samachara
www.samachara.com
ಈಕೆ ಮುನ್ನಾರ್‌ಗುಡಿಯ 'ಚಿನ್ನಮ್ಮ': ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು 'ಅಮ್ಮ'
ಸುದ್ದಿ ಸಾಗರ

ಈಕೆ ಮುನ್ನಾರ್‌ಗುಡಿಯ 'ಚಿನ್ನಮ್ಮ': ಸಂಘರ್ಷದಲ್ಲಿಯೇ ನಾಯಕರು ಹುಟ್ಟುತ್ತಾರೆ ಅಂದಿದ್ದರು 'ಅಮ್ಮ'

ನೆರೆಯ ರಾಜ್ಯ

ತಮಿಳುನಾಡಿನ ರಾಜಕೀಯದಲ್ಲಿ ಭಾನುವಾರ ನಡೆದ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿತ ದಿಕ್ಕಿಗೆ ಹೊರಳಿಕೊಂಡಿದೆ.

ಡಿಸೆಂಬರ್ 5ರಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಾವನ್ನಪ್ಪಿದ ದಿನ ಹೊರಬಿದ್ದ ದೃಶ್ಯಾವಳಿಗಳು, ಶವಯಾತ್ರೆ ಮತ್ತು ಅಂತಿಮ ಸಂಸ್ಕಾರದ ನಡಾವಳಿಗಳು ಶಶಿಕಲಾ ನಟರಾಜನ್ ಎಂಬ ಪಾತ್ರವೊಂದು ರಾಜಕೀಯ ಕೇಂದ್ರಕ್ಕೆ ಬರಲಿವೆ ಎಂಬ ಮುನ್ಸೂಚನೆ ನೀಡಿದ್ದವು. ಅದೀಗ ನಿಜವಾಗಿದ್ದು, ಆಲ್ ಇಂಡಿಯಾ ಅನ್ನಾ ಡ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಶಾಸಕಾಂಗ ಪಕ್ಷದ ನಾಯಕಿಯಾಗಿ ವಿ. ಕೆ. ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಮಿಳುನಾಡಿನ ಅಧಿಕಾರ ಕೇಂದ್ರಕ್ಕೆ ಶಶಿಕಲಾ ಇನ್ನೊಂದು ಹೆಜ್ಜೆ ಬಾಕಿ ಉಳಿಸಿಕೊಂಡಿದ್ದಾರೆ. ಮಂಗಳವಾರ ಅವರ ಪಟ್ಟಾಭಿಷೇಕ ನಡೆಯುವ ಸಾಧ್ಯಗಳಿವೆ.

ಒಂದು ತಿಂಗಳ ಮುಂಚೆಯಷ್ಟೆ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಮುಖ್ಯಮಂತ್ರಿ ಪಟ್ಟಗಳನ್ನು ಒಬ್ಬರೇ ನಾಯಕರಿಗೆ ವಹಿಸುವ ಸಂಪ್ರದಾಯ ಎಐಎಡಿಎಂಕೆ ಪಕ್ಷದಲ್ಲಿದೆ.

ಮುನ್ನಾರ್‌ಗುಡಿಯಿಂದ ಬಂದವರು:

ಎಐಎಡಿಎಂಕೆ ಪಕ್ಷದ ಅಧಿನಾಯಕಿಯಾಗಿ ಹೊರಹೊಮ್ಮಿದ ಜಯಲಲಿತಾ ರಾಜಕೀಯ ಸಂಘರ್ಷದಲ್ಲಿಯೇ ಹುಟ್ಟಿ ಬಂದ ನಾಯಕಿ. ಅವರ ಕೊನೆಯ ಸಂದರ್ಶನವೊಂದರಲ್ಲಿ, ನಿಮ್ಮ ನಂತರ ಪಕ್ಷದ ನಾಯಕರು ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಜಯಲಲಿತಾ, "ನಾನು ಸಂಘರ್ಷದಲ್ಲಿಯೇ ಹುಟ್ಟಿ ಬಂದು ನಾಯಕಿಯಾದೆ. ನಾಯಕರು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹುಟ್ಟಿ ಬರುತ್ತಾರೆ ಬಿಡಿ,'' ಎಂಬರ್ಥದಲ್ಲಿ ಉತ್ತರ ನೀಡಿದ್ದರು. ಇದೀಗ ಅವರ ನಂತರ ಸ್ಥಾನಕ್ಕೆ ಬಂದಿರುವ ಶಶಿಕಲಾ ಆಂತರಿಕ ಬಿಕ್ಕಟ್ಟುಗಳಿಗಿಂತ, ಬಾಹ್ಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆಯೇ ಪಕ್ಷದ ಶಾಸಕರು ಅವರನ್ನು ಜಯಾ ನಂತರ ತಮ್ಮನ್ನು ಮುನ್ನಡೆಸುವ ನಾಯಕಿ ಎಂದು ಅವಿರೋಧವಾಗಿ ಒಪ್ಪಿಕೊಂಡಿದ್ದಾರೆ.

ಶಶಿಕಲಾ ಅವರನ್ನು ಜಯಲಲಿತಾ ನಂತರದ ನಾಯಕಿಯಾಗಿ ಒಪ್ಪಿಕೊಳ್ಳಲು ಇದ್ದ ಏಕೈಕ ಕಾರಣ, ಜಯಲಲಿತಾ ಮತ್ತು ಶಶಿಕಲಾ ನಡುವೆ ಇದ್ದ ಆತ್ಮೀಯ ಸಂಬಂಧ ಮತ್ತು ಅದು ಮೂರು ದಶಕಗಳ ಕಾಲ ಕಾಯ್ದುಕೊಂಡು ಬಂದ ಬಗೆಯಷ್ಟೆ. 1980ರಲ್ಲಿ ಜಯಲಲಿತಾಗೆ ಶಶಿಕಲಾ ಅವರನ್ನು ಪರಿಚಯಿಸಿದವರು ಐಎಎಸ್ ಅಧಿಕಾರಿಯಾಗಿದ್ದ ವಿ. ಎಸ್. ಚಂದ್ರಲೇಖ. ಅವರು ಶಶಿಕಲಾ ಪತಿ ನಟರಾಜನ್ ಅವರನ್ನು 'ಸಾರ್ವಜನಿಕ ಸಂಪರ್ಕಾಧಿಕಾರಿ'ಯಾಗಿ ಇಲಾಖೆಯೊಂದಕ್ಕೆ ನೇಮಕ ಮಾಡಿಕೊಂಡಿದ್ದರು. ಈ ಸಮಯದಲ್ಲಿ ವಿಡಿಯೋ ಕ್ಯಾಸೆಟ್ ಅಂಗಡಿ ನಡೆಸುತ್ತಿದ್ದ ಪತ್ನಿ ಶಶಿಕಲಾ, ಜಯಲಲಿತಾ ಆಪ್ತ ವಲಯಕ್ಕೆ ಕಾಲಿಟ್ಟರು. ಆಗಿನ್ನೂ ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿಯಾಗಿದ್ದ ಜಯಲಲಿತಾ ಭಾಷಣಗಳನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಡಲು ಶಶಿಕಲಾ ಶುರುಮಾಡಿದರು.

ಪಕ್ಷದ ನಾಯಕರಾಗಿದ್ದ ಎಂಜಿಆರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಪಕ್ಷದೊಳಗೆ ಜಯಲಲಿತಾ ಮೇಲಿನ ಹೊಣೆಗಾರಿಕೆಗಳು ಹೆಚ್ಚಾದವು. ಅದೇ ವೇಳೆ, ನಾಯಕತ್ವಕ್ಕಾಗಿ ಎಂಜಿಆರ್ ಪತ್ನಿ ಕೂಡ ಅಖಾಡಕ್ಕೆ ಇಳಿದರು. ಇವು ಪಕ್ಷದೊಳಗೆ ಮತ್ತು ಹೊರಗೆ ಜಯಲಲಿತಾಗೆ ಭಾರಿ ಪ್ರಮಾಣದ ವಿರೋಧ ಮತ್ತು ಅವಮಾನಗಳನ್ನು ಎದುರಿಸುವ ಸನ್ನಿವೇಶಗಳನ್ನು ಸೃಷ್ಟಿಸಿತು. ಈ ಸಮಯದಲ್ಲಿ ಜಯಲಲಿತಾ ಜತೆಯಲ್ಲಿ ನಿಂತಿದ್ದು 'ಆಪ್ತ ಗೆಳತಿ', 'ತಂಗಿ' ಶಶಿಕಲಾ.

ಮುಂದೆ, ಪಕ್ಷದೊಳಗೆ ಜಯಲಲಿತಾ ಪ್ರಭಾವ ಬೆಳೆಯುತ್ತಾ ಹೋದಂತೆ ಮುನ್ನಾರ್‌ಗುಡಿಯಿಂದ ಬಂದಿದ್ದ ಶಶಿಕಲಾ ಕೂಡ ಬೆಳೆಯತೊಡಗಿದರು. ಜಯಲಲಿತಾ ಅವರ ಮನೆಯ ಸಂಪೂರ್ಣ ಹೊಣೆಗಾರಿಕೆ ಅವರ ಮೇಲಿತ್ತು. ಈ ಸಮಯದಲ್ಲಿ ಶಶಿಕಲಾ ತಮ್ಮ ಸಂಬಂಧಿಕರನ್ನು ಕರೆದು ಮಣೆ ಹಾಕಿದರು. ಚೆನ್ನೈ, ತಾಂಜಾವೂರುಗಳಲ್ಲಿ ಆಸ್ತಿಗಳನ್ನು ಖರೀದಿಸಿದರು. ಇದು ಒಂದು ಹಂತದಲ್ಲಿ ತಮಿಳುನಾಡಿನಾದ್ಯಂತ ಭಾರಿ ಚರ್ಚೆಗೆ ಕಾರಣವಾಯಿತು. ಮಾಧ್ಯಮಗಳು ಶಶಿಕಲಾ ಮತ್ತು ಅವರ ಸಂಬಂಧಿಗಳನ್ನು 'ಮುನ್ನಾರ್‌ಗುಡಿ ಮಾಫಿಯಾ' ಎಂದು ಗುರುತಿಸಲು ಶುರುಮಾಡಿದವು. ಇಷ್ಟಾದರೂ ಜಯಲಲಿತಾ ಅವರಿಗೆ ಶಶಿಕಲಾ ಮೇಲಿದ್ದ ಅಚಲ ನಂಬಿಕೆ ಸುದೀರ್ಘ ಅವಧಿಯಲ್ಲಿ ಎರಡು ಬಾರಿಯಷ್ಟೆ ಅಲುಗಾಡಿತ್ತು ಮತ್ತು ಕೊನೆಯ ಕ್ಷಣದಲ್ಲಿ ಗಟ್ಟಿಕೊಂಡಿತ್ತು.

ಒಂದೇ ದೋಣಿಯ ಪಯಣಿಗರು:

ಶಶಿಕಲಾ ಮತ್ತು ಜಯಲಲಿತಾ ನಡುವಿನ ಸಂಬಂಧ ಒಂದೇ ದೋಣಿಯಲ್ಲಿ ಸಾಗುವಂತೆ ಬೆಸೆದಿದ್ದು ಅದ್ಧೂರಿ ಮದುವೆ ಪ್ರಕರಣ. ಶಶಿಕಲಾ ಸಂಬಂಧಿ ಸುಧಾರನ್‌ರನ್ನು ಜಯಾ ದತ್ತು ತೆಗೆದುಕೊಂಡರು. ಆತನ ಮದುವೆಯನ್ನು ಜನಪ್ರಿಯ ಸಿನೆಮಾ ತಾರೆ ಶಿವಾಜಿ ಗಣೇಶನ್‌ ಅವರ ಮೊಮ್ಮಗಳ ಜತೆ ನಡೆಸಲು ಕುಟುಂಬಗಳು ತೀರ್ಮಾನಿಸಿದರು. 1995ರಲ್ಲಿ ನಡೆದ ಅದ್ಧೂರಿ ಮದುವೆ ಭಾರಿ ಟೀಕೆಗೆ ಕಾರಣವಾಯಿತು. ಮದುವೆಗಾಗಿ ಬಳಸಿದ್ದ ಸರಕಾರಿ ವಾಹನಗಳು ಹಾಗೂ ಸವಲತ್ತುಗಳನ್ನು ಪ್ರತಿಪಕ್ಷ ಡಿಎಂಕೆ ಪ್ರಶ್ನಿಸಿತ್ತು. ಮುಂದೆ ಸುಧಾರಕನ್ ಜಯಲಲಿತಾ ಕುಟುಂಬದಿಂದ ದೂರವಾದರು. ತಮಗೆ ಜಯಲಲಿತಾ ಕಡೆಯಿಂದ ಪ್ರಾಣಬೆದರಿಕೆ ಇದೆ ಎಂದು ಮುಂದೊಮ್ಮೆ ಹೇಳಿಕೊಂಡಿದ್ದರು.

ಇದಕ್ಕೂ ಮೊದಲೇ ಜಯಾ- ಶಶಿಕಲಾ ಜೋಡಿಯ ವಿರುದ್ಧ ತಮಿಳುನಾಡು ಸಣ್ಣ ಕೈಗಾರಿಕೆಗಳ ನಿಗಮಕ್ಕೆ ಸೇರಿದ ಭೂಮಿಯನ್ನು ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಖರೀದಿಸಿದ ಆರೋಪ ನ್ಯಾಯಾಲಯ ಮೆಟ್ಟಿಲೇರಿತ್ತು. ತಾನ್ಸಿ ಭೂ ಹಗರಣ ಎಂದೇ ಜನಪ್ರಿಯವಾಗಿದ್ದ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರೂ ಸಾರ್ವಜನಿಕ ಛೀಮಾರಿಗೆ ಒಳಗಾದರು. ಮುಂದೆ, ಜಯಲಲಿತಾ ಅವರನ್ನು ಕಳೆ ಹಾಗೂ ಮೇಲಿನ ನ್ಯಾಯಾಲಯಗಳು ದೋಷಮುಕ್ತಗೊಳಿಸಿದವು.

ಹೀಗಿರುವಾಗಲೇ 1996ರಲ್ಲಿ ತಮಿಳುನಾಡು ಚುನಾವಣೆ ನಡೆದ ಡಿಎಂಕೆ ಅಧಿಕಾರಕ್ಕೆ ಬಂತು. ಕರುಣಾನಿಧಿ ಸರಕಾರ ನೇತೃತ್ವ ವಹಿಸಿಕೊಳ್ಳುತ್ತಿದ್ದಂತೆ ಶಶಿಕಲಾ ಬಂಧನಕ್ಕೆ ಒಳಗಾದರು. ಈ ಸಮಯದಲ್ಲಿ ನಟರಾಜನ್ ಕೂಡ ಪತ್ರಕರ್ತರನ್ನು ತಳ್ಳಿದ ಘಟನೆ ನಡೆಯಿತು. ಈ ಸಮಯದಲ್ಲಿ ಜಯಲಲಿತಾ ತಮ್ಮ ಗೆಳತಿಯಿಂದ ಅಂತರವನ್ನು ಕೆಲ ತಿಂಗಳುಗಳ ಕಾಲ ಅಂತರವನ್ನು ಕಾಯ್ದುಕೊಂಡರು.

2011ರಲ್ಲಿ ಶಶಿಕಲಾ ಮತ್ತು ಜಯಾ ನಡುವಿನ ಸಂಬಂಧ ಹಳಸಿತ್ತು. ಈ ಸಮಯದಲ್ಲಿ ಪಕ್ಷದಿಂದ ಶಶಿಕಲಾ ಮತ್ತು ಅವರ 12 ಸಂಬಂಧಿಗಳನ್ನು ಜಯಾ ಉಚ್ಚಾಟಿಸಿದರು. ಈ ವಿಚಾರದಲ್ಲಿ 100 ದಿನಗಳ ಕಾಲ ಹಗ್ಗಜಗ್ಗಾಟ ನಡೆದು ಮತ್ತೆ ಶಶಿಕಲಾ ಸ್ನೇಹಿತೆಯ ಅಂತಃಪುರವನ್ನು ಮರುಪ್ರವೇಶಿಸಿದರು.

ಅದಾದ ನಂತರ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ 21 ದಿನ ಕಳೆದು ಬಂದರು. ಜಯಾ ಆರೋಗ್ಯ ಹದಗೆಟ್ಟ ಸಮಯದಲ್ಲಿ ಶಶಿಕಲಾ ಅವರ ಪಕ್ಕದಲ್ಲಿದ್ದು ಮನೆ ಹಾಗೂ ಸರಕಾರವನ್ನು ನಿಭಾಯಿಸಿದರು.

ಅಂತಿಮ ಯಾತ್ರೆಯಲ್ಲಿ:

ಜಯಲಲಿತಾ ಶವದ ಅಂತಿಮ ಯಾತ್ರೆ ಶುರುವಾಗುತ್ತಿದ್ದಂತೆ, ಶಶಿಕಲಾ ಕಪ್ಪು ಬಣ್ಣದ ಜಯಲಲಿತಾ ಬಳಸುತ್ತಿದ್ದ ಎಸ್‌ಯುವಿ ಕಾರನ್ನೇರಿ ಮೆರವಣಿಗೆಯನ್ನು ಮುನ್ನಡೆಸಿದರು. ನೋಡುತ್ತಿದ್ದ ಲಕ್ಷಾಂತರ ಜನರಿಗೆ ಜಯಾ ಮಾದರಿಯಲ್ಲಿಯೇ ಶಶಿಕಲಾ ದರ್ಶನ ನೀಡಿದರು. ಅಂತಿಮ ಸಂಸ್ಕಾರಗಳ ವಿಧಿವಿಧಾನಗಳನ್ನು ನಡೆಸಿಕೊಡುವ ಮೂಲಕ ಜಯಾ ಅವರ ಇಹ ಹಾಗೂ ಪರ ಲೋಕದ ಸಮಸ್ತ ಯಾತ್ರೆಗಳ ಜತೆ ತಮ್ಮನ್ನು ತಾವು ಬೆಸೆದುಕೊಂಡರು.

ಜಯಾ ಶ್ರದ್ಧಾಂಜಲಿ ಸಭೆಯಲ್ಲಿ 'ಅಮ್ಮ'ನ ಭಾವಚಿತ್ರದ ಮುಂದೆಯೇ ನಿಂತಿದ್ದ ಶಶಿಕಲಾ ಶಾಸಕರು ತಮ್ಮ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ವೇದಿಕೆ ಸಿದ್ಧಪಡಿಸಿದ್ದರು. ಒಂದಷ್ಟು ಜನ ಜಯಾ ಅವರಿಗೆ ಸಲ್ಲಿಸುತ್ತಿದ್ದ ಅದೇ ವಿನಯಪೂರ್ವಕ ಸಮರ್ಪಣೆಗಳನ್ನು ಶಶಿಕಲಾ ಅವರಿಗೂ ಸಲ್ಲಿಸಿದ್ದರು.

ಅದೀಗ, ಶಶಿಕಲಾ ಅವರನ್ನೇ ಪಕ್ಷದ ಹಾಗೂ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡುವ ಮೂಲಕ ಈ ಎಲ್ಲಾ ನಡೆಗಳಿಗೆ ಅಧಿಕೃತ ಮೊಹರು ಪಡೆದುಕೊಂಡಿದೆ. ತಮಿಳುನಾಡಿನ ಮುಖ್ಯಮಂತ್ರಿ ಟ್ವಿಟರ್ ಅಕೌಂಟ್‌ನಲ್ಲಿ ಶಶಿಕಲಾ ಭಾವಚಿತ್ರ ರಾರಾಜಿಸಲು ಶುರುಮಾಡಿಯಾಗಿದೆ.

ಮುಂದಿರುವ ಸವಾಲಿಗಳು: 

ತಮಿಳುನಾಡಿನಲ್ಲಿ ನಡೆದ ಈ ದಿಢೀರ್ ಬೆಳವಣಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪಾಲಿಗೆ ಸಹಿ ಸುದ್ದಿಯೇನಲ್ಲ. ಜಯಾ ನಂತರ ಸಿಎಂ ಸ್ಥಾನವನ್ನು ನಿಭಾಯಿಸುತ್ತಿದ್ದ ಓ. ಪನ್ನೀರ್‌ಸೆಲ್ವಂ ಜತೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಉತ್ತಮ ಸಂಬಂಧವನ್ನು ಹೊಂದಿದ್ದರು. ಈ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯನ್ನು ಒದಗಿಸುವ ತಂತ್ರಗಾರಿಕೆ ಅನುಸರಿಸಿದ್ದರು. ಹೀಗಾಗಿಯೇ ಜಲ್ಲಿಕಟ್ಟು ಸುತ್ತ ಭಾರಿ ಪ್ರತಿಭಟನೆಗಳಾದಾಗ ಕೇಂದ್ರ ಸರಕಾರ ಸಕಾರಾತ್ಮವಾಗಿ ಸ್ಪಂದಿಸಿತ್ತು.

ಭಾನುವಾರ ಓ. ಪನ್ನೀರ್‌ಸೆಲ್ವಂ ರಾಜೀನಾಮೆ ನೀಡಿದ್ದಾರೆ. ಎಐಎಡಿಎಂಕೆ ಪಕ್ಷ ಶಾಸಕರು ಶಶಿಕಲಾ ಅವರನ್ನು ತಮ್ಮ ಮುಂದಿನ ನಾಯಕಿಯಾಗಿ ಆಯ್ಕೆ ಮಾಡಿಯಾಗಿದೆ. ಈ ಸಮಯದಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ದಿಲ್ಲಿಯಲ್ಲಿ ಕೇಂದ್ರ ಸಚಿವರೊಬ್ಬರ ಪತ್ರನ ಮದುವೆ ಸಮಾರಂಭದಲ್ಲಿದ್ದರು. ಹೀಗಾಗಿ ಅವರ ನಡೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದರ ಜತೆಗೆ, ಯಾವುದೇ ಚುನಾವಣೆಗಳನ್ನು ಎದುರಿಸದ ಶಶಿಕಲಾ ಮುಂದಿನ 6 ತಿಂಗಳ ಒಳಗಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಮೇ ತಿಂಗಳಿನಲ್ಲಿ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ತೀರ್ಪು ಹೊರಬೀಳಲಿದೆ. ಇಂತಹ ಕೆಲವು ಮುಂದಿನ ಸವಾಲಿಗಳು ನಡುವೆ ನಾಯಕಿಯಾಗಿ ಶಶಿಕಲಾ ಹುಟ್ಟಿ ಬಂದಿದ್ದಾರೆ. ಮುಂದಿನ ಅವರ ತೀರ್ಮಾನಗಳು ಅವರು ಎಂತಹ ನಾಯಕಿಯಾಗಲಿದ್ದಾರೆ ಎಂಬುದನ್ನು ನಿರ್ಧರಿಸಲಿವೆ.