ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ
ಸುದ್ದಿ ಸಾಗರ

ಶಶಿಕಲಾ, ತೆಲಗಿ ಆಚೆಗೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ ರೂಪ ಪತ್ರ

ರಾಜ್ಯದ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಂತರಿಕ ಪರಿಸ್ಥಿತಿಯ ಕುರಿತು ಡಿಐಜಿ ರೂಪಾ ತಮ್ಮ ಮೇಲಾಧಿಕಾರಿಗೆ ಬರೆದ ಪತ್ರ ಈಗ ಚರ್ಚೆಗೆ ಗ್ರಾಸವಾಗಿದೆ.

ಪತ್ರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕರೀಂ ಲಾಲ್ ತೆಲಗಿ ಹೆಸರೂ ಇರುವುದರಿಂದ ಸುದ್ದಿಗೆ ರಾಷ್ಟ್ರೀಯ ಆಯಾಮಯೂ ದೊರಕಿದೆ.

ಒಟ್ಟು ನಾಲ್ಕು ಪುಟಗಳ ಪತ್ರದ ಜತೆಗೆ 6 ಪುಟಗಳ ಜೈಲಿನ ವೈದ್ಯಾಧಿಕಾರಿಗಳ ಪತ್ರವನ್ನೂ ಮೇಲಾಧಿಕಾರಿಗೆ ಸಲ್ಲಿಸಿದ್ದಾರೆ ಡಿಐಜಿ ರೂಪಾ. ವಿಶೇಷ ಅಂದರೆ ಪತ್ರದಲ್ಲಿ ತಮ್ಮ ಮೇಲಾಧಿಕಾರಿ ಡಿಜಿಪಿ ಸತ್ಯನಾರಾಯಣ್‌ ರಾವ್‌ ಅವರ ಮೇಲಿನ ಆರೋಪಗಳನ್ನೂ ಮಹಿಳಾ ಅಧಿಕಾರಿ ಪ್ರಸ್ತಾಪಿಸಿದ್ದಾರೆ. ಪತ್ರವು, ಶಶಿಕಲಾ ಹಾಗೂ ತೆಲಗಿ ಆಚೆಗೂ ಜೈಲಿನ ಒಳಗಿರುವ ಆಸ್ಪತ್ರೆಯ ಸಿಬ್ಬಂದಿಗಳ ಪರಿಸ್ಥಿತಿಯ ಕುರಿತು ವಿಶೇಷವಾಗಿ ಬೆಳಕು ಚೆಲ್ಲಿದೆ.

ಪತ್ರದಲ್ಲೇನಿದೆ?:

ಜು. 10ರಂದು ಖುದ್ದಾಗಿ ಜೈಲಿಗೆ ಭೇಟಿ ನೀಡಿದ ಡಿಐಜಿ ರೂಪ ಹೊರಬಂದ ನಂತರ ತಮ್ಮ ಮೇಲಾಧಿಕಾರಿಗೆ ಆಂತರಿಕ ಪರಿಸ್ಥಿತಿಗಳನ್ನು ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ. ಈ ಹಿಂದೆ, ರೂಪ ಜೈಲಿಗೆ ಭೇಟಿ ಮಾಡಿದ ಹಿನ್ನೆಲೆಯಲ್ಲಿ ಡಿಜಿಪಿ ಸತ್ಯನಾರಾಯಣ್ ರಾವ್ ನೀಡಿದ 'ಜ್ಞಾಪನಾ ಪತ್ರ'ದ ಕುರಿತ ಉಲ್ಲೇಖವೂ ಇದರಲ್ಲಿದೆ. ಕಾನೂನಾತ್ಮಕವಾಗಿಯೇ ತಮ್ಮ ಮೇಲಾಧಿಕಾರಿಗೆ ಸೆಡ್ಡು ಹೊಡೆಯುವ ಪ್ರಯತ್ನ ಇದರ ಹಿಂದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ರೂಪ ಜೈಲಿಗೆ ಭೇಟಿ ನೀಡಿದ ಸಮಯದಲ್ಲಿ ಜೈಲಿನ ಮುಖ್ಯ ಅಧೀಕ್ಷಕರು ಇರಲಿಲ್ಲ ಎಂಬುದನ್ನು ಪತ್ರದಲ್ಲಿ ತಿಳಿಸಿದ್ದಾರೆ. 'ಬಹುಶಃ ಅವರು ಕುಣಿಗಲ್ ನ್ಯಾಯಾಲಯಕ್ಕೆ ಹೋಗಿರಬಹುದು' ಮುಖ್ಯ ಅಧೀಕ್ಷಕರ ಅನುಪಸ್ಥಿತಿಯ ಕುರಿತು ಸಿಬ್ಬಂದಿಗಳು ಹೇಳಿದ್ದನ್ನು ರೂಪ ಪತ್ರದಲ್ಲಿ ವಿವರಿಸಿದ್ದಾರೆ. ಸಂಜೆ 6. 30ರವರೆಗೂ ಜೈಲಿನಲ್ಲಿ ಇದ್ದರೂ, ಮುಖ್ಯ ಅಧೀಕ್ಷಕರು ಸ್ಥಳಕ್ಕೆ ಬಾರದ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷ ಅಂದರೆ, ಅಂದು ಜೈಲಿಗೆ ಭೇಟಿ ನೀಡುವ ಸಮಯದಲ್ಲಿ ಅಧಿಕಾರಿ ರೂಪ ಕೈದಿಗಳ 'ವೈದ್ಯ ಪರೀಕ್ಷೆ'ಗೆ ಸಿದ್ಧತೆ ಮಾಡಿಕೊಂಡೇ ಹೋಗಿದ್ದಾರೆ. ಅಂದು ಸುಮಾರು 25 ಕೈದಿಗಳ ಮೂತ್ರ ಪರೀಕ್ಷೆಯನ್ನು ಅವರು ಮಾಡಿದ್ದಾರೆ. ಈ ಕುರಿತು ಪ್ರಯೋಗಾಲಯದಿಂದ ಬಂದಿರುವ ವರದಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪರೀಕ್ಷೆಗೆ ಒಳಪಡಿಸಿದ 25 ಕೈದಿಗಳಲ್ಲಿ ಸುಮಾರು 18 ಜನರ ಮೂತ್ರದಲ್ಲಿ ಗಾಂಜಾ ಸೇರಿದಂತೆ ಇತರೆ ನಿರ್ಬಂಧಿತ ಡ್ರಗ್ಸ್‌ ಪತ್ತೆಯಾಗಿವೆ. 18 ಜನರಲ್ಲಿ 16 ಜನ ವಿಚಾರಣಾಧೀನ ಕೈದಿಗಳಾಗಿದ್ದು, ಒಬ್ಬರು ಸಜಾ ಬಂಧಿಗಳಾಗಿದ್ದಾರೆ. ಇವರಲ್ಲಿ ಶಾಹೇಬ್‌ ಎಂಬ ಕೈದಿಯ ಮೂತ್ರದಲ್ಲಿ ಮಾರ್ಫಿನ್‌ ಅಂಶ ಕೂಡ ಪತ್ತೆಯಾಗಿದೆ.

ದಾಖಲೆ ಹಾಗೂ ಫಾರ್ಮಸಿ ನಿರ್ವಹಣೆ: 

ಇದರ ಜತೆಗೆ ಜೈಲಿನ ಒಳಗಡೆ ಇರುವ ವೈದ್ಯಕೀಯ ದಾಖಲಾತಿಗಳ ಕೊಠಡಿಯ ನಿರ್ವಹಣೆಯ ಕುರಿತು ಮಹಿಳಾ ಅಧಿಕಾರಿಯ ಪತ್ರ ಗಮನ ಸೆಳೆಯುತ್ತದೆ. ಸಿಬ್ಬಂದಿಗಳ ಕೊರತೆಯ ನೆಪವನ್ನು ಮುಂದಿಟ್ಟುಕೊಂಡು ವೈದ್ಯಕೀಯ ದಾಖಲೆಗಳಿರುವ ಕೊಠಡಿಯ ನಿರ್ವಹಣೆಯ ಹೊಣೆಯನ್ನು ವಿಚಾರಣಾಧೀನ ಕೈದಿಗಳ ಕೈಗೆ ಒಪ್ಪಿಸಲಾಗಿದೆ. ಇದರಿಂದ ದಾಖಲೆಗಳು ಕಣ್ಮರೆಯಾಗಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಇದರ ಜತೆಗೆ, ಜೈಲಿನ ಒಳಗಿರುವ ಫಾರ್ಮಸಿಯ ನಿರ್ವಹಣೆಯನ್ನೂ ಕೈದಿಗಳಿಗೇ ವಹಿಸಿರುವ ಅಂಶ ಪತ್ರದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ನಿರ್ಬಂಧಿತ ನಿದ್ದೆ ಮಾತ್ರೆಗಳು ಕೈದಿಗಳಿಗೆ ತಲುಪಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಡಿಐಜಿ ರೂಪ ಮಾಡಿದ್ದಾರೆ.

ಜೈಲಿನ ಒಳಗಿರುವ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೈದಿಗಳಿಂದ ನಕಲಿ ಮೆಡಿಕಲ್‌ ಪ್ರಮಾಣ ಪತ್ರ ನೀಡುವಂತೆ ಬೆದರಿಕೆಗಳು ಬರುತ್ತಿರುವ ಬಗ್ಗೆಯೂ ಅಧಿಕಾರಿ ಗಮನ ಸೆಳೆದಿದ್ದಾರೆ.

ಶಶಿಕಲಾ, ತೆಲಗಿ ವಿಚಾರ: 

ಇವಿಷ್ಟನ್ನು ಆರಂಭದಲ್ಲಿ ಪ್ರಸ್ತಾಪಿಸಿದ ನಂತರವೇ ರೂಪ, ಸಜಾ ಬಂಧಿಗಳಾದ ಶಶಿಕಲಾ ಮತ್ತು ತೆಲಗಿ ವಿಚಾರದಲ್ಲಿ ಕೆಲವು ಸ್ಫೋಟಕ ಮಾಹಿತಿಯನ್ನು ಹೊರ ಹಾಕುತ್ತಾರೆ. ಕಾರಾಗೃಹಗಳ ಡಿಜಿಪಿ ಆಗಿರುವ ಸತ್ಯನಾರಾಯಣ್ ರಾವ್‌ ಅವರನ್ನೇ ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ರೂಪ, 'ಶಶಿಕಲಾಗೆ ಜೈಲಿನ ಒಳಗೆ ವಿಶೇಷ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಿರುವುದಕ್ಕೆ 2 ಕೋಟಿ ಲಂಚ ಪಡೆಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ತೆಲಗಿ ಜೈಲಿನ ನಿಯಮ ಉಲ್ಲಂಘಿಸಿ ವಿಚಾರಣಾಧೀನ ಕೈದಿಗಳನ್ನು ಮಸಾಜ್‌ ಮಾಡುವ ಕೆಲಸಕ್ಕೆ ನೇಮಿಸಿಕೊಂಡಿದ್ದಾನೆ. ಇದನ್ನು ನೀವು ಸಿಸಿಟಿವಿಯಲ್ಲಿ ಗಮನಿಸಿರಬಹುದು' ಎಂದು ಮಾರ್ಮಿಕವಾಗಿ ಬರೆಯುತ್ತಾರೆ.

ಇವು ಹೊಸ ವಿಚಾರಗಳೇನಲ್ಲ: 

"ರೂಪ ಮೇಡಂ ಪತ್ರದಲ್ಲಿ ತಿಳಿಸಿರುವ ಅಂಶಗಳು ಹೊಸ ವಿಚಾರಗಳೇನಲ್ಲ. 2013ರಲ್ಲಿ ಜೈ ಶಂಕರ್‌ ಎಂಬ ಕೈದಿ ತಪ್ಪಿಸಿಕೊಂಡ ನಂತರ ಒಂದಷ್ಟು ಜೈಲಿನ ಅಂತರಂಗದ ವಿಚಾರಗಳು ಮಾಧ್ಯಮಗಳಲ್ಲಿ ಬಂದಿತ್ತು. ಆ ಸಮಯದಲ್ಲಿ ಕೆಲವು ದಿನ ಅಧಿಕಾರಿಗಳು ಎಲ್ಲದಿಕ್ಕೂ ಕಡಿವಾಣ ಹಾಕಿದ್ದರು. ನಂತರ ಮತ್ತೆ ಯಥಾಸ್ಥಿತಿಗೆ ಬಂದಿದೆ. ಆಸ್ಪತ್ರೆಯನ್ನು ಕೈದಿಗಳು ಗೆಸ್ಟ್‌ ಹೌಸ್‌ ಎಂದು ಭಾವಿಸಿದ್ದಾರೆ. ಅವರಿಗೆ ಹಿರಿಯ ಅಧಿಕಾರಿಗಳು, ಅಧೀಕ್ಷಕರ ಬೆಂಬಲ ಇರುವ ಹಿನ್ನೆಲೆಯಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ರೂಪ ಮೇಡಂ ಬಂದ ಮೇಲೆ ನಾವು ನಮಗಾಗುತ್ತಿರುವ ಹಿಂಸೆಯನ್ನು ವಿವರಿಸಿ 6 ಪುಟಗಳ ಪತ್ರವನ್ನು ಫ್ಯಾಕ್ಸ್‌ ಮಾಡಿದೆವು,'' ಎನ್ನುತ್ತಾರೆ ಪರಪ್ಪನ ಅಗ್ರಹಾರ ಜೈಲಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು.

ಪರಪ್ಪನ ಅಗ್ರಹಾರವೂ ಸೇರಿದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿಯೂ ಮಾದಕ ದ್ರವ್ಯಗಳು ಹಾಗೂ ಹಣ ಇದ್ದ ಕೈದಿಗಳಿಗೆ ಐಶಾರಾಮಿ ಬದುಕಿಗೆ ಅವಕಾಶಗಳು ಇರುವುದು ತೀರಾ ಹೊಸ ವಿಚಾರವೇನೂ ಅಲ್ಲ. ಆದರೆ ಇದೀಗ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಈ ಆರೋಪಗಳಿಗೆ ಅಧಿಕೃತತೆ ಬಂದಂತಾಗಿದೆ. "ಜೈಲಿನಲ್ಲಿ ಕೈದಿಗಳ ಕೈಲಿ ಹಣ ಇದ್ದರೆ ಏನು ಬೇಕಾದರೂ ಸಿಗುತ್ತದೆ. ಇಲ್ಲಿನ ಸಿಬ್ಬಂದಿಗಳು ಹಾಗೂ ಮೇಲಾಧಿಕಾರಿಗಳಿಗೆ ಎಲ್ಲಾ ಅಕ್ರಮಗಳಲ್ಲಿಯೂ ಪಾಲಿದೆ,'' ಎಂದು ಆರೋಪಿಸುತ್ತಾರೆ ವಕೀಲರಾದ ಧನಂಜಯ್. ಇವರು ಜೈ ಶಂಕರ್‌ ಪರಾರಿ ಪ್ರಕರಣದಲ್ಲಿ ಆರೋಪಿ ಪರವಾಗಿ ವಕಾಲತ್ತು ವಹಿಸಿದ್ದರು.

ಸದ್ಯ ಡಿಐಪಿ ರೂಪ ಪತ್ರದ ಕುರಿತು ಡಿಜಿಪಿ ಸತ್ಯನಾರಾಯಣ್ ರಾವ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇವು ನಿರ್ದಿಷ್ಟ ಆರೋಪಗಳಿಗೆ ನೀಡಿರುವ ನಿರ್ದಿಷ್ಟ ಸ್ಪಷ್ಟೀಕರಣಗಳು ಮಾತ್ರ. ಒಟ್ಟಾರೆ ಜೈಲಿನ ಪರಿಸ್ಥಿತಿಯ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ಸಮಾಚಾರ' ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಸಾಧ್ಯವಾಗಲಿಲ್ಲ.