samachara
www.samachara.com
ಪೊಲೀಸರಿಗೆ 'ಎಚ್ಚರಿಕೆ ಗಂಟೆ': ಸೆನ್ಸೇಶನ್ ಪ್ರಕರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು
ಸುದ್ದಿ ಸಾಗರ

ಪೊಲೀಸರಿಗೆ 'ಎಚ್ಚರಿಕೆ ಗಂಟೆ': ಸೆನ್ಸೇಶನ್ ಪ್ರಕರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

ಸತ್ಯಂ ಬಾಬು;

ಆಂಧ್ರ ಪ್ರದೇಶದ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವಕ. ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು. ಸುದೀರ್ಘ 10 ವರ್ಷಗಳ ಕಾಲ ನಡೆದ ನ್ಯಾಯಾಂಗದ ಹೋರಾಟದ ನಂತರ ಕಳೆದ ಮಾ. 31ರಂದು ಆಂಧ್ರ ಪ್ರದೇಶ ಹೈ  ಕೋರ್ಟ್ ಈತನನ್ನು ದೋಷಮುಕ್ತಗೊಳಿಸಿತು.

ಅಷ್ಟೇ ಅಲ್ಲ, ನ್ಯಾಯಮೂರ್ತಿಗಳಾದ ಸಿ. ವಿ. ನಾಗಾರ್ಜುನ ರೆಡ್ಡಿ ಮತ್ತು ಎಂ. ಎಸ್. ಕೆ. ಜೈಶ್ವಾಲ್ ನ್ಯಾಯಪೀಠ ಈತನ ಬದುಕಿನ ಅಮೂಲ್ಯ ವರ್ಷಗಳನ್ನು ಅನ್ಯಾಯವಾಗಿ ಜೈಲಿನಲ್ಲಿ ಕಳೆಯುವಂತೆ ಮಾಡಿದ ಪೊಲೀಸರಿಗೆ 1 ಲಕ್ಷ ರೂಪಾಯಿ ಪರಿಹಾರವನ್ನೂ ನೀಡುವಂತೆ ಆದೇಶ ನೀಡಿದೆ. ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ತನಿಖೆಗೆ ನಡೆಸಲು ಸಮಿತಿಯೊಂದನ್ನು ರಚಿಸಲು ಸೂಚಿಸಿದೆ. ಈ ಮೂಲಕ ನ್ಯಾಯದಾನ ಮಾಡುವುದು ಮಾತ್ರವಲ್ಲ, ಕ್ರಿಮಿನಲ್ ಜಸ್ಟಿಸ್ ವ್ಯವಸ್ಥೆಯಲ್ಲಿ ಅನ್ಯಾಯಕ್ಕೊಳಗಾದರೆ ಸೂಕ್ತ ಪರಿಹಾರ ಭರವಸೆಯನ್ನೂ ನೀಡುವ ಮೂಲಕ ನ್ಯಾಯಾಲಯ ಅಪರೂಪದ ಉದಾಹರಣೆಯೊಂದನ್ನು ಒದಗಿಸಿಕೊಟ್ಟಿದೆ.

ಅಪರೂಪದಲ್ಲಿ ಅಪರೂಪ:

ನಮ್ಮ ದೇಶದ ಕ್ರಿಮಿನಲ್ ಜಸ್ಟಿಸ್ ವ್ಯವಸ್ಥೆಯಲ್ಲಿ ಅಪರಾಧಗಳ ತನಿಖೆಯನ್ನು ನಡೆಯುವ ಅಧಿಕಾರ ಇರುವುದು ಪೊಲೀಸರಿಗೆ. ಇವರು ಪ್ರಕರಣದ ತನಿಖೆ ನಡೆಸಿದ ನಂತರ ನ್ಯಾಯಾಲಯದ ಮುಂದೆ ಆರೋಪ ಪಟ್ಟಿಯನ್ನು ಮುಂದಿಡುತ್ತಾರೆ. ನ್ಯಾಯಾಲಯ ಅದನ್ನು ಪರಿಶೀಲಿಸಿದ ನಂತರ ಅಂತಿಮ ತೀರ್ಪು ನೀಡುತ್ತದೆ. ಒಂದು ವೇಳೆ, ಕೆಳಹಂತದ ನ್ಯಾಯದಾನದ ಕುರಿತು ಅಸಮಾಧಾನವಿದ್ದರೆ ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಬಹುತೇಕ ಪ್ರಕರಣಗಳಲ್ಲಿ ಸಾಕಷ್ಟು ವರ್ಷ ನ್ಯಾಯಾಂಗ ಹೋರಾಟ ನಡೆಯುತ್ತವಾದರೂ ಅಂತಿಮವಾಗಿ ಆರೋಪಿಗಳು ದೋಷಮುಕ್ತಗೊಂಡು ಹೊರಬರುತ್ತಾರೆ. ಅಷ್ಟರೊಳಗಾಗಿ ಅವರು ಜೈಲಿನಲ್ಲಿಯೇ ಸಹಜ ಬದುಕನ್ನು ಕಳೆದುಕೊಂಡಿರುತ್ತಾರೆ. ಪೊಲೀಸರ ತನಿಖಾ ವ್ಯವಸ್ಥೆಯ ಲೋಪಗಳು ಮುಂದುವರಿಯುತ್ತಲೇ ಇರುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ತನಿಖೆಯಲ್ಲಿ ಲೋಪಗಳಾದರೆ ಪೊಲೀಸರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಆದರೆ ನಮ್ಮಲ್ಲಿ ಅಂತಹ ವ್ಯವಸ್ಥೆ ಅತ್ಯಂತ ಸೀಮಿತವಾಗಿತ್ತು.

ಹೀಗಿರುವಾಗಲೇ, ಹೈದ್ರಾಬಾದಿನ ಹೈಕೋರ್ಟ್‌ ನೀಡಿರುವ ಆದೇಶ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಮಾದರಿ ಎನ್ನಿಸಿಕೊಂಡಿದೆ.

ಏನಿದು ಪ್ರಕರಣ?:

ಹತ್ತು ವರ್ಷಗಳ ಹಿಂದೆ ವಿಜಯವಾಡದ ಮಹಿಳಾ ವಸತಿ ನಿಲಯವೊಂದರಲ್ಲಿ ಫಾರ್ಮಸಿ ಓದುತ್ತಿದ್ದ 17 ವರ್ಷದ ಆಯೇಶಾ ಮೀರಾ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿತ್ತು. ಭಾರಿ ಸದ್ದು ಮಾಡಿದ ಪ್ರಕರಣದಲ್ಲಿ 'ರಾಜಕೀಯ ಪ್ರಭಾವ ಹೊಂದಿದ ಕುಟುಂಬ' ಸದಸ್ಯರ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ಫಾಲೋ ಅಪ್ ವರದಿಗಳಾಗಿದ್ದವು. ಒತ್ತಡಕ್ಕೆ ಬಿದ್ದ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದರು. ಕೊನೆಯಲ್ಲಿ ಲಾರಿ ಕ್ಲೀನರ್ ಆಗಿದ್ದ ಸತ್ಯಂ ಬಾಬುವನ್ನು ಆರೋಪಿಯಾಗಿಸುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಇಡೀ ಪ್ರಕರಣದಲ್ಲಿ ಪೊಲೀಸರು ಸತ್ಯಂ ಬಾಬು ವಿರುದ್ಧ ಡಿಎನ್‌ಎ ಹಾಗೂ ಕೈ ಬರಹದ ಸಾಕ್ಷಿಗಳನ್ನು ಮುಂದಿಟ್ಟಿದ್ದರು. ಸುಮಾರು 40 ಜನ ಯುವತಿಯರಿದ್ದ ವಸತಿ ನಿಲಯದಲ್ಲಿ ಒಬ್ಬೇ ಒಬ್ಬರು 'ಐ ವಿಟ್ನೆಸ್‌'ಗಳಿರಲಿಲ್ಲ ಎಂಬುದು ಗಮನ ಸೆಳೆಯುವಂತಿತ್ತು.

ಪ್ರಕರಣದಲ್ಲಿ ಪೊಲೀಸರು 'ರಾಜಕೀಯ ಪ್ರಭಾವ' ಹಿಂದಿರುವ ಕುಟುಂಬದ ಸದಸ್ಯರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಸತ್ಯಂ ರಾಜುವನ್ನು ಬಲಿಪಶು ಮಾಡಿದ್ದಾರೆ ಎಂದು ಟೀಕೆಗಳು ಕೇಳಿಬಂದಿದ್ದವು. ಕೊಲೆಯಾದ ಯುವತಿಯ ತಾಯಿ ಕೂಡ ಪೊಲೀಸರಿಗೆ 'ನಿಜವಾದ ಅಪರಾಧಿ'ಗಳನ್ನು ಹಿಡಿಯಿರಿ ಎಂದು ಬಹಿರಂಗವಾಗಿಯೇ ಮನವಿ ಮಾಡಿಕೊಂಡಿದ್ದರು. ಆದರೆ ಪೊಲೀಸರು ಮೀರಾ ಕೊಲೆ ಪ್ರಕರಣದಲ್ಲಿ ರಾಜುವನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮೇಲಾಗಿ ಆತನ ಮೇಲೆ ಇನ್ನೂ 8 ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು 'ಫಿಕ್ಸ್' ಮಾಡಿದರು. ಇದರ ವಿರುದ್ಧ ಹಿರಿಯ ವಕೀಲ ಬೊಜ್ಜ ತಾರಕಮ್ ಎಂಬುವವರು ಕೆಳ ನ್ಯಾಯಾಲಯದಲ್ಲಿ ನ್ಯಾಯಾಂಗ ಹೋರಾಟಕ್ಕೆ ಇಳಿದರು. ಆದರೆ 2010ರ ಡಿಸೆಂಬರ್‌ನಲ್ಲಿ ನ್ಯಾಯಾಲಯ ರಾಜುವನ್ನು ಅಪರಾಧಿ ಎಂದು ಘೋಷಿಸಿತು. ಮೀರಾ ಕೊಲೆ ಪ್ರಕರಣದಲ್ಲಿ ಹೊರಗೆ ನ್ಯಾಯಕ್ಕಾಗಿ ಮೊರೆತ ಕೇಳಿಬರುತ್ತಲೇ ಇದ್ದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿತು ಎಂಬ ಭಾವನೆ ಮೂಡುವಂತೆ ಮಾಡಲಾಯಿತು.

ಅದಾದ 6 ವರ್ಷಗಳ ನಂತರ 2016ರ ಅಕ್ಟೋಬರ್ ತಿಂಗಳಿನಲ್ಲಿ ಸತ್ಯಂ ಬಾಬು ಪರವಾಗಿ ಹೈದ್ರಾಬಾದ್‌ನ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಯಿತು. ಈ ಸಮಯದಲ್ಲಿ ಬಾಬು ಪರವಾಗಿ ನ್ಯಾಯ ಮಂಡಿಸಿದ ವಕೀಲ ತಾರಕಮ್ ಸಾವನ್ನಪ್ಪಿದ್ದರು. ಮಾನವ ಹಕ್ಕುಗಳ ವಕೀಲರಾದ ವಸುಧಾ ನಾಗರಾಜ್ ಮತ್ತು ವಿ. ಪಟ್ಟಾಭಿ ವಾದಿಸಿದರು. ಕೊನೆಗೆ, ಪೊಲೀಸರ ತನಿಖೆಯಲ್ಲಿ ಇರುವ ನ್ಯೂನತೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅವರು ಸಫಲರಾದರು.

ಹಿನ್ನೆಲೆಯಲ್ಲಿ, ನ್ಯಾಯಾಲಯ ಸತ್ಯಂ ಬಾಬುವನ್ನು ಆರೋಪಗಳಿಂದ ಮುಕ್ತಗೊಳಿಸಿತು. ಮಾತ್ರವಲ್ಲ, ತನ್ನನ್ನು ಅನ್ಯಾಯವಾಗಿ ಜೈಲಿನಲ್ಲಿ ಕೊಳೆಯುವಂತೆ ಮಾಡಿರುವ ಪೊಲೀಸರ ವಿರುದ್ಧ ಕಾನೂನು ಸಮರ ನಡೆಸಲು ಅನುವು ಮಾಡಿಕೊಟ್ಟಿತು. ಪರಿಹಾರ ಹಣವನ್ನು ಕೊಡುವಂತೆ ಪೊಲೀಸರಿಗೆ ಸೂಚಿಸಿತು. ಈ ಮೂಲಕ ಬೇಕಾಬಿಟ್ಟಿ ತನಿಖೆ, ನಿಜವಾದ ಆರೋಪಿಗಳ ರಕ್ಷಣೆಗೆ ಪಣ ತೊಟ್ಟವರಂತೆ ನಿರಪರಾಧಿಗಳನ್ನು ಜೈಲಿಗೆ ನೂಕುವ ಪೊಲೀಸರಿಗೆ ಪಾಠವನ್ನು, ಎಚ್ಚರಿಕೆಯನ್ನೂ ನ್ಯಾಯಾಲಯ ಈ ಪ್ರಕರಣದಲ್ಲಿ ನೀಡಿದೆ.

ಸೆನ್ಸೇಶನ್ ಪ್ರಕರಣ ಇದು: 

ಸುಮಾರು ಹತ್ತು ವರ್ಷಗಳ ಅಂತರದಲ್ಲಿ ಆಂಧ್ರ ಪ್ರದೇಶದಲ್ಲಿ ನಿರಂತರ ಕಾವು ಕಾಯ್ದುಕೊಂಡ ಬಂದ ಪ್ರಕರಣ ಇದು. ಅರುಶಿ ತಲ್ವಾರ್‌ ಪ್ರಕರಣದಷ್ಟೆ ತಿರುವುಗಳನ್ನು ಇದೂ ಕೂಡ ಹೊಂದಿದೆ. ಆದರೆ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ನಡೆದ ಪ್ರಕರಣ ಇದು ಎಂಬ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯನ್ನು ಇದು ಮಾಡಲಿಲ್ಲ, ಅಷ್ಟೆ.