ಸುದ್ದಿ ಸಾಗರ

ಜಿಎಸ್‌ಟಿ ಹೊಡೆತಕ್ಕೆ 'ಬ್ರಾಂಡೆಡ್‌ ಗರಿ' ಕಳೆದುಕೊಂಡ ಕಲಬುರ್ಗಿಯ ಗುಣಮಟ್ಟದ ತೊಗರಿ ಬೇಳೆ

ಕೇಂದ್ರ

ಸರಕಾರ 'ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತಂದ ನಂತರ ನಿರೀಕ್ಷೆಯಂತೆಯೇ ತಳಮಟ್ಟದ ತಲ್ಲಣಗಳು ಕಾಣಿಸಿಕೊಂಡಿವೆ.

ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಗುಜರಾತ್‌ನ ಸೂರತ್‌ನಲ್ಲಿ ವರ್ತಕರು ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯದ ಕಲಬುರ್ಗಿ ಜಿಲ್ಲೆಯ ತೊಗರಿಬೇಳೆ ವರ್ತಕರು ತಮ್ಮ 'ಟ್ರೇಡ್‌ ಮಾರ್ಕ್‌' ಪರವಾನಿಗೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ. ಇಲ್ಲಿನ ತಳಮಟ್ಟದಲ್ಲಿ ಸಿಗುತ್ತಿರುವ ಮಾಹಿತಿ ಪ್ರಕಾರ, ಈಗಾಗಲೇ ಶೇ. 95ರಷ್ಟು ವರ್ತಕರು 'ಬ್ರಾಂಡೆಡ್‌' ತೊಗರಿ ಬೇಳೆ ಮಾರಾಟಕ್ಕೆ ಪಡೆದುಕೊಂಡಿದ್ದ ಪರವಾನಿಗೆಯನ್ನು ಹಿಂಪಡೆದಿದ್ದಾರೆ. ಮುಂದಿನ ಒಂದು ವಾರದಲ್ಲಿ ಕಲಬುರ್ಗಿಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ತೊಗರಿ ಬೇಳೆ ವರ್ತಕರು 'ಬ್ರಾಂಡೆಡ್‌' ನೆರಳಿನಿಂದ ಹೊರಬರಲಿದ್ದಾರೆ. ಈ ಬೆಳವಣಿಗೆಗೆ ಕಾರಣವಾಗಿರುವುದು ಜಿಎಸ್‌ಟಿ ಅಡಿಯಲ್ಲಿ 'ಬ್ರಾಂಡೆಡ್‌ ತೊಗರಿ ಬೇಳೆ'ಗೆ ಶೇ. 5ರಷ್ಟು ತೆರಿಗೆ ವಿಧಿಸಿರುವುದು.

ಏನಿದು ಬ್ರಾಂಡೆಡ್‌ ತೊಗರಿ?:

ಜಿಎಸ್‌ಟಿ ಅಡಿಯಲ್ಲಿ ತೊಗರಿ ಸೇರಿದಂತೆ ಧಾನ್ಯಗಳಿಗೆ 0% ತೆರಿಗೆ ವಿಧಿಸಲಾಗಿದೆ. ಆದರೆ ಇದೇ ಧಾನ್ಯಗಳನ್ನು ನಿರ್ದಿಷ್ಟ ಬ್ರಾಂಡ್‌ ಅಡಿಯಲ್ಲಿ ಪ್ಯಾಕೇಟ್‌ ರೂಪದಲ್ಲಿ ಮಾರಾಟ ಮಾಡಿದರೆ, ಶೇ. 5ರಷ್ಟು ತೆರಿಗೆ ವಿಧಿಸಲಾಗಿದೆ. ಹೀಗಾಗಿ ತಲೆತಲಾಂತರಗಳಿಂದ ಕಲಬುರ್ಗಿಯಲ್ಲಿ ತೊಗರಿ ಬೇಳೆ ವಹಿವಾಟು ನಡೆಸುತ್ತಿದ್ದ ವರ್ತಕರು ತಾವು ಪಡೆದುಕೊಂಡಿದ್ದ ಟ್ರೇಡ್‌ ಮಾರ್ಕ್‌ ಲೈಸೆನ್ಸ್‌ನ್ನು ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದಾರೆ.

ಇಡೀ ದೇಶದಲ್ಲಿಯೇ ಕಲಬುರ್ಗಿ ತೊಗರಿ ಬೇಳೆ ಬೆಳೆಯಲು ಪ್ರಶಸ್ತವಾಗಿರುವ ನೈಸರ್ಗಿಕ ವಾತಾವರಣ. ಹೀಗಾಗಿಯೇ ಇಲ್ಲಿ ಬೆಳೆಯುವ ತೊಗರಿ ಬೇಳೆಗೆ ಪ್ರಾದೇಶಿಕ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಈ ಹಿಂದೆ ಕೇಳಿಬಂದಿತ್ತು. "ಅತಿಯಾದ ಉಷ್ಣಾಂಶ, ಫಲವತ್ತಾದ ಭೂಮಿ ಇಲ್ಲಿ ಬೆಳೆಯುವ ತೊಗರಿ ಬೇಳೆಯ ಗುಣಮಟ್ಟವನ್ನು ಹೆಚ್ಚಿಸಿದೆ. ಇಡೀ ದೇಶದಲ್ಲಿಯೇ ಕಲಬುರ್ಗಿಯ ತೊಗರಿ ಬೇಳೆ ಉತ್ತಮ ಗುಣಮಟ್ಟದ ಬೇಳೆ ಎನ್ನಿಸಿಕೊಂಡಿದೆ,'' ಎನ್ನುತ್ತಾರೆ ಇಲ್ಲಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು.

ಈ ವರ್ಷ ಜಿಲ್ಲೆಯಲ್ಲಿ ರೈತರು ಬೆಳೆಯುವ ತೊಗರಿ ಪ್ರಮಾಣ ಸುಮಾರು 3.5 ಲಕ್ಷ ಕ್ವಿಂಟಾಲ್‌ ಆಗಬಹುದು ಎಂಬ ಅಂದಾಜು ಕೃಷಿ ಇಲಾಖೆಗೆ ಇದೆ. ಇದಕ್ಕೆ ಕನಿಷ್ಟ ಬೆಂಬಲ ಬೆಲೆಯನ್ನೂ ನೀಡುತ್ತಿರುವುದು ಹೆಚ್ಚು ಹೆಚ್ಚು ರೈತರು ತೊಗರಿ ಬೆಳೆಯನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ರೈತರಿಗೆ ಪ್ರತಿ ಕ್ಷಿಂಟಾಲ್‌ಗೆ 3.5 ಸಾವಿರದಿಂದ 4 ಸಾವಿರದವರೆಗೆ ಬೆಲೆ ಸಿಗುತ್ತಿದೆ. ಹೀಗೆ, ರೈತರು ಬೆಳೆಯುವ ತೊಗರಿಯನ್ನು ಎಪಿಎಂಸಿ ಮೂಲಕ ಪಡೆದುಕೊಳ್ಳುವ ವರ್ತಕರು ಅದನ್ನು ಸಾಣಿಸಿ, ಪ್ಯಾಕೇಟ್‌ ರೂಪದಲ್ಲಿ ಮಾರಾಟ ಮಾಡುತ್ತಿದ್ದರು. ಇದು ತಲೆತಲಾಂತರ ಉದ್ಯಮವಾಗಿ ಇಲ್ಲಿ ರೂಪಗೊಂಡಿತ್ತು. ಇದನ್ನು 'ಬ್ರಾಂಡೆಡ್‌ ತೊಗರಿ ಬೇಳೆ' ಎಂದು ಕರೆಯಲಾಗುತ್ತಿತ್ತು.

ಜಿಎಸ್‌ಟಿ ಹೊಡೆತ: 

ಸದ್ಯ ಜಿಎಸ್‌ಟಿ ಜಾರಿಗೆ ಬಂದ ನಂತರ ಬ್ರಾಂಡೆಡ್‌ ತೊಗರಿ ಮಾರಾಟವನ್ನು ನೆಚ್ಚಿಕೊಂಡಿದ್ದ ವರ್ತಕರಿಗೆ ಶೇ. 5ರ ತೆರಿಗೆ ಬಿಸಿ ಮುಟ್ಟಿದೆ. "ನಾವು ಮೂಲತಃ ತಮಿಳುನಾಡಿನವರು. ಸ್ವಾತಂತ್ರ್ಯಕ್ಕೂ ಮುನ್ನ ನಮ್ಮ ಹಿರಿಯರು ಇಲ್ಲಿ ಬಂದು ತೊಗರಿ ಬೇಳೆ ವ್ಯಾಪಾರ ಶುರುಮಾಡಿದರು. ನಾವು ಕೂಡ ಅದನ್ನೇ ಮುಂದುವರಿಸಿಕೊಂಡು ಬಂದೆವು,'' ಎನ್ನುತ್ತಾರೆ ಪಿಕಾಕ್‌ ಹೆಸರಿನಲ್ಲಿ ತೊಗರಿ ಬೇಳೆಯ ವ್ಯಾಪಾರ ಮಾಡುತ್ತಿದ್ದ ಶ್ರೀ ಅಯ್ಯನ್ನಾರ್ ದಾಲ್‌ ಮಿಲ್‌ ಮಾಲೀಕರಾದ ರತನ್‌ ನಾಡರ್. ಇವರ ಪೀಕಾಕ್‌ ಬ್ರಾಂಡ್‌ ತೊಗರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿಗೆ ಮಾರಾಟವಾಗುತ್ತಿತ್ತು.

"ತೊಗರಿ ವ್ಯಾಪಾರದಲ್ಲಿ ಹೆಚ್ಚಿನ ಮಾರ್ಜಿನ್‌ ಏನೂ ಇರುವುದಿಲ್ಲ. ಎಪಿಎಂಸಿಯಿಂದ ಪಡೆಯುವ ಬೇಳೆಯನ್ನು ನಾವು ಮತ್ತೆ ಸೋಸಿ, ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದೆವು. ಅದಕ್ಕಾಗಿಯೇ ನಮ್ಮದೇ ಪ್ರತ್ಯೇಕ ಬ್ರಾಂಡ್‌ನ್ನು ಪಡೆದುಕೊಂಡಿದ್ದೆವು. ಇದೀಗ ನಮ್ಮ ಟ್ರೇಡ್‌ ಮಾರ್ಕ್‌ ಲೈಸೆನ್ಸ್‌ ಹಿಂಪಡೆಯಲು ಅರ್ಜಿ ಹಾಕಿಕೊಂಡಿದ್ದೇವೆ. ಇನ್ನು ಮುಂದೆ ನಮ್ಮ ಪಿಕಾಕ್‌ ಬ್ರಾಂಡ್‌ ಹೆಸರನ್ನು ಯಾರು ಬೇಕಾದರೂ ಬಳಸಬಹುದು. ಶೇ. 5ರಷ್ಟು ತೆರಿಗೆ ಉಳಿಸಲು ಇದು ಅನಿವಾರ್ಯವಾಗಿದೆ,'' ಎನ್ನುತ್ತಾರೆ ರತನ್‌ ನಾಡರ್‌.

ವರದಿಯೊಂದರ ಪ್ರಕಾರ, ಪ್ರತಿ ವರ್ಷ ಕಲಬುರ್ಗಿ ಜಿಲ್ಲೆಯೊಂದರಿಂದಲೇ ಪ್ರತಿ ವರ್ಷ 2.5 ರಿಂದ 3 ಲಕ್ಷ ಟನ್‌ ತೊಗರಿ ಬೇಳೆಯನ್ನು ದೇಶದ ನಾನಾ ಭಾಗಗಳಿಗೆ ಕಳುಹಿಸಲಾಗುತ್ತಿತ್ತು. ಇಲ್ಲಿರುವ 300ಕ್ಕೂ ಹೆಚ್ಚು ದಾಲ್‌ ಮಿಲ್‌ಗಳಲ್ಲಿ ಪ್ರತಿ ದಿನ 10 ಟನ್‌ ತೊಗರಿ ಬೇಳೆಯ ಪ್ಯಾಕಿಂಗ್‌ ಪ್ರಕ್ರಿಯೆ ನಡೆಯುತ್ತಿತ್ತು. ಕಳೆದ ವರ್ಷ ಕಲಬುರ್ಗಿಯಲ್ಲಿ ಸುಮಾರು 3.7 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೇಳೆಯನ್ನು ಬೆಳೆಯಲಾಗಿತ್ತು. ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದಲ್ಲಿ ವಿಜಯಪುರದಲ್ಲಿಯೂ ತೊಗರಿ ಬೇಳೆಯ ಉತ್ಪಾದನೆ ನಡೆಯುತ್ತಿದೆ. ಇದೀಗ ಬ್ರಾಂಡೆಡ್‌ ಮುಕುಟವನ್ನು ಜಿಎಸ್‌ಟಿ ಕಾರಣಕ್ಕೆ ಉತ್ತರ ಕರ್ನಾಟಕದ ತೊಗರಿ ಬೇಳೆ ಕಳೆದುಕೊಂಡಂತಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಯ ಬೆಲೆಯ ಮೇಲೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.