗೃಹ, ಲೋಕೋಪಯೋಗಿ, ಅಬಕಾರಿ, ಸಮಾಜ ಕಲ್ಯಾಣ, ಕಂದಾಯ, ನಗರಾಭಿವೃದ್ದಿ ಖಾತೆಗಳ ನಿರ್ವಾಹಣೆ ಮಾಡಿದ್ದವರು ಧರ್ಮ ಸಿಂಗ್.

ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ವಿಚಾರಕ್ಕೆ ಬಂದರೆ ಅತಿ ಹೆಚ್ಚು ಟೀಕೆಗಳು ಕೇಳಿ ಬಂದಿದ್ದು ಧರ್ಮ ಸಿಂಗ್ ಮತ್ತು ಮಲ್ಲಿಖಾರ್ಜುನ ಖರ್ಗೆ ಅವರ ಬಗ್ಗೆ. ಅತಿ ಹೆಚ್ಚು ಬಾರಿ ಗೆದ್ದು ಬಂದರೂ, ಅವರುಗಳು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಎಂಬುದು ಇಬ್ಬರ ಮೇಲೂ ಇರುವ ಆರೋಪ. ಆದರೆ ಇವೆಲ್ಲಾ ಆರೋಪಗಳ ಆಚೆಗೆ ಇವತ್ತು ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದರೆ, ಅದರ ಹಿಂದಿರುವುದು ಈ ಇಬ್ಬರು 'ಅವಳಿ ಜವಳಿ'ಗಳಂತೆ ರಾಜಕೀಯದಲ್ಲಿ ಬೆಳೆದುಬಂದ ನಾಯಕರುಗಳು.

"ಧರ್ಮ ಸಿಂಗ್ ಮತ್ತು ಖರ್ಗೆ ಇಬ್ಬರೂ ದೇವರಾಜು ಅರಸು ಅವರ ಹಿಂದುಳಿದ ವರ್ಗಗಳ ಅಭಿವೃದ್ಧಿ ರಾಜಕೀಯದಲ್ಲಿ ನಂಬಿಕೆ ಇಟ್ಟುಕೊಂಡವರು.  ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೈದ್ರಾಬಾದ್ ಕರ್ನಾಟಕದಿಂದ ಯಾವುದೇ ಅಭ್ಯರ್ಥಿ ಬೇಕು ಎಂದರೂ ಜಾತಿ ಭೇದಗಳಿಲ್ಲದೆ ಹುಡುಕಿಕೊಂಡು ತರುತ್ತಿದ್ದವರು ಇವರಿಬ್ಬರು. ತಾಲೂಕು ಪಂಚಾಯ್ತಿ ಚುನಾವಣೆಯಿಂದ ಹಿಡಿದು ರಾಜ್ಯಸಭಾ ಚುನಾವಣೆವರೆಗೆ  ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿಕೊಂಡು ಬರುವ ಕಲೆ ಇಬ್ಬರಲ್ಲಿಯೂ ಇತ್ತು,'' ಎನ್ನುತ್ತಾರೆ ಹಿರಿಯ ಪತ್ರಕರ್ತ ಇಮ್ರಾನ್ ಖುರೇಷಿ.

ಗುರುವಾರ ಧರ್ಮ ಸಿಂಗ್ ಸಾವಿಗೆ ಸಂತಾಪ ಸೂಸುವ ವೇಳೆ ಮಾಧ್ಯಮಗಳ ಮುಂದೆಯೇ ಕಣ್ಣೀರು ಹಾಕಿದರು ಮಲ್ಲಿಖಾರ್ಜುನ್ ಖರ್ಗೆ. ರಾಜಕೀಯದ ಆಚೆಗೂ ಇಬ್ಬರ ನಡುವೆ ಇದ್ದ ಸ್ನೇಹದ ಸೂಚಕದಂತಿದ್ದವು ಅವರ ಮಾತುಗಳು.

ಧರ್ಮ ಸಿಂಗ್ ಅವರ ಕುರಿತು 'ಮ್ಯಾನ್‌ ಆಫ್‌ ದಿ ಮಾಸಸ್‌' ಎಂಬ ಲೇಖನವನ್ನು ಬರೆದಿರುವ ಹಿರಿಯ ಪತ್ರಕರ್ತ ಟಿ. ವಿ. ಶಿವಾನಂದನ್‌, "ಆರ್ಟಿಕಲ್‌ 371 ಅಡಿಯಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗವಲ್ಲಿ ಧರ್ಮ ಸಿಂಗ್ ವಹಿಸಿದ್ದ ಪಾತ್ರ ಗಮನಾರ್ಹ. ಅದರ ಜತೆಗೆ ಸಂಚಾರಿ ಹೈಕೋರ್ಟ್‌ ಪೀಠವನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಲ್ಲಿಯೂ ಅವರ ಪಾತ್ರ ಮಹತ್ವವಾಗಿದ್ದು," ಎನ್ನುತ್ತಾರೆ.

ಸ್ನೇಹಜೀವಿ ಸಿಂಗ್: 

ಧರ್ಮ ಸಿಂಗ್ ಅವರನ್ನು ಆರಂಭದ ದಿನಗಳಿಂದಲೂ ಬಲ್ಲವರ ಪ್ರಕಾರ ಅವರು ಪಕ್ಷಗಳನ್ನು ಮೀರಿ ಜನರ ಜತೆ ಸ್ನೇಹ ಸಂಪಾದಿಸಿದ್ದರು. ಹಿಂದೆ ಕಮ್ಯುನಿಸ್ಟ್ ಪಕ್ಷದಲ್ಲಿದ್ದ ಕೆ. ವಿ. ಶಾಣಪ್ಪ ಕೂಡ ಅವರಲ್ಲೊಬ್ಬರು. "ಅದು 1972 ಇರಬೇಕು ಎಂಬ ನೆನಪು. ನಾನಾಗ ಟ್ರೇಡ್‌ ಯೂನಿಯನ್‌ನಲ್ಲಿದ್ದೆ. ಫ್ಯಾಕ್ಟರಿಯಲ್ಲಿ ಹೋರಾಟ ಮಾಡಿದಾಗ ನಮ್ಮ ಮೇಲೆ ಪ್ರಕರಣ ದಾಖಲಾಗಿತ್ತು. ನಾನು ಭೂಗತನಾಗಿದ್ದೆ. ಈ ಸಮಯದಲ್ಲಿ ನೆರವಿಗೆ ಬಂದಿದ್ದು ಧರ್ಮ ಸಿಂಗ್. ಕಾರ್ಮಿಕ ನಾಯಕರ ಮೇಲೆ ಹಾಕಿದ್ದ ಕೇಸಿನ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಸಹಾಯ ಮಾಡಿದ್ದರು. ಅವರಿಗೆ ಪಕ್ಷಗಳ ಆಚೆಗೆ ಮನುಷ್ಯರನ್ನು ಪ್ರೀತಿಸುವುದು ಗೊತ್ತಿತ್ತು,'' ಎನ್ನುತ್ತಾರೆ ಶಾಣಪ್ಪ. 'ಸಮಾಚಾರ' ಜತೆ ಮಾತನಾಡಿದ ಅವರು, "ಇವತ್ತು ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅಂತಹ ವ್ಯಕ್ತಿತ್ವ ಮತ್ತೆ ಸಿಗುವುದಿಲ್ಲ,'' ಎಂದರು.

ಸಾಕಷ್ಟು ಏಳುಗಳು, ಅಲ್ಪಾವಧಿಯ ಬೀಳುಗಳನ್ನು ಕಂಡಿದ್ದ ಧರ್ಮ ಸಿಂಗ್ ಅವರ ಕೊನೆಯ ದಿನಗಳು ಮಾತ್ರ ಸುಂದರವಾಗೇನೂ ಇರಲಿಲ್ಲ. ಇತ್ತೀಚೆಗಷ್ಟೆ ಅಕ್ರಮ ಗಣಿ ಹಗರಣಕ್ಕೆ ಸಂಬಂಧಪಟ್ಟ ಹಾಗೆ ಅವರಿಗೆ ವಿಶೇಷ ತನಿಖಾ ತಂಡ ಪ್ರಶ್ನಾವಳಿಗಳನ್ನೂ ಕಳುಹಿಸಿ ಕೊಟ್ಟಿತ್ತು. "ಅದೊಂದು ಕಾರಣಕ್ಕೆ ಧರ್ಮ ಸಿಂಗ್ ಕೊನೆಯ ದಿನಗಳಲ್ಲಿ ಭಾರಿ ಹಿಂಸೆ ಅನುಭವಿಸಿದರು. ಸುದೀರ್ಘ ರಾಜಕೀಯದ ಬಳವಳಿ ಕೊನೆಯ ದಿನಗಳಲ್ಲಿ ಈ ರೂಪದಲ್ಲಿ ಸಿಕ್ಕಿತ್ತು,'' ಎಂದು ವಿಷಾಧ ವ್ಯಕ್ತಪಡಿಸುತ್ತಾರೆ ಶಾಣಪ್ಪ.

ಸದ್ಯ ಎಲ್ಲವನ್ನೂ, ಹಿಂದೆ ಬಿಟ್ಟು ಹೋಗಿರುವ ಧರ್ಮ ಸಿಂಗ್, ಕರ್ನಾಟಕ ಕಂಡ ಶಾಯರಿ ಪ್ರಿಯ, ಜಾತಿ ಬಲ ಮೀರಿದ, ಅಜಾತ ಶತ್ರು ಮಾಜಿ ಮುಖ್ಯಮಂತ್ರಿ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾರೆ.