samachara
www.samachara.com
ವಾರ್ ಆನ್ ಟೆರರ್: 'ಹಿಂದೂ ಭಯೋತ್ಪಾದಕ'ರ ಬಗ್ಗೆ ಎನ್‌ಐಎಗೆ ಯಾಕೆ ಈ ಪಾಟಿ ಕಕ್ಕುಲಾತಿ?
ಸುದ್ದಿ ಸಾಗರ

ವಾರ್ ಆನ್ ಟೆರರ್: 'ಹಿಂದೂ ಭಯೋತ್ಪಾದಕ'ರ ಬಗ್ಗೆ ಎನ್‌ಐಎಗೆ ಯಾಕೆ ಈ ಪಾಟಿ ಕಕ್ಕುಲಾತಿ?

'ಭಯೋತ್ಪಾದನೆ ದೇಶದ ಬಹುದೊಡ್ಡ ಸಮಸ್ಯೆ'...

ಅದರಲ್ಲೂ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದಿಲ್ಲೊಂದು ಕಾರಣಕ್ಕೆ 'ಭಯೋತ್ಪಾದನೆ' ಸದ್ದು ಮಾಡುತ್ತಲೇ ಇದೆ.

ನೋಟು ಅಮಾನ್ಯೀಕರಣದಂತಹ ಆರ್ಥಿಕ ಹಿನ್ನೆಲೆಯ ವಿಚಾರ ಬಂದಾಗಲೂ, ಭಯೋತ್ಪಾದನೆಯನ್ನು ತೊಡೆಯಲು ನೋಟ್ ಬ್ಯಾನ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಜನರ ಮುಂದಿಡಲಾಗಿತ್ತು. ಸದ್ಯ ಇಂಡೋ- ಬಾಂಗ್ಲಾ ಮಾತುಕತೆಯ ಸಮಯದಲ್ಲಿಯೂ ಭಯೋತ್ಪಾದನೆಯ ವಿರುದ್ಧ ಜಂಟಿ ಹೋರಾಟದ ಮಾತುಗಳು ಕೇಳಿ ಬರುತ್ತಿವೆ.

ಭಯೋತ್ಪಾದನೆ ಎಂಬುದು ಪ್ರಮುಖ ವಿಚಾರ ಅಂತ ಪರಿಗಣಿಸಿದ ಮೇಲೆ, ಸ್ವಾಮಿ ಅಸಿಮಾನಂದ ತರಹದ ಆರೋಪಿಗಳಿಗೆ ಜಾಮೀನು ಯಾಕೆ ಸಿಗುತ್ತಿದೆ?  ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಯಾಕೆ ಇಂತವರ ಜಾಮೀನು ಅರ್ಜಿಯನ್ನು ಪ್ರಸ್ನಿಸುತ್ತಿಲ್ಲ? ಭಯೋತ್ಪಾದನೆ ವಿಚಾರಕ್ಕೆ ಬಂದರೆ, ಹಿಂದೂ ಭಯೋತ್ಪಾದನೆ ಮತ್ತು ಮುಸ್ಲಿಂ ಭಯೋತ್ಪಾದನಾ ಪ್ರಕರಣಗಳ ಆರೋಪಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆಯೇ? ಕೇಂದ್ರದಲ್ಲಿ ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿ ಸರಕಾರ, 'ಹಿಂದೂ ಭಯೋತ್ಪಾದಕರು' ಬಗ್ಗೆ ಮೃದು ನಿಲುವು ತೆಗೆದುಕೊಳ್ಳುವಂತೆ ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರುತ್ತಿದೆಯಾ?

ದೇಶಾದ್ಯಂತ ನಡೆದ 7 'ಬಾಂಬ್ ಸ್ಫೋಟ' ಪ್ರಕರಣಗಳ ತನಿಖೆ, ವಿಚಾರಣೆಯಲ್ಲಿ ಎನ್‌ಐಎ ತೆಗೆದುಕೊಳ್ಳುತ್ತಿರುವ ನಿಲುವು ಇಂತಹ ಪ್ರಶ್ನೆಗಳನ್ನು ಸಹಜವಾಗಿಯೇ ಹುಟ್ಟು ಹಾಕಿವೆ.

ಮೃದು ದೋರಣೆ:

ಮೇ 18, 2007ರಲ್ಲಿ ಹೈದ್ರಾಬಾದಿನ ಮಕ್ಕಾ ಮಸೀದಿಯಲ್ಲಿ ಕಚ್ಚಾ ಬಾಂಬ್‌ ಒಂದು ಸ್ಫೋಟಗೊಂಡಿತ್ತು. ಘಟನೆಯಲ್ಲಿ 9 ಜನ ಸಾವನ್ನಪ್ಪಿದ್ದರೆ 58 ಜನ ಗಾಯಗೊಂಡಿದ್ದರು. ಪ್ರಕರಣ ತನಿಖೆ ಕೈಗೊಂಡ ನಂತರ ದೇಶದಲ್ಲಿ ಭಯೋತ್ಪಾದನೆಯನ್ನು ಮುಸ್ಲಿಂ ಸಂಘಟನೆಗಳು ಮಾತ್ರವೇ ನಡೆಸುತ್ತಿಲ್ಲ; ಬದಲಿಗೆ ಉಗ್ರ ಹಿಂದುತ್ವದ ನೆಲೆಯ 'ಅಭಿನವ್ ಭಾರತ್‌'ನಂತಹ ಸಂಘಟನೆಗಳೂ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿವೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಅಭಿನವ್ ಭಾರತ್‌ ಸಂಘಟನೆಯ ಸ್ವಾಮಿ ಅಸೀಮಾನಂದ ಅಲಿಯಾಸ್ ನಬಾ ಕುಮಾರ್ ಸರ್ಕಾರ್ ಮೊದಲ ಆರೋಪಿ ಎಂದು ತನಿಖೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ಪ್ರಕರಣದ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮಾ. 23ರಂದು ಹೈದ್ರಾಬಾದ್‌ ನ್ಯಾಯಾಲಯ ಆರೋಪಿ ಸ್ವಾಮಿ ಅಸೀಮಾನಂದಗೆ ಜಾಮೀನು ನೀಡಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಹೈದ್ರಬಾದ್‌ ಎನ್‌ಐಎ ಘಟಕ ತೀರ್ಮಾನಿಸಿತಾದರೂ, ದಿಲ್ಲಿಯ ಕೇಂದ್ರ ಕಚೇರಿಯಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

"ಹೈಕೋರ್ಟ್‌ ಮುಂದೆ ಜಾಮೀನು ಮಂಜೂರು ಪ್ರಶ್ನಿಸಿ ಅರ್ಜಿ ಸಲ್ಲಿಸಲು ನಮಗೆ ಮೇಲಾಧಿಕಾರಿಗಳ ಅನುಮತಿ ಮತ್ತು ಕಾನೂನು ಸಲಗೆ ಬೇಕು. ಅಸೀಮಾನಂದ ಬಿಡುಗಡೆಗೊಂಡರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ,'' ಎಂದು ಹೆಸರು ಹೇಳಲು ಇಚ್ಚಿಸದ ಹೈದ್ರಬಾದ್ ಅಧಿಕಾರಿಯೊಬ್ಬರ ಮಾತುಗಳನ್ನು ವರದಿ ಪ್ರಕಟಿಸಿದೆ.

ಇದು ಮೊದಲೇನೂ ಅಲ್ಲ:

ಮಕ್ಕಾ ಮಸೀದಿ ಸ್ಫೋಟ ಪ್ರಕರಣ ಸೇರಿದಂತೆ ಸಂಜೋತಾ ರೈಲಿನಲ್ಲಿ ನಡೆದ ಸ್ಫೋಟ ಪ್ರಕರಣ, ಮಲೆಗಾಂವ್ ಸ್ಫೋಟ ಪ್ರಕರಣ ಮತ್ತಿತರ ಸ್ಫೋಟ ಪ್ರಕರಣಗಳಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿಗಳ ವಿಚಾರದಲ್ಲಿ ಮೃದು ದೋರಣೆ ತೋರಿಸುತ್ತಿದೆ ಎಂಬ ದಟ್ಟ ಆರೋಪ ಕೇಳಿಬರುತ್ತಿದೆ. ಸದ್ಯ ಎನ್‌ಐಎ ಕೈಯಲ್ಲಿ ಹಿಂದು ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಆರೋಪಿ ಸ್ಥಾನದಲ್ಲಿರುವ ಒಟ್ಟು 7 ಭಯೋತ್ಪಾದನಾ ಪ್ರಕರಣಗಳಿವೆ.

ಇವುಗಳಲ್ಲಿ 2014ರಲ್ಲಿ ಸಂಜೋತಾ ಸ್ಫೋಟ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಸ್ವಾಮಿ ಅಸೀಮಾನಂದಗೆ ಸಿಕ್ಕ ಜಾಮೀನನ್ನು ತನಿಖಾ ಸಂಸ್ಥೆ ಪ್ರಶ್ನಿಸಲು ಹೋಗಲೇ ಇಲ್ಲ. 2015ರಲ್ಲಿ ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿದ್ದ ರೋಹಿಣಿ ಸಾಲಿಯಾನ್ ಮೇಲಾಧಿಕಾರಿಗಳ ಮೇಲೆ ಬಹಿರಂಗ ಆರೋಪ ಮಾಡಿದ್ದರು. ಅಭಿನವ್ ಭಾರತ್ ಸಂಘಟನೆಗೆ ಸೇರಿದ ಆರೋಪಿಗಳ ವಿಚಾರದಲ್ಲಿ ಮೃದು ದೋರಣೆ ಅನುಸರಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದವರು ಬಹಿರಂಗಪಡಿಸಿದ್ದರು.

ಅಭಿನವ್ ಭಾರತ್ ಸಂಘಟನೆಯ ಪ್ರಮುಖ ಆರೋಪಿಗಳಾಗಿರುವ ಸ್ಫೋಟ ಪ್ರಕರಣಗಳಿಗೂ, ಸುನೀಲ್ ಜೋಷಿ (ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಈತನಿಗೆ ಶಿಕ್ಷೆ ವಿಧಿಸಲಾಯಿತು) ಸಾವಿನ ಪ್ರಕರಣಕ್ಕೂ ಹತ್ತಿರದ ಸಂಬಂಧ ಇತ್ತು. ಈತನ ಸಾವಿನ ತನಿಖೆಯನ್ನು ತಿಂಗಳನಾಗುಟ್ಟಲೆ ಎಳೆದಾಡಿದ ರಾಷ್ಟ್ರೀಯ ತನಿಖಾ ಸಂಸ್ಥೆ, ಕೊನೆಗೆ ಮಧ್ಯಪ್ರದೇಶ ಪೊಲೀಸರಿಗೆ ವಾಪಾಸ್ ನೀಡಿತು. ಜೋಷಿ ಸಾವಿನ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ದೊರಕಲಿಲ್ಲ ಎಂದು ಹೇಳಿತ್ತು. ಇತ್ತೀಚೆಗಷ್ಟೆ ಈತನನ್ನು ಅಜ್ಮೀರ್ ದರ್ಗಾ ಸ್ಪೋಟ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿತಾದರೂ, ಆತನ ಸಾವು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಈತನ ಜತೆ ಪ್ರಮುಖ ಆರೋಪಿಯಾಗಿದ್ದ ಸ್ವಾಮಿ ಅಸೀಮಾನಂದಗೆ ಖುಲಾಸೆ ಭಾಗ್ಯ ಸಿಕ್ಕಿತು. ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಕರ್ನಲ್ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷಿಗಳು ಸಿಗಲಿಲ್ಲ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿತ್ತು.

ಇಂತಹ ಆರೋಪಗಳನ್ನು ಎನ್‌ಐಎ ನಿರಾಕರಿಸುತ್ತಲೇ ಬಂದಿದೆಯಾದರೂ, ಹಿಂದು ಭಯೋತ್ಪಾದನಾ ಪ್ರಕರಣಗಳಲ್ಲಿ ತನಿಖಾ ಸಂಸ್ಥೆ ನಡೆದುಕೊಳ್ಳುತ್ತಿರುವ ರೀತಿ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಅದೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಂಬುದು ಗಮನಾರ್ಹ.

ಸಿಗದ ತಾರ್ಕಿಕ ಅಂತ್ಯ:

ವಾರ್ ಆನ್ ಟೆರರ್: 'ಹಿಂದೂ ಭಯೋತ್ಪಾದಕ'ರ ಬಗ್ಗೆ ಎನ್‌ಐಎಗೆ ಯಾಕೆ ಈ ಪಾಟಿ ಕಕ್ಕುಲಾತಿ?

ಈ ಏಳು ಪ್ರಕರಣಗಳನ್ನು ಹೊರತು ಪಡಿಸಿದರೆ ಎನ್‌ಐಎ ರಾಜ್ಯದಲ್ಲಿ  ಭಯೋತ್ಪಾದನಾ ಕೃತ್ಯಗಳೂ ಸೇರಿದಂತೆ ದೇಶದಲ್ಲಿ ನಡೆದ ಹಲವು ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುತ್ತಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಈವರೆಗೂ ಬಹುತೇಕ ಪ್ರಕರಣಗಳಲ್ಲಿ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಈ ಮೂಲಕ ದೇಶದೊಳಗಿನ ಭಯೋತ್ಪಾದನೆ ತೊಡೆಯುವ ನಿಟ್ಟಿನಲ್ಲಿ ಯಾವ ಪ್ರಗತಿಗೂ ಎನ್‌ಐಎ ಕೊಡುಗೆಗಳು ಕಾಣಿಸುತ್ತಿಲ್ಲ.

ಉದಾಹರಣೆಗೆ 2012ರಲ್ಲಿ ಕರ್ನಾಟಕದಲ್ಲಿ ನಡೆದ 'ಶಂಕಿತ ಉಗ್ರರ ಸಂಚಿನ ಪ್ರಕರಣ'. ಇದರಲ್ಲಿ ನ್ಯಾಯಾಲಯದ ಅಂತಿಮ ತೀರ್ಪು ಹೊರಬಿದ್ದಿದೆಯಾದರೂ, ಅದು ತಾರ್ಕಿಕ ಅಂತ್ಯದಂತೆ ಕಾಣಿಸುತ್ತಿಲ್ಲ. ಈ ಕುರಿತು ವಿಸ್ತೃತ ವರದಿ ಇಲ್ಲಿದೆ:

ಹೀಗೆ, ಕಳೆದ ಮೂರು ವರ್ಷಗಳ ಅಂತರದಲ್ಲಿ ದೇಶದೊಳಗಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ವಿಶೇಷ ಪರಿಣಿತಿಯೊಂದಿಗೆ ರಚನೆಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಗಳಿಗೆ ಈಡಾಗಿದೆ. ವಿಶೇಷವಾಗಿ 7 ಹಿಂದುತ್ವ ಭಯೋತ್ಪಾದನಾ ಕೃತ್ಯಗಳಲ್ಲಿ ತನಿಖಾ ಸಂಸ್ಥೆಯ ಕಾರ್ಯವೈಖರಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.