ಸಿದ್ದು ಸರಕಾರದ 'ಜಾತಿ ಸಮೀಕ್ಷೆ': ಹೊರಬಿದ್ದ ಅಂಕಿ ಅಂಶಗಳಿಗೆ ಈಗ ಅಧಿಕೃತ ಮೊಹರು!
ಸುದ್ದಿ ಸಾಗರ

ಸಿದ್ದು ಸರಕಾರದ 'ಜಾತಿ ಸಮೀಕ್ಷೆ': ಹೊರಬಿದ್ದ ಅಂಕಿ ಅಂಶಗಳಿಗೆ ಈಗ ಅಧಿಕೃತ ಮೊಹರು!

ಸ್ವತಂತ್ರ

ಭಾರತದ ಮೊಟ್ಟ ಮೊದಲ ‘ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ - ಕರ್ನಾಟಕ’ದ ಕೆಲವು ಅಂಕಿ ಅಂಶಗಳು ಈ ಬಾರಿ ಅಧಿಕೃತವಾಗಿ ಸೋರಿಕೆಯಾಗಿವೆ.

ಹೆಚ್ಚು ಕಡಿಮೆ 2016ರ ಏಪ್ರಿಲ್ ತಿಂಗಳಿನಲ್ಲಿ ವಾಟ್ಸಾಪ್‌ಗಳ ಮೂಲಕ ಹರಿದಾಡಿದ ಅಂಕಿ ಅಂಶಗಳನ್ನು ಈ ಬಾರಿ ವಿಶ್ವಾಸಾರ್ಹ ದಿನ ಪತ್ರಿಕೆ 'ಪ್ರಜಾವಾಣಿ' ಶನಿವಾರದ ತನ್ನ ಮುಖಪುಟದ ವರದಿಯಲ್ಲಿ ಪ್ರಕಟಿಸಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಜಾತೀವಾರು ಜನಸಂಖ್ಯೆ ವಿಚಾರದಲ್ಲಿ ಇದ್ದ ತಿಳಿವಳಿಕೆಗಳನ್ನು ಸಮೀಕ್ಷೆ ಮಾಹಿತಿ ಬುಡಮೇಲು ಮಾಡುವುದು ಸ್ಪಷ್ಟವಾಗಿದೆ. ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಹೀಗೊಂದು ಮಾಹಿತಿ ಹೊರಬಿದ್ದಿರುವುದರಿಂದ ಸಾಮಾಜಿಕ ಆರ್ಥಿಕ ಸಮೀಕ್ಷೆ, ರಾಜಕೀಯ ಆಯಾಮ ಪಡೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಏನಿದೆ ವರದಿಯಲ್ಲಿ?:

'ಪ್ರಜಾವಾಣಿ' ಪ್ರಕಟಿಸಿರುವ ವರದಿಯಲ್ಲಿ, 'ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ ಮತ್ತು ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ' ಎಂದು ಹೇಳಲಾಗಿದೆ. ಇದನ್ನು ಅಧಿಕೃತ ಮಾಹಿತಿ ಎಂದು ಹೇಳಿರುವ ಪತ್ರಿಕೆ, 'ಸಾಮಾಜಿಕ ಮತ್ತು ಶೈಕ್ಷಣಿಕ ಅಳತೆಗೋಲಿನಲ್ಲಿ ಕುರುಬ ಸಮುದಾಯವನ್ನು ‘ಅತ್ಯಂತ ಹಿಂದುಳಿದ ಸಮುದಾಯ’ ಎಂಬುದಾಗಿ ಘೋಷಿಸಬೇಕು ಎಂದು ಶಿಫಾರಸು ಮಾಡುವ ಸಾಧ್ಯತೆ ಇದೆ' ಎಂಬ ಮಾಹಿತಿ ನೀಡಿದೆ.

'2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಆಯೋಗ ನಡೆಸಿದ ಸಮೀಕ್ಷೆಯ ವ್ಯಾಪ್ತಿಯಲ್ಲಿ 5.98 ಕೋಟಿ ಜನರು ಬಂದಿದ್ದು, 32 ಲಕ್ಷ ಜನರು ಹೊರಗುಳಿದಿದ್ದಾರೆ. ಪರಿಶಿಷ್ಟರಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರ್ಕಾರ ಗುರುತಿಸಿರುವ 816  ಇತರ ಹಿಂದುಳಿದ ಜಾತಿಗಳು (ಓಬಿಸಿ) ಸೇರಿ ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಈ ಜಾತಿಗಳಲ್ಲದೆ ಹೊಸದಾಗಿ 192 ಜಾತಿಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ, 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿ ಹೆಸರು ದಾಖಲಾಗಿವೆ. ತಪ್ಪು ಮಾಹಿತಿಯಿಂದ ಈ ರೀತಿ ಆಗಿರಬೇಕು ಎಂದು ಆಯೋಗ ಭಾವಿಸಿದೆ. ಹಲವು ಜಾತಿಗಳು ಇನ್ನೊಂದು ಸಮಾನಾಂತರ ಜಾತಿಗೆ ಹೋಲಿಕೆಯಾಗುತ್ತಿವೆ. 10ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 16 ಹೊಸ ಜಾತಿಗಳನ್ನು ಕುಲ ಶಾಸ್ತ್ರಜ್ಞರನ್ನು ಒಳಗೊಂಡ ವಿಷಯ ತಜ್ಞರ ಸಮಿತಿ ಪರಿಶೀಲಿಸಿ ವರದಿ ನೀಡಿದೆ. ಈ ಜಾತಿಗಳ ಪ್ರಸ್ತಾವ ಇತಿಹಾಸ ಪುಸ್ತಕಗಳಲ್ಲೂ ಇರುವುದನ್ನು ಪತ್ತೆ ಮಾಡಲಾಗಿದೆ. ಈ ಕಾರ್ಯಕ್ಕೆ ಒಂದು ವರ್ಷ ತಗಲಿದೆ. ಆದರೆ, ಇನ್ನೂ ಈ ಜಾತಿಗಳ ಕುರಿತು ಅಂತಿಮ ತೀರ್ಮಾನ ಆಗಿಲ್ಲ' ಎಂದು ವರದಿ ಹೇಳಿದೆ.

'ಪ್ರಜಾವಾಣಿ' ಪ್ರಕಟಿಸಿರುವ ಜಾತಿವಾರು ಲೆಕ್ಕಾಚಾರ ಹೀಗಿದೆ:

ವರ್ಷದ ಹಿಂದೆ, 'ವಿಜಯ ಕರ್ನಾಟಕ' ಪ್ರಕಟಿಸಿದ್ದ ವರದಿ ಹೀಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಧರ್ಮರಾಜ್, "ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಅಂಕಿ ಅಂಶಗಳು ಅಧಿಕೃತವಾಗಿ ಆಯೋಗದಿಂದ ಪಡೆದ ಮಾಹಿತಿ ಅಲ್ಲ. ಇದನ್ನು ಮಾಧ್ಯಮಗಳಿಗೆ ಯಾರು ಕೊಟ್ಟಿದ್ದಾರೆ ಎಂದು ಗೊತ್ತಿಲ್ಲ,'' ಎಂದು ತಿಳಿಸಿದ್ದರು.


       'ವಿಜಯ ಕರ್ನಾಟಕ' ವರದಿ. (ಕೃಪೆ: ವಿಕ)
'ವಿಜಯ ಕರ್ನಾಟಕ' ವರದಿ. (ಕೃಪೆ: ವಿಕ)

ಹಿನ್ನೆಲೆ:

2015ರ ಏಪ್ರಿಲ್ 11 ರಂದು ಕರ್ನಾಟಕ ಸರಕಾರ ‘ಜಾತಿವಾರು ಸಮೀಕ್ಷೆ’ಗೆ ಚಾಲನೆ ನೀಡಿತ್ತು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಲಾದ ಈ ಸಮೀಕ್ಷೆ 1.25 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಇದಕ್ಕಾಗಿ ಸರಕಾರ ಸುಮಾರು 170 ಕೋಟಿ ರೂಪಾಯಿ ಎತ್ತಿಟ್ಟಿತ್ತು. ರಾಜ್ಯದ ಪ್ರತಿ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅರಿಯುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಜತೆಗೆ, ಅವರ ಜಾತಿವಾರು ಗಣತಿಯೂ ಸಮೀಕ್ಷೆಯ ಪ್ರಮುಖ ಭಾಗವಾಗಿತ್ತು.

ಇದಕ್ಕೂ ಮೊದಲು ದೇಶದಲ್ಲಿ ಜಾತಿವಾರು ಸಮೀಕ್ಷೆ ನಡೆದಿದ್ದು 1931ರ ಜನಗಣತಿ ಸಮಯದಲ್ಲಿ. ನಂತರ ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ 1941ರಲ್ಲಿ ದೇಶದಲ್ಲಿ ಜನಗಣತಿ ನಡೆದಿರಲಿಲ್ಲ. ಸ್ವಾತಂತ್ರ್ಯದ ನಂತರ 'ಭಾರತ ಸರಕಾ'ರ ಅಸ್ಥಿತ್ವಕ್ಕೆ ಬಂದು ನಂತರ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಜಾತಿವಾರು ಅಂಕಿ ಅಂಶಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಲಾಯಿತು. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮೀಕ್ಷೆ ನಡೆದುಕೊಂಡು ಬಂದಿತ್ತು.

ದೇಶದಲ್ಲಿ ಜಾತಿ ಸಮೀಕ್ಷೆಯೊಂದನ್ನು ನಡೆಸಬೇಕು ಎಂದು ವಾಜಪೇಯಿ ಸರಕಾರ ಇದ್ದ ಕಾಲದಲ್ಲಿಯೇ ಒತ್ತಾಯ ಕೇಳಿ ಬಂದಿತ್ತು. ಮುಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿಯೂ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಜಾತಿವಾರು ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಾಗಿರಲಿಲ್ಲ. 2010ರಲ್ಲಿ ತಜ್ಞರ ಗುಂಪೊಂದು 'ದಿ ಹಿಂದೂ' ಪತ್ರಿಕೆಯಲ್ಲಿ ಬರೆದ ಪತ್ರದಲ್ಲಿ, "ಪ್ರತ್ಯೇಕ ಜಾತಿ ಸಮೀಕ್ಷೆ ಅಪಾಯಕಾರಿ. ಅದನ್ನೂ ಜನಗಣತಿ ಜತೆಗೆ ನಡೆಸಬೇಕು' ಎಂದು ಅಭಿಪ್ರಾಯಪಟ್ಟಿತ್ತು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರ ಬಂದ ನಂತರ ಪ್ರತ್ಯೇಕವಾಗಿಯೇ ಜಾತಿ ಸಮೀಕ್ಷೆಯನ್ನು ಕೈಗೆತ್ತಿಕೊಂಡಿತು. ಹೀಗಾಗಿ ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಜಾತಿ ಸಮೀಕ್ಷೆ ಇದು ಎನ್ನಿಸಿಕೊಂಡಿತು. "ಇಂತಹ ಸಮೀಕ್ಷೆಗಳು ಕಾಲಕಾಲಕ್ಕೆ ನಡೆಯಬೇಕು. ಇಲ್ಲಿ ಸಿಗುವ ಅಂಕಿ ಅಂಶಗಳು ತಳಮಟ್ಟದಲ್ಲಿ ಸರಕಾರಗಳು ರೂಪಿಸಬೇಕಾದ ಯೋಜನೆಗಳಿಗೆ ಸ್ಪಷ್ಟ ಸ್ವರೂಪವನ್ನು ನೀಡುತ್ತವೆ,'' ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞರೊಬ್ಬರು. ತಮ್ಮ ಹೆಸರನ್ನು ಗೌಪ್ಯವಾಗಿಡಲು ಬಯಸಿದ ಅವರು, "ಕರ್ನಾಟಕ ಸರಕಾರ ಜಾತಿ ಸಮೀಕ್ಷೆ ನಡೆಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದೆ. ಆದರೆ ಅದು ಸಾಮಾಜಿಕ ಮತ್ತು ಆರ್ಥಿಕ ಆಯಾಮದಲ್ಲಿ ಚರ್ಚೆ ಆಗಬೇಕು. ಸದ್ಯ ಅಂತಹ ವಾತಾವರಣ ಕಾಣಿಸುತ್ತಿಲ್ಲ,'' ಎಂದರು.

ಕಳೆದ ವರ್ಷದ ಅನಧಿಕೃತ ಸೋರಿಕೆಯಿಂದ ಹಿಡಿದು ಶನಿವಾರದ ಅಧಿಕೃತ ಮಾಹಿತಿ ಒಳಗೊಂಡ ವರದಿಗಳವರೆಗೆ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಶಗಳಲ್ಲಿ ಜಾತಿ ಲೆಕ್ಕಾಚಾರಗಳು ಮಾತ್ರವೇ ಸೋರಿಕೆಯಾಗುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇದು ಉದ್ದೇಶ ಪೂರ್ವಕ ಇರಲಿಕ್ಕಿಲ್ಲ ಎಂಬುದನ್ನು ನಂಬುವುದು ಕಷ್ಟ.