samachara
www.samachara.com
'ರೌಡಿಸಂ, ರಿಯಲ್ ಎಸ್ಟೇಟ್, ರಾಜಕೀಯ': ಶೂಟೌಟ್ ನೆಪದಲ್ಲಿ ಪೊಲೀಸರೇಕೆ ಫೀಲ್ಡಿಗೆ ಇಳಿದರು?
ಸುದ್ದಿ ಸಾಗರ

'ರೌಡಿಸಂ, ರಿಯಲ್ ಎಸ್ಟೇಟ್, ರಾಜಕೀಯ': ಶೂಟೌಟ್ ನೆಪದಲ್ಲಿ ಪೊಲೀಸರೇಕೆ ಫೀಲ್ಡಿಗೆ ಇಳಿದರು?

ಅದು

ಬೆಂಗಳೂರಿನ ವಿಮಾನ ನಿಲ್ದಾಣ ಸಮೀಪದ 100/100 ಖಾಲಿ ಜಾಗ. ಅದರ ನಟ್ಟ ನಡುವೆ ತುಕ್ಕು ಹಿಡಿದ ಕಬ್ಬಿಣ ನೇಮ್‌ಪ್ಲೇಟಿನ ಮೇಲೆ 'This property is belongs to...' ಅನ್ನುವ ಬೋರ್ಡ್. ಸುತ್ತ ಬೆಳೆದು ನಿಂತ ಕುರುಚಲು ಗಿಡಗಳು. ಪಕ್ಕದಲ್ಲೊಂದು ಪುಟ್ಟ ಶೆಡ್. ಹೊರಗೆ ಕಾವಲು ನಿಂತ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು. ಅದೊಂದು ರಾತ್ರಿ ಈ ಜಾಗದ ಮೇಲೆ ಗುಂಪೊಂದು ದಾಳಿ ನಡೆಸುತ್ತದೆ. ಕಾವಲುಗಾರರನ್ನು ಬಡಿದು ಹೊರಗೆ ಹಾಕುತ್ತದೆ. ಮಾಲೀಕರ ಹೆಸರಿನಲ್ಲಿ ತಗಲು ಹಾಕಿದ್ದ ಫಲಕವನ್ನು ಕಿತ್ತು ಎಸೆಯುತ್ತದೆ. ಸರಿಯಾಗಿ ಅರ್ಧಕ್ಕೆ ಇನ್ನೊಂದು ತಾತ್ಕಾಲಿಕ ಬೇಲಿ ನಿರ್ಮಿಸುತ್ತದೆ.

ಕೋಟ್ಯಾಂತರ ಬೆಲೆ ಬಾಳುವ ಜಾಗವೊಂದು ನೋಡುನೋಡುತ್ತಿದ್ದಂತೆ 'ಲಿಟಿಗೇಷನ್ ಪ್ರಾಪರ್ಟಿ'ಯಾಗಿ ಬದಲಾಗಿ ಹೋಗುತ್ತದೆ. ಇನ್ನೇನಿದ್ದರು ಮಾಲೀಕರು ತಮ್ಮ ಜಾಗದಲ್ಲಿ ಬಂದು ಕುಳಿತವರನ್ನು ಹೊರಹಾಕಲು ನ್ಯಾಯಾಲಯದ ಮೆಟ್ಟಿಲು ಹತ್ತಲೇಬೇಕು. ಹತ್ತಾರು ವರ್ಷ ಅಲೆದಾಡಬೇಕು. ಹಣ ಖರ್ಚು ಮಾಡಬೇಕು. ಅದಕ್ಕಿಂತ ಕರೆಯದೇ ಬಂದ ಆಗುಂತಕರ ಜತೆಯಲ್ಲಿಯೇ ರಾಜೀ ಮಾಡಿಕೊಂಡು ಅವರು ನೀಡುವಷ್ಟು ಹಣ ತೆಗೆದುಕೊಂಡು ಪೂರ್ತಿ ಆಸ್ತಿಯನ್ನು ಬಿಟ್ಟುಕೊಡವ ಅನಿವಾರ್ಯ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಹಾಗೆ, ಯಾವುದೇ ಕಾನೂನಿನ ತೊಡಕಿಲ್ಲದೆ ಹಸ್ತಾಂತರಗೊಳ್ಳುವ ಖಾಲಿ ಜಾಗದಲ್ಲಿ ಮುಂದಿನ ಒಂದು ವರ್ಷದಲ್ಲಿ ದೊಡ್ಡದೊಂದು ಕಾಂಪ್ಲೆಕ್ಸ್ ಎದ್ದು ನಿಲ್ಲುತ್ತದೆ. ಅದರಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದು ನೆಲೆ ಕಂಡುಕೊಳ್ಳುತ್ತದೆ. ಸುತ್ತಮುತ್ತ ಶಾಪಿಂಗ್ ಮಾಲ್, ಕಾಫಿ ಶಾಪ್ ತಲೆ ಎತ್ತುತ್ತವೆ. ನೋಡುನೋಡುತ್ತಿದ್ದಂತೆ ಬೆಂಗಳೂರು ಬದಲಾಗುತ್ತದೆ; ಅಭಿವೃದ್ಧಿಯಾಗುತ್ತದೆ.

ಬೆಂಗಳೂರಿನ ಭೂ ಹಂಚಿಕೆ ಕುರಿತು ವಿಸ್ತೃತವಾಗಿ ಅಧ್ಯಯನ ನಡೆಸಿರುವ ಟೊರೊಂಟೊ ವಿಶ್ವವಿದ್ಯಾನಿಲಯದ 'ನಗರ ಅಧ್ಯಯನ ವಿಭಾಗ'ದ ಪ್ರೊ. ಸೊಲೊಮೊನ್ ಬೆನ್ಜಮಿನ್ "ಬೆಂಗಳೂರಿನ ಶೇ. 85 ಆಸ್ತಿಗಳ ಮಾಲೀಕರು ಹೀಗೆ ಕಾನೂನಿ ಅಡಿಯಲ್ಲಿ ತೂರಿಯೇ ಸಂಪಾದನೆ ಮಾಡಿದ್ದಾರೆ,'' ಎಂದು ಹೇಳುತ್ತಾರೆ. 90ರ ದಶಕದಲ್ಲಿ ಜಾಗತಿಕ ಕಂಪನಿಗಳಾದ ಡೆಲ್, ಅಡೋಬ್, ಐಬಿಎಂ, ಇನ್‌ಟೆಲ್, ಯಾಹೂ, ಮೈಕ್ರೋಸಾಫ್ಟ್ ಸೇರಿದಂತೆ ನಮ್ಮವೇ ಆದ ಇನ್ಫೋಸಿಸ್, ವಿಪ್ರೊಗಳು ವಹಿವಾಟವನ್ನು ಶುರುಮಾಡುತ್ತಿದ್ದಂತೆ ಬೆಂಗಳೂರಿನ ಭೂಮಿಗೂ ಚಿನ್ನದ ಬೆಲೆ ಬರತೊಡಗಿತು. 'ರಿಯಲ್ ಎಸ್ಟೇಟ್' ಕ್ಷೇತ್ರದಲ್ಲಿ ಹಣ ಓಡಾಡತೊಡಗಿತು. ಈ ಸಮಯದಲ್ಲಿ 'ಆಗುಂತಕರೂ' ಹುಟ್ಟಿಕೊಂಡರು. ಅವರಲ್ಲಿ ಕೆಲವರು ಮಾಜಿ ಡಾನ್‌ಗಳು, 'ಸುಧಾರಣೆಗೊಂಡ' ರೌಡಿಗಳೂ, ಪೊಲೀಸರ ಆಜ್ಞಾಪಾಲಕರು, ರಾಜಕಾರಣಿಗಳ ವೇಷ ತೊಟ್ಟವರೂ ಇದ್ದರು.

2008ರಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತರು ಎಲ್ಲಾ ಠಾಣೆಗಳಿಗೆ ಒಂದು ಸುತ್ತೋಲೆಯನ್ನು ಕಳುಹಿಸಿದ್ದರು. "ಸಾರ್ವಜನಿಕರ ದೂರು ಮತ್ತು ಮಾಧ್ಯಮಗಳ ವರದಿಗಳ ಪ್ರಕಾರ ಠಾಣೆಗಳು ಭೂ ವ್ಯಾಜ್ಯವನ್ನು ಬಗೆಹರಿಸುವ ಮಧ್ಯಸ್ಥಿಕೆ ಕೇಂದ್ರಗಳಾಗುತ್ತಿವೆ. ಇದು ಸರಿಯಲ್ಲ,'' ಎಂದು ಸುತ್ತೋಲೆ ತಿಳಿಸಿತ್ತು. ಒಟ್ಟು 16 ಪುಟಗಳ ಸುತ್ತೋಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಭೂ ವ್ಯಾಜ್ಯದ ವಿಚಾರದಲ್ಲಿ ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಎಂಬ ಕುರಿತು ಟಿಪ್ಪಣಿಗಳಿದ್ದವು. ಆದರೆ, ಅವೆಲ್ಲವೂ ಟಿಪ್ಪಣಿ ರೂಪದಲ್ಲಿಯೇ ಉಳಿದು ಹೋದವು ಮತ್ತು ಕಾರ್ಯರೂಪಕ್ಕೆ ಬರಲಿಲ್ಲ ಎಂಬುದು ಕಟು ವಾಸ್ತವ.

ಈ ಹಿನ್ನೆಲೆಯಲ್ಲಿ, ಇವತ್ತು ಒಂದು ಕಾಲದ ರೌಡಿ, ನಂತರ ಸುಧಾರಣೆಗೊಂಡ ಸಾಮಾಜಿಕ ಕಾರ್ಯಕರ್ತ, ಬರಹಗಾರ, ಪತ್ರಕರ್ತ 'ಅಗ್ನಿ' ಶ್ರೀಧರ್ ಮನೆ ಮೇಲಿನ ಪೊಲೀಸ್ ದಾಳಿ ಬೆಂಗಳೂರಿನ ರೌಡಿಸಂ, ರಾಜಕಾರಣ ಮತ್ತು ರಿಯಲ್ ಎಸ್ಟೇಟ್‌ ವಿಚಾರದಲ್ಲಿ ಬದಲಾಗುತ್ತಿರುವ 'ಕೆಮಿಸ್ಟ್ರಿ'ಯ ಹೊಳವುಗಳನ್ನು ನೀಡುತ್ತಿದೆ.

ಸಂದೇಶ ನೀಡಿದ ಪೊಲೀಸರು:

ಕಳೆದ ನಾಲ್ಕು ತಿಂಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಂಕಿಅಂಶಗಳು ಹೇಳುತ್ತಿದ್ದಾಗಲೇ ಹೊರವಲಯದ ಕೋಗಿಲು ಗೇಟ್‌ ಬಳಿ ಶೂಟೌಟ್‌ ಜನರನ್ನು ಬೆಚ್ಚಿ ಬೀಳಿಸಿತು. ಹಾಡು ಹಗಲೇ ಎಪಿಎಂಸಿ ಸದಸ್ಯ, ರೌಡಿಸಂ ಜತೆ ಗುರುತಿಸಿಕೊಂಡಿದ್ದ ಕಡಬಗೆರೆ ಶ್ರೀನಿವಾಸ್ ಮೇಲೆ ಹತ್ತು ಸುತ್ತು ಗುಂಡು ಹಾರಿಸಲಾಯಿತು. ಈ ಪ್ರಕರಣದ ಬೆನ್ನಿಗೆ ಬಿದ್ದ ಪೊಲೀಸರು ಕೊನೆಗೆ 'ಅಗ್ನಿ' ಶ್ರೀಧರ್ ಮನೆ ಬಾಗಿಲಿಗೆ ಬಂದು ನಿಂತರು.

ಕುಮಾರಸ್ವಾಮಿ ಲೇಔಟ್‌ನ ಪ್ರಶಾಂತಿ ನಗರದ ಅಂಚಿನಲ್ಲಿರುವ ಶ್ರೀಧರ್ ಮನೆ ಸುತ್ತ ಭದ್ರ ಕೋಟೆಯೊಂದು ನಿರ್ಮಾಣವಾಗಿದೆ. ಕಳೆದ 18 ವರ್ಷಗಳಿಂದ ರೌಡಿಸಂ ತೊರೆದು, ಕರುನಾಡ ಸೇನೆ ಹೆಸರಿನಲ್ಲಿ ಸಮಾಜ ಸೇವೆಗೆ ಇಳಿದಿದ್ದ ಶ್ರೀಧರ್ ತಮ್ಮ ಜೀವದ ರಕ್ಷಣೆಗೆ ಪಡೆಯೊಂದನ್ನು ಇನ್ನೂ ಉಳಿಸಿಕೊಂಡಿದ್ದವರು. ಅವರ ಮನೆಗೆ ಹೋಗಬೇಕು ಎಂದರೆ ದ್ವಾರಪಾಲಕರನ್ನು ದಾಟಿಯೇ ಒಳಹೋಗಬೇಕಿತ್ತು.

"ಪರಿಸ್ಥಿತಿ ಹೇಗಾಗಿತ್ತು ಎಂದರೆ, ಎಸ್‌ಐ, ಪಿಐ, ಎಸಿಬಿ ಮಟ್ಟದ ಅಧಿಕಾರಿಗಳಿಗೂ ಶ್ರೀಧರ್ ಮಾತಿಗೆ ಸಿಗುತ್ತಿರಲಿಲ್ಲ. ಆತ ಮಾನಸಿಕವಾಗಿ ರೌಡಿಸಂನಿಂದ ದೂರವಾಗಿದ್ದಿರಬಹುದು. ಆದರೆ ಇನ್ನೂ ಹಳೆಯ ಸಂಬಂಧಗಳು ಕಳಚಿಕೊಂಡಿರಲಿಲ್ಲ. ರಿಯಲ್ ಎಸ್ಟೇಟ್‌ ಡೀಲ್‌ಗಳು ಇನ್ನೂ ನಡೆಸುತ್ತಿದ್ದರು. ಶ್ರೀನಿವಾಸ್ ಶೂಟೌಟ್‌ ಪ್ರಕರಣದಲ್ಲಿ ಶ್ರೀಧರ್ ಕೈವಾಡ ಇಲ್ಲದೆ ಇರಬಹುದು. ಆದರೆ ಸುಧಾರಣೆ ಮುಖವಾಡ ಹಾಕಿಕೊಂಡು ಕೋಟೆಯನ್ನು ಕಟ್ಟಿಕೊಂಡು ಕುಳಿತ ಮಾತ್ರಕ್ಕೆ ನಾವು ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶವೊಂದನ್ನು ಕಳುಹಿಸಲು ಅದು ಅವಕಾಶ ನೀಡಿತು ಅಷ್ಟೆ,'' ಎನ್ನುತ್ತಾರೆ ಸಿಐಡಿಯ ಅಧಿಕಾರಿಯೊಬ್ಬರು.

ಇದಕ್ಕೆ ಪೂರಕ ಎಂಬಂತೆ ಶ್ರೀಧರ್ ಮನೆ ಮೇಲಿನ ದಾಳಿ ನಂತರ ಬೆಂಗಳೂರಿನ ರೌಡಿಸಂ ವಲಯಕ್ಕೆ ಭಯ ಹುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ. "ರೌಡಿಸಂಗೆ ಭಯಬೀಳಬೇಡಿ. ಯಾರೇ ತೊಂದರೆ ನೀಡಿದರೂ ದೂರು ನೀಡಿ ಎಂದು ಪ್ರಕಟಣೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ದೂರುಗಳು ಬಂದರೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ,'' ಎನ್ನುತ್ತಾರೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್.

ಮೂಲಗಳು ಪ್ರಕಾರ, ಬೆಂಗಳೂರಿನ ಭೂ ವ್ಯಾಜ್ಯಗಳೂ ಸೇರಿದಂತೆ ರೌಡಿಗಳ ಕಡೆಯಿಂದ ತೊಂದರೆಗೊಳಗಾದವರು ದೂರು ನೀಡಲು ಶುರುಮಾಡಿದ್ದಾರೆ. "ಸುಧಾರಣೆಗೊಂಡಿರುವ ಮತ್ತೊಬ್ಬ ಡಾನ್ ಮುತ್ತಪ್ಪ ರೈ ವಿರುದ್ಧವೂ ದೂರುಗಳು ಬಂದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೊಲೀಸರ ಈ ಹೊಸ ನಡೆ ಎಷ್ಟು ದಿನ ಕಾವು ಉಳಿಸಿಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ,'' ಎನ್ನುತ್ತಾರೆ ಸುದ್ದಿ ವಾಹಿನಿಯೊಂದರ ಅಪರಾಧ ವಿಭಾಗದ ವರದಿಗಾರರೊಬ್ಬರು.

ರಾಜಕೀಯದ ಕರಿನೆರಳು:

ಒಂದು ಕಡೆ ಬೆಂಗಳೂರಿನ ಪೊಲೀಸರ ಈ ಹೊಸ ನಡೆಯ ಕುರಿತು ಹಲವು ಆಯಾಮಗಳ ಮಾತುಕತೆ ನಡೆಯುತ್ತಿರುವಾಗಲೇ, ರಾಜಕೀಯ ಕರಿನೆರಳೂ ಕೂಡ ಇತ್ತೀಚಿನ ಬೆಳವಣಗೆಗಳ ಮೇಲೆ ಬಿದ್ದಂತೆ ಕಾಣುತ್ತಿದೆ. ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದ ಶೂಟೌಟ್‌ ಹಿನ್ನೆಯಲ್ಲಿ ಬೆಂಗಳೂರಿನ ಯಲಹಂಕ ಕ್ಷೇತ್ರದ ರಾಜಕೀಯ ಕೆಲಸ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಜತೆಗೆ, ಶ್ರೀಧರ್ ಮನೆಯ ಮೇಲಿನ ದಾಳಿ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. "ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ನಾಲ್ಕು ಡಿಸಿಪಿಗಳು ಸೇರಿ ಒಟ್ಟು 250 ಜನರ ಪಡೆಯನ್ನು ಕರೆದುಕೊಂಡು ಹೋಗಿ ದಾಳಿ ನಡೆಸಿರುವುದು ನೋಡಿದರೆ ವ್ಯವಸ್ಥಿತ ಸಿದ್ಧತೆ ಕಾಣಿಸುತ್ತಿದೆ. ಇದಕ್ಕೆ ಶ್ರೀಧರ್ ಇತ್ತಿಚೆಗೆ ಬೆಂಗಳೂರಿನಾದ್ಯಂತ ನಡೆಸಿದ ಸಮಾವೇಶಗಳು ಕಾರಣ ಇರಬಹುದು. ಜನಬಲ ಪ್ರದರ್ಶನ ನೋಡುತ್ತಿದ್ದರೆ ಮುಂದೊಂದು ದಿನ ಅದು ಜೆಡಿಎಸ್‌ಗೆ ಸಹಾಯವಾಗಬಹುದು ಎಂದು ಅಂದಾಜು ಮಾಡಿರಬಹುದು. ಹೀಗಾಗಿ ಸಾಮಾಜಿಕವಾಗಿ ಶ್ರೀಧರ್‌ಗೆ ಇದ್ದ ಹೆಸರನ್ನು ಮುಗಿಸಲು ರಣತಂತ್ರ ಹೆಣದಿರಬಹುದು,'' ಎನ್ನುತ್ತಾರೆ ಒಂದು ಕಾಲದಲ್ಲಿ 'ಅಗ್ನಿ' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು.

ಇದನ್ನು ಶ್ರೀಧರ್ ಅವರ ಆಪ್ತ ವಲಯದಲ್ಲಿರುವ ಪತ್ರಕರ್ತ ಮಂಜುನಾಥ್ ಅದ್ದೆ ಕೂಡ ಅನುಮೋದಿಸುತ್ತಾರೆ. "ಕಳೆದ 18 ವರ್ಷಗಳಿಂದ ಶ್ರೀಧರ್‌ ಎಲ್ಲವನ್ನೂ ಬಿಟ್ಟು ಹೊರಬಂದಿದ್ದರು. ಹೊಸ ಬದುಕು ಕಟ್ಟಿಕೊಂಡಿದ್ದರು. ಅದನ್ನು ಪೊಲೀಸರ ದಾಳಿ ನಾಶ ಮಾಡಿತು,'' ಎನ್ನುತ್ತಾರೆ ಅದ್ದೆ. ವಿಶೇಷ ಅಂದರೆ, ಶೂಟೌಟ್‌ಗೆ ಒಳಗಾದ ಕಡಬಗೆರೆ ಶ್ರೀನಿವಾಸ್‌ ಅದ್ದೆ ಅವರ ಸಂಬಂಧಿ.

ಸದ್ಯ ಪೊಲೀಸರು ಶ್ರೀಧರ್ ಮನೆಯಲ್ಲಿ ಮದ್ಯ ಸಿಕ್ಕಿತ್ತು ಎಂದು ಕೇಸು ದಾಖಲಿಸಿದ್ದಾರೆ. "ಒಬ್ಬ ದೊಡ್ಡ ರೌಡಿಗೆ ಅಬಕಾರಿ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾದರೆ ಅವಮಾನ ಎಂದು ಅಂದುಕೊಳ್ಳುತ್ತಾನೆ,'' ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು.

ಮೂಲಗಳ ಪ್ರಕಾರ ರೌಡಿಗಳಾದ ಸೈಲೆಂಟ್ ಸುನೀಲ ಮತ್ತು ಆತನ ಗ್ಯಾಂಗ್‌ ಕಡೆಯಿಂದ ಪ್ರತಿ ತಿಂಗಳು ಹಫ್ತಾ ರೂಪದಲ್ಲಿ ಸುಮಾರು 30 ಲಕ್ಷ ರೂಪಾಯಿ ಇಲಾಖೆಗೆ ಹೋಗುತ್ತಿತ್ತು. "ಇತ್ತಿಚೆಗೆ ಅವರ ಶ್ರೀಧರ್ ನೆರಳಿನಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಹೊರಟಿದ್ದರು. ಹಲವು ಅಧಿಕಾರಿಗಳ ರಿಯಲ್‌ ಎಸ್ಟೇಟ್ ವ್ಯವಹಾರಕ್ಕೆ ಅವರುಗಳು ಸಾಥ್ ನೀಡುವುದನ್ನು ನಿಲ್ಲಿಸಿದ್ದರು. ಇದೂ ಕೂಡ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿರಬಹುದು,'' ಎನ್ನುತ್ತಾರೆ ಶ್ರೀಧರ್ ಆಪ್ತರೊಬ್ಬರು. ಈ ಆರೋಪಗಳನ್ನು ತಳ್ಳಿಹಾಕುವ ಪೊಲೀಸರು, "ಇಂತಹ ಸುಳ್ಳುಗಳನ್ನು ಹರಡುವ ಮೂಲಕ ಪೊಲೀಸರ ನೈತಿಕ ಬಲ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಿಲ್ಲ ಎಂದು ಹೇಳುವುದಿಲ್ಲ. ಎಲ್ಲೋ ಒಂದಿಬ್ಬರು ವೈಯಕ್ತಿಕ ಮಟ್ಟದಲ್ಲಿ ಅವ್ಯವಹಾರಕ್ಕೆ ಇಳಿದಿರಬಹುದು. ಅದಕ್ಕೆ ಇಡೀ ಇಲಾಖೆಯನ್ನು ಹೊಣೆ ಮಾಡಲು ಸಾಧ್ಯವಿಲ್ಲ,'' ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಒಂದು ಕಡೆ ರೌಡಿಸಂ ವಿರುದ್ಧ ಅಖಾಡಕ್ಕೆ ಇಳಿದಿರುವ ಪೊಲೀಸರು, ಆಳದಲ್ಲಿ ಮಾಜಿ ರೌಡಿಯೊಬ್ಬನ ಹೆಡಮುರಿಗೆ ಕಟ್ಟಿದ ಸಂತಸ, ಈ ಮೂಲಕ ರಿಯಲ್ ಎಸ್ಟೇಟ್‌ ವಹಿವಾಟಿನಲ್ಲಿ ನಡೆಯುವ ಕಾಳದಂಧೆಗೆ ಕಡಿವಾಣ ಹಾಕುವ ಮುನ್ಸೂಚನೆ... ಹೀಗೆ ಒಂದು ಶೂಟೌಟ್ ನೆಪದಲ್ಲಿ ಹೊರಜಗತ್ತಿಗೆ ಸಂದೇಶಗಳು ತಲಪುತ್ತಿವೆ. ಆದರೆ, ಇದೂ ಕೂಡ ಕಣ್ಣೊರೆಸುವ, ವ್ಯಕ್ತಿಗತ ಪ್ರಚಾರ ಪಡೆದುಕೊಳ್ಳುವ ಸಾಮಾನ್ಯ ಪೊಲೀಸ್‌ ಖಯಾಲಿಯಾಗದೆ ತಾರ್ಕಿಕ ಅಂತ್ಯವನ್ನು ಕಾಣಲಿ ಎಂಬುದು ಹಾರೈಕೆ.