ನೂರ್ ಶ್ರೀಧರ್ ಸಂದರ್ಶನ: 'ಪೊಲೀಸ್ ಪಿತೂರಿಯಿಂದ ಜೈಲಿಗೆ ಹೋದರೂ ಹೋರಾಟಕ್ಕೆ ಬದ್ಧ'
ಸುದ್ದಿ ಸಾಗರ

ನೂರ್ ಶ್ರೀಧರ್ ಸಂದರ್ಶನ: 'ಪೊಲೀಸ್ ಪಿತೂರಿಯಿಂದ ಜೈಲಿಗೆ ಹೋದರೂ ಹೋರಾಟಕ್ಕೆ ಬದ್ಧ'

"ಕಳೆದು

ಹೋದ 30 ವರ್ಷಗಳ ಬಗ್ಗೆ ವಿಷಾಧವಿದೆ. ನಮ್ಮೆಲ್ಲಾ ಪ್ರಯತ್ನ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ ಎಂಬ ಕೊರಗಿದೆ. ಹೀಗಾಗಿಯೇ ಭೂಗತ ಜೀವನಕ್ಕೆ ವಿದಾಯ ಹೇಳಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ಮುಖ್ಯವಾಹಿನಿಗೆ ಬಂದಿದ್ದೇವೆ. ಪೊಲೀಸರೀಗ ನಮ್ಮ ಹೋರಾಟಗಳನ್ನು ಮಣಿಸಲು ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುವುದಾಗಿಯೇ ಹೇಳಿ ಬಂದಿದ್ದೇವೆ. ಜೈಲಿನಲ್ಲಿ ಇದ್ದಾದರೂ ಸರಿ ಹೋರಾಟವನ್ನು ಮುಂದುವರಿಸುತ್ತೇವೆ..."

ಇದು ಒಂದು ಕಾಲದ ನಕ್ಸಲ್ ನಾಯಕ, ಇವತ್ತಿಗೆ ಮುಖ್ಯವಾಹಿನಿಯಲ್ಲಿರುವ ಸಾಮಾಜಿಕ ಹೋರಾಟಗಾರ, ಚಿತ್ರದುರ್ಗ ಮೂಲದ ನೂರ್‌ ಶ್ರೀಧರ್ ಅವರ ಮಾತುಗಳು.

ಕಳೆದ 2 ವರ್ಷಗಳ ಅಂತರದಲ್ಲಿ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‌ ಮುಖ್ಯವಾಹಿನಿಯಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿದ್ದಾರೆ. ಆದಿವಾಸಿಗಳಿಗೆ, ಭೂರಹಿತ ಬಡವರಿಗೆ ದನಿಯಾಗಿದ್ದಾರೆ. ಸಾವಿರಾರು ಜನರನ್ನು ಸಂಘಟಿಸಿ ರಾಜಧಾನಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ರಾಜ್ಯದಲ್ಲಿ ಹುಟ್ಟಿಕೊಂಡ ಹೊಸ ತಲೆಮಾರಿನ ದಲಿತ ಹೋರಾಟದ ಭಾಗವಾಗಿದ್ದಾರೆ. ಇವೆಲ್ಲವುಗಳ ಫಲ ಎಂಬಂತೆ ಚಿಕ್ಕಮಗಳೂರು ಪೊಲೀಸರ ಮೂಲಕ ನೂರ್ ಶ್ರೀಧರ್‌ಗೆ ನೀಡಿರುವ ಜಾಮೀನನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ತಾಂತ್ರಿಕ ಕಾರಣ ನೀಡಿ ಪೊಲೀಸರು ಅರ್ಜಿಯನ್ನು ಹಿಂದೆ ತೆಗೆದುಕೊಂಡಿದ್ದಾರಾದರೂ, ಮುಂದಿನ ದಿನಗಳಲ್ಲಿ ನೂರ್‌ ಶ್ರೀಧರ್‌ ಅವರ ಸಾಮಾಜಿಕ ಹೋರಾಟಗಳ ಮೇಲೆ ಕಾನೂನಿನ ಅಸ್ತ್ರವನ್ನು ಝಳಪಿಸುವ ಮುನ್ಸೂಚನೆ ಸಿಕ್ಕಿದೆ. ಒಂದು ಕಡೆ ಸರಕಾರ ಭೂಗತವಾಗಿರುವ ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ನಡೆಸುತ್ತಿರುವಾಗಲೇ ಅಧಿಕಾರಶಾಹಿಯ ಒಂದು ವರ್ಗ ಅದಕ್ಕೆ ತಡೆಗೋಡೆಯಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದೆ.

ಮೊದಲು ರಾಯಚೂರು ನಂತರ ಮಲೆನಾಡಿನಲ್ಲಿ ಶುರುವಾದ ಸಿಪಿಐ (ಮಾವೋವಾದಿ) ಪಕ್ಷದ ಶಶಸ್ತ್ರ ಹೋರಾಟ ರಾಜ್ಯದ ಪಾಲಿಗೆ ರಕ್ತಸಿಕ್ತ ಅಧ್ಯಾಯ. ಒಂದಷ್ಟು ನಕ್ಸಲೀಯರು, ಮತ್ತೊಂದಿಷ್ಟು ಪೊಲೀಸರ ಸಾವುಗಳ ನಂತರ ಕರ್ನಾಟಕದ ನಕ್ಸಲೀಯರ ರಾಜಕೀಯ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಅನೇಕರು ಹೊರಬಿದ್ದರು. ಹಾಗೆ ನಕ್ಸಲ್‌ ಹೋರಾಟದಿಂದ ಹೊರಬಿದ್ದವರನ್ನು 2014ರ ಡಿಸೆಂಬರ್ ತಿಂಗಳಿನಲ್ಲಿ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವೊಂದು ನಡೆಯಿತು. ಅಂದು ನಡೆದ 'ಸಂಭಾವಿತರ ಒಡಂಬಡಿಕೆ' ಹಿನ್ನೆಲೆಯಲ್ಲಿ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‌ ಮುಖ್ಯವಾಹಿನಿಗೆ ಬಂದರು. ಕಾನೂನಾತ್ಮಕ ಹೋರಾಟಗಳನ್ನು ಆರಂಭಿಸಿದರು. ಹೀಗಿರುವಾಗಲೇ ಚಿಕ್ಕಮಗಳೂರು ಪೊಲೀಸರ ಮೂಲಕ ನೂರ್ ಶ್ರೀಧರ್‌ ಜಾಮೀನನ್ನು ಹಿಂದಕ್ಕೆ ಪಡೆಯಬೇಕು ಎಂಬ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ 'ಸಮಾಚಾರ' ಜತೆ ನೂರ್ ಶ್ರೀಧರ್ ನಡೆಸಿದ ಮಾತುಕತೆಯ ವಿವರಗಳು ಇಲ್ಲಿವೆ.

ಸಮಾಚಾರ: ಏನಿದು ಬೆಳವಣಿಗೆ? ಯಾಕೆ ಎರಡು ವರ್ಷಗಳ ನಂತರ ನಿಮ್ಮ ಜಾಮೀನು ನಿರಾಕರಣೆಯ ಪ್ರಕ್ರಿಯೆಗೆ ಪೊಲೀಸರು ಚಾಲನೆ ನೀಡಿದ್ದಾರೆ?

ನೂರ್ ಶ್ರೀಧರ್:

ನಾವು ಭೂಗತವಾಗಿದ್ದುಕೊಂಡು ಜನ ಹೋರಾಟಗಳನ್ನು ಸಂಘಟಿಸುವುದಕ್ಕಿಂತ ಕಾನೂನಿನ ಅಡಿಯಲ್ಲಿ ಶಶಸ್ತ್ರಗಳನ್ನು ಬದಿಗಿಟ್ಟು ಹೋರಾಟ ನಡೆಸುಲು ತೀರ್ಮಾನ ತೆಗೆದುಕೊಂಡಿದ್ದು 2006ರ ಸುಮಾರಿಗೆ. ಇದಕ್ಕಾಗಿಯೇ ಪಕ್ಷವನ್ನು ಬಿಟ್ಟು ಸಾಕಷ್ಟು ಜನ ಹೊರಬಂದಿದ್ದೆವು. ನಾವು ಒಂದು ಸಮಯಕ್ಕಾಗಿ ಕಾಯುತ್ತಿದ್ದೆವು. 2014ರಲ್ಲಿ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ನಮಗೊಂದು ಅವಕಾಶ ಸಿಕ್ಕಿತು. 'ಶಾಂತಿಗಾಗಿ ನಾಗರೀಕರ ವೇದಿಕೆ' ಮಧ್ಯಸ್ಥಿಕೆಯಿಂದ ನಾವು ಮುಖ್ಯವಾಹಿನಿಗೆ ಮರಳುವಂತಾಯಿತು.

ಕಳೆದ ಎರಡು ವರ್ಷಗಳಲ್ಲಿ ನಾನು ಚಿಕ್ಕಮಗಳೂರು ಎಸ್ಪಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳ ಜತೆ ನಿಂತರ ಸಂಪರ್ಕದಲ್ಲಿದ್ದೇನೆ. ಹಲವು ವಿಚಾರಗಳಲ್ಲಿ ಅವರು ನನ್ನನ್ನು ಸಂಪರ್ಕಿಸಿದ್ದಾರೆ. ದಿಡ್ಡಳ್ಳಿ ಹೋರಾಟ ನಡೆಯುವವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಯಾವಾಗ ನಾವು ಆದಿವಾಸಿಗಳ ದನಿಗೆ ಬೆಂಬಲ ನೀಡಿ ಹೋರಾಟ ಶುರು ಮಾಡಿದೆವೋ, ಪೊಲೀಸ್‌ ಇಲಾಖೆಯಿಂದ ಕಿರುಕುಳ ಶುರುವಾಯಿತು. ಅಲ್ಲಿಂದ ಇಲ್ಲೀವರೆಗೆ ದಿನನಿತ್ಯ ನಮ್ಮನ್ನು ಹಿಂಬಾಲಿಸುವ ಕೆಲಸ ನಡೆಯುತ್ತಿದೆ. ಪೊಲೀಸ್‌ ನೆರಳಿನಲ್ಲಿಯೇ ಹೋರಾಟಗಳನ್ನು ಸಂಘಟಿಸುತ್ತಿದ್ದೇವೆ. ನಮ್ಮ ಸಂಪರ್ಕದಲ್ಲಿರುವವರ ಮೇಲೆಯೂ ಪೊಲೀಸ್‌ ದಬ್ಬಾಳಿಕೆ ಶುರುವಾಗಿದೆ. ಬಂದೂಕು ಪಕ್ಕಕ್ಕಿಟ್ಟು ಸಂವಿಧಾನಬದ್ಧವಾಗಿ ನಡೆಸುತ್ತಿರುವ ಹೋರಾಟಗಳಿಗೆ ಸಿಗುತ್ತಿರುವ ಸ್ಪಂದನೆ ಬಹುಶಃ ಅವರ (ಪೊಲೀಸರ) ನಿದ್ದೆಗೆಡಿಸಿರಬೇಕು.

ಸಮಾಚಾರ: ದಿಡ್ಡಳ್ಳಿ ಹೋರಾಟದ ನಂತರವೇ ಯಾಕೆ? ನಿಮ್ಮಿಂದಲೂ ಏನಾದರೂ ಸಮಸ್ಯೆಯಾಗಿರಬಹುದಲ್ವಾ? 

ನೂರ್ ಶ್ರೀಧರ್:

ದಿಡ್ಡಳ್ಳಿ ಹೋರಾಟವನ್ನು ಗಮನಿಸಿ. ಸ್ಥಳಕ್ಕೆ ಐಜಿ ಭೇಟಿ ನೀಡಿದಾಗ ಮಾಧ್ಯಮದವರು ಒತ್ತಿ ಒತ್ತಿ ಕೇಳಿದ್ದರು. ಇಲ್ಲಿಗೆ ನಕ್ಸಲೀಯರು ಬಂದಿದ್ದಾರೆ ಎಂದು ಸ್ಥಳೀಯ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹೇಳುತ್ತಿದ್ದಾರೆ. ಇದು ನಿಜನಾ? ಅಂತ ಪ್ರಶ್ನಿಸಿದ್ದರು. ಅದಕ್ಕೆ ಮೇಲಾಧಿಕಾರಿ, ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದರು. ಹಾಗಿದ್ದೂ, ಸ್ಥಳೀಯ ಮಟ್ಟದಲ್ಲಿ ನಕ್ಸಲೀಯ ಗುಮ್ಮವನ್ನು ಆದಿವಾಸಿಗಳ ಮೇಲೆ ಹೊರಿಸುವ ಪ್ರಯತ್ನ ನಡೆಯಿತು. ಇದು ಪರೋಕ್ಷವಾಗಿ ನಮ್ಮನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿತ್ತು ಅಷ್ಟೆ.

ಇದಾದ ನಂತರ, ಇಲಾಖೆ ಮಟ್ಟದಲ್ಲಿ ನನ್ನ ಜಾಮೀನು ತಿರಸ್ಕರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಕೊನೆಗೆ ಚಿಕ್ಕಮಗಳೂರು ಪೊಲೀಸರು ನಮ್ಮ ಮೇಲಿರುವ ನಾಲ್ಕು ಪ್ರಕರಣಗಳಲ್ಲಿ ಒಂದರ ಜಾಮೀನು ಅರ್ಜಿಯನ್ನು ನಿರಾಕರಣೆ ಮಾಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ಪಷ್ಟವಾಯಿತು. ಅದೊಂದು ಪ್ರಕರಣದಲ್ಲಿ ಜಾಮೀನು ನೀಡುವಾಗ ನ್ಯಾಯಾಲಯ ಷರತ್ತೊಂದನ್ನು ವಿಧಿಸಿತ್ತು. ಎಲ್ಲಿಗೇ ಹೋಗಬೇಕು ಎಂದರೂ ಸ್ಥಳೀಯ ಠಾಣೆಗೆ (ಚಿತ್ರದುರ್ಗ) ಮಾಹಿತಿ ನೀಡಬೇಕು ಎಂದು ಹೇಳಿತ್ತು. ಆರಂಭದಲ್ಲಿ ಚಿತ್ರದುರ್ಗದ ಸರ್ಕಲ್‌ ಇನ್ಸ್‌ಪೆಕ್ಟರ್‌ ಜತೆ ಸಂಪರ್ಕದಲ್ಲಿದ್ದೆ. ರಾಜ್ಯಾದ್ಯಂತ ಹೋರಾಟದ ಭಾಗವಾಗಿ ಓಡಾಡುತ್ತಿರುವುದು ಅವರ ಗಮನದಲ್ಲಿತ್ತು. ನಂತರ ದಿನಗಳಲ್ಲಿ ಅವರು ತೀರಿಕೊಂಡರು. ನನ್ನ ಕಡೆಯಿಂದಲೂ ಈ ಸಣ್ಣ ವಿಚಾರದಲ್ಲಿ ತಪ್ಪಾಗಿದೆ. ಮತ್ತೆ ಸಂಪರ್ಕ ಸಾಧ್ಯವಾಗಲಿಲ್ಲ. ಹಾಗಂತ ನಾನೇನು ಮಾಡುತ್ತಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿರುವ ಅಂಶವೇ ಆಗಿದೆ. ಆದರೆ ಅದನ್ನೇ ಇಟ್ಟುಕೊಂಡು ಜಾಮೀನನ್ನು ತಿರಸ್ಕರಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.


       ದಿಡ್ಡಳ್ಳಿ ಆದಿವಾಸಿಗಳ ಜತೆಯಲ್ಲಿ...
ದಿಡ್ಡಳ್ಳಿ ಆದಿವಾಸಿಗಳ ಜತೆಯಲ್ಲಿ...

ಸಮಾಚಾರ: ಮುಂದೇನು ಮಾಡುತ್ತೀರಿ? ಜಾಮೀನು ಹಿಂತೆದುಕೊಂಡರೆ ನೀವು ಜೈಲಿಗೆ ಹೋಗುತ್ತಿರಾ?

ನೂರ್ ಶ್ರೀಧರ್:

ಹೋರಾಟಗಾರರಿಗೆ ಜೈಲು ಎಂಬುದು ಅಗತ್ಯವಾಗಿರುವ ಅನುಭವ. ಅದೊಂದು ಪ್ರಪಂಚ. ಅದರ ಅನುಭವ ಪ್ರತಿ ಹೋರಾಟಗಾರನಿಗೂ ಇರಬೇಕು. ನನ್ನ ಮೇಲೆ ಶುರುವಾಗಿರುವ ಈ ದಾಳಿ ಹಿನ್ನೆಲೆಯಲ್ಲಿ ಅನೇಕರು ಪ್ರತಿಭಟನೆ ಮಾಡೋಣ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಸರಕಾರದ ಮೇಲೆ ವಿಶ್ವಾಸ ಇದೆ. ಎಲ್ಲೋ ಅಧಿಕಾರಿಗಳಲ್ಲಿ ಒಂದು ಪುಟ್ಟ ವರ್ಗ ಭ್ರಷ್ಟರು, ಶ್ರೀಮಂತರ ಪರವಾಗಿರುವವರು ನನ್ನ ಹೋರಾಟಗಳನ್ನು ಸಹಿಸದವರು ನಡೆಸುತ್ತಿರುವ ಪಿತೂರಿ ಇದು. ಹೀಗಾಗಿ ಕಾನೂನಾತ್ಮಕವಾಗಿಯೇ ನಾನು ಹೋರಾಟ ನಡೆಸುತ್ತೇನೆ. ಪ್ರತಿಭಟನೆಗಳೆಲ್ಲಾ ಬೇಡ ಎಂದು ಹೇಳಿದ್ದೇನೆ. ಒಂದು ಹೇಳೆ ಜಾಮೀನು ನಿರಾಕರಣೆಯಾದರೂ, ಜೈಲಿನಿಂದಲೇ ಹೋರಾಟ ಮಾಡುತ್ತೇನೆ. ಅಂತಿಮವಾಗಿ ಜನರ ಚಳವಳಿಯನ್ನು ಸಂಘಟಿಸುವ ಕೆಲಸ ಮಾಡಬೇಕು ಅಷ್ಟೆ.

ಸಮಾಚಾರ: ಯಾಕೆ ಈ ಹೋರಾಟದ ಕೆಚ್ಚು? ಇದೆಲ್ಲಾ ಶುರುವಾಗಿದ್ದು ಹೇಗೆ?

ನೂರ್ ಶ್ರೀಧರ್:

ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಚಿತ್ರದುರ್ಗದಲ್ಲಿ. ನಮ್ಮದು ಸೂಫಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಮುಸ್ಲಿಂ ಕುಟುಂಬ. ನನ್ನ ಅಜ್ಜ ಸೂಫಿ ಪ್ರಚಾರಕರಾಗಿದ್ದರು. ಅವರ ಹೆಸರಿನಲ್ಲಿ ಒಂದು ದರ್ಗಾವೂ ಇದೆ. 'ತೋರಿಕೆ ಅಲ್ಲ; ನಡವಳಿಕೆ' ಎಂಬುದು ಅದು ನಂಬಿಕೊಂಡಿದ್ದ ಸಿದ್ಧಾಂತವಾಗಿತ್ತು. ನಾನು 1985ರಲ್ಲಿ ಚಿತ್ರದುರ್ಗದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿಕೊಂಡಾಗ ಅಲ್ಲಿಗೆ ಆಂಧ್ರದಿಂದ ಸಾಕಷ್ಟು ವಿದ್ಯಾರ್ಥಿಗಳು ಬಂದಿದ್ದರು. ಅವರ ಬಾಯಲ್ಲಿ ಆಂಧ್ರದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟಗಳನ್ನು ಕೇಳಿ ಪ್ರಭಾವಿತನಾಗಿದ್ದೆ. ಅವತ್ತಿಗೆ ನಕ್ಸಲೈಟ್ ಅನ್ನುವುದಕ್ಕಿಂತ ರ್ಯಾಡಿಕಲ್ ಚಳವಳಿ ಕುರಿತು ಆಸಕ್ತಿ ಮೂಡಿತ್ತು. ನಾನೇ ಹುಡುಕಿಕೊಂಡು ಹೋಗಿ ಅವರನ್ನು ಸೇರಿಕೊಂಡೆ. ಸಾಕೇತ್ ರಾಜನ್ ಅವರ ಜತೆಯಲ್ಲಿ ಕರ್ನಾಟಕದ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದೆ.

ಆದರೆ ರಾಯಚೂರಿನಿಂದ ಮಲೆನಾಡಿಗೆ ಶಶಸ್ತ್ರ ಹೋರಾಟವನ್ನು ಸ್ಥಳಾಂತರಿಸುವ ವಿಚಾರವಾಗಿ ತೀವ್ರ ಭಿನ್ನಾಭಿಪ್ರಾಯ ಮೂಡಿತು. ನನಗೆ ಬಂದೂಕಿಗಿಂತ ಜನ ಹೋರಾಟಗಳನ್ನು ಕಟ್ಟುವ ಕಡೆಗೆ ಹೆಚ್ಚು ಆಸಕ್ತಿ ಇತ್ತು. ಸಾಕೇತ್ ಸಾವಿನ ನಂತರ ಪಕ್ಷದ ಕರ್ನಾಟಕ ಘಟಕವನ್ನು ಮುನ್ನಡೆಸುವಂತೆ ಹೇಳಿದರೂ ನಾನು ಒಪ್ಪಿಕೊಳ್ಳಲಿಲ್ಲ. 2006ರಲ್ಲಿ ನಾವು ಒಂದಷ್ಟು ಸಂಗಾತಿಗಳು ಶಶಸ್ತ್ರ ಹೋರಾಟವನ್ನು ಪಕ್ಕಕ್ಕಿಟ್ಟು ಜನ ಚಳವಳಿಗಳನ್ನು ಕಟ್ಟುವ ನಿಟ್ಟಿನಲ್ಲಿ ಪಕ್ಷದಿಂದ ದೂರ ಆದೆವು. ನಮ್ಮ ಮೇಲಿನ ಕೇಸುಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತೇವೆ. ಜಾಮೀನು ನೀಡಲು ನಿಮ್ಮ ಕಡೆಯಿಂದ ತಕರಾರು ಇರುವುದು ಬೇಡ ಎಂದಷ್ಟೆ ಸರಕಾರದ ಜತೆ ಮಾತುಕತೆ ಮಾಡಿಕೊಂಡೆವು. ಇದೀಗ ಮುಖ್ಯವಾಹಿನಿಯಲ್ಲಿ ಹೋರಾಟಗಳನ್ನು ಸಂಘಟಿಸಿಕೊಂಡು ಬರುತ್ತಿದ್ದೇವೆ.

ಹಳೆಯ ದಿನಗಳನ್ನು ನೆನಪಿಸಕೊಂಡರೆ ವಿಷಾಧವಿದೆ. ಇಷ್ಟೆಲ್ಲಾ ಜನರ ತ್ಯಾಗ ಬಲಿದಾನಗಳು ಫಲ ನೀಡಲಿಲ್ಲ ಎಂಬ ಕೊರಗಿದೆ. ಆದರೆ ಎಲ್ಲವೂ ಜೀವನದ ಅನುಭವದ ಪಾಠಗಳು. ಹಳೆಯದ್ದನ್ನು ಬೈದುಕೊಂಡು ಇದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ. ಹಿಂದಕ್ಕೆ ಬಿಟ್ಟು ಮುಂದಿನ ಬದುಕಿನಲ್ಲಿ ಜನರಿಗಾಗಿಯೇ ಪ್ರಮಾಣಿಕವಾದ ಹೋರಾಟವನ್ನು ಕಟ್ಟಬೇಕು ಅಂದುಕೊಂಡಿದ್ದೇವೆ. ಅದಕ್ಕೆ ಅಡ್ಡಿಗಳ ಇದ್ದೇ ಇರುತ್ತವೆ. ಅದನ್ನು ದಾಟುವುದು ಜನಹೋರಾಟದ ಮೂಲ ಅಗತ್ಯಗಳಲ್ಲೊಂದು.