ದಿಟ್ಟ, ಬುದ್ಧಿವಂತ ಮಹಿಳೆ ಅರುಂಧತಿ ರಾಯ್ ಕಂಡ್ರೆ ಬಿಜೆಪಿ ಸಿಟ್ಟಿಗೇಳೋದು ಯಾಕೆ?
ಸುದ್ದಿ ಸಾಗರ

ದಿಟ್ಟ, ಬುದ್ಧಿವಂತ ಮಹಿಳೆ ಅರುಂಧತಿ ರಾಯ್ ಕಂಡ್ರೆ ಬಿಜೆಪಿ ಸಿಟ್ಟಿಗೇಳೋದು ಯಾಕೆ?

ಅರುಂಧತಿ ರಾಯ್...

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನೂ, ಸ್ಥಳೀಯ ಮಟ್ಟದಲ್ಲಿ ಒಂದು ವರ್ಗದಿಂದ ರಾಜಕೀಯ ವಿರೋಧಗಳನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಬರಹಗಾರ್ತಿ; ಸದ್ಯ ಸುದ್ದಿಯಲ್ಲಿದ್ದಾರೆ.

ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಜೀಪಿಗೆ ಸ್ಥಳೀಯ ಯುವಕನನ್ನು ಗುರಾಣಿಯಾಗಿ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ, ನಟ ಪರೇಶ್ ರಾವಲ್ ನೀಡಿದ ಹೇಳಿಕೆ ಮತ್ತೆ ರಾಯ್ ಹೆಸರನ್ನು ಚಾಲ್ತಿಗೆ ತಂದಿದೆ. ಜೀಪಿನ ಮುಂಭಾಗಕ್ಕೆ ಕಲ್ಲು ತೂರಾಟಗಾರರ ಬದಲು ಅರುಂಧತಿ ರಾಯ್ ಅವರನ್ನು ಕಟ್ಟಿ ಎನ್ನುವ ರಾವಲ್ ಟ್ವೀಟ್ ವಿವಾದದ ಕಿಡಿ ಹೊತ್ತಿಸಿದೆ.

ದೇಶದಲ್ಲಿ ಸಂಘಪರಿವಾರ ಮತ್ತು ಬಿಜೆಪಿ ವಿರೋಧ ಕಟ್ಟಿಕೊಂಡವರಲ್ಲಿ ಅರುಂಧತಿ ರಾಯ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಲೇಖಕಿ, ಹೋರಾಟಗಾರ್ತಿ, ಅದಕ್ಕಿಂತ ಹೆಚ್ಚಾಗಿ ನೇರ ನಡೆನುಡಿಗಳಿಂದಾಗಿ ಅವರು ಜನಪ್ರಿಯರು. 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕಕ್ಕೆ ಪ್ರತಿಷ್ಠಿತ ಮ್ಯಾನ್  ಬೂಕರ್ ಪ್ರಶಸ್ತಿ, ಸಿನಿಮಾವೊಂದರ ಚಿತ್ರಕಥೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಜತೆಗೆ ಹಲವು ಬಿರುದುಗಳನ್ನು ಮುಡಿಗೇರಿಸಕೊಂಡವರು. ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯಬೇಕು, ಗಾಂಧೀಜಿ ಜನಾಂಗೀಯವಾದಿ ಮುಂತಾದ ಹೇಳಿಕೆಗಳ ಮೂಲಕ ಅಭಿಮಾನಿಗಳನ್ನೂ ಅಷ್ಟೇ ಸಂಖ್ಯೆಯ ವಿರೋಧಿಗಳನ್ನೂ ಗಿಟ್ಟಿಸಿದವರು ಅರುಂಧತಿ ರಾಯ್.

ಬಿಜೆಪಿ ನಾಯಕರು ರಾಯ್ ಹೆಸರನ್ನು ಹೀಗೆ ಕಾಶ್ಮೀರದ ವಿಚಾರಕ್ಕೆ ಎಳೆದು ತರಲು ಕಾರಣವೂ ಇದೆ. ಹಿಂದೊಮ್ಮೆ ರಾಯ್ ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕಾಗಿದೆ ಎಂಬ ಹೇಳಿಕೆ ನೀಡಿದ್ದರು. ಇಲ್ಲಿಂದ ದೇಶದ ಕೇಸರಿ ಗಣ ರಾಯ್ ಮೇಲೆ ಕೆಂಡಕಾರುತ್ತಾ ಬಂದಿದೆ. ಜತೆಗೆ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಗುಜರಾತಿನಲ್ಲಿ ಕೈಗೊಂಡಿದ್ದ ಸರ್ದಾರ್ ಸರೋವರ ಯೋಜನೆಯನ್ನು ರಾಯ್ ವಿರೋಧಿಸಿದ್ದರು; ಜತೆಗೆ ಮೋದಿಯನ್ನೂ ಹೀಗಳೆದಿದ್ದರು. ಹೀಗೆ ರಾಯ್ ಅವರನ್ನು ವಿರೋಧಿಸಲು ಬಿಜೆಪಿಗೆ ಬೇಕಾದಷ್ಟು ಸರಕುಗಳಿವೆ. ಆದರೆ ಇದ್ಯಾವುದಕ್ಕೂ ಅಂಜಿದವರಲ್ಲ ರಾಯ್. ಅವರ ಜೀವನದ ಹಾದಿಯಲ್ಲೇ ಅಂಥಹದ್ದೊಂದು ಗಟ್ಟಿತನ, ಮುನ್ನುಗ್ಗುವ ಛಾತಿಗಳು ಕಾಣಿಸುತ್ತವೆ.

ಈ ಅರುಂಧತಿ ರಾಯ್ ಮೂಲತಃ ವಾಸ್ತು ಶಿಲ್ಪಿ. ಹುಟ್ಟಿದ್ದು ಮೇಘಾಲಯದಲ್ಲಿ. ತಂದೆ ಬೆಂಗಾಲಿ, ತಾಯಿ ಕೇರಳದ ಮಲಯಾಳಿ ಸಿರಿಯನ್. ಎನ್‌ಡಿಟಿವಿ ಸಂಸ್ಥಾಪಕ ಪ್ರನೊಯ್ ರಾಯ್ ಸಂಬಂಧಿ ಕೂಡಾ ಹೌದು.  ಬೆಳೆದಿದ್ದೆಲ್ಲಾ ಕೇರಳದಲ್ಲೇ. ತಾಯಿ ವಿಚ್ಚೇದನ ಪಡೆದು ಪುಟ್ಟದೊಂದು ಶಾಲೆ ನಡೆಸುತ್ತಿದ್ದರು. ಅರುಂಧತಿ ಮುಂದೆ ಆರ್ಕಿಟೆಕ್ಚರ್ ವಿದ್ಯಾಭ್ಯಾಸ ಮಾಡಿದರು. ಆ ಸಮಯದಲ್ಲಿ ಭಾರತದ ಪ್ರಖ್ಯಾತ ವಾಸ್ತುಶಿಲ್ಪಿ ಗೆರಾರ್ಡ್ ಡ ಕುನ್ಹಾ ಪರಿಚಯವಾಯಿತು. ಇಬ್ಬರೂ ಒಂದಷ್ಟು ಕಾಲ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು ಅಷ್ಟೆ. ಕೇರಳದಿಂದ ಹೊರಗೆ ಕಾಲಿಟ್ಟ ಅರುಂಧತಿ ಮೊದಲು ಗೋವಾ, ನಂತರ ದೆಹಲಿಯಲ್ಲಿ ನೆಲೆ ಕಂಡುಕೊಂಡರು.

ಅಷ್ಟೊತ್ತಿಗೆ ರಾಯ್ ಆರ್ಕಿಟೆಕ್ಚರ್ ಬಿಟ್ಟು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅವರು ಪೆನ್ ಹಿಡಿಯಲಿಲ್ಲ ನೇರ ಕೀಬೋರ್ಡ್ ಎತ್ತಿಕೊಂಡರು. "ನಮ್ಮ ಮನೆಯಲ್ಲಿ ಕಂಪ್ಯೂಟರ್ ಇತ್ತು ಎಂಬ ಒಂದೇ ಕಾರಣಕ್ಕೆ ನಾನು ಬರೆಯಲು ಆರಂಭಿಸಿದೆ," ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಳ್ಳುತ್ತಾರೆ. ದೆಹಲಿಗೆ ಬಂದ ರಾಯ್ ಗೆ ಪರಿಚಯವಾದವರು ಖ್ಯಾತ ಸಿನಿಮಾ ತಜ್ಞ ಪ್ರದೀಪ್ ಕೃಷ್ಣನ್. ಅವರ ಸಿನಿಮಾವೊಂದಕ್ಕೆ ರಾಯ್ ಬಣ್ಣ ಕೂಡಾ ಹಚ್ಚಿದರು. ಮಾತ್ರವಲ್ಲ  ಕೃಷ್ಣನ್ ಸಿನಿಮಾ In Which Annie Gives It Those Ones ಗೆ ಚಿತ್ರಕಥೆ ಬರೆದು 1988ರಲ್ಲಿ ಚಿತ್ರಕತೆಗಾಗಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗಿಟ್ಟಿಸಿಕೊಂಡ ಪ್ರತಿಭಾವಂತೆ ಅರುಂಧತಿ ರಾಯ್.

ಮುಂದೆ ಕೃಷ್ಣನ್ ರಾಯ್ ಜತೆಗಿನ ಸಂಬಂಧ ಕೊನೆಯಾಯಿತು. ಅಷ್ಟೊತ್ತಿಗೆ ಬರವಣಿಗೆ ರಾಯ್ ಕೈಹಿಡಿದಿತ್ತು. ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟು ರಾಯ್ ಬೆಳೆದಿದ್ದರು. 1992ರಲ್ಲಿ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕದ ಬರವಣಿಗೆ ಆರಂಭಿಸಿದ ರಾಯ್ 1996ರಲ್ಲಿ ಮುಗಿಸಿದರು. ಮರು ವರ್ಷ ಅಂದರೆ 1997ರಲ್ಲಿ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕಕ್ಕೆ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಬಂತು. ರಾತೋ ರಾತ್ರಿ ವಿಶ್ವದಾದ್ಯಂತ ಜನಪ್ರಿಯರಾದರು ಅರುಂಧತಿ ರಾಯ್. ಈ ಕಾದಂಬರಿಗೆ ಪುಸ್ತಕವನ್ನು ವಿಮರ್ಶಕರು ಹಾಡಿ ಹೊಗಳಿದರು. ವಿಶ್ವದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಯಿತು. ಭಾರಿ ಹಣ ತಂದುಕೊಟ್ಟಿದ್ದರಿಂದ ರಾಯ್ ಜೀವನದಲ್ಲಿ ನೆಲೆ ನಿಲ್ಲಲು ಸಹಕಾರಿಯಾಯಿತು. ಕ್ಷುದ್ರ ದೇವತೆ ಹೆಸರಿನಲ್ಲಿ ಈ ಪುಸ್ತಕ ಕನ್ನಡ ಭಾಷೆಗೂ ಅನುವಾದಗೊಂಡಿದೆ.

ಗೆಲುವಿನ ಅಲೆಯ ಮಧ್ಯೆ ಒಂದಷ್ಟು ವಿರೋಧಗಳನ್ನೂ ಅರುಂಧತಿ ರಾಯ್ ಎದುರಿಸಿದರು ಕೂಡ.ಅದಕ್ಕೆ ಕಾರಣ ಪುಸ್ತಕದಲ್ಲಿದ್ದ ಲೈಂಗಿಕತೆ. ಇದೇ ವಿಚಾರವನ್ನು ಮುಂದಿಟ್ಟು ಕೇರಳದಲ್ಲಿ ರಾಯ್ ವಿರುದ್ಧ ಅಶ್ಲೀಲತೆಯ ಪ್ರಕರಣ ದಾಖಲಿಸಲಾಯಿತು.

ಬರವಣಿಗೆ ರಾಯ್ಗೆ ಪ್ರಸಿದ್ಧಿ, ಹಣ ಎಲ್ಲವನ್ನೂ ತಂದುಕೊಟ್ಟರೂ ರಾಯ್ ಸಾಹಿತ್ಯದ ಬೆನ್ನು ಹತ್ತಿ ಹೊರಡಲಿಲ್ಲ. ರಾಜಕೀಯ, ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ, ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಧ್ವನಿ ಎತ್ತುತ್ತಾ ಬಂದರು. ಮುಂದೆ ಆಕೆ ಬರೆದಿದ್ದೆಲ್ಲಾ ಪ್ರಬಂಧ ಲೇಖನ, ಭಾಷಣ ರೂಪದ ಬರವಣಿಗೆಗಳು ಮಾತ್ರ. ಇವುಗಳ ವ್ಯಾಪ್ತಿ ಮಾತ್ರ ಹಿರಿದಾಗಿತ್ತು.ಅಮೆರಿಕ ವಿದೇಶಾಂಗ ನೀತಿ, ಅಫ್ಘಾನಿಸ್ತಾನದ ಯುದ್ಧ, ಸರ್ದಾರ್ ಸರೋವರ ಯೋಜನೆ, ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟ, ಪೋಖ್ರನ್ ನ್ಯೂಕ್ಲಿಯರ ಪರೀಕ್ಷೆ, ದೇಶದ ಸಂಸತ್ ಭವನದ ಮೇಲೆ ನಡೆದ ದಾಳಿ ಮತ್ತು ಅದರ ವಿಚಾರಣೆ, ನಕ್ಸಲೀಯರ ಕಾರ್ಯಕ್ಷೇತ್ರ, ಅಣ್ಣಾ ಹಜಾರೆಯ ಹೋರಾಟ, ನರೇಂದ್ರ ಮೋದಿಯಿಂದ ಹಿಡಿದು ಮಹಾತ್ಮಾ ಗಾಂಧಿ ತನಕ ಎಲ್ಲವನ್ನೂ ತಮ್ಮ ಪ್ರಬಂಧ ಬರಹಗಳಲ್ಲೇ ಹಿಡಿದಿಟ್ಟರು ಅರುಂಧತಿ ರಾಯ್.


       ಅರುಂಧತಿ ಮತ್ತು ಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನದ ಸಮಯದಲ್ಲಿ.
ಅರುಂಧತಿ ಮತ್ತು ಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನದ ಸಮಯದಲ್ಲಿ.

ನರ್ಮದಾ ಬಚಾವ್ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಅವರು ಮೇಧಾ ಪಾಟ್ಕರ್ ಬೆಂಬಲಕ್ಕೆ ನಿಂತರು. ಈ ಸಂದರ್ಭದಲ್ಲಿ ಅವರು ಬರೆದ Public Power in the age of Empire ಲೇಖನ ಸರಣಿ ಅವರಿಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿತು. ವಿದ್ಯುತ್ ಉತ್ಪಾದನೆ, ಅದರ ಬಳಕೆ ಹಿಂದಿನ ಜನ ವಿರೋಧಿ ನಡೆಗಳನ್ನು ರಾಯ್ ಬೆತ್ತಲುಗೊಳಿಸಿದರು.

ಇವೆಲ್ಲವನ್ನೂ ಮೀರಿ ಅರುಂಧತಿ ರಾಯ್ ಖ್ಯಾತ ಸಿನಿಮಾ ನಿರ್ದೇಶಕ ಶೇಖರ್ ಕಪೂರ್ ಬಹಿರಂಗವಾಗಿ ಟೀಕಿಸಿದಾಗ ಹೆಚ್ಚು ಸುದ್ದಿಯಾದರು. ಚಂಬಲ್ ಕಣಿವೆ ಡಕಾಯಿತೆ 'ಪೂಲಂ ದೇವಿ' ಕಥೆ ಆಧಾರಿತ 'ಬ್ಯಾಂಡಿಟ್ ಕ್ವೀನ್' ಸಿನಿಮಾದಲ್ಲಿ ಶೇಖರ ಕಪೂರ್ ಆಕೆಯ ಮೇಲಿನ ಅತ್ಯಾಚಾರವನ್ನು ಹಸಿ ಹಸಿಯಾಗಿ ತೆರೆಯ ಮೇಲೆ ಬಿಂಬಿಸಿದ್ದನ್ನು ರಾಯ್ ಟೀಕೆ ಮಾಡಿದರು.

ಅರುಂಧತಿ ರಾಯ್ ವ್ಯಕ್ತಿತ್ವವೇ ಸ್ವಲ್ಪ ಜಿಗುಟು. ಗೆಳೆಯರಾದರೂ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಜತೆಯೂ ರಾಯ್ ಇದೇ ರೀತಿ ಕಿತ್ತಾಡಿದ್ದಿದೆ. ಅರುಂಧತಿ ರಾಯ್‌ ಅವರ Alebra Of infinite justice ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಅದನ್ನು ತಿರಸ್ಕರಿಸಿದವರು.

ಹೀಗಿರುವ ಅರುಂಧತಿ ರಾಯ್ ಅವರ ಎರಡನೇ ಕಾದಂಬರಿ ಇದೇ ಜೂನ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಮತ್ತೆ ಅರುಂಧರಿ ಅವರ ಕಾಲ್ಪನಿಕ ಬರವಣಿಗೆಯೊಂದು 'The Ministry of Utmost Happiness’ ಹೆಸರಿನ ಕಾದಂಬರಿ ರೂಪದಲ್ಲಿ ಪ್ರಕಟವಾಗುತ್ತಿದೆ. 2011ರಲ್ಲಿ ಅರಂಧತಿ ರಾಯ್ 50 ವರ್ಷ ಪೂರೈಸಿದ ಸಮಯದಲ್ಲಿ ಲಂಡನ್ ಮೂಲದ ಗಾರ್ಡಿಯನ್ 'ಇಂಡಿಯಾಸ್ ಬೋಲ್ಡ್ ಅಂಡ್ ಬ್ರಿಲಿಯಂಟ್ ಡಾಟರ್' (ಭಾರತದ ದಿಟ್ಟ ಹಾಗೂ ಬುದ್ಧಿವಂತ ಮಗಳು) ಎಂಬ ಲೇಖನವೊಂದನ್ನು ಪ್ರಕಟಿಸಿತ್ತು. ಇದೀಗ, ಅವರನ್ನು ಕಾಶ್ಮೀರದ ಮಿಲಿಟರಿ ಜೀಪಿಗೆ ಕಟ್ಟಿ ಎನ್ನುವ ಮೂಲಕ ರಾಯ್ ಅವರ ದಿಟ್ಟತನವನ್ನು ಮತ್ತೊಮ್ಮೆ ಚರ್ಚೆಗೆ ಬರುವಂತೆ ಮಾಡಿದ್ದಾರೆ ಬಿಜೆಪಿ ಸಂಸದ.

ಇವೆಲ್ಲವೂ ಏನೇ ಇರಲಿ, ಸಂಘಪರಿವಾರದ ವಿರೋಧದಿಂದಾಗಿ ಅರುಂಧತಿ ಅವರ ಹೊಸ ಪುಸ್ತಕಕ್ಕೆ ಬಿಟ್ಟಿ ಪ್ರಚಾರವಂತೂ ಸಿಕ್ಕಂತಾಗಿದೆ.

ಚಿತ್ರ ಕೃಪೆ:

ದಿ ಗಾರ್ಡಿಯನ್.