samachara
www.samachara.com
₹21. 47 ಲಕ್ಷ ಕೋಟಿ ಬಜೆಟ್ ಮಂಡನೆ: ಬಡವರ ಕಲ್ಯಾಣ; ರಾಜಕೀಯ ಪಕ್ಷಗಳಿಗೆ ಕಡಿವಾಣ
ಸುದ್ದಿ ಸಾಗರ

₹21. 47 ಲಕ್ಷ ಕೋಟಿ ಬಜೆಟ್ ಮಂಡನೆ: ಬಡವರ ಕಲ್ಯಾಣ; ರಾಜಕೀಯ ಪಕ್ಷಗಳಿಗೆ ಕಡಿವಾಣ

ಆಡಳಿತದಲ್ಲಿ

ಸುಧಾರಣೆ, ಯುವಕರು- ದಮನಿತ ಸಮುದಾಯಗಳ ಬಲವರ್ಧನೆ ಹಾಗೂ ಭ್ರಷ್ಟಾಚಾರ, ಕಪ್ಪು ಹಣದ ನಿರ್ಮೂಲನೆ ಮೂಲಕ ಸ್ವಚ್ಚ ಆರ್ಥಿಕತೆ...

ಇವು ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ನಾಲ್ಕನೇ ಆಯವ್ಯಯ ಮಂಡನೆ ವೇಳೆ ಮಾಡಿದ ಮೂರು ಪ್ರಮುಖ ಉದ್ಘೋಷಗಳು. ಇದರ ಜತೆಗೆ, ರೈತರು, ಗ್ರಾಮೀಣ ಮೂಲಸೌಕರ್ಯ, ಯುವಕರಿಗೆ ಉದ್ಯೋಗ, ಬಡವರ ಆರೋಗ್ಯ, ಜೀವನಮಟ್ಟ ಸುಧಾರಣೆ, ಸಾರ್ವಜನಿಕ ಸಮೀಕ್ಷೆಗಳು, ತೆರಿಗೆ ಆಡಳಿತ ಸುಧಾರಣೆ, ವಿತ್ತೀಯ ಕೊರತೆಯ ನಿಭಾವಣೆ ಸೇರಿದಂತೆ ಒಟ್ಟು ಹತ್ತು ಪ್ರಮುಖ ಅಂಶಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ 2017- 18ರ ಮುಂಗಡ ಪತ್ರ ತಯಾರಿಕೆಯಲ್ಲಿ ಗಮನಕ್ಕೆ ತೆಗೆದುಕೊಂಡರು.

ಬುಧವಾರ ಲೋಕಸಭೆಯಲ್ಲಿ ಅರುಣ್ ಜೇಟ್ಲಿ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಮಾನವೀಯ ಆಧಾರ'ದ ಮೇಲೆ ನಾಳೆಗೆ ಮುಂದೂಡುವಂತೆ ಕೋರಿದರು. ಸಂಸದ ಯು. ಅಹಮದ್ ಅವರ ಸಾವಿನ ಹಿನ್ನೆಲೆಯಲ್ಲಿ ಹೀಗೊಂದು ಬೇಡಿಕೆ ಮುಂದಿಟ್ಟರು. ಆದರೆ, ಮೌನಾಚರಣೆ ನಂತರ ಸಭಾಪತಿ ಸುಮಿತ್ರಾ ಮಹಾಜನ್ ಬಜೆಟ್ ಮಂಡನೆಗೆ ಅವಕಾಶ ಮಾಡಿಕೊಟ್ಟರು.

ಸರಿಯಾಗಿ 11 ಗಂಟೆಗೆ ತಮ್ಮ ಬಜೆಟ್ ಭಾ‍ಣವನ್ನು ಆರಂಭಿಸಿದ ಹಣಕಾಸು ಸಚಿವ ಸುಮಾರು 2 ಗಂಟೆಗಳ ಕಾಲ ಸರಕಾರದ ಆರ್ಥಿಕ ಮುನ್ನೋಟವನ್ನು ಜನರ ಮುಂದಿಟ್ಟರು.

"ಕಚ್ಚಾ ತೈಲಾ ಸೇರಿದಂತೆ ಇತರೆ ಕಚ್ಚಾ ವಸ್ತುಗಳ ಬೆಲೆಯಲ್ಲಿನ ಅನಿಶ್ಚಿತತೆ, ಅಮೆರಿಕಾದ ಫೆಡರಲ್ ರಿಸರ್ವ್ ನೆರವಿನಲ್ಲಿ ಕಡಿತ ಮತ್ತು ಜಾಗತೀಕರಣದ ಸರಕು ಮತ್ತು ಸೇವೆಗಳ ಬಗ್ಗೆ ಆಸಕ್ತಿ ಕಳೆದುಹೋಗುತ್ತಿರುವ ಸೂಚನೆಗಳು ಆರ್ಥಿಕತೆಗೆ ಸವಾಲು ಒಡ್ಡುತ್ತಿವೆ," ಎಂದು ಜೇಟ್ಲಿ ಆರಂಭದಲ್ಲಿಯೇ ಪ್ರಸ್ತಾಪಿಸಿದರು.

ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಹೆಚ್ಚು ಕಡಿಮೆ ಇದೇ ಸವಾಲುಗಳನ್ನು ಎದುರಿಸಲಾಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಮತ್ತು 'ಆರ್ಥಿಕ ಸಮೀಕ್ಷೆ'ಗಳೂ ಹೇಳುತ್ತಿದ್ದವು.

ಅನಾಣ್ಯೀಕರಣ: 

ಕಳೆದ ವರ್ಷ ನ. 8ರಂದು ರಾತ್ರಿ ₹500 ಹಾಗೂ ₹1000 ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿತ್ತು. ಈ ವಿಚಾರವನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿ ಜೇಟ್ಲಿ, "ನೋಟು ಹಿಂಪಡೆಯುವಿಕೆ (ಅನಾಣ್ಯೀಕರಣ) ದೇಶದ ಆರ್ಥಿಕತೆಯನ್ನು ಬೆಳೆಸುವುದಕ್ಕೆ ತೆಗೆದುಕೊಂಡ ಕ್ರಮವಾಗಿತ್ತು. ಜತೆಗೆ, ಕಪ್ಪು ಹಣ, ಭಯೋತ್ಪಾದನೆ ಮತ್ತು ನಕಲಿ ನೋಟುಗಳ ತಡೆಗೆ ಕಠಿಣ ನಿಲುವಾಗಿತ್ತು. ಇದರ ಜತೆಗೆ ಜಿಎಸ್ಟಿ ಕುರಿತು ಸರಕಾರ ತೆಗೆದುಕೊಂಡ ನಿಲುವುಗಳಿಂದ ಜಿಡಿಪಿ ಹೆಚ್ಚಾಗಲಿದೆ,'' ಎಂದರು. ಸದ್ಯ ಶೇ. 7ರಷ್ಟಿರುವ ಜಿಡಿಪಿ ಮುಂದಿನ ಎರಡು ವರ್ಷಗಳಲ್ಲಿ 7. 6%- 7.8%ಗೆ ಏರಿಕೆಯಾಗಲಿದೆ ಎಂದು ಅವರು ತಿಳಿಸಿದರು.

ರೈಲ್ವೆ ಬಜೆಟ್:

"ಬ್ರಿಟಿಷ್ ಕಾಲದ ಸಂಪ್ರದಾಯದಂತೆ ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ ಎರಡನ್ನೂ ಒಟ್ಟಿಗೆ ಮಂಡಿಸಲಾಗುತ್ತಿದೆ. ಈ ಮೂಲಕ ದೇಶದ ಸಾರಿಗೆ ವ್ಯವಸ್ಥೆಗೆ, ವಿಶೇಷವಾಗಿ ರೈಲು ಸೇವೆಗಳಿಗೆ ಹೆಚ್ಚಿನ ಮನ್ನಣೆ ನೀಡಲು ಸಾಧ್ಯವಾಗುತ್ತದೆ,'' ಎಂದರು.

"ರೈಲ್ವೆ ಅಭಿವೃದ್ಧಿಗೆ ಒಟ್ಟು ₹1.31 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಕೇಂದ್ರ ಸರಕಾರ ₹51 ಸಾವಿರ ಕೋಟಿ ಮೀಸಲಿದಲಿದೆ. ಐಆರ್‌ಸಿಟಿಸಿ ಮೂಲಕ ರೈಲ್ವೆ ಟಿಕೆಟ್‌ ಬುಕಿಂಗ್‌ ಮಾಡುವವರಿಗೆ ಸೇವಾ ಶುಲ್ಕ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು. ದೇಶದ 500 ರೈಲ್ವೆ ನಿಲ್ದಾಣಗಳನ್ನು ವಿಕಲಚೇತನರಿಗೆ ಅನುಕೂಲಕರ ಸೌಲಭ್ಯವನ್ನು ಹೊಂದಲಿವೆ. ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ₹1 ಲಕ್ಷ ಕೋಟಿ ಸುರಕ್ಷಾ ನಿಧಿ ಸ್ಥಾಪಿಸಗುವುದು. 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet)ಗಳನ್ನು ಅಳವಡಿಸಲಾಗುತ್ತದೆ,'' ಎಂದು ಮುನ್ನೋಟವನ್ನು ನೀಡಿದರು.

ಹೊಸ ಮೆಟ್ರೋ ರೈಲು ನೀತಿ ಜಾರಿಗೊಳಿಸಲು ಮುಂದಾಗಿರುವುದರಿಂದ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಯೋಜನೆಗಳನ್ನು ರೈಲ್ವೆ ಇಲಾಖೆ ಸ್ವತಂತ್ರವಾಗಿ ಜಾರಿಗೊಳಿಸಲಿದೆ ಎಂದು ಅವರು ಹೇಳಿದರು.

ರೈತರಿಗೆ ನೆರವು:

ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಿದೆ. ಕೃಷಿ ಉತ್ಪಾದನೆ ಈ ವರ್ಷ ಶೇಕಡ 4.1ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರೈತರು ಮಣ್ಣು ಪರೀಕ್ಷೆ ಮಾಡಿಸಲು ಹೆಚ್ಚುವರಿ ಮಿನಿ ಲ್ಯಾಬ್‌ಗಳನ್ನು ಹಾಗೂ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಗುವುದು. ಕೃಷಿ ವಿಜ್ಞಾನ ಕೇಂದ್ರಗಳ  ಬೆಳೆ ವಿಮೆ ಯೋಜನೆಗೆ ₹9 ಸಾವಿರ ಕೋಟಿ ಮೀಸಲಿಡಲಾಗಿದೆ,'' ಎಂದರು. ಜತೆಗೆ, ರೈತರಿಗಾಗಿ 'ಫಸಲ್‌ ಬೀಮಾ ಯೋಜನೆ' ಅಡಿ ಹಲವು ಹೊಸ ಅಂಶಗಳ ಘೋಷಣೆಗಳನ್ನು ಘೋಷಿಸಿದರು.

ಈ ಸಾಲಿನಲ್ಲಿ ರೈತರಿಗೆ ಕೃಷಿ ಸಾಲದ ಮಿತಿ ₹ 10 ಲಕ್ಷ ಕೋಟಿಗೆ ಏರಿಸಲಾಗಿದೆ.

 • ಹೈನುಗಾರಿಕೆ ಸಂಸ್ಕರಣಾ ಘಟಕ ಸ್ಥಾಪನೆಗೆ ನಬಾರ್ಡ್‌ ಬ್ಯಾಂಕಿನಿಂದ ₹ 8 ಸಾವಿರ ಕೋಟಿ ಧನ ಸಹಾಯ
 • ಹಾಲು ಉತ್ಪಾದನೆ ಹೆಚ್ಚಿಸಲು ನಬಾರ್ಡ್‌ನಿಂದ ₹ 8 ಸಾವಿರ ಕೋಟಿ ಬಿಡುಗಡೆ
 • ದೇಶದ 600 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳ ಆರಂಭ
 • 100 ಕಡೆ ಅಂತರರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
 • ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ₹ 1,87,223 ಕೋಟಿ
 • ನರೇಗಾ ಯೋಜನೆಗಳಿಗೆ ಬಾರಿ ದಾಖಲೆಯ ₹ 48 ಸಾವಿರ ಕೋಟಿ
 • ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ 2019 ರ ವೇಳೆಗೆ ನಿರಾಶ್ರಿತರಿಗೆ 1 ಕೋಟಿ ಮನೆ ನಿರ್ಮಾಣ
 • ನೂತನ ವಿದ್ಯುತ್‌ ಯೋಜನೆಗಳಿಗೆ ₹ 4500 ಕೋಟಿ
 • ಸಾರಿಗೆ ವಲಯಕ್ಕೆ ₹ 2.41 ಲಕ್ಷ ಕೋಟಿ
 • ಭಾರತ್‌ ನೆಟ್‌ ಯೋಜನೆಗೆ ₹ 10 ಸಾವಿರ ಕೋಟಿ
 • ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಕ್ಕೆ ₹ 37,435 ಕೋಟಿ ಅನುದಾನ
 • ವಾರ್ಷಿಕ ₹ 50 ಕೋಟಿ ವಹಿವಾಟು ನಡೆಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತೆರಿಗೆಯಲ್ಲಿ 5% ಕಡಿತ


ಕೊನೆಯ ಬಾಂಬ್:

ಹೀಗೆ, ಭಾಷಣದುದ್ದಕ್ಕೂ ಗ್ರಾಮೀಣ ಭಾರತ, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿಯೇ ಯೋಜನೆಗಳನ್ನು ಘೋಷಣೆ ಮಾಡಿದ ಜೇಟ್ಲಿ, ಕೊನೆಯಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ಹಾಗೂ ನಗದು ಚಲಾವಣೆ ವಿಚಾರದಲ್ಲಿ ಮಹತ್ವದ ತೀರ್ಮಾನ ಪ್ರಕಟಿಸಿದರು.

ಮೂರು ಲಕ್ಷಕ್ಕಿಂತ ಅಧಿಕ ಹಣವನ್ನು ನಗದು ರೂಪದಲ್ಲಿ ಚಲಾವಣೆ ಮಾಡುವಂತಿಲ್ಲ ಎನ್ನುವ ಮೂಲಕ 'ಕಪ್ಪು ವಹಿವಾಟು'ಗಳಿಗೆ ಕಡಿವಾಣ ಹಾಕವ ಗಟ್ಟಿ ನಿರ್ಧಾರವನ್ನು ಪ್ರಕಟಿಸಿದರು. ರಾಜಕೀಯ ಪಕ್ಷಗಳು 2 ಸಾವಿರವರೆಗೆ ವೈಯಕ್ತಿಕ ದೇಣಿಗೆ ಪಡೆಯಬಹುದು. ಅದಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಅಥವಾ ಆನ್ ಲೈನ್ ಮೂಲಕವೇ ಪಡೆಯಬೇಕು. ವರ್ಷದ ಕೊನೆಯಲ್ಲಿ ತೆರಿಗೆ ಮಾಹಿತಿಯನ್ನೂ ಸಲ್ಲಿಸಬೇಕು ಎಂದು ಸರಕಾರದ ಹೊಸ ಆಲೋಚನೆಯನ್ನು ಮುಂದಿಟ್ಟರು.

ಇದರ ಜತೆಗೆ, ವಾರ್ಷಿಕ 50 ಲಕ್ಷದಿಂದ 1 ಕೋಟಿ ಆದಾಯ ಹೊಂದಿರುವವರಿಗೆ 10% ಹೆಚ್ಚುವರಿ ಸರ್‌ಚಾರ್ಜ್‌ ವಿಧಿಸುವ ಮೂಲಕ ಮೇಲ್ಮಧ್ಯಮ ವರ್ಗದ ಜೇಬಿಗೆ ಕತ್ತರಿಯನ್ನೂ ಹಾಕಿದರು.

ಅಪಾರ ನಿರೀಕ್ಷೆಗಳು ಮತ್ತು ಅನುಮಾನಗಳ ಭಾರವನ್ನು ಹೊತ್ತುಕೊಂಡಿದ್ದ 2017-18ನೇ ಸಾಲಿನ ಬಜೆಟ್ ಹೀಗೆ ಮಂಡನೆಯಾಯಿತು. ಒಟ್ಟು ₹ 21. 47 ಲಕ್ಷ ಕೋಟಿಗಳ ಮುಂಗಡ ಪತ್ರದಲ್ಲಿ ಹೊಸ ಬಹುನಿರೀಕ್ಷಿತ ಯೋಜನೆಗಳ ವಿಚಾರಕ್ಕೆ ಹೋಗದೆ, ಇರುವ ಯೋಜನೆಗಳಿಗೆ ಅನುದಾನ ಹೆಚ್ಚಿಸಿ, ಬಡವರಿಗೆ ಪೂರಕ ವಾತಾವರಣ ನಿರ್ಮಾಣದ ಭರವಸೆ ನೀಡಿ, ರಾಜಕೀಯ ಪಕ್ಷಗಳ ದೇಣಿಗೆ ವಿಚಾರಕ್ಕೂ ಕಡಿವಾಣ ಹಾಕುವ ಮೂಲಕ ಜನರಿಗೆ ಆಹ್ಲಾದಕರ ಭಾವವನ್ನೂ ಮೂಡಿಸುವ ತಂತ್ರಕ್ಕೆ ಮೊರೆ ಹೋಗಿರುವುದು ಸ್ಪಷ್ಟವಾಗಿದೆ.

ಚಿತ್ರ ಕೃಪೆ: ಎಕನಾಮಿಕ್ ಟೈಮ್ಸ್.