samachara
www.samachara.com
ದೇಶ ಕಂಡ ವಿದ್ಯಾರ್ಥಿ ಚಳವಳಿಗಳು: 'ನವ ನಿರ್ಮಾಣ'ದಿಂದ ಸೈದ್ಧಾಂತಿಕ ಸಂಘರ್ಷದವರೆಗೆ
ಸುದ್ದಿ ಸಾಗರ

ದೇಶ ಕಂಡ ವಿದ್ಯಾರ್ಥಿ ಚಳವಳಿಗಳು: 'ನವ ನಿರ್ಮಾಣ'ದಿಂದ ಸೈದ್ಧಾಂತಿಕ ಸಂಘರ್ಷದವರೆಗೆ

ದಿಲ್ಲಿ

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಗುರುವಾರ ಭಾರಿ ಸಂಖ್ಯೆಯಲ್ಲಿ ಬೀದಿಗೆ ಇಳಿಯುವ ಮೂಲಕ ದೇಶದ ರಾಜಧಾನಿಯ 'ಕ್ಯಾಂಪಸ್ ಹೋರಾಟ'ದ ನಿರಂತರತೆಯನ್ನು ಕಾಯ್ದುಕೊಂಡಿದ್ದಾರೆ.

ಕಳೆದ ವಾರ ಇದೇ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಶ್ರೀ ರಾಮ್‌ ಕಾಲೇಜಿನ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು 'ರಣರಂಗ'ವನ್ನು ನಿರ್ಮಿಸಿದ್ದರು. ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ನಾಯಕರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದನ್ನು ಇವರು ವಿರೋಧಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಪಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಎಬಿವಿಪಿ ಗುರಿಯಾಗಿದೆ.

ಇದರ ಬೆನ್ನಿಗೇ ಪಂಜಾಬ್‌ ಮೂಲದ, ಶ್ರೀ ರಾಮ್ ಕಾಲೇಜಿನ ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿ ಗುರ್‌ಮೆಹರ್‌ ಕೌರ್ ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಕರೆ ನೀಡಿದ್ದಳು. ಅದು ವೈರಲ್ ಆಗುತ್ತಿದ್ದಂತೆ ಕೌರ್ಗೆ 'ಅತ್ಯಾಚಾರ ಮತ್ತು ಕೊಲೆ' ಬೆದರಿಕೆ ಬಂದಿತ್ತು. ಕರ್ನಾಟಕದ ಸಂಸದ ಪ್ರತಾಪ್ ಸಿಂಗ್ ಸೇರಿದಂತೆ, ಅನೇಕ ಬಿಜೆಪಿ ರಾಜಕಾರಣಿಗಳು ಹಾಗೂ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ನಟ ರಣದೀಪ್ ಹೂಡ 20 ವರ್ಷದ ವಿದ್ಯಾರ್ಥಿನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ವಿಶೇಷವಾಗಿ ಪ್ರತಾಪ್ ಸಿಂಹ, ಕೌರ್‌ ಅವರ ಕುಟುಂಬವನ್ನು ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಹೋಲಿಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದರು. ಬುಧವಾರ ಎಬಿವಿಪಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೌರ್‌ ಮತ್ತು ಆಕೆಯನ್ನು ಬೆಂಬಲಿಸುವವರನ್ನು 'ದೇಶ ದ್ರೋಹಿ'ಗಳು ಎಂದು ಕರೆದಿತ್ತು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಇಂದು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯುವ ಮೂಲಕ ಎಬಿವಿಪಿ ವಿರುದ್ಧ ಪ್ರತಿಭಟನೆ ನಡೆಸಿದರು.

ಸುದ್ದಿ ಕೇಂದ್ರದಲ್ಲಿರುವ ಗುರ್‌ಮೆಹರ್ ಕೌರ್ ಸದ್ಯ ಪ್ರತಿಭಟನೆಯಿಂದ ಹೊರಗುಳಿದಿದ್ದಾಳೆ. ಆಕೆಯ ಅಜ್ಜ ಮೊಮ್ಮಗಳ ಸುರಕ್ಷತೆ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ ರಾಜಕಾರಣಿಗಳ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಶ್ರೀ ರಾಮ್‌ ಕಾಲೇಜಿನ ಸಾಹಿತ್ಯ ವಿಭಾಗದ ಪ್ರಾಧ್ಯಪರು ಕೌರ್‌ ಬೆಂಬಲಕ್ಕೆ ನಿಂತಿದ್ದಾರೆ. "ಮೌನವಾಗಿದ್ದು ಅನ್ಯಾಯಗಳಿಗೆ ಬೆಂಬಲ ನೀಡುವ ಬದಲು ಆಕೆ ಸತ್ಯವನ್ನು ಹೇಳಿದ್ದಾಳೆ,'' ಎಂದು ಪ್ರಾಧ್ಯಪಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಜವಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯದ ಅಂಗಳದಿಂದ ಆರಂಭಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ ದೇಶದ ಹಲವು ಕಾಲೇಜುಗಳ ಕ್ಯಾಂಪಸ್‌ಗಳನ್ನು ತಲುಪಿತ್ತು. ಇದಕ್ಕೂ ಮೊದಲು ಕೇಂದ್ರ ಸರಕಾರದ ವಿರುದ್ಧ ಪುಣೆ ಫಿಲ್ಮ್‌ ಇನ್ಸ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಹಲವು ದಿನಗಳ ಕಾಲ ಪ್ರತಿಭಟನೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಹೈದ್ರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮೂಲಕ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವಿರುದ್ಧ ಪ್ರತಿಭಟನೆಗಳು ಹುಟ್ಟಿಕೊಂಡಿದ್ದವು. ಜತೆಗೆ, ದೇಶಾದ್ಯಂತ ದಲಿತ ಪರ ಹೋರಾಟಗಳಿಗೆ ರೋಹಿತ್ ಸಾವು ಪ್ರೇರಣೆ ನೀಡಿತ್ತು. ಈ ಮೂಲಕ ಕಳೆದ ಒಂದು ದಶಕದ ಅಂತರದಲ್ಲಿ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ಚಟುವಟಿಕೆಗಳು ಮತ್ತೆ ಗರಿಗೆದರಿರುವ ಮುನ್ಸೂಚನೆ ಸಿಗುತ್ತಿದೆ.

ಐತಿಹಾಸಿಕ ಚಳುವಳಿಗಳು:

ಹಾಗೆ ನೋಡಿದರೆ, ದೇಶಕ್ಕೆ ವಿದ್ಯಾರ್ಥಿ ಚಳವಳಿಗಳು ಮತ್ತು ಹೋರಾಟಗಳು ಹೊಸತೇನಲ್ಲ. ಸ್ವಾತಂತ್ರ್ಯ ನಂತರ 70 ದಶಕದಲ್ಲಿ ಬಂದ ಕಾಂಗ್ರೆಸ್ ವಿರೋಧಿ ಅಲೆ ಶುರುವಾಗಿದ್ದು ಕ್ಯಾಂಪಸ್‌ಗಳ ಮೂಲಕವೇ. ಸಮಾಜವಾದಿ ಚಳುವಳಿಯ ಬೇರುಗಳೂ ಕೂಡ ಕಾಲೇಜುಗಳಲ್ಲಿಯೇ ಸಿಗುತ್ತದೆ. 1974ರ ನವ ನಿರ್ಮಾಣ ಆಂದೋಲನವನ್ನು ಹುಟ್ಟುಹಾಕಿದ್ದು ವಿದ್ಯಾರ್ಥಿಗಳು. ಗುಜರಾತಿನ ಅಹಮದಾಬಾದ್‌ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶೇ. 20ರಷ್ಟು ಶುಲ್ಕ ಹೆಚ್ಚಳವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಶುರುಮಾಡಿದರು. ಅದು ಸುತ್ತಮುತ್ತಲಿನ ವಿಶ್ವವಿದ್ಯಾನಿಲಯಗಳಿಗೆ ಹಬ್ಬಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಕೊನೆಗೆ, ಅವತ್ತಿನ ಇಂದಿರಾಗಾಂಧಿ ಸರಕಾರ ಗುಜರಾತ್ ಮುಖ್ಯಮಂತ್ರಿ ಚಿಮನ್‌ಲಾಲ್ ಪಟೇಲ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸುವವರೆಗೂ ಹೋರಾಟ ಮುಂದುವರಿದಿತ್ತು. ಇದು ಮುಂದಿನ ಸಮಾಜವಾದಿ ಚಳುವಳಿಗೆ ದೊಡ್ಡ ಮಟ್ಟದಲ್ಲಿ ಪ್ರೇರಣೆ ನೀಡಿತ್ತು.

1990ರಲ್ಲಿ ಕೇಂದ್ರ ವಿ. ಪಿ. ಸಿಂಗ್ ನೇತೃತ್ವದ ಸರಕಾರ ಮಂಡಲ್ ವರದಿ ಜಾರಿಗೆ ಮುಂದಾದಾಗಲೂ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಬೀದಿಗೆ ಬಂದಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ವಿರೋಧಿಸಿ ನಡೆದ ಈ ಹೋರಾಟಕ್ಕೆ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಹಾಗೂ ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನೆಲೆ ಒದಗಿಸಿದ್ದವು.

2006ರ ಮೀಸಲಾತಿ ವಿರೋಧಿ ಚಳುವಳಿ ಹಾಗೂ ಯುಪಿಎ-2 ಸಮಯದಲ್ಲಿ ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಹುಟ್ಟಿಕೊಂಡ ಚಳುವಳಿಗಳಿಗೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ದೊಡ್ಡ ಮಟ್ಟದಲ್ಲಿ ಬಲ ತಂದುಕೊಟ್ಟಿತ್ತು. 80ರ ದಶಕದಲ್ಲಿ ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್ ನೇತೃತ್ವದಲ್ಲಿ ಹುಟ್ಟಿಕೊಂಡ ಚಳುವಳಿ ಕೊನೆಗೆ ಅಸ್ಸಾಂ ಗಣ ಪರಿಷತ್ ಎಂಬ ರಾಜಕೀಯ ಪಕ್ಷದ ರೂಪವನ್ನು ಪಡೆದು ಅಧಿಕಾರಕ್ಕೂ ಏರಿತ್ತು.

ಎರಡು ಸ್ಪಷ್ಟ ಕವಲು:

ಹೀಗೆ, ಹಲವು ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಿಗಾಗಿ ದೇಶದಲ್ಲಿ ನಡೆದುಕೊಂಡು ಬಂದ ವಿದ್ಯಾರ್ಥಿ ಚಳುವಳಿ ಇವತ್ತು ಸಾಂಸ್ಕೃತಿಕ ರಾಜಕೀಯದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮತ್ತೆ ಶುರುವಾಗಿವೆ. ವಿಶೇಷವಾಗಿ ಬಿಜೆಪಿ ಪಕ್ಷದ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮತ್ತು ಸಿಪಿಐ- ಎಂ ಪಕ್ಷದ ಎಐಎಸ್ಎ ನಡುವೆ ಜೆಎನ್‌ಯುನಲ್ಲಿ ಶುರುವಾದ ಸಂಘರ್ಷ ಇದೀಗ ಸ್ಪಷ್ಟವಾಗಿ ಎರಡು ದೃಷ್ಟಿಕೋನದ ರಾಜಕೀಯದ ಅಸ್ಥಿತ್ವಗಳಿಗಾಗಿ ಪರ- ವಿರೋಧದ ನೆಲೆಯನ್ನು ಸೃಷ್ಟಿಸಿದೆ.

ಸದ್ಯ ದಿಲ್ಲಿಯ ಕಾಲೇಜುಗಳಲ್ಲಿ ಅದು ವ್ಯಾಪಕ ಪ್ರತಿಭಟನೆಯ ಸ್ವರೂಪವನ್ನು ಪಡೆದುಕೊಂಡಿದೆ. ದೇಶದ ಇತರೆ ಕಾಲೇಜುಗಳಲ್ಲಿಯೂ ಇಂತಹದ್ದೇ ಸೈದ್ಧಾಂತಿಕ ಸಂಘರ್ಷದ ಕುರುಹುಗಳು ಕಾಣಿಸುತ್ತಿವೆ. ಇತ್ತೀಚೆಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಬುರ್ಖಾ ವಿರೋಧ ಪ್ರತಿಭಟನೆ ಇದಕ್ಕೆ ಸಾಕ್ಷಿ.

ಮುಂದಿನ ದಿನಗಳಲ್ಲಿ ದೇಶದಲ್ಲಿ ಎರಡು ಸ್ಪಷ್ಟ ವಿಚಾರಗಳ ರಾಜಕೀಯ ನೆಲೆ ಸೃಷ್ಟಿಯಾಗಲಿರುವ ಸಾಧ್ಯತೆಗಳನ್ನು ಇವು ಮುಂದೆ ಮಾಡುತ್ತಿವೆ. ಅದಕ್ಕಾಗಿ ಹೆಚ್ಚು ದಿನಗಳು ಕಾಯಬೇಕಿಲ್ಲ ಎಂಬುದರ ಮುನ್ಸೂಚನೆಗಳಿವು ಅಷ್ಟೆ.