ದಿನಕ್ಕೆ 10 ರೂ.; ತಿಂಗಳಿಗೆ 303: ರಿಲಯನ್ಸ್ ಜಿಯೋ 'ಉಚಿತ ಸೇವೆ'ಯ ಅಸಲಿ ಲೆಕ್ಕಾಚಾರ
ಸುದ್ದಿ ಸಾಗರ

ದಿನಕ್ಕೆ 10 ರೂ.; ತಿಂಗಳಿಗೆ 303: ರಿಲಯನ್ಸ್ ಜಿಯೋ 'ಉಚಿತ ಸೇವೆ'ಯ ಅಸಲಿ ಲೆಕ್ಕಾಚಾರ

ಕಳೆದ

170 ದಿನಗಳ ಅಂತರದಲ್ಲಿ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ 'ಉಚಿತ ಭಾಗ್ಯ'ಗಳ ಮೂಲಕ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಅಸಲಿ ಲೆಕ್ಕಾಚಾರ ಈಗ ಶುರುವಾಗಿದೆ.

ಗುರುವಾರ 'ಜಿಯೋ ಪ್ರೈಮ್' ಹೆಸರಿನಲ್ಲಿ ಸದ್ಯ ಉಚಿತ ಅಂತರ್ಜಾಲ ಮತ್ತು ಕರೆ ಸೇವೆಗಳನ್ನು ಬಳಸುತ್ತಿರುವವರ ಮುಂದೆ ಹೊಸ 'ಆಫರ್‌' ಇಡಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೊಸ ಸೇವೆಗಳ ಮಾಹಿತಿ ಪ್ರಕಟಿಸಿದ್ದಾರೆ.

ಕಳೆದ ಸೆ. 5ರಂದು ರಿಲಯನ್ಸ್ ಜಿಯೋ ತನ್ನ ಸೇವೆಯನ್ನು ಶುರುಮಾಡಿತ್ತು. ಆರಂಭದಲ್ಲಿ ಸಿಮ್‌ ಕಾರ್ಡಿಗೆ 99 ರೂಪಾಯಿ ದರವನ್ನು ಕಂಪನಿ ಪಡೆದುಕೊಂಡಿತ್ತು. ಕೆಲವು ಕಡೆಗಳಲ್ಲಿ ಉಚಿತವಾಗಿಯೇ ಸಿಮ್‌ ವಿತರಣೆ ಮಾಡಲಾಗಿತ್ತು. ಕಂಪನಿ ಕಡೆಯಿಂದ ಸೇವೆಗಳನ್ನು (ಅಂತರ್ಜಾಲ ಮತ್ತು ಕರೆ) ಉಚಿತವಾಗಿಯೇ ನೀಡಲಾಗುತ್ತಿತ್ತು. ಇದೀಗ ಕಂಪನಿಯ ಲೆಕ್ಕಾಚಾರ ಬದಲಾಗಿದ್ದು, ನಿಧಾನವಾಗಿ ತನ್ನ ಉಚಿತ ಸೇವೆಯನ್ನು ಹಿಂತೆಗೆದುಕೊಳ್ಳುವ ಮುನ್ಸೂಚನೆ ನೀಡಿದೆ.

ಮುಖೇಶ್ ಅಂಬಾನಿ ಭಾಷಣದ ಪ್ರಕಾರ, ಈವರೆಗೆ ಕಳೆದ 170 ದಿನಗಳಲ್ಲಿ ಪ್ರತಿ ಸೆಕೆಂಡಿಗೆ 7 ಜನ ಜಿಯೋ ಕಡೆಗೆ ವಾಲಿದ್ದಾರೆ. ಜತೆಗೆ, ಇತರೆ ಟೆಲಿಕಾಂ ಕಂಪನಿಗಳಿಂದ ನಂಬರ್‌ ಪೋರ್ಟಬಿಲಿಟಿ ಸೇವೆಯನ್ನು ಬಳಸಿಕೊಂಡು ಜಿಯೋ ಚಂದಾದಾರರಾಗಿದ್ದಾರೆ. ಸದ್ಯ ಕಂಪನಿಯ ಒಟ್ಟು ಚಂದಾದಾರರ ಸಂಖ್ಯೆ ಒಟ್ಟು 10 ಕೋಟಿ. ಇವರೆಲ್ಲರೂ ಮಾರ್ಚ್ ಕೊನೆಯ ಒಳಗೆ ಮತ್ತೆ 99 ರೂಪಾಯಿ ಕೊಡುವ ಮೂಲಕ 'ಜಿಯೋ ಪ್ರೈಮ್‌' ಸೇವೆಗೆ ಚಂದಾದಾರರಾಗಬೇಕಾಗುತ್ತದೆ. ಅಂದರೆ, ಜಿಯೋಗೆ ಇದರಿಂದಾಗಿಯೇ  990 ಕೋಟಿ ರೂಪಾಯಿ ಆದಾಯ ಬರಲಿದೆ.

ದಿನಕ್ಕೆ 10 ರೂಪಾಯಿ:

ಇದರ ಜತೆಗೆ, ಈಗಿರುವ ಉಚಿತ ಅಂತರ್ಜಾಲ ಮತ್ತು ಕರೆ ಸೇವೆಗಳನ್ನು ಮುಂದಿನ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಿಕೊಳ್ಳಲು ಪ್ರತಿ ಚಂದಾದಾರರು ದಿನಕ್ಕೆ 10 ರೂಪಾಯಿಗಳಂತೆ ತಿಂಗಳಿಗೆ 303 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈಗಿರುವ ಅಷ್ಟೂ ಚಂದಾದಾರರು ತಮ್ಮ ಅಂತರ್ಜಾಲ ಮತ್ತು ಕರೆಗಳಿಗಾಗಿ ಜಿಯೋವನ್ನೇ ನೆಚ್ಚಿಕೊಂಡರೆ, ಕಂಪನಿಗೆ ಪ್ರತಿ ತಿಂಗಳು ಬರುವ ಆದಾಯದ ಮೊತ್ತವೇ, 3, 030 ಕೋಟಿ ರೂಪಾಯಿಗಳಷ್ಟಾಗುತ್ತದೆ. ಈ ಸೇವೆ 2018 ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. ನಂತರ ಜಿಯೋ ಕಂಪನಿ ಇನ್ನಷ್ಟು ದರವನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.

ಸದ್ಯ ರಿಯಲನ್ಸ್ ಜಿಯೋ ಸಂಪೂರ್ಣ ಉಚಿತ ಅನ್ನುವ ಏಕೈಕ ಕಾರಣಕ್ಕೆ ಸಾಕಷ್ಟು ಜನ ಸಿಮ್‌ ಬಳಸುತ್ತಿದ್ದಾರೆ. ಹೀಗಾಗಿ, ಮಾಸಿಕ ಪಾವತಿ ಜಾರಿಯಾಗುತ್ತಿದ್ದಂತೆ ಅರ್ಧದಷ್ಟು ಗ್ರಾಹಕರು ಹೊರನಡೆದರೂ, ಕಂಪನಿಗೆ ತಿಂಗಳಿಗೆ 1. 5 ಸಾವಿರ ಕೋಟಿ ಆದಾಯ ಇದ್ದೇ ಇರುತ್ತದೆ. ಇದರ ಜತೆಗೆ, ಜಿಯೋ ಟಿವಿ, ಜಿಯೋ ಮ್ಯೂಸಿಕ್‌ನಂತಹ ಸೇವೆಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಸದ್ಯ ಅವೆಲ್ಲವೂ ಉಚಿತವಾಗಿದ್ದರೂ, ಅವುಗಳ ಒಟ್ಟು ಬೆಲೆ 10 ಸಾವಿರ ಎಂದು ಹೇಳಲಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಸೇವೆಗಳಿಗೂ ಬೆಲೆ ತೆರಬೇಕಾಗಬಹುದು.

ಇಂಟರೆಸ್ಟಿಂಗ್ ಸಂಗತಿಗಳು: 

ಇಂತಹ ಲೆಕ್ಕಾಚಾರಗಳ ಆಚೆಗೆ, ಮುಖೇಶ್ ಅಂಬಾನಿ ತಮ್ಮ ಭಾಷಣದಲ್ಲಿ ಜಿಯೋ ಬಳಕೆದಾರರ ಕುರಿತು ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಪ್ರಸ್ತಾಪಸಿದರು. ಕಳೆದ 170 ದಿನಗಳಲ್ಲಿ ಜಿಯೋದಲ್ಲಿ ಒಟ್ಟು 200 ಕೋಟಿ ನಿಮಿಷಗಳ ವಿಡಿಯೋ ಕಾಲ್‌ ಮಾಡಲಾಗಿದೆ. ಐದು ತಿಂಗಳ ಅವಧಿಯಲ್ಲಿ ಜಿಯೋ ಗ್ರಾಹಕರು ಬಳಸಿದ ಡಾಟಾ ಪ್ರಮಾಣವೇ ಸುಮಾರು 100 ಕೋಟಿ ಜಿಬಿ. ಅಂದರೆ, ಪ್ರತಿ ದಿನ ದೇಶಾದ್ಯಂತ ಒಟ್ಟು 3. 3 ಕೋಟಿ ಜಿಬಿ ಡಾಟಾವನ್ನು ಜಿಯೋ ಗ್ರಾಹಕರು ಬಳಸಿದ್ದಾರೆ.

2011ರ ಜನಗಣತಿಯ ಪ್ರಕಾರ, ದೇಶದಲ್ಲಿ ಒಟ್ಟು 15,59,09,766 ಮನೆಗಳಲ್ಲಿ ದೂರವಾಣಿ ಸಂಪರ್ಕಗಳಿವೆ. 98,67,707 ಮನೆಗಳಲ್ಲಿ ಲ್ಯಾಂಡ್‌ಲೈನ್ ಸಂಪರ್ಕವಿದೆ. 13,12,40,499 ಮನೆಗಳಿಗೆ ಮೊಬೈಲ್ ಫೋನ್ ಸಂಪರ್ಕವಿದೆ. 1,48,01,560 ಮನೆಗಳಲ್ಲಿ ಲ್ಯಾಂಡ್‌ಲೈನ್ ಮತ್ತು ಮೊಬೈಲ್‌ ಸಂಪರ್ಕವಿದೆ. ಸದ್ಯ ವಿಶ್ವದಲ್ಲಿ ಚೈನಾ ಹೊರತುಪಡಿಸಿದರೆ, ಅತೀ ಹೆಚ್ಚು ದೂರವಾಣಿ (ಮೊಬೈಲ್- ಲ್ಯಾಂಡ್‌ಲೈನ್) ಬಳಕೆದಾರರು ಇರುವ ದೇಶ ಭಾರತ. ಸಹಜವಾಗಿಯೇ, ಇಲ್ಲಿನ ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಲಾಭದ ಪ್ರಮಾಣವೂ ಹೆಚ್ಚಿರುತ್ತದೆ.

'ರಿಲಯನ್ಸ್ ಬರುವ ಮುಂಚೆ ಎಸ್‌ಎಂಎಸ್ ಪ್ಯಾಕ್‌ನಿಂದ ಶುರುವಾಗಿ, ಕರೆ, ಡಾಟಾಗಳಿಗೆ ಹಲವು ಕಂಪನಿಗಳು ಹಣ ವಸೂಲಿ ಮಾಡಿದ್ದವು. ಕಳೆದ ಐದು ತಿಂಗಳ ಅಂತರದಲ್ಲಿ ಹಲವು ಟೆಲಿಕಾಂ ಕಂಪನಿಗಳ ಆದಾಯ ಅರ್ಧದಷ್ಟು ಕುಸಿದಿದೆ. ಜಿಯೋ ಕಂಪನಿ ಏನೇ ಪಡೆದುಕೊಂಡಿದ್ದರು, ಅದು ಇತರೆ ಕಂಪನಿಗಳ ಗ್ರಾಹಕರಲ್ಲಿ ಒಂದು ಪಾಲು,'' ಎನ್ನುತ್ತಾರೆ ಟೆಲಿಕಾಂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್ ಒಬ್ಬರು.

ಮುಖೇಶ್ ಅಂಬಾನಿ ಭಾಷಣದಲ್ಲಿ ಜಿಯೋ ಪ್ರೈಮ್‌ ಸೇವೆಯನ್ನು ಘೋಷಿಸುತ್ತಿದ್ದಂತೆ ಶೇರು ಮಾರುಕಟೆಯಲ್ಲಿ ಏರ್‌ ಟೆಲ್‌ ಮುನ್ನಡೆಸುತ್ತಿರುವ ಭಾರ್ತಿ ಟೆಲಿಕಾಂ ಕಂಪನಿಯ ಶೇರುಗಳ ಮೌಲ್ಯ ಶೇ. 2.5ರಷ್ಟು ಕುಸಿದಿದೆ. ಮುಂದಿನ ದಿನಗಳಲ್ಲಿ ಬೃಹತ್ ಟೆಲಿಕಾಂ ಕಂಪನಿಗಳ ನಡುವಿನ ಪೈಪೋಟಿ ಇನ್ನಷ್ಟು ರಂಗೇರಲಿದೆ. ಒಂದು ಹಂತದವರೆಗೂ ಗ್ರಾಹಕರು ಉಚಿತ ಅಥವಾ ಕಡಿಮೆ ಹಣಕ್ಕೆ ಮೌಲ್ಯಾಧಾರಿತ ಸೇವೆಗಳನ್ನು ನಿರೀಕ್ಷಬಹುದಾಗಿದೆ. ಒಂದು ವೇಳೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಟೆಲಿಕಾಂ ಸೇವಾ ಕ್ಷೇತ್ರದಲ್ಲಿ ರಿಲಯನ್ಸ್‌ ಏಕಸ್ವಾಮ್ಯವನ್ನು ಸಾಧಿಸಿದ್ದೇ ಆದರೆ, ಒಟ್ಟಾರೆ ಟೆಲಿಕಾಂ ಉದ್ಯಮದ ಚಿತ್ರಣವೇ ಬದಲಾಗಲಿದೆ.

ಜಿಯೋ ಆರಂಭಕ್ಕೂ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟು 84 ಸಾವಿರ ಕೋಟಿ ರೂಪಾಯಿಗಳನ್ನು ಜಿಯೋಗಾಗಿ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಆದರೆ, ಸೆ. 5ರ ಹೊತ್ತಿಗೆ ಜಿಯೋ ಉದ್ಘಾಟನೆ ವೇಳೆಗಾಗಲೇ ಹೂಡಿಕೆ ಪ್ರಮಾಣ 1. 5 ಲಕ್ಷ ಕೋಟಿ ತಲುಪಿತ್ತು. ಇದೀಗ, ಜಿಯೋ ಪ್ರೈಮ್ ಸೇವೆ ಆರಂಭಿಸುವ ಮೂಲಕ ಕಂಪನಿ ಆದಾಯದ ಕಡೆಗೆ ಮೊದಲ ಹೆಜ್ಜೆ ಇಟ್ಟಿದೆ.