samachara
www.samachara.com
'ಸೆರೆಮನೆಯತ್ತ ಶಶಿಕಲಾ': ತಮಿಳುನಾಡು ರಾಜಕೀಯದ ದಿಕ್ಕು ಬದಲಿಸಿದ ಸುಪ್ರಿಂ ತೀರ್ಪು
ಸುದ್ದಿ ಸಾಗರ

'ಸೆರೆಮನೆಯತ್ತ ಶಶಿಕಲಾ': ತಮಿಳುನಾಡು ರಾಜಕೀಯದ ದಿಕ್ಕು ಬದಲಿಸಿದ ಸುಪ್ರಿಂ ತೀರ್ಪು

ದೇಶದ

ಗಮನ ಸೆಳೆದಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಶಶಿಕಲಾ ಮತ್ತು ಉಳಿದ ಆರೋಪಿಗಳನ್ನು ದೋಷಿ ಎಂದು ಸುಪ್ರಿಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಪಿ. ಸಿ. ಘೋಶ್ ಹಾಗೂ ಅಮಿತಾವ್ ರಾಯ್ ಅವರಿದ್ದ ಪೀಠ ನೀಡಿದ ತೀರ್ಪು ತಮಿಳುನಾಡಿನ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಈ ಹಿಂದೆ ಕರ್ನಾಟಕ ಹೈ ಕೋರ್ಟ್ ಎರಡು ಸಾಲಿನ ಆದೇಶದಲ್ಲಿ ನೀಡಿದ ತೀರ್ಪನ್ನು ಬದಿಗಿಟ್ಟ ನ್ಯಾಯಪೀಠ, ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. ಜತೆಗೆ, ತಕ್ಷಣವೇ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಸುಪ್ರಿಂ ಕೋರ್ಟ್ ಹೇಳಿದೆ.

ಈ ಮೂಲಕ ಕಳೆದ ಕೆಲವು ದಿನಗಳಿಂದ ಎಐಎಡಿಎಂಕೆ ಪಕ್ಷದ ಶಾಸಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಮುಖ್ಯಮಂತ್ರಿಯಾಗುವ ಇರಾದೆಯೊಂದಿಗೆ ದಾಳವನ್ನು ಉರುಳಿಸುತ್ತಿದ್ದ ಶಶಿಕಲಾ ಆಸೆಗೆ ತಣ್ಣೀರು ಬಟ್ಟೆ ಬಿದ್ದಿದೆ. ಮುಂದಿನ ಹತ್ತು ವರ್ಷಗಳ ಕಾಲ ಶಶಿಕಲಾ ರಾಜಕೀಯದಿಂದ ಹೊರಗುಳಿಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜತೆಗೆ, ದ್ವಿ ಸದಸ್ಯ ಪೀಠದ ಮುಂದೆಯೇ ಕ್ಯುರೇಟಿವ್ ಪಿಟಿಷನ್ ಸಲ್ಲಿಸಬಹುದಾದ ಸಣ್ಣ ಅವಕಾಶವೊಂದು ಶಶಿಕಲಾ ಮುಂದಿದೆ.

ಪ್ರಕರಣ ತೀರ್ಪು ಹೊರಬೀಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ, ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿದ್ದ ಬಿ. ವಿ. ಆಚಾರ್ಯ, "ಸತ್ಯಕ್ಕೆ ಜಯವಾಗಿದೆ. ಆರೋಪಿಗಳು ಎಷ್ಟೆ ಪ್ರಭಾವಿಗಳಾಗಿದ್ದರೂ ಅಂತಿಮವಾಗಿ ನ್ಯಾಯ ಸಿಕ್ಕಿದೆ,'' ಎಂದಿದ್ದಾರೆ.

ಏನಿದು ಅಕ್ರಮ ಆಸ್ತಿ ಪ್ರಕರಣ?:

ಜನತಾ ಪಕ್ಷದ ನಾಯಕರಾಗಿದ್ದ (ಈಗ ಬಿಜೆಪಿಯಲ್ಲಿರುವ) ಡಾ. ಸುಬ್ರಮಣ್ಯಂ ಸ್ವಾಮಿ, ಜಯಲಲಿತಾ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಅಕ್ರಮವಾಗಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ 1996ರಲ್ಲಿ ಪ್ರಕರಣ ದಾಖಲಿಸಿದರು. ಪ್ರಕರಣದಲ್ಲಿ ಜಯಲಲಿತಾ ಪ್ರಮುಖ ಆರೋಪಿಯಾದರೆ, ಶಶಿಕಲಾ ಸೇರಿದಂತೆ ಶಶಿಕಲಾ ಸಂಬಂಧಿ ಇಳವರಸಿ ಮತ್ತು ಸುಧಾಕರನ್ ಕೂಡ ಸಹ ಆರೋಪಿಗಳಾಗಿದ್ದರು. ಒಟ್ಟು 66. 65 ಕೋಟಿ ರೂಪಾಯಿ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗಾಗಿ ಚೆನ್ನೈನಲ್ಲಿ ವಿಶೇಷ ನ್ಯಾಯಾಲಯವೊಂದನ್ನು 1997ರಲ್ಲಿ ಆರಂಭಿಸಲಾಯಿತು.

ಮುಂದಿನ ಮೂರು ವರ್ಷಗಳಲ್ಲಿ ಸುಮಾರು 250 ಸಾಕ್ಷಿಗಳ ವಿಚಾರಣೆ ನಡೆಸಲಾಯಿತು. 10 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ಕೋರ್ಟಿಗೆ ವರದಿ ಸಲ್ಲಿಸಲಾಯಿತು. 2001ರ ಮೇ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆದು ಎಐಎಡಿಎಂಕೆ ಭರ್ಜರಿ ಜಯ ದಾಖಲಿಸಿತು. ಜಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಜಯಲಲಿತಾ ಅಧಿಕಾರ ಕಳೆದುಕೊಂಡರು. ಅವರ ಸ್ಥಾನಕ್ಕೆ ಓ. ಪನ್ನೀರ್ ಸೆಲ್ವಂ ಅವರನ್ನು ನೇಮಿಸಲಾಯಿತು. ಮುಂದೆ ಸುಪ್ರಿಂ ಕೋರ್ಟ್‌ನಲ್ಲಿ ತಮ್ಮ ಪರವಾಗಿ ತೀರ್ಪು ಪಡೆದುಕೊಂಡು ಬಂದ ಜಯ ಮತ್ತೆ ಅಧಿಕಾರಕ್ಕೇರಿದರು.

ಜಯ ಆಡಳಿತದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ದಿಕ್ಕು ತಪ್ಪಲಾರಂಭಿಸಿತು. ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಲಾರಂಭಿಸಿದರು. ಸರಕಾರಿ ಅಭಿಯೋಜಕರು ವಿಚಾರಣೆಯಿಂದ ಹಿಂದೆ ಸರಿಯಲಾರಂಭಿಸಿದರು. ಈ ಹಿನ್ನೆಲೆಯಲ್ಲಿ, 2003ರಲ್ಲಿ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸುವಂತೆ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಅದೇ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಕರಣ ಕರ್ನಾಟಕಕ್ಕೆ ವರ್ಗಾವಣೆಗೊಂಡಿತು.

ವಿಶೇಷ ಅಭಿಯೋಜಕರ ಹಿಂಜರಿತ, ನೇಮಕಾತಿ ವಿವಾದ, ಆಸ್ತಿ ಮುಟ್ಟುಗೋಲು ಹೀಗೆ ನಾನಾ ತಿರುವುಗಳನ್ನು ಪಡೆದುಕೊಂಡು ಸುಮಾರು 11 ವರ್ಷಗಳ ಕಾಲ ವಿಚಾರಣೆ ನಡೆದುಕೊಂಡು ಬಂತು. ಕೊನೆಗೆ, ಸೆಪ್ಟೆಂಬರ್ 27, 2014ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಪ್ರಕರಣದಲ್ಲಿ ತೀರ್ಪು ನೀಡಿದರು. ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ವಿರುದ್ದ ಮಾಡಲಾಗಿರುವ ಆರೋಪ, ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದರು. ಆ ಸಮಯದಲ್ಲಿಯೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ತಮ್ಮ ಸ್ಥಾನವನ್ನು ಕಳೆದುಕೊಂಡರು ಮತ್ತು ಓ. ಪನ್ನೀರ್ ಸೆಲ್ವಂ ಹುದ್ದೆ ನಿಭಾಯಿಸಲು ನೇಮಕಗೊಂಡರು.

ವಿಶೇಷ ನ್ಯಾಯಾಲದ ತೀರ್ಪು ಪ್ರಶ್ನಿಸಿದ ಕರ್ನಾಟಕ ಹೈ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾದೀಶ ಕುಮಾರಸ್ವಾಮಿ, ಮೇ.11, 2015ರಂದು 'ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 18 ವರ್ಷಗಳ ಕಾಲ ಕಾನೂನು ಸಮರ ಅಂತಿಮ ಫಲಿತಾಂಶ ಹೊರ ಬಂದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ನಿರ್ದೋಷಿಗಳು' ಎಂದು ಎಂದು ಎರಡು ಸಾಲಿನ ಆದೇಶ ನೀಡುವ ಮೂಲಕ ಅಚ್ಚರಿ ಮೂಡಿಸಿದರು. ಅತ್ತ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಕರ್ನಾಟಕ ಹೈ ಕೋರ್ಟ್‌ ತೀರ್ಪು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರಿಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಪಿ. ಸಿ. ಘೋಶ್ ಹಾಗೂ ಅಮಿತಾವ್ ರಾಯ್ ಅವರಿದ್ದ ಪೀಠ ಎಂಟು ತಿಂಗಳ ವಿಚಾರಣೆ ನಂತರ ಇಂದು ತೀರ್ಪನ್ನು ನೀಡಿತು.