samachara
www.samachara.com
'ಇನ್ ಡೀಟೆಲ್': ಕಂಬಳ ಎಂದರೆ ಬರೀ ಕೋಣಗಳ ಓಟದ ಸ್ಪರ್ಧೆ ಮಾತ್ರ ಅಲ್ಲವೋ ಅಣ್ಣಾ!
ಸುದ್ದಿ ಸಾಗರ

'ಇನ್ ಡೀಟೆಲ್': ಕಂಬಳ ಎಂದರೆ ಬರೀ ಕೋಣಗಳ ಓಟದ ಸ್ಪರ್ಧೆ ಮಾತ್ರ ಅಲ್ಲವೋ ಅಣ್ಣಾ!

ದಕ್ಷಿಣ ಕನ್ನಡದ

ಎರಡು ಜಿಲ್ಲೆಗಳಿಗೆ ಸೀಮಿತವಾಗಿ ನಡೆಯುವ ಕಂಬಳ ಆಚರಣೆಗೆ ಇರುವ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಜನ ಬೀದಿಗೆ ಬಂದಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಭಾರಿ ಪ್ರತಿಭಟನೆ ಮತ್ತು ಅದು ಪಡೆದುಕೊಂಡು ಪ್ರಚಾರ ಕಂಬಳದ ಸುತ್ತ ಆರಂಭಗೊಂಡಿರುವ ಪ್ರತಿಭಟನೆಗಳ ಮೇಲೆ ಪರಿಣಾಮ ಬೀರಿದೆ. ಈಗಾಗಲೇ, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಕಂಬಳವನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸಿ ಹೋರಾಟಗಳು ನಡೆದಿವೆ. ಮುಂದಿನ ಒಂದು ವಾರದಲ್ಲಿ ಇವು ಇನ್ನಷ್ಟು ಜೋರಾಗುವ ಮುನ್ಸೂಚನೆ ಸಿಕ್ಕಿದೆ.

"ಕಂಬಳ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ. ಅದಕ್ಕೆ ನಮ್ಮ ವಿರೋಧವಿಲ್ಲ. ನ್ಯಾಯಾಲಯದಲ್ಲಿ ಏನಾಗಲಿದೆ ಎಂಬುದನ್ನು ನೋಡಿಕೊಂಡು ಅಗತ್ಯ ಬಿದ್ದರೆ ಸುಘ್ರೀವಾಜ್ಞೆಯನ್ನು ಹೊರಡಿಸಲಾಗುವುದು,'' ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಇದರ ಜತೆಗೆ, ಕಂಬಳದ ಔಚಿತ್ಯದ ಪ್ರಶ್ನೆಗಳೂ ಎದ್ದಿವೆ. ಕಂಬಳ ಆಚರಣೆ ಜಾತಿ ಪ್ರಾಬಲ್ಯದ ಪ್ರತೀಕ ಎಂಬ ಮಾತುಗಳು ಕೇಳಿಬಂದಿವೆ. ಕಂಬಳದ ಸಮಯದಲ್ಲಿ ಮೇಲ್ಜಾತಿಗಳ- ಬಂಟರು ಮತ್ತು ಜೈನರ- ಮೇಲಾಟಗಳು ನಡೆಯುತ್ತವೆ ಎಂದು ಕೆಲವರು ವಾದಿಸುತ್ತಿದ್ದಾರೆ. ಹೀಗೆ, ಪರ ಮತ್ತು ಸಣ್ಣಮಟ್ಟದ ವಿರೋಧದ ನಡುವೆಯೇ ಕಂಬಳವನ್ನು ತುಳುನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಬಿಂಬಿಸುವ ಪ್ರಯತ್ನಗಳು ಶುರುವಾಗಿವೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಉಡುಪಿಯ ಪೇಜಾವರ ಸ್ವಾಮಿ ಸೇರಿದಂತೆ ಅನೇಕರು ಕಂಬಳ ಪರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ಸದ್ಯದಲ್ಲಿಯೇ ಕಂಬಳ ಮತ್ತು ಅದರ ಸುತ್ತಲಿನ ವಿಚಾರಗಳು ಸುದ್ದಿಕೇಂದ್ರಕ್ಕೆ ಬಂದು ನಿಲ್ಲುವುದು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ 'ಸಮಾಚಾರ' ಕಂಬಳ ಹಿನ್ನೆಲೆ, ನಡೆದು ಬಂದ ಹಾದಿ, ಆಧುನಿಕ ಕಾಲಘಟ್ಟದಲ್ಲಿ ಅದು ಪಡೆದುಕೊಂಡು ವಾಣಿಜ್ಯದ ಮುಖವಾಡ ಮತ್ತು ತುಳುನಾಡಿನ ಸಂಸ್ಕೃತಿಗೆ ಅದು ನೀಡುವ ಕೊಡುಗೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತಿದೆ.

ವ್ಯವಸಾಯ ಹಿನ್ನೆಲೆ: 

ಕಂಬಳ ಮೂಲದಲ್ಲಿ 'ಗಂಪ ಕಳ'ವಾಗಿತ್ತು. ಗಂಪ ಎಂದರೆ ಕೆಸರು; ಕಳ ಎಂದರೆ ಸಮತಟ್ಟಾದ ಭೂಮಿ. ವ್ಯವಸಾಯವನ್ನು ಮಾಡುವ ಸಮತಟ್ಟಾದ ಜಮೀನನ್ನು ಕಂಬಳ ಅಥವಾ ಕಂಬಳದ ಗದ್ದೆ ಎನ್ನುತ್ತಿದ್ದರು. "ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವ ಮುಂಚೆ, ವಿಸ್ತಾರವಾದ ಜಮೀನುಗಳನ್ನು ಉಳುಮೆ ಮಾಡುವುದೇ ಒಂದು ಸಂಭ್ರಮದ ಹಬ್ಬವಾಗಿತ್ತು. ಈ ಸಮಯದಲ್ಲಿ 50- 60 ಜೋಡು ಕೋಣಗಳನ್ನು ಕಟ್ಟಿ ಉಳುಮೆ ಮಾಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಇಡೀ ಊರು ಭಾಗಿಯಾಗುತ್ತಿತ್ತು.  ಕಂಬಳದ ಗದ್ದೆಗಳಲ್ಲಿ ಕೃಷಿ ಉಪಕರಣಗಳ ಮಾರಾಟಗಳೂ ನಡೆಯುತ್ತಿದ್ದವು. ರೈತರಿಗೆ ಅದು ಆದಾಯದ ಮೂಲವೂ ಆಗಿತ್ತು,'' ಎನ್ನುತ್ತಾರೆ ಇವತ್ತು ಕಂಬಳ ಅಕಾಡೆಮಿಯನ್ನು ಸ್ಥಾಪಿಸಿರುವ ಗುಣಪಾಲ್ ಕದಂಬ.

ಕಂಬಳದ ಐತಿಹಾಸಿಕ ಹಿನ್ನೆಲೆಯ ಕುರಿತು ಒಳನೋಟಗಳನ್ನು ನೀಡುವ ಅವರು, "ಕಂಬಳ ಗದ್ದೆಗಳ ವಿಸ್ತೀರ್ಣದ ಬಗ್ಗೆ, ಅವುಗಳ ಪ್ರಾಮುಖ್ಯತೆ ಕುರಿತು ಶೃಂಗೇರಿ ಶಾಸನ, ಬಂಟ್ವಾಳ ತಾಲೂಕಿನ ಕಲ್ಲುಮಗೇಣಾಶಾನ, ಉಡುಪಿಯ ತೋಳಾರ ಶಾಸನಗಳಲ್ಲಿ ಉಲ್ಲೇಖವಿದೆ. ಮಂಗಳೂರು ಜಿಲ್ಲೆಯಲ್ಲಿ ಮೂಲ್ಕಿ ಸೀಮೆ ಕಂಬಳ, ಉಡುಪಿ ಜಿಲ್ಲೆಯಲ್ಲಿ ಒಂಡಾರು ಕಂಬಳ ಪ್ರಾಮುಖ್ಯ ಪಡೆದುಕೊಂಡಿದ್ದವು,'' ಎಂದು ವಿವರಿಸುತ್ತಾರೆ.

ದಕ್ಷಿಣ ಕನ್ನಡದಲ್ಲಿ ಭತ್ತದ ಕೃಷಿಯಲ್ಲಿ ಎರಡು ಅಥವಾ ಮೂರು ಬೆಳೆಯನ್ನು ತೆಗೆಯುತ್ತಾರೆ. ಹಿಂದೆ, ವ್ಯವಸಾಯ ಮಾಡಲು ಕಂಬಳ ಗದ್ದೆಗಳನ್ನು ಉಳುಮೆ ಮಾಡಿದ ನಂತರ ಒಟ್ಟಿಗೆ 50- 60 ಜೋಡು ಕೋಣಗಳನ್ನು ಓಡಿಸಲಾಗುತ್ತಿತ್ತು. ಅದು ಕೆಲಸಗಾರರ ಮನೋರಂಜನೆಯ ಭಾಗವಾಗಿತ್ತು. ಅದಕ್ಕೆ ಬಹುಮಾನವಾಗಿ ಲಿಂಬೆ ಹಣ್ಣು, ಎಲೆ ಅಡಿಕೆ ಕೊಡುವ ಸಂಪ್ರದಾಯವಿತ್ತು. ಅದೇ ಮುಂದೆ ವಾಣಿಜ್ಯ ಸ್ವರೂಪವನ್ನು ಪಡೆದುಕೊಂಡಿತು; ವ್ಯಾಪಾರಿಕರಣದ ಪ್ರಕ್ರಿಯೆಗೆ ಒಳಗಾಯಿತು.

"1968ರಲ್ಲಿ ಮೊದಲ ಬಾರಿಗೆ ಕಾರ್ಕಳ ತಾಲೂಕಿನ ಬಜಗೋಳಿಯ ಜೈನ್ ಸಹೋದರರು ಕಂಬಳದ ಆಚರಣೆಗೆ ಹೊಸ ರೂಪವನ್ನೇ ನೀಡಿದರು. ಅವರು ಆಯೋಜಿಸಿದ್ದ ಕಂಬಳ ನಂತರದ ದಿನಗಳಲ್ಲಿ ಜನಪ್ರಿಯ ಕ್ರೀಡೆಯಾಗಿ ಮಾರ್ಪಾಡಾಯಿತು,'' ಎನ್ನುತ್ತಾರೆ ಗುಣಪಾಲ್ ಕದಂಬ.

ದಕ್ಷಿಣ ಕನ್ನಡದ ಸಂಸ್ಕೃತಿಯ ಭಾಗ ಎಂಬಂತೆ ಭಾಸವಾಗುತ್ತಿರುವ ಈ ವ್ಯವಸಾಯ ಸಂಬಂಧಿತ ಚಟುವಟಿಕೆಯನ್ನು ಕ್ರೀಡೆಯಾಗಿ ಮಾರ್ಪಾಡು ಮಾಡುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಪಾತ್ರವೂ ದೊಡ್ಡದಿದೆ. "ಮೊದಲಿಗೆ ಕಂಬಳ ಗದ್ದೆಯ ಓಟಕ್ಕೆ ಬಂಗಾರದ ಬಹುಮಾನವನ್ನು ನೀಡಿದವರು ಹೆಗ್ಗಡೆಯವರು. ನಂತರ ಎಲ್ಲಾ ಕಡೆಗಳಲ್ಲಿ ಅದು ಪ್ರತಿಷ್ಠೆಯಾಗಿ ಮಾರ್ಪಟ್ಟಿತು,'' ಎಂದು ಇತಿಹಾಸವನ್ನು ವಿವರಿಸುತ್ತಾರೆ ಕದಂಬ.

ಇವತ್ತಿಗೆ ದಕ್ಷಿಣ ಕನ್ನಡದಲ್ಲಿ ಎರಡು ರೀತಿಯ ಕಂಬಳಗಳು ನಡೆಯುತ್ತವೆ. ಒಂದು ತಲೆತಲಾಂತರಗಳಿಂದ ಆಚರಿಸಿಕೊಂಡು ಬಂದ ಭಕ್ತಿ, ಕೃಷಿ ಪ್ರಧಾನವಾದ ಕಂಬಳ. ಮತ್ತೊಂದು ಆಧುನಿಕ ಮೆರಗನ್ನು ಪಡೆದುಕೊಂಡಿರುವ, ಶಕ್ತಿ ಮತ್ತು ಯುಕ್ತಿಗಳನ್ನು ಪ್ರದರ್ಶಿಸುವ ಕಂಬಳ. ಇದು ಕೋಣ ಓಡಿಸುವ ಸ್ಪರ್ಧೆಗೆ ಮಾತ್ರವೇ ಸೀಮಿತವಾಗಿದೆ.

ಇದು ಒಂದು ರೀತಿಯಲ್ಲಿ ಕಾಲದ ಜತೆಗೆ ಒಳಗಾದ ಬದಲಾವಣೆಗಳು. ಆರ್ಥಿಯ ಆಯಾಮ ಸಿಗುತ್ತಿದ್ದಂತೆ ಕಂಬಳ ಕೂಡ ದೇಸಿ ಕ್ರೀಡೆಗಳ ರೀತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತು. ಬಂಗಾರದ ಬಹುಮಾನಗಳ ಮೂಲಕ ಜನರನ್ನು ಆಕರ್ಷಿಸಿತು. ಇವತ್ತು ದಕ್ಷಿಣ ಕನ್ನಡದ ಅನೇಕ ಕಡೆಗಳಲ್ಲಿ ಇದನ್ನು ಆಯೋಜನೆ ಮಾಡುಲು ಸಂಘಗಳು ಹುಟ್ಟಿಕೊಂಡಿರುವುದು ಇದಕ್ಕೆ ಸಾಕ್ಷಿ.

ವಿರೋಧ ಏಕೆ?:


       ಕಂಬಳದ ಗದ್ದೆಯಲ್ಲಿ ಕೋಣಗಳು.
ಕಂಬಳದ ಗದ್ದೆಯಲ್ಲಿ ಕೋಣಗಳು.

ಹೀಗೆ, ಆಧುನಿಕ ಸ್ವರೂಪದಲ್ಲಿ ಆಯೋಜನೆಗೊಳ್ಳುತ್ತಿದ್ದ ಕಂಬಳಕ್ಕೆ ವಿರೋಧ ವ್ಯಕ್ತಪಡಿಸಿದ್ದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ). ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪೇಟಾ, ದನಗಳನ್ನು ಕಡಿದು ಚರ್ಮವನ್ನು ಉದ್ಯಮಕ್ಕೆ ಬಳಸುವುದರಿಂದ ಹಿಡಿದು, ರುಮೇನಿಯಾದ ಕುರಿಗಳ ಉಣ್ಣೆ ತೆಗೆಯುವ ಪದ್ಧತಿಯವರೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದೆ. ಅಲ್ಲಿನ ಸರಕಾರಗಳನ್ನು, ನ್ಯಾಯಾಂಗವನ್ನು ಪ್ರಾಣಿಗಳ ರಕ್ಷಣೆ ವಿಚಾರದಲ್ಲಿ ಉತ್ತರದಾಯಿತ್ವಗೊಳಿಸುವ ಪ್ರಯತ್ನ ಮಾಡುತ್ತಿದೆ. ಅಂತಹ ಹಿನ್ನೆಲೆ ಇರುವ ಸಂಘಟನೆ, ಭಾರತದಲ್ಲಿ ತಮಿಳುನಾಡಿನ ಜಲ್ಲಿಕಟ್ಟು ಆಚರಣೆಗೆ ಮತ್ತು ಕರ್ನಾಟಕದಲ್ಲಿ ಕಂಬಳ ಆಚರಣೆಗೆ ವಿರೋಧ ವ್ಯಕ್ತಪಡಿಸಿತು. ಜತೆಗೆ, ಕಂಬಳ ಆಚರಣೆಯಲ್ಲಿ ಹೇಗೆ ಕೋಣಗಳನ್ನು ಹಿಂಸಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಗಳನ್ನು ಸಂಗ್ರಹಿಸಿ ಕಾನೂನು ಹೋರಾಟಕ್ಕೂ ಮುಂದಾಯಿತು.

ಪೇಟಾ ಒತ್ತಾಯದ ಮೇರೆಗೆ 2014-15ರಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಆಧುನಿಕ ಕಂಬಳದ ಆಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಸುಮಾರು 65 ದೂರುಗಳನ್ನು ದಾಖಲಿಸಿತ್ತು. "ಪೇಟಾವರಿಗೆ ಕಂಬಳದ ಎಂದರೇನು ಗೊತ್ತಿಲ್ಲ. ಜಲ್ಲಿಕಟ್ಟು ಸ್ಪರ್ಧೆಯಂತೆ ಇಲ್ಲಿಯೂ ಪ್ರಾಣಿ ಹಿಂಸೆ ನಡೆಯುತ್ತೆ ಎಂದುಕೊಂಡಿದ್ದಾರೆ. ಕೋಣಗಳ ಮೂಗಿಗೆ ಮೂಗುದಾರ ಹಾಕುವುದಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಪ್ರೀತಿಯಿಂದ ಸಾಕಿದವರು ಕೋಣಗಳಿಗೆ ಹೊಡೆಯುವುದು ತಪ್ಪು ಎನ್ನುತ್ತಾರೆ. ಇದನ್ನೆಲ್ಲಾ ಒಪ್ಪಲು ಹೇಗೆ ಸಾಧ್ಯ ಹೇಳಿ,'' ಎನ್ನುತ್ತಾರೆ ಕಂಬಳ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಗುಣಪಾಲ್ ಕದಂಬ.

ನಾವು ಅಕಾಡೆಮಿ ಸ್ಥಾಪಿಸಿ, ಕಂಬಳ ಕೋಣಗಳನ್ನು ತಯಾರು ಮಾಡುವ ಕುರಿತು ವೈಜ್ಞಾನಿಕ ತರಬೇತಿ ನೀಡುತ್ತಿದ್ದೇವೆ. ಹೀಗಾಗಿ ಸರಕಾರಕ್ಕೆ ಎರಡು ವರ್ಷ ಕಂಬಳ ನಡೆಸಲು ಅನುಮತಿ ಕೋರುತ್ತಿದ್ದೇವೆ. ಆ ವೇಳೆಯಲ್ಲಿ ನಮ್ಮ ಕ್ರೀಡೆಯನ್ನು ಗಮನಿಸಿ, ಅವರೇ ತೀರ್ಮಾನಕ್ಕೆ ಬರಲಿ ಎಂದು ಒತ್ತಾಯಿಸುತ್ತಿದ್ದೇವೆ. ಜನರಿಗೂ ಕೋಣಗಳಿಗೆ ಹೊಡೆಯದಂತೆ ಜಾಗೃತಿ ಮೂಡಿಸುತ್ತಿದ್ದೇವೆ,'' ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ತುಳುನಾಡ ಸಂಸ್ಕೃತಿ:

ಸದ್ಯ ಕಂಬಳ ಸುತ್ತ ಪ್ರತಿಭಟನೆಯ ಕಿಡಿ ಹೊತ್ತಿಸಲು ತಯಾರಿಗಳು ನಡೆದಿವೆ. ಕಂಬಳ ವ್ಯವಸಾಯದ ಜತೆಗೆ ಸಮೀಕರಣಗೊಂಡ ಚಟುವಟಿಕೆ ಎಂಬುದನ್ನು ದಾಟಿ, ಅದರ ವ್ಯವಹಾರಿಕ ಆಯಾಮಗಳು ಮುನ್ನಲೆಗೆ ಬಂದಿರುವ ಸಮಯ ಇದು. ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿ ಕಂಬಳವನ್ನು ಮುಂದಿಡಲಾಗುತ್ತಿದೆ.

"ಭಕ್ತಿ, ಕೃಷಿ ಪ್ರಧಾನವಾಗಿರುವ ಹಳೆಯ ಕಂಬಳ ಉಳಿಯಬೇಕು ಎಂಬುದು ಎಷ್ಟು ಮುಖ್ಯವೋ, ಅಷ್ಟೆ ಮುಖ್ಯವಾದುದು ಮತ್ತು ಅಪಾಯಕಾರಿಯಾದುದು ಆಧುನಿಕ ಕಂಬಳವನ್ನು ಮುಂದಿಟ್ಟು, ದಕ್ಷಿಣ ಕನ್ನಡ ಇತರೆ ಸಂಸ್ಕೃತಿಗಳನ್ನು ಹಿಂದಕ್ಕೆ ತಳ್ಳುವುದು. ಇದನ್ನು ದಕ್ಷಿಣ ಕನ್ನಡ ಯುವಜನರು ಅರ್ಥ ಮಾಡಿಕೊಳ್ಳಬೇಕಿದೆ'' ಎನ್ನುತ್ತಾರೆ ಮಂಗಳೂರು ಮೂಲದ ಹಿರಿಯ ಪತ್ರಕರ್ತರೊಬ್ಬರು.

ಅವರ ಮಾತುಗಳನ್ನು ಗಣನೆಗೆ ತೆಗೆದುಕೊಂಡು ನೋಡುವುದಾದರೆ, ಮುಂದಿನ ದಿನಗಳಲ್ಲಿ ಕಂಬಳದ ಸುತ್ತ ಎದ್ದಿರುವ ಪ್ರತಿಭಟನೆಗಳು ಯಾವ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂಬುದು ತುಳುನಾಡಿನ ಸಂಸ್ಕೃತಿಗಳು ಎತ್ತ ಸಾಗಲಿವೆ ಎಂಬುದನ್ನು ನಿರ್ಧರಿಸಲಿವೆ.

ಚಿತ್ರಗಳು:

ರಿಷಬ್ ಶೆಟ್ಟಿ ಫೇಸ್'ಬುಕ್ ಮತ್ತು ಗೂಗಲ್.