samachara
www.samachara.com
ಕೇರಳ ಹುಡುಗ; ಕರಾಚಿ ಹುಡುಗಿ: ಕತಾರ್‌ನಲ್ಲಿ ಹುಟ್ಟಿದ ಪ್ರೇಮಕ್ಕೆ ಬೆಂಗಳೂರಿನಲ್ಲಿ ‘ಅಕ್ರಮ ಅಂತ್ಯ’!
ಸುದ್ದಿ ಸಾಗರ

ಕೇರಳ ಹುಡುಗ; ಕರಾಚಿ ಹುಡುಗಿ: ಕತಾರ್‌ನಲ್ಲಿ ಹುಟ್ಟಿದ ಪ್ರೇಮಕ್ಕೆ ಬೆಂಗಳೂರಿನಲ್ಲಿ ‘ಅಕ್ರಮ ಅಂತ್ಯ’!

samachara

samachara

ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮೂವರನ್ನು ಹಾಗೂ ಅವರಿಗೆ ನೆರವು ನೀಡಿದ ಆರೋಪದ ಮೇಲೆ ಕೇರಳ ಮೂಲಕ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಘಟನೆ ಗುರುವಾರ ಬೆಂಗಳೂರಿನಲ್ಲಿ ನಡೆದಿದೆ. ಈ ಮೂಲಕ ಅಂತಾರಾಷ್ಟ್ರೀಯ ಆಯಾಮವನ್ನು ಹೊಂದಿರುವ ಅಪರೂಪದ ಪ್ರೇಮ ಪ್ರಕರಣ ಕೂಡ ಸುದ್ದಿಕೇಂದ್ರಕ್ಕೆ ಬಂದಿದೆ.

ಬುಧವಾರ ಸಂಜೆ ವೇಳೆಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಹಾಗೂ ಸಿಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ವ್ಯಕ್ತಿ ಹಾಗೂ ಮೂವರು ಶಂಕಿತ ಪಾಕಿಸ್ತಾನಿಯರನ್ನು ವಶಕ್ಕೆ ಪಡೆದ್ದಾರೆ.

"ಅವರು ಅಕ್ರಮವಾಗಿ ಭಾರತವನ್ನು ಪ್ರವೇಶ ಮಾಡಿದ್ದಾರೆ. ಪಾಸ್‌ಪೋರ್ಟ್‌, ವೀಸಾ ಯಾವುದೂ ಇರಲಿಲ್ಲ. ಜತೆಗೆ, ಸ್ಥಳೀಯವಾಗಿ ಗುರುತಿನ ಪತ್ರಗಳನ್ನು ಮಾಡಿಕೊಂಡ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ,'' ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದರು."ಮನೆಯಲ್ಲಿ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಶಂಕಿತ ಕರಾಚಿ ಮೂಲದ ಯುವತಿ ತನ್ನ ಸಂಬಂಧಿಗಳ ಜತೆ ಭಾರತಕ್ಕೆ ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ,'' ಎಂದವರು ಮಾಹಿತಿ ನೀಡಿದರು.

ಏನಿದು ಬೆಳವಣಿಗೆ?:

ಗುರುವಾರ ಬೆಳಗ್ಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮೊದಲ ಹಂತದಲ್ಲಿರುವ ಮನೆಯೊಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮೂಲದ ಪ್ರಜೆಗಳನ್ನು ಬಂಧಿಸಿದ ಸುದ್ದಿ ಹೊರಬಿತ್ತು. ಕೇರಳ ಮೂಲದ ಮಹಮದ್ ಸಿಹಾಬ್, ವಿದೇಶಿ ಪ್ರಜೆಗಳಾದ ಸಮೀರಾ ಅಬ್ದುಲ್ ರೆಹಮಾನ್, ಖಾಸಿಫ್ ಶಂಶುದ್ದೀನ್ ಹಾಗೂ ಕಿರಣ್ ಗುಲಾಬ್ ಅಲಿ ಬಂಧನಕ್ಕೆ ಒಳಗಾದವರು.

ಆದರೆ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ನಾಲ್ವರನ್ನೂ ವಿದೇಶಿ ಪ್ರಜೆಗಳು ಎಂದು ಗುರುತಿಸಲಾಗಿದೆ.ಕೇರಳದ ಸಿಬಾಬ್ 2008ರಲ್ಲಿ ಬೆಂಗಳೂರಿಗೆ ಬಂದು ಇಲ್ಲಿನ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ಹೇಳುತ್ತವೆ. ಆತನ ತಂದೆ ಕತಾರ್‌ನ ಸರಕಾರಿ ಕಚೇರಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ ಸಿಹಾಬ್ ಕೂಡ 2012ರಲ್ಲಿ ಕತಾರ್‌ಗೆ ತೆರಳಿದ್ದ. ಅಲ್ಲಿ ಸ್ಟೆನೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನ ಮೂಲಕ ಸಮೀರಾ ಜತೆ ಸಿಹಾಬ್‌ಗೆ ಪ್ರೇಮಾಂಕುರವಾಗಿತ್ತು. ಅವರಿಬ್ಬರು ಮದುವೆಯನ್ನೂಆಗಿದ್ದರು.

"ಅವರ ಮದುವೆ ವಿಚಾರ ಗೊತ್ತಾದ ನಂತರ ಸಮೀರಾ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಒತ್ತಾಯಪೂರ್ವಕವಾಗಿ ಆಕೆಯನ್ನು ಕರಾಚಿಗೆ ವಾಪಾಸ್ ಕರೆದುಕೊಂಡು ಹೋಗಿದ್ದರು. ಒತ್ತಡದಲ್ಲಿ ಆಕೆಗೆ ಗರ್ಭಪಾತವೂ ಆಗಿತ್ತು,'' ಎಂದು ಮೂಲಗಳು ಹೇಳುತ್ತವೆ.

ನಂತರ ಸಮೀರಾ ಮತ್ತೆ ಸಿಹಾಬ್‌ನನ್ನು ಸಂಪರ್ಕಿಸಿದ್ದಾಳೆ. ಅವರಿಬ್ಬರು ತಮ್ಮ ದಾಂಪತ್ಯವನ್ಜು ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಬರಲು ತೀರ್ಮಾನಿಸಿದ್ದಾರೆ. ಕಳೆದ ವರ್ಷ ಅವರು ಮಸ್ಕಟ್‌ನಿಂದ ನೇಪಾಳಕ್ಕೆ, ಅಲ್ಲಿಂದ ಬಿಹಾರಕ್ಕೆ ಬಂದರು. ಜತೆಗೆ, ಸಮೀರಾ ಸಂಬಂಧಿಗಳಿಬ್ಬರನ್ನೂ ಕರೆದುಕೊಂಡು ಬಂದಳು ಎಂಬುದು ಸದ್ಯದ ಮಾಹಿತಿ.

2016ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬಂದ ಸಿಹಾಬ್‌ ಹಾಗೂ ಸಮೀರಾ ಕುಮಾರಸ್ವಾಮಿ ಲೇಔಟ್‌ನ ಮೊದಲ ಹಂತದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆ ಕಂಡುಕೊಂಡರು. ಈ ಸಮಯದಲ್ಲಿ ಅವರು ಆಧಾರ್‌ ಕಾರ್ಡ್‌ ಸೇರಿದಂತೆ ಸ್ಥಳೀಯ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದರು.

"ಸ್ಥಳೀಯರಿಗೆ ಇವರ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕೂಡ ಹಲವು ದಿನಗಳ ಕಾಲ ಇವರ ಚಲನವಲನಗಳನ್ನು ಗಮನಿಸಿ ನಂತರ ಬಂಧನಕ್ಕೆ ಒಳಪಡಿಸಿದರು,'' ಎಂದು ಮಾಹಿತಿ ನೀಡುತ್ತಾರೆ ಅಪರಾಧ ವರದಿಗಾರರೊಬ್ಬರು.

ಬೆಂಗಳೂರಿಗೆ ಆಘಾತ ಅಂತೆ:

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪಾಕ್‌ ಮೂಲದ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಸುದ್ದಿ ವಾಹಿನಿಗಳಲ್ಲಿ ಕೆಲವು, 'ಇದು ಬೆಂಗಳೂರಿಗೆ ಆಘಾತ ತರುವ ಸುದ್ದಿ' ಎಂದು ಆತಂಕವನ್ನು ಹರಡುವ ಪ್ರಯತ್ನ ನಡೆಸಿದವು. ನಂತರ ಬಂಧಿತರ ಹಿಂದೆ ಪ್ರೇಮ ಕತೆಯೊಂದು ಇದೆ ಎಂದು ಗೊತ್ತಾದ ನಂತರ, 'ಬಾಡಿಗೆ ನೀಡುವ ಮುನ್ನ ಎಚ್ಚರ' ಎಂದು ಬುದ್ದಿವಾದ ಹೇಳಲು ಶುರುಮಾಡಿದವು.

ಸದ್ಯ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಗುವಿನ ವಾತಾವರಣ ಇದೆ. ಎರಡೂ ದೇಶಗಳ ನಡುವೆ ಯುದ್ಧಕ್ಕಾಗಿ ಕಾಯುವ ದೊಡ್ಡ ವರ್ಗವೇ ಇದೆ. ನಡುವೆ ಶಾಂತಿಗಾಗಿ ಎರಡೂ ದೇಶಗಳ ಪ್ರಜೆಗಳ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಈ ಸಮಯದಲ್ಲಿಯೇ ಭಾರತ ಮೂಲದ ಯುವಕ ಮತ್ತು ಪಾಕಿಸ್ತಾನ ಮೂಲಕ ಯುವತಿ ಅರಬ್‌ ದೇಶವೊಂದರಲ್ಲಿ ಪ್ರೀತಿಸಿ, ಮದುವೆಯಾಗಿ ನೆಲೆ ಕಂಡುಕೊಳ್ಳಲು ಬೆಂಗಳೂರನ್ನು ಆಯ್ದುಕೊಂಡ ಸುದ್ದಿ ಹೊರಬಿದ್ದಿದೆ.

"ಫಾರಿನರ್ಸ್ ಆಕ್ಟ್ ಅಡಿಯಲ್ಲಿ ಯಾವುದೇ ವಿದೇಶಿ ಪ್ರಜೆ ಅಕ್ರಮವಾಗಿ ನಮ್ಮ ದೇಶದಲ್ಲಿ ನೆಲೆಸಿದ್ದರೆ ನೇರವಾಗಿ ಜೈಲಿಗೆ ಕಳುಹಿಸಲಾಗುತ್ತದೆ. ನಂತರ ವಿಚಾರಣೆಯಲ್ಲಿ ಅವರ ಉದ್ದೇಶ ಹಾಗೂ ಇತರೆ ಕಾರಣಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಪಾಸ್‌ಪೋರ್ಟ್‌ ಇಲ್ಲದೆ, ವೀಸಾ ಇಲ್ಲದೆ ನೆಲೆಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ,'' ಎನ್ನುತ್ತಾರೆ ಹಿರಿಯ ವಕೀಲ ಬಿ. ಟಿ. ವೆಂಕಟೇಶ್.