ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆನಾ?: ಡೋಂಟ್ ವರಿ; ಕೋಟಿ ವೆಚ್ಚದ ಹುಸಿ ಯೋಜನೆಗಳಿವೆ!
ಸುದ್ದಿ ಸಾಗರ

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆನಾ?: ಡೋಂಟ್ ವರಿ; ಕೋಟಿ ವೆಚ್ಚದ ಹುಸಿ ಯೋಜನೆಗಳಿವೆ!

ಒಂದು ಕಿ. ಮೀ ಸುರಂಗ ರಸ್ತೆಗೆ 600 ಕೋಟಿ ರೂಪಾಯಿ!; ಒಂದು ಕಿ. ಮೀ ಮೆಟ್ರೊ ರೈಲಿಗೆ 300 ಕೋಟಿ ರೂಪಾಯಿ!

ಹೀಗೆ ಕೋಟಿ ಕೋಟಿ ಲೆಕ್ಕದಲ್ಲಿ ರಸ್ತೆ ನಿರ್ಮಾಣ, ಮೆಟ್ರೊ ರೈಲಿನ ನಿರ್ಮಾಣ ಮಾಡುವ ಸರಕಾರ ಬೆಂಗಳೂರು ನಗರದ ಸಮೂಹ ಸಾರಿಗೆಗಳ ಪೈಕಿ ಜೀವನಾಡಿಯಂತಿರುವ ‘ಬಿಎಂಟಿಸಿ’ಗೆ 500 ಕೋಟಿ ನೀಡಲು ಹಿಂದೆ ಮುಂದೆ ನೋಡುವುದೇಕೆ? ಐಐಎಸ್‌ಸಿ, ಐಐಎಂಬಿಗಳಲ್ಲಿ ಕುಳಿತ ತಜ್ಞರು ಜನರಿಗೆ ಅಗತ್ಯ ಇರುವ, ಕಡಿಮೆ ವೆಚ್ಚದ ಯೋಜನೆಗಳ ಬದಲಿಗೆ ದುಬಾರಿ ‘ಸಾರಿಗೆ ಮತ್ತು ಸಂಚಾರಿ’ ಯೋಜನೆಗಳನ್ನು ರೂಪಿಸುವುದೇಕೆ? ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕಾಗಿ 500 ಕೋಟಿ ವೆಚ್ಚದಲ್ಲಿ ರೂಪಿಸಿದ ‘ಬಿ –ಟ್ಯ್ರಾಕ್’ ಯೋಜನೆ ದಂಡ ವಸೂಲಿಗೆ ಸೀಮಿತವಾಗಿದ್ದೇಕೆ? ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿದ್ದ ‘ಎಲ್‌ಆರ್‌ಟಿ’ ಯೋಜನೆ ನನೆಗುದಿಗೆ ಬಿದ್ದಿರುವುದೇಕೆ?

ಹೀಗೆ, ಬೆಂಗಳೂರಿನ ಸಾರಿಗೆ ಮತ್ತು ಸಂಚಾರ ವ್ಯವಸ್ಥೆಯ ಸುತ್ತ ತಳಮಟ್ಟದ ಸಂಗತಿಗಳ ಕುರಿತು ಯಾವುದೇ ಪ್ರಶ್ನೆಯನ್ನು ಹಾಕಿಕೊಳ್ಳಿ; ಉತ್ತರ ಇಷ್ಟೆ. ಮಹಾನಗರದ ಸಂಚಾರ ಮತ್ತು ಸಾರಿಗೆ ಎಂಬುದು ಇವತ್ತು ‘ಅಂತಾರಾಷ್ಟ್ರೀಯ ಮಾಫಿಯಾ’ಗಳ ಹತೋಟಿಯಲ್ಲಿದೆ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಎಸಿ ರೂಮಿನಲ್ಲಿ ಕುಳಿತ ತಜ್ಞರಿಗೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಕಾನೂನಾತ್ಮಕವಾಗಿಯೇ ಹಣ ಮಾಡುವ ದಂಧೆಯಾಗಿದೆ. ಹೀಗಾಗಿಯೇ, ಸ್ಟೀಲ್‌ ಬಿಡ್ಜ್‌ ಇರಲಿ, ಪ್ಲೈ ಓವರ್‌ಗಳಿರಲಿ, ಸುರಂಗ ಮಾರ್ಗಗಳಿರಲಿ, ಮೆಟ್ರೊ ರೈಲು ಇರಲಿ; ಕೋಟಿ ಕೋಟಿ ವೆಚ್ಚದ ಯೋಜನೆಗಳು ಜಾರಿಗೆ ಬರುತ್ತವೆ. ಹಣಕಾಸಿನ ಭಾರವನ್ನು ಮಹಾನಗರದ ಸಾಮಾನ್ಯ ವ್ಯಾಪಾರಿಯಿಂದ ಹಿಡಿದು ಮಧ್ಯಮ  ವರ್ಗದ ಜನರವರೆಗೆ ಹೊರಬೇಕಾಗಿ ಬಂದಿದೆ.

ಏನಿದು ಹೊಸ ಯೋಜನೆ?:

ಚಾಲುಕ್ಯ ವೃತ್ತದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾಗಿದ್ದ ಕಾಂಗ್ರೆಸ್ ಸರಕಾರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯೋಜನೆಯನ್ನು ಹಿಂತೆದುಕೊಂಡಿತು. ಅದರ ಬದಲಿಗೆ ಈಗ ನಾಲ್ಕು ಕಡೆಗಳಲ್ಲಿ 17. 45 ಕಿ. ಮೀ ಉದ್ದದ ಸುರಂಗ ರಸ್ತೆಗಳನ್ನು ನಿರ್ಮಿಸಲು ಹೊರಟಿದೆ. ಬೆಂಗಳೂರಿನ ಸಾರಿಗೆ ಮತ್ತು ಸಂಚಾರ ವ್ಯವಸ್ಥೆಯ ಕುರಿತು ತಳಮಟ್ಟದ ಅರಿವು ಇರುವವರಿಗೆ ಇಂತಹದೊಂದು ಯೋಜನೆ ರಾತ್ರೋರಾತ್ರಿ ರೂಪುಗೊಳ್ಳುವುದಿಲ್ಲ ಎಂಬುದು ಗೊತ್ತಿದೆ. ಈ ನಗರದಲ್ಲಿ ಸಂಚಾರ ಮತ್ತು ಸಾರಿಗೆ ಸಂಬಂಧಪಟ್ಟ ಯಾವುದೇ ಯೋಜನೆ ಇರಲಿ, ಅವುಗಳನ್ನು ರೂಪಿಸಲು ನೂರಾರು ತಜ್ಞರು, ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಅವುಗಳನ್ನು ನೆಚ್ಚಿಕೊಂಡ ಸರಕಾರದ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಅದನ್ನು ‘ಸಿಟಿಟಿಪಿ’ ಅಥವಾ ‘ಸಮಗ್ರ ಸಾರಿಗೆ ಮತ್ತು ಸಂಚಾರ ಯೋಜನೆ’ ಎಂದು ಕರೆಯಲಾಗುತ್ತದೆ.

90ರ ದಶಕದಿಂದ ಇಲ್ಲೀವರೆಗೆ ಬೆಳೆಯುತ್ತಿರುವ ಬೆಂಗಳೂರು ನಗರದ ರಸ್ತೆ ದಟ್ಟಣೆ, ಸಂಚಾರ ಸಮಸ್ಯೆಗಳಿಗೆ ಹಲವು ಪರಿಹಾರಗಳನ್ನು ಈ ಸಿಟಿಟಿಪಿ ಯೋಜನೆಗಳು ಮುಂದಿಟ್ಟಿವೆ. ನಾಚಿಕೆಗೇಡಿನ ವಿಚಾರ ಏನೆಂದರೆ, ತಜ್ಞರ ತಂಡಗಳು ನೂರಾರು ಕೋಟಿ ವೆಚ್ಚದಲ್ಲಿ ರೂಪಿಸಿದ ಈ ಭಯಂಕರ ಯೋಜನೆಗಳಲ್ಲಿ ಒಂದೂ ಸರಿಯಾದ ಫಲವನ್ನು ಕೊಟ್ಟಿಲ್ಲ. ಯೋಜನೆ ರೂಪಿಸುವುದನ್ನು, ಅಪ್‌ಡೇಟ್‌ ಮಾಡುವುದನ್ನು ಅವರೂ ನಿಲ್ಲಿಸಿಲ್ಲ.

ಜಾಣ ಕುರುಡರು:

ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿ ಬದಲಾಗುತ್ತಿದ್ದ ಸಮಯ ಅದು. ಮಧ್ಯಮ ವರ್ಗವೊಂದು ದೊಡ್ಡ ಮಟ್ಟದಲ್ಲಿ ಇಲ್ಲಿ ನೆಲೆ ಕಂಡುಕೊಂಡಿತು. ಕಾಲ್‌ ಸೆಂಟರ್‌ಗಳಿಂದ ಹಿಡಿದು ಐಟಿ- ಬಿಟಿವರೆಗೆ ಹೊಸ ತಲೆಮಾರು ಕೈತುಂಬ ಸಂಬಳ ಎಣಿಸಲು ಶುರುಮಾಡಿತು. ಪರಿಣಾಮ ಬೆಂಗಳೂರಿನ ವಾಹನಗಳ ಮಾರಾಟ ಗಗನ ಮುಟ್ಟಿತು. ಅದರ ನೇರ ಪರಿಣಾಮ ಕಂಡು ಬಂದಿದ್ದು ರಾಜಧಾನಿಯ ರಸ್ತೆಗಳಲ್ಲಿ.

ಒಂದು ಕಡೆ ಜನರ ವಲಸೆಯೂ ಹೆಚ್ಚಿತು, ನಗರದ ಬದುಕಿನ ಅವಿಭಾಜ್ಯ ಅಂಗವಾದ ಸಾರಿಗೆ ಸೌಕರ್ಯಗಳೂ ಅಗತ್ಯ ಎನಿಸಿದವು. ಸಹಜವಾಗಿಯೇ ಖಾಸಗಿ ವಾಹನ ದಟ್ಟಣೆ ಹುಟ್ಟಿಕೊಂಡಿತು. ಈ ಸಮಯದಲ್ಲಿ ಸಮೂಹ ಸಾರಿಗೆಗಳನ್ನು ಜನರ ಅಗತ್ಯದ ಮಟ್ಟಕ್ಕೆ ಇಳಿಸಬೇಕಿದ್ದ ಸರಕಾರ, ಜೆಎನ್‌ನರ್ಮ್‌ ಮತ್ತಿತರ ಯೋಜನೆಗಳ ಅಡಿಯಲ್ಲಿ ಬಿಎಂಟಿಸಿಯನ್ನು ‘ಐರಾವತ’ ಮಾಡಲು ಹೊರಟಿತು. ಇದರಲ್ಲಿ ಹಿಂದಿನ ಬಿಜೆಪಿ ಸರಕಾರದ ಕೊಡುಗೆಯೂ ಅಪಾರ.

ಇನ್ನೊಂದು ಕಡೆ, ಅಷ್ಟೊತ್ತಿಗಾಗಲೇ ಎಲ್ಲಾ ಸಮಸ್ಯೆಗಳ ಅರಿವಿದ್ದೂ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಮೆಟ್ರೊ ರೈಲು ಯೋಜನೆಗೆ ಅಂಕಿತ ಹಾಕಿ, ಅಸಹ್ಯಕರ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗೆ ಮುನ್ನಡಿ ಬರೆದಿದ್ದರು.ಈ ಸಮಯದಲ್ಲಯೇ ಲಭ್ಯವಿದ್ದ ಸಿಸಿಟಿಪಿ ಯೋಜನೆಯ ಪ್ರತಿಗಳನ್ನು ಎದುರಿಗೆ ಇಟ್ಟುಕೊಂಡು ನೋಡಿದರೆ, ಬೆಳೆಯುತ್ತಿದ್ದ ಬೆಂಗಳೂರಿನ ಸಾರಿಗೆ ಸಮಸ್ಯೆಗೆ ಪರ್ಯಾಯವಾಗಿ, ಕಡಿಮೆ ವೆಚ್ಚದಲ್ಲಿ, ವೇಗವಾಗಿ ನಿರ್ಮಿಸುವ ಹಲವು ಯೋಜನೆಗಳಿದ್ದವು. ಅದರಲ್ಲಿ ವರ್ತುಲ ರೈಲು ಯೋಜನೆ ಒಂದು ಉದಾಹರಣೆ ಅಷ್ಟೆ. ಆದರೆ, ಅವೆಲ್ಲವುಗಳ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದ ದೂರದರ್ಶಿತ್ವ ಹೊಂದಿದ ಸರಕಾರಗಳು ದುಬಾರಿ ಯೋಜನೆಗಳ ಮೊರೆ ಹೋದವು. ಇದೀಗ, ಒಂದು ದಶಕ ಕಳೆದಿದೆ; ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ.

ಇಚ್ಚಾಶಕ್ತಿಯ ಕೊರತೆ:

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆನಾ?: ಡೋಂಟ್ ವರಿ; ಕೋಟಿ ವೆಚ್ಚದ ಹುಸಿ ಯೋಜನೆಗಳಿವೆ!

ಸರಕಾರಗಳು, ಅಧಿಕಾರಿಗಳು ಮತ್ತು ತಜ್ಞರು ಯಾಕೆ ಇಂತಹ ಸಾರಿಗೆ ಯೋಜನೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ ಎಂಬುದು ಅರ್ಥವಾಗದ ವಿಸ್ಮಯವೇನಲ್ಲ. ಯಾವುದೇ ದುಬಾರಿ ಯೋಜನೆ ಜಾರಿಗೆ ಬಂದರೂ, ದೊಡ್ಡ ಮೊತ್ತದ ಟೆಂಡರ್‌ ಹಣದ ಹರಿಯುವಿಕೆ ಶುರುವಾಗುತ್ತದೆ. ಹಣದ ಹಿತಾಸಕ್ತಿಯೇ ಹೆಚ್ಚಿರುವ ಆಡಳಿತ ಇರುವಾಗ, ಜನರ ಹಿತಾಸಕ್ತಿಯನ್ನಾಗಲೀ, ವೈಜ್ಞಾನಿಕ ಆಲೋಚನೆಗಳನ್ನಾಗಲೀ ನಿರೀಕ್ಷಿಸುವುದು ಕಷ್ಟ ಕೂಡ. ಇದೇ ಹಿನ್ನೆಲೆಯಲ್ಲಿ ಸರಕಾರ ಪ್ರಸ್ತಾಪಿಸಿರುವ ಸುರಂಗ ಮಾರ್ಗದ ರಸ್ತೆ ಯೋಜನೆಯನ್ನೂ ಗಮನಿಸಬೇಕಿದೆ.

ಮುಂದೊಂದು ದಿನ ಬೆಂಗಳೂರಿಗೆ ಸುರಂಗ ಮಾರ್ಗದ ರಸ್ತೆಗಳ ಅಗತ್ಯವೇ ಇಲ್ಲ ಎಂಬುದು ಅವೈಜ್ಞಾನಿಕ. ಆದರೆ ಸಾರಿಗೆ ದಟ್ಟಣೆ ಪರಿಹಾರಕ್ಕೆ ಅನೇಕ ಬದಲಿ, ಶೀಘ್ರವಾಗಿ ಜಾರಿಗೆ ತರುವ ಹಲವು ಯೋಜನೆಗಳಿವೆ. ಮೊದಲು ಅವುಗಳನ್ನು ಜಾರಿಗೆ ತರಲಿ. ನಂತರ, ದೂರಗಾಮಿ ನೆಲೆಯಲ್ಲಿ ಎಲ್ಲಾದರೂ ಸುರಂಗ ಕೊರೆದು ರಸ್ತೆಯನ್ನೂ ನಿರ್ಮಿಸಲಿ, ರೈಲು ಹಳಿಗಳನ್ನಾದರೂ ಹಾಕಲಿ.ಅಷ್ಟಕ್ಕೂ ಇರುವ ಪರ್ಯಾಯಗಳೇನು? ಅದಕ್ಕಾಗಿ ಹೊಸತಾಗಿ ಸಂಶೋಧನೆ ಮಾಡುವ ಅಗತ್ಯವೂ ಇಲ್ಲ. ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ರೂಪಿಸಿರುವ ‘ಸಿಟಿಟಿಪಿ’ ಯಂತಹ ಯೋಜನೆ ಪ್ರತಿಗಳ ಮೇಲೆ ಕಣ್ಣಾಡಿಸಿದರೆ ಸಾಕು.

ಬೆಂಗಳೂರಿನ ಸಂಚಾರ, ಸಾರಿಗೆ ಸಮಸ್ಯೆಗೆ ಪರಿಹಾರಗಳು ಕಾಣಿಸುತ್ತವೆ. ಸದ್ಯ ಮಾಡಬೇಕಿರುವ ಕೆಲಸ ಏನೆಂದರೆ; ಲಭ್ಯ ಇರುವ ಈ ಯೋಜನೆಗಳ ಅಧ್ಯಯನ ವರದಿಗಳನ್ನು ಯಾರಾದರೂ ಸಚಿವ ಕೆ. ಜೆ. ಜಾರ್ಜ್‌ ಅವರಿಗೆ ಓದಿ ಹೇಳಿ, ಅರ್ಥ ಮಾಡಿಸಬೇಕಿರುವುದು.