samachara
www.samachara.com
'ಬದುಕು ಸುಂದರ ಹೋರಾಟ': ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು; ನಡುಗಾಲದಲ್ಲಿ ನನಸು!
ಸುದ್ದಿ ಸಾಗರ

'ಬದುಕು ಸುಂದರ ಹೋರಾಟ': ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು; ನಡುಗಾಲದಲ್ಲಿ ನನಸು!

  • ಮಧು ಚಂದ್ರಪ್ಪ


ಇದು

ನಡುಗಾಲ ಸಮೀಪಿಸಿದ, ಬದುಕಿನಲ್ಲಿ ಮುಂದೇನು ಎಂದು ಮಾನಸಿಕ ತೊಳಲಾಟಕ್ಕೆ ಸಿಲುಕಿದ ಪ್ರತಿಯೊಬ್ಬರಿಗೂ ಮಾದರಿಯಾಗುವಂತಹ ಕತೆ. ಇದರ ನಾಯಕಿ ತುಮಕೂರಿನ ಕುಣಿಗಲ್‌ನಿಂದ ಬಂದು ಸಿಲಿಕಾನ್‌ ಸಿಟಿಯಲ್ಲಿ ಬದುಕು ಕಟ್ಟಿಕೊಂಡವರು. ಹೆಚ್ಚಿನ ಓದಿನ ಹಿನ್ನೆಲೆ ಇಲ್ಲದಿದ್ದರೂ, ತಮ್ಮ ಪರಿಶ್ರಮ ಮತ್ತು ಬದುಕಿನೆಡೆಗಿನ ಶ್ರದ್ಧೆಯ ಏಕೈಕ ಕಾರಣಕ್ಕೆ ಇಷ್ಟಪಟ್ಟ ಟೀಚರ್ ಕೆಲಸವನ್ನು ತಮ್ಮ 43ನೇ ವಯಸ್ಸಿನಲ್ಲಿ ತಮ್ಮದಾಗಿಸಿಕೊಂಡವರು. ಅವರೇ ಪದ್ಮಾ ಕೇರಾಫ್ ಪೂರ್ಣ ಲರ್ನಿಂಗ್ ಸೆಂಟರ್.

ಮೀಟ್ ಮಿಸ್ ಪದ್ಮಾ:

ಪದ್ಮಾ ಇವತ್ತೇನಾಗಿದ್ದಾರೆ ಎಂಬುದನ್ನು ನೋಡುವುದಕ್ಕಿಂತ, ಕೆಲವು ವರ್ಷಗಳ ಹಿಂದೆ ಅವರು 'ಬದುಕು ಬದಲಿಸುವ' ಕಡೆಗೆ ಇಟ್ಟ ಮೊದಲ ಹೆಜ್ಜೆಯನ್ನು ಗಮನಿಸಬೇಕಿದೆ. ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ. ತಂದೆ ಬೋರೆಗೌಡ ತಾಯಿ ಜಯಮ್ಮ; ಗುಟ್ಟಳ್ಳಿ ನಿವಾಸಿಗಳು. ಬದುಕಲ್ಲಿ ಕಡು ಬಡತನವಾದರೂ ಮನೆತುಂಬ ಮಕ್ಕಳ ನಗುವಿನ ಶ್ರೀಮಂತಿಕೆ  ಹೊಂದಿದ್ದ ಈ ದಂಪತಿಯ ನಾಲ್ಕು ಮಕ್ಕಳಲ್ಲಿ ಪದ್ಮ ಎರಡನೆಯವರು. "ಬಾಲ್ಯದಲ್ಲಿ ತುಂಬಾ ತುಂಟಿ ಮತ್ತು ಧೈರ್ಯದ ಹುಡುಗಿಯಾಗಿದ್ದೆ,'' ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಅಮ್ಮನ ಪೆಟ್ಟಿಗೆ ಜಗ್ಗದೆ ಮಲ್ಲೇಶ್ವರ ಮೂಲೆ ಮೂಲೆಗಳನ್ನೂ ಸುತ್ತಿಬರುತ್ತಿದ್ದ ಪದ್ಮ ಅವರಿಗೆ ಅಪ್ಪನ ಬೆಂಬಲ ಸದಾ ಶ್ರೀರಕ್ಷೆಯಂತಿರುತ್ತಿತ್ತು.

ತಂದೆ ಬೋರೆ ಗೌಡ ಬಿನ್ನಿ ಮಿಲ್ ಬಟ್ಟೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಜಯಮ್ಮ ದಿನಸಿ ಅಂಗಡಿಗಳ ಕಾಳು, ಬೇಳೆಗಳನ್ನು ಆರಿಸಿ, ಕೇರಿ ಹಸನು ಮಾಡುವ ಮೂಲಕ ಆದಾಯದ ಮೂಲವನ್ನು ಕಂಡುಕೊಂಡಿದ್ದರು. ಪದ್ಮಾ ಅವರಿಗೆ ಆಗಿನ್ನು ಹದಿನೈದರ ಹರೆಯ. ಹತ್ತನೇಯ ತರಗತಿ ಓದುತ್ತಿದ್ದ ವೇಳೆ ದೂರದ ಸಂಬಂಧಿಗಳು 'ತಮ್ಮ ಗಂಡಿಗೆ ನಿಮ್ಮ ಹೆಣ್ಣೇ ಬೇಕೆನ್ನುವ' ಒತ್ತಾಯ ಇವರ ಮನೆಯವರ ಮುಂದಿಟ್ಟರು. ಪದ್ಮ ತಾನು ಓದಿ ಉತ್ತಮ ಶಿಕ್ಷಕಿಯಾಗ ಬಯಸಿದ್ದ ಕನಸನ್ನ ಅಂದೇ ಕೈಬಿಟ್ಟರು.  ಈ ಮದುವೆ ತಾನೂ ತನ್ನ ತಂದೆ ತಾಯಿಗೆ ಮಾಡುವ ಉಪಕಾರವೆಂದು ಭಾವಿಸಿ ರೇಷ್ಮೇ ಇಲಾಖೆಯಲ್ಲಿ ಸಹಾಯಕರಾಗಿದ್ದ ರಾಜಣ್ಣರನ್ನು ವಿವಾಹವೂ ಆದರೂ.

ಮರಳಿ ಹುಟ್ಟೂರಿಗೆ:

ಮದುವೆಯಾಗಿ ಗಂಡನ ಮನೆ ಕುಣಿಗಲ್ಲಿಗೆ ಹೋದ ದಿನಗಳು ಇವರ ಸತ್ವಪರೀಕ್ಷೆಯಂತಿದ್ದವಂತೆ. "ತಂದೆ ಮನೆಯಲ್ಲಿದ್ದ ಬಡತನ ಎಂದಿಗೂ ನೋವ ಮಾಡಿರಲಿಲ್ಲ," ಎಂದು ಪದ್ಮಾ ನೆನಪಿಸಿಕೊಳ್ಳುತ್ತಾರೆ. ವೈವಾಹಿಕ ಬದುಕಿನ ಕುರಿತು ಯಾವ ತಿಳುವಳಿಕೆಯೂ ಇಲ್ಲದೆ ಬಾಲ್ಯದಲ್ಲೇ ನಡೆದ ಮದುವೆ, ವರ್ಷಕ್ಕೊಂದರಂತೆ ಜನಿಸಿದ ಮಕ್ಕಳು, ಜೊತೆಯಲ್ಲಿ ಬಡತನ, ತಣಿಯದ ಹಸಿವು –ನೋವುಗಳು ಇವರ ಪಾಲಿಗೆ ದಕ್ಕಿದ ಕೊಡುಗೆಗಳು. ಕೊನೆಗೆ, ಸಾಲದ ಸಂಬಳ ಮತ್ತು ಮಕ್ಕಳ  ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ಪದ್ಮಾರವರ ಕುಟುಂಬ ಬೆಂಗಳೂರಿಗೆ ಬಂದಿಳಿಯಿತು.

ಸಿಲಿಕಾನ್ ಸಿಟಿಗೆ ಬಂದ ದಿನದಿಂದಲೇ ಕುಟುಂಬದ ಬೆನ್ನೆಲುಬಾಗಿ ನಿಲ್ಲಲು ಕೆಲಸ ಹುಡುಕಲು ಶುರು ಮಾಡಿದರು. ಆದರೆ ಓದಿದ್ದು ಕೇವಲ ಒಂಭತ್ತನೆ ತರಗತಿ ಮಾತ್ರ. ವಯಸ್ಸು ಬೇರೆ ಮೂವತ್ತು ದಾಟಿರುವ ಹೊತ್ತಿನಲ್ಲಿ ಕೆಲಸ ಸಿಗುವುದು ಕಷ್ಟ ಕೂಡ. ದೂರದ ಸಂಬಂಧಿಯೊಬ್ಬರ ಸಹಾಯದಿಂದ  2007ರಲ್ಲಿ ಬಾಗಲೂರು ಬಳಿಯ ಪೂರ್ಣ ಎನ್ನುವ ಶಾಲೆಯೊಂದರಲ್ಲಿ ಆಯಾ ಕೆಲಸಕ್ಕೆ ಸೇರಿಕೊಂಡರು. ತನ್ನನ್ನು ತಾನು ಪರ್ಯಾಯ ಶಿಕ್ಷಣ ವ್ಯವಸ್ಥೆಯ ಜತೆ ಗುರುತಿಸಿಕೊಳ್ಳುವ ಈ ವಿಶೇಷ ಶಾಲೆಯಲ್ಲಿ ಎರಡು ಸಾವಿರ ರೂಪಾಯಿಗಳ ಸಂಬಳದ ಕೆಲಸ ಶುರುವಾಯಿತು.

ಶಿಕ್ಷಕಿಯಾಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಪದ್ಮಾ, ಶಾಲೆಯ ಆವರಣ, ಶೌಚಾಲಯ, ಕೊಠಡಿಗಳನ್ನು ಚೊಕ್ಕವಾಗಿಡುವುದು, ಶಿಕ್ಷಕಿಯರಿಗೆ ಚಹಾ ಮಾಡಿಕೊಡುವುದು ಕೆಲಸ ಶುರುಮಾಡಿದರು. "ಆಕೆ  ಮಾಡುವ ಪ್ರತಿ ಕೆಲಸವೂ ಅದೆಷ್ಟು ಅಚ್ಚುಕಟ್ಟಾಗಿರುತ್ತಿಂದರೆ ಎಂಥವರೂ ಒಮ್ಮೆ ಆಕೆ ಕೆಲಸ ಮಾಡುವುದನ್ನು ನಿಂತು ನೋಡಿ ಮುಂದೆ ಹೋಗುತ್ತಿದ್ದರು,'' ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.

ಶ್ರದ್ಧೆ ಬದುಕು ಬದಲಾಯಿಸಿತು:

ಪದ್ಮಾಅವರ ಕೆಲಸದ ಮೇಲಿನ ನಿಷ್ಠೆ ಮತ್ತು ಕಾರ್ಯಪರತೆನ್ನು ಕಂಡ ಶಾಲೆಯ ಆಡಳಿತ ಮಂಡಳಿ, ಅವರಿಗೆ ಮತ್ತಷ್ಟು ಜವಾಬ್ದಾರಿಗಳನ್ನು ವಹಿಸುತ್ತಾ ಹೋಯಿತು. ಆಯಾ ಕೆಲಸದಿಂದ ಶಾಲೆಯ ಸ್ಟೋರ್ ರೂಮ್, ಅಡುಗೆ ಮನೆಗಳ ಸಂಪೂರ್ಣ ಹೊಣೆಗಾರಿಕೆ ಅವರ ಪಾಲಿಗೆ ಬಂತು. ಹೀಗೆ 6 ವರ್ಷಗಳು ಕಳೆಯುವ ಹೊತ್ತಿಗೆ,  2013ರ ವೇಳೆಗೆ  ಪದ್ಮ ಕಸಗುಡಿಸುವುದು, ಅಡುಗೆ ಮನೆ ನೋಡಿಕೊಳ್ಳುವುದಕ್ಕಿಂತಲೂ ಗ್ರಂಥಪಾಲಕಿಯಾಗಬಹುಗೆಂದು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕಿಯರು ನಿರ್ಧಾರ ತೆಗೆದುಕೊಂಡರು. ಪದ್ಮಾರವರನ್ನು ಸಹಾಯಕ ಗ್ರಂಥಪಾಲಕಿನನ್ನಾಗಿ ನೇಮಕ ಮಾಡಲಾಯಿತು.

ಈ ಮಧ್ಯೆ ಪದ್ಮ ನಿರ್ರರ್ಗಳವಾಗಿ ಇಂಗ್ಲೀಷನ್ನು ಓದಲು ಮತ್ತು ಮಾತನಾಡಲು ಕಲಿತುಕೊಂಡಿದ್ದರು.  ಕಂಪ್ಯೂಟರನ್ನು ಸುಲಲಿತವಾಗಿ ಬಳಸಲು ಶುರುಮಾಡಿದ್ದರು. ಗ್ರಂಥಾಲಯದ ಪುಸ್ತಕಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುವುದು ಮತ್ತು ಸಂಬಂಧಪಟ್ಟ ಇತರೆ ಎಲ್ಲಾ ಕೆಲಸಗಳನ್ನು ಯಾರ ಸಹಾಯವಿಲ್ಲದೇ ಮಾಡಿ ಮುಗಿಸುವ ಮಟ್ಟಕ್ಕೆ ಬೆಳೆದಿದ್ದರು. ಕಳೆದ ನಾಲ್ಕು ವರ್ಷಗಳ ಅಂತರದಲ್ಲಿ ಸಮಯ ಸಿಕ್ಕಾಗ ಮಕ್ಕಳಿಗೆ ಕನ್ನಡ, ಇಂಗ್ಲೀಷ ಮತ್ತು ತಮಿಳಿನಲ್ಲಿ ರೋಚಕವಾಗಿ ಕಥೆ ಹೇಳುವ ಇವರು ಮಕ್ಕಳಿಗೆಲ್ಲ 'ನೆಚ್ಚಿನ ಲೈಬ್ರರೀ ಆಂಟಿ' ಎಂದೂ ಅನ್ನಿಸಿಕೊಂಡರು.

“ಪದ್ಮಾರದ್ದು ಉತ್ತಮ ವ್ಯಕ್ತಿತ್ವ. ಎಂತಹದೇ ಕೆಲಸವಾದರೂ ಅದನ್ನು ಪ್ರೀತಿ ಮತ್ತು ಆಸ್ಥೆಯಿಂದ ಪೂರ್ಣಗೊಳಿಸುವ ರೀತಿಯನ್ನು ಮತ್ತು ಅವರ ಪರಿಶ್ರಮವನ್ನು ನಾವು ಗೌರವಿಸುತ್ತೇವೆ. ಒಬ್ಬ ವ್ಯಕ್ತಿ ನಂಬಿಕೆ ಮತ್ತು ಕಾರ್ಯಪರತೆಯನ್ನು ಹೊಂದಿದ್ದರೆ ತಾನು ಮುಟ್ಟಬೇಕಾದ ಗುರಿಯನ್ನು ಮುಟ್ಟೇ ಮುಟ್ಟುತ್ತಾರೆ ಎನ್ನುವುದಕ್ಕೆ ಇವರೇ ಸಾಕ್ಷಿ” ಎನ್ನುತ್ತಾರೆ ಪೂರ್ಣ ಶಾಲೆಯ ಪ್ರಿನ್ಸಿಪಾಲ್ ಸಾಯಿರ ಭಾನು.

ಕನಸು ಕನಸು:

'ಬದುಕು ಸುಂದರ ಹೋರಾಟ': ಚಿಕ್ಕ ವಯಸ್ಸಿನಲ್ಲಿ ಕಂಡ ಕನಸು; ನಡುಗಾಲದಲ್ಲಿ ನನಸು!

2007ರಲ್ಲಿ ಆಯಾ ಕೆಲಸಕ್ಕೆ ಸೇರಿದ ಪದ್ಮಾ ಅವರ ಚಿಕ್ಕಂದಿನ ಕನಸು ಇದ್ದದ್ದು ಶಿಕ್ಷಕಿಯಾಗಬೇಕು ಎಂಬುದು. ಅದೂ ಕೂಡ ಬರುವ ಶೈಕ್ಷಣಿಕ ವರ್ಷದಿಂದ ಈಡೇರಲಿದೆ. ಶಾಲೆಯ ಪ್ರಾಥಮಿಕ ತರಗತಿಗಳಿಗೆ ಕನ್ನಡ ಭಾಷೆಯ ಸಹಶಿಕ್ಷಕಿಯಾಗಿ ಅವರು ಕೆಲಸ ನಿರ್ವಹಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮತ್ತೊಬ್ಬ ಶಿಕ್ಷಕಿ ರೀನಾ ಜೋಸ್, “ಶಿಕ್ಷಣದ ಮೂಲ ಉದ್ದೇಶ ಮನುಷ್ಯ ತನ್ನನ್ನು ಸಂಪೂರ್ಣವಾಗಿ ಅಭಿವ್ಯಕ್ತ ಪಡಿಸಲು ಸಾಧ್ಯವಾಗಿಸುವುದು. ಪದ್ಮಾ ತನ್ನ ಕೆಲಸ ಮತ್ತು ಪರಿಶ್ರಮದಿಂದ ಶಿಕ್ಷಣವನ್ನು ತನ್ನದಾಗಿಸಿಕೊಂಡಿದ್ದಾಳೆ. ಆಕೆಯನ್ನು ನೋಡಿದರೆ ಹೆಮ್ಮೆಯಾಗುತ್ತದೆ” ಎನ್ನುತ್ತಾರೆ.

ಬದುಕಿನ ಸಂಕಷ್ಟಗಳ ಸುಳಿಯಿಂದ ತಪ್ಪಿಸಿಕೊಳ್ಳಲು ಕುಣಿಗಲ್ಲಿಂದ ಬೆಂಗಳೂರಿಗೆ ಬಂದ ಪದ್ಮಾ ಸವೆಸಿದ ಹಾದಿ ದೊಡ್ಡದಿದೆ. "ನಾನು ಕೇವಲ ದುಡ್ಡಿಗಾಗಿ ಮಾತ್ರ ಕೆಲಸ ಮಾಡಲಿಲ್ಲ. ಮುಂದೆಯೂ ಮಾಡುವುದಿಲ್ಲ,'' ಎನ್ನುವ ಅವರ ಮಾತುಗಳಲ್ಲಿ ಇವತ್ತಿನ ಯಾಂತ್ರೀಕೃತ ಬದುಕಿಗೆ ಒಂದಷ್ಟು ಪಾಠಗಳೂ ಸಿಗುತ್ತವೆ. ಅಂದಹಾಗೆ, ಪದ್ಮಾ ಈವರೆಗೆ ದುಡಿದ ದುಡ್ಡಿನಲ್ಲಿ ಸೇವಿಂಗ್ಸ್ ಏನಾದರೂ ಮಾಡಿದ್ದಾರಾ ಎಂದರೆ, "ಅಂತದ್ದೇನಿಲ್ಲ,'' ಎಂದು ನಗುತ್ತಾರೆ. "ತನ್ನಿಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ನಾನು ದುಡಿದ ಹಣ ಖರ್ಚಾಯಿತು,'' ಎನ್ನುತ್ತಾರೆ. ಸದ್ಯ ಅವರ ಹಿರಿಯ ಮಗ ಶಿವಕುಮಾರ್ ಇಟಲಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ.

“ತಾನು ಈ ಶಾಲೆಯಲ್ಲಿದ್ದ  ಅಷ್ಟೂ ದಿನವೂ ಪ್ರತಿಯೊಬ್ಬರೂ ನನ್ನನ್ನು ಬೆಳೆಸಿದ್ದಾರೆ. ಶಾಲೆಯ ಪ್ರತಿ ಮಗುವೂ ನನಗೆ ಅನೇಕ ವಿಷಯಗಳನ್ನು ಕಲಿಸಿದೆ,” ಎನ್ನುವಾಗ ಪದ್ಮಾ ಕಣ್ಣಂಚಲ್ಲಿ ನೀರಾಡುತ್ತದೆ. ಬದುಕೊಂದು ಸುಂದರ ಹೋರಾಟ ಎಂಬುದನ್ನು ಇಂತಹ ಸಾಮಾನ್ಯರು ಪದೇ ಪದೇ ರುಜುವಾತು ಪಡಿಸುತ್ತಲೇ ಇದ್ದಾರೆ.

  • ಲೇಖಕರು ಪೂರ್ಣ ಲರ್ನಿಂಗ್ ಸೆಂಟರ್‌ನಲ್ಲಿ ಅಕಾಡೆಮಿಕ್ ಫೆಸಿಲಿಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.