ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?
ಸುದ್ದಿ ಸಾಗರ

ಬೆತ್ತಲೆ ಪ್ರತಿಭಟನೆಗೆ ಸೊಪ್ಪು ಹಾಕದ ‘ಪ್ರಧಾನ ಸೇವಕ’; ರೈತರ ಸಮಸ್ಯೆಗೆ ಯಾಕಿಲ್ಲ ಬೆಲೆ?

ಕರ್ನಾಟಕದಲ್ಲಿ ದಿಡ್ಡಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಅಂದು ಪ್ರತಿಕ್ರಿಯೆ ನೀಡಿದ್ದ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ "ನಾವೇನಾದರೂ ಬೆತ್ತಲೆ ಪ್ರತಿಭಟನೆ ಮಾಡಲು ಹೇಳಿದ್ದೆವಾ?” ಎಂಬ ಬೇಜವಾಬ್ದಾರಿ ನಡವಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು.

ಈ ಸಂದರ್ಭ ನಡೆದ ಮಡಿಕೇರಿ ಚಲೋದಲ್ಲಿ ಮಾತನಾಡಿದ್ದ ಹೋರಾಟಗಾರ ನೂರ್ ಶ್ರೀಧರ್ "ಬೆತ್ತಲೆ ಪ್ರತಿಭಟನೆ ಅಸಹಾಯಕತೆಯ ಪರಮಾವಧಿ," ಎಂದಿದ್ದರು. ಇದೇ ಅಸಹಾಯಕತೆಯ ಪರಮಾವಧಿಗೆ ತಮಿಳುನಾಡು ರೈತರೀಗ ಬಂದಿದ್ದಾರೆ.

ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನಿಮಂತ್ರಿ ನಿವಾಸದ ಆವರಣ ಅಸಹಾಯಕ ಬೆತ್ತಲೆ ಪ್ರತಿಭಟನೆಗೆ ಸೋಮವಾರ ಸಾಕ್ಷಿಯಾಯಿತು. ಜತೆಗೆ ಈ ಬಾರಿ ಬಿಜೆಪಿ 'ಬೆತ್ತಲೆ ಪ್ರತಿಭಟನೆ ತಮಿಳುನಾಡಿಗೆ ನಾಚಿಕೆಗೇಡು' ಎಂಬ ಹೇಳಿಕೆ ನೀಡುವ ಮೂಲಕ ತಾನೂ ಅಷ್ಟೇ ಪ್ರಮಾಣದ ಹೊಣೆಗೇಡಿ ಎಂದು ತೋರಿಸಿಕೊಂಡಿದೆ.

ಕಳೆದ ಹಲವು ದಿನಗಳಿಂದ ಬರ ಪರಿಹಾರಕ್ಕೆ ಒತ್ತಾಯಿಸಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಮೈದಾನದಲ್ಲಿ ತಮಿಳುನಾಡು ರೈತರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಮಾರ್ಚ್ 14ರಂದು ಆರಂಭವಾದ ಪ್ರತಿಭಟನೆ 28 ದಿನಗಳನ್ನು ಪೂರೈಸಿದರೂ ಯಾವುದೇ ರೀತಿಯಲ್ಲಿ ಫಲಪ್ರದವಾಗಿಲ್ಲ.

ವಿನೂತನ ಪ್ರತಿಭಟನೆ:

ವಿನೂತನ ಪ್ರತಿಭಟನೆ ನಡೆಸಿದ ರೈತರು 
ವಿನೂತನ ಪ್ರತಿಭಟನೆ ನಡೆಸಿದ ರೈತರು 

ಆರಂಭದಿಂದಲೇ ತಮಿಳುನಾಡಿನ ರೈತ ಮಹಿಳೆಯರು ಮತ್ತು ಪುರುಷರು ದೆಹಲಿಯಲ್ಲಿ ಸರಣಿ ವಿನೂತನ ಪ್ರತಿಭಟನೆಗಳಿಗೆ ಇಳಿದಿದ್ದರು. ಆತ್ಮಹತ್ಯೆ ಮಾಡಿಕೊಂಡ ರೈತರದ್ದು ಎನ್ನಲಾದ ತಲೆಬುರುಡೆಗಳನ್ನು ಹಿಡಿದುಕೊಂಡು ಕನಿಷ್ಟ ಉಡುಪು ತೊಟ್ಟು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದರು. ಹೀಗಿದ್ದೂ ಕೇಂದ್ರದಲ್ಲಿ ಆಡಳಿತ ನಡೆಸುವವರ ಗಮನ ಸೆಳೆಯಲು ಈ ಪ್ರತಿಭಟನೆ ವಿಫಲವಾಗಿತ್ತು.

ಕೊನೆಗೆ ಹಲವು ವಿನೂತನ ಪ್ರತಿಭಟನೆಯ ಹಾದಿಗಳನ್ನು ಕಂಡುಕೊಂಡರು. ಮರವೇರಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು. ಬಾಯಲ್ಲಿ ಹಾವು, ಇಲಿಗಳನ್ನು ಕಚ್ಚಿಕೊಂಡು ನಮಗೆ ತಿನ್ನಲು ಇದಷ್ಟೇ ಬಾಕಿ ಉಳಿದಿದ್ದು ಎನ್ನುವ ಸಂದೇಶ ನೀಡಿದರು. ಅಣಕು ಶವಯಾತ್ರೆಗಳನ್ನು ನಡೆಸಿದರು. ಕುತ್ತಿಗೆಗೆ ನೇಣಿನ ಕುಣಿಕೆಗಳನ್ನು ಹಾಕಿಕೊಂಡರು. ಅರ್ಧ ತಲೆ, ಅರ್ಧ ಗಡ್ಡ ಬೋಳಿಸಿ ಗಮನ ಸೆಳೆಯುವ ಯತ್ನ ನಡೆಸಿದರು. ಕೈ ತುಂಡರಿಸಿಕೊಂಡರು. ಆದರೆ ಯಾವುದೂ ಕೇಂದ್ರ ಸರಕಾರದ ಗಮನ ಸೆಳೆಯಲಿಲ್ಲ.

ಪ್ರತಿಭಟನಾ ಸ್ಥಳಕ್ಕೆ ತಮಿಳುನಾಡು ಸ್ಟಾರ್ ರಾಜಕಾರಣಿಗಳಾದ ವೈಕೋ (ವೈಯಪುರಿ ಗೋಪಾಲಸ್ವಾಮಿ), ಡಿಎಂಕೆಯ ಎಂಕೆ ಸ್ಟಾಲಿನ್ ಹೋಗಿ ಬಂದರು. ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಜಂತರ್ ಮಂತರ್ ಗೆ ತೆರಳಿ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದರು. ಆದರೆ ಅವ್ಯಾವೂ ಕೆಲಸಕ್ಕೆ ಬಾರಲಿಲ್ಲ. ಪ್ರತಿಭಟನೆ ನಡೆಯುತ್ತಲೇ ಇತ್ತು.

ರೈತರ ಜತೆ ಸಮಾಲೋಚನೆ ನಡೆಸಿ ವಿತ್ತ ಸಚಿವ ಅರುಣ್ ಜೇಟ್ಲಿಗೆ ಮನವಿ ಪತ್ರ ನೀಡಿದ ನಟ ಪ್ರಕಾಶ್ ರೈ ಮತ್ತು ವಿಶಾಲ್ ಇದ್ದ ನಿಯೋಗ
ರೈತರ ಜತೆ ಸಮಾಲೋಚನೆ ನಡೆಸಿ ವಿತ್ತ ಸಚಿವ ಅರುಣ್ ಜೇಟ್ಲಿಗೆ ಮನವಿ ಪತ್ರ ನೀಡಿದ ನಟ ಪ್ರಕಾಶ್ ರೈ ಮತ್ತು ವಿಶಾಲ್ ಇದ್ದ ನಿಯೋಗ

ಕೊನೆಗೊಂದು ದಿನ ದೇಶದ ಗಮನ ಸೆಳೆಯುವ ಬೆಳವಣಿಗೆಯಲ್ಲಿ ಜಂತರ್ ಮಂತರ್ ಗೆ ತಮಿಳಿನ ಖ್ಯಾತ ನಟ ವಿಶಾಲ್ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಕೇಂದ್ರ ಹಣಕಾಸು ಸಚಿವರ ಬಳಿಗೆ ಪ್ರಕಾಶ್ ರೈ ಮತ್ತು ವಿಶಾಲ್ ಅವರಿದ್ದ ನಿಯೋಗ ತೆರಳಿ ತಮಿಳುನಾಡು ರೈತರ ಪರವಾಗಿ ಮನವಿ ಸಲ್ಲಿಸಿ ಬಂದರು. ಆದರೆ ಕಾಲ ಮೇಲೆ ಕಾಲು ಹಾಕಿಕೊಂಡು ಮನವಿಯ ಮೇಲೆ ಕಣ್ಣಾಡಿಸಿ ಪಕ್ಕಕ್ಕೆ ಎತ್ತಿಟ್ಟರು ಹಣಕಾಸು ಸಚಿವ ಅರುಣ್ ಜೇಟ್ಲಿ.

ಗಮನ ಸೆಳೆಯುವ ಕೊನೆಯ ಯತ್ನ:

ನಂತರ ಪ್ರಧಾನ ಮಂತ್ರಿಗಳನ್ನು ಭೇಟಿಯಾಗುವ ವಿಫಲ ಯತ್ನವೊಂದನ್ನು ರೈತರು ನಡೆಸಿದರು. "ರೈತ ಪ್ರತಿನಿಧಿಗಳಿಂದ ಮನವಿ ಪತ್ರವನ್ನು ಸ್ವೀಕರಿಸಲು ಪ್ರಧಾನಮಂತ್ರಿ ಕಾರ್ಯಾಲಯ ಒಪ್ಪಿಕೊಂಡಿತ್ತು. ಆದರೆ ಭೇಟಿಯಾಗಲು ಸಮಯ ನೀಡಲೇ ಇಲ್ಲ,” ಎನ್ನುತ್ತಾರೆ ಸುಪ್ರೀಂ ಕೋರ್ಟಿನ ವಕೀಲರಾದ ಮನೋಜ್ ಸೆಲ್ವರಾಜ್.

ಕಳೆದ ಕೆಲವು ವಾರಗಳಿಂದ ರೈತರಿಗೆ ನ್ಯಾಯಕೊಡಿಸಲು ಅವರು ಹೋರಾಡುತ್ತಿದ್ದಾರೆ. ಹೀಗೆ ಪ್ರಧಾನಿಯನ್ನು ಭೇಟಿಯಾಗಲು ಅವಕಾಶವೇ ಸಿಗದಿದ್ದಾಗ ಅಸಹಾಯಕರಾಗಿ ಪ್ರಧಾನಿ ನಿವಾಸದ ಮುಂದೆಯೇ ಬೆತ್ತಲೆಯಾಗಿ ನೆಲದ ಮೇಲೆ ಉರುಳಾಡಿದರು.

(ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್)
(ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್)

ಇದಕ್ಕೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ತಿರುಪತಿ ನಾರಾಯಣ ಬೆತ್ತಲೆ ಪ್ರತಿಭಟನೆಯನ್ನು ಟೀಕಿಸಿದ್ದಾರೆ. “ಈ ರೀತಿ ವರ್ತನೆ ಮಾಡುವುದು ಸರಿಯಲ್ಲ. ಇದು ತಮಿಳುನಾಡಿಗೆ ಅವಮಾನ. ಕೃಷಿ ರಾಜ್ಯದ ವಿಷಯ, ತಮಿಳುನಾಡು ಸರಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು; ಅಲ್ಲಿನ ಸರಕಾರ ಸಾಲ ಮನ್ನಾ ಮಾಡಬೇಕು," ಎಂದು ಹೇಳಿ ಜಾರಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ 'ಫ್ರಂಟ್ ಲೈನ್' ನಿಯತಕಾಲಿಕೆಯ ಸಹಾಯಕ ಸಂಪಾದಕ ಆರ್.ಕೆ ರಾಧಾಕೃಷ್ಣನ್, “ಬಿಜೆಪಿಗೆ ತಮಿಳುನಾಡಿನಲ್ಲಿ ಯಾವುದೇ ನೆಲೆ ಇಲ್ಲ. ಹಾಗಾಗಿ ಪ್ರತಿಭಟನೆಗಳಿಗೆ ಸೊಪ್ಪು ಹಾಕುತ್ತಿಲ್ಲ. ಯಾವತ್ತೂ ಅವರು (ಬಿಜೆಪಿ) ನಡೆದುಕೊಳ್ಳುವುದೇ ಹೀಗೆ. ಸರಕಾರಕ್ಕೆ ನಿಭಾಯಿಸಲು ಸಾಧ್ಯವಿಲ್ಲದಿದ್ದರೂ ಉತ್ತರ ಪ್ರದೇಶದಲ್ಲಿ ಅವರದ್ದೇ ಸರಕಾರ 35,000 ಕೋಟಿ ಸಾಲ ಮನ್ನಾ ಮಾಡಿದೆ. ಇದೇ ಪ್ರತಿಭಟನೆಗೆ ಗುಜರಾತಿನ ರೈತರು ಸೇರಿಕೊಂಡಿದ್ದರೆ ಬಿಜೆಪಿಯ ಪ್ರತಿಕ್ರಿಯೆಯೇ ಭಿನ್ನವಾಗಿರುತ್ತಿತ್ತು,” ಎಂದು ಸಿಎನ್ಎನ್ ನ್ಯೂಸ್ 18ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ರೈತರ ಬೇಡಿಕೆಗಳೇನು?

ಕಳೆದ ಮುಂಗಾರು ಹಂಗಾಮಿನಲ್ಲಿ ಶೇಕಡಾ 62ರಷ್ಟು ಮಳೆ ಕೊರತೆಯಾಗಿದೆ. ಕಳೆದ 140 ವರ್ಷಗಳಲ್ಲಿ ಬಿದ್ದ ಕನಿಷ್ಠ ಮಳೆ ಇದು. ಜತೆಗೆ ವಾರ್ಧಾ ಸೈಕ್ಲೋನಿನಿಂದ ರೈತರ ಪೂರ್ತಿ ಬೆಳೆನಷ್ಟವಾಗಿದೆ. ಇದರಿಂದ ಸಾಲಕಟ್ಟಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸುಮಾರು 20,000 ಕೋಟಿ ಬರ ಪರಿಹಾರ ಹಣ ಮಂಜೂರು ಮಾಡಿ ಬೆಳೆ ನಷ್ಟ ಪರಿಹಾತ ನೀಡಬೇಕು. ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಕಾವೇರಿ ನಿರ್ವಹಣಾ ಮಂಡಳಿ ನೇಮಕ ಮಾಡಬೇಕು ಎಂಬ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ.

ಕಳೆದ ವಾರ ಅಪರೂಪದ ಬೆಳವಣಿಗೆಯಲ್ಲಿ ಮದ್ರಾಸ್ ಹೈಕೋರ್ಟ್ ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ ಸಾಲ ಮನ್ನಾ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಇದಕ್ಕೆ ತೃಪ್ತರಾಗದ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಸಾಲವೂ ಮನ್ನಾ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸಾಮಾನ್ಯವಾಗಿ ದೇಶದ ಪ್ರತಿ ನಾಗರಿಕನ ಕೂಗಿಗೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಾರೆ ಎಂಬ ಭಾವನೆ ಜನರಲ್ಲಿದೆ. ಇದಕ್ಕೆ ಉದಾಹರಣೆಯಾಗಿ ಆಗಾಗ ಪ್ರಧಾನಿಗೆ ಪತ್ರ ಬರೆದ ಬಾಲಕ, ಬಾಲಕಿಯ ಪತ್ರದಿಂದ ಸಮಸ್ಯೆ ಬಗೆಹರಿಸಿದ ಪ್ರಧಾನಿ, ಮದುವೆ ಆಮಂತ್ರಣ ಮೆಚ್ಚಿ ಟ್ವೀಟ್ ಮಾಡಿದ ಮೋದಿ ಎಂಬೆಲ್ಲಾ ಸುದ್ದಿಗಳು ಬರುತ್ತಿರುತ್ತವೆ. ಅದೇ ಇಂಥಹದ್ದೊಂದು ಅಸಹಾಯಕ ಪ್ರತಿಭಟನೆ ತನ್ನ ನಿವಾಸದ ಸುತ್ತವೇ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಲಿಲ್ಲ. ಕನಿಷ್ಟ ಕರೆದು ಮಾತನಾಡುವ ಔದಾರ್ಯತೆಯನ್ನೂ ತೋರಲಿಲ್ಲ. ಪರಿಣಾಮ 'ವಿಶ್ವಗುರು' ಆಗಲು ಹೊರಟು ಭಾರತದ ರಾಜಧಾನಿ ದೆಹಲಿಯ ಪ್ರಧಾನಿ ನಿವಾಸದ ಆವರಣ 'ಅಸಹಾಯಕತೆಯ ಪರಮಾವಧಿ' ಬೆತ್ತಲೆ ಪ್ರತಿಭಟನೆಗೆ ಸಾಕ್ಷಿಯಾಯಿತು.