samachara
www.samachara.com
ಆಧಾರ್‌ ಕಾರ್ಡ್‌ನಿಂದ ಪೀಠಗಳವರೆಗೆ: 'ಹಣಕಾಸು ಮಸೂದೆ- 2017' ಯಾಕೆ ವಿವಾದಾತ್ಮಕ?
ಸುದ್ದಿ ಸಾಗರ

ಆಧಾರ್‌ ಕಾರ್ಡ್‌ನಿಂದ ಪೀಠಗಳವರೆಗೆ: 'ಹಣಕಾಸು ಮಸೂದೆ- 2017' ಯಾಕೆ ವಿವಾದಾತ್ಮಕ?

ರಾಜ್ಯಸಭೆಯಲ್ಲಿ

ಇಂದು ಕೇಂದ್ರ ಸರಕಾರ ತರಾತುರಿಯಲ್ಲಿ ಮಂಡಿಸಿರುವ ಹಣಕಾಸು ಮಸೂದೆ ಕುರಿತು ಚರ್ಚೆ ನಡೆಯಲಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ. 1ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಆದಾಯ ತೆರಿಗೆ ಇಲಾಖೆಗೆ ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ದಾಳಿ ಮತ್ತು ವಿಚಾರಣೆ ನಡೆಸಲು ಪರಮಾಧಿಕಾರ ನೀಡುವ ಅವಕಾಶವನ್ನು ಮಸೂದೆ ಒಳಗೊಂಡಿತ್ತು. ಜತೆಗೆ, ಕಳೆದ ವಾರ ತರಾತುರಿಯಲ್ಲಿ ಸುಮಾರು 40 ವಿಚಾರಗಳನ್ನು ಮಸೂದೆಯ ವ್ಯಾಪ್ತಿಗೆ ತರಲಾಯಿತು. ಇವುಗಳಲ್ಲಿ ನ್ಯಾಯ ಪೀಠಗಳನ್ನು ಮುಚ್ಚಿವ ಹಾಗೂ ಆಧಾರ್‌ ಕಾರ್ಡ್ ಕಡ್ಡಾಯದಂತಹ ಗಂಭಿರ ವಿಚಾರಗಳನ್ನು ಒಳಗೊಂಡಿವೆ. ಸುಪ್ರಿಂ ಕೋರ್ಟ್‌ ಆದೇಶವನ್ನು ಕಡೆಗಣಿಸಿ, ಆಧಾರ್‌ ಕಾರ್ಡ್‌ನ್ನು ಆದಾಯ ತೆರಿಗೆ ಪಾವತಿಯಿಂದ ಹಿಡಿದು, ಸಿಮ್‌ ತೆಗೆದುಕೊಳ್ಳುವವರೆಗೆ ಕಡ್ಡಾಯಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ಮಸೂದೆಗೆ ಲೋಕಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಸದ್ಯ ಹಣಕಾಸು ಮಸೂದೆ- 2017 ರಾಜ್ಯಸಭೆಯ ಅಂಗಳದಲ್ಲಿದೆ. ಲೋಕಸಭೆಯಲ್ಲಿ ಮಂಡನೆಯಾಗಿ, ಒಪ್ಪಗೆ ಪಡೆದುಕೊಂಡ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಸಿಗಬೇಕು ಅಂತೇನೂ ಇಲ್ಲ. ಅಥವಾ ಮಸೂದೆಗೆ ಬದಲಾವಣೆಗಳನ್ನು ರಾಜ್ಯಸಭೆ ಸೂಚಿಸಬಾರದು ಅಂತೇನಿಲ್ಲ. ಸದ್ಯ ರಾಜ್ಯಸಭೆಯಲ್ಲಿ ಆರಂಭವಾಗಿರುವ ಚರ್ಚೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವ ವಿವಾದಾತ್ಮಕ ನಡೆಯ ಜತೆಗೆ ಹಣಕಾಸು ಮಸೂದೆಯಲ್ಲಿರುವ ಇನ್ನುಳಿದ ಅಂಶಗಳ ಕುರಿತು ಯಾವ ತೀರ್ಮಾನಕ್ಕೆ ಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

ವಿವಾದಾತ್ಮಕ ಮಸೂದೆ: 

ಆದಾಯ ತೆರಿಗೆ ಪಾವತಿಯಿಂದ ಶುರುವಾಗಿ ಸಿಮ್‌ ಕಾರ್ಡ್‌ವರೆಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವ ಈ ಹಣಕಾಸು ಮಸೂದೆಯಲ್ಲಿ ನ್ಯಾಯ ಪೀಠಗಳನ್ನು ಮುಚ್ಚಿಸುವ ವಿವಾದಾತ್ಮಕ ವಿಚಾರವೂ ಒಳಗೊಂಡಿದೆ.

ನಮ್ಮ ದೇಶದಲ್ಲಿ ಕಂಪನಿ ವಿವಾದಗಳು, ಪರಿಸರ ವಿವಾದಗಳು, ವೃತ್ತಿ ಸಂಬಂಧಿತ ವ್ಯಾಜ್ಯಗಳು, ಸೆನ್ಸಾರ್‌ಶಿಪ್, ಸಾಲ ವ್ಯಾಜ್ಯಗಳು ಹೀಗೆ ಹಲವು ವ್ಯಾಜ್ಯಗಳ ಪರಿಹಾರಗಳಿಗೆ ನ್ಯಾಯಲಯದಿಂದ ಹೊರತಾದ ಪೀಠ(ಟ್ರಿಬ್ಯೂನಲ್‌) ಗಳನ್ನು ಸ್ಥಾಪಿಸಿಲಾಗಿದೆ. ಇಡೀ ದೇಶಾದ್ಯಂತ ಹರಿದು ಹಂಚಿ ಹೋಗಿರುವ ಪೀಠಗಳನ್ನು ಕೇಂದ್ರ ಸರಕಾರ ಮಂಡಿಸಿರುವ ಹಣಕಾಸು ಮಸೂದೆ- 2017 'ಸರಿ ದಾರಿ'ಗೆ ತರಲು ಹೊರಟಿದೆ. ವಿಶೇಷ ಅಂದರೆ, ಇಂತಹ ಪೀಠಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಿದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿ. ತುರ್ತು ಪರಿಸ್ಥಿತಿ ಸಮಯದಲ್ಲಿ ಅವರು ಸಂವಿಧಾನಕ್ಕೆ ವಿವಾದಾತ್ಮಕ 42ನೇ ತಿದ್ದುಪಡಿಯನ್ನು ತರುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಗು ತೂರಿಸಲು ಮುಂದಾಗಿದ್ದರು.

ಸದ್ಯ ಮಂಡನೆಯಾಗಿರುವ ಹಣಕಾಸು ಮಸೂದೆ ಮೂಲಕ ಈ ಪೀಠಗಳನ್ನು 'ಸರಿ ದಾರಿ'ಗೆ ತರಲು ಕೇಂದ್ರ ಸರಕಾರ ಮುಂದಾಗಿರುವುದು ಇಂದಿರಾ ನಡೆಯನ್ನು ನೆನಪಿಸುತ್ತಿವೆ. ಮಸೂದಯಲ್ಲಿ ಕೆಲವು ನ್ಯಾಯಪೀಠಗಳನ್ನು ಮುಚ್ಚಲು ಕ್ರಮದ ಉತ್ಸಾದ ತೋರಿಸಲಾಗಿದೆ. ಇನ್ನು ಕೆಲವನ್ನು ಜೋಡಿಸಲು ಮನಸ್ಸು ಮಾಡಲಾಗಿದೆ. ಇದಕ್ಕಿಂತ ಹೆಚ್ಚಾಗಿ ನ್ಯಾಯಪೀಠಗಳಿಗೆ ಅಧ್ಯಕ್ಷರ ನೇಮಕಾತಿ ಹಾಗೂ ಪದಚ್ಯುತಿ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ವಿಶೇಷ ಅಧಿಕಾರವನ್ನು ಮಸೂದೆ ನೀಡಲಿದೆ.

ಪರಿಣಿತರ ಪ್ರಕಾರ, ನ್ಯಾಯಪೀಠಗಳನ್ನು ಮುಚ್ಚಾಗಿರುವ ಕೇಂದ್ರ ಸರಕಾರದ ಮಸೂದೆ ಮೇಲ್ನೋಟದಲ್ಲಿಯೇ 'ಅಧಿಕಾರದಾಹ'ವನ್ನು ಬಿಂಬಿಸುತ್ತಿದೆ. ಕಾನೂನಿನ ವ್ಯಾಪ್ತಿಯಲ್ಲಿ ಅಧ್ಯಯನ ಕೊರತೆ ಎದ್ದು ಕಾಣಿಸುತ್ತಿದೆ.

ಆಧಾರ್‌ ಕಡ್ಡಾಯದ ವಿಚಾರ:

ಈ ವಿಚಾರದ ಜತೆಗೆ ಮಸೂದೆಯಲ್ಲಿ ಆಧಾರ್‌ ಕಾರ್ಡ್‌ ವಿಚಾರ ಕೂಡ ಒಳಗೊಂಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ- 2ರ ಅವಧಿಯಲ್ಲಿ 'ರಾಷ್ಟ್ರೀಯ ಗುರುತು ಪಾಧಿಕಾರ' ಮಸೂದೆಯನ್ನು ಮಂಡಿಸಲಾಯಿತು. ಮಸೂದೆ ಮೇಲೆ ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಆಧಾರ್‌ ಕಾರ್ಡ್ ಲೋಪಗಳಮೇಲೆ ದೊಡ್ಡ ಚರ್ಚೆಯೇ ನಡೆದಿತ್ತು. ಸಮಿತಿಯು ವಿಸ್ತೃತ ಚರ್ಚೆಯ ನಂತರ ಕೆಳಕಂಡ ಅಂಶಗಳಗಳನ್ನು ಪಟ್ಟಿ ಮಾಡಿತ್ತು.

  1. ಯುಐಡಿ ಯೋಜನೆಯ ಪರಿಕಲ್ಪನೆಯಲ್ಲಿ ಯಾವುದೇ ಕ್ಲಾರಿಟಿ ಇಲ್ಲ ಮತ್ತು ದೂರಗಾಮಿ ನೆಲೆಯಲ್ಲಿ ಗುರಿಯೂ ಇಲ್ಲ.
  2. ದೊಡ್ಡ ಪ್ರಮಾಣದ ಲೋಪಗಳನ್ನು ಯೋಜನೆ ಒಳಗೊಂಡಿದೆ.
  3. ಜನರ ಮಾಹಿತಿಯನ್ನು ಗೌಪ್ಯವಾಗಿಡುವ ಕುರಿತು ಮತ್ತೊಂದು ಮಸೂದೆಯನ್ನು ಮಂಡಿಸುವ ಅಗತ್ಯ ಇದೆ.
  4. ಅಕ್ರಮ ವಲಸಿಗರಿಗೆ ಸಂವಿಧಾನಿಕ ಹಕ್ಕನ್ನು ನೀಡಿದಂತಾಗುತ್ತೆ.

ಇಂತಹ ಹಲವು ಸಂಗತಿಗಳನ್ನು ಸ್ಥಾಯಿ ಸಮಿತಿಯಲ್ಲಿ ಗಮನಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾಗಿದ್ದವರು ಬಿಜೆಪಿಯ ಯಶವಂತ ಸಿನ್ಹಾ. ಆದರೆ ಲೋಕಸಭೆಗೆ ಬಂದಾಗ, ಸಮಿತಿ ಗಮನಿಸಿದ ಅಂಶಗಳನ್ನು ಪಕ್ಕಕ್ಕಿಡಲಾಯಿತು. ಸಂಸದರಿಗೆ ಚರ್ಚೆಗೆ ಅವಕಾಶವೇ ಇಲ್ಲದಂತೆ ಮಸೂದೆಗೆ ಅನುಮೋದನೆ ಸಿಕ್ಕಿತು. ಅಂದು ಬಹಿರಂಗವಾಗಿ ಆಧಾರ್ ಕಾರ್ಡ್‌ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಇದೀಗ ತೆರೆಮರೆಯಲ್ಲಿ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

ಸದ್ಯ ರಾಜ್ಯಸಭೆಯಲ್ಲಿ ಆಧಾರ್‌ ಕಾರ್ಡ್ ಕಡ್ಡಾಯ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಒಳಗೊಂಡಿರುವ ಹಣಕಾಸು ಮಸೂದೆಯ ಮೇಲೆ ಚರ್ಚೆ ಶುರುವಾಗಿದೆ. ಮೇಲ್ಮನೆಯ ಸದಸ್ಯರ ತೀರ್ಮಾನಗಳು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿವೆ.