Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!
ಸುದ್ದಿ ಸಾಗರ

Mockery Of Democracy: ಇದ್ದಲ್ಲೇ ಎದ್ದು ನಿಂತ ‘ದೇವಸ್ಥಾನದ ಅರ್ಚಕ’ ಯೋಗಿ!

'ಯೋಗ' ಎಂಬುದು ನಾಮಪದ. ಹೊಂದಿಕೆ, ಕೂಡುವುದು, ಇಂದ್ರಿಯ ನಿಗ್ರಹ, ಪ್ರಾಪ್ತಿ, ಧ್ಯಾನ, ಅದೃಷ್ಟ ಹೀಗೆ ಹಲವು ಅರ್ಥಗಳು ಈ ಪದಕ್ಕೆ ಕನ್ನಡದಲ್ಲಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಆದಿತ್ಯನಾಥ್ ಅವರಿಗೆ 'ಯೋಗ' ಒಲಿದಿದೆ ಎಂಬ ವ್ಯಾಖ್ಯಾನಗಳು ಕಳೆದ ಎರಡು ದಿನಗಳ ಅಂತರದಲ್ಲಿ ಕರ್ನಾಟಕದ ಮಾಧ್ಯಮಗಳ ಮೂಲಕ ಸಾರಿ ಸಾರಿ ಹೇಳಲಾಗುತ್ತಿದೆ.

ಅವುಗಳ ಪ್ರಕಾರ, ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಸಂಸದರಾಗಿರುವ ಆದಿತ್ಯನಾಥರಿಗೆ ಒಲಿದಿರುವುದು 'ಯೋಗ'! ವಾಸ್ತವದಲ್ಲಿ ಆ ರಾಜ್ಯದ ಯಾವುದೇ ವಿಧಾನಸಭೆಯನ್ನು ಪ್ರತಿನಿಧಿಸದ, ಬಿಜೆಪಿಯ ಮೆದುಳು 'ರಾಷ್ಟ್ರೀಯ ಸ್ವಯಂ ಸೇವಕ' ಸಂಘದಿಂದ ಹೊರತಾದ ಸಂಘಟನೆಯನ್ನು ಕಟ್ಟಿಕೊಂಡಿರುವ ಆದಿತ್ಯನಾಥರಿಗೆ ಸಿಎಂ ಖುರ್ಚಿ ಸಿಕ್ಕಿರುವುದು ಒಂದು ಅರ್ಥದಲ್ಲಿ ಅದೃಷ್ಟವೂ ಹೌದು, ಹೊಂದಾಣಿಕೆಯೂ ಹೌದು.

ಈವರೆಗಿನ ರಾಜಕೀಯ ವಿಶ್ಲೇಷಣೆಗಳು, ಸೈದ್ಧಾಂತಿಕ ಶೇಷಗಳ ಆಚೆಗೆ ದೇಶದ ರಾಜಕೀಯದಲ್ಲಿ ನಡೆದಿರುವ ಈ ಬೆಳವಣಿಗೆ ಹೊಸ ಮಾದರಿಯ ಬೆಳವಣಿಗೆಗೆ ಮುನ್ನಡಿ ಬರೆಯಲಿದೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ದೇಶದಲ್ಲಿ ಧರ್ಮದ ನೆರಳಿನಲ್ಲಿ ಸ್ಪಷ್ಟವಾದ ಎರಡು ವಿಭಾಗಗಳು ಮೂಡಲಿವೆ. ಒಂದು ಭಾಗದಲ್ಲಿ ತನ್ನದೇ ಆದ ಸೈದ್ಧಾಂತಿಕ ಇತಿಹಾಸವನ್ನು ಹೊಂದಿರುವ ಆರ್‌ಎಸ್‌ಎಸ್‌ ಮತ್ತು ಅದರ ರಾಜಕೀಯ ಮುಖವಾಣಿ ಬಿಜೆಪಿ ಜತೆಗೆ ನಿರ್ಮೋಯಿ ಅಖಾಡ (ರಾಮಮಂದಿರ ವಿಚಾರದಲ್ಲಿ ಸುಪ್ರಿಂ ಕೋರ್ಟ್‌ನಲ್ಲಿಅ ರ್ಜಿದಾರರಾಗಿದ್ದ ಸಂಘಟನೆ), ಹಿಂದೂ ಮಹಾಸಭಾ, ಹಿಂದೂ ಯುವ ವಾಹಿನಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸಲಿವೆ. ಇನ್ನೊಂದು ಭಾಗದಲ್ಲಿ ಯಾರು ಇರಲಿದ್ದಾರೆ ಎಂಬುದು ಕಲ್ಪನೆಗೆ ಬಿಟ್ಟ ವಿಚಾರ.

ಅಂದಹಾಗೆ, ಈ 'ಹಿಂದೂ ಯುವ ವಾಹಿನಿ' ಯೋಗಿ ಆದಿತ್ಯನಾಥರ ಮಾತೃ ಸಂಘಟನೆ. ಹಿಂದೂ ಸಮಾಜದ ನಿಜವಾದ ವಾರಸುದಾರರು ಎಂದು ಹೇಳಿಕೊಂಡು, ಸೇವೆ- ಸಂಘರ್ಷಗಳ ಹಾದಿಯಲ್ಲಿ ಸಾಗಿ ಬಂದ ಸಂಘಟನೆಯ ಬೆಳವಣಿಗೆಯೇ ಯೋಗಿಗೆ ಮುಖ್ಯಮಂತ್ರಿ ಖುರ್ಚಿಯನ್ನು ದಯಪಾಲಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಜನ ಮತ ನೀಡದಿದ್ದರೂ, ನೀಡೇ ನೀಡುತ್ತಾರೆ ಎಂಬ ಭರವಸೆ ಮಾತ್ರವೇ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಕೂಡ ಒಂದು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ 'ಕಾವಿಧಾರಿ'ಯನ್ನು ಕರೆತಂದಿದೆ.

ಈ ಹಿಂದೆ ಮಧ್ಯಪ್ರದೇಶದಲ್ಲಿ ಕಾವಿತೊಟ್ಟು, ಖಾದಿ ಜಾಗದಲ್ಲಿ ಆಡಳಿತ ನಡೆಸಿದ ಉಮಾಭಾರತಿ ನಂತರ ಇದು ಎರಡನೇ ನಿದರ್ಶನ.ಆದರೆ ದೇಶದ ಧಾರ್ಮಾಧಾರಿತ ರಾಜಕಾರಣದ ಇತಿಹಾಸವನ್ನು ಇದು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುವ ಬೆಳವಣಿಗೆ. ವೇದಿಕೆಯ ಬಲ ಭಾಗದಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿರುವ ಜನಪ್ರಿಯ ರಾಜಕಾರಣಿ, ಮಧ್ಯದಲ್ಲಿ ಹಿರಿಯ ವಯಸ್ಸಿನ ರಾಜ್ಯಪಾಲರು, ಕೊನೆಯಲ್ಲಿ ಯೋಗಿ ಆದಿತ್ಯನಾಥ್.

ವೇದಿಕೆಯ ಸುತ್ತ ರಾಜಕೀಯ ಎದುರಾಳಿಗಳು, ಬಿಜೆಪಿಯ ಹಿರಿಯ ನಾಯಕರ ಉಪಸ್ಥಿತಿ. ಜನರ ಕರತಾಡನದ ನಡುವೆ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಆದಿತ್ಯನಾಥ್ ಓದಿದ್ದಾರೆ. 'ಈಶ್ವರ' ಹೆಸರಿನಲ್ಲಿ ಸಂವಿಧಾನದ ರಕ್ಷಣೆ ಮಾಡುತ್ತೇನೆ ಎಂದು ರಾಜ್ಯದ ಅಧಿಕಾರ ಚುಕ್ಕಾಣಿಗೆ ಸಹಿ ಮಾಡಿದ್ದಾರೆ. ಜತೆಗೆ, ಇನ್ನಿಬ್ಬರು ಉಪಮುಖ್ಯಮಂತ್ರಿಗಳನ್ನು, ಸಂಪುಟ ಸಹೋದ್ಯೋಗಿಗಳನ್ನು ಅವರಿಗೆ ನೀಡಲಾಗಿದೆ.

ಕೆಲವೇ ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಅರ್ಚಕರಾಗಿ, ಚಿಕ್ಕವಯಸ್ಸಿನಲ್ಲಿಯೇ ಸಂಸದರಾಗಿ ರಾಜಕೀಯ ಪ್ರವೇಶಿಸಿ ಯೋಗಿ ಇವತ್ತು ಸಂವಿಧಾನ ಬದ್ಧವಾಗಿಯೇ ಅಧಿಕಾರದ ಗದ್ದುಗೆ ಏರಿದ್ದಾರೆ. ಇದು ಪ್ರಜಾಪ್ರಭುತ್ವದ ವಿಸ್ಮಯ ಎಂದು ಬಣ್ಣಿಸಲಾಗುತ್ತಿದೆ. ಅದೇ ವೇಳೆ, ತಮಾಷೆಯಾಗಿಯೂ ಕಾಣಿಸುತ್ತಿದೆ. ಅದಕ್ಕೆ ಅದರದ್ದೇ ಆದ 'ಇತಿಹಾಸ'ವೂ ಇದೆ.

ನಿಜಕ್ಕೂ ಯಾರು ಈ ಯೋಗಿ?:

ಘೋರಖ್‌ನಾಥ್ ದೇವಾಲಯದಲ್ಲಿ ಆದಿತ್ಯನಾಥ್ ಯೋಗಿ
ಘೋರಖ್‌ನಾಥ್ ದೇವಾಲಯದಲ್ಲಿ ಆದಿತ್ಯನಾಥ್ ಯೋಗಿ

ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ಪೂರ್ವದಲ್ಲಿ ಬರುವ ಗೋರಕ್‌ಪುರ್ ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಗೋರಕ್‌ನಾಥ್ ದೇವಾಲಯದ ಪ್ರಧಾನ ಅರ್ಚಕರಾಗಿದ್ದವರು. ಆರಂಭದಲ್ಲಿ ಹಿಂದೂ ಮಹಾಸಭಾ ಜತೆಗೆ ಇವರ ಒಡನಾಟ ಇತ್ತಾದರೂ, ನಂತರ ದಿನಗಳಲ್ಲಿ ತಮ್ಮದೇ ಆದ ಸಂಘಟನೆಯೊಂದನ್ನು ಕಟ್ಟಿಕೊಂಡರು. ಅದಕ್ಕೆ ಅವರಿಟ್ಟ ಹೆಸರು ಹಿಂದೂ ಯುವ ವಾಹಿನಿ. ಇದಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ರೀತಿಯಲ್ಲಿ ಕರ್ನಾಟಕ ಮೂಲದ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆಯಂತೆ. ಚಿಕ್ಕ ವ್ಯತ್ಯಾಸ ಏನೆಂದರೆ, ಉತ್ತರ ಪ್ರದೇಶದಲ್ಲಿ ಮಾತ್ರ ರಾಜಕಾರಣಕ್ಕೆ ಬಂದಾಗ, ಯೋಗಿ ಮತ್ತವರ ಸಂಘಟನೆ ಬಿಜೆಪಿ ಅಡಿಯಲ್ಲಿಯೇ ಚುನಾವಣೆಯನ್ನು ಎದುರಿಸಿಕೊಂಡು ಬಂದಿದೆ.

ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಸಂಸದರಾಗಿದ್ದು 1999ರಲ್ಲಿ. ಅವತ್ತಿಗೆ ಅವರ ವಿಜಯದ ಅಂತರ 7, 339 ಮತಗಳು. ಅವತ್ತಿಗೆ ಯೋಗಿಯ ವಯಸ್ಸು ಕೇವಲ 26 ಅಷ್ಟೆ. ಹತ್ತು ವರ್ಷಗಳ ನಂತರ 2009ರಲ್ಲಿ ನಡೆದ ಚುನಾವಣೆಯಲ್ಲಿ ಯೋಗಿ ಪಡೆದ ಗೆಲುವಿನ ಅಂತರ 2,20,000 ಮತಗಳಾಗಿದ್ದವು. ಇವತ್ತಿಗೆ ಗೋರಕ್‌ಪುರ ಲೋಸಭಾ ಚುನಾವಣೆ ನಡೆದರೆ, ಜನ ಯೋಗಿ ಗೆಲ್ಲುತ್ತಾರೋ, ಸೋಲುತ್ತಾರೋ ಎಂಬ ಚರ್ಚೆಗಳಿಗಿಂತ, ಯೋಗಿ ಎಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂದು ಚರ್ಚಿಸುತ್ತಾರೆ.

ಇದು ಯೋಗಿ ಪಡೆದುಕೊಂಡಿರುವ ಜನಪ್ರಿಯತೆಗೆ ಸಾಕ್ಷಿ.ಯಾಕೆ ಈ ಪ್ರಮಾಣದ ಜನಪ್ರಿಯತೆಯನ್ನು ಒಬ್ಬ ರಾಜಕಾರಣಿಯಾಗಿ, ದೇವಸ್ಥಾನದ ಅರ್ಚಕನಾಗಿ ಯೋಗಿ ಪಡೆದುಕೊಂಡರು ಎಂಬುದಕ್ಕೆ ಇನ್ನಷ್ಟು ನಿದರ್ಶನಗಳು ಸಿಗುತ್ತವೆ.ಮೊದಲನೆಯದಾಗಿ, ಗೋರಕ್‌ನಾಥ ದೇವಾಲಯಕ್ಕೆ ಬರುವ ಜನರ ಸಂಕಷ್ಟಗಳನ್ನು ಯೋಗಿ ಆಲಿಸುತ್ತಿದ್ದರು. ಅಷ್ಟು ಮಾತ್ರವಲ್ಲ, ಆ ಸಂಕಷ್ಟಗಳಿಗೆ ಆಡಳಿತಾತ್ಮಕ ಪರಿಹಾರಗಳನ್ನು ಕೊಡಿಸಲು ಆದೇಶಗಳನ್ನು ಹೊರಡಿಸುತ್ತಿದ್ದರು.

ಇವತ್ತು ಗೋರಕ್‌ಪುರ್ ಜಿಲ್ಲೆಯಿಂದ ಗೆದ್ದು ಬಂದಿರುವ 8 ಶಾಸಕರ ಹಿಂದೆ ಕೆಲಸ ಮಾಡಿರುವುದು ಯೋಗಿ ಅವರ ಜನಪ್ರಿಯತೆ. ಅದೂ ಕೂಡ ಅಮಿತ್‌ ಶಾನಂತಹ ತಂತ್ರಗಾರನಿಗೆ ಬಂಡವಾಳವಾಗಿತ್ತು. ಒಂದು ಮೂಲದ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 88 ಶಾಸಕರು ಯೋಗಿ ಆದಿತ್ಯನಾಥ್‌ ಬೆನ್ನಿಗೆ ನಿಲ್ಲುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಚೌಕಟ್ಟುಗಳನ್ನು ದಾಟಿ ಹಿಂದುತ್ವದ ಅಜೆಂಡಾಗಳನ್ನು ಅವರು ಮುಂದಿಡುತ್ತಾ ಬಂದಿದ್ದಾರೆ. ನ್ಯಾಯಾಲಯದಲ್ಲೂ ದಾವೆಗಳನ್ನು ಹೂಡಿಕೊಂಡು ಬಂದಿದ್ದಾರೆ.

ಯೋಗಿ ಜನಪ್ರಿಯತೆಯ ಹಿಂದಿರುವ ಎರಡನೇ ಪ್ರಮುಖ ಕಾರಣ, ಧರ್ಮಾಧಾರಿತ ರಾಜಕಾರಣದ ಬದಲಾಗುತ್ತಿರುವ ಆಲೋಚನೆಗಳು. 1999ರಿಂದ 2009ರ ನಡುವಿನ ಒಂದು ದಶಕಗಳ ಅಂತರದಲ್ಲಿ ಯೋಗಿ ನೇತೃತ್ವದ ಹಿಂದೂ ಯುವ ವಾಹಿನಿ ಸುಮಾರು 18 ಕೋಮು ಗಲಭೆಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದೆ. ಸ್ಮಶಾನವೊಂದರ ಆಲದ ಮರದ ಚಿಕ್ಕ ವಿಚಾರವನ್ನು ಕೋಮು ಗಲಭೆಯಾಗಿ ಪರಿವರ್ತಿಸಿದ ಸುದ್ದಿಗಳು ಯೋಗಿ ಆದಿತ್ಯನಾಥ್‌ ಹೆಸರಿನ ಜತೆ ತಳಕು ಹಾಕಿಕೊಂಡಿವೆ.

ಅದಕ್ಕಿಂತ ಹೆಚ್ಚಾಗಿ, ಯೋಗಿಯ ಕೋಮು ದ್ವೇಷವನ್ನು ಬಡಿದೆಬ್ಬಿಸುವಂತಹ ಹೇಳಿಕೆಗಳು ಆಗಾಗ್ಗೆ ರಾಷ್ಟ್ರೀಯ ಸುದ್ದಿಗಳಾಗುತ್ತಲೇ ಬಂದಿವೆ, ಮತ್ತೆ ನೆನಪು ಮಾಡಿಕೊಡಲಾಗುತ್ತಿದೆ.ಲೋಕಸಭಾ ಕ್ಷೇತ್ರವೊಂದರ ಚುನಾಯಿತ ಸಂಸದನಾಗಿ ಕೂಡ ಯೋಗಿ ನಡೆಸಿದ ರಾಜಕೀಯ ಇದೇ ಮಾದರಿಯಲ್ಲಿದೆ ಎಂಬುದು ಗಮನಾರ್ಹ.

ಈವರೆಗೆ ಲೋಕಸಭೆಯಲ್ಲಿ ಯೋಗಿ ಆದಿತ್ಯನಾಥ್ ಒಟ್ಟು 5 ಮಸೂದೆಗಳನ್ನು ವೈಯಕ್ತಿಕವಾಗಿ ಮಂಡಿಸಿದ್ದಾರೆ. ಗೋ ಹತ್ಯೆ ವಿರೋಧಿಸಿ ಕಾನೂನಿಗೆ ಆಗ್ರಹ, ದೇಶದ ಹೆಸರನ್ನು 'ಇಂಡಿಯಾ' ಬದಲಿಗೆ 'ಭಾರತ್' ಎಂದು ಬದಲಾಯಿಸಲು ಕೋರಿದ ಮಸೂದೆ, ಮತಾಂತರ ನಿಷೇಧಕ್ಕೆ ಆಗ್ರಹ, ಏಕರೂಪ ನಾಗರೀಕ ಸಂಹಿತೆಗಳಿಗೆ ಆಗ್ರಹ ಹೀಗೆ ದಾರ್ಮಿಕತೆ ನೆಲೆಯ ಜನಪ್ರಿಯ ರಾಜಕಾರಣವನ್ನು ಯೋಗಿ ನಡೆಸಿಕೊಂಡು ಬಂದಿರುವುದು ಎದ್ದು ಕಾಣಿಸುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ:

ಪ್ರಧಾನಿ ಮೋದಿ ಭೇಟಿ ಮಾಡಿದ ನಿಯೋಗವೊಂದರ ಜತೆ ಯೋಗಿ ಆದಿತ್ಯನಾಥ್
ಪ್ರಧಾನಿ ಮೋದಿ ಭೇಟಿ ಮಾಡಿದ ನಿಯೋಗವೊಂದರ ಜತೆ ಯೋಗಿ ಆದಿತ್ಯನಾಥ್

ಇಂತಹ ಹಿನ್ನೆಲೆಯ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಗದ್ದುಗೆ ಏರುತ್ತಿದ್ದಂತೆ ಸಹಜವಾಗಿಯೇ ಒಂದು ವಲಯದಲ್ಲಿ ಆತಂಕ ಮನೆ ಮಾಡಿದೆ. ಭವಿಷ್ಯದ ಕೋಮು ದಳ್ಳುರಿಗಳ ಬಗ್ಗೆ ಚಿಂತೆ ಮೂಡಿದೆ.ಇದರ ಜತೆಗೆ, ಯೋಗಿ ಪ್ರಧಾನಿ ಮೋದಿ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಯ್ಕೆಯಾಗಿರಲಿಲ್ಲ ಎಂದು 'ಕನ್ನಡ ಪ್ರಭ'ದ ವರದಿ ಹೇಳುತ್ತದೆ. 'ವಿಜಯ ಕರ್ನಾಟಕ' ವ್ಯತಿರಿಕ್ತ ಮಾಹಿತಿ ನೀಡಲು ಪ್ರಯತ್ನ ನಡೆಸುತ್ತಿದೆ. ಟಿವಿ ಮಾಧ್ಯಮಗಳು 'ಮೋದಿ ಟಾರ್ಗೆಟ್' ಮಟ್ಟದಲ್ಲಿವೆ. ಮೋದಿ ಆಚೆಗೆ ಕ್ಯಾಮೆರಾಗಳು ಫೋಕಸ್ ಆಗುತ್ತಲೇ ಇಲ್ಲ.

ಈ ಹೊಸ ಮಾದರಿಯ ರಾಜಕಾರಣದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರೆ ಉತ್ತರ ಪ್ರದೇಶದ ರಾಜಕಾರಣವನ್ನೂ ಅಷ್ಟೆ ಹತ್ತಿರದಿಂದ ಗಮನಿಸಬೇಕಿದೆ. ದೇಶದ ಅತಿ ದೊಡ್ಡ ರಾಜ್ಯ, ಒಟ್ಟು 403 ಶಾಸಕ ಸ್ಥಾನಗಳು. ಈ ಬಾರಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದೆಯಾದರೂ, ಆಳದಲ್ಲಿ ಅದು ರಾಜ್ಯದಲ್ಲಿ ಹಿಂದೂ ಮತೀಯವಾದಿ ರಾಜಕೀಯ ಶಕ್ತಿಗಳ ಒಗ್ಗಟ್ಟಿನ ಜಯವಾಗಿದೆ.

ಹಾಗೆ ನೋಡಿದರೆ, ಬಿಜೆಪಿ ಪಡೆದ ಮತಗಳಿಕೆಯ ಹೆಚ್ಚು ಕಡಿಮೆ ಎರಡರಷ್ಟು ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಪಡೆದುಕೊಂಡಿವೆ. ಆದರೆ ಸ್ಥಾನಗಳ ವಿಚಾರದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಈ ಕುರಿತು 'ಪ್ರಜಾವಾಣಿ'ಯ ಹೊಸ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ.

ಈ ಬಾರಿ ಯೋಗಿ ಆದಿತ್ಯನಾಥ್ ನೇತೃತ್ವದ ಹಿಂದೂ ಯುವ ವಾಹಿನಿ ಸಂಘಟನೆಯ ಪ್ರಯತ್ನವೂ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. "ಈ ಬಾರಿ ಯೋಗಿಗೆ ಒಲಿದ ಹುದ್ದೆ ಜನರ ಆಯ್ಕೆಯೇ ಹೊರತು ಬಿಜೆಪಿಯ ಆಯ್ಕೆಯಲ್ಲ,'' ಎನ್ನುತ್ತಾರೆ ಹಿಂದೂ ಮಹಾಸಭಾದ ರಾಜ್ಯ ನಾಯಕಿಯೊಬ್ಬರು. ಹೀಗಾಗಿಯೇ, ಬಿಜೆಪಿ ಎರಡೆರಡು ಉಪಮುಖ್ಯಮಂತ್ರಿಗಳ ಸ್ಥಾನವನ್ನು ಸೃಷ್ಟಿಸಿದೆ ಎಂಬುದು ಅವರ ವಿಶ್ಲೇಷಣೆ.

ಉತ್ತರ ಪ್ರದೇಶದ ಸ್ಥಳೀಯ ವಿಧಾನಸಭಾ ಸ್ಥಾನಗಳ ವಿಚಾರಕ್ಕೆ ಬಂದರೆ ಅಲ್ಲಿನ ಜನ ರಾಷ್ಟ್ರೀಯ ನಾಯಕರು ಮತ್ತು ಪಕ್ಷಗಳಿಗೆ ಬೆಲೆ ಕೊಡುವುದಕ್ಕಿಂತ ಸ್ಥಳೀಯ ಮುಖಗಳಿಗೆ ಆದ್ಯತೆ ನೀಡಿ ಪರಿಶೀಲಿಸುತ್ತಾರೆ. ಅದರ ಪರಿಣಾಮವೇ ಯೋಗಿ ಆದಿತ್ಯನಾಥ್ ಕಳೆದ ಒಂದುವರೆ ದಶಕಗಳಿಂದ ಉತ್ತರ ಪ್ರದೇಶದ ನೆಲವನ್ನು ಕಾಯ್ದುಕೊಂಡು ಬರಲು ಸಾಧ್ಯವಾಗಿದೆ. ಇದೀಗ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೀರಿ ರಾಜಕೀಯ ಅಧಿಕಾರದ ಅತ್ಯಂತ ಉನ್ನತ ಸ್ಥಾನವನ್ನು ಪಡೆದಿದ್ದಾರೆ; ಅವರದೇ ನೆವಿನೊಂದಿಗೆ.

ಭವಿಷ್ಯದ ಆತಂಕಗಳು:

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ‘ಈಶ್ವರ’ನ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾ ವಿಧಿಗಳನ್ನು ಓದಿದ ನಂತರ ಅಖಿಲೇಶ್ ಯಾದವ್ ಎದುರಿನಲ್ಲಿ…
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ‘ಈಶ್ವರ’ನ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾ ವಿಧಿಗಳನ್ನು ಓದಿದ ನಂತರ ಅಖಿಲೇಶ್ ಯಾದವ್ ಎದುರಿನಲ್ಲಿ…

90ರ ದಶಕದಿಂದ ಈಚೆಗೆ ದೇಶಾದ್ಯಂತ ಕೋಮು ಭಾವನೆಗಳನ್ನು ಬಡಿದೆಬ್ಬಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ಉತ್ತರ ಪ್ರದೇಶದಲ್ಲಿರುವ ರಾಮಮಂದಿರ ವಿಚಾರ. ತಾಂತ್ರಿಕವಾಗಿ ರಾಮಮಂದಿರ ನಿರ್ಮಾಣದ ಗುತ್ತಿಗೆಯನ್ನು ಹಿಂದೂ ಮಹಾಸಭಾ ಮತ್ತು ನಿರ್ಮೂಯಿ ಅಖಾಡಗಳು ಪಡೆದುಕೊಂಡಿವೆ. ಆದರೆ ಅದರ ರಾಜಕೀಯ ಲಾಭವನ್ನು ಪಡೆದುಕೊಂಡು ಬಂದವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎಂಬ ಸಾಂಸ್ಕೃತಿಕ ರಾಜಕೀಯ ಸಂಘಟನೆ. ಇದು ಹಿಂದೂ ಸಂಘಟನೆಗಳ ಒಳಗಡೆಯೇ ಘರ್ಷಣೆಯನ್ನು ಹುಟ್ಟುಹಾಕಿದೆ.

ಇದೀಗ, ಹಿಂದೂ ಯುವ ವಾಹಿನಿಯಂತಹ ಸ್ವತಂತ್ರ ಸಂಘಟನೆಯ ಮುಖಂಡನೊಬ್ಬ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವುದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಪಾಲಿಗೆ ಭವಿಷ್ಯದ ಸವಾಲು ಕೂಡ. ಮುಂದಿನ ಲೋಕಸಭಾ ಚುನಾವಣೆ ಒಳಗೆ ರಾಮಮಂದಿರದ ವಿಚಾರ ಮತ್ತೆ ದೇಶದ ರಾಜಕೀಯ ಕೇಂದ್ರಕ್ಕೆ ಬಂದು ನಿಲ್ಲಲಿದೆ. ಈ ಸಮಯದಲ್ಲಿ ಅದರ ರಾಜಕೀಯ ಫಾಲಫಲಗಳನ್ನು ಬಿಜೆಪಿ ಹೊರತಾಗಿಯೂ ಒಂದಷ್ಟು ಇತರೆ ಹಿಂದೂ ಸಂಘಟನೆಗಳು ಬಯಸುತ್ತವೆ. ಇದು ರಾಜಕೀಯ ಹಿನ್ನೆಲೆಯಲ್ಲಿ 'ಧರ್ಮ ಯುದ್ಧ'ವೊಂದನ್ನು ಹುಟ್ಟು ಹಾಕಿದರೂ ಅಚ್ಚರಿ ಏನಿಲ್ಲ.

ಈ ಹಿಂದೆ, 90ರ ದಶಕದ ಅಯೋಧ್ಯೆ ಗಲಭೆ ನಡೆದ ನಂತರ ಬಿಜೆಪಿಯ ಸೌಮ್ಯ ಮುಖವಾಗಿ ಅಟಲ್ ಬಿಹಾರಿ ವಾಜಿಪೇಯಿ ಇದ್ದರು. ಲಾಲ್ ಕೃಷ್ಣ ಅದ್ವಾನಿ ಆರೋಪಿ ಸ್ಥಾನದಲ್ಲಿ ದೇಶದ ಜನರ ಮುಂದೆ ನಿಂತಿದ್ದರು. ಮೋದಿ ಪ್ರವೇಶದೊಂದಿದೆ ವಾಜಿಪೇಯಿ ಜಾಗದಲ್ಲಿ ಮೋದಿ ಬಂದು ನಿಂತಿದ್ದರು. ಅದ್ವಾನಿಗೆ ಜಾತ್ಯಾತೀತ ರಾಜಕಾರಣಿಯ ಸೊಗಡುಗಳು ಅಂಟಿಕೊಂಡವು. ಇದೀಗ ಯೋಗಿ ಆದಿತ್ಯನಾಥ್ ಪ್ರವೇಶವಾಗಿದೆ. ಈ ಬಾರಿ ಸ್ಥಾನ ಪಲ್ಲಟವಾದರೆ, ಅದು ಈ ಪ್ರಜಾಪ್ರಭುತ್ವದ ತಮಾಷೆಯ ಘಟ್ಟವೊಂದಕ್ಕೆ ಸಾಕ್ಷಿಯಾಗಲಿದೆ. ಅದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ.