samachara
www.samachara.com
ಅಯೋಗ್ಯರ ಸಂತೆಯಲ್ಲಿ 'ಡೈರಿ- ಸಿಡಿ' ರಾಜಕೀಯ: ಇದಕ್ಕಿಂತ ಹೆಚ್ಚಿಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?
ಸುದ್ದಿ ಸಾಗರ

ಅಯೋಗ್ಯರ ಸಂತೆಯಲ್ಲಿ 'ಡೈರಿ- ಸಿಡಿ' ರಾಜಕೀಯ: ಇದಕ್ಕಿಂತ ಹೆಚ್ಚಿಗೆ ಇನ್ನೇನು ನಿರೀಕ್ಷಿಸಲು ಸಾಧ್ಯ?

ಮುಖ್ಯಮಂತ್ರಿ

ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 'ಡೈರಿ ಬಾಂಬ್' ಹಾಕಿದ ಬೆನ್ನಲ್ಲೇ ಸೋಮವಾರ ಕಾಂಗ್ರೆಸ್ 'ಸಿಡಿ ಬಾಂಬ್' ಸ್ಫೋಟಿಸಿದೆ.

ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಸಮಾರಂಭವೊಂದರ ವೇದಿಕೆಯಲ್ಲಿ 'ಡೈರಿ ವಿಚಾರ'ದಲ್ಲಿ ನಡೆಸಿದ ಮಾತುಕತೆಯನ್ನು ಕಾಂಗ್ರೆಸ್ ವಕ್ತಾರರು ಮಾಧ್ಯಮಗಳಿಗೆ ಬಿಡಗಡೆ ಮಾಡಿದ್ದಾರೆ. ಈ ಮೂಲಕ ರಾಜಕೀಯ ಪಾಳೆಯದಲ್ಲಿ ಹೇಗೆಲ್ಲಾ ತಂತ್ರಗಾರಿಕೆಗಳು ನಡೆಯುತ್ತವೆ ಎಂಬ ವಿಚಾರ ಜನರಿಗೆ ಇನ್ನಷ್ಟು ಸ್ಪಷ್ಟವಾಗಿದೆ.

ಮುಂದಿನ ಚುನಾವಣೆಯ ಹಣಾಹಣಿಗಳಿಗೆ ಮತ್ತು ನಡೆಯಬಹುದಾದ ಕಾದಾಟಗಳಿಗೆ ಮುನ್ಸೂಚನೆಯಂತೆ ಕಾಣುತ್ತಿರುವ ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆಗಳು ಅಸಹ್ಯ ಮೂಡಿಸುವಂತಿವೆ. ಆಡಳಿತ ಪಕ್ಷದ ಮೇಲಿನ ಆರೋಪಗಳು ಮತ್ತು ಅದು ನೀಡುತ್ತಿರುವ ಸಮರ್ಥನೆಗಳು, ಅದೇ ವೇಳೆ ಪ್ರತಿಪಕ್ಷ ಆರೋಪ ಮಾಡುತ್ತಿರುವ ಶೈಲಿ, ಆಯ್ದುಕೊಂಡ ವಿಚಾರ ಮತ್ತು ಅದೀಗ ಬಯಲಾಗಿರುವ ರೀತಿಯನ್ನು ನೋಡುತ್ತಿದ್ದರೆ ರಾಜಕೀಯದಲ್ಲಿ ಮೌಲ್ಯಗಳ ಮಟ್ಟ ತಲುಪಿರುವ ಪಾತಾಳವನ್ನು ತೋರಿಸುತ್ತಿದೆ.

ಡೈರಿ- ಸಿಡಿ ಹಣಾಹಣಿ:

ಭಾನುವಾರ ಮದ್ಯಾಹ್ನದ ಹೊತ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಐಟಿ ದಾಳಿ ವೇಳೆ ವಿಧಾನ ಪರಿಷತ್ ಸದಸ್ಯ ಹಾಗೂ ಸಿದ್ದರಾಮಯ್ಯ ಆಪ್ತ ಗೋವಿಂದರಾಜು ಮನೆಯಲ್ಲಿ ಡೈರಿಯೊಂದು ಸಿಕ್ಕಿದೆ. ಇದರಲ್ಲಿ ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಲಂಚನ್ನು ತೆಗೆದುಕೊಳ್ಳಲಾಗಿದೆ. ಮತ್ತು ಹೈಕಮಾಂಡ್‌ಗೂ ತಲುಪಿಸಲಾಗಿದೆ ಎಂದು ಅವರು ಆರೋಪ ಮಾಡಿದರು.

ಈ ಸಮಯದಲ್ಲಿ ಅವರು ಯಾವುದೇ ದಾಖಲೆಗಳನ್ನು ನೀಡಲಿಲ್ಲ ಎಂಬುದು ಗಮನಾರ್ಹ. ಪ್ರತಿಪಕ್ಷದ ನಾಯಕ, ಬಿಜೆಪಿಯ ರಾಜ್ಯಧ್ಯಾಕ್ಷ ಹಾಗೂ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಡುತ್ತಿರುವ ಯಡಿಯೂರಪ್ಪ ಇಂತಹ ಆರೋಪಗಳನ್ನು ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮಾಡುವುದು ಸಹಜ ಕೂಡ. ಆದರೆ ಆರೋಪಗಳನ್ನು ಸಾಬೀತು ಪಡಿಸುವಂತಹ ನಿರ್ದಿಷ್ಟ ದಾಖಲೆಗಳಿಲ್ಲದೆ ಕೇವಲ ಮಾತಿನಲ್ಲಿಯೇ ಮನೆ ಕಟ್ಟಲು ಹೊರಟ ಅವರ ನಡೆ ಅಚ್ಚರಿ ಮೂಡಿಸುತ್ತದೆ. ಅವರಲ್ಲಿನ ಸಿದ್ಧತೆ ಕೊರತೆ ಎದ್ದು ಕಾಣಿಸುತ್ತಿದೆ.

"ಯಡಿಯೂರಪ್ಪ ಅವರ ಹಾವಭಾವ, ಶೈಲಿಗಳನ್ನು ನೋಡಿದರೆ ಈಗಾಗಲೇ ಸಿಎಂ ಆಗಿರುವ ಹಾಗೆ ಕಾಣಿಸುತ್ತಿದೆ. ಅವರಿಗೂ ತಮಿಳುನಾಡುನಲ್ಲಿ ಸಿಎಂ ಆಗಿಯೇ ಬಿಟ್ಟೆ ಎಂದು ಹೊರಟ ಶಶಿಕಲಾಗೂ ಸಾಮ್ಯತೆ ಇದ್ದ ಹಾಗಿದೆ. ಪ್ರತಿಪಕ್ಷದ ನಾಯಕರಾಗಿ ಅವರಿಗೆ ಸರಕಾರದ ವಿರುದ್ಧ ಆರೋಪಗಳನ್ನು ಮಾಡಲು ಹತ್ತು ಹಲವು ವಿಚಾರಗಳಿವೆ. ಅದನ್ನು ಬಿಟ್ಟು ಹೀಗೆ ಮೇಲ್ಮಟ್ಟದ ರಾಜಕೀಯಕ್ಕೆ ಇಳಿದಿರುವುದು ಅಚ್ಚರಿ ಅನ್ನಿಸುತ್ತದೆ,'' ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ವಿಚಾರ ಮಾಡುವುದಾಗಿ ಹೇಳಿದ್ದಾರೆ. ಎಂಎಲ್‌ಸಿ ಗೋವಿಂದರಾಜು 'ಹಕ್ಕು ಚ್ಯುತಿ'ಯಾಗಿ ಎಂದು ಅವಲತ್ತುಕೊಂಡಿದ್ದಾರೆ.

ಇದರ ನಡುವೆಯೇ, ಸೋಮವಾರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ವಕ್ತಾರ ವಿ. ಎಸ್. ಉಗ್ರಪ್ಪ, ಸಚಿವ ರಮೇಶ್ ಕುಮಾರ್ ಮತ್ತಿತರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಮತ್ತು ಅನಂತ ಕುಮಾರ್ ಸಮಾರಂಭವೊಂದರ ವೇದಿಕೆಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದಾರೆ. 'ಮುಂದಿನ ಚುನಾವಣೆವರೆಗೆ ಈ ವಿಚಾರವನ್ನು ಎಳೆದಾಡಬಹುದು' ಎಂದು ಇಬ್ಬರೂ ನಗುತ್ತಿರುವ ದೃಶ್ಯಗಳು ಈಗಾಗಲೇ ಮಾಧ್ಯಮಗಳ ಮೂಲಕ ಜಾಹೀರಾಗಿದೆ.

ಜತೆಗೆ, ಬಿಜೆಪಿ ಪ್ರತಿಪಕ್ಷವಾಗಿ ಆಡಳಿತ ನಡೆಸುವ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೂಡಬಹುದಾದ ರಾಜಕೀಯ ತಂತ್ರಗಾರಿಕೆ ಮಟ್ಟ ಏನಿರಬಹುದು ಎಂಬುದನ್ನೂ ಇವರಿಬ್ಬರ ಮಾತುಕತೆ ಸಾಬೀತುಪಡಿಸಿದೆ.

[embed]https://youtu.be/HLM-0olrA9g[/embed]

ರಾಜಕೀಯದ ಭವಿಷ್ಯ:

ಇಡೀ ಪ್ರಕರಣ ಒಂದು ಕಡೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಭ್ರಷ್ಟಾಚಾರದ ಮಾಹಿತಿಯನ್ನು ಹೊರಗೆಳೆದಿದ್ದರೆ, ಇನ್ನೊಂದು ಆಯಾಮದಲ್ಲಿ ರಾಜಕೀಯ ವ್ಯವಸ್ಥೆ ಇವತ್ತು ಬಂದು ತಲುಪಿರುವ ಸ್ಥಿತಿಗೆ ಕನ್ನಡಿ ಹಿಡಿದಿದೆ. ರಾಜ್ಯದಲ್ಲಿ ಇನ್ನೇನು ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿಯ ಆಯವ್ಯಯ ಪತ್ರ ಮಂಡನೆಯ ನಂತರ ನಡೆದ ಪ್ರಗತಿ ಏನು? ಎಷ್ಟು ಪ್ರಮಾಣದಲ್ಲಿ ಆಡಳಿತ ಪಕ್ಷ ಮುಂಗಡ ಪತ್ರದಲ್ಲಿ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ? ಮತ್ತಿತರ ವಿಚಾರಗಳನ್ನು ಚರ್ಚಿಸಬೇಕಾದ ಸಮಯ ಇದು. ಅದರಲ್ಲಿ ವಿರೋಧ ಪಕ್ಷ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಮಾಹಿತಿ ಕಲೆ ಹಾಕಿ ಜನರ ಮುಂದಿಡಬೇಕು.

ಇದರ ಜತೆಗೆ ರಾಜ್ಯ ಹತ್ತು ಹಲವು ಜ್ವಲಂತ ಸಮಸ್ಯೆಗಳನ್ನು ಪ್ರತಿಪಕ್ಷಗಳು ಈ ಸಮಯದಲ್ಲಿ ಜನರ ಗಮನಕ್ಕೆ ತರುವ ಸಾಧ್ಯತೆಗಳಿವೆ. ಇವೆಲ್ಲವನ್ನೂ ಬಿಟ್ಟು ಕೇವಲ 'ಗಾಳಿಯಲ್ಲಿ ಗುಂಡು' ಹಾರಿಸುವು ಕೆಲಸಕ್ಕೆ ಇಳಿದಿರುವುದು ಮತ್ತು ಈ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೇವೆ ಎಂಬ ಭ್ರಮೆಯನ್ನು ಬಿತ್ತಲು ಪ್ರಯತ್ನಿಸುತ್ತಿರುದೇ ನಾಚಿಕೆಗೇಡು.

ಇವತ್ತು ರಾಜಕೀಯ ಎಂಬುದು ಸೇವೆಯಲ್ಲ, ಬದಲಿಗೆ ಉದ್ಯಮ ಎಂಬುದು ಪ್ರತಿ ಹೆಜ್ಜೆಯಲ್ಲಿಯೂ ಸ್ಪಷ್ಟವಾಗುತ್ತಿದೆ. ಚುನಾವಣೆ ಎಂಬುದು ಉದ್ಯಮದ ಲಾಭ ನಷ್ಟದ ಪ್ರಗತಿ ಪತ್ರಗಳಾಗಿ ಬದಲಾಗಿವೆ. ಹೀಗಿರುವಾಗ, ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ಯಾರಿಂದಲೂ ಹೆಚ್ಚಿನ ನಿರೀಕ್ಷೆ ಮಾಡುವ ದಿನಗಳು ಇವಲ್ಲ ಎಂಬುದು 'ಡೈರಿ- ಸಿಡಿ' ಬಾಂಬ್‌ಗಳು ಮತ್ತೊಮ್ಮೆ ನೆನಪು ಮಾಡಿಕೊಟ್ಟಿವೆ.