samachara
www.samachara.com
#ದಕ್ಷಿಣಾಯಣ; ಚರ್ವಿತ ಚರ್ವಣ ಮತ್ತು ವಿಚಾರ ಕ್ರಾಂತಿಗೆ 'ನೀಡದ' ಅಹ್ವಾನ!
ಸುದ್ದಿ ಸಾಗರ

#ದಕ್ಷಿಣಾಯಣ; ಚರ್ವಿತ ಚರ್ವಣ ಮತ್ತು ವಿಚಾರ ಕ್ರಾಂತಿಗೆ 'ನೀಡದ' ಅಹ್ವಾನ!

"ಈ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದುಗುಂಡುಗಳನ್ನೆ ತಯಾರು ಮಾಡಬೇಕು. ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತ ಇಟ್ಟುಕೊಳ್ಳೋಣ. ವಾಚ್ಯವಾಗಿಯೆ ಗುಂಡಿನಲ್ಲಿ ಹೊಡೆಯಬೇಕು ಅಂತ ಅಲ್ಲ. ಆದರೆ ಈ ವಿಚಿತ್ರ ಬೇಟೆಯಲ್ಲಿ (ಈ ಸಂದರ್ಭದಲ್ಲಿ) ಮೊದಲ ಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ........ತಲೆ........ತಲೆ, ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು...."

ಇದು 1974ರ ಏಪ್ರಿಲ್ 20ರಂದು ಮೈಸೂರಿನಲ್ಲಿ ಕಿಕ್ಕಿರಿದು ತುಂಬಿದ್ದ 'ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ'ದ  ಉದ್ಘಾಟನಾ ಸಮಾರಂಭದಲ್ಲಿ ಕುವೆಂಪುರವರ ಭಾಷಣದ ಒಂದು ತುಣಕು ಮಾತ್ರ.

ಸುಮಾರು 43 ವರ್ಷಗಳ ನಂತರ ಏಪ್ರಿಲ್ 8, 2017ರಂದು ಶಿವಮೊಗ್ಗದಲ್ಲಿ 'ದಕ್ಷಿಣಾಯಣ' ಎಂಬ ಹೆಸರಿನ ಕರ್ನಾಟಕದ ಬರಹಗಾರರ ಸಮಾರಂಭವೊಂದು ನಡೆದಿದೆ. ಈ ಬಾರಿಯೂ ಕೂಡ ಜನ ಕಿಕ್ಕಿರಿಯುವ ಮೂಲಕ ನಿರೀಕ್ಷೆಗೂ ಮೀರಿ ಸೇರಿದ್ದರು. 'ಅಭಿವ್ಯಕ್ತಿ'ಎಂಬ ಟ್ಯಾಗ್‌ಲೈನ್ ಪಡೆದುಕೊಂಡ ಸಮಾರಂಭದಲ್ಲಿ ಕರ್ನಾಟಕ ಹಿರಿಯ ಬರಹಗಾರರಾದ ನಾ. ಡಿಸೋಜಾ, ದೇವನೂರು ಮಹದೇವ, ರಂಜಾನ್ ದರ್ಗಾ, ಚಂದ್ರಶೇಖರ್ ಪಾಟೀಲ್, ರಾಜೇಂದ್ರ ಚೆನ್ನಿ ಮತ್ತಿತರರು ಪಾಲ್ಗೊಂಡಿದ್ದರು. ದಲಿತ ಹಿನ್ನೆಲೆಯ ಹಿರಿಯ ಬರಹಗಾರರ ಅನುಪಸ್ಥಿತಿ ನಡುವೆಯೂ ಸಮಾರಂಭ ಸಾಕಷ್ಟು ಪ್ರಮಾಣದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಮಾರಂಭದ ಪ್ರಸ್ತಾವ:

ಸಮಾರಂಭದ ಉದ್ಘಾಟನೆ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಂದ್ರ ಚೆನ್ನಿ, ತಮ್ಮ 'ಹಿಡನ್ ಅಜೆಂಡಾ'ವನ್ನು ಬಿಚ್ಚಿಟ್ಟರು. "ಮೊದಲನೆಯದಾಗಿ ನಿಮ್ಮ ಮುಖದ ಮೇಲಿರುವ ಆತಂಕದ ಛಾಯೆಗಳನ್ನು ತೆಗೆದುಹಾಕುವುದು. ಎರಡನೇಯದು ನಮ್ಮೊಳಗಿನ ಬಿಕ್ಕಟ್ಟುಗಳು, ಸಿಕ್ಕುಗಳನ್ನು ಬಿಡಿಸಿ ಸರಳಗೊಳಿಸುವುದು. ಮೂರನೇಯದು ಬಹುಮತವೆಂದರೆ ಅದು ಜನಮತ ಅಲ್ಲ. ಜನ ಯಾಕೆ ನಮ್ಮ ಮಾತು ಕೇಳದೇ ಕೋಮುವಾದಿಗಳ ಹಿಂದೆ ಹೋಗುತ್ತಿದ್ದಾರೆ ಎನ್ನುವ ಆತಂಕ ನಮಗಿದೆ. ನಿಜ ಏನೆಂದರೆ ಜನರ ಮನಸ್ಸಿನ್ನಲ್ಲಿ ವಿವೇಕ ಇರುತ್ತದೆ. ಅದು ಕೆಲವು ಕಾಲದಲ್ಲಿ ಮಂಕಾಗುತ್ತದೆ. ಈ ಕಾಲದಲ್ಲಿಯೂ ಸಹ. ಆದರೆ ಅವರು ಖಂಡಿತಾ ಜೀವಪರವಾಗಿ ಆಲೋಚಿಸುತ್ತರೆ ಎಂಬ ಆತ್ಮವಿಶ್ವಾಸ ಮೂಡಿಸುವುದು. ಕೊನೆಯದಾಗಿ ಕೆಲವಾರು ವರ್ಷಗಳಿಂದ ಕೆಲವು ಮಾತುನಾಡುವವರ ಗಂಟಲಿನಲ್ಲಿ ಕೂಗುಮಾರಿ ಗುಣ ಬಂದು ಬಿಟ್ಟಿದೆ. ಇದನ್ನು ಎದುರಿಸುವ ಬಗೆ ಏನು ಎಂಬುದನ್ನು ಕಂಡುಕೊಳ್ಳುವುದು,'' ಎನ್ನುವ ಅವರ ಮಾತುಗಳ ಮೂಲಕ 'ದಕ್ಷಿಣಾಯಣ'ದ ಮೂಲ ಉದ್ದೇಶಗಳೇನು ಎಂಬುದನ್ನು ಸ್ಪಷ್ಟಪಡಿಸಿದರು.

1974ರ ಬರಹಗಾರರ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿಯೂ ಇದ್ದ ಚಂದ್ರಶೇಖರ್ ಪಾಟೀಲರು 'ದಕ್ಷಿಣಾಯಣ'ದಲ್ಲಿಯೂ ಆ ದಿನಗಳನ್ನು ಸ್ಮರಿಸಿಕೊಂಡರು. ಜತೆಗೆ, "ಇವತ್ತಿನ ನಾವು ಸಹ ಕಾರಣವಾಗಿದ್ದೇವೆ. ಇದರ ಬಗ್ಗೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದಾಗಿದೆ. ಅದನ್ನು ಮಾಡಿಕೊಳ್ಳೋಣ,'' ಎಂದರು. ಚಂಪಾ ಅವರ ಆತ್ಮಾವಲೋನದ ಮಾತುಗಳನ್ನು ಇನ್ನೊಂದಿಷ್ಟು ಮುಂದುವರಿಸಿದ ರಮಹತ್ ತರೀಕೆರೆ, "ನಮ್ಮೆದುರಿಗೆ ಇರುವ ಪ್ರಶ್ನೆ ಕಲಾವಿದರ ಪ್ರಶ್ನೆ ಮಾತ್ರವೇ ಆಗಿರಬಾರದು. ಜನರ ಪ್ರಶ್ನೆಯಾಗಬೇಕು. ನಾವು ಸ್ವಲ್ಪ ಓವರ್ ರಿಯಾಕ್ಟ್ ಮಾಡ್ತಾ ಇದೀವಾ? ನಮ್ಮ ಅಭಿವ್ಯಕ್ತಿ ಪ್ರಶ್ನೆಯನ್ನು ಜನರ ಜತೆಗೆ ರಿಲೇಟ್ ಮಾಡ್ಕೊತಿದೀವಾ? ಅಭಿವ್ಯಕ್ತಿ ಪ್ರಶ್ನೆ ಆತ್ಮವಲೋಕನ, ಹೊಣೆಗಾರಿಕೆಯ ಪ್ರಶ್ನೆಯೂ ಹೌದು,'' ಎನ್ನುವ ಮೂಲಕ ಪ್ರಸ್ತುತದ ಗೊಂದಲಗಳನ್ನು ಮುಂದಿಟ್ಟರು. ಬರಹಗಾರ್ತಿ ಅನುಪಮ ಮಾತುಗಳಲ್ಲಿಯೂ ಇದು ಪ್ರಸ್ತಾಪವಾಯಿತು.

ಭಾಷಣಗಳ ಮೇಲಾಟ:

ಸಾಮಾನ್ಯವಾಗಿ ಇಂತಹ ವೈಚಾರಿಕ ಸಮಾರಂಭಗಳ ಮೂಲವೇ ಭಾಷಣ ಎಂಬುದು 'ದಕ್ಷಿಣಾಯಣ'ದಲ್ಲಿಯೂ ಮತ್ತೊಮ್ಮೆ ಸಾಬೀತಾಯಿತು. "ಜನರ ಮಾತುಗಳನ್ನು, ಹೊಸ ತಲೆಮಾರಿನ ಗೊಂದಲಗಳನ್ನು ಕೇಳಿಕೊಳ್ಳಬೇಕಾದವರು ವೇದಿಕೆ ಹತ್ತಿ ಕುಳಿತು ಅದದೇ ಮಾತುಗಳನ್ನು ಆಡುತ್ತಿದ್ದಾರೆ. ಹೊಸ ಪರಿಕಲ್ಪನೆಗಳು ಹುಟ್ಟಲು ಇರುವ ದೊಡ್ಡ ಸಮಸ್ಯೆಯೇ ಇದು. ದಕ್ಷಿಣಾಯಣದಲ್ಲಿಯೂ ಅದೇ ಆಯಿತು,'' ಎಂದು ತಮ್ಮ ನಿರಾಸೆಗಳನ್ನು ಯುವ ಬರಹಗಾರರೊಬ್ಬರು 'ಸಮಾಚಾರ'ದ ಜತೆ ಹಂಚಿಕೊಂಡರು.

ಕೆಲವು ಭಾಷಣಗಳನ್ನು ಹೊರತು ಪಡಿಸಿದರೆ ಈ ಸಮಾರಂಭದಲ್ಲಿ 'ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ'ದ ಕುರಿತು, 'ಅಭಿವ್ಯಕ್ತಿ ಸ್ವಾತಂತ್ರ್ಯ ಆತ್ಮಹತ್ಯೆ' ಕುರಿತು ಚರ್ಚೆಗಳು ನಡೆದವು ಅನ್ನುವುದಕ್ಕಿಂತ ಭಾಷಣಗಳು ಜರುಗಿದವು. ಬಹುತೇಕರ ಭಾಷಣದ ಭಾಗಗಳು ಚರ್ವಿತ ಚರ್ವಣವಾಗಿದ್ದ ಹಿನ್ನೆಲೆಯಲ್ಲಿ ಒಟ್ಟಾರೆ ಸಮಾರಂಭದ ಸಾಧ್ಯತೆಗಳ ಬಗೆಗಿನ ನಿರೀಕ್ಷೆಗಳು ಸಹಜವಾಗಿಯೇ ಸೊರಗಿದವು. ಕುವೆಂಪು ಪ್ರಸ್ತಾಪಿಸಿದ್ದ 'ವಿಚಿತ್ರ ಬೇಟೆ'ಗೆ 4 ದಶಕಗಳ ನಂತರವೂ ಸಿದ್ಧತೆಗಳ ಕೊರತೆ ಎದ್ದು ಕಾಣುತಿತ್ತು.

ಹೀಗಿದ್ದೂ, ಇಂತಹದೊಂದು ಬರಹಗಾರರ ಸಮಾರಂಭ ಅಥವಾ ಸಾಕಷ್ಟು ಜನರ ಒಗ್ಗೂಡುವಿಕೆ ಈ ಸಮಯದ ಅಗತ್ಯಗಳಲ್ಲೊಂದು ಎಂಬುದನ್ನು ಸಾರಿ ಹೇಳಿತು. ಭಾಷಣದ ಆಚೆಗೆ ಮುಂದಿನ ದಿನಗಳಲ್ಲಿ 'ದಕ್ಷಿಣಾಯನ'ದ ಸಂಘಟಕರು ಹಾಗೂ ಪಾಲ್ಗೊಂಡವರ ವೈಯಕ್ತಿಕ ನೆಲೆಯ ಕಾರ್ಯವೈಖರಿ ಮಾತ್ರವೇ ಭವಿಷ್ಯದ ಕುರಿತು ಭರವಸೆ ಮೂಡಿಸಬೇಕಿದೆ.