samachara
www.samachara.com
'ಟ್ರಂಪಣ್ಣ ಹುಚ್ಚಾಟ': ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್
ಸುದ್ದಿ ಸಾಗರ

'ಟ್ರಂಪಣ್ಣ ಹುಚ್ಚಾಟ': ಆದೇಶ ತಿರಸ್ಕರಿಸಿದ ಅಟಾರ್ನಿ ಜನರಲ್ ಸಲ್ಲಿಗೆ ಗೇಟ್ ಪಾಸ್

ಅಮೆರಿಕಾ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತದಲ್ಲಿ ಕ್ಷಣಕ್ಕೊಂದು ಬದಲಾವಣೆಗಳಾಗುತ್ತಿದ್ದು, ಕೆಲವು ಗಂಟೆಗಳ ಮುಂಚೆಯಷ್ಟೆ ದೇಶದ ಅಟಾರ್ನಿ ಜನರಲ್ ಸಲ್ಲಿ ಯೇಟ್ಸ್ ಅವರನ್ನು ಸ್ಥಾನದಿಂದ ಕಿತ್ತು ಹಾಕಲಾಗಿದೆ.

ಸದ್ಯ ವಿವಾದಕ್ಕೆ ಕಾರಣವಾಗಿರುವ ಆಯ್ದ ಮುಸ್ಲಿಂ ದೇಶಗಳ ವಲಸಿಗರ ಮೇಲಿನ ನಿರ್ಬಂಧ ಆದೇಶವನ್ನು ಯೇಟ್ಸ್ ತಳ್ಳಿಹಾಕಿದ್ದರು. ಸೋಮವಾರ ಸಂಜೆ ವೇಳೆಗೆ (ಅಮೆರಿಕಾ ಕಾಲಮಾನ) ಕಾನೂನು ಇಲಾಖೆಯ ವಕೀಲರಿಗೆ ಅಧ್ಯಕ್ಷ ಟ್ರಂಪ್ ಆದೇಶವನ್ನು ಪುರಸ್ಕರಿಸದಂತೆ ಅವರು ಆದೇಶ ಹೊರಡಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಸಲ್ಲಿ ಯೇಟ್ಸ್ ಅವರನ್ನು ಅಟಾರ್ನಿ ಜನರಲ್ ಸ್ಥಾನದಿಂದ ಕಿತ್ತು ಹಾಕಿ ಶ್ವೇತಭವನ ಆದೇಶ ಹೊರಡಿಸಿದೆ.

"ಪ್ರಭಾರ ಅಟಾರ್ನಿ ಜನರಲ್ ಆಗಿ ಕೆಲಸ ಮಾಡುತ್ತಿದ್ದ ಸಲ್ಲಿ ಯೇಟ್ಸ್, ಕಾನೂನು ಇಲಾಖೆಗೆ ದ್ರೋಹ ಬಗೆದಿದ್ದಾರೆ. ಅಮೆರಿಕಾ ನಾಗರಿಕರನ್ನು ರಕ್ಷಿಸುವ ಸಲುವಾಗಿ ವಲಸೆ ನೀತಿಯ ಕುರಿತು ಹೊಸ ಆದೇಶವನ್ನು ಅವರು ತಿರಸ್ಕರಿಸಿದ್ಧಾರೆ,'' ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಯೇಟ್ಸ್ ಹಿಂದಿನ ಅಧ್ಯಕ್ಷ ಒಬಾಮಾ ಕಾಲಾವಧಿಯಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದರು.

ಕಾನೂನು ಇಲಾಖೆಯ ಉನ್ನತ ಅಧಿಕಾರಿಗಳು ಶ್ವೇತಭವನದ ಆದೇಶಗಳನ್ನು ತಿರಸ್ಕರಿಸುವ ಹಲವು ಘಟನೆಗಳು ಅಮೆರಿಕಾದಲ್ಲಿ ಹಿಂದೆಯೂ ನಡೆದಿದ್ದವು. 1973ರಲ್ಲಿ ಅಂದಿನ ಅಟಾರ್ನಿ ಜನರಲ್ ಏಲಿಯಟ್ ರಿಚರ್ಡ್ಸನ್ ಅಧ್ಯಕ್ಷ ನಿಕ್ಸನ್ ಆದೇಶವನ್ನು ತಿರಸ್ಕರಿಸುವ ಮೂಲಕ ರಾಜೀನಾಮೆ ನೀಡಿದ್ದರು. ತನಿಖಾ ಪತ್ರಿಕೋದ್ಯಮದಲ್ಲಿ ಆಗಾಗ್ಗೆ ಚರ್ಚೆಗೆ ಬರುವ ವಾಟರ್ ಗೇಟ್ ಹಗರಣದ ಸಂಬಂಧ ಅಧ್ಯಕ್ಷ ನಿಕ್ಸನ್ ಆದೇಶವನ್ನು ಅವರು ವಿರೋಧಿಸಿದ್ದರು.

ಹೊಸ ವಲಸೆ ನೀತಿ:

ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿದ ಡೊನಾಲ್ಡ್ ಟ್ರಂಪ್, ತಮ್ಮ ಆಡಳಿತ ಎರಡನೇ ವಾರದಲ್ಲಿ ಹೊಸ ವಲಸೆ ನೀತಿಯನ್ನು ಜಾರಿ ತಂದಿದ್ದಾರೆ. ಇದು ಅಮೆರಿಕಾದಲ್ಲಿ ರಾಜಕೀಯ ಬಿಕ್ಕಟ್ಟು ನಿರ್ಮಾಣ ಮಾಡಿದೆ. ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮನ್ ದೇಶಗಳ ವಲಸಿಗರನ್ನು ಮುಂದಿನ 120 ದಿನಗಳ ಕಾಲ ಅಮೆರಿಕಾಗೆ ಪ್ರವೇಶಿಸದಂತೆ ನಿರ್ಬಂಧ ಹೇರಿ ಅವರು ಹೊಸ ಆದೇಶವನ್ನು ಹೊರಡಿಸಿದ್ದಾರೆ.

ಸದ್ಯ ಸಿರಿಯಾದಲ್ಲಿ ಆಂತರಿಕ ಪರಿಸ್ಥಿತಿ ಹದಗೆಟ್ಟಿದ್ದು ಜನ ಯುರೋಪ್ ಮತ್ತು ಅಮೆರಿಕಾ ಖಂಡಗಳ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈವರೆಗೆ ಸಿರಿಯಾದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದಿಂದಾಗಿ ಸುಮಾರು 4 ಲಕ್ಷ ಜನ ಸಾವನ್ನಪ್ಪಿದ್ದಾರೆ. ಮಧ್ಯಪ್ರಾಚ್ಯದ ಅರಬ್ ದೇಶಗಳಲ್ಲಿ ಮಾನವೀಯ ಬಿಕ್ಕಟ್ಟು ಎದುರಾಗಿರುವಾಗಲೇ, ಅಮೆರಿಕಾದ ನೂತನ ಅಧ್ಯಕ್ಷರ ವಲಸೆ ನೀತಿ ಹೊರಬಿದ್ದಿದ್ದು, ಪ್ರತಿಭಟನೆಗಳಿಗೆ ಮುನ್ನುಡಿ ಬರೆದಿದೆ.


       ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆ.
ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆ.

ಅಮೆರಕಾ ಹಿಂದಿನಿಂದಲೂ ವಲಸಿಗರಿಗೆ ಅವಕಾಶ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿತ್ತು. ಇದೀಗ ದಿಢೀರ್ ಹೊಸ ವಲಸೆ ನೀತಿ ಜಾರಿ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಕೆಲವು ಕಡೆಗಳಲ್ಲಿ ವಲಸೆ ನೀತಿಯನ್ನು ಜಾರಿ ತರಲು ಕಸ್ಟಮ್ಸ್ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಆಯ್ದ ಮುಸ್ಲಿಂ ರಾಷ್ಟ್ರಗಳನ್ನು ಮಾತ್ರವೇ ಹೊಸ ವಲಸೆ ನೀತಿ ಗುರಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ವಲಸೆ ನೀತಿಯ ಕರಡು ಪ್ರತಿಯನ್ನು ಬಹಿರಂಗಪಡಿಸಿರುವ 'ಎಪಿ' ನ್ಯೂಸ್ ಏಜೆನ್ಸಿ, ಅದರಲ್ಲಿರುವ ಹಲವು ಪ್ರಮುಖ ಅಂಶಗಳನ್ನು ವರದಿ ಮಾಡಿದೆ. ಮುಂದಿನ ದಿನಗಳಲ್ಲಿ ಅಮೆರಿಕಾ ಸರಕಾರದ ನೆರವನ್ನು ಪಡೆಯುವ ವಲಸಿಗರನ್ನು ವಾಪಾಸ್ ತವರು ದೇಶಕ್ಕೆ ಕಳುಹಿಸುವ ಕುರಿತು ಹೊಸ ವಲಸೆ ನೀತಿ ಪ್ರಸ್ತಾಪಿಸಿದೆ.

ಇದರ ಜತೆಗೆ ಟ್ರಂಪ್ ಆಡಳಿತ ಹೊಸ ವೀಸಾ ನೀತಿಯನ್ನು ಜಾರಿಗೆ ತರುವ ಕುರಿತು ಕರಡು ನೀತಿಯನ್ನು ಸಿದ್ಧಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶ್ವೇತಭವನ ಇನ್ನೂ ಬಿಟ್ಟು ಕೊಟ್ಟಿಲ್ಲವಾದರೂ, ಅಮೆರಿಕಾದಲ್ಲಿ ಕೆಲಸ ಮಾಡುವ ವಿದೇಶಿಗರು ತವರಿಗೆ ಮರಳುವ ಸ್ಥಿತಿ ಎದುರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದರ ನಡುವೆ, ಶ್ವೇತಭವನದ ಅಧಿಕಾರ ಹಸ್ತಾಂತರ ಮಾಡಿ ಹೊರಬಂದಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, 11 ದಿನಗಳ ಹೊಸ ಆಡಳಿತದ ವಿರುದ್ಧ ಬೀದಿಗೆ ಬಂದಿದ್ದಾರೆ. ಅವರ ವಕ್ತಾರರು ಹೇಳಿಕೆ ನೀಡಿದ್ದು, ಟ್ರಂಪ್ ಆಡಳಿತ ತಂದ ವಲಸೆ ನೀತಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.