samachara
www.samachara.com
ಖಾಸಗಿಯವರಿಗೆ ಪೂರಕವಾದ ನೀತಿ; ಸರಕಾರಿ ಆಸ್ಪತ್ರೆಗಳಲ್ಲಿ ಯಾಕೀ ಪ್ರಮಾಣದ ಅನೀತಿ?
ಸುದ್ದಿ ಸಾಗರ

ಖಾಸಗಿಯವರಿಗೆ ಪೂರಕವಾದ ನೀತಿ; ಸರಕಾರಿ ಆಸ್ಪತ್ರೆಗಳಲ್ಲಿ ಯಾಕೀ ಪ್ರಮಾಣದ ಅನೀತಿ?

ಶಿವಮೊಗ್ಗದ

ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ನೆಲದ ಮೇಲೆ ಎಳೆದುಕೊಂಡ ಹೋದ ದೃಶ್ಯಾವಳಿಯೊಂದು ಸರಕಾರಿ ಆರೋಗ್ಯ ಸೇವೆಯ ದುರಾವಸ್ಥೆಯನ್ನು ಜನರ ಎದುರಿಗೆ ತೆರೆದಿಟ್ಟಿದೆ.

ಆದರೆ ಇದು ಮೊದಲೂ ಅಲ್ಲ; ಕೊನೆಯೂ ಅಲ್ಲ ಎಂಬುದು ಸರಕಾರಿ ವೈದ್ಯಸೇವೆಯ ಕುರಿತು ಅವಗಾಹನೆ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಸದರಿ ಆಸ್ಪತ್ರೆಯಲ್ಲಿ ಇಂತದೊಂದು ಅವ್ಯವಸ್ಥೆಗೆ ಈಗಾಗಲೇ ಕೆಳಮಟ್ಟದ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಡಿ- ಗ್ರೂಪ್ ಸಿಬ್ಬಂದಿಗಳನ್ನು ಮಾತ್ರವಲ್ಲ; ಆಸ್ಪತ್ರೆಯ ವೈದ್ಯರನ್ನು, ಆಡಳಿತಾಧಿಕಾರಿಗಳನ್ನು ಹೊಣೆ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

ಶಿವಮೊಗ್ಗದ ಪ್ರಮುಖ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರವೇ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಿಲ್ಲ. ಬದಲಿಗೆ ರಾಜ್ಯಾದ್ಯಂತ ಇರುವ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಇದೇ ಮಾದರಿಯಾ ದುರಾಡಳಿತ, ಅವ್ಯವಸ್ಥೆಗಳು ತಾಂಡವವಾಡುತ್ತಿವೆ. ಇದಕ್ಕೆಲ್ಲಾ ಕಾರಣ ಯಾರು? ಆಯಾ ಆಸ್ಪತ್ರೆಯ ಡಿ- ಗ್ರೂಪ್ ನೌಕರರಾ? ಆಡಳಿತಾಧಿಕಾರಿಗಳಾ? ವೈದ್ಯರಾ?

ರೋಗಿಗಳಿಗೆ ತೊಂದರೆಯಾಗಿ, ಅದು ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಸುದ್ದಿಯಾದಾಗ ಮಾತ್ರವೇ ಒಂದಿಷ್ಟು ಈ ಕುರಿತು ಚರ್ಚೆಗಳು ನಡೆಯುತ್ತವೆ. ಆದರೆ ಯಾವ ಚರ್ಚೆಗಳು, ಸರಕಾರಿ ಆಸ್ಪತ್ರೆಗಳ ಸ್ಥಳೀಯ ಆಡಳಿತದ ಆಚೆಗೆ ಮುಂದುವರಿಯುವುದಿಲ್ಲ. ಹೀಗಾಗಿ, ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಕೊಡುಗೆ ನೀಡುತ್ತಿರುವ ಸರಕಾರದ ಮಟ್ಟದ ನೀತಿಗಳು, ಇಚ್ಚಾಶಕ್ತಿಯ ಕೊರತೆ ಮತ್ತು ನೇಮಕಾತಿ ರಾಜಕೀಯಗಳ ಮೇಲೆ 'ಸಮಾಚಾರ'ದ ಈ ವರದಿ ಬೆಳಕು ಚೆಲ್ಲುತ್ತಿದೆ.

ಲಾಭ ಯಾರಿಗೆ?: 

ಪ್ರತಿ ಬಾರಿಯೂ ಸರಕಾರಿ ಆಸ್ಪತ್ರೆಗಳು ಸರಿಯಾಗಿಲ್ಲ ಎಂಬ ವರದಿಗಳು ಹೊರಬಿದ್ದಾಗಲೂ ಅದರ ಲಾಭವನ್ನು ಪಡೆದುಕೊಳ್ಳುವುದು ಸ್ಥಳೀಯ ಮಟ್ಟದ ಖಾಸಗಿ ವೈದ್ಯ ಸಂಸ್ಥೆಗಳು. ಸರಕಾರಿ ಆಸ್ಪತ್ರೆಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಬಹುತೇಕ ಖಾಸಗಿ ನರ್ಸಿಂಗ್ ಹೋಮ್‌ಗಳು ಬಾಗಿಲು ಎಳೆದುಕೊಂಡು ಹೋಗಬೇಕಾಗುತ್ತದೆ. ಹೀಗಾಗಿಯೇ, ಸರಕಾರಿ ಆಸ್ಪತ್ರೆಗಳ ಸಮಸ್ಯೆಯನ್ನಷ್ಟೆ ಮಾಧ್ಯಮಗಳು ಭಿತ್ತಿರಿಸಿದರೆ ಅದರ ಲಾಭವನ್ನು ಮೊದಲ ಹಂತದಲ್ಲಿ ಖಾಸಗಿ ವೈದ್ಯ ಸಂಸ್ಥೆಗಳು ಪಡೆದುಕೊಳ್ಳುತ್ತವೆ.

ಇದಕ್ಕೆ ಪೂರಕ ಎಂಬಂತೆ ಕರ್ನಾಟಕದಲ್ಲಿ 'ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್' ಎಂಬ ಕಾಯ್ದೆಯೊಂದಿದೆ. ಇದು ಖಾಸಗಿ ನರ್ಸಿಂಗ್ ಹೋಮ್‌ಗಳಿಗೆ ಅನುಮತಿ ನೀಡುವುದರಿಂದ ಹಿಡಿದು, ಅವುಗಳ ಮೇಲ್ವಿಚಾರಣೆಗೆ ಇರುವ ಕಾನೂನು. ಇತ್ತೀಚೆಗೆ ಕರ್ನಾಟಕ ಸರಕಾರ ಇದಕ್ಕೆ ತಿದ್ದುಪಡಿಯನ್ನು ತರಲು ಹೊರಟಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ಇದಕ್ಕೆ ನೇಮಕ ಮಾಡಲಾಗಿತ್ತು. ಸಮಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸದಸ್ಯರಾಗಿದ್ದರು. ಆದರೆ ಕೊನೆಯ ಹಂತದಲ್ಲಿ ಸರಕಾರೇತರ ಸಂಸ್ಥೆಗಳು ಮುಂದಿಟ್ಟ, ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಹಲವು ಅಂಶಗಳನ್ನು ಸಮಿತಿ ಕೈಬಿಟ್ಟು, ಖಾಸಗಿಯವರಿಗೆ ಪೂರಕವಾಗಿ ತಿದ್ದುಪಡಿಗಳನ್ನು ಸೂಚಿಸಲಾಗಿದೆ ಎಂಬುದು ಈ ಸಮಿತಿಯಲ್ಲಿದ್ದ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಆರೋಪ.

"ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಂದ ತಿದ್ದುಪಡಿಗಳನ್ನು ಮಂಡಿಸಲು ಸರಕಾರ ಸಿದ್ಧತೆ ನಡೆಸಿದೆ. ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಜತೆಗೆ ಸರಕಾರಿ ಆಸ್ಪತ್ರೆಗಳನ್ನೂ ಕಾಯ್ದೆ ವ್ಯಾಪ್ತಿಗೆ ತರಲು ಆಲೋಚನೆ ನಡೆಸಲಾಗಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಿಲ್ಲವಾದರೂ, ಒಂದು ವೇಳೆ ಸರಕಾರ ಖಾಸಗಿಯವರ ಜತೆಗೆ ಸರಕಾರಿ ಆಸ್ಪತ್ರೆಗಳನ್ನೂ ಕಾಯ್ದೆ ವ್ಯಾಪ್ತಿಗೆ ತಂದರೆ ಸರಕಾರಿ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಅಪಾಯವಾಗಲಿದೆ. ಮುಂದೊಂದು ದಿನ ಸರಕಾರಿ ಆಸ್ಪತ್ರೆಗಳ ದುರಾವಸ್ಥೆಯನ್ನೇ ಮುಂದಿಟ್ಟು ಖಾಸಗೀಕರಣಕ್ಕೆ ಇದು ದಾರಿ ಮಾಡಿಕೊಡಲಿದೆ,'' ಎನ್ನುತ್ತಾರೆ ಜನಾರೋಗ್ಯ ಚಳವಳಿಯ ಡಾ. ಅಖಿಲಾ.

ಆಸ್ಪತ್ರೆಗಳಿಗೆ ಬೇಕಿರುವುದೇನು?:

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸರಕಾರವೇ ಆಸ್ಪತ್ರೆಗಳನ್ನು ನಡೆಸುತ್ತಿದೆ. ಆರೋಗ್ಯ ಕ್ಷೇತ್ರದ ವಿಚಾರದಲ್ಲಿ ಎರಡು ಪ್ರತ್ಯೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2017- 18ನೇ ಬೆಜೆಟ್‌ನಲ್ಲಿ 6, 728 ಕೋಟಿ ಮೀಸಲಿಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನೂ, ಮಿಂಟೋ ಕಣ್ಣಿನ ಆಸ್ಪತ್ರೆಯಂತಹ ಸರಕಾರಿ ಆಸ್ಪತ್ರೆಗಳ ಮೇಲ್ದೆರ್ಜೆಗೆ ಹಣವನ್ನು ಮೀಸಲಿಡಲಾಗಿದೆ. ಹಾಗೆ ನೋಡಿದರೆ, ರಾಜ್ಯ ಸರಕಾರ ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಶೇ. 3. 7ರಷ್ಟು ಹೆಚ್ಚಿನ ಅನುದಾನವನ್ನು ಆರೋಗ್ಯ ಇಲಾಖೆಗೆ ಈ ಬಾರಿ ನೀಡಿದೆ.

"ಸರಕಾರಿ ಆಸ್ಪತ್ರೆಗಳು ಸೌಲಭ್ಯ ಹಾಗೂ ಅನುದಾನದ ಕೊರತೆಯನ್ನು ಹಲವು ದಶಕಗಳಿಂದ ಎದುರಿಸಿಕೊಂಡು ಬಂದಿವೆ. ವರ್ಷಕ್ಕೆ ಆರೋಗ್ಯ ವಿಮೆಗಾಗಿಯೇ ರಾಜ್ಯ ಹಾಗೂ ಕೇಂದ್ರ ಸರಕಾರದ ಕಡೆಯಿಂದ ಸುಮಾರು ಒಂದು ಸಾವಿರ ಕೋಟಿ ಬರುತ್ತದೆ. ಆದರೆ ಇವು ಖಾಸಗಿ ಆಸ್ಪತ್ರೆಗಳ ಪಾಲಾಗುತ್ತದೆ. ಯಾಕೆ ಸರಕಾರಿ ಆಸ್ಪತ್ರೆಗಳಿಗೆ ಈ ಹಣ ಹೋಗುವಂತೆ ನೋಡಿಕೊಳ್ಳಬಾರದು?,'' ಎಂದು ಪ್ರಶ್ನಿಸುತ್ತಾರೆ ಡಾ. ಅಖಿಲಾ.

ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಂದ ಹಿಡಿದು ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಒಂದು ಕಡೆ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೆ ಅದಕ್ಕೆ ತಕ್ಕಷ್ಟ ಸಿಬ್ಬಂದಿಗಳನ್ನು ಸರಕಾರ ನೀಡದಿರುವುದು ಹಲವು ಸಮಸ್ಯೆಗಳ ಮೂಲವಾಗಿದೆ ಎನ್ನುತ್ತಾರೆ ಅವರು. ಅದೆಲ್ಲಕ್ಕಿಂತ ಹೆಚ್ಚಾಗಿ ಸರಕಾರದ ಇಚ್ಚಾಶಕ್ತಿಯ ಕೊರತೆಯನ್ನು ಅವರು ಸಮಸ್ಯೆಯ ಕೇಂದ್ರ ಎನ್ನುತ್ತಾರೆ.

ನೇಮಕಾತಿ ರಾಜಕೀಯ: 

ಬೆಂಗಳೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ತನ್ನ ಶಿಸ್ತಿನ ಆಡಳಿತದ ಕಾರಣಕ್ಕೆ ಸಾಕಷ್ಟು ಹೆಸರು ಮಾಡಿದೆ. "ಜಯದೇವ ಅಸ್ಪತ್ರೆಯಲ್ಲಿ ಸಾಧ್ಯವಾಗಿರುವುದು ಇತರೆ ಸರಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?'' ಎಂದು ಪ್ರಶ್ನಿಸುತ್ತಾರೆ ಭಾರತೀಯ ವೈದ್ಯಕೀಯ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ರವೀಂದ್ರ. ಅವರು ಸರಕಾರಿ ವೈದ್ಯಾಧಿಕಾರಿಗಳ ಒಕ್ಕೂಟ ಅಧ್ಯಕ್ಷರಾಗಿದ್ದವರು.

ಜಯದೇವ ಆಸ್ಪತ್ರೆಯಲ್ಲಿರು ಜನಪರವಾಗಿರುವ ವಾತಾವರಣಕ್ಕೆ ಕಾರಣ ಅದರ ಆಡಳಿತ ಹೊಣೆಯನ್ನು ಹೊತ್ತುಕೊಂಡಿರುವ ಡಾ. ಮಂಜುನಾಥ್. ಅವರ ಇಚ್ಚಾಶಕ್ತಿಯ ಹಿನ್ನೆಲೆಯಲ್ಲಿ ಮಾದರಿ ಎನ್ನಿಸುವ ಆರೋಗ್ಯ ಸೇವೆಯನ್ನು ಆಸ್ಪತ್ರೆ ನೀಡುತ್ತ ಬಂದಿದೆ.

"ಸಾಮಾನ್ಯವಾಗಿ ಸರಕಾರಿ ವೈದ್ಯಕೀಯ ಸಂಸ್ಥೆಗಳಿಗೆ ಡೀನ್‌, ನಿರ್ದೇಶಕರ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದನ್ನು ನೀವು ನೋಡಿ. ಜಾತಿ, ಧರ್ಮ ಮತ್ತು ದುಡ್ಡಿನ ಆಧಾರದ ಮೇಲೆ ನೇಮಕಾತಿಗಳು ನಡೆಯುವುದರಿಂದಲೇ ಆರೋಗ್ಯ ಸಂಸ್ಥೆಗಳು ಹದಗೆಟ್ಟು ಹೋಗಿವೆ,'' ಎನ್ನುತ್ತಾರೆ ಡಾ. ರವೀಂದ್ರ.

ಇದರ ಜತೆಗೆ ಸರಕಾರಿ ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಖಾಸಗಿಯಾಗಿ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ಸ್ಪಷ್ಟವಾದ ಕಾನೂನು ತರಲು ಸರಕಾರ ಹಿಂದೇಟು ಹಾಕುತ್ತಿದೆ. ಕಡ್ಡಾಯ ಗ್ರಾಮೀಣ ಸೇವೆಯ ವಿಚಾರದಲ್ಲಿಯೂ ಸರಕಾರ ಹಣ ಇರುವವರಿಗೆ ತಪ್ಪಿಸಿಕೊಳ್ಳುವ ದಾರಿಯನ್ನು ಮಾಡಿಕೊಟ್ಟಿದೆ.

ಆರೋಗ್ಯ ಸೇವಾ ಕ್ಷೇತ್ರದ ಕುರಿತು ಬರೆಯುತ್ತಾ ಹೋದರೆ ಅದು ಒಂದು ವರದಿಗೆ ಸೀಮಿತವಾಗಿರುವ ವಿಚಾರ ಅಲ್ಲ. ಸದ್ಯ ಶಿವಮೊಗ್ಗದ ಘಟನೆ ಹಿನ್ನೆಲೆಯಲ್ಲಿ ಹೀಗೊಂದಿಷ್ಟು ದೂರಗಾಮಿ ನೆಲೆಯಲ್ಲಿ, ಇಚ್ಚಾಶಕ್ತಿಗಳ ಜತೆ ಸರಕಾರ ಕಾಯ್ದೆಗಳ ಮಟ್ಟದಲ್ಲಿ ಶಸ್ತ್ರಚಿಕಿತ್ಸೆಗೆ ಮುಂದಾದರೆ ಅದು ಬಡರೋಗಿಗಳಿಗೆ ಹಾಗೂ ತನ್ನ ಮತದಾರರಿಗೆ ಮಾಡಬಹುದಾದ ದೊಡ್ಡ ಉಪಕಾರವಾಗುತ್ತದೆ. ಮಾತೆತ್ತಿದರೆ ಲೋಹಿಯಾ, ಅಂಬೇಡ್ಕರ್ ಎನ್ನುವ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಸ್ವತಃ ವೈದ್ಯರೇ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಗಮನಕ್ಕೆ; ಸದ್ಯಕ್ಕಿಷ್ಟು.