samachara
www.samachara.com
ತಲ್ಲಣ ಮೂಡಿಸಿದ 'ಶಂಕಿತ ಪ್ಲಾಸ್ಟಿಕ್ ಅಕ್ಕಿ': ಜಾಗತಿಕ ವದಂತಿಯ ಹಿಂದಿರುವ ಸತ್ಯಾಂಶ ಏನು?
ಸುದ್ದಿ ಸಾಗರ

ತಲ್ಲಣ ಮೂಡಿಸಿದ 'ಶಂಕಿತ ಪ್ಲಾಸ್ಟಿಕ್ ಅಕ್ಕಿ': ಜಾಗತಿಕ ವದಂತಿಯ ಹಿಂದಿರುವ ಸತ್ಯಾಂಶ ಏನು?

ಪ್ಲಾಸ್ಟಿಕ್‌ನಿಂದ

ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಗಳಿಗೆ ಈಗ ರಾಜ್ಯದ ಜನ ಆಹಾರವಾಗುತ್ತಿದ್ಧಾರೆ.

ಕಳೆದ ಕೆಲವು ದಿನಗಳ ಅಂತರದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಭಿತ್ತರ ಆರಂಭಗೊಂಡ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಬೆಳೆದು ಬಂದ ವದಂತಿಯೊಂದಕ್ಕೆ ಇನ್ನಷ್ಟು ಪುಷ್ಟೀಕರಣ ಸಿಕ್ಕಂತಾಗಿದೆ. ವಿಶೇಷ ಏನೆಂದರೆ, 'ಪ್ಲಾಸ್ಟಿಕ್ ಅಕ್ಕಿ' ಎಂಬ ಗಾಳಿ ಸುದ್ದಿ ಕರ್ನಾಟಕ ಮಾತ್ರವಲ್ಲ, ತಲೆಂಗಾಣ ಸೇರಿದಂತೆ ನಾನಾ ರಾಜ್ಯಗಳು, ಫಿಲಿಪ್ಪೀನ್, ನೆದರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿದೆ. 2010ರಿಂದ ಈಚೆಗೆ ಈ ಕುರಿತು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗಿವೆ.

ಪ್ಲಾಸ್ಟಿಕ್ ಅಕ್ಕಿ ಎಂದರೇನು? ಇದು ಹುಟ್ಟಿದ್ದು ಎಲ್ಲಿಂದ? ಅದಕ್ಕಿರುವ ಮಾರುಕಟ್ಟೆ ಕಾರಣಗಳೇನು? ಪ್ಲಾಸ್ಟಿಕ್ ಅಕ್ಕಿ ಹೆಸರಿನಲ್ಲಿ ರಾಜಕಾರಣವೂ ನಡೆಯುತ್ತಾ? ಇದರಿಂದ ಗಾಳಿ ಸುದ್ದಿಯನ್ನು ಹಬ್ಬಿಸುತ್ತಿರುವವರಿಗೆ ಆಗುತ್ತಿರುವ ಲಾಭಗಳೇನು? ಜನ ಈ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳೇನು? ಇನ್ನಿತರ ಪ್ರಶ್ನೆಗಳಿಗೆ 'ಸಮಾಚಾರ'ದ ಈ ವರದಿ ಉತ್ತರ ನೀಡುತ್ತಿದೆ.

ಏನಿದು ಪ್ಲಾಸ್ಟಿಕ್ ಅಕ್ಕಿ?:

ಚೈನಾದಲ್ಲಿ ವೂಚಾಂಗ್‌ ಎಂಬ ಪ್ರದೇಶವೊಂದಿದೆ. ಕರ್ನಾಟಕದ ರಾಯಚೂರು ಜಿಲ್ಲೆಗೆ ಇದನ್ನು ಹೋಲಿಸಬಹುದು. ಇಲ್ಲಿನ ಫಲವತ್ತಾದ ಭೂಮಿ ಮತ್ತು ಹೇರಳಾಗಿ ಸಿಗುವ ನೀರಿನ ಸಂಪನ್ಮೂಲದ ಕಾರಣಕ್ಕೆ ರೈತರು ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿ ಉತ್ಪಾದನೆಯಾಗುವ ಭತ್ತದಿಂದ ತಯಾರಾದ ಅಕ್ಕಿ ಸುವಾಸನೆಯಿಂದ ಕೂಡಿರುತ್ತದೆ. ಜತೆಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಅಕ್ಕಿ ಕೂಡ.

ಇವತ್ತಿಗೆ ಎರಡೂವರೆ ಕೆಜಿ ವೂಚಾಂಗ್ ಅಕ್ಕಿಗೆ ಭಾರತೀಯ ರೂಪಾಯಿಗಳಲ್ಲಿ 312 ರೂಪಾಯಿ ಇದೆ. 2010ರಲ್ಲಿ ಇದನ್ನು ನಕಲಿ ಮಾಡುವ ದೊಡ್ಡ ಮಟ್ಟದ ಕೆಲಸ ಚೈನಾದ ಕೆಲವು ಕಂಪನಿಗಳಿಂದ ಆರಂಭವಾಯಿತು. ಸದ್ಯ ಲಭ್ಯ ಇರುವ- ನಂಬಬಹುದಾದ- ಮಾಹಿತಿ ಮೂಲಗಳ ಪ್ರಕಾರ, ಆಲೂಗಡ್ಡೆ, ಗೆಣಸು ಜತೆಗೆ ಕಾರ್ಖಾನೆಗಳಲ್ಲಿ ಬಳಸುವ ಸಿಂಥೆಟಿಕ್ ರೆಗ್ಸೀನ್ ಬಳಸಿ ವೂಚಾಂಗ್ ಅಕ್ಕಿಯನ್ನು ತಯಾರಿ ಮಾಡಿ ಮಾರುಕಟ್ಟೆಗೆ ಬಿಡಲಾಯಿತು. ಜತೆಗೆ ಅಕ್ಕಿಗೆ ಸುವಾಸನೆ ಬೆರೆಸುವ ಸೆಂಟ್‌ಗಳನ್ನೂ ಈ ಕಂಪನಿಗಳು ಬಳಸುತ್ತಿದ್ದವು. ಇದು ಗೊತ್ತಾದ ನಂತರ ಚೈನಾದಲ್ಲಿಯೇ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಯಿತು.

ಹೀಗೆ, ಆಲೂಗಡ್ಡೆ, ಗೆಣಸು ಮತ್ತು ಸಿಂಥೆಟಿಕ್ ಬಳಸಿ ತಯಾರಿಸಲಾದ ಅಕ್ಕಿಗೆ 'ಪ್ಲಾಸ್ಟಿಕ್ ಅಕ್ಕಿ' ಎಂಬ ಜನಪ್ರಿಯ ಹೆಸರೂ ಅಂಟಿಕೊಂಡಿತು. ಆ ನಂತರ ಅಂತರ್ಜಾಲ ಬಲಗೊಂಡ ದಿನಗಳಲ್ಲಿ ಈ ಕುರಿತು ಹೊರಬಂದ ವರದಿಗಳು ಆಲೂಗಡ್ಡೆ ಮತ್ತು ಗೆಣಸುಗಳನ್ನು ಪಕ್ಕಕ್ಕಿಟ್ಟು ಬರೀ ಪ್ಲಾಸ್ಟಿಕ್ (ಸಿಂಥೆಟಿಕ್ ಬದಲಿಗೆ) ಬಳಸಿ ಅಕ್ಕಿಯನ್ನು ತಯಾರಿಸಲಾಗುತ್ತಿದೆ ಎಂಬ ವದಂತಿಗಳನ್ನು ಹರಡಲು ಶುರುವಾಯಿತು.

ಚೈನಾದಲ್ಲಿ ಆಹಾರ ಉತ್ಪಾದನೆಯಲ್ಲಿ ಹೀಗೆ ಕಳಪೆ ಗುಣಮಟ್ಟದ ತಯಾರಿಕೆಯ ಆರೋಪಗಳು ಕೇಳಿಬಂದಿದ್ದು ಕೇವಲ ಅಕ್ಕಿಯ ಕಾರಣಕ್ಕೆ ಮಾತ್ರವಲ್ಲ. 2008ರಲ್ಲಿಯೇ ರಾಸಾಯನಿಕಗಳನ್ನು ಬಳಸಿ ಹಾಲು ಉತ್ಪಾದನೆಯಲ್ಲಿ ಇಲ್ಲಿನ ಕೆಲವು ಕಂಪನಿಗಳು ತೊಡಗಿದ್ದವು. ಇದನ್ನು ಸೇವಿಸಿದ 6 ಮಕ್ಕಳ ಸಾವೂ ಆಗಿತ್ತು ಎನ್ನುತ್ತವೆ ಸ್ವತಃ ಚೈನಾದ ಕೆಲವು ಮಾಧ್ಯಮ ವರದಿಗಳು.

ಜಾಗತಿಕ ಗಾಳಿಸುದ್ದಿ:

2016 ಕೊನೆಯಲ್ಲಿ ನೈಜೀರಿಯಾದಲ್ಲಿ ಸುಮಾರು 8 ಸಾವಿರ ಅಕ್ಕಿ ಚೀಲಗಳನ್ನು ಅಲ್ಲಿನ 'ನ್ಯಾಷನಲ್ ಏಜೆನ್ಸಿ ಫಾರ್ ಫುಡ್ ಅಂಡ್ ಡ್ರಗ್ಸ್' ವಶಕ್ಕೆ ಪಡೆದಿತ್ತು. ಈ ಅಕ್ಕಿಗಳಲ್ಲಿ ಪ್ಲಾಸ್ಟಿಕ್ ಅಂಶಗಳು ಕಂಡು ಬರದಿದ್ದರೂ, ಬ್ಯಾಕ್ಟೀರಿಯಾಗಳಿವೆ ಎಂದು ಸಂಶೋಧನಾ ವರದಿ ಹೇಳಿತ್ತು.

ಫಿಲಿಪ್ಪೀನ್‌ ದೇಶದ 'ರಾಷ್ಟ್ರೀಯ ಆಹಾರ ಪ್ರಾಧಿಕಾರ' ಈ ಕಳಪೆ ಗುಣಮಟ್ಟದ ಅಕ್ಕಿಯ ಕುರಿತು ತನ್ನ ಗೆಜೆಟ್‌ ಪ್ರಕಟಣೆ ಮೂಲಕ ಜನರಿಗೆ ಎಚ್ಚರಿಸಿತ್ತು. "ಶಂಕಿತ ಹುಸಿ ಅಕ್ಕಿ ಚೈನಾದಿಂದ ಏಷಿಯಾದ ನಾನಾ ದೇಶಗಳನ್ನು ತಲುಪಿದೆ ಎಂಬ ವರದಿ ಕಳೆದ ತಿಂಗಳಿನಿಂದ ಹರಿದಾಡುತ್ತಿದೆ. ಆದರೆ ಇದನ್ನು ಸಮರ್ಥಿಸಲು ಯಾವುದೇ ಅಧಿಕೃತ ದಾಖಲೆಗಳಿಲ್ಲ. ಇಂಡೋನೇಷಿಯಾ ಮತ್ತು ಫಿಲಿಪ್ಪೀನ್ ಸರಕಾರಗಳು ಇದನ್ನು ಅಲ್ಲಗೆಳೆಯುತ್ತವೆ,'' ಎಂದು

ಸ್ಪಷ್ಟವಾಗಿ ಹೇಳಿತ್ತು.

ಹಾಗಿದ್ದರೂ, 'ಪ್ಲಾಸ್ಟಿಕ್ ಅಕ್ಕಿ' ಭೂತ ಹರಿದಾಡುತ್ತಿರುವುದು ಹೇಗೆ? ಅದು ಕಾಡುವ ಪ್ರಶ್ನೆ. ಈ ಕುರಿತು ಇನ್ನಷ್ಟು ಆಳಕ್ಕಿಳಿದರೆ, ಜಾಗತಿಕವಾಗಿ ಹೀಗೊಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದರೂ ಚೈನಾ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಈವರೆಗೆ ಹೊರಬಿದ್ದಿಲ್ಲ ಎಂಬುದು ಅಂಶ ಗಮನ ಸೆಳೆಯುತ್ತದೆ. ಜತೆಗೆ, 'ಪ್ಲಾಸ್ಟಿಕ್ ಅಕ್ಕಿ' ಎಂದು ಕರೆಯುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶಗಳಿಲ್ಲ ಎಂಬ ಸಂಶೋಧನೆಗಳು ನಡೆದಿವೆಯಾದರೂ, ದೊಡ್ಡ ಮಟ್ಟದಲ್ಲಿ ಅದಕ್ಕೆ ಪ್ರಚಾರವೂ ಸಿಕ್ಕಿಲ್ಲ. ನೈಜೀರಿಯಾದಲ್ಲಿ ಅಕ್ರಮವಾಗಿ ಆಮದು ಮಾಡಿಕೊಂಡ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡ ಸರಕಾರ ಸಂಶೋಧನೆ ನಂತರ 'ಅದೊಂದು ಕಳಪೆ ಗುಣಮಟ್ಟದ ಅಕ್ಕಿ' ಎಂದಷ್ಟೆ ತಿಳಿಸಿತ್ತು ಎಂಬುದನ್ನು ಗಮನಿಸಬೇಕಿದೆ. ಭಾರತದಲ್ಲಿ ಸರಕಾರದ ಕಡೆಯಿಂದ ಈವರೆಗೆ ಅಂತಹ ಪ್ರಯತ್ನಗಳೂ ನಡೆದಿಲ್ಲ.

ಆಹಾರ ರಾಜಕೀಯ:

ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೆ ಅದರ ಜತೆಗೆ ಅಷ್ಟೇ ವೇಗವಾಗಿ ಬೆಳೆಯುತ್ತಿರುವುದು ಆಹಾರದ ಮಾರುಕಟ್ಟೆ. ಅದರಲ್ಲೂ ಜಾಗತೀಕರಣದ ಘಟ್ಟದಲ್ಲಿ ಯಾರು ಪ್ರಬಲರಾಗಿರುತ್ತಾರೋ, ಅಂತಹ ದೇಶಗಳು ವಿದೇಶಿ ವಿನಿಮಯದ ಮೂಲಕ ಆಹಾರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುತ್ತಿವೆ. ಸಣ್ಣ ಪುಟ್ಟ ವಸ್ತುಗಳನ್ನೂ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿ, ಕಡಿಮೆ ಬೆಲೆ ಜಗತ್ತಿಗೆ ಮಾರುವ ಚೈನಾ ಕೂಡ ಆಹಾರದ ವಿಚಾರದಲ್ಲಿ ಹಿಂದೆ ಉಳಿದಿಲ್ಲ. ಹೀಗಾಗಿಯೇ, ಚೈನಾ ಉತ್ಪನ್ನಗಳ ಮೇಲೆ ಜಾಗತಿಕವಾಗಿ ಪ್ರಹಾರಗಳು ನಡೆದುಕೊಂಡು ಬಂದಿವೆ. 'ಪ್ಲಾಸ್ಟಿಕ್ ಅಕ್ಕಿ'ಯ ವಿಚಾರದಲ್ಲಿಯೂ ಅದೇ ನಡೆದಿರುವ ಸಾಧ್ಯತೆಗಳಿವೆ. ವಿಶೇಷ ಅಂದರೆ, ಈ ಕುರಿತು ತಳಮಟ್ಟದ ತನಿಖೆ ನಡೆಸಿದ

ನಂತಹ ಸುದ್ದಿತಾಣಗಳೂ ಕೂಡ ಇದನ್ನೇ ಹೇಳುತ್ತಿವೆ. ಜತೆಗೆ, ಇಂತಹ ಸುಳ್ಳಿಸುದ್ದಿಗಳು ಚೈನಾದಿಂದಲೇ ಹುಟ್ಟಿವೆ ಎಂಬುದನ್ನು ಅವು ಸಾಬೀತು ಮಾಡುತ್ತಿರುವುದು ವಿಶೇಷ.

2007ರಲ್ಲಿ ಹಂದಿ ಮಾಂಸದ ಬದಲಿಗೆ ಪ್ಲೈವುಡ್‌ ಬಳಸಲಾಗುತ್ತಿದೆ ಎಂಬ ಸುದ್ದಿಯನ್ನು ಚೈನಾದ ಸರಕಾರಿ ಟಿವಿ ವಾಹಿನಿ 'ಸಿಸಿಟಿವಿ' ಭಿತ್ತರಿಸಿತ್ತು. ನಂತರ ಈ ಕುರಿತು ತನಿಖೆ ನಡೆದು, ಸ್ವತಂತ್ರ ಪತ್ರಕರ್ತನೊಬ್ಬ ಹರಡಿದ ಸುಳ್ಳು ಸುದ್ದಿ ಇದು ಎಂದು ಗೊತ್ತಾಗಿತ್ತು. ಆ ಪತ್ರಕರ್ತನಿಗೆ ಚೈನಾ ಸರಕಾರ ಶಿಕ್ಷೆಯನ್ನೂ ವಿಧಿಸಿತ್ತು. ಅದಾದ ನಂತರ ದೊಡ್ಡ ಮಟ್ಟದಲ್ಲಿ ಚೈನಾ ಆಹಾರ ಉತ್ಪನ್ನಗಳ ಬಗ್ಗೆ ತನ್ನದೇ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಅಪನಂಬಿಕೆ ಬೆಳೆದು ಬಂತು ಎನ್ನುತ್ತವೆ ಹಲವು ವರದಿಗಳು.

ಮುಂದೇನು?: 

ಇಂತಹ ಆಹಾರ ರಾಜಕಾರಣದ ಆಚೆಗೂ ಅಕ್ಕಿಯಂತಹ ನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಆಗಿದೆ ಎಂಬ ಸುದ್ದಿ ಸಹಜವಾಗಿಯೇ ಜನರನ್ನು ತಟ್ಟುತ್ತದೆ. "ಇದರಲ್ಲಿ ಮಾಧ್ಯಮಗಳ ಕೊಡುಗೆಯೂ ಇದೆ. ಕಳಪೆ ಆಹಾರಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಜನ ಇವುಗಳನ್ನು ಉಪಯೋಗಿಸುತ್ತಾರೆ. ಒಂದು ವೇಳೆ ಹೆಚ್ಚು ಕಡಿಮೆಯಾದರೆ ಮಾಧ್ಯಮಗಳಲ್ಲಿ ತೋರಿಸುವ 'ಪ್ಲಾಸ್ಟಿಕ್ ಅಕ್ಕಿ' ಸುದ್ದಿಯನ್ನು ನಂಬುತ್ತಾರೆ. ಅವರ ಮನಸ್ಸಿನಲ್ಲೇನಿರುತ್ತೋ, ಅದನ್ನೇ ಕಣ್ಣು ಕೂಡ ನಂಬುತ್ತದೆ,'' ಎನ್ನುತ್ತಾರೆ ಆಹಾರ ತಜ್ಞ ರಘು. "ಜನ ಹೆಚ್ಚಾಗಿ ಹೈಪರ್ ರಿಯಾಲಿಟಿಗಳನ್ನು ನಂಬುತ್ತಾರೆ. ಆಹಾರ ವಿಚಾರದಲ್ಲಿ ಇದು ತುಸು ಹೆಚ್ಚಾಗಿಯೇ ಕೆಲಸ ಮಾಡುತ್ತದೆ,'' ಎನ್ನುತ್ತಾರೆ ಅವರು.

ಈ ಕುರಿತು ಇನ್ನಷ್ಟು ಸ್ಪಷ್ಟೀಕರಣಕ್ಕಾಗಿ 'ಸಮಾಚಾರ' ಕೇಂದ್ರ ಆಹಾರ ತಂತ್ರಜ್ಞಾನ ಸಂಸ್ಥೆ (ಸಿಎಫ್‌ಟಿಆರ್‌ಐ)ಯನ್ನು ಸಂಪರ್ಕಿಸಿದಾಗ, "ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದೇವೆ. ನಮಗಿನ್ನೂ ಪರೀಕ್ಷೆಗಾಗಿ ಯಾರೂ ಕಳುಹಿಸಿಲ್ಲ. ಜನ ಸ್ವಯಂಪ್ರೇರಿತರಾಗಿ ಕಳುಹಿಸಲು ಈ ಮೂಲಕ ವಿನಂತಿಸುತ್ತೇವೆ,'' ಎಂಬ ಉತ್ತರ ಬಂತು.

ಅಕ್ಕಿಯಲ್ಲಿ ಪ್ಲಾಸ್ಟಿಕ್ ಇಲ್ಲ ಎಂಬುದನ್ನು ನಂಬಬಹುದಾದರೂ, ಕಳಪೆ ಗುಣಮಟ್ಟದ ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯ ಇರುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ, ಖರೀದಿಗೂ ಮುನ್ನವೇ ಅದನ್ನು ಜನ ಪರೀಕ್ಷಿಸುವುದು ಸದ್ಯಕ್ಕಿರುವ ಪರಿಹಾರ.